ಆವೃತ್ತಿಗಳು
Kannada

ಬಾಲ್ಯ ವಿವಾಹಕ್ಕೆ ತಡೆ – ಮಕ್ಕಳ ರಕ್ಷಣೆಯೇ ಕೃತಿ ಹೊಣೆ

ಟೀಮ್​ ವೈ.ಎಸ್​. ಕನ್ನಡ

20th Dec 2015
Add to
Shares
0
Comments
Share This
Add to
Shares
0
Comments
Share


ಜನ್ಮ ನೀಡುವ ಮೊದಲೇ ಕುಟುಂಬಕ್ಕೆ ಬೇಡವಾಗಿದ್ದ ಯುವತಿ ಈಗ ಸಮಾಜ ಸೇವಕಿ. ಅವರೇ 28 ವರ್ಷದ ಕೃತಿ ಭಾರತಿ. ಬಾಲ್ಯವಿವಾಹಕ್ಕೆ ಬಲಿಯಾಗುತ್ತಿರುವ ಮಕ್ಕಳನ್ನು ರಕ್ಷಿಸಿ ಅವರಿಗೆ ಹೊಸ ಬಾಳು ನೀಡುತ್ತಿದ್ದಾರೆ ಇವರು. ರಾಜಸ್ಥಾನದ ಜೋದ್ಪುರದ ನಿವಾಸಿ ಕೃತಿ, ರಾಜಸ್ಥಾನವನ್ನು ಬಾಲ್ಯವಿವಾಹ ಮುಕ್ತ ಮಾಡಲು ಮುಂದಾಗಿದ್ದಾರೆ. 2012ರಲ್ಲಿ ಬಾಲ್ಯವಿವಾಹ ಕಾನೂನನ್ನು ಹಿಂದಕ್ಕೆ ಪಡೆಯಲು ಯಶಸ್ವಿಯಾದ ಭಾರತದ ಮೊದಲ ಮಹಿಳೆ ಇವರು. ಲಿಮ್ಕಾ ರೆಕಾರ್ಡ್ ಬುಕ್ ನಲ್ಲಿ ಇವರ ಹೆಸರು ದಾಖಲಾಗಿದ್ದು, ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ಪಠ್ಯಕ್ರಮದಲ್ಲೂ ಇದು ಸೇರ್ಪಡೆಯಾಗಿದೆ.

image


ಬಾಲ್ಯವಿವಾಹಗಳನ್ನು ನಿಲ್ಲಿಸುವುದು ಹಾಗೂ ಕಾನೂನು ಪ್ರಕಾರ ಅದನ್ನು ರದ್ದುಗೊಳಿಸುವ ನಿಟ್ಟಿನಲ್ಲಿ ಕೃತಿ 2011 ರಲ್ಲಿ ಸಾರಥಿ ಟ್ರಸ್ಟ್ ಸ್ಥಾಪನೆಗೆ ಮುಂದಾದರು. ಈ ವೇಳೆ ಅವರ ಮೇಲೆ ಹಲ್ಲೆ ನಡೆಯಿತು. ಆದರೆ ಅವರ ಹೋರಾಟದಲ್ಲಿ ಯಾವುದೇ ಬದಲಾವಣೆಯಾಗಲಿಲ್ಲ. ಈವರೆಗೆ ಅವರ ಸಂಸ್ಥೆ 850ಕ್ಕೂ ಹೆಚ್ಚು ಬಾಲ್ಯ ವಿವಾಹವನ್ನು ತಡೆದಿದೆ. ಸರ್ಕಾರದಿಂದ ಹಿಡಿದು ಸ್ವಯಂ ಸೇವಾ ಸಂಸ್ಥೆಗಳು ಬಾಲ್ಯವಿವಾಹ ತಡೆಯುವ ಕೆಲಸ ಮಾಡ್ತಾ ಇವೆ. ಆದರೆ ಬಾಲ್ಯವಿವಾಹಕ್ಕೆ ಬಲಿಯಾಗುತ್ತಿರುವ ಮಕ್ಕಳನ್ನು ರಕ್ಷಿಸುವ ಕೆಲಸವನ್ನು ಸಾರಥಿ ಟ್ರಸ್ಟ್ ಮಾಡ್ತಾ ಇದೆ. ಬಾಲ್ಯವಿವಾಹವನ್ನು ತಡೆಯುವುದಲ್ಲದೆ, ಮಕ್ಕಳಿಗೆ ಕೌನ್ಸಲಿಂಗ್, ಮಕ್ಕಳ ಕುಟುಂಬಸ್ಥರಿಗೆ ಹಾಗೂ ಆ ಪ್ರದೇಶದ ಜನರಿಗೆ ಆಪ್ತ ಸಲಹೆ ನೀಡುತ್ತಿದೆ ಸಂಸ್ಥೆ. ಈ ಕೆಟ್ಟ ಪದ್ಧತಿಯಿಂದ ಹೊರ ಬರಲು ಬಯಸುವ ಮಕ್ಕಳಿಗೆ ಪುನರ್ವಸತಿ ಸೌಲಭ್ಯ ಒದಗಿಸುವ ಕಾರ್ಯವನ್ನು ಕೃತಿ ಮತ್ತು ತಂಡ ಮಾಡ್ತಾ ಇದೆ. ಬಾಲ್ಯ ವಿವಾಹ ರದ್ದಾದ ಬಾಲಕಿಯನ್ನು ಸಮಾಜ ತಿರಸ್ಕರಿಸುತ್ತದೆ. ಮಕ್ಕಳಿಗೆ ಅವರ ಗೌರವ ವಾಪಸ್ ನೀಡುವುದು ದೊಡ್ಡ ಜವಾಬ್ದಾರಿ ಎನ್ನುತ್ತಾರೆ ಕೃತಿ.

ಭಾರತೀಯ ಕಾನೂನು ಪ್ರಕಾರ, ಪುರುಷ ತನ್ನ 21 ವರ್ಷದವರೆಗೆ ಬಾಲ್ಯವಿವಾಹವನ್ನು ರದ್ದುಗೊಳಿಸಬಹುದು. ಹುಡುಗಿ ತನ್ನ 18 ವರ್ಷದವರೆಗೆ ಬಾಲ್ಯವಿವಾಹವನ್ನು ರದ್ದುಗೊಳಿಸುವ ಅಧಿಕಾರ ಹೊಂದಿರುತ್ತಾಳೆ. ಬಾಲ್ಯವಿವಾಹ ರದ್ದು ಹಾಗೂ ವಿಚ್ಚೇದನ ಎರಡೂ ಬೇರೆ ಬೇರೆ. ಆದರೆ ಅನೇಕರು ಇದು ಒಂದೇ ಎಂದು ಭಾವಿಸುತ್ತಾರೆ. ಬಾಲ್ಯವಿವಾಹ ರದ್ದಾದರೆ ಅವರನ್ನು ಕುಮಾರ ಅಥವಾ ಕುಮಾರಿ ಎಂದೇ ಗುರುತಿಸಲಾಗುತ್ತದೆ. ಬಾಲ್ಯವಿವಾಹ ರದ್ದುಗೊಳಿಸುವುದು ಒಂದು ಸವಾಲಿನ ಕೆಲಸ. ಮೊದಲು ಮಕ್ಕಳ ಪಾಲಕರೊಂದಿಗೆ ಮಾತುಕತೆ ನಡೆಸಲಾಗುತ್ತದೆ. ಮಕ್ಕಳ ತಂದೆ –ತಾಯಿ ಒಪ್ಪಿದರೆ ಒಂದು ಸಮಸ್ಯೆ ಮುಗಿದಂತೆ. ನಂತರ ಇನ್ನೊಂದು ಕಡೆಯವರ ಜೊತೆ ಮಾತುಕತೆ ನಡೆಸುತ್ತಾರೆ. ಆ ಸಮಾಜದ ಮುಖಂಡರನ್ನು ಒಪ್ಪಿಸುವುದು ಒಂದು ದೊಡ್ಡ ಸವಾಲು. ಅವರು ಸುಲಭವಾಗಿ ಒಪ್ಪಿಗೆ ನೀಡುವುದಿಲ್ಲ. ಬೆದರಿಕೆಗಳನ್ನು ಹಾಕುವವರೂ ಇದ್ದಾರೆ. ಅನೇಕ ಬಾರಿ ಕೃತಿ ತಂಡದ ಸದಸ್ಯರ ಮೇಲೆ ದಾಳಿ ಕೂಡ ನಡೆದಿದೆ. ``ಬೆದರಿಕೆ ಹಾಕದೆ ಮದುವೆ ಮುರಿದುಕೊಂಡ ಯಾವುದೇ ಘಟನೆ ಈವರೆಗೆ ನಡೆದಿಲ್ಲ. ನಮಗೆ ಮಕ್ಕಳ ರಕ್ಷಣೆ ಮುಖ್ಯ. ಹಾಗಾಗಿ ಬೆದರಿಕೆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ’’ ಎನ್ನುತ್ತಾರೆ ಕೃತಿ. ಎರಡೂ ಪಕ್ಷಗಳು ಒಪ್ಪಿಗೆ ನೀಡಿದರೆ ಮದುವೆ ರದ್ದು ಮಾಡುವುದು ಸುಲಭ. ಇಲ್ಲವಾದಲ್ಲಿ ಸಮಯ ತೆಗೆದುಕೊಳ್ಳುತ್ತದೆ. ಈ ವರ್ಷ ಕೇವಲ ಮೂರು ದಿನಗಳಲ್ಲಿ ಕೃತಿ ಬಾಲ್ಯವಿವಾಹವೊಂದನ್ನು ರದ್ದುಗೊಳಿಸಿದ್ದಾರೆ.

image


ನೊಂದ ಮಕ್ಕಳ ಸಹಾಯಕ್ಕೆ ಮುಂದಾಗುವ ಸಂಸ್ಥೆ ಎರಡು ತಂಡಗಳಾಗಿ ಕೆಲಸ ಮಾಡುತ್ತದೆ. ಒಂದು ತಂಡ ಕಾನೂನು ಕ್ರಮಗಳ ಬಗ್ಗೆ ಗಮನ ಹರಿಸಿದ್ರೆ ಮತ್ತೊಂದು ತಂಡ ಮಕ್ಕಳ ಪುನರ್ವಸತಿಗೆ ಗಮನ ನೀಡುತ್ತದೆ. ಮೊದಲು ಮಕ್ಕಳಿಗೆ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ. ಮಕ್ಕಳ ಶಿಕ್ಷಣ, ವೃತ್ತಿ ತರಬೇತಿ,ಜೀವನಾಧಾರದ ಬಗ್ಗೆ ತರಬೇತಿ ನೀಡುತ್ತದೆ. ಏಪ್ರಿಲ್ 2012ರಿಂದ ಇದುವರೆಗೆ 29 ಮಕ್ಕಳ ಬಾಲ್ಯವಿವಾಹವನ್ನು ರದ್ದು ಪಡಿಸಲಾಗಿದೆ. ಕೃತಿಯ ಪರಿಶ್ರಮದಿಂದಾಗಿ ಅತಿಹೆಚ್ಚು ಬಾಲ್ಯವಿವಾಹ ರದ್ದುಗೊಳಿಸಿದ ರಾಜ್ಯ ಎಂಬ ಹೆಗ್ಗಳಿಕೆಗೆ ರಾಜಸ್ತಾನ ಪಾತ್ರವಾಗಿದೆ. ಬಾಲ್ಯವಿವಾಹವನ್ನು ರದ್ದುಗೊಳಿಸಲು ಸಾರಥಿ ಟ್ರಸ್ಟ್ ಶಿಬಿರಗಳನ್ನು ನಡೆಸುತ್ತಿದೆ. ವಿವಿಧ ಅಂಗನವಾಡಿ, ಶಾಲೆ, ಕಾಲೇಜು, ಸಾರ್ವಜನಿಕ ಸ್ಥಳಗಳಲ್ಲಿ ಶಿಬಿರಗಳನ್ನು ನಡೆಸುತ್ತಿದೆ. ಕೇವಲ ಮಾಹಿತಿ ಪಡೆಯುವುದಲ್ಲದೇ, ಬಾಲ್ಯವಿವಾಹಕ್ಕೆ ಒಳಗಾಗುವ ಮಕ್ಕಳನ್ನು ಗುರುತಿಸಿ, ಅವರನ್ನು ರಕ್ಷಿಸಲು ನೆರವಾಗುತ್ತಾರೆ. ನಂತರ ಮಕ್ಕಳಿಗೆ ಬಾಲ್ಯವಿವಾಹದಿಂದಾಗುವ ನಷ್ಟದ ಬಗ್ಗೆ ತಿಳುವಳಿಕೆ ನೀಡುತ್ತಾರೆ. ಇಷ್ಟೇ ಅಲ್ಲ ಟ್ರಸ್ಟ್ ನ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡುತ್ತಾರೆ. ಮಾಧ್ಯಮಗಳಲ್ಲಿ ಈ ಬಗ್ಗೆ ವರದಿ ಪ್ರಸಾರವಾದ್ರೆ ಅದನ್ನು ನೋಡಿ ಉಳಿದ ಮಕ್ಕಳು ಎಚ್ಚೆತ್ತುಕೊಳ್ತಾರೆ. ತಮ್ಮ ವಿವಾಹವನ್ನು ರದ್ದುಗೊಳಿಸಬಹುದೆಂದು ಅರಿತು ಸಹಾಯ ಅರಸಿ ಬರ್ತಾರೆ ಎನ್ನುತ್ತಾರೆ ಕೃತಿ.

image


ಮಕ್ಕಳ ರಕ್ಷಣೆಗೆ ನಿಂತಿರುವ ಕೃತಿಕಾರ ಬಾಲ್ಯ ಮಾತ್ರ ಸುಖಕರವಾಗಿರಲಿಲ್ಲ. ಕೃತಿ ತಂದೆ ವೈದ್ಯರಾಗಿದ್ದರು. ಆದರೆ ಕೃತಿ ಜನಿಸುವ ಮೊದಲೇ ಅವರು ತಾಯಿಯನ್ನು ಬಿಟ್ಟಿದ್ದರು. ಹಾಗಾಗಿ ಕೃತಿಗೆ ಜನ್ಮ ನೀಡುವುದು ತಾಯಿಯ ಸಂಬಂಧಿಕರಿಗೆ ಇಷ್ಟವಿರಲಿಲ್ಲ. ಕೃತಿ ತಾಯಿಗೆ ಇನ್ನೊಂದು ಮದುವೆ ಮಾಡಲು ಮುಂದಾಗಿದ್ದ ಕುಟುಂಬಸ್ಥರು ಕೃತಿ ಜನಿಸಿದ ನಂತರವೂ ಸುಮ್ಮನಿರಲಿಲ್ಲ. ಚಿಕ್ಕವಳಿರುವಾಗಲೇ ಅವರಿಗೆ ವಿಷ ನೀಡಲಾಗಿತ್ತು. ಹಾಗಾಗಿ ಕೃತಿ ಅರ್ಧಕ್ಕೆ ಶಾಲೆ ಬಿಡಬೇಕಾಯ್ತು. ಆದರೆ ಈಗ ಮಕ್ಕಳ ರಕ್ಷಣೆ ಹಾಗೂ ಸುರಕ್ಷತೆ ವಿಷಯದಲ್ಲಿ ಪಿಎಚ್​ಡಿ ಮಾಡ್ತಿದ್ದಾರೆ. ಮಕ್ಕಳ ರಕ್ಷಣೆ ಮಾಡುತ್ತಿರುವ ಕೃತಿ ಕಾರ್ಯಕ್ಕೆ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ. ಲಂಡನ್ ಸರ್ಕಾರ ಹಾಗೂ ಥಾಮ್ಸನ್ ರಾಯಿಟರ್ಸ್ ಫೌಂಡೇಶನ್ ಫೆಲೋಷಿಪ್ ನೀಡಿ, ಗೌರವಿಸಿದೆ. ಸಮಾಜದಲ್ಲಿ ಬಾಲ್ಯವಿವಾಹದ ಪಿಡುಗು ಸಂಪೂರ್ಣ ತೊಲಗಲಿ. ಹೀಗೊಂದು ಪದ್ಧತಿ ಇತ್ತು ಎಂಬುದನ್ನು ಪುಸ್ತಕದಲ್ಲಿ ಮಾತ್ರ ಓದುವಂತಾಗಲಿ ಎಂಬುದು ಕೃತಿ ಇಚ್ಛೆಯಾಗಿದೆ.


ಲೇಖಕರು: ಹರೀಶ್​ ಬಿಶ್ತ್​​

ಅನುವಾದಕರು: ರೂಪಾ ಹೆಗಡೆ

Add to
Shares
0
Comments
Share This
Add to
Shares
0
Comments
Share
Report an issue
Authors

Related Tags