ಆವೃತ್ತಿಗಳು
Kannada

ಗಾಂಧಿವಾದಿ ಅಣ್ಣಾ ಹಜಾರೆ ಅವರ ಜೀವನಗಾಥೆ - ಭಾಗ 3

ಟೀಮ್ ವೈ.ಎಸ್.ಕನ್ನಡ 

23rd Aug 2016
Add to
Shares
2
Comments
Share This
Add to
Shares
2
Comments
Share

ಅಣ್ಣಾ ಹಜಾರೆ ಪೊಲೀಸ್ ಪೇದೆಗೆ ಅವನ ಬಳಿಯಿದ್ದ ಕೋಲಿನಿಂದ್ಲೇ ಅದೆಷ್ಟು ಜೋರಾಗಿ ಹೊಡೆದಿದ್ದರೆಂದ್ರೆ, ತಲೆಗೆ 8 ಹೊಲಿಗೆ ಹಾಕಬೇಕಾಯ್ತು. ಅಣ್ಣಾ 3 ತಿಂಗಳು ಅಜ್ಞಾತವಾಸದಲ್ಲಿರಬೇಕಾಯ್ತು. ಅದ್ಯಾಕೆ ಅಂತಾ ಅವರೇ ವಿವರಿಸಿದ್ದಾರೆ. 

ಅಣ್ಣಾ ತಮ್ಮ ಮಾವನ ಜೊತೆ ಮುಂಬೈಗೆ ಹೋದ್ರು. ಮುಂಬೈನಲ್ಲಿ 7 ತರಗತಿ ಮುಗಿಸಿದ್ರು. ಮನೆಯ ಕಠಿಣ ಪರಿಸ್ಥಿತಿ ಹಾಗೂ ಆರ್ಥಿಕ ಸಂಕಷ್ಟದಿಂದಾಗಿ ಅಣ್ಣಾ ಚಿಕ್ಕ ವಯಸ್ಸಿನಲ್ಲೇ ನೌಕರಿ ಮಾಡಬೇಕಾಗಿ ಬಂತು. ಅಣ್ಣಾ ವಾಣಿಜ್ಯ ನಗರಿಯಲ್ಲಿ ಹೂವಿನ ವ್ಯಾಪಾರ ಆರಂಭಿಸಿದ್ರು. ಹೂವಿನ ಮಾಲೆ, ಹೂವಿನ ಗುಚ್ಛಗಳನ್ನು ಮಾಡಿ ಮಾರುತ್ತಿದ್ರು. ಹೂವಿನ ವ್ಯಾಪಾರ ಆರಂಭಿಸುವುದರ ಹಿಂದೆ ಕೂಡ ಒಂದು ಕಾರಣವಿದೆ. ಅಣ್ಣಾ ರಜಾದಿನಗಳಲ್ಲೆಲ್ಲ ಹೂವಿನ ಅಂಗಡಿಯೊಂದರಲ್ಲಿ ಹೋಗಿ ಕುಳಿತುಕೊಳ್ಳುತ್ತಿದ್ರು. ಹೂವಿನ ಮಾಲೆ ಹಾಗೂ ಗುಚ್ಛಗಳನ್ನು ಮಾಡುವುದನ್ನು ಅಲ್ಲೇ ಕಲಿತಿದ್ರು. ಆ ಅಂಗಡಿಯಲ್ಲಿ ಮಾಲೀಕ ಐವರನ್ನು ಕೆಲಸಕ್ಕೆ ಇಟ್ಟುಕೊಂಡಿದ್ದ. ಅವರ ಪರಿಶ್ರಮದ ಫಲವನ್ನು ತಾನು ಉಣ್ಣುತ್ತಿದ್ದ. ಹಾಗಾಗಿ ಸ್ವಂತ ಅಂಗಡಿ ತೆರೆಯುವುದೇ ಒಳಿತು ಎಂದು ಅಣ್ಣಾಗೆ ಅನಿಸಿತ್ತು. ``ಹೂವುಗಳ ಕೆಲಸ ಸಾತ್ವಿಕವಾದದ್ದು. ಹೂಮಾಲೆ ದೇವರ ಕೊರಳನ್ನು ಅಲಂಕರಿಸುತ್ತದೆ. ನಾನು ಹೂವಿನ ವ್ಯಾಪಾರ ಆರಂಭಿಸಲು ಇದು ಕೂಡ ಒಂದು ಕಾರಣ'' ಎನ್ನುತ್ತಾರೆ ಅಣ್ಣಾ.

ಮುಂಬೈ ಅಣ್ಣಾ ಹಜಾರೆ ಬದುಕಿನಲ್ಲಿ ಕ್ರಾಂತಿಕಾರಿ ಬದಲಾವಣೆ ತಂತು. ಒಂದರ್ಥದಲ್ಲಿ ಕಿಷನ್ ಬಾಬುರಾವ್ ಹಜಾರೆ ಅಣ್ಣಾ ಹಜಾರೆಯಾಗಿ ಬದಲಾಗಿದ್ದು ಮುಂಬೈನಲ್ಲೇ. ಸಾಮಾಜಿಕ ಕಾರ್ಯಕರ್ತರಾಗಿ, ಆಂದೋಲನಕಾರರಾಗಿ ಅಣ್ಣಾ ಕೆಲಸ ಆರಂಭಿಸಿದ್ದು ಮುಂಬೈನಲ್ಲಿ. ಬಾಲ್ಯದಲ್ಲೇ ಅವರು ಅನ್ಯಾಯ ಮತ್ತು ಅತ್ಯಾಚಾರದ ವಿರುದ್ಧ ಧ್ವನಿಯೆತ್ತಲು ಆರಂಭಿಸಿದ್ರು. ವಯಸ್ಸಿನಲ್ಲಿ ಚಿಕ್ಕವರಾಗಿದ್ರೂ ಅನ್ಯಾಯದ ವಿರುದ್ಧ ಅವರು ಹೋರಾಡುವ ಪರಿ, ನೇತೃತ್ವ ವಹಿಸುವ ಸಾಮಥ್ರ್ಯ ನೋಡಿ ಅನ್ಯಾಯಕ್ಕೊಳಗಾದವರೆಲ್ಲ ಅಣ್ಣಾ ಅವರ ಬಳಿ ನೆರವು ಕೇಳಿ ಬರುತ್ತಿದ್ರು. ಅಣ್ಣಾ ಹೂವು ಮಾರುವ ಸ್ಥಳದಲ್ಲೇ, ಇತರರು ತಾವೇ ಬೆಳೆದ ಹಣ್ಣು, ತರಕಾರಿ ಮಾರುತ್ತಿದ್ರು. ಪ್ರತಿದಿನ ಅಸಹಾಯಕ ವ್ಯಾಪಾರಿಗಳಿಂದ ಪೊಲೀಸರು ಹಫ್ತಾ ವಸೂಲಿ ಮಾಡುತ್ತಿದ್ರು. ಹಫ್ತಾ ಕೊಡದೇ ಇದ್ರೆ ಅವರ ಮೇಲೆ ದೌರ್ಜನ್ಯ ಎಸಗುತ್ತಿದ್ರು. ಖಾಕಿ ಖದರ್ ನಲ್ಲಿ ಕೆಲವೊಮ್ಮೆ ವ್ಯಾಪಾರಿಗಳನ್ನು ಥಳಿಸಿದ್ದೂ ಇದೆ. ಅಣ್ಣಾ ಮಾತ್ರ ಹಫ್ತಾ ಕೊಡಲು ಒಪ್ಪುತ್ತಿರಲಿಲ್ಲ. ಇನ್ನು ಕೆಲವು ವ್ಯಾಪಾರಿಗಳು ಕೂಡ ಅಣ್ಣಾಗೆ ಸಾಥ್ ಕೊಡಲಾರಂಭಿಸಿದ್ರು. ಹಫ್ತಾ ವಸೂಲಿ ತಪ್ಪು, ಹಫ್ತಾ ಹೆಸರಲ್ಲಿ ಬಡ ಜನರನ್ನು ಪೀಡಿಸದಂತೆ ಅಣ್ಣಾ ಪೊಲೀಸರಿಗೆ ತಿಳಿಹೇಳುತ್ತಿದ್ರು. ಕೆಲವರು ಅಣ್ಣಾ ಮಾತುಗಳನ್ನು ಕೇಳಿಸಿಕೊಳ್ತಿದ್ರು, ಬಹುತೇಕ ಪೊಲೀಸರು ಇದಕ್ಕೆಲ್ಲ ಕಿವಿಗೊಡುತ್ತಿರಲಿಲ್ಲ.

ಕೆಲವೇ ದಿನಗಳಲ್ಲಿ ಅಣ್ಣಾ ಪೊಲೀಸರಿಂದ ಶೋಷಣೆಗೊಳಗಾದವರ ನಾಯಕರಾದ್ರು. ಹೀಗೆ ಚಿಕ್ಕವರಿದ್ದಾಗ್ಲೇ ಅಣ್ಣನಾಗಿ ಬದಲಾದ್ರು. ಅನ್ಯಾಯವನ್ನು ಸಹಿಸಿಕೊಳ್ಳುವುದು, ಬೇರೆಯವರಿಗೆ ಅನ್ಯಾಯವಾಗುತ್ತಿರುವುದನ್ನು ನೋಡಿಕೊಂಡು ಸುಮ್ಮನಿರುವುದು ಅವರಿಂದ ಸಾಧ್ಯವಿರಲಿಲ್ಲ. ಬಿಸಿರಕ್ತದ ಯುವಕ, ಮನದಲ್ಲಿ ಉತ್ಸಾಹ, ಜೋಶ್ ತುಂಬಿತ್ತು. ಎಷ್ಟು ಸಾಧ್ಯವೋ ಅಷ್ಟು ಜನರಿಗೆ ಸಹಾಯ ಮಾಡಬೇಕೆಂದು ತಾಯಿ ಹೇಳಿದ ಮಾತು ನೆನಪಿನಲ್ಲಿತ್ತು. ಈ ಹೋರಾಟದ ಮಧ್ಯೆ ಅಣ್ಣಾ ಮುಂಬೈ ಬಿಟ್ಟು ಬರಬೇಕಾದಂತಹ ಘಟನೆಯೊಂದು ನಡೀತು. ಒಮ್ಮೆ ಒಬ್ಬ ಪೊಲೀಸ್ ಹಫ್ತಾ ಕೊಡುವಂತೆ ಹೂವಿನ ವ್ಯಾಪಾರಿಗೆ ಹೊಡೆಯುತ್ತಿದ್ದ. ಬಡ ವ್ಯಾಪಾರಿ ಸಹಾಯ ಕೇಳಿಕೊಂಡು ಅಣ್ಣಾ ಬಳಿ ಬಂದ. ಅಣ್ಣಾ ಅವನೊಟ್ಟಿಗೆ ಆ ಪೊಲೀಸಪ್ಪನ ಬಳಿ ಹೋದ್ರು. ಬಡ ವ್ಯಾಪಾರಿ ಮೇಲೆ ದೌರ್ಜನ್ಯ ಸಲ್ಲದು ಅಂತಾ ತಿಳಿ ಹೇಳಿದ್ದಕ್ಕೆ ಆ ಪೊಲೀಸ್ ಪೇದೆ ಅಣ್ಣಾ ಹಜಾರೆ ಜೊತೆಗೂ ಜೋರಾಗಿ ಮಾತನಾಡಲಾರಂಭಿಸಿದ. ``ಯಾಕ್ಹೀಗೆ ಮಾಡ್ತೀರಾ ಅಂತ ಕೇಳಿದ್ದಕ್ಕೆ ಆತ ನನ್ನನ್ನು ಗದರಿದ. ಆತನ ಕೈಯಲ್ಲಿ ಕೋಲಿತ್ತು, ಅದನ್ನು ಸೆಳೆದುಕೊಂಡ ನಾನು ಸರಿಯಾಗಿ ಆತನಿಗೆ ಬಾರಿಸಿದೆ. ಆತ ತಲೆಗೆ 8 ಹೊಲಿಗೆ ಹಾಕಿಸಿಕೊಳ್ಳಬೇಕಾಯ್ತು'' ಅಂತಾ ಅಣ್ಣಾ ಆ ಘಟನೆಯನ್ನು ಸ್ಮರಿಸಿಕೊಂಡ್ರು.

ಅಹಿಂಸೆ ಮತ್ತು ಶಾಂತಿ ಮಂತ್ರ ಜಪಿಸುವ ಅಣ್ಣಾ ಹಜಾರೆ ಓರ್ವ ಪೊಲೀಸ್ ಪೇದೆಗೆ ಹೊಡೆದಿದ್ದಾರಂದ್ರೆ ನಂಬೋದು ಕಷ್ಟ. ಗಾಂಧಿವಾದಿ ವಿಚಾರಧಾರೆಯುಳ್ಳ ಅಣ್ಣಾ ಈ ಘಟನೆಯನ್ನು ನೆನಪಿಸಿಕೊಂಡ್ರು. ``ವಾಸ್ತವವಾಗಿ ಹಿಂಸೆ ನಡೆದಿತ್ತು, ಆ ಸಮಯದಲ್ಲಿ ಗಾಂಧೀಜಿ ನನ್ನ ಬದುಕಿನಲ್ಲಿರಲಿಲ್ಲ. ನಾನು ಛತ್ರಪತಿ ಶಿವಾಜಿ ಅವರನ್ನು ನೋಡುತ್ತಿದ್ದೆ. ಅವರ ಪ್ರಕಾರ ಯಾರು ತಪ್ಪು ಮಾಡ್ತಾರೋ ಅವರ ಕೈಗಳನ್ನು ಕತ್ತರಿಸಬೇಕು''. ಪೊಲೀಸ್ ಪೇದೆ ಮೇಲೆ ಹಲ್ಲೆ ಮಾಡಿದ್ದಕ್ಕೆ ಅಣ್ಣಾ ವಿರುದ್ಧ ಬಂಧನ ವಾರೆಂಟ್ ಜಾರಿಯಾಯ್ತು. ಬಂಧನದಿಂದ ತಪ್ಪಿಸಿಕೊಳ್ಳಲು ಅಣ್ಣಾ ಭೂಗತರಾದ್ರು. ಬೇರೆ ಬೇರೆ ಸಮಯದಲ್ಲಿ ಬೇರೆ ಬೇರೆ ಜಾಗಗಳಲ್ಲಿ ಇರಲಾರಂಭಿಸಿದ್ರು. ``3-4 ತಿಂಗಳ ವರೆಗೆ ನಾನು ಭೂಗತನಾಗಿದ್ದೆ. ನನ್ನ ಹೂವಿನ ಅಂಗಡಿಗೆ ಭಾರೀ ನಷ್ಟವಾಯ್ತು. ನಾನು ಯಾರ ಪರವಾಗಿ ಹೋರಾಡಿದ್ದೆನೋ ಅವರ್ಯಾರೂ ನನ್ನ ಸಂಬಂಧಿಕರಲ್ಲ, ಆದ್ರೆ ಅನ್ಯಾಯದ ವಿರುದ್ಧ ಹೋರಾಡುವುದು ನನ್ನ ಕರ್ತವ್ಯ'' ಎನ್ನುತ್ತಾರೆ ಅಣ್ಣಾ.

ಭೂಗತವಾಗಿದ್ದ ಸಮಯ ಅಣ್ಣಾ ಪಾಲಿಗೆ ಕಠಿಣ ದಿನಗಳಾಗಿತ್ತು. ಪೊಲೀಸರಿಂದ ತಪ್ಪಿಸಿಕೊಳ್ಳಲು ಅವರು ಹಲವು ಬಾರಿ ರೈಲ್ವೆ ನಿಲ್ದಾಣದಲ್ಲಿ ಮಲಗಿದ್ದೂ ಇದೆ. ಸ್ನೇಹಿತರ ಮನೆಯಲ್ಲೂ ಉಳಿದಿದ್ದಾರೆ. ಪೊಲೀಸ್ ಪೇದೆಗೆ ಥಳಿಸಿದ್ದರಿಂದ ಅವರನ್ನು ಹಿಡಿದೇ ತೀರಬೇಕೆಂದು ಪೊಲೀಸರೆಲ್ಲ ಹುಡುಕಾಡುತ್ತಿದ್ರು. ಹೂವಿನ ಅಂಗಡಿ ಬಂದ್ ಮಾಡಿದ್ದರಿಂದ ಹೊಟ್ಟೆಗೆ ತಣ್ಣೀರು ಪಟ್ಟಿ ಎಂಬಂತಾಗಿತ್ತು ಅವರ ಸ್ಥಿತಿ. ``ಆ ದಿನಗಳು ಅತ್ಯಂತ ಭಯಾನಕ. ಅಪಾಯ ಹಾಗೂ ಸಮಸ್ಯೆ ನನ್ನನ್ನು ಅರಸಿ ಬರುತ್ತಿತ್ತು. ಆದ್ರೆ ಪೊಲೀಸರಿಂದ ನನ್ನನ್ನು ಹಿಡಿಯಲು ಸಾಧ್ಯವಾಗಲೇ ಇಲ್ಲ'' ಎನ್ನುತ್ತಾರೆ ಅಣ್ಣಾ.

ಭೂಗತರಾಗಿದ್ದ ಸಮಯದಲ್ಲಿ ಭಾರತ ಸರ್ಕಾರ ಸೈನ್ಯ ಸೇರಲು ಇಚ್ಛಿಸುವವರಿಂದ ಅರ್ಜಿ ಆಹ್ವಾನಿಸಿರುವುದು ಅಣ್ಣಾಗೆ ಗೊತ್ತಾಯ್ತು. ತಾವೂ ಸೈನಿಕರಾಗಬೇಕೆಂದು ಅಣ್ಣಾ ನಿರ್ಧರಿಸಿಬಿಟ್ರು. ಸೇನೆ ಸೇರಿದ ಅಣ್ಣಾ ಬಂಧನದಿಂದ್ಲೂ ಬಚಾವ್ ಆದ್ರು. ಆದ್ರೆ ಮುಂಬೈ ಅವರನ್ನು ಶೋಷಿತರ ಮತ್ತು ನೊಂದವರ ನಾಯಕನನ್ನಾಗಿ ಮಾಡಿತ್ತು. ಅವರು ಆಂದೋಲನಕಾರಿ ಮತ್ತು ಸಾಮಾಜಿಕ ಕಾರ್ಯಕರ್ತರಾಗಿಬಿಟ್ಟಿದ್ದರು. ಮುಂಬೈನ ಬಾಡಿಗೆದಾರರ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧವೂ ಧ್ವನಿಯೆತ್ತಿದ್ರು. ಆ ಸಮಯದಲ್ಲಿ ಗೂಂಡಾಗಳು ಮತ್ತು ಕಿಡಿಗೇಡಿಗಳು ಬಾಡಿಗೆದಾರರ ಬಳಿ ಮನೆ ಖಾಲಿ ಮಾಡುವಂತೆ ಬೆದರಿಕೆ ಹಾಕುತ್ತಿದ್ರು. ಅವರಿಂದ ಹಣ ವಸೂಲಿ ಮಾಡುತ್ತಿದ್ರು. ಈ ವಿಚಾರ ಗೊತ್ತಾಗ್ತಿದ್ದಂತೆ ಅಣ್ಣಾ ತಮ್ಮ ಸ್ನೇಹಿತರು ಮತ್ತು ಸಮಾನ ಮನಸ್ಕರ ಜೊತೆ ಸೇರಿ ಸಂಘಟನೆಯೊಂದನ್ನು ಕಟ್ಟಿದ್ರು. ಗೂಂಡಾಗಳಿಗೆ ಅವರದ್ದೇ ಭಾಷೆಯಲ್ಲಿ ಆವಾಝ್ ಹಾಕಿದ್ರು. ಅಣ್ಣಾ ಖದರ್ ಹಾಗೂ ಧಮಕಿ ನೋಡಿ ದೊಡ್ಡ ದೊಡ್ಡ ಗೂಂಡಾಗಳು ಕೂಡ ಹೆದರಿಬಿಟ್ರು. ``ನಾನು ಬಾಲ್ಯದಲ್ಲೇ ಅತ್ಯಾಚಾರದ ವಿರುದ್ಧ ಹೋರಾಟ ಆರಂಭಿಸಿದ್ದೆ. ನನಗೂ ಗೂಂಡಾಗಿರಿ ಗೊತ್ತು ಅಂತಾ ಆ ರೌಡಿಗಳ ಬಳಿ ಹೇಳಿದೆ. ಇದನ್ನು ಕೇಳಿ ಅವರು ಹೆದರಿಬಿಟ್ರು'' ಅಂತಾ ಅಣ್ಣಾ ವಿವರಿಸ್ತಾರೆ.

ಇದನ್ನೂ ಓದಿ...

ಜನಸೇವಕ, ಗಾಂಧಿವಾದಿ ಅಣ್ಣಾ ಹಜಾರೆ ಅವರ ಜೀವನಗಾಥೆ..

ಗಾಂಧಿವಾದಿ ಅಣ್ಣಾ ಹಜಾರೆ ಅವರ ಜೀವನಗಾಥೆ - ಭಾಗ 2

Add to
Shares
2
Comments
Share This
Add to
Shares
2
Comments
Share
Report an issue
Authors

Related Tags