ಆವೃತ್ತಿಗಳು
Kannada

ಕನ್ನಡದ ತೇರು ಇದು ಕೈ ಮುಗಿದು ಏರು.. !

ಪಿ.ಆರ್​​​.ಬಿ

30th Oct 2015
Add to
Shares
0
Comments
Share This
Add to
Shares
0
Comments
Share

ಬಿಎಂಟಿಸಿ.. ಬೆಂಗಳೂರು ಮಹಾನಗರದ ನಾಡಿ.. ಜನ ಸಾಮಾನ್ಯರ ನಿತ್ಯ ಬದುಕಿನಲ್ಲಿ ನಗರ ಸಾರಿಗೆ ಅನಿವಾರ್ಯ.. ಆದ್ರೆ ಜನ್ರ ಈ ಅನಿವಾರ್ಯತೆಗಳೇ ತಲೆನೋವುಗಳು ಅನ್ನೋದು ಸತ್ಯ. ಬಿಎಂಟಿಸಿ ಅಂದಾಕ್ಷಣ ಹಲವರಿಗೆ ಚಿಲ್ಲರೆ ವಿಷ್ಯಕ್ಕೂ ಕಾಲು ಕೆರೆದುಕೊಂಡು ಬೈಯ್ದಾಡಿಕೊಳ್ಳುವ ನಿರ್ವಾಹಕ ಪ್ರಯಾಣಿಕ.. ಇವ್ರ ಜೊತೆಗೆ ಯಮಸ್ವರೂಪಿ ಚಾಲಕ.. ಇದಿಷ್ಟೇ ನೆನಪಾದ್ರೂ ಅಚ್ಚರಿ ಏನಿಲ್ಲಾ. ಸಾಲದಕ್ಕೆ ಗಬ್ಬುನಾರುವ ಬಸ್ಸು, ಕೂತರೂ ನಿಂತರೂ ಅಂಟುವ ಕೊಳೆ, ಬೆವರಿಳಿಸುವ ನೂಕು ನುಗ್ಗಲು ಇವೆಲ್ಲಾ ಪ್ರಯಾಣಿಕರನ್ನ ಹೈರಾಣಾಗಿಸುತ್ತೆ. ಇವ್ರನ್ನ ನಿಭಾಯಿಸೋದ್ರಲ್ಲೇ ಚಾಲಕ ನಿರ್ವಾಹಕರೂ ಸುಸ್ತಾಗಿರ್ತಾರೆ . ಇನ್ನು ಡ್ರೈವರ್ ಕಂಡಕ್ಟರ್ ವರ್ಸಸ್ ಪ್ಯಾಸೆಂಜರ್ಸ್ ಕದನ ನಿತ್ಯ - ನಿರಂತರ.. ಆದ್ರೆ ಮಹಾನಗರ ಸಾರಿಗೆಯ ಈ ಇತಿಹಾಸಕ್ಕೇ ಅಪವಾದ ಎನ್ನುವಂತೆ ಒಂದು ಬಸ್ ಇದೆ .ಕನ್ನಡವನ್ನೇ ತನ್ನ ಜೀವನಾಡಿ ಎಂದು ಹೇಳುವ ಚಾಲಕರಿದ್ದಾರೆ ಅಂದ್ರೆ ನೀವು ನಂಬ್ಲೇ ಬೇಕು..

image


ಸುಮನಹಳ್ಳಿ ಡಿಪೋದಿಂದ ಕೆಂಗೇರಿ - ಯಲಂಹಕದ ನಡುವೆ ಸಂಚರಿಸೋ ಈ ಬಸ್ ನ ಹೆಸ್ರು ಕೇಳಿದ್ರೆ ಪ್ರಯಾಣಿಕರ ಮುಖ ಅರಳುತ್ತೇ . ಕಾರಣ ಪ್ರಯಾಣಿಕರ ಪಾಲಿಗೆ ಇದೊಂದು ಕೇವಲ ನಗರ ಸಾರಿಗೆ ಬಸ್ ಆಗಿಲ್ಲ.. ಇದೊಂದು ಕನ್ನಡದ ತೇರು.. ಪ್ರೀತಿಯ ಒಡನಾಟವಿರೋ ಭ್ರಾತೃತ್ವದ ಗೂಡು. 401 ಕೆ ಬಸ್ ಪ್ರಯಾಣಕ್ಕೆ ಹೋದ್ರೆ ನಿಮಗೆ ಸಿಗೋದು ಪ್ರೀತಿ - ಕಾಳಜಿ ತುಂಬಿದ ಸ್ವಾಗತ. ಒಳಗೆ ಎಲ್ಲಿ ನೋಡಿದ್ರೂ ಕನ್ನಡದ ಪ್ರೀತಿಯ ಸಾಕ್ಷಿಗಳು.. ಹೂವಿನ ಅಲಂಕಾರ.. ಜೊತೆಗೆ ಮನಸ್ಸನ್ನ ಹಗುರಗೊಳಿಸೋ ಹಿತವಾದ ಸಂಗೀತ.. ಎಲ್ಲಕ್ಕೂ ಮುಖ್ಯವಾಗಿ ಸ್ವಚ್ಛವಾಗಿರೋ ಸೀಟು - ಕಿಟಕಿ ಗಾಜು.. ಸುಖಪ್ರಯಾಣಕ್ಕೆ ಇದಕ್ಕಿಂತ ಇನ್ನೇನು ಬೇಕು .. ಅಲ್ವಾ..

image


ಈ ಪ್ರೀತಿಯ ರಥದ ಸಾರಥಿಗಳಾಗಿರೋ ಚಾಲಕ ರಾಜೇಶ್, ಕಂಡಕ್ಟರ್ ಮಧು.. ತಮ್ಮ ವೃತ್ತಿ ಮೇಲೆ ಅಪಾರ ಗೌರವ ಹೊಂದಿರೋ ಈ ಸಿಬ್ಬಂದಿಗಳು, ಈ ಸರ್ಕಾರಿ ಬಸನ್ನ ಮುತುವರ್ಜಿಯಿಂದ ನೋಡಿಕೊಂಡಿದ್ದಾರೆ. ಪ್ರತಿದಿನ ಬೆಳಗ್ಗೆ ಬಸ್ಸನ್ನ ಸ್ವಚ್ಛಗೊಳಿಸಿ, ಗಣೇಶನಿಗೆ ಪೂಜೆ ಸಲ್ಲಿಸಿದ ಬಳಿಕವೇ ಸಂಚಾರ ಆರಂಭ..

ಬೆಂಗಳೂರಿನ ಯಾಂತ್ರಿಕ ಬದುಕಿನಲ್ಲಿ ಕೆಲಸ ಮತ್ತು ಅದ್ರ ಒತ್ತಡವನ್ನ ನಿಭಾಯಿಸೋದು ಸುಲಭವಲ್ಲ.. ಈ ಕೆಲಸದ ಹೊರೆ, ಮಾನಸಿಕ ಒತ್ತಡದ ನಡುವೆ ಇರುವ ನಗರ ವಾಸಿಗಳು ಬಿಎಂಟಿಸಿ ಬಸ್ ಪ್ರಯಾಣ ಅಂದ್ರೆ ಸಾಕು ಬೆಚ್ಚಿ ಬೀಳ್ತಾರೆ..ಆದ್ರೆ 401 ಕೆ ಬಸ್ ನ ವಿಚಾರದಲ್ಲಿ ಹಾಗಲ್ಲ.. ಈ ಬಸ್ ಹತ್ತಿದ್ರೆ ಸಾಕು ಕೆಲಸದ ಒತ್ತಡ ಮರೆಯಾಗುತ್ತೆ.. ಕೊರೆಯುತ್ತಿದ್ದ ಯೋಚನೆ, ಬೇಸರಗಳು ದೂರಾಗುತ್ತವೆ ಅಂತಾರೆ ಪ್ರಯಾಣಿಕರು... ಹೀಗಾಗೇ ಪ್ರಯಾಣಿಕರು ಈ ಬಸ್ಸನ್ನ ಮಿಸ್ ಮಾಡಿಕೊಳ್ಳಲು ಇಷ್ಟ ಪಡೋದಿಲ್ಲ.

image


ವಿಶೇಷ ಅಂದ್ರೆ 401ಕೆ ಇತರೆ ಬಸ್ ಗಳು ಖಾಲಿ ಹೋದ್ರು ಪ್ರಯಾಣಿಕರು ಅದಕ್ಕೆ ಹತ್ತೋದಿಲ್ಲ. ಕಾಲಿಡಲು ಜಾಗವಿಲ್ಲದ ಪರಿಸ್ಥಿತಿ ಇಲ್ಲದಿದ್ದರೂ ಇದೇ ಬಸ್ ಹತ್ತಬೇಕು.. ಅವರಿಗೆ ಅದೊಂದು ಭಾವನಾತ್ಮಕ ಸಂಬಂಧ.. ಕಾಲೇಜು ವಿದ್ಯಾರ್ಥಿಗಳಿಗೆ ಈ ಬಸ್ ಶುಭ ಶಕುನವಿದ್ದಂತೆ.. ಈ ಬಸ್ ಕೇವಲ ಗೆಳೆತನದ ಭಾವಕ್ಕೇ ಮಾತ್ರ ಸಿಮೀತವಾಗಿಲ್ಲ..ಇದಕ್ಕೆ ಹತ್ತಿದ್ರೆ ಸಾಕು ಒಂದು ಕೂಡುಕುಟುಂಬದ ಭಾವನೆ ಬೆಳೆಯುತ್ತೆ. ಭ್ರಾತೃತ್ವದ ಅನುಭವ ಆಗುತ್ತೆ. ಪ್ರಯಾಣಿಕರು - ಕಂಡಕ್ಟರ್ ಡ್ರೈವರ್ ನಡುವೆ ಮಧುರ ಬಾಂಧವ್ಯ ಗಟ್ಟಿಯಾಗಿದೆ.

ಆದ್ರೆ ಈ ಬಸ್ ಹತ್ತಬೇಕು ಅಂದ್ರೆ ಕೆಲವು ಸರಳ ನಿಯಮಗಳನ್ನ ಪಾಲಿಸೋದು ಕಡ್ಡಾಯ. ಅಂದ್ರೆ ಬಸ್ ಏರುವಾಗ ಫೋನ್ ನಲ್ಲಿ ಹಾಡು ಕೇಳೋದಾಗ್ಲಿ, ಮಾತಾಡೋದಾಗ್ಲಿ ಮಾಡುವಂತಿಲ್ಲ..

ಬೆಂಗಳೂರಿನ ಈ ಟ್ರಾಫಿಕ್ ನಲ್ಲಿ ಸಮಯ ಪಾಲಿಸೋದು ಸಾಧ್ಯನೇ ಇಲ್ಲ. ಅಂತದ್ರಲ್ಲಿ ಈ 401ಕೆ ಬಸ್ ನಿರ್ದಿಷ್ಟ ಸಮಯಕ್ಕೆ ತಪ್ಪಿದ್ದೇ ಇಲ್ಲ. ಹೀಗಾಗಿ ವಿದ್ಯಾರ್ಥಿಗಳು, ಉದ್ಯೋಗಿಗಳೆಲ್ಲರಿಗೂ ಈ ಬಸ್ ಅಂದ್ರೆ ಒಂದು ರೀತಿ ಗೌರವ, ಪ್ರೀತಿ..

image


ಕೆಲಸದ ಪ್ರೀತಿ ವಹಿಸ್ಬೇಕು.. ಗೌರವ ಕಾಳಜಿ ಇರ್ಬೇಕು ಅಂತ ಹೇಳೋರು ಅದೆಷ್ಟೋ ಮಂದಿ.. ಆದ್ರೆ ಕರ್ತವ್ಯದ ಬಗ್ಗೆ ಆಸಕ್ತಿ ವಹಿಸಿ ನಿರ್ಹಸಿರೋ ಇತ್ತೀಚಿನ ದಿನಗಳಲ್ಲಿ ತೀರಾ ಕಮ್ಮಿ.ಆದ್ರೆ 401ಕೆ ಬಸ್ ನ ಕಂಡಕ್ಟರ್ಸ್ ಹಾಗೂ ಡ್ರೈವರ್ಸ್ ಯಾವತ್ತೂ ತಮ್ಮ ಕರ್ತವ್ಯದ ಬಗ್ಗೆ ನಿರ್ಲಕ್ಷ್ಯತನ ತೋರಿಲ್ಲ.. ನಿಷ್ಠೆಗೆ ಯಾವತ್ತೂ ಮೋಸ ಮಾಡಿಲ್ಲಾ.. ಹೀಗಾಗಿ ಇವರಿಗೆ ಪ್ರಯಾಣಿಕರ ಪ್ರೀತಿ, ಕೆಲಸದ ತೃಪ್ತಿ ಸಿಕ್ಕಿದೆ..

ಬಸ್ಸನ್ನ ಸ್ವಚ್ಛವಾಗಿ ಇಟ್ಟುಕೊಳ್ಳೋದಾಗ್ಲಿ, ಪ್ರಯಾಣಿಕರೊಂದಿಗೆ ಪ್ರೀತಿಯಿಂದ ವ್ಯವಹರಿಸೋದಾಕಕ್ಕಾಗ್ಲಿ ಇವರಿಗೆ ಯಾರೂ ಸ್ಪೂರ್ತಿ ಅಥವಾ ಮಾದರಿಯಲ್ಲ.. ತಮ್ಮ ಮನಸ್ಸಲ್ಲಿ ಮೂಡಿದ ಕೆಲಸದ ನಿಷ್ಠೆ ಹಾಗೂ ಜವಾಬ್ದಾರಿಯನ್ನ ಪ್ರೀತಿಯಿಂದ ನಿರ್ವಹಿಸುತ್ತಿದ್ದಾರೆ. . ಚಾಲಕ ರಾಜೇಶ್ ಕೂಡ ತಮ್ಮ ಬಸ್ ನ ಬಗ್ಗೆ ಪ್ರೀತಿ ಹೊಂದಿದ್ದಾರೆ. ಈ ಬಸ್ ನಿಂದಲೇ ಬದುಕುತ್ತಿರುವ ತಮಗೆ, ಪ್ರಯಾಣಿಕರನ್ನ ಖುಷಿಪಡಿಸುವುದೇ ಖುಷಿ ಅಂತಾರೆ ರಾಜೇಶ್.ಕನ್ನಡವನ್ನ ಉಳಿಸಿ ಬೆಳೆಸಿ ಅನ್ನೋದು ಇವ್ರ ಧ್ಯೇಯ..

ವಿಶೇಷ ಅಂದ್ರೆ 401ಕೆ ಕಲೆಕ್ಷನ್ ನಲ್ಲೂ ದಾಖಲೆ ನಿರ್ಮಿಸಿದೆ. ಬಸ್ ಡ್ರೈವರ್ ಹಾಗೂ ಕಂಡಕ್ಟರ್ ಗಳ ಈ ಸಾಧನೆಗೆ ಸಹೋದ್ಯೋಗಿಗಳು ಯಾವತ್ತೂ ಅಸೂಯೆ ಪಟ್ಟಿದ್ದಿಲ್ಲ.. ಬದಲಾಗಿ ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಿದ್ದಾರೆ. ಹೀಗೆ ಬೆಂಗಳೂರಿನ ಯಾಂತ್ರಿಕ ಬದುಕು, ಮರೆಯಾಗುತ್ತಿರುವ ಮೌಲ್ಯಗಳ ನಡುವೆಯೂ, ಜೀವನ ಮೌಲ್ಯ ಸಾರುವ 401ಕೆ ಬಸ್ ನಿಜಕ್ಕೂ ಅದ್ಭುತ..ಕನ್ನಡ ಭಾಷೆಯನ್ನ ಮರೆಯುವ ಈಗೀನ ಕಾಲದಲ್ಲಿ ಇವ್ರು ನಿಜಕ್ಕೂ ಡಿಫರೆಂಟ್...

Add to
Shares
0
Comments
Share This
Add to
Shares
0
Comments
Share
Report an issue
Authors

Related Tags