ಆವೃತ್ತಿಗಳು
Kannada

ಕೆಆರ್​ಎಸ್​ ಬತ್ತಿ ಹೋಗಬಹುದು, ಆದರೆ "ಕಾಮೇಗೌಡರ ಕಟ್ಟೆ" ಬತ್ತುವುದಿಲ್ಲ..!

ಟೀಮ್​ ವೈ.ಎಸ್​. ಕನ್ನಡ

29th Jun 2017
Add to
Shares
569
Comments
Share This
Add to
Shares
569
Comments
Share

ಪರಿಸರವಾದಿಗಳು ಎನಿಸಿಕೊಂಡವರು ಎಷ್ಟರ ಮಟ್ಟಿಗೆ ಪರಿಸರ ಸಂರಕ್ಷಣೆ ಮಾಡ್ತಾರೋ ಗೊತ್ತಿಲ್ಲ. ಆದರೆ, ಇಲ್ಲೊಬ್ಬ ವೃದ್ದ ಏಕಾಂಗಿಯಾಗಿಯೇಆ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ. ಊರಿನಲ್ಲಿ ಕಾಲ ಕಳೆಯುವುದಕ್ಕಿಂತಲೂ ಹೆಚ್ಚಾಗಿ ಕಾಡಿನಲ್ಲೇ ಕಾಲ ಕಳೆಯುತ್ತಾನೆ. ಯಾರ ಸಹಾಯವೂ ಇಲ್ಲದೆ ಒಂದಕ್ಷರ ವಿದ್ಯಾಭ್ಯಾಸವೂ ಇಲ್ಲದ ಇವರು ಕಳೆದ 25 ವರ್ಷಗಳಿಂದಲೂ ಏಕಾಂಗಿಯಾಗಿ, ಮಾಡಿಕೊಂಡು ಬರುತ್ತಿರುವ ಪರಿಸರ ಸಂರಕ್ಷಣೆ ಹಾಗೂ ಅಂತರ್ಜಲ ವೃದ್ದಿಯ ಕಾರ್ಯ ಎಲ್ಲರಿಗೂ ಮಾದರಿ. ಇವರ ಶ್ರಮದ ಫಲವಾಗಿ ಇಂದು ಸಾವಿರಾರು ಗಿಡಗಳು ಬೆಳೆದು ನಿಂತಿವೆ. ಅಷ್ಟೇ ಅಲ್ಲ ಬೆಟ್ಟದ ತಪ್ಪಲಿನಲ್ಲಿ ಇವರೇ ಕಟ್ಟಿರುವ ನಾಲ್ಕು ಕಟ್ಟೆಗಳಲ್ಲಿ ನೀರು ನಿಂತಿದ್ದು ಕೆ.ಆರ್.ಎಸ್​​ನಲ್ಲಿ ನೀರು ಬತ್ತಿ ಹೋದರೂ ಇವರು ಕಟ್ಟಿರುವ ಕಟ್ಟೆಯಲ್ಲಿ ನೀರು ಇಂಗುವುದಿಲ್ಲ ಅನ್ನೋದು ವಿಶೇಷ.

image


ಎಲ್ಲಿದ್ದಾರೆ ಈ ಪರಿಸರ ಯೋಗಿ

ಮಳವಳ್ಳಿ ತಾಲೂಕಿನ ದಾಸನದೊಡ್ಡಿ ಗ್ರಾಮದ ಕಾಮೇಗೌಡ, ಎಂಬುವವರೇ, ತಮ್ಮ ಇಳಿ ವಯಸ್ಸಿನಲ್ಲೂ ಪರಿಸರದ ಬಗೆಗೆ ಕಾಳಜಿ ಮೆರೆಯುತ್ತಿರುವ ವೃದ್ಧ. ಮಾನವನ ಸ್ವಾರ್ಥದಿಂದಾಗಿ ಇಂದು ಗಿಡಮರಗಳು ಕಡಿಮೆಯಾಗಿದ್ದು ಅವಸಾನದ ಅಂಚಿಗೆ ಹೋಗಿವೆ. ಇದರಿಂದಾಗಿ ಅರಣ್ಯವೂ ಸಹ ಭಾರೀ ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ. ಕೆರೆ ಕಟ್ಟೆಗಳ ಸಂರಕ್ಷಣೆ ಇಲ್ಲದೆ ನೀರು ಸಂಗ್ರಹಣೆ ಕೂಡ ಕಡಿಮೆಯಾಗಿದೆ. ಇದರ ಪರಿಣಾಮಗಳನ್ನ ಚೆನ್ನಾಗಿಯೇ ಅರಿತಿದ್ದ ಒಂದಕ್ಷರ ವಿಧ್ಯಾಭ್ಯಾಸ ಮಾಡದ ಕಾಮೇಗೌಡರು ಕಳೆದ 25 ವರ್ಷಗಳಿಂದ ಪರಿಸರ ಪ್ರೇಮ ಮೆರೆಯುತ್ತಿದ್ದಾರೆ. ತಮ್ಮ ಗ್ರಾಮದ ಸಮೀಪವೇ ಇರುವ ಕುಂದನ ಬೆಟ್ಟದ(ಪರ್ವತ) ತಳಭಾಗದಲ್ಲಿ ಕಟ್ಟೆಗಳನ್ನ ನಿರ್ಮಿಸಿ ಅದರಲ್ಲಿ ಮಳೆ ನೀರು ಸಂಗ್ರಹವಾಗುವಂತೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಬೆಟ್ಟದ ತಪ್ಪಲಿನಲ್ಲಿ ಸರಿ ಸುಮಾರು 2 ಸಾವಿರಕ್ಕೂ ಹೆಚ್ಚು ಮರಗಿಡಗಳನ್ನ ನೆಟ್ಟು ಪೋಷಿಸುವ ಮೂಲಕ ಪರಿಸರ ಬೆಳವಣಿಗೆಗೆ ಹೊಸ ಅಧ್ಯಾಯನವನ್ನೇ ಸೃಷ್ಟಿ ಮಾಡಿದ್ದಾರೆ.

ಇದನ್ನು ಓದಿ: ಬಂಗಾರದಿಂದ್ಲೇ ಬಂಗಾರದಂಥ ಬದುಕು ಕಟ್ಟಿದ 'ಪ್ರಜ್ಞಾ'ವಂತೆ... 

ವೃದ್ಧಾಪ್ಯದಲ್ಲೂ ಪರಿಸರ ಕಾಳಜಿ

ಇವರ ಈ ಪರಿಸರ ಪ್ರೀತಿಗೆ ವೃದ್ಧಾಪ್ಯ ಅಡ್ಡಿಯಾಗಿಲ್ಲ. ಆರಂಭದಲ್ಲಿ ಜೀವನೋಪಾಯಕ್ಕಾಗಿ ಕುರಿಗಳನ್ನ ಮೇಯಿಸುತ್ತಿದ್ದರು. ಇವರ ಕಾಳಜಿ ಪರಿಸರದ ಕಡೆಗೆ ತಿರುಗಿದ ನಂತರ ಇದ್ದ ಕುರಿಗಳನ್ನ ಮಾರಿ ಅದರಿಂದ ಬಂದ 4 ಲಕ್ಷಕ್ಕೂ ಹೆಚ್ಚು ಹಣವನ್ನ ವಿನಿಯೋಗಿಸಿ ಕುಂದನ ಬೆಟ್ಟದ ತಪ್ಪಲಿನಲ್ಲಿ ಕಟ್ಟೆಗಳನ್ನ ನಿರ್ಮಿಸಿದರು. ಇವರಿಗೆ ಇಬ್ಬರು ಮಕ್ಕಳಿದ್ದು ಇಬ್ಬರಿಗೂ ಟೈಲರಿಂಗ್ ಕೆಲಸ ಕಲಿಸಿ ಅವರವರ ಜೀವನೋಪಾಯಕ್ಕಾಗಿ ದಾರಿ ಮಾಡಿಕೊಟ್ಟಿದ್ದಾರೆ. ಸಂಪಾದನೆ ಮಾಡಿದ ಹಣವನ್ನ ಈ ರೀತಿ ಪರಿಸರ ಕಾಳಜಿಗೆ ಖರ್ಚು ಮಾಡಿದ ತಪ್ಪಿಗೆ ಮಕ್ಕಳಿಂದಲೂ ತಿರಸ್ಕಾರಕ್ಕೆ ಒಳಗಾಗಿರುವ ಈ ಕಾಮೇಗೌಡರು, ಪ್ರತಿದಿವೂ ಕೇವಲ ಒಂದು ಬಾರಿ ಮಾತ್ರ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಮಕ್ಕಳು, ಸೊಸೆ ಊಟಕ್ಕೆ ಕೊಟ್ಟರೆ ಒಂದಿಷ್ಟು ತಿಂದು ಈ ಬೆಟ್ಟದ ತಪ್ಪಲಿಗೆ ಬಂದು ಬಿಡುತ್ತಾರೆ. ಇಲ್ಲಿ ಮರಗಿಡಗಳ ಪೋಷಣೆಯಲ್ಲಿ ತೊಡಗಿ ಕಟ್ಟೆಗಳ ನಿರ್ವಹಣೆ ಮಾಡುತ್ತಾರೆ. ಮರಗಳು ಸ್ವಲ್ಪ ಪ್ರಮಾಣದಲ್ಲಿ ಒಣಗುತ್ತಿವೆ ಎನಿಸಿದ ಕೂಡಲೇ ಅವುಗಳಿಗೆ ನೀರು ಹಾಕುವುದನ್ನ ಮಾಡುತ್ತಾರೆ. ಹೀಗಾಗಿ ಕುಂದನ ಬೆಟ್ಟದ( ಪರ್ವತ)ದ ತಪ್ಪಲು ಪ್ರದೇಶ ಹಸಿರಿನಿಂದ ಕಂಗೊಳಿಸುತ್ತಿದೆ. ಇಲ್ಲಿ ಸಾವಿರಾರು ಮರಗಳು ಬೆಳೆದು ನಿಂತಿದ್ದು ನೇರಳೆ, ಆಲದ ಮರ,ಹತ್ತಿ, ಹೊಂಗೆ ಸೇರಿದಂತೆ ವಿವಿಧ ಬಗೆಯ ಮರಗಳು ಪರಿಸರವನ್ನು ಸಂರಕ್ಷಣೆ ಮಾಡುತ್ತಿವೆ. ಮರಗಳನ್ನ ನೋಡುತ್ತಾ ರಾತ್ರಿವರೆಗೂ ಈ ಪ್ರದೇಶದಲ್ಲಿಯೇ ಕಾಲ ಕಳೆಯುವ ಕಾಮೇಗೌಡರು ರಾತ್ರಿ ಮನೆಗೆ ತೆರಳಿ ಮತ್ತೆ ಬೆಳಗ್ಗೆ ಬಂದು ಈ ಮರ ಗಿಡಗಳ ಬಳಿ ಸೇರಿಕೊಳ್ಳುತ್ತಾರೆ. ಕಳೆದ 25 ವರ್ಷಗಳಿಂದಲೂ ಇದನ್ನೇ ತಮ್ಮ ಕಾಯಕ ಮಾಡಿಕೊಂಡಿರುವ ಕಾಮೇಗೌಡರು 75ರ ಹರೆಯದಲ್ಲೂ ತಮ್ಮ ಪರಿಸರ ಪ್ರೇಮ ಮೆರೆಯುತ್ತಿದ್ದಾರೆ. 

image


" ನಾವು ಏನೇ ಮಾಡಿದರೂ ಅದು ಕೊನೆ ವರೆಗೂ ಮಾಡಬೇಕು, ನಾಲ್ಕು ಜನರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಈ ರೀತಿ ಮಾಡುತ್ತಿದ್ದೇನೆ" 
- ಕಾಮೇಗೌಡ, ಪರಿಸರಪ್ರೇಮಿ

ಪರಿಸರ ಕಾಳಜಿಗೆ ಅಕ್ಷರ ಜ್ಞಾನ ಬೇಕಿಲ್ಲ

ಯಾವುದೇ ವಿಧ್ಯಾಭ್ಯಾಸ ಇಲ್ಲದ ಕಾಮೇಗೌಡರು ತಮ್ಮ ಸ್ವಂತ ಹಣದಲ್ಲಿ ನಿರ್ಮಿಸಿರುವ ಕಟ್ಟೆಗಳನ್ನ ಸಾಕಷ್ಟು ವೈಜ್ಞಾನಿಕವಾಗಿಯೇ ನಿರ್ಮಿಸಲಾಗಿದೆ. ಬೆಟ್ಟದ ತಪ್ಪಲಿನಲ್ಲಿ ಕಟ್ಟೆ ನಿರ್ಮಿಸಲು ಬೇಕಾದ ಸೂಕ್ತ ಜಾಗವನ್ನ ಆಯ್ಕೆ ಮಾಡಿಕೊಂಡು ನೀರು ಸರಾಗವಾಗಿ ಹರಿದುಬರುವಂತಹ ಸ್ಥಳದಲ್ಲಿ ಕಟ್ಟೆ ನಿರ್ಮಿಸಲಾಗಿದೆ. ಕಟ್ಟೆಯ ಸುತ್ತಲೂ ಗಿಡಗಳನ್ನ ನೆಟ್ಟು ಪರಿಸರವನ್ನೂ ಕಾಯುವ ಕೆಲಸ ಮಾಡಲಾಗಿದೆ. ಅಲ್ಲದೆ ಕೆರೆ ನೋಡಲು ಬರುವವರು ಆರಾಮವಾಗಿ ಕುಳಿತು ಕೆರೆಯನ್ನ ವೀಕ್ಷಣೆ ಮಾಡಲು ಕಾಡುಗಲ್ಲುಗಳಿಂದ ಸುಂದರವಾದ ಕುರ್ಚಿಯ ವ್ಯವಸ್ಥೆಯನ್ನ ಮಾಡಲಾಗಿದೆ. ಇದಲ್ಲದೆ, ಇದೇ ಕಲ್ಲುಗಳನ್ನ ಬಳಸಿ ಕಟ್ಟೆಗೆ ಇಳಿದು ಸುಲಭವಾಗಿ ನೀರನ್ನ ತರುವಂತಹ ಮೆಟ್ಟಿಲುಗಳ ವ್ಯವಸ್ಥೆಯನ್ನೂ ಮಾಡಿದ್ದಾರೆ. ಕಟ್ಟೆಯಲ್ಲಿ ನೀರು ಕುಡಿಯಲು ಬರುವ ಕಾಡು ಪ್ರಾಣಿಗಳು ತಮ್ಮ ಮೈ ಉಜ್ಜಿಕೊಳ್ಳಲಿ ಎಂಬ ಉದ್ದೇಶದಿಂದ ಅಲ್ಲಲ್ಲಿ ಕಲ್ಲುಗಳನ್ನ ನೆಟ್ಟಿದ್ದಾರೆ. ತಾನು ಸತ್ತಮೇಲೂ ಸಾವಿರಾರು ವರ್ಷ ಈ ಕಟ್ಟೆಗಳು ಶಾಶ್ವತವಾಗಿರ ಬೇಕು, ಜನ ಯಾವಾಗಲೂ ಈ ಕಟ್ಟೆಗಳನ್ನ ಕಾಮೇಗೌಡರ ಕಟ್ಟೆಗಳು ಎಂದು ಕರೆಯಬೇಕು ಎಂಬ ಹಂಬಲ ಈ ಗೌಡರಿಗಿದೆ. ಇವರು ನಿರ್ಮಿಸಿರುವ ಈ ಕಟ್ಟೆಯಲ್ಲಿ ಬಿರು ಬೇಸಿಗೆಯಲ್ಲೂ ನೀರು ಕಡಿಮೆಯಾಗಿಲ್ಲ. ಕನ್ನಂಬಾಡಿ ಕಟ್ಟೆ ಎಂದೇ ಪ್ರಸಿದ್ಧಿ ಪಡೆದಿರುವ, ಕೆ.ಆರ್. ಎಸ್ ಡ್ಯಾಂನಲ್ಲಿ ನೀರು ಕಡಿಮೆಯಾದರೂ ತಮ್ಮ ಕಟ್ಟೆಯ ನೀರು ಇಂಗುವುದಿಲ್ಲ ಎನ್ನುವ ಗೌಡರು ಇಲ್ಲಿ ಅರಣ್ಯ ಸಂಪತ್ತಿನ ಉಳಿವಿಗೂ ಸಾಕಷ್ಟು ಶ್ರಮಿಸುತ್ತಿದ್ದಾರೆ. ಇವರು ನಿರ್ಮಿಸಿರುವ ಕಟ್ಟೆಗಳ ಸುತ್ತಲೂ ಅಪಾರ ಪ್ರಮಾಣದ ಮರಳಿನ ರಾಶಿ ಇದ್ದು ಇದನ್ನೂ ಕಾಯುವ ಕೆಲಸವನ್ನೂ ಇವರು ಮಾಡುತ್ತಿದ್ದಾರೆ. ಪರಿಸರ ಸಂರಕ್ಷಣೆ ಹಾಗೂ ಅಂತರ್ಜಲ ವೃದ್ದಿಯ ಜೊತೆಗೆ ಇಲ್ಲಿಗೆ ಬರುವ ಜನರಿಗೆ ಪರಿಸರದ ಬಗೆಗೆ ಕಾಳಜಿ ಮೂಡಿಸುವ ಉದ್ದೇಶದಿಂದ ಬಂಡೆಗಲ್ಲುಗಳ ಮೇಲೆ ಪರಿಸರ ಸಂರಕ್ಷಣೆ ನಾಗರೀಕರ ಹೊಣೆ ಎಂಬುದು ಸೇರಿದಂತೆ ಹಲವು ಬರಹಗಳನ್ನ ಬರೆಯಿಸಿ ತಮ್ಮ ಕಾಳಜಿ ಮೆರೆಯುತ್ತಿದ್ದಾರೆ. ಮಾತಿನಂತೆ ತನ್ನ ಮನೆ ಮಕ್ಕಳನ್ನ ಬಿಟ್ಟು 75 ರ ಹರೆಯದಲ್ಲೂ ಈ ಕಾಯಕ ಮಾಡುತ್ತಿರುವ ಕಾಮೇಗೌಡರು ಎಲ್ಲರಿಗೂ ಆದರ್ಶವಾಗಿದ್ದಾರೆ.

ಇದನ್ನು ಓದಿ:

1. ರೇಸಿಂಗ್ ಜಗತ್ತಿನ ಆಶಾಕಿರಣ- ದಾಖಲೆ ಬರೆದ ವಡೋದರಾದ ಬಾಲಕಿ

2. ಟ್ರಿಪ್​​ ಹೋಗಲು ಟಿಪ್ಸ್​​ ಹೇಳುವ ಎಕ್ಸ್​ಪರ್ಟ್​ ಇವರು..!

3. ಪತ್ರಕರ್ತನ ಸ್ಟಾರ್ಟ್​ಅಪ್ ಉದ್ಯಮ- "ನದಿಮನೆ"ಯಲ್ಲಿ ಪ್ರವಾಸಿಗರಿಗೆ ಸಿಗುತ್ತೆ ಸಂಭ್ರಮ

 

Add to
Shares
569
Comments
Share This
Add to
Shares
569
Comments
Share
Report an issue
Authors

Related Tags