ಕಲಿಯುವ ಹಠ, ಛಲ ಬಿಡಲಿಲ್ಲ- ಗಿನ್ನೆಸ್​ ದಾಖಲೆ ಬರೆದ ಕನ್ನಡ ನೃತ್ಯಗಾರ್ತಿ..!

ಟೀಮ್​ ವೈ.ಎಸ್​. ಕನ್ನಡ

ಕಲಿಯುವ ಹಠ, ಛಲ ಬಿಡಲಿಲ್ಲ- ಗಿನ್ನೆಸ್​ ದಾಖಲೆ ಬರೆದ ಕನ್ನಡ ನೃತ್ಯಗಾರ್ತಿ..!

Friday January 06, 2017,

4 min Read

ನನಗೆ ಕಲಿಯುವ ಆಸಕ್ತಿ ಇತ್ತು. ಆದ್ರೆ ಕಲಿಯಲು ಅವಕಾಶವಿರಲಿಲ್ಲ. ನನ್ನ ಮನಸ್ಸಿನ ಒಳಗೆ ಕಲಿಯಲೇ ಬೇಕು, ಸಾಧನೆ ಮಾಡಲೇ ಬೇಕು ಅನ್ನುವ ಹಠವಿತ್ತು. ಕಷ್ಟಗಳು ಬೆಂಕಿಯಂತೆ ಎದುರಾದವು. ಜೀವನ ಕೂಡ ಕಷ್ಟ ಎನಿಸುವಷ್ಟರ ಮಟ್ಟಿಗೆ ಬಂದಿತ್ತು. ಆದ್ರೆ ಸಾಧನೆಯ ಕನಸು ಎಲ್ಲಾ ದುಃಖಗಳನ್ನುಸ ದೂರಮಾಡಿತ್ತು. ಸಾಧಿಸಬೇಕು ಅನ್ನುವ ಛಲ ಪ್ರತಿದಿನವೂ ಹೊಸ ಪ್ರೋತ್ಸಾಹ ತುಂಬುತ್ತಾ ಇತ್ತು. ಇವತ್ತು ಜನ ನನ್ನನ್ನು ಗುರುತಿಸುತ್ತಾರೆ. ನನಗೂ ತೃಪ್ತಿ ಸಿಕ್ಕಿದೆ. ಇನ್ನೂ ಸಾಧಿಸಬೇಕು ಅನ್ನುವ ಛಲ ಇದೆ. ಸಾಧಿಸಿಯೇ ಸಾಧಿಸುತ್ತೇನೆ. ಹೀಗಂತ ಹೇಳಿಕೊಂಡು ಮಾತಿಗಿಳಿದಿದ್ದು ಗಿನ್ನೆಸ್​ ದಾಖಲೆ ಒಡತಿ ರೂಪಾ. ಇವತ್ತು ರೂಪಾ ಎಲ್ಲರೂ ಗುರುತಿಸಬಲ್ಲ ಕೂಚುಪುಡಿ ನೃತ್ಯಗಾರ್ತಿ​. ಹಠ ಮತ್ತು ಛಲದಿಂದಲೇ ಎಲ್ಲವನ್ನು ಸಾಧಿಸಿದ್ದ ಗಟ್ಟಿಗಿತ್ತಿ.

image


ಯಾವುದೂ ಸುಲಭವಿರಲಿಲ್ಲ

ಅಂದಹಾಗೇ ರೂಪಾ ಪಾಲಿಗೆ ಯಾವುದೂ ಕೂಡ ಸುಲಭವಾಗಿ ಒಲಿದು ಬರಲಿಲ್ಲ. ಎಲ್ಲವೂ ಪರಿಶ್ರಮದಿಂದಲೇ ಸಿಕ್ಕಿದೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ರಾಯಲ್​ ಪಾಡ್​ ರೂಪಾ ಹುಟ್ಟೂರು. ತಂದೆ ಕೃಷ್ಣಮೂರ್ತಿ ಕೋ ಆಪರೇಟಿವ್​ ಡಿಪಾರ್ಟ್​ಮೆಂಟ್​ನಲ್ಲಿ ಕೆಲಸ ಮಾಡ್ತಾ ಇದ್ರು. ತಾಯಿ ಗೌರಮ್ಮ ಟೀಚರ್. ಗೌರಮ್ಮ ಶಾಸ್ತ್ರೀಯ ಸಂಗೀತ ಕೂಡ ಕಲಿತಿದ್ದರು. ಹೀಗಾಗಿ ಮಗಳು ರೂಪಾ ಅವರಿಗೆ ಚಿಕ್ಕ ವಯಸ್ಸಿನಲ್ಲೇ ಏನಾದ್ರೂ ಕಲಿಯಬೇಕು ಅನ್ನುವ ಕನಸು ಹುಟ್ಟಿತ್ತು.

" ಚಿಕ್ಕ ವಯಸ್ಸಿನಲ್ಲಿ ನನಗೆ ನೃತ್ಯ ಕಲಿಯ ಬೇಕು ಅನ್ನುವ ಕನಸು ಹುಟ್ಟಿಕೊಂಡಿತ್ತು. ಎಲ್ಲರೂ ಅದೇ ವಯಸ್ಸಿನಲ್ಲಿ ಕಲಿಯುತ್ತಾರೆ. ಆದ್ರೆ ನನಗೆ ಆ ಅದೃಷ್ಟ ಇರಲಿಲ್ಲ. ನಮ್ಮೂರು ಚಿಂತಾಮಣಿಯಲ್ಲಿ ಟಿವಿ ನೋಡಿಕೊಂಡು ಡ್ಯಾನ್ಸ್​ ಕಲಿಯಲು ಅವಕಾಶ ಇರಲಿಲ್ಲ. ಸ್ಕೂಲ್ ಹೋಗೋ ಟೈಮ್​ನಲ್ಲಿ ಡ್ಯಾನ್ಸ್​ಕಲಿಯೋಣ ಅಂದ್ರೆ ಅದೂ ಕೂಡ ಆಗಲಿಲ್ಲ. ಯಾಕಂದ್ರೆ ಡ್ಯಾನ್ಸ್​ ಕಲಿಸುವ ಟೀಚರ್​ 6 ತಿಂಗಳಿಗೆ ಒಂದು ಬಾರಿ ಬಂದು ಹೋಗ್ತಾ ಇದ್ರು. ನನ್ನ ಡ್ಯಾನ್ಸ್​ ಕಲಿಯುವ ಕನಸು ಹಾಗೇ ಉಳಿದುಕೊಂಡಿತ್ತು."
- ರೂಪಾ, ಕೂಚುಪುಡಿ ನೃತ್ಯ ಗಾರ್ತಿ

ಈ ಮಧ್ಯೆ ರೂಪಾ ಕಲಿಕೆ ಚೆನ್ನಾಗಿ ನಡೆಯುತ್ತಿತ್ತು. ವಿಜ್ಞಾನದಲ್ಲಿ ಪದವಿ ಕೂಡ ಪಡೆದುಕೊಂಡ್ರು. ಆದ್ರೂ ನೃತ್ಯದ ಬಗೆಗಿನ ಕನಸುಗಳು ದೂರವಾಗಿರಲಿಲ್ಲ. ಸುಮಾರು 15 ವರ್ಷ ಹಾಗೇ ಕಳೆದು ಹೋಯಿತು. ಏಳೆಂಟು ನೃತ್ಯಗುರುಗಳು ಕೂಡ ಬಂದು ಹೋದ್ರು. ಆದ್ರೆ ರೂಪಾ ಅವರ ನೃತ್ಯ ಕಲಿಕೆ ಮೇಲುಮುಖದಲ್ಲಿ ಹೋಗಲಿಲ್ಲ. ಈ ಮಧ್ಯೆ ಮನೆಯ ಆರ್ಥಿಕ ಸ್ಥಿತಿ ಕೂಡ ಬದಲಾಗ ತೊಡಗಿತ್ತು. ನೃತ್ಯ ಕಲಿಯುವ ಕನಸು ಮಾತ್ರ ಗಟ್ಟಿಯಾಗೇ ಇತ್ತು.

ಬದುಕಿಗೊಂದು ತಿರುವು

ರೂಪಾ ಪದವಿ ಶಿಕ್ಷಣ ಮುಗಿಸುತ್ತಿದ್ದ ವೇಳೆ ಅದು. ಪ್ರಖ್ಯಾತ ನೃತ್ಯಗಾರ​ ವೆಂಪಟಿ ಚಿನ್ನ ಸತ್ಯಂ ಅವರ ಶಿಷ್ಯ ಉದಯ್​ ಕಾಂತ್​ ಯಾವುದೋ ಕಾರಣಕ್ಕೆ ಚಿಂತಾಮಣಿಗೆ ಬಂದಾಗ ಅವರ ಪರಿಚಯವಾಯಿತು. ಆಗ ರೂಪಾ ವಯಸ್ಸು ಕೇವಲ 20 ವರ್ಷ. ಸತ್ಯಂ ಅವರು ಕೂಚುಪುಡಿ ನೃತ್ಯದಲ್ಲಿ ಪರಿಣಿತಿ ಸಾಧಿಸಿದ್ದರು. ರೂಪಾ ಅವರ ಬಳಿ ನೃತ್ಯ ಕಲಿಯಲು ಆರಂಭಿಸಿದ್ರು. 6 ವರ್ಷಗಳ ಅಭ್ಯಾಸ ರೂಪಾ ಅವರ ಕನಸಿಗೆ ನೀರೆರೆದು ಪೋಷಿಸಿತ್ತು. ಈ ನಡುವೆ ರೂಪಾಗೆ ಮದುವೆ ಆಫರ್​ಗಳು ಕೂಡ ಬಂದಿತ್ತು. ಆದ್ರೆ ನೃತ್ಯ​ ಕಲಿಯದೆ ಮದುವೆ ಆಗಲ್ಲ ಅನ್ನುವ ದೃಢ ನಿರ್ಧಾರ ಮಾಡಿದ್ದ ರೂಪಾ ವಿವಾಹವನ್ನು ಮುಂದೆ ತಳ್ಳುತ್ತಾ ಬಂದ್ರು.

image


ಕನಸಿನ ರಾಜಕುಮಾರ

ಮನೆಯಲ್ಲಿ ಮದುವೆ ಒತ್ತಡ ಹೆಚ್ಚಿತ್ತು. ನೃತ್ಯದನಲ್ಲಿ ಸ್ವಲ್ಪ ಪರಿಣಿತಿ ಪಡೆದಿದ್ದ ರೂಪಾ ರಾಜೇಶ್​ ಅನ್ನುವವರ ಕೈ ಹಿಡಿದ್ರು. ಚಿಂತಾಮಣಿಯಿಂದ ಶಿಮೊಗ್ಗಕ್ಕೆ ಬದುಕು ಚಲಿಸಿಬಿಟ್ಟಿತ್ತು. ರೂಪಾ ಕನಸಿಗೆ ಪತಿ ಮತ್ತು ಅತ್ತೆ ಲೀಲಾವತಿ ಬೆನ್ನೆಲುಬಾಗಿ ನಿಂತು ಬಿಟ್ಟಿದ್ದರು.

" ನಾನು ಮದುವೆ ಆಗಿದ್ದು ಕಂಡೀಷನ್​ ಮೇಲೆಯೇ. ನನ್ನ ನೃತ್ಯದ ಅಭ್ಯಾಸಕ್ಕೆ ಬೆಂಬಲ ನೀಡಿದರೆ ಮಾತ್ರ ನಾನು ಮದುವೆ ಆಗುತ್ತೇನೆ ಅಂತ ಹೇಳಿಯೇ ನಾನು ಮದುವೆ ಆದೆ. ಆದ್ರೆ ನಾನು ಅಂದುಕೊಂಡಿದ್ದಕ್ಕಿಂತಲೂ ಹೆಚ್ಚಾಗಿ ನನಗೆ ಪ್ರೋತ್ಸಾಹ ಸಿಕ್ಕಿತ್ತು. ಶಿವಮೊಗದಲ್ಲಿ ನನ್ನ ಬದುಕಿಗೆ ದೊಡ್ಡ ತಿರುವು ಸಿಕ್ಕಿತ್ತು"
- ರೂಪಾ ನೃತ್ಯಗಾರ್ತಿ​

ಬದುಕು ಬದಲಿಸಿದ ನಿರ್ಧಾರ

ನೃತ್ಯದ​ ಮೇಲೆ ರೂಪಾ ಇಟ್ಟುಕೊಂಡಿದ್ದ ಅಭಿಮಾನ ಮತ್ತು ಶ್ರದ್ಧೆಯನ್ನು ನೋಡಿ ಅವರ ಕುಟುಂಬ ಅವರಿಗೆ ಡ್ಯಾನ್ಸ್​ ಸ್ಕೂಲ್​ ಶುರು ಮಾಡವ ಐಡಿಯಾ ಕೊಟ್ರು. ರೂಪಾ "ನೂಪುರ ಫೈನ್​ ಆರ್ಟ್ಸ್​ ಅಕಾಡೆಮಿ" ಅನ್ನುವ ನೃತ್ಯ ಶಾಲೆಯನ್ನು 2003ರಲ್ಲಿ ಶುರುಮಾಡಿದ್ರು. ಆರಂಭದಲ್ಲಿ ರೂಪಾ ನೃತ್ಯ ಶಾಲೆಗೆ ಮಕ್ಕಳು ಕಡಿಮೆ ಬರ್ತಾ ಇದ್ರು. ಈ ಮಧ್ಯೆ ಅನಿವಾರ್ಯ ಕಾರಣಗಳಿಂದಾಗಿ ರೂಪಾ ಫ್ಯಾಮಿಲಿ ಬೆಂಗಳೂರಿಗೆ ಶಿಫ್ಟ್ ಆಯಿತು. ಬೆಂಗಳೂರಿನ ಜೊತೆಗೆ ಚಿಂತಾಮಣಿ ,ಮುಳಬಾಗಲು, ಮಾಲೂರುನಂತಹ ಚಿಕ್ಕ ಚಿಕ್ಕ ಪ್ರದೇಶಗಳಲ್ಲೂ ನೂಪುರ ಫೈನ್​ ಆರ್ಟ್ಸ್​ ಅಕಾಡೆಮಿ ಎಂಬ ನೃತ್ಯಶಾಲೆಯನ್ನು ಆರಂಭಿಸಿದ್ರು. ಕಡಿಮೆ ವೆಚ್ಚದ ನೃತ್ಯ ಕಲಿಕೆ ಇದಾಗಿದ್ದರೂ ರೂಪಾ ನೃತ್ಯ ಶಾಲೆಗೆ ಹೆಚ್ಚು ವಿದ್ಯಾರ್ಥಿಗಳು ಇರಲಿಲ್ಲ. ಈ ಮಧ್ಯೆ ಮಗನ ಜನನ ರೂಪಾ ನೃತ್ಯದ ಕನಸಿಗೆ ಚಿಕ್ಕದೊಂದು ಬ್ರೇಕ್​ ನೀಡಿತ್ತು.

ಹೀಗೆ ಬದುಕು ಸಾಗುತ್ತಾ ಇರುವಾಗ ಮತ್ತೊಂದು ತಿರುವು ಸಿಗುತ್ತದೆ. ಕೇವಲ ಮಕ್ಕಳಿಗೆ ಮಾತ್ರ ಯಾಕೆ ನೃತ್ಯ ಹೇಳಿಕೊಡಬೇಕು ಅನ್ನುವ ಯೋಚನೆ ರೂಪಾ ತಲೆಯಲ್ಲಿ ಹುಟ್ಟಿಕೊಳ್ಳುತ್ತದೆ. ಹೆಚ್ಚು ಯೋಚನೆ ಮಾಡದೆ ನೃತ್ಯದ ಬಗ್ಗೆ ಆಸಕ್ತಿ ಇರುವ ಹೌಸ್​ ವೈಫ್​ಗಳಿಗೆ ನೃತ್ಯ ಕಲಿಸುವ ಸಾಹಸ ಮಾಡುತ್ತಾರೆ. ಬೆಂಗಳೂರಿನಲ್ಲಿ ಆರಂಭವಾದ ಈ ಕೆಲಸ ನಿಧಾನವಾಗಿ ಶಿವಮೊಗ್ಗ, ಮುಳಬಾಗಿಲು, ಮೈಸೂರು, ಚಿಂತಾಮಣಿ ಹೀಗೆ ಎಲ್ಲಾ ಕಡೆ ಪಸರಿಸುತ್ತದೆ. ಹಲವು ಹೌಸ್​ ವೈಫ್​ಗಳು ರೂಪಾ ಸಹಾಯದಿಂದ ನೃತ್ಯ ಕಲಿಯುತ್ತಾರೆ. ರೂಪಾ ಮತ್ತು ಅವರ ಆತ್ಮೀಯರನ್ನೊಳಗೊಂಡ ತಂಡ ಶಾಲೆಗಳಿಗೆ ಹೋಗಿ ನೃತ್ಯ​ ಕಲಿಸುವ ತೀರ್ಮಾನ ಮಾಡುತ್ತಾರೆ. ಇಲ್ಲೂ ಯಶಸ್ಸು ಸಿಗುತ್ತದೆ. ರೂಪಾ ನೃತ್ಯ ಬಳಗ ದೊಡ್ಡದಾಗಿ ಬೆಳೆಯುತ್ತದೆ.

image


ದಾಖಲೆಯ ಕನಸು

ಇಷ್ಟು ಹೊತ್ತಿಗೆ ರೂಪಾಗೆ ನೃತ್ಯದಲ್ಲಿ ಗಿನ್ನೆಸ್​ ದಾಖಲೆ ಬರೆಯುವ ಕನಸು ಹುಟ್ಟಿಕೊಳ್ಳುತ್ತದೆ. 1000 ಜನರಿಂದ ಕೂಚುಪುಡಿ ನೃತ್ಯ ಮಾಡಿಸಿ ಆ ಮೂಲಕ ಗಿನ್ನೆಸ್​ ದಾಖಲೆ ಬರೆಯುವ ಕನಸು ದೊಡ್ಡದಾಗಿರುತ್ತದೆ. ಆದ್ರೆ 1000 ನೃತ್ಯಗಾರರನ್ನು ಒಟ್ಟು ಹಾಕುವುದೇ ದೊಡ್ಡ ಸವಾಲಿನ ಕೆಲಸವಾಗಿತ್ತು. ರೂಪಾ ಜೊತೆಗೆ ಅವರ ಆತ್ಮೀಯ ವಿದ್ಯಾರ್ಥಿ ಆಗಿದ್ದ ಸೋನಿಯಾ ಪೊದುವಾಳ್ ಮತ್ತು ರಾಗಿಣಿ ​ ಕೈ ಜೋಡಿಸಿದರು. ಸೋನಿಯಾ ಮತ್ತು ರಾಗಿಣಿ ತನ್ನ ಕಾರ್ಯ ಶುರುಮಾಡಿಕೊಂಡರು. ಜೊತೆಗೆ ರೂಪಾಗೆ ಆತ್ಮೀಯರಾಗಿದ್ದ ವಿದ್ಯಾ ರವಿಶಂಕರ್​, ಶ್ರೀಲಕ್ಷ್ಮೀ ಸೇರಿದಂತೆ ಉಳಿದವರು ಎಲ್ಲಾ ಕಡೆ ಡ್ಯಾನ್ಸರ್​ಗಳಿಗೆ ತರಬೇತಿ ನೀಡಲು ಆರಂಭಿಸಿದ್ರು. ಆದ್ರೆ ರೂಪಾ ಕನಸು ಇಲ್ಲೂ ಸರಿಯಾಗಿ ಈಡೇರಲಿಲ್ಲ. ಕೇವಲ 700 ಡ್ಯಾನ್ಸರ್​ಗಳನ್ನಷ್ಟೇ ಒಟ್ಟು ಮಾಡಲು ರೂಪಾಗೆ ಸಾಧ್ಯವಾಗಿತ್ತು. ಈ ಮಧ್ಯೆ ಕೂಚುಪುಡಿಯಲ್ಲಿ ಈ ಹಿಂದೆಯೇ 700 ಡ್ಯಾನ್ಸರ್​ಗಳು ಡ್ಯಾನ್ಸ್​ ಮಾಡಿದ್ದರಿಂದ ಗಿನ್ನೆಸ್​ ದಾಖಲೆಗೂ ಅವಕಾಶವಿರಲಿಲ್ಲ. ಹೀಗಾಗಿ ರೂಪಾ ಅನಿವಾರ್ಯವಾಗಿ ಕೂಚುಪುಡಿಯ ಇನ್ನೊಂದು ವಿಭಾಗವಾಗಿರುವ "ತರಂಗಂ"ನಲ್ಲಿ ದಾಖಲೆ ಬರೆಯಲು ತಯಾರಿ ಮಾಡಿಕೊಂಡರು. "ತರಂಗಂ" ತಟ್ಟೆ ಮೇಲೆ ನಿಂತು ನೃತ್ಯ ಪ್ರದರ್ಶಿಸುವ ಚಾಲೆಂಜ್ ರೂಪಾ ಮತ್ತು ತಂಡಕ್ಕೆ ಎದುರಾಯಿತು. ಇಷ್ಟು ಹೊತ್ತಿಗೆ ರೂಪಾ ಕೆಲಸಗಳಿಗೆ ಹಲವು ಶಾಲೆಗಳು ಮತ್ತು ಡ್ಯಾನ್ಸರ್​ಗಳು ಸಾಥ್​ ನೀಡಲು ಆರಂಭಿಸಿದ್ದರು. ಅಷ್ಟ ಅಲ್ಲಸ ದಿನದಿಂದ ದಿನಕ್ಕೆ ಡ್ಯಾನ್ಸರ್​ಗಳ ಸಂಖ್ಯೆಯಲ್ಲಿ ಹೆಚ್ಚಾಗಲು ಆರಂಭವಾಗಿತ್ತು. ದೃಷ್ಟಿ ವಿಕಲ ಚೇತನರು ಕೂಡ ರೂಪಾ ಜೊತೆಗೆ ಕೈ ಜೋಡಿಸಿದರು.

image


" ನನಗೆ ಸಹಾಯ ಮಾಡಲು ಹಲವು ಶಾಲೆಗಳು ಮತ್ತು ವಿವಿಧ ನೃತ್ಯಗಾರ್ತಿಯರು ಮುಂದಾದರು. ನನ್ನ ಜೊತೆ ಕೈ ಜೋಡಿಸಿ ಡ್ಯಾನ್ಸರ್​ಗಳನ್ನು ಕಲೆ ಹಾಕಿದ್ರು. ಆದ್ರೆ ದೃಷ್ಟಿ ವಿಕಲಚೇತನರು ನಮ್ಮ ಜೊತೆ ಸೇರಿಕೊಳ್ತೀವಿ ಅಂದಾಗ ನನ್ನ ಹಠ ಮತ್ತಷ್ಟು ಹೆಚ್ಚಾಯಿತು. ದಾಖಲೆ ಮಾಡಲೇ ಬೇಕು ಅನ್ನುವ ಹಠ ಮತ್ತಷ್ಟು ದೊಡ್ಡದಾಯಿತು."
- ರೂಪಾ, ನೃತ್ಯಗಾರ್ತಿ

ರೂಪಾ ಜೊತೆಗೆ ಎಲ್ಲಾ ವಯಸ್ಸಿನ ಡ್ಯಾನ್ಸರ್​ಗಳು ಕೂಡ ಇದ್ದರು. 40 ರಿಂದ 60 ವರ್ಷ ವಯಸ್ಸಿನ ಒಳಗಿನವರೇ ಸುಮಾರು 100 ಮಂದಿ ಇದ್ರು. ಹೀಗೇ 1000 ಜನರಿಂದ "ತರಂಗಂ" ನೃತ್ಯ ಮಾಡಿಸುವ ಸಾಹಸ 2014ರ ಏಪ್ರಿಲ್​ನಲ್ಲಿ ಆರಂಭವಾಯಿತು. ಅಚ್ಚರಿ ಅಂದ್ರೆ ರೂಪಾ ಮತ್ತವರ ತಂಡ ಒಟ್ಟು 1154 ನೃತ್ಯಗಾರರಿಂದ ತರಂಗಂ ಮಾಡಿಸಿ ದಾಖಲೆ ಬರೆಯಿತು. ರೂಪಾ ಈ ಸಾಧನೆ ಲಿಮ್ಕಾ ಬುಕ್​ ಆಫ್​ ರೆಕಾರ್ಡ್ಸ್​ನಲ್ಲೂ ದಾಖಲಾಯಿತು.

ಸಾಧನೆ, ದೈರ್ಯ ಮತ್ತು ಹಠದಿಂದ ರೂಪಾ ಎಲ್ಲವನ್ನೂ ಸಾಧಿಸಿದ್ದಾರೆ. ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಈ ಸಾಧನೆಯ ನಡುವೆ ರೂಪಾಗೆ ಕೆಲವೊಂದು ಕಹಿ ನೆನಪುಗಳು ಕೂಡ ಕಾಡಿದೆ. ಯಶಸ್ಸನ್ನು ಎಲ್ಲರಿಗೂ ಹಂಚುವ ರೂಪಾ ಕಹಿಯನ್ನು ತನ್ನೊಳಗೇ ಇಟ್ಟುಕೊಂಡಿದ್ದಾರೆ. ಅನುಭವಗಳಿಂದ ಮನುಷ್ಯ ಪಕ್ಕಾ ಆಗುತ್ತಾನೆ ಅನ್ನೋದನ್ನ ರೂಪಾ ಬಲವಾಗಿ ನಂಬಿದ್ದಾರೆ.

ಇದನ್ನು ಓದಿ:

1. "ಸಾಂಸ್ಕೃತಿಕ ನಗರಿಯಿಂದ ಸಾಗರದ ಸಂಗಮದವೆರೆಗೆ"

2. "ಕಾಮಿಡಿ ಕಿಲಾಡಿ" ಶಿವರಾಜ್ ಕೆ.ಆರ್.ಪೇಟೆ

3. ರೀಲ್​ನಲ್ಲೂ ಹೀರೋ... ರಿಯಲ್​ ಆಗಿಯೂ ಹೀರೋ..!