12 ವರ್ಷದಿಂದ ಕೂಡಿಟ್ಟ ಹಣದಲ್ಲಿ ತಾಯಿಗೆ ಹುಟ್ಟುಹಬ್ಬಕ್ಕೆ ಫ್ರಿಡ್ಜ್ ಗಿಫ್ಟ್‌ ನೀಡಿದ 17 ವರ್ಷದ ರಾಮ ಸಿಂಗ್

ತನ್ನ ತಾಯಿ ಹುಟ್ಟುಹಬ್ಬವನ್ನು ಜೈಪುರದ ನಿವಾಸಿ ರಾಮ್ ಸಿಂಗ್ ವಿಭಿನ್ನವಾಗಿ ಆಚರಿಸಿದ್ದಾರೆ. ತಾವು ಚಿಕ್ಕವರಾಗಿದ್ದಾಗಿನಿಂದಲೂ ಕೂಡಿಟ್ಟಿದ್ದ ಹಣದಲ್ಲಿ ತಮ್ಮ ತಾಯಿಗೆ ರೆಫ್ರಿಜರೇಟರ್ ಕೊಡಿಸುವ ಮೂಲಕ ತಾಯಿ ಮೇಲಿನ ಅಭಿಮಾನ ಮೆರೆದಿದ್ದಾರೆ.

12 ವರ್ಷದಿಂದ ಕೂಡಿಟ್ಟ ಹಣದಲ್ಲಿ ತಾಯಿಗೆ ಹುಟ್ಟುಹಬ್ಬಕ್ಕೆ ಫ್ರಿಡ್ಜ್ ಗಿಫ್ಟ್‌ ನೀಡಿದ 17 ವರ್ಷದ ರಾಮ ಸಿಂಗ್

Tuesday October 22, 2019,

2 min Read

ಪ್ರಪಂಚದಲ್ಲಿ ತಾಯಿಗಿಂತ ಮಿಗಿಲಾದ ದೇವರಿಲ್ಲ ಎನ್ನುವ ಗಾದೆ ಮಾತಿದೆ. ತಾಯಿ ಋಣವನ್ನು ಮಕ್ಕಳು ಏನೇ ಮಾಡಿದರೂ ತೀರಿಸಲು ಸಾಧ್ಯವಾಗುವುದಿಲ್ಲ ಎಂಬುದನ್ನು ಸಾಕಷ್ಟು ಜನರ ಬಾಯಲ್ಲಿ ಕೇಳಿದ್ದೇವೆ. ಹಾಗೆಯೇ ತಾಯಿಗಾಗಿ ಅದೆಷ್ಟೋ ಜನ ಮಾದರಿ ಕೆಲಸಗಳನ್ನು ಮಾಡಿದ್ದಾರೆ. ತಾಯಿಯನ್ನು ದೇವರಂತೆ ಪೂಜಿಸುವವರು ಅನೇಕ ಜನ ಪ್ರಪಂಚದಲ್ಲಿ ಇದ್ದಾರೆ. ಅವರಿಗಾಗಿ ಇಡೀ ಜೀವನವನ್ನೇ ಮುಡುಪಾಗಿ ಇಟ್ಟಿದ್ದಾರೆ. ಅದೇ ರೀತಿ ಜೈಪುರದ ನಿವಾಸಿಯೊಬ್ಬರು ತಾಯಿಗಾಗಿ ಮಾಡಿದ ಒಂದು ಕೆಲಸ ಮೆಚ್ಚುಗೆಗೆ ಪಾತ್ರವಾಗುತ್ತಿದೆ.


ರೆಫ್ರಿಜರೇಟರ್ ಜೊತೆ ರಾಮ್ ಸಿಂಗ್ ಹಾಗೂ ಅವರ ತಾಯಿ (ಚಿತ್ರ ಕೃಪೆ: ದಿ ನ್ಯೂವ್ ಇಂಡಿಯನ್ ಎಕ್ಸ್‌ಪ್ರೆಸ್‌)




ಜೈಪುರದ ಸಹಾರಾನಗರದ ನಿವಾಸಿಯಾಗಿರುವ 17 ವರ್ಷದ ಬಾಲಕ ರಾಮ್ ಸಿಂಗ್ ತಮ್ಮ ತಾಯಿಯ ಹುಟ್ಟುಹಬ್ಬಕ್ಕೆ ಮರೆಯಲಾಗದ ಉಡುಗೊರೆಯೊಂದನ್ನು ನೀಡಿದ್ದಾರೆ‌. ಅದೇ ರೆಪ್ರಿಜರೇಟರ್. ಇದು ರಾಮ್ ಸಿಂಗ್ ಅವರ ತಾಯಿಗೆ ಮುಖ್ಯವಾದ ಹಾಗೂ ಜೀವನದಲ್ಲಿ ಮರೆಯಲಾಗದ ವಸ್ತುವೇ ಸರಿ. ಯಾಕೆಂದರೆ ರಾಮ್ ಸಿಂಗ್ ಪಿಗ್ಗಿ ಬ್ಯಾಂಕ್ ನಲ್ಲಿ 12 ವರ್ಷದಿಂದ ಸಂಗ್ರಹಿಸಿದ್ದ ಉಳಿತಾಯದ ಹಣದಲ್ಲಿ ಈ ರೆಪ್ರಿಜರೇಟರ್ ಕೊಂಡು ತಾಯಿಗೆ ನೀಡಿದ್ದಾರೆ. ಚಿಕ್ಕಂದಿನಿಂದಲೇ ತಾಯಿ ಕೊಟ್ಟ ಹಣವನ್ನು ಉಳಿಸುತ್ತಾ ಅದನ್ನು ಪಿಗ್ಗಿ ಬ್ಯಾಂಕ್ ನಲ್ಲಿ ಸಂಗ್ರಹಿಸುತ್ತಿದ್ದರೂ ರಾಮ್ ಸಿಂಗ್. ಇದೀಗ ತಾಯಿಗೆ ಈ ಹಣದಲ್ಲಿ ಅವರ ಬಯಕೆಯ ವಸ್ತು ಕೊಡಿಸಿರುವುದು ವಿಶೇಷ.


ರಾಮ್ ಸಿಂಗ್ ತಾಯಿ ಪಪ್ಪುದೇವಿಯವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ತನ್ನ ತಾಯಿಗೆ ಏನಾದರೂ ಕೊಡುಗೆ ಕೊಡಬೇಕು ಎಂದುಕೊಡರಂತೆ 17 ವರ್ಷದ ಬಾಲಕ ರಾಮ್ ಸಿಂಗ್‌. ಈ ವೇಳೆ ಮನೆಯಲ್ಲಿ ರೆಪ್ರಿಜರೇಟರ್ ಹಾಳಾಗಿದ್ದು ಅದನ್ನು ಕೊಳ್ಳಬೇಕು ಎಂದು ರಾಮ್ ಸಿಂಗ್ ತಾಯಿ ಮಾತನಾಡುತ್ತಿರುವುದನ್ನು ಕೇಳಿಸಿಕೊಂಡ ರಾಮ್ ಸಿಂಗ್ ಅದನ್ನು ಕೊಡಿಸಬೇಕೆಂದು ನಿರ್ಧಾರ ಮಾಡಿದ್ದರಂತೆ, ವರದಿ ದಿ ನ್ಯೂವ್ ಇಂಡಿಯನ್ ಎಕ್ಸ್‌ಪ್ರೆಸ್‌.


ಮಾಧ್ಯಮದೊಂದಿಗೆ ಮಾತನಾಡುತ್ತಾ ರಾಮ್ ಸಿಂಗ್ ಹೀಗೆ ಹೇಳುತ್ತಾರೆ,


“ತನ್ನ ತಾಯಿಗೆ ಫ್ರಿಡ್ಜ್ ನ ಅವಶ್ಯಕತೆ ಇತ್ತು. ಈ ವೇಳೆ ಪೇಪರ್ ನಲ್ಲಿ ಜಾಹಿರಾತು ಒಂದನ್ನು ನೋಡಿದೆ. ಆಗ ತಕ್ಷಣ ರೆಪ್ರಿಜರೇಟರ್ ಕಂಪನಿಗೆ ಕರೆ ಮಾಡಿದೆ. ತಮ್ಮ ತಾಯಿ ಪಪ್ಪುದೇವಿ ಹುಟ್ಟುಹಬ್ಬವಿದೆ, ಅವರ ಹುಟ್ಟುಹಬ್ಬಕ್ಕೆ ಫ್ರಿಡ್ಜ್ ಉಡುಗೊರೆ ನೀಡಲು ಬಯಸಿದ್ದೇನೆ, ಆದರೆ ನನ್ನ ಹತ್ತಿರ ಬಳಿ ನಾಣ್ಯಗಳಿವೆ ಎಂದು ಹೇಳಿದೆ. ಆರಂಭದಲ್ಲಿ ಶೋ ರೂಂ ಮಾಲೀಕ ಒಪ್ಪಿರಲಿಲ್ಲ. ನಂತರ ಅವರ ಮನವೊಲಿಸಿದ ಮೇಲೆ ನಾಣ್ಯಗಳನ್ನು ತೆಗೆದುಕೊಳ್ಳಲು ಒಪ್ಪಿದರು.”

ಇನ್ನು ರಾಮ್ ಸಿಂಗ್ 12 ವರ್ಷದಿಂದ ಪಿಗ್ಗಿ ಬ್ಯಾಂಕ್ ನಲ್ಲಿ ಸಂಗ್ರಹಿಸಿಟ್ಟ ಎಲ್ಲಾ ಹಣವನ್ನು ೩೫ ಕೆಜಿ ಚೀಲದಲ್ಲಿ ಶಿವಶಕ್ತಿ ನಗರದಲ್ಲಿರುವ ಶೋರೂಂಗೆ ತೆಗೆದುಕೊಂಡು ಹೋಗಿದ್ದಾರೆ. ಒಂದು, ಎರಡು, 5 ಹಾಗೂ 10 ರೂಪಾಯಿ ನಾಣ್ಯಗಳು ಇದ್ದವು. ಇವೆಲ್ಲ ಒಟ್ಟು ಸೇರಿ 13,500 ರೂಪಾಯಿ ಆಗಿತ್ತು. ಆದರೆ ರೆಪ್ರಿಜರೇಟರ್ ಗೆ ಇನ್ನು 2000 ಕಡಿಮೆಯಾಗಿತ್ತು, ಆ ವೇಳೆ ರಾಮ್ ಸಿಂಗ್ ಅವರ ತಾಯಿ ಮೇಲಿನ ಪ್ರೀತಿ ನೋಡಿದ ಶೋ ರೂಂ ಮಾಲೀಕ 2000 ರೂಪಾಯಿಗಳನ್ನು ಡಿಸ್ಕೌಂಟ್ ನೀಡಿದ್ದಾರೆ.


ರಾಮ್ ಸಿಂಗ್ ಪಿಗ್ಗಿ ಬ್ಯಾಂಕ್ ನ ನಾಣ್ಯಗಳು (ಚಿತ್ರ ಕೃಪೆ: ಮೆನ್ಸ್‌ ಎಕ್ಸ್‌ ಪಿ)


ರಾಮ್ ಸಿಂಗ್ ತೆಗೆದುಕೊಂಡು ಹೋಗಿದ್ದ ಚೀಲದಲ್ಲಿ 5 ಮತ್ತು 10 ರು ನಾಣ್ಯಗಳಿದ್ದವು. ನಾಣ್ಯಗಳನ್ನು ಎಣಿಸಲು 4 ಗಂಟೆಗಳ ಕಾಲ ಸಮಯ ಹಿಡಿದಿತ್ತಂತೆ. ಶೋರೂಂ ಮಾಲಿಕರು ಕೇವಲ 5 ಮತ್ತು 10 ರೂ ನಾಣ್ಯಗಳನ್ನು ಎಣಿಸಿ ಉಳಿದ ನಾಣ್ಯಗಳನ್ನು ಎಣಿಸಿದೇ ಹಾಗೆಯೇ ಬಿಟ್ಟರು ಎಂದು ವರದಿಯಾಗಿದೆ. ಇನ್ನು ರಾಮ್ ಸಿಂಗ್ ಅವರು ನೀಡಿರುವ ಈ ಸರ್ಪ್ರೈಸ್ ಕೊಡುಗೆ ಅವರ ತಾಯಿಗೆ ಖುಷಿ ತಂದಿದೆ ಎಂದು ಹೇಳಿದ್ದಾರೆ, ಸ್ಕೂಪ್ ವೂಪ್ ವರದಿ.


ರಾಮ್ ಸಿಂಗ್ ಅವರ ಈ ಕೆಲಸಕ್ಕೆ ನಿಜಕ್ಕೂ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ತಾಯಿಗಿಂತ ಮಿಗಿಲಾದದ್ದು ಮತ್ತೊಂದು ಯಾವುದೂ ಇಲ್ಲ ಎಂಬುದನ್ನು ರಾಮ್ ಸಿಂಗ್ ತಮ್ಮ ಈ ಕೆಲಸದ ಮೂಲಕ ತೋರಿಸಿ ಕೊಟ್ಟಿದ್ದಾರೆ‌.


ನಿಮ್ಮ ಬಳಿಯೂ ಸ್ಪೂರ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.