ಕನ್ನಡಕ್ಕಾಗಿ ಬದಲಾಯ್ತು ತಿಂಡಿಯ ಹೆಸರು..!

ವಿಸ್ಮಯ
0 CLAPS
0

ಇಲ್ಲಿ ಎಲ್ಲವೂ ಭಿನ್ನ. ಹೊಟೇಲ್​​ ಹೆಸರು ಕನ್ನಡಕ್ಕಾಗಿ ಬದಲಾಯಿತು. ಮೆನುವಿನಲ್ಲೂ ಸಾಕಷ್ಟು ಚೇಂಜಸ್​​ಗಳು ಆದವು. ಹೊಸಬರು ಈ ಹೊಟೇಲ್​​ಗೆ ಬಂದ್ರೆ ಇದೇನಪ್ಪಾ ಅಂತ ಒಂದ್ಸಾರಿ ಹಿಂದೆ-ಮುಂದು ನೋಡೋದು ಗ್ಯಾರೆಂಟಿ. ಆದ್ರೆ ಇದೆಲ್ಲವೂ ಕನ್ನಡಕ್ಕಾಗಿ. ಪ್ರಸಿದ್ಧವಾಗಿದ್ದ ಹೊಟೇಲ್​​ನ ಹೆಸರನ್ನೇ ಕನ್ನಡಕ್ಕಾಗಿ ಬದಲಿಸಿಕೊಂಡಿದ್ದಾರೆ.


ಕರ್ನಾಟಕದಲ್ಲಿ ಕನ್ನಡ ಭಾಷೆ ನಶಿಸುತ್ತಿದೆ. ಆದ್ರೆ ಅಲ್ಲೊಬ್ಬರು,ಇಲ್ಲೊಬ್ಬರು ಎಲೆಮಾರಿ ಕಾಯಿಯಂತೆ ಕನ್ನಡವನ್ನು ಪ್ರೀತಿಸ್ತಾ ಇರುತ್ತಾರೆ. ಕನ್ನಡ ಭಾಷೆಯು ಅಭಿವೃದ್ದಿಗೆ ಶ್ರಮಿಸುತ್ತಾ ಇರುತ್ತಾರೆ. ಕನ್ನಡ ಭಾಷೆಯ ಅಭಿವೃದ್ದಿಗೆ ಶ್ರಮಿಸುತ್ತಾರೆ.ಇನ್ನು ಲೋಕರೂಢಿಯಂತೆ ಕನ್ನಡ ಭಾಷೆ, ಸಾಹಿತ್ಯ ಉಳಿದಿದೆ ಅಂದ್ರೆ ,ಅದು ಬಸ್ ಚಾಲಕರು, ಆಟೋ ಡೈವರ್, ಸಣ್ಣಪುಟ್ಟ ಹೋಟೆಲ್‍ಗಳಿಂದ ಅನ್ನೋದು ನಿಜ. ಅದಕ್ಕೆ ಸಾಕ್ಷಿ ಎಂಬಂತೆ ಚಾಮರಾಜಪೇಟೆ ಬಳಿ ಇರೋ ಪುಟ್ಟ ಹೋಟೆಲ್ ಕನ್ನಡ ಭಾಷೆಯನ್ನು ಉಳಿಸುವ ಪ್ರಯತ್ನ ಮಾಡ್ತಿದೆ.

ಈ ಹೋಟೆಲ್ ಹೆಸರು ಕನ್ನಡ ತಿಂಡಿ ಕೇಂದ್ರ. ಸುತ್ತ ಎಲ್ಲಿ ಕಣ್ಣು ಹಾಯಿಸಿದರು, ನಮಗೆ ಕಾಣಿಸೋದು 390ಕ್ಕೂ ಹೆಚ್ಚು ಸಾಹಿತಿ, ಕವಿ ಶ್ರೇಷ್ಠ ನಟರ ಭಾವಚಿತ್ರಗಳು. ಪುಟ್ಟದಾದ ಹೋಟೆಲ್, ಹೋಟೆಲ್ ಗೋಡೆಯ ತುಂಬೆಲ್ಲ ಸಾಹಿತಿಗಳ, ಹಿರಿಯ ನಟರ ಫೋಟೋಗಳು. ಇದು ಕನ್ನಡ ತಿಂಡಿ ಕೆಂದ್ರದಲ್ಲಿರೋ ವಿಶೇಷ .


ಇಲ್ಲಿ ನೀವು ತಿಂಡಿ ತಿನ್ನಬೇಕು ಅಂದರೆ ಅವುಗಳ ಹೆಸರು ಕೇಳುತ್ತಿದ್ರೆ ಆಶ್ಚರ್ಯ ಆಗುತ್ತೆ. ಯಾಕಂದ್ರೆ ಮಾಡೋ ಎಲ್ಲ ತಿಂಡಿಗಳಲ್ಲಿ ಒಬ್ಬೊಬ್ಬ ಸಾಹಿತಿಗಳ, ನಟರ ಹೆಸರು ಇಟ್ಟಿದ್ದಾರೆ. ಸರ್ ಒಂದು ಪ್ಲೇಟ್ ವೆಂಕಟಸುಬ್ಬಯ್ಯ ಕೊಡಿ. ಸರ್ ಇನ್ನೊಂದು ಪ್ಲೇಟ್ ರಾಜ್‍ಕುಮಾರ್ ಕೊಡಿ. ಅರೇ ಇದೇನಾಪ್ಪ ಹೀಗೆ ಸಾಹಿತಿಗಳ ನಟರ ಹೆಸರು ಹೇಳುತ್ತಿದ್ದಾರೆ ಅಂದುಕೊಂಡ್ರ ಶಾಕ್ ಆಗಬೇಡಿ.

ಇದು ಕನ್ನಡ ತಿಂಡಿ ಕೇಂದ್ರದ ತಿಂಡಿಯ ಮೆನು. ಕನ್ನಡ ತಿಂಡಿ ಕೇಂದ್ರದಲ್ಲಿ ತಯಾರು ಮಾಡುವ ತಿಂಡಿಗಳಿಗೆ ಸಾಹಿತಿಗಳ ಹೆಸರಿಡಲಾಗಿದೆ. ಸರ್.ಎಂ ವಿಶ್ವೇಶ್ವರಯ್ಯ-ಜೀವದ ರಕ್ತನಾಡಿ ನೀರು, ಜಿ.ವೆಂಕಟಸುಬ್ಬಯ್ಯ- ಟೊಮೆಟೋ ಬಾತ್, ಮಾಸ್ತಿ ವೆಂಕಟೇಶ್ ಅಯ್ಯಂಗಾರ್-ಪುಳಿಯೋಗರೆ, ದ. ರಾ. ಬೇಂದ್ರೆ - ನಿಂಬೆಹಣ್ಣಿನ ಚಿತ್ರಾನ್ನ, ವಿ. ಸೀತಾರಾಮಯ್ಯ- ಮೊಸರನ್ನ, ಶಿವರಾಮ ಕಾರಂತ –ತರಕಾರಿ ಸಾಗು, ಕೆ.ಎಸ್.ನರಸಿಂಹಸ್ವಾಮಿ-ಕಾಯಿಚಟ್ನಿ, ಪು.ತಿ. ನ- ಚಕ್ಕಲಿ, ವಿ. ಕೃ. ಗೋಕಾಕ್ - ನಿಪ್ಪಟ್ಟು, ಎಂ ಗೋಪಾಲಕೃಷ್ಣ ಅಡಿಗ- ಕೋಡುಬಳೆ.ಇದು ಇವ್ರ ಬೆಳ್ಳಿಗಿನ ಟಿಫನ್ ಮೆನು.


ಇನ್ನು ಸಂಜೆ 4.30 ರಿಂದ ರಾತ್ರಿ 9.30ರವರೆಗೆ ಡಿ ವಿ ಗುಂಡಪ್ಪ- ತಟ್ಟೆ ಇಡ್ಲಿ, ಡಾ.ವಿಷ್ಣುವರ್ಧನ್-ಪ್ಲೇನ್‍ದೋಸೆ, ರಾಜ್‍ಕುಮಾರ್-ಮಸಾಲೆದೋಸೆ, ಶಂಕರ್‍ನಾಗ್- ಖಾಲಿದೋಸೆಯು ಕನ್ನಡದ ತಿಂಡಿ ಕೇಂದ್ರದಲ್ಲಿ ದೊರೆಯಲಿದೆ.

ಯುವ ಜನರಿಗೆ ಕನ್ನಡ ಸಾಹಿತಿಗಳು, ಕವಿಗಳ ಪರಿಚಯವೇ ಇಲ್ಲ. ಹಾಗಾಗಿಯೇ ಕನ್ನಡ ತಿಂಡಿ ಕೇಂದ್ರದಲ್ಲಿ ಮಾರಾಟ ಮಾಡುವ ತಿಂಡಿಗಳಿಗೆ ಸಾಹಿತಿಗಳು, ಕನ್ನಡದ ಶ್ರೇಷ್ಠ ನಟರ ಹೆಸರಿಡಲಾಗಿದೆ. ಆ ಮೂಲಕ ಬೇರೆ ಭಾಷೆಯ ಜನರಿಗೂ, ಪರಿಚಯಿಸುವ ಕೆಲಸವನ್ನು ಮಾಡಲಾಗುತ್ತಿದೆ. ತಿಂಡಿಗಳ ಪಕ್ಕದಲ್ಲಿಯೇ ಆಯಾ ಸಾಹಿತಿಗಳ ಭಾವಚಿತ್ರ ಮತ್ತು ಸಾಧನೆಗಳ ಕುರಿತ ವಿವರವನ್ನು ಇಡಲಾಗುತ್ತೆ ಅಂತಾರೆ ಕೃ. ವೆ. ರಾಮಚಂದ್ರ .

ಕನ್ನಡ ರಾಜ್ಯೋತ್ಸವದಂದು ಕನ್ನಡ ದಿನಪತ್ರಿಕೆ ಓದಿ, ಕನ್ನಡದಲ್ಲೇ ವ್ಯವಹಿಸುವಂತೆ ಮನವಿ ಮಾಡತ್ತಾರೆ. ಇನ್ನು ತಿಂಡಿ ತಿಂದು ಹೋಗುವವರಿಗೆ ಇಲ್ಲಿ ಸಂಗ್ರಹಿಸಿರೋ ಪುಸ್ತಕಗಳನ್ನು ಓದಬಹುದು. ಹೀಗೆ ಇವ್ರು ಕನ್ನಡ ನಶಿಸಿ ಹೋಗುತ್ತಿರೋ ಸಮಯದಲ್ಲಿ ತಮ್ಮ ಕನ್ನಡ ಪ್ರೇಮವನ್ನು ತೋರುತ್ತಿದ್ದಾರೆ. ಇದರ ಮೂಲಕ ಕನ್ನಡದ ಕಂಪನ್ನು ಹೆಚ್ಚಿಸುತ್ತಿದ್ದಾರೆ. ಕನ್ನಡವೇ ಸತ್ಯ,ಕನ್ನಡವೇ ನಿತ್ಯ ಅನ್ನೋದು ಇವರ ಧ್ಯೇಯ. ಕನ್ನಡವನ್ನು ಉಳಿಸುವ ನಿಟ್ಟಿನಲ್ಲಿ ತಾವು ತಯಾರಿಸುವ ತಿಂಡಿಗೆ ಸಾಹಿತಿಗಳ ಹೆಸರನ್ನು ನಾಮಕರಣ ಮಾಡಿದ್ದಾರೆ. ಇದರ ಮೂಲಕ ಗ್ರಾಹಕರಿಗೆ ಹತ್ತಿರ ಆಗುತ್ತಿದ್ದಾರೆ. ಹೊರಗಿನಿಂದ ಬರುವ ಗ್ರಾಹಕರಿಗೆ ಕನ್ನಡ ಭಾಷೆ ಮೇಲೆ ಪ್ರೀತಿ ಹೆಚ್ಚಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಇವೆಲ್ಲದರ ಜೊತೆಗೆ ವಿಶೇಷ ದಿನಗಳಲ್ಲಿ ಕಿರುಹೊತ್ತಿಗೆ ನೀಡುತ್ತಾರೆ. ಕನ್ನಡ ವಾಹಿನಿಗಳನ್ನು ಕನ್ನಡ ಪತ್ರಿಕೆಯನ್ನು ಓದುವಂತೆ ಬ್ಯಾನರ್‍ಗಳನ್ನು ಕೂಡ ಹಾಕಿದ್ದಾರೆ . ಪ್ರತೀವರ್ಷದ ನವೆಂಬರ್ ತಿಂಗಳಲ್ಲಿ ಕನ್ನಡ ರಾಜ್ಯೋತ್ಸವದಂದು ಹೊಸ ಹೊಸದಾಗಿ ಕನ್ನಡ ಭಾಷೆಯನ್ನು ವಿಸ್ತರಿಸಲು ಮುಂದಾಗ್ತಾರೆ.

ಹೋಟೆಲ್‍ನ ಒಳಾಂಗಣದ ಸುತ್ತ ಗೋಡೆಯಲ್ಲೂ ಕನ್ನಡದ ಕಂಪೇ ಪಸರಿಸಿದ್ದಾರೆ. ಕೇವಲ ಒಳಗಡೆ ಅಷ್ಟೇ ಅಲ್ಲದೇ ಹೊರ ಭಾಗದ ನಾಮಫಲಕದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರದೊಂದಿಗೆ ಕನ್ನಡ ತಿಂಡಿ ಕೇಂದ್ರ ಎಂದು ಮರುನಾಮಕರಣ ಮಾಡಿದ್ದಾರೆ. ಮೊದಲು ಎಸ್ ಎಲ್ ವಿ ಎಂದಿದ್ದ ಉಪಹಾರ ಮಂದಿರದ ಹೆಸರನ್ನು, ಕನ್ನಡಭಿಮಾನಿಯಾಗಿರೋ ಆ ವ್ಯಕ್ತಿ ನಂತರ ನವೆಂಬರ್ ಒಂದರಲ್ಲಿ ಕನ್ನಡ ತಿಂಡಿ ಕೇಂದ್ರ ಎಂದು ಬದಲಾಯಿಸಿದ್ದಾರೆ. ಹೋಟೆಲ್ ಮುಂಭಾಗದಲ್ಲಿ ಕನ್ನಡ ಉಳಿಸಿ ಬೆಳಸಿ ಎಂಬ ಬ್ಯಾನರ್‍ಗಳನ್ನು ಹಾಕಿದ್ದಾರೆ. ಕನ್ನಡದಲ್ಲೇ ವ್ಯವಹರಿಸಿ ಉತ್ತಮ ಪ್ರಜೆಯಾಗಿ ಎನ್ನುವ ಸಂದೇಶವನ್ನು ಸಾರುತ್ತಿದ್ದಾರೆ. ಜೊತೆಗೆ ಕನ್ನಡ ಭಾಷೆಗೆ ಸಾವಿರಾರು ವರ್ಷದ ಇತಿಹಾಸಗಳಿವೆ. ಆದ್ರೆ ಇಂಗ್ಲೀಷ್ ಎಂಬ ಗುಮ್ಮವನ್ನು ಬಿಟ್ಟಿಬಿಡಿ ಎಂದು ಸಾರುತ್ತಾರೆ.


ಅಂದಹಾಗೇ ಈ ಪ್ರೇಮಿಯ ಹೆಸರು ಕೃ. ವೆ. ರಾಮಚಂದ್ರ. ಇವರು ಅಪ್ಪಟ ಕನ್ನಡ ಪ್ರೇಮಿ. ಕೇವಲ ಇವರಷ್ಟೇ ಅಲ್ಲ ಇವರ ಕುಟುಂಬದವರು ಕನ್ನಡ ಅಭಿಮಾನಿಗಳು. ರಾಮಚಂದ್ರರವರ ತಾಯಿ ತಮಿಳುನಾಡಿನವರು, ತಂದೆ ಬೆಂಗಳೂರಿನವರು. ತಂದೆ ಶಾನುಭೋಗರಾಗಿದ್ರು. ಒಂದು ಚಿಕ್ಕ ಅಂಗಡಿಯನ್ನಿಟ್ಟುಕೊಂಡು ಜೀವನ ನಡೆಸುತ್ತಿದ್ದರು. ಆನಂತರ ರಾಮಚಂದ್ರ ಹಾಗೂ ಅವರ ಅಣ್ಣ ಅಶ್ವತ್‍ನಾರಯಣ,ಇಬ್ಬರು ಸೇರಿ ಹೋಟೆಲ್ ಉದ್ಯಮ ಆರಂಭಿಸಿದ್ರು. ಸುಮಾರು 30 ವರ್ಷಗಳಾಗಿವೆ.


ಆಗಿನಿಂದ ಈಗಿನವರೆಗೂ ಕನ್ನಡ ಅಭಿಮಾನವನ್ನು ಹೊಂದಿದ್ದಾರೆ. ಕನ್ನಡ ಅಭಿಮಾನಿಯಾಗಿರೋ ಇವರು ಕರ್ನಾಟಕದಲ್ಲಿ ಹುಟ್ಟಿದ್ದು ಕರ್ನಾಟಕದ ಈ ಭೂಮಿಯೇ ಅನ್ನ ನೀರು ನೀಡುತ್ತಿದೆ. ಹೀಗಾಗಿಯೇ ಕನ್ನಡವನ್ನು ಉಳಿಸುವ ಕೆಲಸ ಮಾಡುತ್ತಿದ್ದೇನೆ ಅಂತಾರೆ ರಾಮಚಂದ್ರ. ಕನ್ನಡವನ್ನು ಎಲ್ಲೆಡೆ ವಿಸ್ತರಿಸುವ ಸಣ್ಣ ಅಳಿಲು ಸೇವೆ ಮಾಡುತ್ತಿರೋ ಇವರು ಸ್ವಲ್ಪ ವಿಭಿನ್ನ.

ಇನ್ನು ಇದುವರೆಗೂ ಸಾಕಾಷ್ಟು ಸಾಹಿತಿಗಳು,ರಾಜಕಾರಣಿಗಳು ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕನ್ನಡದ ಸೇವೆಯನ್ನು ಮಾಡೋದಾಗಿ ಪಣತೊಟ್ಟಿದ್ದಾರೆ. ಕೊನೆಯುಸಿರು ಇರುವವರೆಗೂ ಕನ್ನಡದಲ್ಲೇ ಜೀವಿಸ್ತೀನಿ ಅಂತಾರೆ. ಇಂತಹ ಕನ್ನಡ ಪ್ರೇಮಿ ,ಅಭಿಮಾನಿಗಳಿಂದಲ್ಲೇ ಕನ್ನಡ ಭಾಷೆ ಈ ಐಟಿಬಿಟಿ ಸಿಟಿಯಲ್ಲಿ ಅಲ್ಪಸ್ವಲ್ಪ ಮಟ್ಟಿಗೆ ಉಳಿದಿದೆ. ಈ ಕನ್ನಡ ಮನಸ್ಸಿನ ಪ್ರೇಮಿಗೆ ನಮ್ಮದೊಂದು ಸಲಾಂ.

Latest

Updates from around the world