ಆವೃತ್ತಿಗಳು
Kannada

ಅಪೌಷ್ಠಿಕತೆ ವಿರುದ್ಧ ವೈದ್ಯ ದಂಪತಿಯ ಹೋರಾಟ- ಕೇವಲ 2 ರೂಪಾಯಿಗೆ ಬಡ ಜನರಿಗೆ ಚಿಕಿತ್ಸೆ

ಟೀಮ್​ ವೈ.ಎಸ್​​. ಕನ್ನಡ

YourStory Kannada
28th Nov 2015
6+ Shares
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on

ವೈದ್ಯೋ ನಾರಾಯಣೋ ಹರಿ ಅಂತಾರೆ, ಈ ಮಾತು ಅಕ್ಷರಶಃ ಸತ್ಯ. ಯಾಕಂದ್ರೆ ಮಹಾರಾಷ್ಟ್ರದ ಬುಡಕಟ್ಟು ಜನರ ಪಾಲಿಗೆ ಡಾ. ರವೀಂದ್ರ ಕೋಲ್ಹೆ ಅವರೇ ದೇವರ ಸಮಾನ.

ಮಹಾರಾಷ್ಟ್ರದ ಮೆಲ್ಘಾಟ್ ಅತಿ ಹೆಚ್ಚು ಅಪೌಷ್ಠಿಕತೆಯುಳ್ಳ ಪ್ರದೇಶ. ಅಪೌಷ್ಠಿಕತೆ ಇಲ್ಲಿನ ಮಕ್ಕಳನ್ನಂತೂ ಬೆಂಬಿಡದೆ ಕಾಡುತ್ತಿದೆ. 1989ರಲ್ಲಿ ಈ ಬುಡಕಟ್ಟು ಪ್ರದೇಶಕ್ಕೆ ಡಾ. ರವೀಂದ್ರ ಕೋಹ್ಲೆ ಅವರ ಆಗಮನವಾಗಿತ್ತು. ಅಂದಿನಿಂದ ಇಂದಿನ ವರೆಗೂ ಬಡ ಜನರಲ್ಲಿ ಹೆಚ್ಚುತ್ತಾ ಇರುವ ಅಪೌಷ್ಠಿಕತೆಯನ್ನು ಹೋಗಲಾಡಿಸಲು ಅವರು ಹಗಲಿರುಳು ಶ್ರಮಿಸುತ್ತಿದ್ದಾರೆ. 1989ರ ಸಮಯದಲ್ಲಿ ಮೆಲ್ಘಾಟ್‍ನಲ್ಲಿ ಶಿಶುಗಳ ಮರಣ ಪ್ರಮಾಣ ನೋಡಿದ್ರೆ ಎಂಥವರೂ ಬೆಚ್ಚಿಬೀಳ್ತಿದ್ರು. 1000 ಮಕ್ಕಳ ಪೈಕಿ 200 ಮಕ್ಕಳು ಸಾವನ್ನಪ್ಪುತ್ತಿದ್ರು. ಆದ್ರೆ ಈಗ ಶಿಶುಗಳ ಮರಣ ಪ್ರಮಾಣ 60ಕ್ಕೆ ಇಳಿದಿದೆ. ಇದಕ್ಕೆ ಕಾರಣ ಡಾ. ರವೀಂದ್ರ ಮತ್ತವರ ಪತ್ನಿ ಸ್ಮಿತಾ ಜನರಲ್ಲಿ ಮೂಡಿಸುತ್ತಿರುವ ಜಾಗೃತಿ. ಬುಡಕಟ್ಟು ಜನಾಂಗದವರ ಅಭ್ಯುದಯವೇ ಈ ವೈದ್ಯ ದಂಪತಿಯ ಜೀವನದ ಗುರಿಯಾಗಿದೆ.

image


ಮಹಾತ್ಮಾ ಗಾಂಧಿ ಅವರ ಆದರ್ಶವೇ ಡಾ.ರವೀಂದ್ರ ಅವರಿಗೆ ಪ್ರೇರಣೆ. ಕಳೆದ ಮೂರು ದಶಕಗಳಿಂದ ಅವರು ಗಾಂಧಿ ಹಾಕಿಕೊಟ್ಟ ಹಾದಿಯಲ್ಲೇ ಸಾಗುತ್ತಿದ್ದಾರೆ. ಸಾಮಾನ್ಯವಾಗಿ ಆಸ್ಪತ್ರೆಗಳಲ್ಲಿ ಕನ್ಸಲ್ಟೇಶನ್ ಶುಲ್ಕವೇ ನೂರಾರು ರೂಪಾಯಿ ಇರುತ್ತೆ. ಆದ್ರೆ ಡಾ.ರವೀಂದ್ರ ಇಲ್ಲಿನ ಬಡಜನರಿಂದ ಕೇವಲ 2 ರೂಪಾಯಿ ಕನ್ಸಲ್ಟೇಶನ್ ಶುಲ್ಕ ಪಡೆಯುತ್ತಾರೆ. ರವೀಂದ್ರ ಅವರ ಸಾಮಾಜಿಕ ಕಳಕಳಿಗೆ ಪತ್ನಿ ಸ್ಮಿತಾ ಕೂಡ ಬೆನ್ನೆಲುಬಾಗಿ ನಿಂತಿದ್ದಾರೆ. ಕಾನೂನು ಪದವಿ ಪಡೆದಿರುವ ಸ್ಮಿತಾ, ಮಕ್ಕಳ ತಜ್ಞೆಯೂ ಹೌದು. ತಮ್ಮ ಜೀವನಶೈಲಿಯನ್ನು ಒಪ್ಪಿಕೊಂಡು, ನೆರವಾಗುತ್ತಿರುವ ಇಂತಹ ಪತ್ನಿಯನ್ನು ಪಡೆಯಲು ಅದೃಷ್ಟ ಮಾಡಿದ್ದೆ ಎನ್ನುತ್ತಾರೆ ಡಾ.ರವೀಂದ್ರ.

ಕೇವಲ ಕನ್ಸಲ್ಟೇಶನ್ ಮಾತ್ರವಲ್ಲ, ಕೃಷಿ, ವಿದ್ಯುತ್ ಉತ್ಪಾದನೆ, ಕಾರ್ಮಿಕರ ವೇತನ ವಿಚಾರ ಹೀಗೆ ವಿವಿಧ ಕ್ಷೇತ್ರಗಳಲ್ಲೂ ರವೀಂದ್ರ ದಂಪತಿ ತೊಡಗಿಕೊಂಡಿದ್ದಾರೆ. ಡಾ.ರವೀಂದ್ರ ಕೋಲ್ಹೆ ಹಾಗೂ ಸ್ಮಿತಾ ಜೊತೆಯಾಗಿ ಶಿಕ್ಷಣ ಹಾಗೂ ಆರೋಗ್ಯದ ಬಗ್ಗೆ ಮಹಿಳೆಯರಲ್ಲಿ ಕಾಳಜಿ ಮೂಡಿಸುವ ಕೆಲಸ ಮಾಡ್ತಿದ್ದಾರೆ. ವಿಶೇಷ ಅಂದ್ರೆ ತಮ್ಮ ಸಮಾಜ ಸೇವೆಗೆ ಡಾ.ರವೀಂದ್ರ ದಾನಿಗಳಿಂದಾಗ್ಲಿ, ಅಥವಾ ಸರ್ಕಾರದಿಂದಾಗ್ಲೀ ನೆರವು ಪಡೆಯುತ್ತಿಲ್ಲ. ಸ್ವಂತ ಬಲದಿಂದಲೇ ಎಲ್ಲವನ್ನೂ ಮಾಡ್ತಿದ್ದಾರೆ. ಹತ್ತಾರು ಪ್ರಶಸ್ತಿಗಳು ಅವರನ್ನು ಅರಸಿ ಬಂದಿವೆ. ತಮ್ಮ ತಂದೆ ಇದರಿಂದ ಹೆಮ್ಮೆಪಡ್ತಾರೆ ಅನ್ನೋ ಒಂದೇ ಒಂದು ಕಾರಣಕ್ಕೆ ಡಾ.ರವೀಂದ್ರ ಕೋಲ್ಹೆ ಪ್ರಶಸ್ತಿ, ಗೌರವಗಳನ್ನು ಸ್ವೀಕರಿಸಿದ್ದಾರೆ. `ದಿ ನ್ಯೂ ಇಂಡಿಯನ್ ಎಕ್ಸ್​​ಪ್ರೆಸ್' ಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರದ ಮಾಲ್ಘಾಟ್‍ನಲ್ಲಿ ಇನ್ನೂ ಕೂಡ ಅಪೌಷ್ಠಿಕತೆ ತಾಂಡವವಾಡುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಈ ಸ್ಥಿತಿಗೆ ಸರ್ಕಾರದ ವ್ಯವಸ್ಥೆಯೇ ಕಾರಣ ಅನ್ನೋದು ಡಾ.ರವೀಂದ್ರ ಅವರ ಅಭಿಪ್ರಾಯ.

`ಮಕ್ಕಳ ಸಮಗ್ರ ಅಭಿವೃದ್ಧಿ ಸೇವೆ' ಅಡಿಯಲ್ಲಿ ಪ್ರತನಿತ್ಯ, ಪ್ರತಿ ಮಗುವಿಗೂ 13 ಗ್ರಾಂಗಳಷ್ಟು ಖಾದ್ಯ ತೈಲ ನೀಡಬೇಕು. ಆದ್ರೆ ಸರ್ಕಾರದ ವ್ಯವಸ್ಥೆಯಲ್ಲಿ ಮಕ್ಕಳಿಗೆ ದಿನನಿತ್ಯ ಕೇವಲ 1 ಗ್ರಾಂನಷ್ಟು ಖಾದ್ಯ ತೈಲ ಪೂರೈಕೆಯಾಗುತ್ತಿದೆ. ಇನ್ನು ದ್ವಿದಳ ಧಾನ್ಯಗಳ ವಿಚಾರದಲ್ಲೂ ಪರಿಸ್ಥಿತಿ ವಿಭಿನ್ನವಾಗಿಲ್ಲ. ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ದ್ವಿದಳ ಧಾನ್ಯಗಳು ಸರಿಯಾಗಿ ದೊರೆಯುತ್ತಿಲ್ಲ. ಮಹಾರಾಷ್ಟ್ರದ ಮೆಲ್ಘಾಟ್‍ನಲ್ಲಿ ಶಾಲಾ ಮಕ್ಕಳಿಗೆ ದಿನನಿತ್ಯ ಕೇವಲ ಅನ್ನ ಹಾಗೂ ಕಿಚಡಿ ನೀಡಲಾಗ್ತಿದೆ. ಮಕ್ಕಳು ಸೇವಿಸುವ ಆಹಾರದಲ್ಲಿ ದ್ವಿದಳ ಧಾನ್ಯಗಳು ಹೇಳ ಹೆಸರಿಲ್ಲದಂತೆ ಮಂಗಮಾಯವಾಗಿವೆ.

ಡಾ.ರವೀಂದ್ರ ಅವರಂತಹ ಸಮಾಜ ಸೇವಕರ ಪರಿಶ್ರಮದ ಜೊತೆಗೆ ಸರ್ಕಾರವೂ ಸಾಥ್ ಕೊಟ್ರೆ ಮಾತ್ರ ಅಪೌಷ್ಠಿಕತೆ ವಿರುದ್ಧದ ಹೋರಾಟದಲ್ಲಿ ಗೆಲುವು ಸಿಗಲು ಸಾಧ್ಯ. ಇನ್ನಾದ್ರೂ ಸರ್ಕಾರ ದೇಶದಲ್ಲಿ ಹೆಚ್ತಾ ಇರೋ ಅಪೌಷ್ಠಿಕತೆಯನ್ನು ಹೊಡೆದೋಡಿಸಲು ಪಣತೊಡಬೇಕಿದೆ. ಅದಕ್ಕೆ ಬೇಕಾದ ಯೋಜನೆಗಳನ್ನು ಸಮರ್ಪಕವಾಗಿ ಜಾರಿ ಮಾಡಬೇಕಿದೆ. ಈಗಾಗ್ಲೇ ಹಮ್ಮಿಕೊಂಡಿರುವ ಯೋಜನೆಗಳ ಅನುಷ್ಠಾನಕ್ಕೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಶ್ರಮಿಸಬೇಕಿದೆ. ಅಪೌಷ್ಠಿಕತೆ ಅನ್ನೋದು ಭಾರತಕ್ಕೆ ಅಂಟಿದ ಕಳಂಕ ಅಂದ್ರೂ ತಪ್ಪಾಗಲಾರದು. ಜಾಗತಿಕ ಮಟ್ಟದಲ್ಲಿ ಭಾರತದ ಪಾಲಿಗೆ ಇದೊಂದು ಕಪ್ಪು ಚುಕ್ಕೆ. ಜೊತೆಗೆ ಅಪೌಷ್ಠಿಕತೆ ಪ್ರತಿನಿತ್ಯ ನೂರಾರು ಮಕ್ಕಳ ಸಾವಿಗೆ ಕಾರಣವಾಗ್ತಿದೆ. ಆ ಅಮಾಯಕ ಮಕ್ಕಳ ಜೀವ ಉಳಿಸುವ ಜವಾಬ್ಧಾರಿ ಸರ್ಕಾರದ್ದು. 

ಅನುವಾದಕರು: ಭಾರತಿ ಭಟ್​​

6+ Shares
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
Report an issue
Authors

Related Tags