ಆವೃತ್ತಿಗಳು
Kannada

ನಮ್ಮನ್ನು ಓದಿಸಲು ಅಪ್ಪ ಪಾತ್ರೆ ಮಾರಿದ್ದ – ಅರುಣ್ ನಸರಾಣಿ

ಟೀಮ್​​ ವೈ.ಎಸ್​​.

YourStory Kannada
22nd Oct 2015
9+ Shares
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on

ಇತಿಹಾಸದ ಪುಸ್ತಕದಲ್ಲಿ ನಾನಾ ತರಹದ ಉದಾಹರಣೆಗಳು ಸಿಗುತ್ತವೆ. ಬೇರೆಯವರ ಐಡಿಯಾಗಳನ್ನು ಕದ್ದು ದುಡ್ಡು ಮಾಡಿದವರಿದ್ದಾರೆ. ಇನ್ನು ಮೇರಿ ಕ್ಯೂರಿಯಂತಹವರು ತಮ್ಮ ಅನ್ವೇಷಣೆಗಳನ್ನು ಜಗತ್ತಿಗೆ ಉಚಿತವಾಗಿ ಕೊಟ್ಟು, ಯಾವುದೇ ಲೈಸೆನ್ಸ್, ಪೇಟೆಂಟ್ ಪಡೆಯದೆ ಜನರ ಕಲ್ಯಾಣಕ್ಕಾಗಿ ಬಳಸಿದವರಿದ್ದಾರೆ.

ಬ್ರೈನ್ ಲೀಗ್​​ನ ಸಹಸಂಸ್ಥಾಪಕರಾದ ಅರುಣ್ ನಸರಾಣಿಯವರು ಜನರಿಗೆ ಮತ್ತು ಸಂಸ್ಥೆಗಳಿಗೆ ಅವರ ಸಂಶೋಧನೆಗಳಿಗೆ ಪೇಟೆಂಟ್ ಪಡೆಯಲು ಸಹಾಯ ಮಾಡುತ್ತಿದ್ದಾರೆ.

ಆರಂಭದ ದಿನಗಳು

ಅರುಣ್ ಅವರು ಗುಂಟೂರು ಬಳಿಯ ಹಳ್ಳಿಯೊಂದರಲ್ಲಿ ಹುಟ್ಟಿದವರು. ಅವರ ತಂದೆ ಕಲಾವಿದರಾಗಿದ್ದು, ಚೆನ್ನೈಗೆ ತೆರಳಿ ಚಿತ್ರರಂಗವನ್ನು ಸೇರಿದ್ದರು. ಅಲ್ಲಿ ಸಹಾಯಕ ನಿರ್ದೇಶಕರಾಗಿ ಜೀವನ ಸಾಗಿಸುತ್ತಿದ್ದರು. ಅರುಣ್ ಎಲ್​​ಕೆಜಿಯಿಂದ 7ನೇ ತರಗತಿವರೆಗೆ ಚೆನ್ನೈನಲ್ಲೇ ವಿದ್ಯಾಭ್ಯಾಸ ನಡೆಸಿದರು. ಅಷ್ಟೊತ್ತಿಗಾಗಲೇ ಅರುಣ್ ತಂದೆ ನಿರ್ಮಾಣಕ್ಕೆ ಕೈ ಹಾಕಿ ದುಡಿದ ಹಣವನ್ನೆಲ್ಲಾ ಕಳೆದುಕೊಂಡುಬಿಟ್ಟಿದ್ದರು. ಅನಿವಾರ್ಯವಾಗಿ ಇಡೀ ಕುಟುಂಬ ಮತ್ತೆ ಗುಂಟೂರಿಗೆ ಶಿಫ್ಟ್ ಆಯಿತು.

image


“ನಮ್ಮ ಪಾಲಿಗೆ ಅವು ಬಹಳ ಕಷ್ಟದ ದಿನಗಳು. ನಮ್ಮ ಉಳಿವಿಗಾಗುವಷ್ಟೇ ಸಂಪಾದನೆ ಇರುತ್ತಿತ್ತು. ಅಪ್ಪ ತಮ್ಮ ಬಳಿ ಇದ್ದ ಪಾತ್ರೆಗಳನ್ನೆಲ್ಲಾ ಮಾರಿ ದಿನಸಿ ತರುತ್ತಿದ್ದರು. ತಮ್ಮ ಬಳಿಯಿದ್ದ ಹಲವು ಎಕ್ರೆ ಜಮೀನನ್ನು ನಮ್ಮ ವಿದ್ಯಾಭ್ಯಾಸಕ್ಕಾಗಿ ಮಾರಿದರು. ಹಾಗೂ ಹೀಗೂ ನನ್ನ ಅಣ್ಣನನ್ನು ರೆಸಿಡೆನ್ಷಿಯಲ್ ಜೂನಿಯರ್ ಕಾಲೇಜಿಗೆ ಸೇರಿಸಿದರು. ಮನೆಯ ತಾಪತ್ರಯ ಅವನ ಗಮನಕ್ಕೆ ಬಾರದಂತೆ ಓದು ಮುಂದುವರಿಸಲು ವ್ಯವಸ್ಥೆ ಮಾಡಿದರು. ಬದುಕಲು ಬೇರೆ ದಾರಿ ಕಾಣದೇ ಇದ್ದಾಗ, ಅಮ್ಮನ ಚಿಕ್ಕ ಸರ ಮಾರಿ, ಸುಮಾರು 70 ವಿಡಿಯೋ ಕ್ಯಾಸೆಟ್​​ಗಳನ್ನು ಖರೀದಿಸಿ, ಅಂಗಡಿಯೊಂದನ್ನು ಆರಂಭಿಸಿದರು. ಬಹುತೇಕ ಸಮಯವನ್ನು ನಾನು ಅಪ್ಪನ ವ್ಯವಹಾರದಲ್ಲಿ ತೊಡಗಿಸಿಕೊಂಡೆ. ನಾನು ಕ್ಯಾಸೆಟ್ ಕೊಡಲು ಮತ್ತು ವಾಪಸ್ ತರಲೆಂದು ಗುಂಟೂರು ಸುತ್ತಮುತ್ತ ಓಡಾಡುತ್ತಿದ್ದೆ. ಮೂರು ವರ್ಷಗಳ ಕಾಲ ಅದನ್ನು ನಡೆಸಿದೆವು. 8ರಿಂದ 10ನೇ ತರಗತಿವರೆ ನಾನು ಓದಿಗೆ ಹೆಚ್ಚು ಗಮನಕೊಡಲಿಲ್ಲ. ನಿಧಾನವಾಗಿ 2-3 ವರ್ಷಗಳಲ್ಲಿ ನಾವು ಸಣ್ಣದೊಂದು ಬೇಕರಿಯೊಂದನ್ನು ಆರಂಭಿಸಿದೆವು. ದಿನಕ್ಕೆ 300 ರೂಪಾಯಿಗಳಷ್ಟು ಸಂಪಾದನೆಯಾಗುತ್ತಿತ್ತು. ಹೇಗೋ ಸಂಸಾರ ಸಾಗುತ್ತಿತ್ತು.” ಎಂದು ಬಾಲ್ಯದ ದಿನಗಳನ್ನು ನೆನೆಸಿಕೊಳ್ಳುತ್ತಾರೆ ಅರುಣ್.

ಐಐಟಿಯತ್ತ ಪ್ರಯಾಣ

ಅರುಣ್ 9ನೇ ತರಗತಿಯಲ್ಲಿದ್ದಾಗ, ಅವರ ಗೆಳೆಯರೆಲ್ಲಾ ಸಂಪತ್ತುಳ್ಳವರೇ ಆಗಿದ್ದರು. ಅವರನ್ನು ನೋಡುತ್ತಾ ನೋಡುತ್ತಾ ತಾನೂ ಏನಾದರೂ ಆಗಬೇಕು ಎಂಬ ಹಠ ಮೂಡಿತ್ತು. ಕೊನೆಯ ವರ್ಷ ಸಂಪೂರ್ಣವಾಗಿ ಓದಿನತ್ತ ಗಮನಹರಿಸಿದರು. ಹತ್ತನೇ ತರಗತಿಯನ್ನು ಸಿಬಿಎಸ್ಇ ಸಿಲೆಬಸ್​​ನಲ್ಲಿ ಶೇಕಡಾ 74 ಅಂಕಗಳೊಂದಿಗೆ ಮುಗಿಸಿದ. ಆ ಕಾಲಕ್ಕೆ ಅದು ಅತ್ಯುತ್ತಮ ಅಂಕಗಳೆಂದು ಪರಿಗಣಿಸಲ್ಪಡುತ್ತಿದ್ದವು.

ಐಐಟಿ ಸೇರುವ ನಿರ್ಧಾರಗ ಬಗ್ಗೆಯೂ ಅರುಣ್ ವಿವರಣೆ ನೀಡುತ್ತಾರೆ.

“ಅದು ನನ್ನ ಬೆಳವಣಿಗೆಯ ಸಮಯ. ನಾನು ಏನಾಗಬೇಕು ಎಂಬುದರತ್ತ ಗಮನ ಹರಿಸುತ್ತಿದ್ದೆ. ನನ್ನನ್ನು ಒಳ್ಳೆಯ ಶಾಲೆಗೆ ಸೇರಿಸಿ, ನಾನು ಜೆಇಇ ಪರೀಕ್ಷೆ ಬರೆಯಬೇಕೆಂದು ಅಪ್ಪನಿಗೆ ಹೇಳಿದ್ದೆ. ಅವರಿಗೆ ಶಾಕ್ ಆಗಿತ್ತು. ನನ್ನನ್ನು ಪದವಿಪೂರ್ವ ಶಿಕ್ಷಣಕ್ಕೆ ಒಳ್ಳೆಯ ಶಾಲೆಗೆ ಸೇರಿಸಿದರು. ನಾನಾಗ ಅವರಿಗೆ ಸ್ಪಷ್ಟವಾಗಿ ಹೇಳಿದ್ದೆ. ನಿನ್ನ ಜೊತೆ ಕೆಲಸ ಮಾಡಲ್ಲ, ಅಂಗಡಿಯನ್ನು ಹೇಗಾದರೂ ನೀನೇ ನಡೆಸು. ನಾನು ಎಲ್ಲವನ್ನೂ ಬದಲಾಯಿಸಬೇಕು ಎಂದುಕೊಂಡಿದ್ದೇನೆ, ಜೆಇಇ ಮೇಲೆ ಗಮನ ಕೇಂದ್ರೀಕರಿಸಿದ್ದೇನೆ ಎಂದು ಹೇಳಿದ್ದೆ. ನನ್ನ ಅಣ್ಣನೂ ನನಗೆ ಬೈದಿದ್ದ. ಆದರೆ ಇದರಲ್ಲಿ ಅವರ ತಪ್ಪಿರಲಿಲ್ಲ. ನಾನು ಶಾಲೆಗೆ ಸೇರಿದ ಮೇಲೆ ನನಗೆ ಗೊತ್ತಾಗಿದ್ದೇನೆಂದರೆ, ಐಐಟಿ ಜೆಇಇ ಪರೀಕ್ಷೆ ಬರೆಯಲು ಬೇಕಾದ ಸಾಮರ್ಥ್ಯ ನನಗಿರಲಿಲ್ಲ ಎಂಬುದು. ನಾನು ಐಐಟಿ ಜೆಇಇ ಗಾಗಿ ಸಿದ್ದತೆ ಆರಂಭಿಸಿದೆ. 5-6ವರ್ಷಗಳ ಹಿಂದಿನ ಪುಸ್ತಕವನ್ನೆಲ್ಲಾ ಅಭ್ಯಾಸ ಮಾಡಿದೆ. 7ನೇ ತರಗತಿಯಿಂದ ಮತ್ತೆ ಎಲ್ಲಾ ಪುಸ್ತಕಗಳನ್ನು ಅಭ್ಯಾಸ ಮಾಡಿದೆ. ನಾನು ಜೆಇಇ ಪಾಸ್ ಮಾಡಿ ಮದ್ರಾಸ್ ಐಐಟಿ ಸೇರಿಕೊಂಡೆ. ಇದು ನಮ್ಮ ಪಾಲಿಗೆ ಅತಿ ದೊಡ್ಡ ಕ್ಷಣವಾಗಿತ್ತು.”

ಬ್ರೈನ್ ಲೀಗ್

ಐಐಟಿ ಮುಗಿಸಿದ ಬಳಿಕ ಅರುಣ್ ಅವರು ಎಂಫಸಿಸ್, ಕಾಗ್ನಿಜೆಂಟ್ ನಲ್ಲಿ ಕೆಲಸ ಮಾಡಿದರು. ಬಳಿಕ ಬೆಂಗಳೂರು ಐಐಎಂಗೆ ಸೇರಿದರು. ಐಐಎಂಬಿಯಲ್ಲಿ ಪದವಿ ಪಡೆಯುತ್ತಿದ್ದಾಗಲೇ ಹಳೆಯ ಕ್ಲಾಸ್​​ಮೇಟ್ ಕಲ್ಯಾಣ್ ಕಂಕನಾಳರನ್ನು ಭೇಟಿ ಮಾಡಿದ್ದರು. ಅವರು ಅಮೆರಿಕಾದಲ್ಲಿ ಸ್ನಾತಕೋತ್ತರ ಕಾನೂನು ಪದವಿ ಪಡೆದು ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಪಿಹೆಚ್​ಡಿ ಮಾಡುತ್ತಿದ್ದರು.

ತಮ್ಮ ಸಾಮಾನ್ಯ ಹರಟೆಯ ವೇಳೆಯಲ್ಲಿ ಅವರಿಗೆ ಐಪಿ ಮತ್ತು ಪೇಟೆಂಟ್ಸ್​​ಗೆ ಸಂಬಂಧಿಸಿದಂತೆ ಹಲವು ಸಮಸ್ಯೆಗಳಿರುವುದು ಗಮನಕ್ಕೆ ಬಂತು. ಅಲ್ಲದೆ ಈ ಕ್ಷೇತ್ರದಲ್ಲಿ ಹೆಚ್ಚಿನ ಉದ್ಯಮಿಗಳಿಲ್ಲ ಎನ್ನುವುದನ್ನೂ ಅವರು ಮನಗೊಂಡರು. ಹೀಗಾಗಿ, ಇಲ್ಲಿ ಹೂಡಿಕೆ ಮಾಡಿದರೆ ಲಾಭ ಖಚಿತ, ಇದೇ ಅತ್ಯುತ್ತಮ ಅವಕಾಶ ಎಂದು ಲೆಕ್ಕಾಚಾರ ಹಾಕಿದರು. ಇಬ್ಬರೂ ಜೊತೆಯಾಗಿ, ಉದ್ಯಮ ಸ್ಥಾಪಿಸಲು ನಿರ್ಧರಿಸಿದರು. ಉದ್ಯಮಿಗಳಾಗಿ ಹೊಸ ಪ್ರಯಾಣ ಆರಂಭಿಸಲು ಸಿದ್ಧರಾದರು.

image


“ಬ್ರೇನ್ ಲೀಗ್ ಎನ್ನುವುದು ಅತ್ಯದ್ಭುತವಾದ ಜನರ ಸಂಗಮವಾಗಿದ್ದು, ಅವರು ಇಡೀ ಜಗತ್ತನ್ನು ಅತ್ಯುತ್ತಮಗೊಳಿಸಲು ತಮ್ಮ ಕೌಶಲ್ಯವನ್ನು ಬಳಸುತ್ತಿದ್ದಾರೆ. ದಿ ಲೀಗ್ ಆಫ್ ಎಕ್ಸ್​​ಟ್ರಾರ್ಡಿನರಿ ಜಂಟಲ್​​ಮನ್ ಎಂಬ ಚಲನಚಿತ್ರದಿಂದ ಸ್ಪೂರ್ತಿ ಪಡೆದು ಈ ಹೆಸರು ಇಟ್ಟಿದ್ದೇವೆ ಎನ್ನುತ್ತಾರೆ”, ಅರುಣ್.

ಬ್ರೈನ್ ಲೀಗ್ ಏನು ಮಾಡುತ್ತದೆ?

ಬ್ರೈನ್ ಲೀಗ್, ವ್ಯಕ್ತಿಗಳಿಗೆ ಮತ್ತು ಸಂಸ್ಥೆಗಳಿಗೆ ಪೇಟೆಂಟ್ ಪಡೆಯಲು ನೆರವಾಗುತ್ತಿದೆ. ಪೇಟೆಂಟ್ ಅರ್ಜಿ ಬರೆಯುವುದು, ಅದನ್ನು ಫೈಲ್ ಮಾಡಿ ಪೇಟೆಂಟ್ ಒದಗಿಸಿಕೊಡುವುದೇ ಮುಖ್ಯ ವ್ಯವಹಾರ.

ಇವರ ಜೊತೆ ವಿವಿಧ ತಂತ್ರಜಾನ ವಲಯಗಳಲ್ಲಿ ಅಪಾರ ಜ್ಞಾನ ಹೊಂದಿರುವ ದೊಡ್ಡ ತಂಡವೇ ಇದೆ. ಅವರು ಸಂಶೋಧಕರಿಗೆ ಅತ್ಯಂತ ಬಲಿಷ್ಟ ಅಪ್ಲಿಕೇಶನ್ ಬರೆಯಲು ನೆರವಾಗುತ್ತಾರೆ. ಈ ತಂಡವು ಸಂಶೋಧನೆಯನ್ನು ಕೂಲಂಕುಷವಾಗಿ ಅರ್ಥೈಸಿಕೊಳ್ಳುತ್ತದೆ. ಬಳಿಕ ಸಂಪೂರ್ಣ ಕಮಿಟ್​​ಮೆಂಟ್​​ನೊಂದಿಗೆ ಪೇಟೆಂಟ್​​ಗೆ ಅರ್ಜಿ ಸಲ್ಲಿಸುತ್ತದೆ. ಈ ತಂಡವು ಕಠಿಣ ಪರಿಶ್ರಮ ಪಡುತ್ತಿದ್ದು, ಸಂಶೋಧಕರ ಹಕ್ಕನ್ನು ರಕ್ಷಿಸಲು ಶ್ರಮಿಸುತ್ತಿದೆ.

2004ರಲ್ಲಿ ಬ್ರೈನ್ ಲೀಗ್ ಆರಂಭಗೊಂಡಿದ್ದು, ಈಗಾಗಲೇ 5 ಕಚೇರಿಗಳನ್ನು ತೆರೆಯಲಾಗಿದೆ. ಸುಮಾರು 100 ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಕಳೆದ 9 ವರ್ಷಗಳಲ್ಲಿ ಸುಮಾರು 500 ಗ್ರಾಹಕರಿಗೆ ಸೇವೆ ನೀಡಿದ್ದೇವೆ. ಪ್ರತಿ ವರ್ಷ ಶೇಕಡಾ 25ರಷ್ಟು ಬೆಳವಣಿಗೆ ಸಾಧಿಸಿದ್ದೇವೆ. 2012-13ರ ಆರ್ಥಿಕ ವರ್ಷದಲ್ಲಿ ಶೇಕಡಾ 100ರಷ್ಟು ಬೆಳವಣಿಗೆ ಸಾಧಿಸಿದ್ದೇವೆ.

ಮುಖ್ಯ ಪಾಠಗಳು

ಉದ್ಯಮದ ಪ್ರಯಾಣದಲ್ಲಿ ಕಲಿತ ಪ್ರಮುಖ ಪಾಠಗಳನ್ನೂ ಅರುಣ್ ಹಂಚಿಕೊಳ್ಳುತ್ತಾರೆ

1. ತಾಳ್ಮೆ ಮತ್ತು ದೃಢತೆ ಫಲಿತಾಂಶ ಕೊಡುತ್ತದೆ. ಪ್ರತಿಯೊಂದಕ್ಕೂ ಕಾಲಾವಕಾಶ ಬೇಕು. ಉತ್ಪನ್ನವನ್ನು ತಯಾರಿಸುವುದು, ಜಾನ ಪಡೆಯುವುದು, ಕಂಪನಿಯಾಗಿ ಬೆಳೆಸುವುದು, ಗ್ರಾಹಕರನ್ನು ಪಡೆಯುವುದು, ಮಾರುಕಟ್ಟೆಯಲ್ಲಿ ನೆಲೆಯೂರುವುದು ಎಲ್ಲದಕ್ಕೂ ಸಮಯ ಬೇಕು. ಪ್ರಾಯೋಗಿಕ ಪ್ರಯಾಣದಲ್ಲಿ ಎಲ್ಲವನ್ನೂ ತಡೆದುಕೊಳ್ಳುವ ತಾಳ್ಮೆ ಅತ್ಯಗತ್ಯ.

2. ಗಮನ ಕೀ ಪಾಯಿಂಟ್. ನಿಮಗೆ ಸಾಕಷ್ಟು ಅವಕಾಶಗಳು ಮಧ್ಯದಲ್ಲಿ ಬಂದು ಹೋಗಬಹುದು. ಅಂತಿಮವಾಗಿ ನೀವು ಯಾವುದರಲ್ಲಿ ಸಮರ್ಥರಿದ್ದೀರಿ, ಯಾವುದು ಮಾಡಲು ಸಾಧ್ಯ ಎನ್ನುವುದನ್ನು ನೀವೇ ನಿರ್ಧರಿಸಬೇಕು. ಅಲ್ಪಕಾಲೀನ ಫಲಿತಾಂಶ ಕೊಡುವ ನೂರಾರು ಅವಕಾಶಗಳನ್ನು ಬೆನ್ನತ್ತಿ ಹೋಗುವುದರಿಂದ ಯಾವುದೇ ಲಾಭವಿಲ್ಲ.

3. ಬ್ರಿಲಿಯಂಟ್ ಐಡಿಯಾ ಎನ್ನುವುದು ಯಾವುದೂ ಇಲ್ಲ. ಅದು ಒಬ್ಬರ ಆಸಕ್ತಿ ಮತ್ತು ಮಾರುಕಟ್ಟೆಯ ಸ್ವೀಕಾರಾರ್ಹತೆಯನ್ನು ಒಳಗೊಂಡಿರುತ್ತದೆ. ಮಾರುಕಟ್ಟೆಯಲ್ಲಿ ಯಾವುದೇ ಉತ್ಪನ್ನ ಅಥವಾ ಸೇವೆಗೆ ಅವಕಾಶ ಬಿದ್ದರೆ, ಯಾರೂ ಕೂಡಾ ತಮ್ಮ ಜಾಗವನ್ನು ಸೃಷ್ಟಿಸಿಕೊಳ್ಳಬಹುದು,

ಮಾತು ಮುಗಿಸುವ ಮುನ್ನ ಅರುಣ್ ಅವರ ನವ್ಯೋದ್ಯಮಿಗಳಿಗೆ ಭಗವದ್ಗೀತೆಯ ಸಾರವೊಂದನ್ನು ಹೇಳಲು ಬಯಸುತ್ತಾರೆ.

ನಿನ್ನ ಕೆಲಸವನ್ನು ನೀಡು ಮಾಡು, ಫಲಾಫಲವನ್ನು ಭಗವಂತನಿಗೆ ಬಿಡು. ಕಠಿಣ ಪರಿಶ್ರಮದಿಂದ ಏನನ್ನಾದರೂ ಸಾಧಿಸಲು ಹೊರಟರೆ ಯಶಸ್ಸು ಸಿಕ್ಕಿಯೇ ಸಿಗುತ್ತದೆ.

ಕರ್ಮಣ್ಯೇ ವಾಧಿಕಾರಸ್ತೆ ಮಾ ಫಲೇಶು ಕದಾಚನ !

ಮಾ ಕರ್ಮ ಫಲ ಹೇತುರ್ ಭುರ್ಮತೇ ಸಂಗೋಸ್ತ್ವ ಅಕರ್ಮಾನಿ !!

9+ Shares
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
Report an issue
Authors

Related Tags