ನಿಮ್ಮ ಭಾವನೆ, ವರ್ತನೆಗಳ ಅಧ್ಯಯನಕ್ಕೆ ಉದ್ಯಮಗಳಿಗೇಕೆ ಆಸಕ್ತಿ ..?

ಟೀಮ್​​​ ವೈ.ಎಸ್​​.ಕನ್ನಡ
0 CLAPS
0

ಗ್ರಾಹಕರ ಭಾವನೆ ಮತ್ತು ಮನಸ್ಸನ್ನು ಬ್ರಾಂಡ್‍ಗಳು ಅರ್ಥಮಾಡಿಕೊಳ್ಳಲಾರಂಭಿಸಿವೆ. ಅವರ ಬ್ರಾಂಡ್ ಜೊತೆ ಗ್ರಾಹಕರು ಪ್ರೀತಿಯಲ್ಲಿ ಬೀಳುವಂತೆ ಮಾಡಲು ಕಸರತ್ತು ಮಾಡ್ತಾ ಇವೆ. ಗ್ರಾಹಕರೇ ದೊರೆ ಅನ್ನೋ ಮಾತಿದೆ, ಆದ್ರೆ ಈಗ ಗ್ರಾಹಕರ ಸೈಕಾಲಜಿ ಅರ್ಥಮಾಡಿಕೊಂಡು ಅವರೊಂದಿಗೆ ಬಾಂಧವ್ಯ ಬೆಸೆಯುವ ಹೊಸ ಟ್ರೆಂಡ್ ಶುರುವಾಗಿದೆ. `ಕನ್ಸ್ಯೂಮರ್ ಸೊಸೈಟಿ ಆಫ್ ಸೈಕಾಲಜಿ' ಪ್ರಕಾರ ಗ್ರಾಹಕರನ್ನು ಅರ್ಥಮಾಡಿಕೊಳ್ಳಲು ಸೈದ್ಧಾಂತಿಕ ವಿಧಾನವನ್ನು ಅನುಸರಿಸಲಾಗುತ್ತಿದೆ. ಇದನ್ನು ಗ್ರಾಹಕರ ವರ್ತನೆಯ ಮನೋವಿಜ್ಞಾನ ಅಥವಾ ವ್ಯಾಪಾರೋದ್ಯಮದ ಮನೋವಿಜ್ಞಾನ ಅಂತಾ ಕರೆಯುತ್ತಾರೆ. ಈ ಅಧ್ಯಯನ ಗ್ರಾಹಕರ ಗುಂಪುಗಳ ಆದ್ಯತೆ, ಪದ್ಧತಿ ಮತ್ತು ಹವ್ಯಾಸವನ್ನು ಪರೀಕ್ಷಿಸಲು ನೆರವಾಗುತ್ತದೆ. ಗ್ರಾಹಕರ ಮನೊಭಾವನೆ ಮೇಲಿನ ಸಂಶೋಧನೆಯನ್ನು ವಿನ್ಯಾಸ ಜಾಹೀರಾತು ಪ್ರಚಾರಕ್ಕೆ ಹಾಗೂ ಹೊಸ ಉತ್ಪನ್ನಗಳನ್ನು ಬಳಸಲು ರೂಪಿಸಲಾಗುತ್ತದೆ. ಖರೀದಿದಾರರು ಹಾಗೂ ಉತ್ಪನ್ನಗಳ ನಡುವಿನ ಮಾನಸಿಕ ದೂರವನ್ನು ಕಡಿಮೆ ಮಾಡಲು ಈ ಅಧ್ಯಯನದ ಫಲಿತಾಂಶವನ್ನು ಕಂಪನಿಗಳು ಬಳಸಿಕೊಳ್ಳುತ್ತವೆ. `ಜರ್ನಲ್ ಆಫ್ ಕನ್ಸ್ಯೂಮರ್ ಸೈಕಾಲಜಿ'ಯ ವರದಿ ಕೂಡ ಇದನ್ನೇ ದೃಢಪಡಿಸುತ್ತದೆ.


ಒಂದು ಥ್ಯಾಂಕ್ ಯೂ ನೋಟ್‍ನಿಂದ, ಫೀಡ್‍ಬ್ಯಾಕ್ ಸಂಗ್ರಹದಿಂದ, ಪೂರ್ವಭಾವಿ ಬೆಂಬಲದಿಂದ ಸಂಪೂರ್ಣ ಕಾರ್ಯವೈಖರಿಯೇ ಬದಲಾಗಬಹದು. ಗ್ರಾಹಕರ ಅಗತ್ಯಗಳನ್ನು ಪೂರೈಸುವ ಮೂಲಕ, ಸವಾಲುಗಳನ್ನು ಪರಿಹರಿಸುವ ಮೂಲಕ, ಕುತೂಹಲಕಾರಿ ಕಥೆಗಳನ್ನು ಹೇಳುವ ಮೂಲಕ ಕೂಡ ಉದ್ಯಮಗಳು ಗ್ರಾಹಕರನ್ನು ಸಂಪಾದಿಸಬಹುದು ಅನ್ನೋದು ನ್ಯೂಯಾರ್ಕ್ ಮೂಲದ ಮಾರ್ಕೆಟಿಂಗ್ ಕನ್ಸಲ್ಟಂಟ್ ಬ್ರೈನ್ ಹೊನಿಂಗ್‍ಮ್ಯಾನ್ ಅವರ ಅಭಿಪ್ರಾಯ. ಮಾರ್ಕೆಟಿಂಗ್‍ನ ಉತ್ತಮ ಅಭ್ಯಾಸಗಳು ಮತ್ತು ಸಾಮಾಜಿಕ ಮಾಧ್ಯಮಗಳ ಬಗೆಗೂ ಬ್ರೈನ್ ಬರೆದಿದ್ದಾರೆ. ಗ್ರಾಹಕರ ಆಸಕ್ತಿಯನ್ನು ಪ್ರತಿನಿಧಿಸುವಂತಹ ವಿಷಯ ವಸ್ತುಗಳನ್ನು ತಯಾರಿಸುವುದರಿಂದ್ಲೂ ಉತ್ತಮ ಬಾಂಧವ್ಯ ಬೆಸೆಯಬಹುದು, ಸಾಂಪ್ರದಾಯಿಕ ಮಾರುಕಟ್ಟೆ ಎಂಬ ಭಾವನೆಯೂ ಇಲ್ಲದೆ ಅದನ್ನು ಸಾಧಿಸಬಹುದು ಎನ್ನುತ್ತಾರೆ ಬ್ರೈನ್. `ಬಿಟಿಯಮ್' ಎಂಬ ಸಾಫ್ಟ್​​​ವೇರ್ ಕಂಪನಿ ಅಪ್ಲಿಕೇಷನ್ ಒಂದನ್ನು ಅಭಿವೃದ್ಧಿಪಡಿಸಿದೆ. ಲಾಗ್‍ಇನ್ ಆಗಲು ಬಳಕೆದಾರರಿಗೆ ಸಮಸ್ಯೆ ಎದುರಾದಲ್ಲಿ ಕೂಡಲೇ ಸಂಸ್ಥೆಯ ಸಿಬ್ಬಂದಿಗೆ ನೆರವಿಗೆ ಧಾವಿಸುತ್ತಾರೆ.

ಗ್ರಾಹಕರ ಸೈಕಾಲಜಿ ಅಳೆಯುವಿಕೆ...

ಜಾಗತಿಕ ಮಟ್ಟದಲ್ಲಿ ಭಾರತೀಯ ಉದ್ಯಮಗಳು ಕೂಡ ಮುಂಚೂಣಿಯಲ್ಲಿವೆ. ಹಳೆಯ ಸ್ಟಾರ್ ಮಾದರಿ, ಜನಗಣತಿ ಶೈಲಿಯ ಸಮೀಕ್ಷೆಗಳನ್ನು ಅವಲಂಬಿಸುವುದನ್ನು ಬಿಟ್ಟು ತಮ್ಮ ಗ್ರಾಹಕರ ಮನಸ್ಥಿತಿ ಅಳೆಯುವತ್ತ ಹೆಚ್ಚು ಗಮನಹರಿಸಿವೆ. 2012ರಲ್ಲಿ ಕೌಶಿಕ್ ಮುಖರ್ಜಿ `ಫ್ಯಾಬ್ ಬ್ಯಾಗ್' ಅನ್ನು ಆರಂಭಿಸಿದ್ರು. ಸುಂದರವಾದ ಬ್ಯಾಗ್‍ನಲ್ಲಿ ಗ್ರಾಹಕರಿಗೆ ಸೌಂದರ್ಯವರ್ಧಕಗಳನ್ನು ಕಳುಹಿಸಿಕೊಡಲಾಗುತ್ತಿತ್ತು. ಆಗ ಈ ಪರಿಕಲ್ಪನೆಯ ಹಿಂದಿರುವ ಸೈಕಾಲಜಿ ಬಗ್ಗೆ ಕೌಶಿಕ್ ಮುಖರ್ಜಿ ತಲೆಕೆಡಿಸಿಕೊಂಡಿರಲಿಲ್ಲ. ಆದ್ರೀಗ ಅವರ ದೃಷ್ಟಿಕೋನ ಬದಲಾಗಿದೆ. ಸೌಂದರ್ಯ ಅನ್ನೋದು ಭಾವನಾತ್ಮಕ ವರ್ಗ, ಜೊತೆಗೆ ವ್ಯಸನಕಾರಿಯೂ ಹೌದು. ಕಳೆದ ಕೆಲವರ್ಷಗಳಲ್ಲಿ ಸೌಂದರ್ಯದ ಪರಿಕಲ್ಪನೆಯೇ ಬದಲಾಗಿದೆ, ಇದು ಕೇವಲ ಆಡಂಬರದ ಪ್ರದರ್ಶನವಾಗಿ ಉಳಿದಿಲ್ಲ. ಆರೋಗ್ಯ ಮತ್ತು ಅಂದದ ಸಂಕೇತವಾಗಿದೆ ಎನ್ನುತ್ತಾರೆ ಅವರು.

ಗ್ರಾಹಕರ ಸೈಕಾಲಜಿ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಲು ಕಂಪನಿಗಳಿಗೆ ನೆರವಾಗುತ್ತದೆ:

1. ಗ್ರಾಹಕರ ನಿರ್ಧಾರದ ಹಿಂದಿರುವ ಚಿಂತನೆಯ ಪ್ರಕ್ರಿಯೆ ಹಾಗೂ ಭಾವನೆಗಳೇನು..?

2. ಖರೀದಿ ನಿರ್ಧಾರದ ಮೇಲೆ ಸ್ನೇಹಿತರು, ಕುಟುಂಬಸ್ಥರು, ಮಾಧ್ಯಮಗಳು ಮತ್ತು ಸಂಸ್ಕøತಿ ಯಾವ ರೀತಿ ಪರಿಣಾಮ ಬೀರುತ್ತವೆ..?

3. ಒಂದನ್ನು ಬಿಟ್ಟು ಇನ್ನೊಂದು ಉತ್ಪನ್ನವನ್ನು ಆಯ್ದುಕೊಳ್ಳಲು ಗ್ರಾಹಕರನ್ನು ಪ್ರೇರೇಪಿಸುವ ಅಂಶ ಯಾವುದು..?

4. ಜನರ ಖರೀದಿ ಆಯ್ಕೆಯ ಮೇಲೆ ವೈಯಕ್ತಿಕ ಅಂಶಗಳು ಮತ್ತು ವ್ಯಕ್ತಿಗತ ವ್ಯತ್ಯಾಸಗಳು ಹೇಗೆ ಪರಿಣಾಮ ಬೀರುತ್ತವೆ..?

`ಫ್ಯಾಬ್ ಬ್ಯಾಗ್' 2,000 ಗ್ರಾಹಕರ ಮನೋವಿಜ್ಞಾನವನ್ನು ಅಧ್ಯಯನ ಮಾಡಿ, ಒಂದಷ್ಟು ಬದಲಾವಣೆಗಳನ್ನು ಮಾಡಿಕೊಂಡಿದೆ. ಪರಿಣಾಮ 3-4 ಉತ್ತಮ ಗುಣಮಟ್ಟದ ಬ್ರ್ಯಾಂಡೆಡ್ ಉತ್ಪನ್ನಗಳನ್ನು ತಿಂಗಳಿಗೊಮ್ಮೆ ಸುಂದರವಾದ ಬ್ಯಾಗ್‍ನಲ್ಲಿ ಕಳಿಸಿಕೊಟ್ಟಾಗಿನಿಂದ ಬೇಡಿಕೆ ಹೆಚ್ಚಾಗಿದೆ. ಕಳೆದ ತಿಂಗಳು ಬ್ಯಾಗ್‍ಗಳಿಗೆ ಸಿಕ್ಕ ಪ್ರತಿಕ್ರಿಯೆಯನ್ನು ಗಮನದಲ್ಲಿಟ್ಟುಕೊಂಡ್ರೆ ಮುಂದಿನ ತಿಂಗಳು ಅದನ್ನು ಇನ್ನಷ್ಟು ಆಕರ್ಷಕವಾಗಿ ಮಾಡಬಹುದು ಅನ್ನೋದು ಕೌಶಿಕ್ ಅವರ ಐಡಿಯಾ.

ನಿಮ್ಮ ಗ್ರಾಹಕರನ್ನು ಉಳಿಸಿಕೊಳ್ಳುವುದು ಹೇಗೆ..?

ಭಾರತದಲ್ಲಿ ಇ-ಕಾಮರ್ಸ್ ಉದ್ಯಮದ ಬೆಳವಣಿಗೆ ಬಗ್ಗೆ `ದಿ ಆಕ್ಸೆಲ್ ಪಾರ್ಟ್‍ನರ್ಸ್ ಇಂಡಿಯಾ' ನೀಡಿರುವ ವರದಿ ಕೂಡ ಗ್ರಾಹಕರ ಮನಸ್ಸನ್ನು ಗೆಲ್ಲುವ ಅಗತ್ಯತೆಗಳ ಬಗ್ಗೆ ಬೆಳಕು ಚೆಲ್ಲಿದೆ. 2016ರ ವೇಳೆಗೆ ಭಾರತದಲ್ಲಿ ಆನ್‍ಲೈನ್ ಶಾಪಿಂಗ್ ಪ್ರಿಯರ ಸಂಖ್ಯೆ 40 ಮಿಲಿಯನ್‍ನಷ್ಟಾಗಲಿದೆಯಂತೆ. ಭೌತಿಕ ವಸ್ತುಗಳ ಖರೀದಿ ಕೂಡ 8.5 ಬಿಲಿಯನ್ ಡಾಲರ್‍ಗೆ ತಲುಪಲಿದೆ ಅಂತಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಉತ್ಪನ್ನ ವಿನ್ಯಾಸದಿಂದ ಹಿಡಿದು, ವಿತರಣೆ ಹಾಗೂ ಇನ್‍ಸ್ಟಾಲೇಶನ್‍ವರೆಗೆ ಪ್ರತಿಯೊಬ್ಬರೂ ಗ್ರಾಹಕರ ಬಗ್ಗೆ ಮೊದಲು ಯೋಚಿಸ್ತಾರೆ. ಕಲಹ ರಹಿತ ಶಾಪಿಂಗ್ ಅನುಭವದ ಮೂಲಕ ಅವರ ಮನೆಯನ್ನು ಅಂದಗೊಳಿಸುವುದು ಹೇಗೆ ಅನ್ನೋದೇ ಎಲ್ಲರ ಲೆಕ್ಕಾಚಾರ ಎನ್ನುತ್ತಾರೆ ಆನ್‍ಲೈನ್ ಪೀಠೋಪಕರಣ ಮಳಿಗೆ `ಅರ್ಬನ್ ಲ್ಯಾಡರ್'ನ ಸಹ ಸಂಸ್ಥಾಪಕ ರಾಜೀವ್ ಶ್ರೀವತ್ಸ.

ಇನ್ನು `ಝಿವಾಮೆ ಡಾಟ್ ಕಾಮ್'ನಂತಹ ಒಳುಉಡುಪುಗಳ ಸೈಟ್‍ಗಳು ಗ್ರಾಹಕರ ಸೈಕಾಲಜಿಗೆ ಜಾಸ್ತಿ ಒತ್ತು ಕೊಡಬೇಕು. ಯಾಕಂದ್ರೆ ಒಳಉಡುಪು ಅನ್ನೋದು ಹೆಚ್ಚು ಚರ್ಚಿಸಲಾಗದಂತಹ, ಖರೀದಿಗೆ ಹಿಂದೇಟು ಹಾಕುವಂತಹ ಸೂಕ್ಷ್ಮ ವಿಚಾರ. ಅದರಲ್ಲೂ ಭಾರತೀಯ ಮಹಿಳೆಯರು ಈ ವಿಚಾರದಲ್ಲಿ ಕೊಂಚ ಹಿಂದೆ ಬಿದ್ದಿದ್ದಾರೆ. ಹಾಗಾಗಿ ಝಿವಾಮೆ ಗ್ರಾಹಕರ ಅಗತ್ಯಗಳನ್ನು ಅರಿಯಲು ಫಿಟ್ ಎಕ್ಸ್‍ಪರ್ಟ್‍ಗಳನ್ನು ನೇಮಿಸಿದೆ. ಮಹಿಳೆಯರಿಗೆ ಒಳಉಡುಪುಗಳನ್ನು ಕೊಂಡುಕೊಳ್ಳಲು ಫೋನ್ ಅಥವಾ ಸ್ಕೈಪ್ ಕಾಲ್‍ಗಳ ಮೂಲಕ ಸಹಾಯ ಮಾಡಲಾಗುತ್ತದೆ.

ಫ್ಲಿಪ್‍ಕಾರ್ಟ್‍ನಂತಹ ಕಂಪನಿಗಳು ಗ್ರಾಹಕರಿಗೆ ಒಳ್ಳೆಯ ಸೇವೆ ನೀಡ್ತಾ ಇವೆ. ಅದೇ ರೀತಿ ಉಳಿದ ಸಂಸ್ಥೆಗಳು ಕೂಡ ಗೇಮ್ ಪ್ಲಾನ್ ಮಾಡಬೇಕಿದೆ ಅನ್ನೋದು ಫ್ಯಾಬ್ ಬ್ಯಾಗ್‍ನ ಕೌಶಿಕ್ ಮುಖರ್ಜಿ ಅವರ ಅಭಿಪ್ರಾಯ. ಅದೇನೇ ಆದ್ರೂ ಗ್ರಾಹಕರ ಸೈಕಾಲಜಿ ಅಳೆಯುವ ಹೊಸ ಟ್ರೆಂಡ್ ಆನ್‍ಲೈನ್ ಉದ್ಯಮವನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸಲು ಸಹಕಾರಿಯಾಗಿದೆ.

ಲೇಖಕರು: ಅಪರ್ಣಾಘೋಷ್

ಅನುವಾದಕರು: ಭಾರತಿ ಭಟ್​​​​​​​​​