ಕೈಗಾರಿಕಾ ಹಬ್ ಆಗುವತ್ತ ಶೈಕ್ಷಣಿಕ ನಗರಿ ತುಮಕೂರು

ಉಷಾ ಹರೀಶ್​

ಕೈಗಾರಿಕಾ ಹಬ್ ಆಗುವತ್ತ ಶೈಕ್ಷಣಿಕ ನಗರಿ ತುಮಕೂರು

Wednesday March 09, 2016,

3 min Read

ಶೈಕ್ಷಣಿಕ ನಗರಿ, ಕಲ್ಪತರು ನಗರಿ ಎಂದು ಹೆಸರು ವಾಸಿಯಾಗಿರುವ ತುಮಕೂರು ಮುಂದಿನ ದಿನಗಳಲ್ಲಿ ಕೈಗಾರಿಕಾ ನಗರಿ ಎಂದು ಕರೆದರೂ ಆಶ್ಚರ್ಯವಿಲ್ಲ. ರಾಜಧಾನಿ ಬೆಂಗಳೂರಿಗೆ ಪರ್ಯಾಯವಾಗಿ ಕೈಗಾರಿಕೆಗೆ ಬಂಡವಾಳ ಹೂಡಲು ಪ್ರಶಸ್ತ ಸ್ಥಳವಾಗಿ ತುಮಕೂರು ಮಾರ್ಪಡುತ್ತಿದೆ.

ರಾಜ್ಯ ರಾಜಧಾನಿಗೆ ಕೇವಲ 70 ಕಿಲೋಮೀಟರ್​ ದೂರ, 65 ಕಿಲೋಮೀಟರ್​ ಕ್ರಮಿಸಿದರೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಸುಗಮ ಸರಕು ಸಾಗಣೆಗೆ ರಾಷ್ಟ್ರೀಯ ಹೆದ್ದಾರಿ, ರೈಲು, ಕೈಗಾರಿಕೆಗೆ ಅಗತ್ಯವಾದ ನೀರಿನ ವ್ಯವಸ್ಥೆ ಸಹ ಲಭ್ಯವಿರುವುದು ವರ್ಷದಿಂದ ವರ್ಷಕ್ಕೆ ತುಮಕೂರಿಗೆ ಬಂಡವಾಳ ಹೂಡಿಕೆ ಹೆಚ್ಚಳವಾಗಲು ಕಾರಣವಾಗಿದೆ. ಒಂದು ಕಾಲದಲ್ಲಿ ಅಕ್ಕಿ ಗಿರಣಿ ಉದ್ಯಮಗಳೇ ಜಾಸ್ತಿ ಇದ್ದ ತುಮಕೂರಿನ ಅಂತರಸನಹಳ್ಳಿ-ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಆಹಾರ ಸಂಸ್ಕರಣಾ ಘಟಕದಿಂದ ಹಿಡಿದು ಆಟೋಮೊಬೈಲ್, ಸಿವಿಲ್, ಐಟಿಐ ಉತ್ಪನ್ನಗಳು, ಫಾರ್ಮಾಸ್ಯುಟಿಕಲ್, ಸೋಲಾರ್ ಎನರ್ಜಿ, ಏರೋಸ್ಪೇಸ್ ಹೀಗೆ ಎಲ್ಲಾ ಬಗೆಯ ತಂತ್ರಜ್ಞಾನವನ್ನಾಧರಿಸಿ ಉತ್ಪನ್ನ ತಯಾರಿಕಾ ಘಟಕಗಳು ತಲೆ ಎತ್ತುತ್ತಿವೆ.

image


ಇದಕ್ಕೂ ಮೊದಲು ಸರಕಾರಿ ಸ್ವಾಮ್ಯದ ಎಚ್ಎಂಟಿ ಘಟಕ ಇಲ್ಲಿತ್ತು. ಈಗ ಎಚ್ಎಎಲ್ ಹೆಲಿಕ್ಯಾಪ್ಟರ್ ಉತ್ಪಾದನಾ ಘಟಕ ಜಿಲ್ಲೆಯಲ್ಲಿ ಸ್ಥಾಪನೆಯಾಗುತ್ತಿದೆ. ಇನ್ನು ತುಮಕೂರು ನಗರಕ್ಕೆ ಹೊಂದಿಕೊಂಡಂತೆ ರಾಷ್ಟ್ರೀಯ ಹೆದ್ದಾರಿ 4 ಇದ್ದು ಅದರ ಅಸುಪಾಸಿನ ಸಾವಿರಾರು ಎಕರೆಯಲ್ಲಿ ಪ್ರದೇಶದಲ್ಲಿ ಖಾಸಗಿ, ಎಂಎನ್​ಸಿ ಒಡೆತನದ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು ಅಧಿಕ ಸಂಖ್ಯೆಯಲ್ಲಿ ತಲೆಎತ್ತುತ್ತಿರುವುದು ಕೈಗಾರಿಕಾ ರಂಗದಲ್ಲಿ ತುಮಕೂರು ಜಿಲ್ಲೆ ವಿಶ್ವದ ಭೂಪುಟದಲ್ಲಿ ಗುರುತಿಸಿಕೊಳ್ಳವಂತಾಗಿದೆ.

ಇನ್ವೆಸ್ಟ್ ಕರ್ನಾಟಕದಲ್ಲಿ 5680 ಕೋಟಿ ಬಂಡವಾಳ

ಕಳೆದ ತಿಂಗಳು ಬೆಂಗಳೂರಿನಲ್ಲಿ ನಡೆದ ಇನ್ವೆಸ್ಟ್ ಕರ್ನಾಟಕದಲ್ಲಿ ತುಮಕೂರಿಗೆ ಸುಮಾರು 5680 ಕೋಟಿಗೂ ಅಧಿಕ ಬಂಡವಾಳ ಹೂಡಿಕೆಗೆ ಜಾಗತಿಕ ವಲಯದ ಎಂಟು ಮುಂಚೂಣಿ ಕೈಗಾರಿಕಾ ಸಂಸ್ಥೆಗಳು ಮುಂದೆಬಂದಿವೆ.

ಜಪಾನ್, ದುಬೈ, ಪೋಲೆಂಡ್ ಕಂಪನಿಗಳಿಂದ ಹೂಡಿಕೆ

ರಾಜ್ಯದಲ್ಲಿ ಬಂಡವಾಳ ಹೂಡಲು ಆಸಕ್ತಿ ವ್ಯಕ್ತಪಡಿಸಿದ 146 ದೇಶಿ ವಿದೇಶಿಯ ಕಂಪನಿಗಳ ಪೈಕಿ ಜಪಾನ್ ಮೂಲದ ‘ಮೇಟಿ’ ಸಂಸ್ಥೆ 585 ಕೋಟಿ, ಚೆನ್ನೈ ಮೂಲದ ಎಸ್ಎಸ್ಎಸ್ ಆದಿತ್ಯಾ ಪವರ್ಸ್ ಸಂಸ್ಥೆ ತುಮಕೂರು ಹಾಗೂ ಬೀದರ್ ಈ ಎರಡು ಕಡೆ ಒಟ್ಟು 4200 ಕೋಟಿ ಬಂಡವಾಳ ಹೂಡಲು ಆಸಕ್ತಿ ವ್ಯಕ್ತಪಡಿಸಿವೆ. ಅಂತೆಯೇ ಫೋಲೆಂಡ್ ಮೂಲದ ಎಕಾಲಾಗ್ ಇಂಡಿಯಾ ಸಂಸ್ಥೆ 550 ಕೋಟಿ , ಜಿಲ್ಲೆಯ ಮೂಲದವರೇ ಆದ ಕಣ್ವ ಗಾರ್ಮೆಂಟ್ಸ್ನವರು 30 ಕೋಟಿ, ದುಬೈನ ಬೇಕ್ಮಾರ್ಟ್ ಸಂಸ್ಥೆ 100 ಕೋಟಿ, ಇಂಟಿಗ್ರೇಟಿಡ್ ಫುಡ್ಪಾರ್ಕ್ ಸಂಸ್ಥೆ 100 ಕೋಟಿ, ಕಣ್ವ ಫ್ಯಾಷನ್ಸ್ 25 ಕೋಟಿ, ಹೈದರಾಬಾದ್ ಮೂಲದ ಮೆಗಾ ಎಂಜಿನಿಯರಿಂಗ್ ಅಂಡ್ ಇನ್ಫ್ರಾಸ್ಟ್ರಕ್ಚರ್ ಸಂಸ್ಥೆಯವರು 90 ಕೋಟಿ ಬಂಡವಾಳ ಹೂಡಲು ಒಪ್ಪಂದ ಮಾಡಿಕೊಂಡಿದ್ದಾರೆ. ಸಾವಿರಕ್ಕೂ ಅಧಿಕ ಪ್ರತ್ಯಕ್ಷ ಹಾಗೂ ಪರೋಕ್ಷ ಉದ್ಯೋಗವನ್ನು ಈ ಬಂಡವಾಳ ಹೂಡಿಕೆಯಿಂದ ನಿರೀಕ್ಷಿಸಲಾಗಿದೆ.

ಹಿಂದಿನ ಯುಪಿಎ ಸರಕಾರದ ಅವಧಿಯಲ್ಲಿ ತುಮಕೂರಿನ ಅಂತರಸನಹಳ್ಳಿ-ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ 1ಲಕ್ಷ ಎಕರೆ ವಿಸ್ತೀರ್ಣದ ರಾಷ್ಟ್ರೀಯ ಉತ್ಪಾದನಾ ಹೂಡಿಕೆ ವಲಯ ನಿಮ್ಜ್ ಸ್ಥಾಪನೆಗೆ ಸಹ ಅನುಮೋದನೆ ದೊರೆತಿದ್ದು, ಇಂಗ್ಲೆಂಡ್ ಸರಕಾರದ ನೆರವಿನ ಮುಂಬೈ-ಬೆಂಗಳೂರು ಇಂಡಸ್ಟ್ರಿಯಲ್ ಕಾರಿಡಾರ್, ಜಪಾನೀ ಇಂಡಸ್ಟ್ರೀಸ್ ಹಬ್ ತುಮಕೂರು ಮಾರ್ಗವಾಗಿ ಹಾದುಹೋಗುತ್ತಿರುವುದು ಕ್ಷಿಪ್ರಗತಿಯ ಕೈಗಾರಿಕಾ ಬೆಳವಣಿಗೆಗೆ ಬುನಾದಿ ಹಾಡಿದೆ.

ಯಾವ ಕೈಗಾರಿಕೆ ಎಷ್ಟಿವೆ? ಉದ್ಯೋಗ ಪ್ರಮಾಣವೆಷ್ಟು?

ಕೈಗಾರಿಕೆಯನ್ನು ಅವುಗಳ ಬಂಡವಾಳ ಹೂಡಿಕೆ ಪ್ರಮಾಣದ ಅನುಸಾರ ಮೆಗಾ, ಬೃಹತ್ , ಮಧ್ಯಮ ಮತ್ತು ಸಣ್ಣ, ಸೂಕ್ಷ್ಮ ಕೈಗಾರಿಕೆಗಳೆಂದು ವಿಂಗಡಿಸಿದ್ದು, ಜಿಲ್ಲೆಯಲ್ಲಿ 10 ಕೋಟಿ ಒಳಗಿನ ಬಂಡವಾಳ ಹೂಡಿಕೆ ವ್ಯಾಪ್ತಿಗೆ ಬರುವ 8 ಮಧ್ಯಮ ಪ್ರಮಾಣದ ಕೈಗಾರಿಕೆಗಳಿವೆ, ಈ ಕಂಪನಿಗಳು 74.23 ಕೋಟಿ ಬಂಡವಾಳ ಹೂಡಿಕೆಯೊಂದಿಗೆ 1313 ಜನರಿಗೆ ಉದ್ಯೋಗವಕಾಶ ಕಲ್ಪಿಸಿವೆ. 10 ಕೋಟಿಗೂ ಮೇಲ್ಪಟ್ಟು 250 ಕೋಟಿವರೆಗೆ ಬಂಡವಾಳ ಹೂಡುವ 29 ಬೃಹತ್ ಉದ್ಯಮಗಳು ಈಗಾಗಲೇ 1096.57 ಕೋಟಿ ಬಂಡವಾಳ ಹೂಡಿ ಈಗಾಗಲೇ 5692 ಮಂದಿಗೆ ಉದ್ಯೋಗ ಕಲ್ಪಿಸಿವೆ. ಇನ್ನು 10 ಕೋಟಿ ಒಳಗಿನ ಬಂಡವಾಳ ಹೂಡಿಕೆಯ ಸಣ್ಣ ಕೈಗಾರಿಕೆಗಳು 424 ಸಂಖ್ಯೆಯಲ್ಲಿದ್ದು, ಪ್ರಸಕ್ತ ಜಾಗತಿಕ ಹೂಡಿಕೆ ಸಮಾವೇಶದಲ್ಲಿ 250 ರಿಂದ 500 ಕೋಟಿ ಬಂಡವಾಳ ಹೂಡಿಕೆಗೆ ಮೆಗಾ, 500 ರಿಂದ 1000 ಕೋಟಿ ಬಂಡವಾಳ ಹೂಡಿಕೆಯೆ ಅಲ್ಟ್ರಾ ಮೆಗಾ, ಸಾವಿರ ಕೋಟಿಗೂ ಅಧಿಕ ಬಂಡವಾಳ ಹೂಡಿಕೆಯ ಸೂಪರ್ ಮೆಗಾ ಕಂಪನಿಗಳು ಸ್ಥಾಪನೆಯಾಗಲು ಆಸಕ್ತಿ ವ್ಯಕ್ತಪಡಿಸಿರುವುದು ಜಿಲ್ಲೆಗೆ ಬೃಹತ್ ಕೈಗಾರಿಕಾ ವಲಯಗಳು ಹೆಚ್ಚೆಚ್ಚು ಸ್ಥಾಪನೆಯಾಗುವ ನಿರೀಕ್ಷೆ ಮೂಡಿಸಿದೆ.

image


ಪಾವಗಡದಲ್ಲಿ ಸುಮಾರು 11000 ಎಕರೆ ಪ್ರದೇಶದಲ್ಲಿ ಸ್ಥಾಪನೆಯಾಗುತ್ತಿರುವ ಸೋಲಾರ್ಪಾರ್ಕ್ನಲ್ಲೂ ಬಂಡವಾಳ ಹೂಡಿಕೆ ಮಾಡಿ ಸೌರ ವಿದ್ಯುತ್ ಉತ್ಪಾದಿಸಲು ಜಿಲ್ಲೆಯ ಮೂಲದವರು ಸೇರಿ ಹೊರಗಿನವರು ಆಸಕ್ತಿ ವ್ಯಕ್ತಪಡಿಸಿದ್ದಾರೆ. ಈ ಕೈಗಾರಿಕಾ ಬೆಳವಣಿಗೆ ಒಂದೆಡೆಯಾದರೆ ಇದಕ್ಕೆ ಪೂರಕವಾಗಿ ಹೆಚ್ಚಿನ ಸೌಲಭ್ಯಗಳು ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪನೆಯಾಗಬೇಕು ಎಂಬುದು ಉದ್ದಿಮೆದಾರರ ಬೇಡಿಕೆ.

ವೈವಿಧ್ಯಮಯ ಉತ್ಪಾದನೆಯ ಹಬ್.....

ಜಿಲ್ಲೆಯ ಕೈಗಾರಿಕಾ ಪ್ರದೇಶದಲ್ಲಿ ವಾಚಸ್, ಎಲೆಕ್ಟ್ರಿಕಲ್ ಮೋಟಾರ್ಸ್, ಆಟೋಟರ್ನಡ್ ಕಾಂಪೋನೆಂಟ್ಸ್, ಇನ್ವರ್ಟರ್, ಇಂಡಸ್ಟ್ರಿಯಲ್ ಫಿಲ್ಟರ್ಸ್, ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್, ಸಿರಾಮಿಕ್ ಗ್ಲೇಜೆಡ್ ಟೈಲ್ಸ್, ಹರ್ಬಲ್ ಎಕ್ಸ್ಟ್ರಾಕ್ಟ್ಸ್, ಸಿಮೆಂಟ್, ಸ್ಪಾಂಜ್ ಐರನ್, ನೀಮ್ ಆಯಿಲ್ ಪ್ರೊಸಿಸಿಂಗ್, ಎಸಿ ಶೀಟ್ಸ್, ಕಮರ್ಷಿಯಲ್ ಏರ್ಕ್ರ್ಯಾಪ್ಟ್, ಪ್ಲಾಸ್ಟಿಕ್ -ಫ್ಯಾಬ್ರಿಕ್ಸ್, ಮೆಟಲ್ ಕ್ಯಾಸ್ಟಿಂಗ್ಸ್, ವೈರ್ ಕಟ್ ಬ್ರಿಕ್, ಗ್ರಾನೈಟ್ ಟೈಲ್ಸ್ ಅಂಡ್ಸ್ಲಾಬ್ಸ್... ಹೀಗೆ ಉತ್ಪಾದನೆ, ಮೂಲಭೂತ ಸೌಕರ್ಯ, ತಂತ್ರಜ್ಞಾನ ಕ್ಷೇತ್ರಗಳಿಗೆ ಸಂಬಂಧಿಸಿದ ಕೈಗಾರಿಕೆಗಳು ಸ್ಥಾಪನೆಯಾಗಿ ವೈವಿಧ್ಯಮಯ ಉತ್ಪಾದನಾ ಹಬ್ ಆಗಿ ರೂಪಿತವಾಗಿದೆ.