ವನ್ಯಜೀವಿಗಳ ಪಾಲಿನ ಸಂರಕ್ಷಕ- ಜೀವ ಸಂಕುಲಗಳನ್ನು ಕಾಪಾಡಲು ಪಾಠ ಮಾಡುವ ಶಿಕ್ಷಕ

ಟೀಮ್​ ವೈ.ಎಸ್​. ಕನ್ನಡ

ವನ್ಯಜೀವಿಗಳ ಪಾಲಿನ ಸಂರಕ್ಷಕ- ಜೀವ ಸಂಕುಲಗಳನ್ನು ಕಾಪಾಡಲು ಪಾಠ ಮಾಡುವ ಶಿಕ್ಷಕ

Tuesday November 15, 2016,

2 min Read

"ಈ ಇಡೀ ಬದುಕನ್ನು ವೈಲ್ಡ್ ಲೈಫ್​ಗೆ ಅಂತ ಮೀಸಲಿಟ್ಟಿದ್ದೇನೆ. ಪ್ರಾಯಶಃ ನನ್ನ ಜನ್ಮ ಅಂತಾಗಿರೋದೆ ವನ್ಯಜೀವಿಗಳಿಗಾಗಿ ಅನ್ನಿಸುತ್ತೆ. ವನ್ಯ ಜೀವಿಗಳಿಗೆ ಪ್ರತೀ ಸಲ ಸಮಸ್ಯೆಯಾದಾಗಲೂ ಈ ಸ್ವಾರ್ಥಿ ಮನುಷ್ಯ ಬದುಕುತ್ತಿರುವ ಭೂಮಿ ನಾಶವಾಗಿ ಹೋಗಲಿ ಅಂತ ಅನ್ನಿಸುತ್ತದೆ."

ಹೀಗಂತ ಹೇಳಿಕೊಂಡು ಮಾತು-ಕಥೆಗೆ ಕುಳಿತವರು ವನ್ಯಜೀವಿಗಳ ಮೇಲೆ ನಿಜವಾದ ಕಾಳಜಿ-ಕಳಕಳಿ ಹೊಂದಿರುವ ವನ್ಯಜೀವಿ ತಜ್ಞ ವಲ್ಲೀಶ್ ಕೌಶಿಕ್ ವಾಸುಕಿ. ಮೂಲತಃ ಮಂಡ್ಯ ಜಿಲ್ಲೆಯ ಕೆ.ಆರ್ ನಗರದವರಾದ ವಲ್ಲೀಶ್ ಕೌಶಿಕ್ ವಾಸವಿರೋದು ಬೆಂಗಳೂರಿನ ಶಂಕರಪುರಂನ ಶೃಂಗೇರಿ ಶಂಕರ ಮಠದ ಬಳಿಯಲ್ಲಿ. ಕರ್ನಾಟಕದಲ್ಲಿ ಎಲ್ಲೇ ವನ್ಯಜೀವಿಗಳಿಗೆ ನೋವಾದರೂ ವಲ್ಲೀಶ್​ರ ಹೃದಯದಲ್ಲಿ ಅಸಾಧ್ಯ ಸಂಕಟ ಕಾಣಿಸಿಕೊಳ್ಳುತ್ತದೆ. ಅವರ ಪಾಲಿಗೆ ವನ್ಯಜೀವಿಗಳೇ ಆಪ್ತರು, ವಿಶ್ವಾಸಿಕರು, ಸ್ನೇಹಿತರು ಹಾಗೂ ಆತ್ಮ ಬಂಧುಗಳು..!

image


ಕರ್ನಾಟಕದ ಯಾವ ಯಾವ ಕಾಡುಗಳಲ್ಲಿ ಯಾವ ಯಾವ ಬಗೆಯ ಜೀವ ವೈವಿಧ್ಯತೆಗಳಿವೆ ಅನ್ನೋದು ವಲ್ಲೀಶ್​ ಬಾಯಿಯಲ್ಲೇ ಇದೆ. ಬನ್ನೇರುಘಟ್ಟಾ ವೈಲ್ಡ್ ಲೈಫ್ ಬಯೋಲಾಜಿಕಲ್ ಪಾರ್ಕ್​ನಿಂದ ದೂರದ ಶೃಂಗೇರಿ ತಪ್ಪಲಿನವರೆಗೆ ವಲ್ಲೀಶ್ ತಲುಪದೇ ಇರುವ ಅರಣ್ಯಪ್ರದೇಶಗಳೇ ಇಲ್ಲ. ಬಿಳಿಗಿರಿ ರಂಗನ ಬೆಟ್ಟ, ಮಲೆ ಮಹದೇಶ್ವರ ಬೆಟ್ಟ, ಕೊಡಗು ಸುತ್ತಮುತ್ತಲಿನ ಕಗ್ಗಾಡು, ಚಾಮರಾಜನಗರದ ಸತ್ಯಮಂಗಲಂ ಕಾಡು, ಪಶ್ಚಿಮಘಟ್ಟದ ಕಾಡುಗಳು, ನೀಲಗಿರಿ ಹಾಗೂ ಅಣ್ಣಾಮಲೈ ಅರಣ್ಯ ಪ್ರದೇಶಗಳ ಉಬ್ಬು-ತಗ್ಗು, ಓರೆ-ಕೋರೆ, ಹಳ್ಳ-ದಿಣ್ಣೆಗಳು ಅವರಿಗೆ ಅಂಗೈ ಗೆರೆಯಷ್ಟೇ ಪರಿಚಿತ. ಸ್ವತಃ ವಲ್ಲೀಶ್ ಹೇಳುವಂತೆ ಅವರಿಗೆ ಬೆಂಗಳೂರಿನ ಜಗಮಗಿಸುವ ಮಾಯಾನಗರಿಗಿಂತ ಹೆಚ್ಚು ಆಪ್ತ ಜಾಗ ಬನ್ನೇರುಘಟ್ಟಾ, ಬಂಡೀಪುರ, ನಾಗರಹೊಳೆಯ ಅಭಯಾರಣ್ಯಗಳು.

image


ವಲ್ಲೀಶ್​ಗೆ ವನ್ಯಜೀವಿಗಳ ಕೆಮಿಸ್ಟ್ರಿ ಅರ್ಥಮಾಡಿಕೊಳ್ಳುವುದು ಕರತಲಾಮಲಕ. ಅದರಲ್ಲೂ ಕಾಡಾನೆಗಳ ಬದುಕು, ವರ್ತನೆ ಹಾಗೂ ದೇಹ ಪ್ರಕೃತಿಗಳ ಬಗ್ಗೆ ಅನೇಕ ಆಶ್ಚರ್ಯಕರ ಸಂಗತಿಗಳನ್ನು ಅವರು ಅರ್ಥ ಮಾಡಿಕೊಂಡಿದ್ದಾರೆ. ತಿಥಿಮತಿ, ಸಕ್ರೆಬೈಲು, ದುಬಾರೆ ಆನೆ ಶಿಬಿರಗಳಲ್ಲಿ ಮಾವುತರು ಹಾಗೂ ಕಾವಡಿಗಳೊಂದಿಗೆ ವಲ್ಲೀಶ್ ವಾಸುಕಿ ಕಾಲಕಳೆದ ಕ್ಷಣಗಳು ಲೆಕ್ಕವಿಲ್ಲದಷ್ಟು. ಬೆಂಗಳೂರಿನ ಬೀದಿಗಳಲ್ಲಿ ಪಕ್ಕಾ ಹಾವಾಡಿಗನಂತೆ ವೇಶ ಧರಿಸಿ ಅಸಂಖ್ಯಾತ ಹಾವುಗಳನ್ನು ರಕ್ಷಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಹಾವಿನಿಂದ ಕಚ್ಚಿಸಿಕೊಂಡಿದ್ದೂ ಉಂಟು. ಬೆಂಗಳೂರಿನಲ್ಲಿರುವ ಸುಮಾರು 27 ಜಾತಿಯ ಹಾವುಗಳ ಬಗ್ಗೆ ಅವರು ಸಮಗ್ರ ಅಧ್ಯಯನ ನಡೆಸಿ ಡಾಕ್ಯುಮೆಂಟರಿ ಮಾಡಿದ್ದಾರೆ. ಬೆಂಗಳೂರಿನ ಹೊರವಲಯದ ಕಾಡುಗಳಲ್ಲಿ ಪಕ್ಷಿಗಳ ಫೋಟೋ ಕ್ಲಿಕ್ಕಿಸಲು ಅಲೆದಾಡಿದ್ದಾರೆ. ವರ್ಷದಲ್ಲಿ ಒಂದು ಸಲವಾದರೂ ರಾಜಸ್ತಾನ್ ರಣಥಂಬೂರ್, ನಾಗಪುರ ಚಂದ್ರಗುತ್ತಿ ಕಡಬ, ಮಧ್ಯಪ್ರದೇಶದ ಬಾಂದವ್​ಘರ್ ರಾಷ್ಟ್ರೀಯ ಉದ್ಯಾನವನಕ್ಕೆ ಹೋಗಿ ಅಲ್ಲಿರುವ ಹುಲಿಗಳನ್ನು ನೋಡಿ ಬರದಿದ್ದರೆ ವಲ್ಲೀಶ್​ಗೆ ಶಾಂತಿ ಇರುವುದೇ ಇಲ್ಲ. ವಲ್ಲೀಶ್ ಕೌಶಿಕ್ ಪ್ರಾಜೆಕ್ಟ್ ಸೇವ್ ಟೈಗರ್ ಹಾಗೂ ಪ್ರಾಜೆಕ್ಟ್ ಎಲೆಫೆಂಟ್​ಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ.

image


ಹತ್ತಿರ ಹತ್ತಿರ ಎರಡು ದಶಕಗಳಿಗೂ ಹೆಚ್ಚು ಕಾಲ ವೈಲ್ಡ್ ಲೈಫ್ ಆಕ್ಟಿವಿಸ್ಟ್ ಆಗಿ, ನ್ಯಾಚುರಲಿಸ್ಟ್ ಆಗಿ ಪರಿಸರ ಹೋರಾಟಗಾರರಾಗಿ ಗುರುತಿಸಿಕೊಂಡಿರುವ ವಲ್ಲೀಶ್ ಕುರಿತು ಈಗಾಗಲೆ ಕನ್ನಡ ಮಾಧ್ಯಮಗಳಷ್ಟೇ ಅಲ್ಲದೇ ಅನೇಕ ಆಂಗ್ಲ ಮಾಧ್ಯಮಗಳು ಬರೆದಿವೆ. ಪ್ರತೀಬಾರಿ ವೈಲ್ಡ್ ಅನಿಮಲ್ಸ್ ಸಂಕಟಕ್ಕೀಡಾದಾಗಲೂ ವಲ್ಲೀಶ್ ಟಿವಿ ವಾಹಿನಿಗಳ ಸ್ಟುಡಿಯೋದಲ್ಲಿ ಕುಳಿತು ತಮ್ಮ ಕೋಪ, ಬೇಸರ ಹಾಗೂ ಹತಾಶೆ ತೋರ್ಪಡಿಸಿದ್ದಾರೆ. 2010ರಲ್ಲೇ ವಾಚರ್ಸ್ ಇಂಡಿಯಾ ಟ್ರಸ್ಟ್ ಸ್ಥಾಪಿಸಿರುವ ವಲ್ಲೀಶ್, ವನ್ಯಜೀವಿಗಳ ನೆಮ್ಮದಿಯ ಬದುಕಿಗಾಗಿ ತಮ್ಮ ನೆಮ್ಮದಿ ಕಳೆದುಕೊಂಡು ಹಗಲಿರುಳು ಶ್ರಮಿಸುತ್ತಿದ್ದಾರೆ. ಪೀಪಲ್ಸ್ ಫರ್ ಅನಿಮಲ್ಸ್ ಸೇರಿದಂತೆ ಅನೇಕ ವನ್ಯಜೀವಿ ಸಂರಕ್ಷಣಾ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ. ಇಂತಿಪ್ಪ ವಲ್ಲೀಶ್​ರ ಜೀವನದ ಪರಮೋಚ್ಛ ಗುರಿಯೊಂದಿದೆ. ಪದೇ ಪದೇ ತೊಂದರೆಗೊಳಗಾಗುವ ವನ್ಯಜೀವಿಗಳಿಗಾಗಿ ಏನಾದರೂ ಮಹತ್ತರ ಸೇವೆ ಮಾಡಬೇಕು ಅನ್ನುವ ಕನಸು ಅವರದ್ದು. ಇದಕ್ಕಾಗಿ ಈಗಾಗಲೆ ನೀಲನಕ್ಷೆ ಹಾಕಿಕೊಂಡಿರುವ ಅವರು ತಮ್ಮ ತನು-ಮನ-ಧನ ವಿನಿಯೋಗಿಸಲು ಸಿದ್ದರಿದ್ದಾರೆ. ಮನುಷ್ಯ ಮನುಷ್ಯನಿಗೆ ಆಗದ ಇಂದಿನ ದಿನಗಳಲ್ಲಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಕಾಡುಪ್ರಾಣಿಗಳಿಗಾಗಿ ತಮ್ಮ ಇಡೀ ಆಯುಷ್ಯ ಮುಡಿಪಿಟ್ಟಿರುವ ವಲ್ಲೀಶ್ ಜೀವನಗಾಥೆ ನಿಜಕ್ಕೂ ಶ್ಲಾಘನೀಯ.

ಇದನ್ನು ಓದಿ:

1. ಬೀದಿಯಲ್ಲಿ ದಿನಪತ್ರಿಕೆ ಮಾರುತ್ತಿದ್ದ ಶಿವಾಂಗಿ ಈಗ IIT-JEE ಉತ್ತೀರ್ಣೆ..

2. ವೈಜ್ಞಾನಿಕ ಲೋಕದಲ್ಲಿ ಅಚ್ಚರಿಯ ಸಂಶೋಧನೆ- ಇಂಧನಕ್ಕಾಗಿ ಕಾರ್ಬನ್ ಡೈ ಆಕ್ಸೈಡ್ ಬಳಕೆ..!

3. ಕಾರ್​ ಮೈಲೇಜ್​ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ- ಎಂಜಿನಿಯರಿಂಗ್​ ವಿದ್ಯಾರ್ಥಿಗಳ ಸಂಶೋಧನೆ ಬಗ್ಗೆ ಓದಿ..!