ಆವೃತ್ತಿಗಳು
Kannada

ಸ್ಯಾಂಡಲ್​​ವುಡ್ ನಟನ ಬಫೆಲೋಬ್ಯಾಕ್​​​​ ಕಮಾಲ್​​​: ವಾಸ್ಕೋಡಗಾಮನ ಹೊಸ ಅನ್ವೇಷಣೆ..!

ವಿಶ್ವಾಸ್​ ಭಾರಾಧ್ವಾಜ್​​

3rd Nov 2015
Add to
Shares
1
Comments
Share This
Add to
Shares
1
Comments
Share

ಸ್ಯಾಂಡಲ್​​ವುಡ್​​ನ ಪ್ರತಿಭಾನ್ವಿತ ನಟ ಕಿಶೋರ್. ಕನ್ನಡದ ಪ್ರಕಾಶ್ ರೈ ಎಂದೇ ಗುರುತಿಸಿಕೊಳ್ಳುತ್ತಿರುವ ಕಿಶೋರ್​​ಗೆ ಅಭಿನಯ ಅನ್ನೋದು ನೀರು ಕುಡಿದಷ್ಟೇ ಸಲೀಸು. ಅದಕ್ಕೆ ಅತ್ಯುತ್ತಮ ಉದಾಹರಣೆ, ಸ್ಯಾಂಡಲ್​​ವುಡ್​​ನ ಜಟ್ಟ, ಮೊನ್ನೆ ಮೊನ್ನೆಯಷ್ಟೇ ತೆರೆಕಂಡು ಯಶಸ್ವೀ ಪ್ರದರ್ಶನ ಕಾಣುತ್ತಿರುವ ವಾಸ್ಕೋಡಗಾಮ ಮುಂತಾದ ಹತ್ತಾರು ಚಿತ್ರಗಳು. ಖಳನಟನಾಗಿ ಚಿತ್ರರಂಗ ಪ್ರವೇಶಿಸಿದ ಕಿಶೋರ್, ಪೋಷಕ ಪಾತ್ರದಲ್ಲಿ ಗುರುತಿಸಿಕೊಳ್ಳುವ ಜೊತೆಗೆ ಪ್ರತಿನಾಯಕನಾಗಿ ಹಾಗೂ ಇತ್ತೀಚೆಗಿನ ದಿನಗಳಲ್ಲಿ ನಾಯಕನಾಗಿಯೂ ತಮ್ಮದೇ ಆದ ಚಾಪು ಮೂಡಿಸುತ್ತಿದ್ದಾರೆ. ಇಂತಹ ಕಿಶೋರ್​​ರ ಹೊಸ ಅವತಾರವೊಂದರ ಅನಾವರಣ ಮಾಡುತ್ತೆ ಈ ಲೇಖನ. ಕಿಶೋರ್ ತಮ್ಮ ಎಮ್ಮೆಯೊಂದಿಗೆ ಸುದ್ದಿ ಮಾಡುತ್ತಿದ್ದಾರೆ. ಆಶ್ಚರ್ಯ ಆಗ್ತಿದೆಯಾ? ಹೌದು, ನಮ್ಮ ಚಂದನವನದ ಕಿಶೋರ್ 4 ವರ್ಷಗಳ ಹಿಂದೆಯೇ ‘ಬಫೇಲೋ ಬ್ಯಾಕ್’ ಅನ್ನುವ ಸಾವಯವ ಸಂಸ್ಥೆಯೊಂದರ ಒಡೆಯರಾಗಿದ್ದಾರೆ. ತಮ್ಮ ಪತ್ನಿ ವಿಶಾಲಾಕ್ಷಿಯೊಂದಿಗೆ ಕಿಶೋರ್ ಸಾವಯವ ಉತ್ಪನ್ನಗಳನ್ನು ಮಾರಾಟ ಮಾಡುವ ಮಳಿಗೆ ಆರಂಭಿಸಿ, ಅನೇಕ ಸವಾಲುಗಳನ್ನೆದುರಿಸಿ ಈಗ ಯಶ ಕಾಣುತ್ತಿದ್ದಾರೆ.

image


ಬಫೇಲೋ ಬ್ಯಾಕ್​​ನ ಆಲೋಚನೆ ಹಾಗೂ ಕಾರ್ಯಗತ ಯತ್ನ

ಬಹುಭಾಷಾ ನಟ ಹಾಗೂ ಕನ್ನಡದ ಹೆಮ್ಮೆಯ ಅಭಿನಯ ಚತುರ ಕಿಶೋರ್​​ಗೆ ಮೊದಲಿನಿಂದಲೂ ಕೃಷಿ ಹಾಗೂ ಸಾವಯವ ವ್ಯವಸಾಯದ ಬಗ್ಗೆ ಅಪಾರ ಆಸಕ್ತಿಯಿತ್ತು. ತಮ್ಮ ಮಕ್ಕಳಿಗೆ ಸಾವಯವ ಉತ್ಪನ್ನಗಳನ್ನು ಖರೀದಿಸುತ್ತಿದ್ದ ಸಂದರ್ಭದಲ್ಲಿ ತಾವೇ ಏಕೆ ಒಂದು ಸಾವಯವ ಉತ್ಪನ್ನಗಳ ಮಾರಾಟ ಮಳಿಗೆ ತೆರೆಯಬಾರದು ಅನ್ನುವ ಆಲೋಚನೆ ಮೂಡಿತ್ತು. ಕೂಡಲೆ ಕಾರ್ಯ ಪ್ರವೃತ್ತರಾದ ಕಿಶೋರ್ ಜಯನಗರದ ಮೊದಲ ಬ್ಲಾಕ್​​ನಲ್ಲಿರುವ ತಮ್ಮ ಮನೆಯಲ್ಲಿಯೇ ಸಾವಯವ ಉತ್ಪನ್ನಗಳು ಹಾಗೂ ಧಾನ್ಯಗಳ ಮಳಿಗೆ ತೆರೆದೇ ಬಿಟ್ಟರು. ಇದರ ಜೊತೆಗೆ ಮಲ್ಲೇಶ್ವರಂನ 17ನೇ ಕ್ರಾಸ್​​ನಲ್ಲಿ ಅಂಗಡಿ ಮಳಿಗೆಯೊಂದನ್ನು ಬಾಡಿಗೆಗೆ ಪಡೆದು ಅಲ್ಲೂ ತಮ್ಮದೊಂದು ಶಾಖೆಯನ್ನು ಆರಂಭಿಸಿದರು. ಕಿಶೋರ್​​ರ ಈ ಆಲೋಚನೆಗೆ ಬಲ ನೀಡಿ ಬೆಂಗಾವಲಾಗಿದ್ದು ಅವರ ಪತ್ನಿ ವಿಶಾಲಾಕ್ಷಿ. ಬನ್ನೇರುಘಟ್ಟ ಸಮೀಪದಲ್ಲಿರುವ ತಮ್ಮ ತೋಟದಲ್ಲಿ ಕಿಶೋರ್ ಈ ಹಿಂದೆಯೇ ರಾಗಿ, ಜೋಳ, ಸಜ್ಜೆ, ನವಣೆಯಂತಹ ಧಾನ್ಯಗಳನ್ನು, ವಿವಿಧ ತರಕಾರಿಗಳು ಹಾಗೂ ಬಗೆ ಬಗೆಯ ಹಣ್ಣುಗಳನ್ನೂ ಬೆಳೆಯುತ್ತಿದ್ದರು. ತಮ್ಮ ಮಳಿಗೆಗಳಿಗೆ ಈ ತೋಟದ ಉತ್ಪನ್ನಗಳನ್ನೇ ಮಾರಾಟದ ಸರಕಾಗಿಸಿಕೊಂಡು ಇದೀಗ ಕಿಶೋರ್ ದಂಪತಿಗಳು ಅದ್ಭುತವಾಗಿ ವ್ಯಾಪಾರ ನಡೆಸುತ್ತಿದ್ದಾರೆ.

image


ಅಚ್ಚ ಬಿಳಿಯ ಸಂಸ್ಕೃತಿ ಶ್ರೇಷ್ಠ, ಕಪ್ಪು ಅತ್ಯಂತ ನಿಕೃಷ್ಟ ಅನ್ನುವ ಮನೋಭಾವನೆಗೆ ತಮ್ಮ ಧಿಕ್ಕಾರ ವ್ಯಕ್ತಪಡಿಸುವುದಕ್ಕಾಗಿಯೇ ಕಿಶೋರ್ ತಮ್ಮ ಸಂಸ್ಥೆಗೆ ಎಮ್ಮೆಯ ಹೆಸರಿಟ್ಟಿದ್ದಾರೆ. ಮೊದ ಮೊದಲು ಗ್ರಾಹಕರ ವಿಶ್ವಾಸ ಗಳಿಸಿಕೊಳ್ಳಲು ತಮ್ಮ ಮಳಿಗೆಗಳಲ್ಲಿ ಬ್ರಾಂಡೆಡ್ ಉತ್ಪನ್ನಗಳನ್ನು ಮಾರಾಟ ಮಾಡಿದ ಕಿಶೋರ್, ನಂತರ ಸಾವಯವ ಉತ್ಪನ್ನಗಳತ್ತ ಹೊರಳಿದರು. ಈಗ ಅವರ ಸಂಸ್ಥೆಯಲ್ಲಿ ಬ್ರಾಂಡೆಡ್ ಉತ್ಪನ್ನಗಳಿಗೆ ಜಾಗವಿಲ್ಲ. ಸ್ವದೇಶಿ ಉತ್ಪನ್ನಗಳು ಹಾಗೂ ಗ್ರಾಮೀಣ ಭಾಗದ ಸಾವಯವ ಕೃಷಿಯಿಂದ ಬೆಳೆದ ಉತ್ಪನ್ನಗಳು ಅತ್ಯುತ್ತಮ ಗುಣಮಟ್ಟ ಹಾಗೂ ಉತ್ಕೃಷ್ಟತೆ ಹೊಂದಿರುತ್ತದೆ ಅನ್ನುವುದು ಕಿಶೋರ್​​ರ ಬಲವಾದ ನಂಬಿಕೆ. ಹೀಗಾಗಿಯೇ ತಮ್ಮ ಬನ್ನೇರುಘಟ್ಟದ ತೋಟದಲ್ಲಿಯೂ ನೈಸರ್ಗಿಕವಾಗಿ, ಪ್ರಕೃತಿದತ್ತ ಗೊಬ್ಬರಗಳನ್ನೇ ಬಳಸಿ ಸಾವಯವ ಕೃಷಿ ನಡೆಸಲು ಕಿಶೋರ್ ಮುಂದಾಗಿದ್ದಾರೆ.

image


ಸವಾಲುಗಳ ನಂತರ ಗಳಿಸಿಕೊಂಡ ಯಶ

ಕಿಶೋರ್​​ರ ಬಫೇಲೋ ಬ್ಯಾಕ್ ಸಾವಯವ ಮಳಿಗೆ ಬೆಳಿಗ್ಗೆ 9.30ರಿಂದ ರಾತ್ರಿ 8 ಗಂಟೆಯವರೆಗೂ ತೆರೆದಿರುತ್ತದೆ. ಮೊದಮೊದಲು ಆರ್ಥಿಕವಾಗಿ ಸಾಕಷ್ಟು ನಷ್ಟ ಅನುಭವಿಸಿದ ಕಿಶೋರ್, ಈಗೀಗ ಆದಾಯ ಗಳಿಸುತ್ತಿದ್ದಾರೆ. ಈಗ ಕಿಶೋರ್​​ರ ಬಫೇಲೋ ಬ್ಯಾಕ್ ಮಳಿಗೆಗೆ ವಿಶ್ವಾಸಾರ್ಹ ಗ್ರಾಹಕರು ದೊರೆತಿದ್ದಾರೆ. ಆದರೆ ಈ ವ್ಯವಹಾರದಲ್ಲಿ ಅತಿ ಹೆಚ್ಚು ಲಾಭದ ನಿರೀಕ್ಷೆ ಮಾಡದೆ ಬಂದಿರುವ ಲಾಭವನ್ನು ತಮ್ಮ ಮಳಿಗೆಯಲ್ಲಿ ಕೆಲಸ ಮಾಡುವ ಕೆಲಸಗಾರರಿಗೆ ಹಂಚಬೇಕು ಅನ್ನುವ ಇರಾದೆ ಅವರದ್ದು.

ಋತುಗಳಿಗೆ ಅನುಗುಣವಾಗಿ ತರಕಾರಿ ಹಾಗೂ ಆಹಾರ ಕ್ರಮಗಳಿವೆ. ಅದರಿಂದು ಜಾಗತೀಕರಣದ ಪ್ರಭಾವದಿಂದ ಅನ್ನ ಬೆಳೆಯಬೇಕಿದ್ದ ರೈತರೇ ಗ್ರಾಹಕರಾಗುತ್ತಿದ್ದಾರೆ. ಇದು ನಿಜಕ್ಕೂ ಭಾರತದಂತಹ ಕೃಷಿ ಪ್ರಧಾನ ರಾಷ್ಟ್ರಗಳ ನಿಜವಾದ ದುರಂತವೇ ಸರಿ. ಅದರ ಬದಲಿಗೆ ವಾಪಾಸು ಹಳೆಯ ಅಭ್ಯಾಸಗಳಿಗೆ ನಮ್ಮ ರೈತರು ಮರಳುವ ಅಗತ್ಯವಿದೆ ಅನ್ನುವುದು ಕಿಶೋರ್​​ರ ಅಭಿಪ್ರಾಯ. ಈಗ್ಗೇ ಹಲವು ವರ್ಷಗಳಿಂದ ಕಿಶೋರ್ ವ್ಯವಸಾಯ ಮಾಡುತ್ತಿದ್ದಾರೆ. ಬೀಜ ಬಿತ್ತನೆಯ ಬಳಿಕ, ಕೃಷಿಗೆ ಬೇಕಿರುವ ಕ್ರಿಯೆಗಳು, ಸಸಿಗಳಿಗೆ ಹರಡುವ ರೋಗಗಳು, ರೋಗಗಳ ಕಾರಣ, ಕೃಷಿಯಲ್ಲಿ ನಷ್ಟವಾದರೇ ಅದಕ್ಕೆ ಅಸಲು ಕಾರಣ, ಸಾವಯವ ಗೊಬ್ಬರದ ಮಹತ್ವ ಮುಂತಾದ ಅನೇಕ ಪ್ರಶ್ನೆಗಳನ್ನು ತಮಗೇ ತಾವೇ ಕೇಳಿಕೊಂಡು, ಸ್ವಂತ ಪ್ರಯೋಗಗಳ ಮೂಲಕ ಪರಿಹರಿಸಿಕೊಳ್ಳುತ್ತಿದ್ದಾರೆ.

ರೈತಪರ ಆಲೋಚನೆಗಳುಳ್ಳ ವಿಶಿಷ್ಟ ನಟ

ಜಾಗತೀಕರಣ ಪ್ರಭಾವಕ್ಕೆ ಸಿಕ್ಕ ರೈತರು ತಮ್ಮ ಭೂಮಿಯಲ್ಲಿ ಉಳುಮೆ ಮಾಡುವ ಬದಲು ವಿಶ್ವವಿದ್ಯಾನಿಲಯಗಳ ದಾಖಲಾತಿಗಳ ಮೇಲೆ ಅವಲಂಭಿತರಾಗಿದ್ದಾರೆ. ರೈತರಿಗೆ ಟ್ರಾಕ್ಟರ್ ನೀಡಲು ಬಂದ ಬಹುರಾಷ್ಟ್ರೀಯ ಕಂಪೆನಿಗಳು, ಅವರ ಭೂಮಿಯನ್ನೇ ಖರೀದಿಸಿ ತಮ್ಮ ಉತ್ಪಾದನಾ ಘಟಕ ತೆರೆದು ಕುಳಿತಿವೆ. ಇವೆಲ್ಲವೂ ರೈತಾಪಿ ವರ್ಗವನ್ನೇ ನಾಶಪಡಿಸುವ ಹುನ್ನಾರ. ನಮ್ಮ ನಾಗರೀಕತೆ ಏನೆಂದು ನಾವೇ ಅರಿತುಕೊಳ್ಳಬೇಕೇ ವಿನಃ ಹೊರಗಿನ ಶಕ್ತಿಗಳಿಂದ ನಮ್ಮ ಮೇಲೆ ಹೇರಿಸಿಕೊಳ್ಳಬಾರದು ಅಂತ ವಾದ ಮಂಡಿಸುತ್ತಾರೆ ಕಿಶೋರ್.

ಕಿಶೋರ್​​ರನ್ನು ಒಬ್ಬ ಪ್ರತಿಭಾವಂತ ನಟನಾಗಿ ಮಾತ್ರ ಕನ್ನಡದ ಜನತೆ ನೋಡಿ ಗುರುತಿಸಿದ್ದರು. ಆದರೆ ಅವರಲ್ಲೊಬ್ಬ ರೈತಪರ ಕಾಳಜಿ ಇರುವ ಕೃಷಿಕನಿದ್ದಾನೆ. ಸಾವಯವ ಕೃಷಿಗೆ ಆದ್ಯತೆ ನೀಡುವ ಸಾಮಾಜಿಕ ರೈತ ಹೋರಾಟಗಾರನಿದ್ದಾನೆ. ಎಲ್ಲದಕ್ಕಿಂತ ಮುಖ್ಯವಾಗಿ ಬಹುರಾಷ್ಟ್ರೀಯ ಕಂಪೆನಿಗಳ ಆರ್ಥಿಕ ಅಹಂಕಾರಕ್ಕೆ ಸೆಡ್ಡು ಹೊಡೆದು ಸ್ವದೇಶಿ ವಸ್ತುಗಳನ್ನು ಪ್ರಮೋಟ್ ಮಾಡಬಲ್ಲ ಸಜ್ಜನಿಕೆಯ ವರ್ತಕನಿದ್ದಾನೆ ಅನ್ನುವ ವಿಷಯ ಇದರಿಂದ ಬಹಿರಂಗವಾದಂತಾಗಿದೆ.

Add to
Shares
1
Comments
Share This
Add to
Shares
1
Comments
Share
Report an issue
Authors

Related Tags