ಆವೃತ್ತಿಗಳು
Kannada

ಗುಜರಿ ವ್ಯಾಪಾರಕ್ಕೆ ಹೈಟೆಕ್ ಟಚ್..! www.kasadhathoutti.comನಲ್ಲಿ ಎಲ್ಲದಕ್ಕೂ ಪರಿಹಾರ..!

ಗಿರಿ

9th Dec 2015
Add to
Shares
0
Comments
Share This
Add to
Shares
0
Comments
Share

ಗುಜರಿ ವಸ್ತುಗಳು ನಿಮ್ಮ ಮನೆಯಲ್ಲಿವೆಯೇ? ಹಾಗಾದರೆ ಕಸ ಎಂದು ಹೊರಗೆ ಎಸೆಬೇಡಿ. ಅವಕ್ಕೆ ಬೆಲೆ ಕಟ್ಟಿ ಆನ್‍ಲೈನ್ ಮೂಲಕ ಮಾರಾಟ ಮಾಡಬಹುದು.

ಅಚ್ಚರಿ ಆಯ್ತಾ? ಮನೆಯಲ್ಲಿರುವ ಗುಜರಿ ಎಂದು ಇಟ್ಟುಕೊಂಡಿರುವ ಪ್ಲಾಸ್ಟಿಕ್ ವಸ್ತುಗಳು, ಉಪಯೋಗವಿಲ್ಲದೆ ಹಾಗೇ ಬಿದ್ದಿರುವ ಕಂಪ್ಯೂಟರ್, ಮೊಬೈಲ್, ಅಪಘಾತವಾದಾಗ ತೆಗೆಸಿಟ್ಟ ಎಕ್ಸ್-ರೇಗಳನ್ನು ನಿಷ್ಪ್ರಯೋಜಕ ಪಟ್ಟಿಗೆ ಸೇರಿಸಿ ಮೂಲೆಯಲ್ಲಿ ಎಸೆದಿದ್ದರೆ ಎಲ್ಲವನ್ನೂ ಜೋಪಾನವಾಗಿಟ್ಟುಕೊಳ್ಳಿ. ಏಕೆಂದರೆ ಈ ವಸ್ತುಗಳನ್ನು ತೆಗೆದುಕೊಂಡು ಹೋಗಲು ಕಸದ ತೊಟ್ಟಿಯೇ ನಿಮ್ಮ ಮನೆಗೆ ಬರುತ್ತದೆ.

image


ಹೌದು, ಉತ್ಸಾಹಿ ಯುವಕರು ಸೇರಿ ಕಸದ ತೊಟ್ಟಿ ಎಂಬ ಹೆಸರಿನಲ್ಲಿ ಉದ್ಯಮವೊಂದನ್ನು ಶುರು ಮಾಡಿದ್ದಾರೆ. ನಿಮ್ಮ ಮನೆಯಲ್ಲಿರುವ ನಿಷ್ಪ್ರಯೋಜಕ ವಸ್ತುಗಳ ವಿವರಗಳನ್ನು www.kasadhathoutti.com ವೆಬ್‍ಸೈಟ್‍ನಲ್ಲಿ ಅಪ್‍ಲೋಡ್ ಮಾಡಿದರೆ ಸಾಕು. ಕಸದತೊಟ್ಟಿಯವರೇ ನಿಮ್ಮ ಮನೆಗೆ ಬಂದು ವಸ್ತುಗಳ ತೂಕ ಹಾಕಿ ತೆಗೆದುಕೊಂಡು ಹೋಗುತ್ತಾರೆ.

ಸಂಪೂರ್ಣ ಮಾಹಿತಿ ಲಭ್ಯ:

www.kasadhathoutti.com ಗೆ ನೀವು ಏನನ್ನು ಮಾರಲು ಬಯಸುತ್ತೀರೋ ಅದರ ವಿವರ ಭರ್ತಿ ಮಾಡಬೇಕು. ಆನಂತರ ಅದರಲ್ಲಿ ಮನೆಯ ವಿಳಾಸ, ದೂರವಾಣಿ ಸಂಖ್ಯೆಯನ್ನು ಭರ್ತಿ ಮಾಡಿ ಯಾವ ಸಮಯದಲ್ಲಿ ಬಂದರೆ ಗುಜರಿ ನೀಡಲಾಗುತ್ತದೆ ಎಂಬುದನ್ನು ತಿಳಿಸಬೇಕು. ನೀವು ತಿಳಿಸಿದ ಸಮಯಕ್ಕೆ ಕಸದ ತೊಟ್ಟಿಯವರು ಮನೆಗೆ ಬಂದು ಗುಜರಿಗಳನ್ನು ತೂಕ ಮಾಡಿ, ಅದಕ್ಕೆ ತಕ್ಕ ಬೆಲೆಯನ್ನು ನಿಮಗೆ ನೀಡುತ್ತಾರೆ.

image


ಕಸಕ್ಕೆ ಹೊಸ ರೂಪ:

ಹೀಗೆ ನಿಮ್ಮಿಂದ ಗುಜರಿ ಖರೀದಿಸಿದ ನಂತರ ಅದಕ್ಕೆ ಹೊಸ ರೂಪ ನೀಡಲಾಗುತ್ತದೆ. ಆ ವಸ್ತುಗಳನ್ನು ಪುನರ್ ಬಳಕೆ ಘಟಕಗಳಿಗೆ ಕಳುಹಿಸಿ ಅಲ್ಲಿ ಗುಜರಿಗಳಿಂದ ಹೊಸ ವಸ್ತುವನ್ನು ತಯಾರಿಸಲಾಗುತ್ತದೆ. ನಿರುಪಯುಕ್ತ ಕಂಪ್ಯೂಟರ್‍ನ ಬಿಡಿ ಭಾಗ, ಎಕ್ಸ್-ರೇ ಫಿಲಂಗಳನ್ನು ಖರೀದಿಸುವರ ಸಂಖ್ಯೆ ತೀರಾ ಕಡಿಮೆ. ಕಂಪ್ಯೂಟರ್ ಬಿಡಿ ಭಾಗಗಳಲ್ಲಿ ಕೆಲವೊಂದರಲ್ಲಿ ಮತ್ತು ಎಕ್ಸ್-ರೇ ಫಿಲಂಗಳಲ್ಲಿ ಬೆಳ್ಳಿಯ ಅಂಶವಿದ್ದು, ಅದನ್ನು ವೆಬ್‍ಸೈಟ್‍ನವರು ತೆಗೆಯುತ್ತಾರೆ.

ಎಸ್​​ಎಸ್​​ಎಲ್​​ಸಿ ಓದಿದವನಿಂದ ಗುಜರಿ ಖರೀದಿ:

ಕಸದ ತೊಟ್ಟಿ ವೆಬ್‍ಸೈಟ್‍ನ ರುವಾರಿ ಚಂದ್ರಶೇಖರ್. ಇವರು ವ್ಯಾಸಂಗ ಮಾಡಿರುವುದು ಎಸ್ಸೆಸ್ಸೆಲ್ಸಿ ಮಾತ್ರ. ಮೊದ ಮೊದಲು ಮನೆ ಮನೆಗೆ ಹೋಗಿ ಗುಜರಿಗಳನ್ನು ಖರೀದಿಸಿ ತರುತ್ತಿದ್ದರು. ತಮ್ಮ ವ್ಯಾಪಾರಕ್ಕೆ ಹೊಸದೊಂದು ಟಚ್ ನೀಡುವ ಉದ್ದೇಶದಿಂದಾಗಿ ಗುಜರಿ ವ್ಯಾಪಾರವನ್ನು ಆನ್‍ಲೈನ್ ಮಾಡಿದ್ದಾರೆ. ಅದರಲ್ಲಿ ಯಶವನ್ನೂ ಕಂಡಿದ್ದಾರೆ. “ತನ್ನ ಉದ್ಯೋಗದಲ್ಲಿ ವಿನೂತನವಾದ ಪ್ರಯೋಗ ಮಾಡುವ ಉದ್ದೇಶದಿಂದಾಗಿ ಗುಜರಿ ವ್ಯಾಪಾರಕ್ಕೆ ಆನ್‍ಲೈನ್ ಮಾಡಿದ್ದೇನೆ. ಅದಕ್ಕೆ ಜನರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈಗಾಗಲೆ ಸಾವಿರಾರು ಕೆಜಿಯಷ್ಟು ಗುಜರಿ ಖರೀದಿಸಿದ್ದೇನೆ” ಎಂದು ಹೇಳುತ್ತಾರೆ ಚಂದ್ರಶೇಖರ್.

image


ಏನೆಲ್ಲಾ ಖರೀದಿ:

ವೆಬ್‍ಸೈಟ್‍ನಲ್ಲಿ ಕಂಪ್ಯೂಟರ್ ಬಿಡಿಭಾಗ, ಎಕ್ಸ್-ರೇ ಫಿಲಂಗಳೊಂದಿಗೆ ಎಣ್ಣೆಯ ಕವರ್, ಅಲ್ಯೂಮಿನಿಯಂ, ಬ್ಯಾಟರಿ, ಪುಸ್ತಕಗಳು, ಹಿತ್ತಾಳೆ, ತಾಮ್ರ, ಹಾಲಿನ ಕವರ್, ವೇಸ್ಟ್ ಅಡುಗೆ ಎಣ್ಣೆ, ಇಂಜಿನ್ ಆಯಿಲ್ ಹೀಗೆ ಪ್ರತಿಯೊಂದು ವಸ್ತುವು ವೆಬ್‍ಸೈಟ್‍ನಲ್ಲಿ ಬಿಕರಿಯಾಗುತ್ತವೆ. ಅಲ್ಲದೆ ಪ್ರತಿಯೊಂದಕ್ಕೂ ಒಂದೊಂದು ದರ ನಿಗದಿ ಮಾಡಲಾಗಿದೆ. ಕೆಜಿ ಲೆಕ್ಕದಲ್ಲಿ ಖರೀದಿಸಲಾಗುತ್ತದೆ. ಹಿತ್ತಾಳೆಗೆ 250 ರೂ. ನೀಡಿದರೆ, ಬಾಟಲಿಗೆ 1 ರೂ. ನೀಡಲಾಗುತ್ತದೆ. ಹೀಗೆ ಪ್ರತಿಯೊಂದು ವಸ್ತುವಿಗೂ ಸದ್ಯ ಮಾರುಕಟ್ಟೆಯಲ್ಲಿನ ಬೆಲೆಗೆ ತಾಳೆ ಹಾಕಿ ದರ ನಿಗದಿ ಮಾಡಲಾಗಿದೆ.

ಸದ್ಯದಲ್ಲೇ ಡಸ್ಟ್ ಬಿನ್:

ಕಳೆದ ಎರಡು ವರ್ಷಗಳಿಂದ ಕನ್ನಡದಲ್ಲಿದ್ದ ವೆಬ್‍ಸೈಟ್‍ಗೆ ಬೇರೆ ರೂಪ ನೀಡಲು ಚಂದ್ರಶೇಖರ್ ಮುಂದಾಗಿದ್ದಾರೆ. ಇದೀಗ ಇಂಗ್ಲೀಷ್‍ನಲ್ಲಿ ವೆಬ್‍ಸೈಟ್ ಶುರು ಮಾಡುವ ಪ್ಲಾನ್ ಹಾಕಿಕೊಂಡಿದ್ದು, ಅದಕ್ಕೆ ‘ಡಸ್ಟ್ ಬಿನ್’ ಎಂದು ಹೆಸರಿಡಲು ನಿರ್ಧರಿಸಿದ್ದಾರೆ. ಈಗಾಗಲೆ ಅದಕ್ಕಾಗಿ ಕೆಲಸ ಶುರು ಮಾಡಲಾಗಿದ್ದು, ಇನ್ನು ಕೆಲವೇ ತಿಂಗಳಲ್ಲಿ ಡಸ್ಟ್ ಬಿನ್ ನಿಮ್ಮ ಮನೆಯ ತ್ಯಾಜ್ಯ ಮಾರಾಟಕ್ಕೆ ಲಭ್ಯವಾಗಲಿದೆ. ಅದರೊಂದಿಗೆ ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಇತರೆ ನಗರಗಳಲ್ಲೂ ತಮ್ಮ ಈ ಗುಜರಿ ವ್ಯಾಪಾರ ವಿಸ್ತರಿಸುವ ಪ್ಲಾನ್ ಹೊಂದಿದ್ದಾರೆ ಕಸದ ತೊಟ್ಟಿಯವರು.

Add to
Shares
0
Comments
Share This
Add to
Shares
0
Comments
Share
Report an issue
Authors

Related Tags