ಆವೃತ್ತಿಗಳು
Kannada

ಎದೆಹಾಲು ಸಂಗ್ರಹಿಸುವ ವಿಶಿಷ್ಟ ಬ್ಯಾಂಕ್​ - 1900 ಕಂದಮ್ಮಗಳಿಗೆ ಜೀವದಾನ

ಟೀಮ್​ ವೈ.ಎಸ್.ಕನ್ನಡ

YourStory Kannada
6th Feb 2016
1+ Shares
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on

ಅದು 2013ರ ಎಪ್ರಿಲ್ ತಿಂಗಳು. ದೇಶದಲ್ಲೇ ವಿಶಿಷ್ಟವಾದ ಎದೆಹಾಲಿನ ಬ್ಯಾಂಕ್​ ಒಂದನ್ನು ಉದಯಪುರದಲ್ಲಿ ಸ್ಥಾಪಿಸಲಾಗಿತ್ತು. ಇದುವರೆಗೆ ಆ ಬ್ಯಾಂಕ್​ನಲ್ಲಿ 3200ಕ್ಕೂ ಹೆಚ್ಚು ತಾಯಂದಿರು ಎದೆಹಾಲನ್ನು ದಾನ ಮಾಡಿದ್ದಾರೆ. ವಿಶೇಷ ಅಂದ್ರೆ '' ದಿವ್ಯ ಮದರ್​ ಮಿಲ್ಕ್​ ಬ್ಯಾಂಕ್​'' ಈವರೆಗೆ 1900ಕ್ಕೂ ಹೆಚ್ಚು ಹಸುಗೂಸುಗಳನ್ನು ಬದುಕಿಸಿದೆ.

image


ನವಜಾತ ಶಿಶುಗಳ ಪಾಲಿಗೆ ತಾಯಿಯ ಹಾಲು ಅಮೃತವಿದ್ದಂತೆ. ಸಂಶೋಧನೆಯ ಪ್ರಕಾರ ಹುಟ್ಟಿದ ತಕ್ಷಣ ಮರಣ ಹೊಂದುವ 100 ಮಕ್ಕಳ ಪೈಕಿ 16 ಮಕ್ಕಳನ್ನು ತಾಯಿಯ ಹಾಲಿದ್ದರೆ ಬದುಕಿಸಬಹುದು. ಆದ್ರೆ ಅನೇಕ ಕಾರಣಗಳಿಂದ ಕಂದಮ್ಮಗಳು ತಾಯಿಯ ಹಾಲಿನಿಂದ ವಂಚಿತರಾಗುತ್ತಾರೆ. ಇದನ್ನು ಗಮನದಲ್ಲಿರಿಸಿಕೊಂಡು ರಾಜಸ್ತಾನದ ಉದಯಪುರದಲ್ಲಿರುವ ಯೋಗ ಗುರು ದೇವೇಂದ್ರ ಅಗರ್ವಾಲ್ ಅವರ ಸಂಸ್ಥೆ ''ಮಾ ಭಗವತಿ ವಿಕಾಸ ಸಂಸ್ಥಾನ '' ''ದಿವ್ಯ ಮದರ್ ಮಿಲ್ಕ್ ಬ್ಯಾಂಕ್​ '' ಅನ್ನು ಆರಂಭಿಸಿದೆ. ಈ ಬ್ಯಾಂಕ್​ ತಾಯಂದಿರಿಂದ ಎದೆಹಾಲು ಸಂಗ್ರಹಿಸಿ ಅಗತ್ಯವಿರುವ ಮಕ್ಕಳಿಗೆ ಅದನ್ನು ಪೂರೈಸುತ್ತಿದೆ. ಈ ಬ್ಯಾಂಕ್​ನ ಸಫಲತೆಯನ್ನು ನೋಡಿ ರಾಜ್ಯ ಸರ್ಕಾರ ಕೂಡ ಈ ಯೋಜನೆಯನ್ನು ತನ್ನ ಬಜೆಟ್​ನಲ್ಲಿ ಸೇರ್ಪಡೆ ಮಾಡಿದೆ. ಇಂತಹ 10 ಮದರ್​ ಬ್ಯಾಂಕ್​ಗಳನ್ನು ತೆರೆಯುವುದಾಗಿ ಘೋಷಣೆ ಮಾಡಿದೆ. ಈ ಯೋಜನೆಗಾಗಿ ರಾಜಸ್ತಾನ ಸರ್ಕಾರ 10 ಕೋಟಿ ರೂಪಾಯಿಗಳನ್ನು ಮೀಸಲಾಗಿರಿಸಿದೆ.

ತಮ್ಮ ಸಂಸ್ಥೆ ಮಹೇಶಾಶ್ರಮದ ಉದ್ದೇಶವನ್ನು ಈ ಬ್ಯಾಂಕ್​ ಮೂಲಕ ಗುರು ದೇವೇಂದ್ರ ಅಗರ್ವಾಲ್​ ಸಾಕಾರಗೊಳಿಸಿದ್ದಾರೆ. ಕೆಲ ನಿಷ್ಕರುಣಿ ಸ್ತ್ರೀಯರು ಹೆಣ್ಣು ಮಗು ಎಂಬ ಕಾರಣಕ್ಕೆ ಮಕ್ಕಳನ್ನು ಬೀದಿ ಬದಿಯಲ್ಲಿ ಬಿಸಾಡಿ ಹೋಗ್ತಾರೆ. ಅಂತಹ ಮಕ್ಕಳಿಗೆ ಆಸರೆಯಾಗಬೇಕು ಅನ್ನೋದು ಯೋಗ ಗುರು ನರೇಂದ್ರ ಅವರ ಮಹದಾಸೆ. ಈ ಆಶ್ರಮದಲ್ಲೇ ಅನಾಥ ಮಕ್ಕಳನ್ನು ಬೆಳೆಸಲಾಗುತ್ತದೆ. ಉದಯಪುರ ಸೇರಿದಂತೆ ಹಲವು ಕಡೆ ಮಾ ಭಗವತಿ ವಿಕಾಸ ಸಂಸ್ಥಾನದ ಶಾಖೆಗಳಿಗೆ. ಯಾರು ಬೇಕಾದ್ರೂ ಬಂದು ತಮ್ಮ ಹೆಣ್ಣು ಶಿಶುಗಳನ್ನು ಆಶ್ರಮಕ್ಕೆ ನೀಡಬಹುದು. ಇದುವರೆಗೆ ಸಂಸ್ಥಾನ 125 ಹೆಣ್ಣು ಮಕ್ಕಳನ್ನು ಪೋಷಿಸಿದೆ. ಮಹೇಶಾಶ್ರಮದಲ್ಲೇ ಐಸಿಯು ಇದ್ದು, ವಿಶ್ವದರ್ಜೆಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಜ್ವರ , ನೆಗಡಿ ಮುಂತಾದ ಸಮಸ್ಯೆಗಳಿಂದ ಬಳಲುತ್ತಿರುವ ಹಸುಗೂಸುಗಳಿಗೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತದೆ.

image


ನಾನಾ ಕಾರಣಗಳಿಂದ ಐಸಿಯುನಲ್ಲಿರುವ ನವಜಾತ ಶಿಶುಗಳ ಪೈಕಿ ಕೆಲವರನ್ನಾದ್ರೂ ತಾಯಿಯ ಹಾಲು ಪೂರೈಸುವ ಮೂಲಕ ಬದುಕಿಸಬಹುದೆಂದು ಯೋಗ ಗುರು ದೇವೇಂದ್ರ ಅವರಿಗೆ ಅನಿಸಿತ್ತು. ಇಂತಹ ಪ್ರಯತ್ನವನ್ನು ಎಲ್ಲಿ ಮಾಡಲಾಗ್ತಿದೆ ಅನ್ನೋ ಬಗ್ಗೆ ಅವರು ಮಾಹಿತಿ ಸಂಗ್ರಹಿಸಿದ್ರು. ಬ್ರೆಜಿಲ್​ನಲ್ಲಿ ತಾಯಿಯ ಎದೆಹಾಲು ಸಂಗ್ರಹಿಸಿ ಮಕ್ಕಳಿಗೆ ನೆರವಾಗುವ ದೊಡ್ಡ ನೆಟ್​ವರ್ಕ್​ ಇದೆ ಅನ್ನೋದು ಅವರ ಅರಿವಿಗೆ ಬಂತು. ಕೂಡಲೇ ಉದಯಪುರದಲ್ಲೂ ಈ ಬ್ಯಾಂಕ್​ ಸ್ಥಾಪಿಸಲು ಪ್ರಯತ್ನ ಆರಂಭಿಸಿದ್ರು. ಇದಕ್ಕಾಗಿ ಅವರು ರಾಜಸ್ತಾನ ಸರ್ಕಾರದ ನೆರವನ್ನು ಕೂಡ ಪಡೆದ್ರು. ಸರ್ಕಾರ ಕೂಡ ಇದಕ್ಕೆ ಸಂತೋಷದಿಂದ್ಲೇ ಸಮ್ಮತಿಸಿದ್ದು, ಸದ್ಯ ಆರ್​ಎನ್​ಟಿ ಪನ್ನಾಧಾಯಿ ಸರ್ಕಾರಿ ಮೆಡಿಕಲ್​ ಕಾಲೇಜಿನಲ್ಲಿ ಈ ಬ್ಯಾಂಕ್​ ಕಾರ್ಯನಿರ್ವಹಿಸುತ್ತಿದೆ.


ಈ ಬ್ಯಾಂಕನ್ನು ''ಹ್ಯೂಮನ್​ ಮಿಲ್ಕ್​ ಬ್ಯಾಂಕಿಂಗ್​ ಅಸೋಸಿಯೇಶನ್​ ಆಪ್​ ನಾರ್ತ್​ ಅಮೆರಿಕಾದ'' ನಿರ್ದೇಶನದಂತೆ ನಿರ್ಮಾಣ ಮಾಡಲಾಗಿದೆ. ಬ್ಯಾಂಕ್​ನ ನಿರ್ವಹಣೆ ಮತ್ತು ಸಿಬ್ಬಂದಿಯ ಖರ್ಚು ವೆಚ್ಚಗಳನ್ನೆಲ್ಲ ಯೋಗ ಗುರು ದೇವೇಂದ್ರ ಅಗರ್ವಾಲ್​ ಅವರ ​ ಸಂಸ್ಥಾನವೇ ನೋಡಿಕೊಳ್ಳುತ್ತಿದೆ. ಇಲ್ಲಿ ಸಂಗ್ರಹವಾಗುವ ಹಾಲನ್ನು ಆಸ್ಪತ್ರೆಗಳ ಐಸಿಯುನಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿರುವ ಮಕ್ಕಳಿಗೆ ತಲುಪಿಸಲಾಗುತ್ತದೆ. ಇದುವರೆಗೆ ಈ ಬ್ಯಾಂಕ್​ನಲ್ಲಿ 3200ಕ್ಕೂ ಹೆಚ್ಚು ಮಹಿಳೆಯರು 7500 ಕ್ಕೂ ಹೆಚ್ಚು ಬಾರಿ ಎದೆಹಾಲನ್ನು ದಾನ ಮಾಡಿದ್ದಾರೆ. ದಿವ್ಯ ಮದರ್​ ಮಿಲ್ಕ್​ ಬ್ಯಾಂಕ್​ ಮೂಲಗಳ ಪ್ರಕಾರ ಇದುವರೆಗೆ ಎದೆಹಾಲಿನಿಂದ 1900 ಶಿಶುಗಳ ಜೀವ ಉಳಿಸಲಾಗಿದೆ.

imageದೇವೇಂದ್ರ ಅಗರ್ವಾಲ್​ ಅವರ ಪ್ರಕಾರ ''ಈ ಬ್ಯಾಂಕ್​ನಲ್ಲಿ ಮೂರು ಬಗೆಯ ದಾನಿಗಳಿದ್ದಾರೆ. ಕೆಲವರಲ್ಲಿ ಮಕ್ಕಳಿಗೆ ಅಗತ್ಯಕ್ಕಿಂತ ಹೆಚ್ಚು ಎದೆಹಾಲು ಸಂಗ್ರಹವಾಗಿರುತ್ತದೆ, ಇನ್ನು ಕೆಲವರ ಮಕ್ಕಳನ್ನು ಚಿಕಿತ್ಸೆಗಾಗಿ ಐವಿಯಲ್ಲಿಟ್ಟಿರ್ತಾರೆ ಹಾಗಾಗಿ ತಾಯಿ ಮಗುವಿಗೆ ಹಾಲುಣಿಸಲು ಸಾಧ್ಯವಾಗುವುದಿಲ್ಲ, ಅವರು ಇಲ್ಲಿ ಬಂದು ಎದೆಹಾಲನ್ನು ದಾನ ಮಾಡುತ್ತಾರೆ. ಇನ್ನು ಕೆಲವರು ಹುಟ್ಟುತ್ತಲೇ ಮಗುವನ್ನು ಕಳೆದುಕೊಂಡಿರುತ್ತಾರೆ, ಆದ್ರೆ ಅವರ ಮೇಲೆ ಹಾಲು ದಾನ ಮಾಡುವಂತೆ ಒತ್ತಡ ಹಾಕುವುದಿಲ್ಲ''. ಜನರು ಬೇಕಾದರೆ ರಕ್ತದಾನ ಮಾಡುತ್ತಾರೆ, ಆದ್ರೆ ತಮ್ಮ ಮಗುವಿನ ಪಾಲಿನ ಎದೆಹಾಲನ್ನು ದಾನ ಮಾಡುವುದಿಲ್ಲ ಎಂದೇ ಆರಂಭದಲ್ಲಿ ಜನ ಮಾತನಾಡಿಕೊಳ್ಳುತ್ತಿದ್ದರಂತೆ.

ದಾನಿಗಳಿಂದ ಎದೆಹಾಲನ್ನು ಪಡೆದುಕೊಳ್ಳುವ ಮೊದಲು ಅವರು ಯಾವುದಾದರೂ ರೋಗದಿಂದ ಬಳಲುತ್ತಿದ್ದಾರಾ ಎಂಬುದನ್ನು ಪರೀಕ್ಷೆ ಮಾಡಲಾಗುತ್ತದೆ. ಮಾದಕ ವಸ್ತುಗಳ ಸೇವನೆ ಮಾಡುತ್ತಾರಾ ಎಂಬುದನ್ನೂ ಪರಿಶೀಲಿಸಲಾಗುತ್ತದೆ. ಇಲ್ಲಿ ಎದೆಹಾಲು ದಾನ ಮಾಡುವ ಮುನ್ನ ತಮ್ಮ ಮಗುವಿಗೆ ಹಾಲುಣಿಸುವಂತೆ ತಾಯಿಗೆ ಸೂಚಿಸಲಾಗುತ್ತದೆ. ಬಳಿಕ ಬ್ರೆಸ್ಟ್​ ಪಂಪ್​ ಮೂಲಕ ಹಾಲನ್ನು ಪಡೆದುಕೊಳ್ಳುತ್ತಾರೆ.

image


ಮಿಲ್ಕ್​ ಬ್ಯಾಂಕ್​ನಲ್ಲಿರುವ ಹಾಲನ್ನು ವಿಶೇಷ ಪ್ರಕ್ರಿಯೆ ಮೂಲಕ ಸಂಗ್ರಹಿಸಿ ಇಡಲಾಗುತ್ತದೆ. ಮೊದಲು ಅದನ್ನು ಮೈನಸ್​ ಡಿಗ್ರಿ ತಾಪಮಾನದಲ್ಲಿಟ್ಟು, ದಾನಿ ಮಹಿಳೆಯ ರಕ್ತ ಪರೀಕ್ಷೆ ವಿವರ ಬಂದಮೇಲೆ ಅದನ್ನು ಸ್ವೀಕರಿಸಲಾಗುತ್ತದೆ. ಹಾಲನ್ನು ಕೂಡ ಪರೀಕ್ಷೆಗೆ ಕಳುಹಿಸಿ ಸುರಕ್ಷಿತ ಎಂಬುದು ದೃಢಪಟ್ಟ ಮೇಲೆ ಮಕ್ಕಳಿಗೆ ನೀಡಲಾಗುತ್ತದೆ. ವಿಶೇಷ ಅಂದ್ರೆ 3 ತಿಂಗಳುಗಳ ವರೆಗೆ ಎದೆಹಾಲನ್ನು ಇಲ್ಲಿ ಸಂಗ್ರಹಿಸಿ ಇಡಬಹುದು.

image


ಇದು ದೇಶದ ಮೊಟ್ಟ ಮೊದಲ ಕಮ್ಯೂನಿಟಿ ಮಿಲ್ಕ್​ ಬ್ಯಾಂಕ್​. ಎದೆಹಾಲು ಸಂಗ್ರಹಕ್ಕಾಗಿ ದಿವ್ಯ ಮದರ್​ ಮಿಲ್ಕ್​ ಬ್ಯಾಂಕ್​ ವಿವಿಧೆಡೆ ಶಿಬಿರಗಳನ್ನು ಕೂಡ ಆಯೋಜಿಸುತ್ತದೆ. ಕೇವಲ ರಾಜಸ್ತಾನ ಮಾತ್ರವಲ್ಲ, ಉತ್ತರ ಪ್ರದೇಶ ಮತ್ತು ಹರಿಯಾಣದಲ್ಲಿ ಕೂಡ ಮಿಲ್ಕ್​ ಬ್ಯಾಂಕ್​ ಆರಂಭಿಸಲು ಯೋಗ ಗುರು ದೇವೇಂದ್ರ ಅಗರ್ವಾಲ್ ಯೋಜನೆ ಹಾಕಿಕೊಂಡಿದ್ದಾರೆ.

ಲೇಖಕರು : ಹರೀಶ್​ ಬಿಶ್ತ್​

ಅನುವಾದಕರು : ಭಾರತಿ ಭಟ್

1+ Shares
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
Report an issue
Authors

Related Tags