ಆವೃತ್ತಿಗಳು
Kannada

ಬಡ ಮಕ್ಕಳ ಪಾಲಿಗೆ ಬದುಕಿನ ಭರವಸೆ ‘ದೀಪಾಲಯ’

ಟೀಮ್​ ವೈ.ಎಸ್​. ಕನ್ನಡ

3rd Jan 2016
Add to
Shares
2
Comments
Share This
Add to
Shares
2
Comments
Share

ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಈಗಲೂ ಬಾಲ್ಯ ವಿವಾಹ ಪದ್ಧತಿ ಆಚರಣೆಯಲ್ಲಿದೆ. ಪ್ರಮುಖವಾಗಿ ಹರಿಯಾಣ, ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯ ಪ್ರದೇಶದಲ್ಲಿ ಬಾಲಕಿಯರನ್ನು 14-15ನೇ ವಯಸ್ಸಿನಲ್ಲೇ ಮದುವೆ ಮಾಡಲಾಗುತ್ತದೆ. ಉತ್ತರ ಭಾರತದಲ್ಲಿ ಈ ಆಚರಣೆ ಹೆಚ್ಚಿರಲು ಮುಖ್ಯವಾಗಿ ಪೋಷಕರು ಅವಿದ್ಯಾವಂತರಾಗಿರುವುದೇ ಕಾರಣವಾಗಿರುತ್ತದೆ. ಇಲ್ಲಿನ ರಾಜ್ಯಗಳ ಗ್ರಾಮೀಣ ಭಾಗಗಳಲ್ಲಿ ಪೋಷಕರು ಮಕ್ಕಳಿಗೆ ಅದರಲ್ಲೂ ಬಾಲಕಿಯರಿಗೆ ಸಣ್ಣ ವಯಸ್ಸಿನಲ್ಲೇ ಅಂದರೆ ಅವರು ಶಾಲೆಗೆ ಹೋಗುತ್ತಿರುವ ಸಂದರ್ಭದಲ್ಲೇ ವಿದ್ಯಾಭ್ಯಾಸವನ್ನು ಅರ್ಧದಲ್ಲೇ ಮೊಟಕುಗೊಳಿಸಿ ಮದುವೆ ಮಾಡುತ್ತಾರೆ. ಇಂಥದ್ದೇ ಒಂದು ಬಾಲಕಿಯ ಕರುಣಾಜನಕ ಕತೆ ಇಲ್ಲಿದೆ.

image


ಅದು ಹರಿಯಾಣ ರಾಜ್ಯದ ಸೋಲಾಹ್ ಪಟ್ಟಿ ಎಂಬ ಪ್ರದೇಶ. ಆ ಊರಿನಲ್ಲಿ ವಾಸಿಸುವ ಹೆಚ್ಚಿನವರು ಬಡವರು. ಅದರಲ್ಲೂ ಪ್ರಮುಖವಾಗಿ ಅವಿದ್ಯಾವಂತರು. ಆ 14 ವರ್ಷದ ಬಾಲಕಿಯ ಹೆಸರು ಶಹೀನಾ. ಈಕೆಯ ಜೀವನದ ಪ್ರಮುಖ ಘಟ್ಟವಾದ ಬಾಲ್ಯಾವಸ್ಥೆ ಇನ್ನೇನು ಕೆಲವೇ ದಿನಗಳಲ್ಲಿ ಅಂತ್ಯ ಕಾಣಲಿದೆ. ಯಾಕಂದ್ರೆ ಶಹೀನಾಳಿಗೆ ಪೋಷಕರು ಮದುವೆ ಮಾಡಲು ನಿರ್ಧರಿಸಿದ್ದಾರೆ. ತನ್ನ ಪಕ್ಕದ ಮನೆ ಹುಡುಗಿಯರ ಜೊತೆ ಕುಂಟಾಬಿಲ್ಲೆಯೋ, ಹಗ್ಗದಾಟವನ್ನೋ ಆಡಿಕೊಂಡಿರಬೇಕಿದ್ದ ಆಕೆಗೆ ಇನ್ನು ಮುಂದೆ ಸಂಸಾರದ ಹೊರೆ ಹೊರಬೇಕಾದ ಅನಿವಾರ್ಯತೆ ಎದುರಾಗಿದೆ. ಇದು ಆಕೆಗೆ ಇಷ್ಟವಿದೆಯೋ ಇಲ್ಲವೋ ಗೊತ್ತಿಲ್ಲ..! ಆದರೂ ಪೋಷಕರ ಒತ್ತಾಯಕ್ಕೆ ಮಣಿದು ಹಸೆಮಣೆ ಏರಲೇ ಬೇಕಾದ ಆವಶ್ಯಕತೆ ಬಂದಿದ್ದಂತೂ ಸತ್ಯ.

ಆಕೆಯ ಕಡುಗಪ್ಪು ಕಣ್ಣುಗಳಲ್ಲಿ ಹಾಗೂ ನೀಲಿ ದುಪಟ್ಟಾದೊಳಗೆ ಮರೆಯಾಗಿದ್ದ ಮುಖದಲ್ಲಿ ಉಳಿದೆಲ್ಲಾ ಮಕ್ಕಳಂತೆಯೇ ಬಾಲ್ಯದ ಸುಮಧುರ ಕ್ಷಣಗಳನ್ನು ಕಳೆಯುವ ಆಸೆ ಮೂಡಿತ್ತು. ಆಕೆಗೆ ಇದು ಒಂದು ರೀತಿಯಲ್ಲಿ ಅಭ್ಯಾಸವಾಗಿತ್ತು. ಆದರೆ ಬದುಕಿನ ಈ ಪ್ರಮುಖ ಘಟ್ಟವನ್ನು ಉಳಿದೆಲ್ಲಾ ವಿದ್ಯಾರ್ಥಿಗಳಂತೆಯೇ ಕಳೆಯಲು ಆಕೆಗೆ ಸಹಾಯ ಮಾಡಿದ್ದು ಗುಸ್ಬೇಠಿ ಗ್ರಾಮದ ದೀಪಾಲಯ ಶಾಲೆ. ಈ ಶಾಲೆಯಲ್ಲಿ ಶಹೀನಾಳೇನೋ ಯಶಸ್ವಿಯಾಗಿ ತನ್ನ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದ್ದಳು. ಆದರೆ ಆಕೆಯದ್ದೇ ಗ್ರಾಮದ ಹಲವು ಬಾಲಕಿಯರು ಶಾಲೆಯ ಮೆಟ್ಟಿಲುಗಳನ್ನೇ ಹತ್ತದೆ ಪೋಷಕರ ಒತ್ತಡಕ್ಕೆ ಮಣಿದು ಬಾಲ್ಯವಿವಾಹವಾಗಿ ತಮ್ಮ ಬದುಕಿನ ಕನಸುಗಳನ್ನೇ ಕಳೆದುಕೊಂಡಿದ್ದರು.

image


ದೀಪಾಲಯ ಬೆಳೆದು ಬಂದ ಹಾದಿ..

ಹೆಸರೇ ಹೇಳುವಂತೆ ಇದು ಹೊಸ ಬದುಕಿಗೆ ಮುನ್ನುಡಿ ಇಡುವ ಆಲಯ ಎಂದರೂ ತಪ್ಪಿಲ್ಲ. ಜೀವನಕ್ಕೊಂದು ದಾರಿಯನ್ನು ತೋರಿಸುವ ಶಾಲೆ ಇದಾಗಿದೆ.

ದೀಪಾಲಯವು 1979ರಲ್ಲಿ ಜನ್ಮ ತಾಳಿದ್ದು, ISO 9001-2008 ಸರ್ಟಿಫಿಕೇಟ್ ಪಡೆದ ಸ್ವಯಂ ಸೇವಾ ಸಂಸ್ಥೆಯಾಗಿದ್ದು, ಗ್ರಾಮೀಣ ಭಾಗದ ಬಡ ಜನರ ಜೀವನ ಸುಧಾರಣೆ ಮಾಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ದೆಹಲಿ, ಹರಿಯಾಣ, ಉತ್ತರಾಖಂಡ, ಉತ್ತರ ಪ್ರದೇಶ ರಾಜ್ಯಗಳಲ್ಲಿ ಇದು ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ಇಲ್ಲಿಯವರೆಗೂ ದೀಪಾಲಯವು ಸುಮಾರು 2,70,000 ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಿದೆ.

ಕೇವಲ ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವುದಲ್ಲದೆ ಅವರ ಜೀವನದಲ್ಲೂ ಒಂದಷ್ಟು ಬದಲಾವಣೆ ತರುವ ನಿಟ್ಟಿನಲ್ಲಿ ದೀಪಾಲಯವು ಹಲವು ಮಹತ್ತರ ಹೆಜ್ಜೆಗಳನ್ನಿಟ್ಟಿದೆ.

ಮೇಲೆ ಹೇಳಿದ ಶಹೀನಾ ಎಂಬ ವಿದ್ಯಾರ್ಥಿನಿ ಓದಿದ್ದು ಪ್ರಾಥಮಿಕ ಶಿಕ್ಷಣವನ್ನು ಮಾತ್ರ. ಇದರಿಂದ ಆಕೆ ಯಾವುದೇ ಕೆಲಸಕ್ಕೂ ಸೇರಲಿಲ್ಲ. ಬದಲಾಗಿ ವಿದ್ಯಾಭ್ಯಾಸ ಮುಗಿಸಿ ಮದುವೆಯಾಗಿ ಗಂಡನ ಮನೆ ಸೇರಿದಳು. ಆದರೆ ದೀಪಾಲಯದ ಸಹಾಯದಿಂದ ಇಷ್ಟನ್ನಾದರೂ ಪೂರ್ತಿಗೊಳಿಸಿದ್ದ ಆಕೆಗೆ ಜೀವನದಲ್ಲಿ ಶಿಕ್ಷಣದ ಮಹತ್ವವೇನು ಎಂಬ ಅರಿವಾಗಿರಬಹುದು. ಹೀಗಾಗಿ ತನ್ನ ಮಗಳು ತನ್ನಂತೆ ಬದುಕು ನಡೆಸುವ ಬದಲಾಗಿ ಒಂದಷ್ಟು ವಿದ್ಯೆ ಕಲಿತು ಏನಾದರೂ ಸಾಧಿಸಲಿ ಎನ್ನುವ ಬದಲಾವಣೆ ಮೂಡಿದರೆ ಅದು ದೀಪಾಲಯದ ನಿಜವಾದ ಗೆಲುವು.

image


ಇಷ್ಟೆಲ್ಲ ಸಾಧಿಸಿದ್ದರೂ ದೀಪಾಲಯವು ಸವೆಸಿದ ಹಾದಿ ಕಠಿಣವಾಗಿದ್ದಾಗಿತ್ತು. ಏಕೆಂದರೆ ಅವರು ಸರ್ಕಾರದ ಯಾವುದೇ ಅನುದಾನ ಬಳಸಿಕೊಂಡು ತಮ್ಮ ಶಾಲೆಯನ್ನು ನಡೆಸುತ್ತಿಲ್ಲ. ಬದಲಾಗಿ ಜನತೆ, ಸಂಘ ಸಂಸ್ಥೆಗಳು ನೀಡಿದ ದಾನವನ್ನು ಸ್ವೀಕರಿಸಿ ಉಚಿತ ಶಿಕ್ಷಣ ನೀಡುತ್ತಿವೆ. ಇದರ ಜೊತೆಯಲ್ಲಿ ಪ್ರತಿ ತಿಂಗಳು ಶಾಲೆಗೆ ಬರುವ ಪ್ರತಿಯೊಬ್ಬ ವಿದ್ಯಾರ್ಥಿಯಿಂದ ಕನಿಷ್ಠ ಮಟ್ಟದ ಹಣವನ್ನು ಪಡೆಯುತ್ತಿದೆ. (ಗಂಡು ಮಗುವಿನಿಂದ ರೂ. 220 ಹಾಗೂ ಹೆಣ್ಣು ಮಗುವಿನಿಂದ ರೂ. 75ನ್ನು ಸ್ವೀಕರಿಸುತ್ತಿದೆ.) ಆದರೆ ಹಲವೆಡೆಗಳಲ್ಲಿ ಹೀಗೆ ಪಡೆಯುವ ಹಣವೇ ಅತಿ ಹೆಚ್ಚಾಗಿದೆ ಎಂದು ಹಲವು ವಿದ್ಯಾರ್ಥಿಗಳು ಗಲಾಟೆಯನ್ನೂ ಮಾಡುತ್ತಾರೆ.

image


ದೀಪಾಲಯ ಶಾಲೆಯು ಪ್ರಮುಖವಾಗಿ ಭಿಕ್ಷೆ ಬೇಡಿ ಜೀವನ ನಡೆಸುವ ಬಾಲಕರು, ಮನೆ ಬಿಟ್ಟು ಓಡಿ ಬಂದಿರುವ ಹಾಗೂ ಅನಾಥ ಮಕ್ಕಳು ಸೇರಿದಂತೆ ಸಮಾಜದ ಕೆಳವರ್ಗದ ಮಕ್ಕಳಿಗೆ ಶಿಕ್ಷಣ ನೀಡಿ ಅವರ ಜೀವನ ಸುಧಾರಿಸಲು ನೆರವಾಗುತ್ತಿದೆ.

ಇಷ್ಟೆಲ್ಲ ತೊಂದರೆಗಳಿದ್ದರೂ ಹಲವರ ಸಹಾಯ ಸಹಕಾರದಿಂದ ದೀಪಾಲಯ ಶಾಲೆಯನ್ನು ಉತ್ತಮವಾದ ರೀತಿಯಲ್ಲಿ ನಿರ್ವಹಿಸಿಕೊಂಡು ಹೋಗುತ್ತಿದ್ದಾರೆ. ಶಾಲೆಯ ಉದ್ದೇಶ ಗ್ರಾಮೀಣ ಭಾರತದಲ್ಲಿ ಈಗಲೂ ಮನೆಮಾಡಿರುವ ಹೆಣ್ಣು ಮಕ್ಕಳ ಶಿಕ್ಷಣದ ಬಗೆಗಿನ ಮೌಢ್ಯತೆ ಕಡಿಮೆಯಾಗಿ ಎಲ್ಲರಿಗೂ ಶಿಕ್ಷಣ ದೊರೆತು ಉತ್ತಮವಾದ ಜೀವನ ನಡೆಸುವಂತಾಗಲಿ ಎಂಬುದಾಗಿದೆ.

ಹರಿಯಾಣದ ಸೋಲಹ್ ಪಟ್ಟಿಯಲ್ಲಿರುವ ದೀಪಾಲಯ ಶಾಲೆಯನ್ನು ಸುಮಾರು 15 ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಇದಕ್ಕೆ ಹೊಂದಿಕೊಂಡಂತೆಯೇ ವಿದ್ಯಾರ್ಥಿಗಳ ವಸತಿನಿಲಯವನ್ನೂ ಕಟ್ಟಲಾಗಿದೆ. ಇಲ್ಲಿನ ವಿಶೇಷತೆ ಎಂದರೆ ಸುತ್ತಲಿನ ಹಲವು ಗ್ರಾಮಗಳಲ್ಲಿ ಮುಸ್ಲಿಂ ಸಮುದಾಯದ ಪ್ರಾಬಲ್ಯ ಹೆಚ್ಚಿದೆ. ಆದರೂ ಶಾಲೆಯ ಮುಖ್ಯೋಪಾಧ್ಯಾಯರು ಓರ್ವ ಹಿಂದುವಾಗಿದ್ದಾರೆ. ಜೊತೆಯಲ್ಲಿ ಶಾಲೆಯ ವಾರ್ಡನ್ ಕ್ರಿಶ್ಚಿಯನ್ ಧರ್ಮದವರಾಗಿದ್ದಾರೆ.

image


ಹರಿಯಾಣದ ಮನೇಸರ್ ಗ್ರಾಮವು ಗುಡ್ಡಗಾಡು ಪ್ರಾಂತ್ಯವಾಗಿದ್ದು, ಅಲ್ಲಿರುವ ಸಣ್ಣ ಶಾಲೆಯನ್ನು ಕೆಂಪು ಇಟ್ಟಿಗೆಗಳಿಂದ ಕಟ್ಟಲಾಗಿದೆ. ಸುತ್ತಲಿರುವ ಮರದ ನೆರಳಿನಲ್ಲಿ ಕುಳಿತು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಾರೆ. ಮಳೆಗಾಲದಲ್ಲಿ ಗೋಡೆಗಳ ಮೇಲೆ ನೀರು ಸುರಿಯುತ್ತಿರುತ್ತದೆ. ಬೇಸಿಗೆಯಲ್ಲಿ ಬೀಸುವ ಬಿರು ಬಿಸಿಲ ಗಾಳಿಯ ನಡುವೆಯೂ ಆ ಮುಗ್ಧ ಮಕ್ಕಳು ಕುಳಿತು ಒಂದಷ್ಟು ಅಕ್ಷರ ಕಲಿಯುತ್ತಾರೆ. ಇದರಲ್ಲಿ ಮೂರು, ನಾಲ್ಕನೇ ತರಗತಿ ಓದುತ್ತಿರುವ ಕೆಲವು ಮಕ್ಕಳ ವಯಸ್ಸು 14-15 ವರ್ಷವಾಗಿರುತ್ತದೆ.

ಬಡತನದಲ್ಲೇ ಬೆಳೆದು ಬಂದಿರುವ ಇಂತಹ ಮಕ್ಕಳಿಗೆ ಉಚಿತ ವಿದ್ಯಾದಾನ ಮಾಡುತ್ತಿರುವ ದೀಪಾಲಯ ಶಾಲೆ ಅವರ ಬದುಕಿನ ಹೊಸ ಆಶಾಕಿರಣ ಎಂದರೂ ತಪ್ಪಿಲ್ಲ.

ಲೇಖಕರು: ರಚನಾ ಬಿಶ್ತ್

ಅನುವಾದಕರು: ಎಸ್​​ಡಿ

Add to
Shares
2
Comments
Share This
Add to
Shares
2
Comments
Share
Report an issue
Authors

Related Tags