ಆವೃತ್ತಿಗಳು
Kannada

ವಿಶ್ವವನ್ನೇ ಒಗ್ಗೂಡಿಸುತ್ತಿರುವ ಸಂಗೀತ - `ಜಾಝ್ ಗೋವಾ' ಕಹಾನಿ...

ಟೀಮ್​ ವೈ.ಎಸ್​. ಕನ್ನಡ

YourStory Kannada
29th Feb 2016
3+ Shares
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on

ಸಂಗೀತ ಇವರ ಉಸಿರು. ಸಂಗೀತ ಪ್ರಿಯರಿಗೆ ಸಂತೋಷವನ್ನು ಉಣಬಡಿಸುವುದೇ ಇವರ ಕಾಯಕ. ಕಳೆದ ಒಂದು ದಶಕದಿಂದ ಜಗತ್ತಿನಾದ್ಯಂತ ಹೊಸ ಅಲೆಯನ್ನೇ ಸೃಷ್ಟಿಸಿದ ಗಾನ ಗಾರುಡಿಗರು ಇವರು. ಖ್ಯಾತ ಜಾಝ್ ಸಂಗೀತಗಾರ ಕೋಲಿನ್ ಡಿ ಕ್ರೂಝ್ ಅಂದ್ರೆ ಎಲ್ರಿಗೂ ಪಂಚಪ್ರಾಣ. ಅವರೇ ಕಟ್ಟಿ ಬೆಳೆಸಿರುವ ಸ್ಟುಡಿಯೋ ಕೋಲಿನ್ ಅವರ ಸಂಗೀತ ಬದುಕಿನ ಪಯಣದ ಹಾದಿಯನ್ನು ಇನ್ನಷ್ಟು ಆಸಕ್ತಿದಾಯಕವಾಗಿಸಿದೆ. ಕಡಲ ಕಿನಾರೆ ಗೋವಾ ಸಂಗೀತದ ಸ್ವರ್ಗ ಎಂದೇ ಪ್ರಸಿದ್ಧಿ, ನೂರಾರು ಮ್ಯೂಸಿಕ್ ಸ್ಟುಡಿಯೋಗಳಿಗೆ ಗೋವಾ ತವರೂರು. ಅದ್ರಲ್ಲೂ `ಜಾಝ್ ಗೋವಾ' ಸ್ಟುಡಿಯೋಗೆ ವಿಶಿಷ್ಟ ಸ್ಥಾನವಿದೆ. ಸಾಲು ಸಾಲು ಭತ್ತದ ಗದ್ದೆಗಳು, ಪಂಚಾಯತ್ ಫುಟ್ಬಾಲ್ ಮೈದಾನ ಇವುಗಳ ಮಧ್ಯೆ ಉತ್ತರ ಗೋವಾದ ಸಂಗೋಲ್ಡಾ ಗ್ರಾಮದಲ್ಲಿ ಕೋಲಿನ್ ಅವರ ಜಾಝ್ ಗೋವಾ ಸ್ಟುಡಿಯೋ ಇದೆ.

ವೃತ್ತಿಪರ ಸ್ಟುಡಿಯೋ ಒಂದರಲ್ಲಿ ರೆಕಾರ್ಡಿಂಗ್ ಮಾಡಬೇಕಾದ ಸಂದರ್ಭದಲ್ಲಿ ಏನೆಲ್ಲಾ ಸಮಸ್ಯೆಗಳು ಎದುರಾಗುತ್ತವೆ ಅನ್ನೋದನ್ನು ಒಬ್ಬ ಸಂಗೀತಗಾರ ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲ. ಸರಿಯಾದ ಬೆಲೆಗೆ, ಸೂಕ್ತ ಸ್ಟುಡಿಯೋ ಹುಡುಕೋದು ಸುಲಭದ ಮಾತಲ್ಲ. ಆರಂಭಿಕ ಹಂತದಲ್ಲಿ ಪ್ರತಿಭೆ ಇದ್ರೂ ಸಂಗೀತಗಾರರಿಗೆ ಸಂಪನ್ಮೂಲದ ಕೊರತೆ ಕಾಡುವುದು ಸುಳ್ಳಲ್ಲ. ಹಿಂಜರಿಕೆ ಮತ್ತು ಆತಂಕದಿಂದಾಗಿ ಪ್ರತಿಭಾವಂತ ಕಲಾವಿದರ ಕಲಾಕೃತಿಗಳು ಬೆಳಕನ್ನೇ ಕಾಣುವುದಿಲ್ಲ. ಇಂತಹ ಕಲಾವಿದರಿಗೆ ಜಾಝ್ ಗೋವಾ ಸಂರಕ್ಷಕನಂತೆ ವರ್ತಿಸುತ್ತಿದೆ. ಭಾರತದ ಅತ್ಯಂತ ಅನುಭವಿ ಕಲಾವಿದರೊಂದಿಗೆ ಕೆಲಸ ಮಾಡುವ ಅವಕಾಶವನ್ನು ಈ ವೇದಿಕೆ ಕಲ್ಪಿಸಿಕೊಡುತ್ತಿದೆ. ಜಗತ್ತಿನ ಮೂಲೆ ಮೂಲೆಯ ಕಲಾವಿದರ ಉಚಿತ ಸಹಯೋಗಕ್ಕೂ ಇಲ್ಲಿ ಅವಕಾಶವಿದೆ. ಇಲ್ಲಿ ಅತ್ಯಂತ ಫ್ರೆಂಡ್ಲಿ ಹಾಗೂ ಹೋಮ್ಲಿ ವಾತಾವರಣವಿದೆ.

``ಗೋವಾದಲ್ಲಿ ಸಂಗೀತ ಅನ್ನೋದು ಜೀವನದ ಭಾಗವಾಗಿದೆ. ಆದ್ರೆ ಸ್ಥಳೀಯ ಸಂಗೀತಗಾರರ ಪ್ರತಿಭೆಗೆ ಸೂಕ್ತ ಪ್ರೋತ್ಸಾಹ ಸಿಗುತ್ತಿಲ್ಲ. ಜಗತ್ತಿನಲ್ಲಿ ಅತ್ಯಂತ ಕಡಿಮೆ ವೇತನ ಪಡೆಯುತ್ತಿರುವವರೆಂದರೆ ನಾವೇ. ಹಾಗಾಗಿ ಸ್ಥಳೀಯ ಕಲಾವಿದರಿಗೆ ನೆರವಾಗಬೇಕೆಂದು ನಾನು ಜಾಝ್ ಗೋವಾ ಸ್ಟುಡಿಯೋ ಆರಂಭಿಸಿದೆ. ಅವರಿಗೆ ಉತ್ತಮವಾದ ಸ್ಥಳೀಯ ವೇದಿಕೆ ಕಲ್ಪಿಸುವುದು ಮತ್ತು ಇಂಟರ್ನೆಟ್ ನೆರವಿನಿಂದ ಜಾಗತಿಕ ಸ್ಟೇಜ್ ಕಲ್ಪಿಸಿಕೊಡುವುದು ನನ್ನ ಉದ್ದೇಶ'' 
                      -ಕೋಲಿನ್

ಸಂಗೀತ - ನಂತರ ಮತ್ತು ಈಗ

ದಶಕಗಳ ಕಾಲ ವಿಶ್ವದಾದ್ಯಂತ ಪ್ರಯಾಣ ಮಾಡಿ ಅನುಭವ ಸಂಪಾದಿಸಿರುವ ಕೋಲಿನ್, ಭಾರತದಲ್ಲಿ ಬದಲಾಗುತ್ತಿರುವ ಸಂಗೀತಕ್ಕೆ ಸಾಕ್ಷಿಯಾಗಿದ್ದು ಮಾತ್ರವಲ್ಲ, ಅದನ್ನೆಲ್ಲ ಜೀವಿಸಿದ್ದಾರೆ. `` ಆರಂಭದ ದಿನಗಳಲ್ಲಿ ಸ್ಥಳೀಯ ಬ್ಯಾಂಡ್‍ಗಳೊಂದಿಗೆ ಒಪ್ಪಂದ ಮಾಡಿಕೊಂಡು ಮುಂಬೈನ ಪಂಚತಾರಾ ಹೋಟೆಲ್‍ಗಳಲ್ಲಿ ಪ್ರದರ್ಶನ ನೀಡ್ತಾ ಇದ್ದೆ. ಆದ್ರೆ ನಿಜವಾದ ಶೋ ಟೈಮ್‍ಗಿಂತ ಅವು ವಿಭಿನ್ನ. ಅಲ್ಲಿ ಅಂದದ ಸ್ಟೇಜ್ ಇರುತ್ತಿತ್ತು, ನಾವು ಪ್ರತಿಬಾರಿ ಜಾಝ್ ಬಾರಿಸಿದಾಗ್ಲೂ ಪರದೆಯನ್ನು ಮೇಲಕ್ಕೆತ್ತಲಾಗ್ತಿತ್ತು. ಪ್ರತಿಯೊಬ್ಬರೂ ಮ್ಯೂಸಿಕ್ ಬ್ಯಾಂಡ್ ಅನ್ನು ಕಣ್ತುಂಬಿಕೊಳ್ಳಲು ಅವಕಾಶವಿತ್ತು. ಆದ್ರೆ ಈಗ ತಾಜ್ ಮಹಲ್, ಓಬೆರಾಯ್ ಶೆರಟನ್‍ನಂತಹ ಹೋಟೆಲ್‍ಗಳಲ್ಲಿ ಏಕಾಂಗಿಯಾಗಿ ಪ್ರದರ್ಶನ ನೀಡುವ ಅವಕಾಶ ಸಿಕ್ಕಿದೆ, ನಾನು ಅದೃಷ್ಟವಂತ'' ಎಂದು ಖುಷಿಪಡುತ್ತಾರೆ ಕೋಲಿನ್.

image


``ಇತ್ತೀಚಿನ ದಿನಗಳಲ್ಲಿ ವಿದ್ಯುನ್ಮಾನ ನೃತ್ಯ ಸಂಗೀತಗಳು ಯುವ ಜನತೆಯನ್ನು ಸೆಳೆಯುತ್ತಿವೆ. ಹೋಟೆಲ್, ಮದುವೆಗಳು, ರೇಡಿಯೋ ಸ್ಟೇಶನ್‍ಗಳು, ಕಚೇರಿಗಳು ಹೀಗೆ ಎಲ್ಲಾ ಕಡೆಗಳಲ್ಲಿ ಡಿಜೆ ಮ್ಯೂಸಿಕ್ ಸಿಕ್ಕಾಪಟ್ಟೆ ಜನಪ್ರಿಯವಾಗಿದೆ. ಬದಲಾವಣೆ ಅನಿವಾರ್ಯ, ಆದ್ರೆ ಒಂದು ಕಾಲಮಾನದ ಸಂಗೀತಗಾರರ ಜೊತೆ ಮಾತನಾಡಿದ್ರೆ, ನಾವೆಲ್ಲಿ ತಪ್ಪು ಮಾಡುತ್ತಿದ್ದೇವೆ ಅನ್ನೋದನ್ನು ಅವರು ಹೇಳ್ತಾರೆ. ಆ ದಿನಗಳಲ್ಲಿ ಸಲಕರಣೆಗಳಲ್ಲಿ ಸಂಗೀತಗಾರರ ಕೌಶಲ್ಯ ಗೋಚರಿಸುತ್ತಿತ್ತು. ಆದ್ರೆ ಈಗ ಮಶೀನ್‍ನ ಒಂದು ಬಟನ್ ಪ್ರೆಸ್ ಮಾಡಿದ್ರೆ ಮುಗೀತು'' ಎನ್ನುವ ಕೋಲಿನ್ ವಾಸ್ತವ ಸ್ಥಿತಿಯನ್ನು ವಿವರಿಸ್ತಾರೆ.

ಲೈವ್ ಮ್ಯೂಸಿಕ್ ಅನ್ನೋದು, ತಂತ್ರಜ್ಞಾನ ಜಗತ್ತಿಗೆ ಹಾರ್ಡ್‍ವೇರ್ ಸಂಸ್ಥೆಗಳು ಕೊಟ್ಟ ಕೊಡುಗೆ. ಅದಿಲ್ಲದೆ ಏನನ್ನೂ ಮಾಡಲು ಸಾಧ್ಯವಿಲ್ಲ ಅನ್ನೋದು ಇಡೀ ಜಗತ್ತಿಗೇ ತಿಳಿದಿದೆ. ಲೈವ್ ಪ್ರದರ್ಶನಕ್ಕೆ ಸೂಕ್ತ ಅವಕಾಶಗಳು ಸಿಗದೇ ಇರುವುದರಿಂದ ಸಂಗೀತಗಾರರಿಗೆ ಹಿನ್ನಡೆಯಾಗಿದೆ. ಅತ್ಯಂತ ಪ್ರತಿಭಾವಂತ ಸಂಗೀತಗಾರನ್ನು, ಇದನ್ನೆಲ್ಲ ತ್ಯಜಿಸುವಂತೆ ಅಥವಾ ಸಂಗೀತ, ನೃತ್ಯದ ಭಾಗವಾಗಲು ಪ್ರೇರೇಪಿಸುವುದು ನಮ್ಮ ಉದ್ದೇಶ.

ಸಂಗೀತದ ಮೂಲಕ ವಿಶ್ವವನ್ನೇ ಒಗ್ಗೂಡಿಸುವ ಯತ್ನ...

ಸಾಂಸ್ಕøತಿಕ ಭಿನ್ನತೆ, ಗಡಿ ವಿವಾದ, ರಾಷ್ಟ್ರೀಯತೆಗೆ ಸಂಬಂಧಪಟ್ಟಂತೆ ಇಡೀ ವಿಶ್ವದಾದ್ಯಂತ ಗೊಂದಲ ಇದ್ದೇ ಇದೆ. ಇದನ್ನೆಲ್ಲ ಸರಿಪಡಿಸಲು ಜಾಝ್ ಗೋವಾದಲ್ಲಿ ಮೂಕ ಕ್ರಾಂತಿ ನಡೆಯುತ್ತಿದೆ. ನೆದರ್‍ಲೆಂಡ್, ಯುನೈಟೆಡ್ ಕಿಂಗ್‍ಡಮ್, ಸಿಂಗಾಪುರ, ಪೋರ್ಚುಗಲ್, ಜೆಕ್ ಗಣರಾಜ್ಯ, ಅಮೆರಿಕ ಸೇರಿದಂತೆ ವಿವಿಧ ರಾಷ್ಟ್ರಗಳ ಕಲಾವಿದರು ಜಾಝ್ ಗೋವಾ ಸ್ಟುಡಿಯೋದಲ್ಲಿ ರೆಕಾರ್ಡಿಂಗ್ ಮಾಡಿದ್ದಾರೆ, ಕೋಲಿನ್ ಅವರ ಜೊತೆ ಪ್ರದರ್ಶನವನ್ನೂ ನೀಡಿದ್ದಾರೆ. ಬ್ರಿಟಿಷ್ ಸ್ಯಾಕ್ಸೋಫೋನ್ ವಾದಕನೊಬ್ಬನ ಕಂಠದಲ್ಲಿ ಗೋವಾ ಕೊಂಕಣಿ ಜಾನಪದ ಹಾಡನ್ನು ಜಾಝ್ ಗೋವಾ ಬಿಟ್ರೆ ಇನ್ನೆಲ್ಲಿಯೂ ನೀವು ಕೇಳಲು ಸಾಧ್ಯವಿಲ್ಲ.

ಇದು ವಿದ್ಯುನ್ಮಾನ ಸಂಗೀತ, ನೃತ್ಯ, ರಿಯಾಲಿಟಿ ಶೋಗಳು ಮತ್ತು ಯುಟ್ಯೂಬ್ ಸ್ಟಾರ್‍ಗಳ ಜಮಾನಾ. ಕೀರ್ತಿ ಮತ್ತು ಯಶಸ್ಸನ್ನು ಸಾಧಿಸುವುದು ಬಹಳ ಸುಲಭ. ಆದ್ರೆ ಈ ಆಧುನಿಕ ಯುಗ ಅದೇನನ್ನೋ ಕಳೆದುಕೊಂಡಿದೆ. ``ಇತ್ತೀಚಿನ ದಿನಗಳಲ್ಲಿ ಮಕ್ಕಳು `ಮ್ಯೂಸಿಕ್‍ವೇರ್' ಬದಲು ಸಾಫ್ಟ್‍ವೇರ್ ಅನ್ನೇ ಆಯ್ಕೆ ಮಾಡಿಕೊಳ್ತಾರೆ. ತಂತ್ರಜ್ಞಾನ ಮತ್ತು ಬದಲಾವಣೆ ಒಳ್ಳೆಯದು ಆದ್ರೆ ಸಂಗೀತ ಅನ್ನೋದು ನಿಮ್ಮ ಕೌಶಲ್ಯವನ್ನು ಸಾಣೆ ಹಿಡಿದಾಗ ಬಂದಿದ್ದೇ ಹೊರತು ಯಾವುದೇ ಯಂತ್ರದ ಬಟನ್ ಒತ್ತುವುದರಿಂದಲ್ಲ ಅನ್ನೋದನ್ನು ನೆನಪಿಡಿ'' ಎನ್ನುತ್ತಾರೆ ಕೋಲಿನ್.

ಮರುಭೂಮಿಯಂತಾಗಿರುವ ಸಂಗೀತ ಸಾಗರದ ಓಯಸಿಸ್‍ನಂತೆ ಜಾಝ್ ಗೋವಾ ಕೆಲಸ ಮಾಡುತ್ತಿದೆ. ಸಂಗೀತಗಾರರಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಉತ್ತಮ ಅವಕಾಶ ಇಲ್ಲಿದೆ. ``ನನ್ನದೇ ಹಾಡುಗಳನ್ನು ರೆಕಾರ್ಡಿಂಗ್ ಮಾಡುವುದು ಅಸಾಧ್ಯವಾದ ಕನಸಾಗಿತ್ತು, ಆರಂಭದ ಆ ದಿನಗಳು ನನಗಿನ್ನೂ ನೆನಪಿವೆ. ಒಂದೇ ಒಂದು ಬ್ರೇಕ್‍ಗಾಗಿ ಯುವ ಕಲಾವಿದರು ಕಷ್ಟಪಡುವುದನ್ನು ನೋಡಿದಾಗಲೆಲ್ಲ ನಾನು ಅವರಲ್ಲಿ ನನ್ನನ್ನು ಕಾಣುತ್ತೇನೆ. ನನ್ನ ಸ್ಟುಡಿಯೋದಲ್ಲಿ ಫ್ರೀ ಟೈಮ್ ಕೊಡುವ ಮೂಲಕ ಅವರಿಗೆ ನನ್ನ ಕೈಲಾದ ಸಹಾಯ ಮಾಡುತ್ತೇನೆ. ಸಂಗೀತ ನನಗೆ ಬದುಕಿನಲ್ಲಿ ಎಲ್ಲವನ್ನೂ ಕೊಟ್ಟಿದೆ, ಅದಕ್ಕೆ ಪ್ರತಿಯಾಗಿ ಏನನ್ನಾದ್ರೂ ಮಾಡಬೇಕೆಂಬ ಪ್ರಯತ್ನ ನನ್ನದು'' ಎಂದು ಕೋಲಿನ್ ವಿವರಿಸುತ್ತಾರೆ. ಕೋಲಿನ್ ಅವರ ಅಭಿಮಾನದ ಲಾಭವನ್ನು ಯಾರು ಪಡೆದಿದ್ದಾರೋ ಅವರು ನಿಶ್ಚಿತವಾಗಿ ಈ ಮಾತನ್ನು ಒಪ್ಪಿಕೊಳ್ಳುತ್ತಾರೆ.

ಲೇಖಕರು: ಪ್ರತೀಕ್ಷಾ ನಾಯಕ್

ಅನುವಾದಕರು: ಭಾರತಿ ಭಟ್ 

3+ Shares
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
Report an issue
Authors

Related Tags