ಆವೃತ್ತಿಗಳು
Kannada

ಮೂರು ವರ್ಷಗಳಲ್ಲಿ 3 ಉದ್ಯಮಗಳ ಸ್ಥಾಪನೆ - ಇದು 33ರ ಹರೆಯದ ಅರ್ಪಿತಾರ ಸಾಧನೆ

ಟೀಮ್​ ವೈ.ಎಸ್​. ಕನ್ನಡ

21st Feb 2016
Add to
Shares
5
Comments
Share This
Add to
Shares
5
Comments
Share

ನಾಲ್ಕು ವರ್ಷಗಳ ಹಿಂದಷ್ಟೆ ಅರ್ಪಿತಾ ಖಾದ್ರಿಯಾ ಪ್ರಮುಖ ಕಂಪನಿಯೊಂದರಲ್ಲಿ ಬ್ರಾಂಡ್ ಮ್ಯಾನೇಜರ್ ಆಗಿದ್ರು. TAPMI ನಲ್ಲಿ ಎಂಬಿಎ ಮುಗಿಸಿದ್ದ ಅರ್ಪಿತಾ ಫಾಸ್ಟ್​ಟ್ರ್ಯಾಕ್​​, ಟೈಟಾನ್​ನಂತಹ ಬ್ರಾಂಡ್​ಗಳೊಂದಿಗೂ ಗುರುತಿಸಿಕೊಂಡಿದ್ರು. ಕಾರ್ಪೊರೇಟ್ ಏಣಿ ಏರಲು ಸರ್ವಸನ್ನದ್ಧರಾಗಿದ್ರು. ಈಗ ಅರ್ಪಿತಾ ಖಾದ್ರಿಯಾ ಅವರಿಗೆ 33ರ ಹರೆಯ, ಇಷ್ಟು ಸಣ್ಣ ವಯಸ್ಸಿನಲ್ಲೇ ಆಕೆ ಮೂರು ಉದ್ಯಮಗಳ ಒಡತಿ.

 ``ಜೀವನ ಅಂದ್ರೇನೇ ತಮಾಷೆ, ಪ್ರಯಾಣ ಆರಂಭಿಸಿದಾಗ ನೀವು ಎಲ್ಲಿಗೆ ತಲುಪುತ್ತೀರಾ ಅನ್ನೋದನ್ನು ಊಹಿಸುವುದು ಅಸಾಧ್ಯ'' ಎನ್ನುತ್ತಾರೆ ಅರ್ಪಿತಾ. 

ಮೊಬೈಲ್ ಪ್ರೀಮಿಯರ್ ಅವಾರ್ಡ್​ನಲ್ಲಿ ಅರ್ಪಿತಾ ಅವರ ಸೈನ್ಟಿಸ್ಟ್ ಆ್ಯಪ್ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿರುವುದು ವಿಶೇಷ. ಜಾಗತಿಕ ಅಪ್ಲಿಕೇಷನ್ ಪ್ರದರ್ಶನ ವೇದಿಕೆ Appcircus ಆಯೋಜಿಸಿರುವ ಈ ಸ್ಪರ್ಧೆ ಬಾರ್ಸಿಲೋನಾದಲ್ಲಿ ನಡೆಯಲಿದೆ.

image


ಸೈನ್ಟಿಸ್ಟ್ ಆಟ..

ಆ್ಯಪ್ ಅಭಿವೃದ್ಧಿಪಡಿಸುವ ಕಂಪನಿ ಬೆಝೆರ್ಕ್ ಸೈನ್ಟಿಸ್ಟ್ ಗೇಮ್ ಅನ್ನು ಅಭಿವೃದ್ಧಿಪಡಿಸಿದೆ. ಇದು ತಾರ್ಕಿಕ ತರ್ಕವನ್ನು ಆಧರಿಸಿದ ಆಟ. ತಮ್ಮ ಹಳೆಯ ಟಿ9 ಫೋನ್ ಬಳಸ್ತಾ ಇದ್ದ ಸಂದರ್ಭದಲ್ಲಿ ಅರ್ಪಿತಾಗೆ ಸೈನ್ಟಿಸ್ಟ್ ಅಪ್ಲಿಕೇಷನ್ನ ಐಡಿಯಾ ಹೊಳೆದಿತ್ತು. ಯಾಕಂದ್ರೆ ಆ ಫೋನ್ನಲ್ಲಿ ಸರಿಯಾದ ಅಕ್ಷರ ಬೇಕಾದ್ರೆ ಹಲವು ಬಾರಿ ಕೀಲಿಗಳನ್ನು ಒತ್ತಬೇಕಿತ್ತು. ಇದನ್ನೇ ಒಂದು ಆಟವಾಗಿ ಮಾಡಬಹುದುಲ್ಲ ಎಂಬ ಆಲೋಚನೆ ಅರ್ಪಿತಾರಲ್ಲಿ ಮೂಡಿತ್ತು. 135 ದೇಶಗಳಲ್ಲಿ ಕಾಪಿರೈಟ್​ಗಾಗಿ ಅರ್ಜಿ ಸಲ್ಲಿಸಿದ್ರು. ಸರಾಗವಾಗಿ ಪರವಾನಿಗೆಯೂ ಸಿಕ್ಕಿತ್ತು.

ಎಪ್ರಿಲ್ 2015ರಲ್ಲಿ ಅರ್ಪಿತಾ ಮೊದಲು ಫ್ಲಿಪ್ಕಾರ್ಟ್​ನಲ್ಲಿ ಇದನ್ನು ಒಂದು ಫಜಲ್ ಪುಸ್ತಕವನ್ನಾಗಿ ಬಿಡುಗಡೆ ಮಾಡಿದ್ರು. ಯಾವುದೇ ರೀತಿ ಮಾರ್ಕೆಟಿಂಗ್, ಜಾಹೀರಾತು ಇಲ್ಲದೇ ಈ ಫಜಲ್ ಪುಸ್ತಕಕ್ಕೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿತ್ತು. 1.5 ಲಕ್ಷ ಮೌಲ್ಯದ ಪುಸ್ತಕಗಳು ಮಾರಾಟವಾದ್ವು. ಶೇ.80ರಷ್ಟು ಪುಸ್ತಕಗಳು ವಿವಿಧ ಈವೆಂಟ್ಗಳಲ್ಲಿ ಹಾಕಿದ್ದ ಅಂಗಡಿಗಳಲ್ಲೇ ಮಾರಾಟವಾಗಿದ್ದವು. 2015ರ ಡಿಸೆಂಬರ್​ನಲ್ಲಿ ಸೈನ್ಟಿಸ್ಟ್ ಆ್ಯಪ್​​ನ ಆ್ಯಂಡ್ರಾಯ್ಡ್ ಆವೃತ್ತಿ ಬಿಡುಗಡೆಯಾದ್ರೆ, ಈ ವರ್ಷ ಜನವರಿಯಲ್ಲಿ - iOS ವರ್ಶನ್ ಅನ್ನು ಲಾಂಚ್ ಮಾಡಲಾಗಿದೆ. 

ಈ ಆಟವನ್ನು ವಿದ್ಯಾರ್ಥಿಗಳ ತಾರ್ಕಿಕ ಯೋಗ್ಯತಾ ಪರೀಕ್ಷೆಯ ಭಾಗವಾಗಿ ಬಳಸಬಹುದು, ಯಾಕಂದ್ರೆ ಸಾಧ್ಯತೆಗಳಿಗೆ ಅಂತ್ಯವಿಲ್ಲ ಅನ್ನೋದು ಅರ್ಪಿತಾರ ಸಲಹೆ. ಫೇಸ್​​ಬುಕ್ ಸ್ಟಾರ್ಟ್ ಬೂಸ್ಟ್ರಾಪ್ ಟ್ರ್ಯಾಕ್ ಪ್ರೋಗ್ರಾಮ್​ನಲ್ಲಿ ಕೂಡ ಸೈನ್ಟಿಸ್ಟ್ ಹೆಸರು ಆಯ್ಕೆಯಾಗಿದೆ, ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ 30,000 ಡಾಲರ್ ಬಹುಮಾನ ಹಾಗೂ ಮೇಲ್ವಿಚಾರಣೆ ಜವಾಬ್ಧಾರಿ ವಹಿಸಲಾಗುತ್ತದೆ.

ಬೆಝೆರ್ಕ್ ನಾಲ್ವರು ಸದಸ್ಯರನ್ನೊಳಗೊಂಡ ಒಂದು ತಂಡ. ಇವರಲ್ಲೊಬ್ಬ ಮನೆ ವಿನ್ಯಾಸಗಾರ ಕೂಡ ಇದ್ದಾನೆ. ಸದ್ಯ ಸೈನ್ಟಿಸ್ಟ್ ಆ್ಯಂಡ್ರಾಯ್ಡ್ನಲ್ಲಿ 4.6 ರೇಟಿಂಗ್ ಹೊಂದಿದ್ದು, ಅತ್ಯುತ್ತಮ ಹೊಸ ಆಟಗಳ ಅಡಿಯಲ್ಲಿ ಆ್ಯಪಲ್ ಕಂಪನಿ 12 ದೇಶಗಳಲ್ಲಿ ಇದನ್ನು ಪರಿಚಯಿಸಿದೆ. ಇಗಾಗ್ಲೇ ಈ ಗೇಮ್ ಅನ್ನು 25,000 ಮಂದಿ ಡೌನ್ಲೋಡ್ ಮಾಡಿಕೊಂಡಿದ್ದಾರೆ. `ದಿಮಾಗ್ ಕಿ ಬತ್ತಿ ಜಲಾದೇ' ಎಂಬ ಟ್ಯಾಗ್​ಲೈನ್ ಅಡಿಯಲ್ಲಿ ಮೆಂಟೋಸ್ ಇಂಡಿಯಾ, ಸೈನ್ಟಿಸ್ಟ್​​ಗೆ ಜಾಹೀರಾತುದಾರನಾಗಿದೆ. ಜಾಹೀರಾತು ಹಾಗೂ ಮಾರ್ಕೆಟಿಂಗ್ ಅರ್ಪಿತಾ ಅವರಿಗೆ ಸಹಜವಾಗೇ ಒಲಿದಿದೆ, ಯಾಕಂದ್ರೆ ಅವರು ತಮ್ಮ ವೃತ್ತಿ ಆರಂಭಿಸಿದ್ದು ಶ್ರೇಷ್ಠ ಜಾಹೀರಾತು ಕಂಪನಿ ಮೆಕೆನ್ ಎರಿಕ್ಸನ್​ನಲ್ಲಿ.

ಬೇರ್​ಫೂಟ್ ನಡಿಗೆ...

ಉದ್ಯೋಗ ಪರಿಸರದಲ್ಲಿನ ಒತ್ತಡ ಮತ್ತು ಬೆಂಬಲಿಸದ ಬಾಸ್ ವರ್ತನೆಯಿಂದ ಬೇಸತ್ತು 2012ರಲ್ಲಿ ಕೆಲಸಕ್ಕೆ ಗುಡ್ ಬೈ ಹೇಳಲು ಅರ್ಪಿನಾ ನಿರ್ಧರಿಸಿದ್ರು. ಪಕ್ಕಾ ಮಾರ್ವಾಡಿ ಆಗಿದ್ರಿಂದ ಬ್ಯುಸಿನೆಸ್ ಅನ್ನೋದು ಅವರ ರಕ್ತದಲ್ಲೇ ಇತ್ತು. ಪತಿ ಪ್ರೋಮಿತ್ ಹಾಗೂ ಸ್ನೇಹಿತರ ನೆರವಿನಿಂದ ಅರ್ಪಿತಾ ಹೊಸ ಪಯಣ ಆರಂಭಿಸಿದ್ರು. 2012ರ ಸಪ್ಟೆಂಬರ್ನಲ್ಲಿ `ಬೇರ್ಫೂಟ್' ಅನ್ನು ಆರಂಭಿಸಲಾಯ್ತು. ಅರ್ಪಿತಾ ಅವರ ವೃತ್ತಿ ಜೀವನದ ಹೊಸ ಪಥದ ಆರಂಭದ ಸಂಕೇತವೇ ಬೇರ್ಫೂಟ್. ಬೇರ್ಫೂಟ್, ಉದ್ಯಮಗಳಿಗಾಗಿಯೇ ಇರುವ ಹೊಚ್ಚ ಹೊಸ ಸಲಹಾ ಸಂಸ್ಥೆ. ದೊಡ್ಡ ಸಂಸ್ಥೆಗಳನ್ನು ಬಾಡಿಗೆ ಪಡೆಯಬಲ್ಲ ದೊಡ್ಡ ಬ್ರಾಂಡ್ ಇದು. ತಮ್ಮದೇ ಆದ ಮಾರ್ಕೆಟಿಂಗ್ ಮತ್ತು ಬ್ರಾಂಡಿಂಗ್ ತಂಡವನ್ನು ಕೂಡ ಅವರು ಹೊಂದಬಹುದು. ಹೊಸ ಸಂಸ್ಥೆಗಳಿಗೆ ಸಾಮಾನ್ಯವಾಗಿ ಬ್ರಾಂಡ್ ಲಾಂಚ್ ಮಾಡುವಲ್ಲಿ, ಮಾರುಕಟ್ಟೆ ಸಂಶೋಧನೆಗೆ, ಲೀಡ್ಗಳನ್ನು ಹುಟ್ಟುಹಾಕುವಲ್ಲಿ ಸಮಸ್ಯೆಗಳು ಎದುರಾಗುತ್ತವೆ. ಆ ಸಂದರ್ಭಗಳಲ್ಲೆಲ್ಲ ಬೇರ್ಫೂಟ್ ಅತ್ಯಂತ ಕಡಿಮೆ ದರದಲ್ಲಿ ಅವರಿಗೆ ಸಲಹಾ ಸೇವೆಯನ್ನು ಒದಗಿಸುತ್ತದೆ. ದೊಡ್ಡ ಏಜೆನ್ಸಿಗಳನ್ನು ಹೈರ್ ಮಾಡಿಕೊಳ್ಳುವುದಕ್ಕಿಂತ ಇದು ಅಗ್ಗವಾಗಿರುತ್ತದೆ. ಒಂದು ಬಾರಿಗೆ ಐದರಿಂದ ಆರು ಗ್ರಾಹಕರಿಗೆ ಅರ್ಪಿತಾ ಸೀಮಿತಗೊಳಿಸುತ್ತಾರೆ. ಇದರಿಂದ ಪ್ರತಿಯೊಬ್ಬ ಗ್ರಾಹಕರ ಬಗೆಗೂ ಹೆಚ್ಚು ಗಮನ ನೀಡಲು ಸಾಧ್ಯವಾಗುತ್ತದೆ. ಬೇರ್ಫೂಟ್ನಲ್ಲಿ ನಾಲ್ವರು ಸಿಬ್ಬಂದಿಯಿದ್ದು, ಡಿಸೈನ್ ಅಗತ್ಯಗಳನ್ನೆಲ್ಲ 15 ಮಂದಿ ಫ್ರೀಲಾನ್ಸರ್​​ಗಳು ನೋಡಿಕೊಳ್ಳುತ್ತಾರೆ.

image


ಲಾಭ ಮೀರಿದ್ದು...

ವೃತಿ ಹಾಗೂ ವೈಯಕ್ತಿಕ ಬದುಕು ಎರಡರಲ್ಲೂ ಸಮತೋಲನ ಕಾಯ್ದುಕೊಳ್ಳುವ ಬಗ್ಗೆ ಅರ್ಪಿತಾ ನಿರ್ದಿಷ್ಟತೆ ಹೊಂದಿದ್ದಾರೆ. ವೀಕೆಂಡ್ಗಳಲ್ಲಿ ಅವರು ಸಿಬ್ಬಂದಿಯಿಂದ ಕೆಲಸ ಮಾಡಿಸುವುದಿಲ್ಲ. ಸುತ್ತಾಟ ಅಂದ್ರೆ ಅರ್ಪಿತಾಗೆ ಬಲು ಪ್ರಿಯ. ತಾವು ಭೇಟಿಕೊಟ್ಟ ಸ್ಥಳಗಳ ಬಗ್ಗೆ ಟ್ರಾವೆಲ್ ಬ್ಲಾಗ್ನಲ್ಲಿ ಅರ್ಪಿತಾ ಬರೆದುಕೊಂಡಿದ್ದಾರೆ. 2016ರ ಜನವರಿಯಲ್ಲಿ ನಾಟ್-ಫಾರ್-ಪ್ರಾಫಿಟ್ ಎಂಬ ಟ್ಯಾಗ್ಲೈನ್ ಅಡಿಯಲ್ಲಿ `ಗಿವ್ ಫ್ರೀಲೀ' ಎಂಬ ಉದ್ಯಮವನ್ನು ಆರಂಭಿಸಿದ್ದಾರೆ. ``ಸಾಮಾನ್ಯವಾಗಿ ಎನ್ಜಿಒಗಳು ಮತ್ತು ದತ್ತಿ ಸಂಸ್ಥೆಗಳು ಹಣಕಾಸಿನ ನೆರವು ಕೇಳುತ್ತವೆ, ಆ ಹಣ ದುರ್ಬಳಕೆ ಆಗಬಹುದು ಎಂಬ ಆತಂಕ ದಾನಿಗಳಲ್ಲಿರುತ್ತದೆ'' ಅನ್ನೋದು ಅರ್ಪಿತಾ ಅವರ ಅಭಿಪ್ರಾಯ. ಹಾಗಾಗಿ ಎನ್ಜಿಓಗಳು ತಮ್ಮ ಅಗತ್ಯಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸುವ ರೀತಿಯಲ್ಲಿ ಅರ್ಪಿತಾ ವೇದಿಕೆಯೊಂದನ್ನು ಸ್ಥಾಪಿಸಿದ್ರು. ಉದಾಹರಣೆಗೆ ಪೀಠೋಪಕರಣ, 20 ಕೆಜಿ ಅಕ್ಕಿ ಹೀಗೆ ಏನನ್ನಾದ್ರೂ ದಾನಿಗಳು ನೀಡಬಹುದು. ಎನ್ಜಿಓಗಳನ್ನು ಸೇರಿಸಿಕೊಳ್ಳುವ ಮುನ್ನ ಅರ್ಪಿತಾ ಅವರೇ ಖುದ್ದಾಗಿ ತಮ್ಮ ಸಿಬ್ಬಂದಿ ಕೊತೆ ಸೇರಿ ವೆಬ್ ವೇದಿಕೆಯಲ್ಲಿ ಪರಾಮರ್ಶಿಸುತ್ತಾರೆ. ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ, ಉದಾಹರಣೆಗೆ ಚೆನ್ನೈ ಪ್ರವಾಹದಂತಹ ಸಂದರ್ಭಗಳು ಎದುರಾದಾಗ ಎಷ್ಟೋ ಮಂದಿ ನೆರವಿನ ನಿರೀಕ್ಷೆಯಲ್ಲಿರುತ್ತಾರೆ, ಇನ್ನೆಷ್ಟೋ ಜನರು ಸಹಾಯ ಮಾಡಲು ಉತ್ಸುಕರಾಗಿರುತ್ತಾರೆ. ಅಂತಹ ಸಂದರ್ಭಗಳಲ್ಲಿ ಅತಿ ಶೀಘ್ರವಾಗಿ ಇಬ್ಬರ ನಡುವೆ ಸಂಪರ್ಕ ಕಲ್ಪಿಸಲು ಗಿವ್ ಫ್ರೀಲೀ ಮುಂದಾಗುತ್ತದೆ. ಸದ್ಯ ಅರ್ಪಿತಾ ಅವರ ವೈಯಕ್ತಿಕ ಉಳಿತಾಯದ ಹಣದಿಂದ್ಲೇ ಗಿವ್ ಫ್ರೀಲಿ ಕಾರ್ಯನಿರ್ವಹಿಸುತ್ತಿದೆ. ಭವಿಷ್ಯದಲ್ಲಿ ದೊಡ್ಡ ಕಂಪನಿಗಳು ಮತ್ತು ದತ್ತಿ ಸಂಸ್ಥೆಗಳು ತಮ್ಮ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಕಾರ್ಯಕ್ರಮದ ಭಾಗವಾಗಿ ನೆರವು ನೀಡಲಿವೆ ಎಂಬ ವಿಶ್ವಾಸ ಅರ್ಪಿತಾ ಅವರದ್ದು.

ಯಶಸ್ಸಿನ ಮಂತ್ರ...

ರಿಚರ್ಡ್ ಬ್ರಾನ್ಸನ್ ಅವರ ಬಗ್ಗೆ ಅರ್ಪಿತಾಗೆ ಅಪಾರ ಗೌರವ. ಇದು ಕೇವಲ ಆರಂಭವಷ್ಟೆ, ಭವಿಷ್ಯದಲ್ಲಿ ಸರಣಿ ವಾಣಿಜ್ಯೋದ್ಯಮಿ ಎನಿಸಿಕೊಳ್ಳುವ ಕನಸು ಅವರಿಗಿದೆ. `ದೊಡ್ಡದಾಗಿ ಯೋಚಿಸಿ, ಸಣ್ಣದಾಗಿ ಆರಂಭಿಸಿ, ಕೂಡಲೇ ಕೆಲಸ ಮಾಡಿ' ಎಂಬ ತತ್ವದಲ್ಲಿ ಅವರು ನಂಬಿಕೆ ಇಟ್ಟಿದ್ದಾರೆ. ಸಣ್ಣದಾಗಿಯೇ ಆರಂಭಿಸಿ, ತಾಳ್ಮೆ ಕಳೆದುಕೊಳ್ಳದೇ ಕೆಲಸ ಮಾಡಿದ್ರೆ ತಪ್ಪು ಮಾಡುವ ಸಾಧ್ಯತೆಗಳು ಕಡಿಮೆ. ಉತ್ತಮ ಆದಾಯ ಗಳಿಸುವ ಮೂಲಕ ಯಶಸ್ಸು ಸಂಪಾದಿಸುವುದು ಅವಶ್ಯಕ ಆದ್ರೆ ಸರಿಯಾದ ಕೆಸಲ ಮಾಡುವುದು ಕೂಡ ಅನಿವಾರ್ಯ ಅನ್ನೋದು ಅರ್ಪಿತಾ ಅವರ ಅಭಿಪ್ರಾಯ. ನೌಕರರು, ಮಾರಾಟಗಾರರು, ಗ್ರಾಹಕರ ಜೊತೆಗಿನ ಸಂಬಂಧಕ್ಕೆ ಅವರು ಅತಿ ಹೆಚ್ಚು ಪ್ರಾಮುಖ್ಯತೆ ನೀಡ್ತಾರೆ. ಅದು ಅವರ ಪಾಲಿಗೆ ಅತ್ಯಂತ ಮೌಲ್ಯಯುತವಾದದ್ದು. ಇದರಿಂದ ಯಶಸ್ಸು ಸಹಜವಾಗೇ ನಮ್ಮನ್ನು ಅರಸಿ ಬರುತ್ತದೆ ಎನ್ನುತ್ತಾರೆ ಅರ್ಪಿತಾ. ದೊಡ್ಡ ದೊಡ್ಡ ಸಂಸ್ಥೆಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವಂತಹ ಅವಕಾಶಗಳು ಒದಗಿ ಬಂದಿತ್ತು, ಆದ್ರೆ ಇದು ಬೇರ್ಫೂಟ್ ಉದ್ದೇಶಕಕೆ ಪೂರಕವಾಗುವುದಿಲ್ಲ ಎಂಬ ವಾಸ್ತವದ ಅರಿವು ಅವರಿಗಿತ್ತು. ಓರ್ವನ ಮೌಲ್ಯಕ್ಕೆ ತಕ್ಕಂತೆ ನಡೆದುಕೊಳ್ಳುವುದು ಮತ್ತು ಶಾರ್ಟ್ಕಟ್ಗಳನ್ನು ತಪ್ಪಿಸುವುದೇ ನಿಜವಾದ ಯಶಸ್ಸಿನ ಮಂತ್ರ ಎನ್ನುತ್ತಾರೆ ಅರ್ಪಿತಾ.

ಲೇಖಕರು: ಶಾರಿಕಾ ನಾಯರ್

ಅನುವಾದಕರು: ಭಾರತಿ ಭಟ್

Add to
Shares
5
Comments
Share This
Add to
Shares
5
Comments
Share
Report an issue
Authors

Related Tags