ಆವೃತ್ತಿಗಳು
Kannada

ಲೋಕನಿಂದಿತೆಯರ ಪಾಲಿನ ಭಾಗ್ಯವಿಧಾತೆ ಊರ್ಮಿ: ಬದುಕು ಬದಲಿಸಿದೆ ನ್ಯೂಲೈಟ್​​​​

ಟೀಮ್​ ವೈ.ಎಸ್​​.

2nd Oct 2015
Add to
Shares
2
Comments
Share This
Add to
Shares
2
Comments
Share

ಮೀನಾ(ಹೆಸರು ಬದಲಿಸಲಾಗಿದೆ) ತಮ್ಮ 11ನೇ ವಯಸ್ಸಿನಲ್ಲಿ ಲೈಂಗಿಕ ಶೋಷಣೆಗೆ ಒಳಗಾಗಿ ಬದುಕುಳಿದವರು. ಈಗ ಅವರು ತಮ್ಮ ಗತಜೀವಿತವನ್ನು ಸಂಪೂರ್ಣವಾಗಿ ಮರೆತಿದ್ದಾರೆ. ಅವರಿಗೆ ಸಮರ್ಪಕವಾಗಿ ಮಾನಸಿಕ ತಜ್ಞರಿಂದ ಸೂಕ್ತ ಸಮಾಧಾನ ಹಾಗೂ ಸಾಂತ್ವನ ಕೊಡಿಸಿದ್ದು ಅತ್ಯಂತ ತ್ರಾಸದಾಯಕ ಪ್ರಯತ್ನವಾಗಿತ್ತು. ಆದರೂ ಇಂದಿಗೂ ಅವರಿಗೆ ಆಗಾಗ ಹಳೆಯ ನೆನಪುಗಳು ಕಾಡುತ್ತವೆ. ಉತ್ತರದ 24ಪರಗಣ ಹಳ್ಳಿಯಿಂದ ತಮ್ಮ ಪಕ್ಕದ ಮನೆಯಾತನಿಂದಲೇ ಕಳ್ಳಸಾಗಾಣಿಕೆಗೆ ಒಳಗಾದವರು ಮೀನಾ. ಆ ವ್ಯಕ್ತಿ ಮಾನವ ಕಳ್ಳಸಾಗಾಣಿಕೆ ಜಾಲದ ಭಾಗವಾಗಿದ್ದ. ಅವರನ್ನು ಬಿಹಾರಕ್ಕೆ ಕೊಂಡೊಯ್ದು ಮಾರಲಾಯಿತು. ಹೀಗೆ ಮಾರಾಟಕ್ಕೊಳಗಾದ ಮೀನಾರನ್ನು ಲೈಂಗಿಕವಾಗಿ ಶೋಷಿಸಲಾಯಿತು. ಹಾಗೂ ದೊಡ್ಡ ದೊಡ್ಡ ಪಾರ್ಟಿಗಳಲ್ಲಿ ಕುಣಿಯಲು ಬಲವಂತಪಡಿಸಲಾಯಿತು. ಮೀನಾರಿಗೆ ಆಗಾಗ ಬೆಳವಣಿಗೆ ಹೆಚ್ಚಿಸುವ ಹಾರ್ಮೋನ್‌ ಇಂಜೆಕ್ಷನ್ ನೀಡಲಾಗುತ್ತಿತ್ತು. ಹೀಗಾಗಿ ಅವರ ಅಸಲು ವಯೋಮಾನಕ್ಕಿಂತ ದೊಡ್ಡವಳಾಗಿ ಕಾಣಿಸುತ್ತಿದ್ದರು. ಒಂದು ದಿನ ಅವರಿಂದ ತಪ್ಪಿಸಿಕೊಂಡ ಮೀನಾ ಕಾಳಿಘಾಟ್ ತಲುಪಿದರು. ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸಿದ್ದ ಮೀನಾಗೆ ಅವರ ಮುಂದಿನ ವಿದ್ಯಾಭ್ಯಾಸ ಮುಗಿಸಲು ಅಗತ್ಯಕ್ಕಿಂತ ಹೆಚ್ಚು ಸಮಯ ಬೇಕಾಯಿತು. 2015ರ ಜೂನ್‌ನಲ್ಲಿ ಹೈಸ್ಕೂಲ್ ಮುಗಿಸಿದ ಅವರು ವೃತ್ತಿಪರ ತರಬೇತಿ ಶಿಕ್ಷಣಕ್ಕಾಗಿ ದಾಖಲಾದರು. ಮೀನಾ ಅವರ ಬದುಕಿನಲ್ಲಾದ ಘೋರ ಹಾಗೂ ಕಹಿ ಘಟನೆಗಳ ಹೊರತಾಗಿಯೂ ತಮ್ಮ ಕಠಿಣ ಪರಿಶ್ರಮ ಹಾಗೂ ಜವಾಬ್ದಾರಿಯುತ ನಡವಳಿಕೆಯಿಂದ ಯಶಸ್ಸು ಹಾಗೂ ಜನಪ್ರಿಯತೆ ಗಳಿಸಿದ್ದಾರೆ.

ಹೇಮಾ(ಹೆಸರು ಬದಲಿಸಲಾಗಿದೆ) ತಮ್ಮ 10ನೇ ವಯಸ್ಸಿನಲ್ಲಿಯೇ ಕಳ್ಳಸಾಗಾಣಿಕೆಗೊಳಗಾಗಿ ತಪ್ಪಿಸಿಕೊಂಡು ಬಂದವರು. ಕೋಲ್ಕತ್ತಾದ ಸೋನಾಗಚ್ಚಿ ರೆಡ್​ಲೈಟ್ ಏರಿಯಾದ ಕುಖ್ಯಾತ ವೇಶ್ಯಾವಾಟಿಕೆ ಜಾಲದಿಂದ ಪೋಲಿಸರು ರಕ್ಷಿಸಿದ್ದರು. ಅವರು ಹೇಳಿಕೆ ನೀಡಿರುವಂತೆ ಅವರ ಸಾಕುತಾಯಿಯೇ ಅವರನ್ನು ವೇಶ್ಯಾವಾಟಿಕೆ ಕೂಪಕ್ಕೆ ತಳ್ಳಿದ್ದರು.

image


ಹೇಮಾರ ತಾರುಣ್ಯದ ದಿನಗಳು ಸರ್ಕಾರಿ ಆಶ್ರಿತ ಮಾನವ ಕಳ್ಳಸಾಗಾಣಿಕೆಕಾರರಿಂದ ರಕ್ಷಿಸಿ ಕರೆತಂದ ಕ್ಯಾಂಪ್​​ನಲ್ಲಿ ಕಳೆದವು. ಅವರ ತಾರುಣ್ಯ ಮುಗಿದ ಬಳಿಕ ನ್ಯಾಯಾಲಯದ ಅನುಮತಿಯಂತೆ ಸೋನಾರ್ ತೋರಿಯ ಸಾಂತ್ವನ ಕೇಂದ್ರದ ವಸತಿನಿಲಯ ಸೇರಿದರು. ಕೆಲವು ವರ್ಷಗಳಿಂದ ಸೋನಾರ್ ತೋರಿಯಲ್ಲಿರುವ ಹೇಮಾ ತಮ್ಮ ಉನ್ನತ ಹೈಸ್ಕೂಲ್ ಕಲಿಕೆಯಲ್ಲಿದ್ದಾರೆ. ಜೊತೆಗೆ ತಾವು ಕಲಿತ ನೃತ್ಯವನ್ನು ಮುಂದುವರೆಸಿ ಭವಿಷ್ಯದಲ್ಲಿ ಇದರಲ್ಲೇ ಬೆಳಕು ಕಾಣುವ ಕನಸು ಕಂಡಿದ್ದಾರೆ.

ಶೋಷಿತರ ಪಾಲಿನ ಹೊಸಬೆಳಕು:

ನ್ಯೂಲೈಟ್ ಸಂಸ್ಥೆ ಹೇಮಾ ಮತ್ತು ಮೀನಾರಂತಹ ಹುಡುಗಿಯರ ಪಾಲಿಗೆ ಹೊಸ ಬೆಳಕು ನೀಡಿದೆ. 2000ದಲ್ಲಿ ಕೋಲ್ಕತ್ತಾದಲ್ಲಿ ಊರ್ಮಿ ಬಸು ಸಂಸ್ಥಾಪಿಸಿದ ನ್ಯೂಲೈಟ್ ಅನೇಕ ಶೋಷಿತೆಯರ ಬದುಕಿನಲ್ಲಿ ಬದಲಾವಣೆ ತಂದಿದೆ. ಈ ರೀತಿಯ ಸಾಮಾಜಿಕ ಚಟುವಟಿಕೆಗಳನ್ನು ಊರ್ಮಿಯವರ ಕುಟುಂಬ ನಿರ್ವಹಿಸುತ್ತಲೇ ಇದೆ. ಅವರ ಅಜ್ಜ ವೈದ್ಯರಾಗಿದ್ದರು ಹಾಗೂ ತಮ್ಮ ಮನೆಯಲ್ಲಿಯೇ ದಲಿತರ ವಿದ್ಯಾಭ್ಯಾಸಕ್ಕಾಗಿ ಶಾಲೆ ತೆರೆದಿದ್ದರು. ಊರ್ಮಿ ಹೇಳುವಂತೆ ಅವರ ಕುಟುಂಬ ಸಾಂಪ್ರಾದಾಯಿಕ ಭಾರತೀಯ ಕಟ್ಟುಪಾಡುಗಳನ್ನು ಸವಾಲಾಗಿ ಸ್ವೀಕರಿಸಿದೆ.

2000ನೇ ಇಸವಿಯಲ್ಲಿ ಕಾಳಿಘಾಟ್​​ನ ಕತ್ತಲ ರಸ್ತೆಯಲ್ಲಿ ನಡೆದುಹೋಗುತ್ತಿದ್ದ ಒಂದು ರಾತ್ರಿ ನನ್ನ ಬದುಕಿನ ಗುರಿಯನ್ನು ಬದಲಾಯಿಸಿತು. 15 ವರ್ಷಗಳ ಹಿಂದೆ ಲಿಂಗತಾರತಮ್ಯ ಹಾಗೂ ಇನ್ನಿತರ ಸಾಮಾಜಿಕ ಅಸಮತೋಲನದ ವಿರುದ್ಧ ಸಂಘಟನೆ ನಿರ್ಮಿಸಬೇಕು ಅನ್ನುವ ಅದಮ್ಯ ಬಯಕೆ ನನಗಿತ್ತು. ನನ್ನ ಈ ಯೋಜನೆಗೆ ಸಹಾಯ ಮಾಡಿದ್ದು ಕಾಳಿಘಾಟ್ ಸಮುದಾಯದ ಕೃಷ್ಣ ಮಂಡಲ್ ಮತ್ತು ಶಿಬ್ ನಾರಾಯಣ್ ಭಟ್ಟಾಚಾರ್ಯರು. ನಾವೆಲ್ಲ 10000 ರೂ. ಬಂಡವಾಳದಿಂದ ಆರಂಭಿಸಿ ಯಾವುದೇ ನೀಲಿನಕ್ಷೆ ಇಲ್ಲದೆ ಇಂದು ಸಾಧಿಸಿರುವ ಯಶಸ್ಸೇ ನ್ಯೂಲೈಟ್ ಅನ್ನುತ್ತಾರೆ ಊರ್ಮಿ ಬಸು.

ಊರ್ಮಿ ಬಸು

ಊರ್ಮಿ ಬಸು


ಮುಂಬೈನ ಟಾಟಾ ಇನ್ಸ್​​ಟಿ​​ಟ್ಯೂಟ್​​ನ ಸೋಷಿಯಲ್ ಸೈನ್ಸ್ ವಿಭಾಗದಲ್ಲಿ ಕ್ರಿಮಿನಾಲಜಿ ಹಾಗೂ ಸಮರ್ಪಕ ಆಡಳಿತ ವಿಷಯದಲ್ಲಿ ಉನ್ನತ ವ್ಯಾಸಂಗ ಮುಗಿಸಿದವರು ಊರ್ಮಿ. ಪದವಿ ಮುಗಿದ ನಂತರ ಊರ್ಮಿಗೆ ಮುಂಬೈ ಪೊಲೀಸರು ರಚಿಸಿದ್ದ ಯಾತನೆಗೊಳಗಾದ ಮಹಿಳೆಯರ ಸಾಂತ್ವನ ಕೇಂದ್ರದಲ್ಲಿ ಕೆಲಸ ಮಾಡುವ ಅವಕಾಶ ಲಭಿಸಿತ್ತು. ಅವರು 1984ರ ಡಿಸೆಂಬರ್​ನಲ್ಲಿ ಸಂಭವಿಸಿದ ಭಾರತೀಯ ಚಾರಿತ್ರಿಕ ದುರಂತ ಭೂಪಾಲ್ ಅನಿಲ ಸೋರಿಕೆ ಘಟನೆಯಲ್ಲಿ ಹಾನಿಗೊಳಗಾದ ಜನತೆಯ ಸೇವೆ ಸಲ್ಲಿಸಿದ್ದರು.

ಕಳೆದ 15ವರ್ಷಗಳಿಂದ ಊರ್ಮಿ ಬಸು ಸಣ್ಣ ಹಾಗೂ ಜನಪ್ರಿಯ ಸಂಘಟನೆಗಳ ಅಭಿವೃದ್ಧಿ ಪರ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ಗ್ರಾಮೀಣ ಹಾಗೂ ನಗರಗಳ ಆರ್ಥಿಕ ಅಭಿವೃದ್ಧಿ, ಸಬಲೀಕರಣ, ಮಹಿಳಾ ದೌರ್ಜನ್ಯದ ವಿರುದ್ಧ ರಕ್ಷಣೆ(ಲೈಂಗಿಕ ಕಾರ್ಯಕರ್ತೆಯರು, ಶೋಷಣೆ ಹಾಗೂ ದೌರ್ಜನ್ಯಕ್ಕೊಳಗಾದವರು), ಬೀದಿ ಬದಿಯ ಅನಾಥ ಮಕ್ಕಳು, ಬಾಲಕಾರ್ಮಿಕರ ಕಳ್ಳಸಾಗಾಣಿಕೆ ಮುಂತಾದ ಹಲವು ಜ್ವಲಂತ ಸಮಸ್ಯೆಗಳ ಕುರಿತಾಗಿ ಸಾರ್ವಜನಿಕ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ.

ಸುಭದ್ರ ಸ್ವರ್ಗ ಒದಗಿಸುವ ನಿಟ್ಟಿನಲ್ಲಿ:

ಪ್ರತಿಯೊಂದು ಪ್ರದೇಶದಲ್ಲಿ ಸುಭದ್ರ ಹಾಗೂ ಸುರಕ್ಷಿತ ಬದುಕು ಪಡೆದುಕೊಂಡು ಬೆಳೆಯುವುದು ಪ್ರತಿಯೊಂದು ಮಗುವಿನ ಜನ್ಮಸಿದ್ಧ ಹಕ್ಕು. ಆದರೆ ದುರದೃಷ್ಟವಶಾತ್ ಭಾರತದಲ್ಲಿ ಮಕ್ಕಳ ಹಕ್ಕುಗಳನ್ನು ನಿರ್ಲಕ್ಷಿಸಲಾಗುತ್ತಿದೆ. ಸುದೀರ್ಘ ಅವಧಿಯವರೆಗೆ ಬ್ರಹ್ಮರಾಕ್ಷಸನ ರೂಪ ತಳೆದ ಸಾಮಾಜಿಕ ಪಿಡುಗಾಗಿದ್ದ ಶಿಶುಶೋಷಣೆ ಹಾಗೂ ದೌರ್ಜನ್ಯ ಮುಚ್ಚಿಹಾಕಲ್ಪಟ್ಟಿತ್ತು. ಸುರಕ್ಷಿತ ಆಶ್ರಯ ಕಲ್ಪಿಸುವುದು ನ್ಯೂಲೈಟ್‌ನ ಅತಿ ಪ್ರಮುಖ ಆದ್ಯತೆಯಾಗಿತ್ತು. ಕೆಲವು ರೆಡ್‌ಲೈಟ್ ಪ್ರದೇಶಗಳಲ್ಲಿ ಲೈಂಗಿಕ ಕಾರ್ಯಕರ್ತೆಯರಾಗಿದ್ದ ಮಹಿಳೆಯರು ತಮ್ಮ ಮಕ್ಕಳನ್ನು ಪ್ರತಿಕೂಲ ಹಾಗೂ ಅಪಾಯಕಾರಿ ಸ್ಥಿತಿಯಲ್ಲಿ ಬಿಟ್ಟುಹೋಗುತ್ತಿದ್ದರು. ಸಂಜೆ ಹಾಗೂ ರಾತ್ರಿಗಳಲ್ಲಿ ಆ ಮಕ್ಕಳ ನಿರ್ವಹಣೆ ಅತ್ಯಂತ ಹೀನಾಯ ಸ್ಥಿತಿಯಲ್ಲಿತ್ತು. ಕೆಲವು ವರ್ಷಗಳ ಹಿಂದೆ ಈ ಸಂಗತಿ ಗಮನಿಸಿದ ಊರ್ಮಿ ಆ ಮಕ್ಕಳಿಗೊಂದು ಸುಭದ್ರ, ಸುರಕ್ಷಿತ ಹಾಗೂ ಆರೋಗ್ಯಕರ ಆಶ್ರಯ ಒದಗಿಸುವ ಯೋಜನೆ ಹಮ್ಮಿಕೊಂಡರು. ಅವರ ಆ ಯೋಜನೆಯೇ ವಿಸ್ತಾರಗೊಂಡು ಇಂದು ನ್ಯೂಲೈಟ್‌ನ ಬೇರೆ ಬೇರೆ ಕಾರ್ಯಯೋಜನೆಯಾಗಿ ಮಕ್ಕಳ ರಕ್ಷಣೆಗೆ ಮುಂದಾಗಿದೆ. ಇಂದು ನ್ಯೂಲೈಟ್ 3 ಆಶ್ರಯ ತಾಣಗಳನ್ನು ನಡೆಸುತ್ತಿದ್ದು, ಎರಡರಲ್ಲಿ ರಕ್ಷಿತ ಹೆಣ್ಣುಮಕ್ಕಳನ್ನು ಹಾಗೂ ಒಂದು ಮನೆಯಲ್ಲಿ ಗಂಡುಮಕ್ಕಳನ್ನು ಸಾಕುತ್ತಿದೆ.

ರಕ್ಷಣೆ ಮತ್ತು ಆರೈಕೆ ಒದಗಿಸುವ ವಾತಾವರಣ:

ಪ್ರತಿವರ್ಷ ಸುಮಾರು 40,000ದಷ್ಟು ಲೈಂಗಿಕ ಕಾರ್ಯಕರ್ತೆಯರನ್ನು ಕಳ್ಳಸಾಗಾಣಿಕೆ ಮಾಡಲಾಗುತ್ತಿದೆ. ಹೀಗಾಗಿ ನಮ್ಮ ತಂಡ ಮಕ್ಕಳಿಗೆ ಹಾಗೂ ಮಹಿಳೆಯರಿಗೆ ಸುಭದ್ರ, ಆರೋಗ್ಯಕರ ಆಶ್ರಯ ಕಲ್ಪಿಸಲು ನಿರಂತರವಾಗಿ ಶ್ರಮಿಸುತ್ತಿದೆ. ಹೆಚ್‌ಐವಿಯಂತಹ ಮಾರಕ ರೋಗದಿಂದ ಬಳಲುತ್ತಿರುವ ಮಹಿಳೆಯರಿಗೆ ಬೇಕಿರುವುದು ಕನಿಷ್ಠ ಮೂಲಸೌಕರ್ಯ ಹಾಗೂ ಬದುಕಲು ಸಣ್ಣ ನೆರವು ಅಷ್ಟೇ ಅಂದಿದ್ದಾರೆ ಬಸು.

image


ಶಿಕ್ಷಣದ ಮೂಲಕ ಲಿಂಗಸಮಾನತೆ, ಕೌಶಲ್ಯ ತರಬೇತಿ ನೀಡುವ ಮೂಲಕ ಶೋಷಿತ ಮಹಿಳೆಯರು ಹಾಗೂ ಮಕ್ಕಳ ಪಾಲಿಗೆ ಹೊಸ ಭವಿಷ್ಯ ನೀಡುವುದು ನ್ಯೂಲೈಟ್‌ನ ಆಶಯವಾಗಿದೆ. ನಾವು ವೇಶ್ಯಾವಾಟಿಕೆಗೆ ಎಂದಿಗೂ ಬೆಂಬಲ ನೀಡುವುದಿಲ್ಲ. ಆದರೆ ತಮ್ಮ ಕಷ್ಟದ ಸಂದರ್ಭಗಳಿಂದಾಗಿ ಹಾಗೂ ಬದುಕಲು ಬೇರೆ ಮಾರ್ಗವೇ ಇಲ್ಲದೇ ಆ ದಾರಿ ಹಿಡಿದ ಮಹಿಳೆಯರನ್ನು ವಾಪಾಸು ಸಾಮಾನ್ಯ ಬದುಕಿಗೆ ಕರೆತರುವ ಪ್ರಯತ್ನದಲ್ಲಿದ್ದೇವೆ ಅಂದಿದ್ದಾರೆ ಬಸು.

ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಲೈಂಗಿಕ ಕಾರ್ಯಕರ್ತೆಯರಿಗೆ ಅಗತ್ಯವಿರುವ ವೈದ್ಯಕೀಯ ನೆರವು ಲಭ್ಯವಾಗುತ್ತಿಲ್ಲ. ಕಳೆದ 14 ವರ್ಷಗಳಿಂದ ಲೈಂಗಿಕ ಕಾರ್ಯಕರ್ತೆಯರಿಗೆ ಅಗತ್ಯವಿರುವ ತುರ್ತು ನೆರವು, ತೀವ್ರಮಟ್ಟದ ರೋಗಗಳಿಗೆ ಚಿಕಿತ್ಸೆ, ಸೋಂಕು ಹರಡದಂತೆ ತಡೆಯುವ ಚಿಕಿತ್ಸೆ ಮುಂತಾದ ಜೀವ ಉಳಿಸುವ ಅಗತ್ಯ ವೈದ್ಯಕೀಯ ಸೌಲಭ್ಯವನ್ನು ನ್ಯೂಲೈಟ್ ಕಲ್ಪಿಸುತ್ತಿದೆ. ರೆಡ್‌ಲೈಟ್ ಪ್ರದೇಶದಿಂದ ಹೊರಗಿರುವ ಲೈಂಗಿಕ ಶೋಷಿತೆಯರಿಗೂ ಈ ನೆರವನ್ನು ನ್ಯೂಲೈಟ್ ನೀಡುತ್ತಿದೆ. ಎರಡು ಮುಖ್ಯ ಪ್ರದೇಶಗಳಲ್ಲಿ ಕ್ಲಿನಿಕ್ ಆರಂಭಿಸಿರುವ ಸಂಸ್ಥೆ ವಾರಕ್ಕೆ 5 ದಿನ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ವೈದ್ಯರು, ಸ್ತ್ರೀರೋಗತಜ್ಞರು, ಶಿಶು ತಜ್ಞರು ಆಗಾಗ ಭೇಟಿ ನೀಡುತ್ತಿದ್ದಾರೆ. 6 ಜನ ಆರೋಗ್ಯ ಸಹಾಯಕರು, ಪೂರ್ಣಕಾಲಿಕ ದಾದಿಯರು ಹಾಗೂ ಸಹಾಯಕ ನರ್ಸ್‌ಗಳು, ಮಹಿಳೆಯರು ಹಾಗೂ ಮಕ್ಕಳಿಗೆ ತುರ್ತು ವೈದ್ಯಕೀಯ ನೆರವು ನೀಡಲು ಸದಾ ಸಿದ್ಧರಿದ್ದಾರೆ.

ಸಬಲೀಕರಣದ ಮಾರ್ಗಸೂಚಿ:

ಬದುಕಿನಲ್ಲಿ ಒಂದು ನಿರ್ದಿಷ್ಟವಿಲ್ಲದಿದ್ದರೆ ಉತ್ತಮ ಆರೋಗ್ಯವಿದ್ದರೂ ಪ್ರಯೋಜನವಿಲ್ಲ ಅನ್ನು ಬಸು ಮಹಿಳೆಯರ ಪುನರ್ವಸತಿ ಕೇಂದ್ರಗಳಲ್ಲಿ ಮಹಿಳಾ ಸಬಲೀಕರಣ ಹಾಗೂ ರಕ್ಷಣೆಗೆ ಮುಂದಾಗಿದ್ದಾರೆ. ಸೃಜನಾತ್ಮಕವಾಗಿ ಆ ಶೋಷಿತೆಯರನ್ನು ಒಗ್ಗೂಡಿಸಿ ಹಲವು ಬಗೆಯ ಕ್ರಿಯಾಯೋಜನೆಗಳ ಮೂಲಕ ಅವರನ್ನು ತರಬೇತುಗೊಳಿಸಲಾಗುತ್ತಿದೆ. ನ್ಯೂಲೈಟ್‌ನ ತರಬೇತಿ ಕಾರ್ಯಕ್ರಮಗಳಲ್ಲಿ ಹಿಂದೆ ಲೈಂಗಿಕ ಕಾರ್ಯಕರ್ತೆಯಾಗಿದ್ದವರು ಹಾಗೂ ದಲಿತ ಮಹಿಳೆಯರನ್ನು ಸಂಘಟಿಸಿ ಪ್ರೇರಣಾತ್ಮಕ ಕಥೆಗಳ ಮೂಲಕ ಮನಃಪರಿವರ್ತನೆ ಮಾಡಲಾಗುತ್ತಿದೆ. ಆಂಚಲ್ ಎಂಬ ಈ ಯೋಜನೆಯಿಂದ ಸಕಾರಾತ್ಮಕವಾಗಿ ಪ್ರತಿಕ್ರಿಯೆ ಲಭ್ಯವಾಗುತ್ತಿದ್ದು, ಪೂರ್ಣಕಾಲಿಕ ವೇಶ್ಯಾವಾಟಿಕೆ ದೂರಸರಿದ ಮಹಿಳೆಯರಿಗೆ ಉದ್ಯೋಗ ಒದಗಿಸುವ ಮೂಲಕ ಅವರ ಬದುಕಿನಲ್ಲಿ ಹೊಸ ಬದಲಾವಣೆ ತರಲಾಗಿದೆ.

ನೊಂದ ಮಹಿಳೆಯರು,ಉದ್ಯೋಗ ಪಡೆದುಕೊಂಡು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಸ್ವಾವಲಂಬಿಗಳಾಗುತ್ತಿದ್ದಾರೆ. ಈ ಮಹಿಳೆಯರನ್ನು ತರಬೇತುಗೊಳಿಸಿ ಕೆಲವು ಎಂಬ್ರಾಯ್ಡರಿ ಉಪಕರಣಗಳನ್ನು ನೀಡಿ ಸ್ವ ಉದ್ಯೋಗ ಕಲ್ಪಿಸುವತ್ತ ನ್ಯೂಲೈಟ್ ಕಾರ್ಯನಿರತವಾಗಿದೆ. ಸಾಂಪ್ರದಾಯಿಕ, ಕಲಾತ್ಮಕ ವಸ್ತುಗಳಿಗೆ, ಗೃಹೋಪಯೋಗಿ, ಎಂಬ್ರಾಯ್ಡರಿ ಮಾಡಿದ ಧೋತಿ, ಸೀರೆಗಳು ಹಾಗೂ ಇನ್ನಿತರ ಬಟ್ಟೆಗಳಿಗೆ ಮಾರುಕಟ್ಟೆಯಲ್ಲಿ ಸ್ಥಾನ ಒದಗಿಸುವಲ್ಲಿಯೂ ನ್ಯೂ ಲೈಟ್‌ನ ಪಾತ್ರ ದೊಡ್ಡದಿದೆ. ಈ ಮೂಲಕ ನ್ಯೂ ಲೈಟ್ ಸುಮಾರು 40ಕ್ಕಿಂತ ಹೆಚ್ಚು ಲೈಂಗಿಕಶೋಷಣೆಗೊಳಗಾದ ಮಹಿಳೆಯರು ಹಾಗೂ ಮಕ್ಕಳ ಬದುಕಿಗೆ ಹೊಸದಿಕ್ಕು ತೋರಿಸಿದೆ.

Add to
Shares
2
Comments
Share This
Add to
Shares
2
Comments
Share
Report an issue
Authors

Related Tags