ಆವೃತ್ತಿಗಳು
Kannada

ಕಲಾವಿದರಿಗಾಗಿ ತಮ್ಮ ದುಡಿಮೆಯನ್ನೇ ಮುಡುಪಾಗಿಟ್ಟ ಮಹಿಳೆ..!

ಕೃತಿಕಾ

KRITHIKA
15th Jan 2016
Add to
Shares
1
Comments
Share This
Add to
Shares
1
Comments
Share

ಕಲಾವಿದರಿಗಾಗಿ ನಾವಿದ್ದೇವೆ. ಹೀಗೆ ಹೇಳುತ್ತಿರುವುದು ಬೆಂಗಳೂರಿನ ಯೂನಿವರ್ಸ್ ಆರ್ಟ್ ಫೌಂಡೇಶನ್. ಹೊಸ ತಿಪ್ಪಸಂದ್ರದಲ್ಲಿ ಇರುವ ಈ ಸಂಸ್ಥೆ ಕಲಾವಿದರ ನೆರವಿಗಾಗಿಯೇ ಕೆಲಸ ಮಾಡುತ್ತಿದೆ. ಬಹಳಷ್ಟು ಕಲಾವಿದರು ಆರ್ಥಿಕ ಸಹಾಯವಿಲ್ಲದೆ ತಮ್ಮ ಕಲೆಯಲ್ಲಿ ಮುಂದುವರಿಯಲು ಆಗುವುದಿಲ್ಲ. ಕೆಲವರಿಗೆ ಉತ್ತಮ ತರಬೇತಿ ಪಡೆಯಲು ಕೂಡ ಹಣ ಇರುವುದಿಲ್ಲ. ಕಲೆ ಹಾಗೂ ತಮ್ಮ ಕುಟುಂಬವನ್ನು ಸಲಹಲು ಅವರು ಬಹಳಷ್ಟು ಕಷ್ಟಪಡಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಕಲಾವಿದರಿಗೆ ನೆರವು ನೀಡಬೇಕು ಎಂದು ಯೂನಿವರ್ಸ್ ಆರ್ಟ್ ಫೌಂಡೇಶನ್ ಜನ್ಮ ತಾಳಿದೆ.

image


ಈ ಸಂಸ್ಥೆ ಜಯಲಕ್ಷ್ಮಿ ಅವರ ಕನಸಿನ ಕೂಸು. ಕಲಾವಿದರ ಕುಟುಂಬದಲ್ಲಿ ಹುಟ್ಟಿದ ಇವರಿಗೆ ಕಲೆಯಲ್ಲಿನ ಆಸಕ್ತಿ ರಕ್ತಗತವಾಗಿಯೇ ಬಂದಿದೆ. ತಮ್ಮ ತಂದೆ ಹಾಗೂ ಗುರು ಭರತನಾಟ್ಯ ಕಲಾವಿದರಾಗಿದ್ದ ಕರುಕುರುಚಿ ವೆಂಕಟನಾರಾಯಣನ್ ಅವರ ಗೌರವಾರ್ಥ ಯೂನಿವರ್ಸ್ ಆರ್ಟ್ ಫೌಂಡೇಶನ್ ಅನ್ನು 2012ರ ನವೆಂಬರ್ 18ರಂದು ತೆರೆದು ಕಲಾವಿದರಿಗೆ ಒಂದು ವೇದಿಕೆ ಕಲ್ಪಿಸಿದ್ದಾರೆ.

ಇದಕ್ಕೆ ಸಂಗೀತ ನಿರ್ದೇಶಕ ಹಂಸಲೇಖ ಅವರ ಸಹಕಾರವೂ ಇದೆ. ‘ಕಲಾದರಸ್ಯ ಸುಖ ಜೀವಿತಂ’ ಎಂಬಂತೆ ಕಲೆಗಾಗಿ ಸೇವೆ ಮಾಡುವುದು ಜಯಲಕ್ಷ್ಮಿ ಅವರ ಆಶಯ. ಜಯಲಕ್ಷ್ಮಿ ಅವರು ನೃತ್ಯದ ಬಗ್ಗೆ ಹೆಚ್ಚಿನ ಒಲವು ಹೊಂದಿರುವ ಮಕ್ಕಳಿಗೆ ಕಾರ್ಪೊರೇಟ್ ಕಂಪೆನಿಗಳ ನೆರವಿನ ಮೂಲಕ ಸಹಾಯಧನ ಕಲ್ಪಿಸಿಕೊಡುತ್ತಾರೆ.

image


ಯಾವುದೇ ಒಬ್ಬ ಕಲಾವಿದ ತನ್ನ ಜೀವವನ್ನೇ ಕಲೆಗಾಗಿ ಮುಡುಪಿಟ್ಟಾಗ ಆತ ಬಡತನದಲ್ಲಿ ಬಳಲಬಾರದು. ಆದ್ದರಿಂದ ಅಂಥವರಿಗೆ ನೆರವು ನೀಡುವುದು ನಮ್ಮ ಸಂಸ್ಥೆ ಉದ್ದೇಶ. ಈ ಉದ್ದೇಶವನ್ನಿಟ್ಟುಕೊಂಡೇ ನಾನು ಈ ಸಂಸ್ಥೆಯನ್ನು ಆರಂಭಿಸಿದ್ದೇನೆ. ತುಂಬಾ ಕಷ್ಟದಲ್ಲಿರುವ ಕಲಾವಿದರ ಮಕ್ಕಳು ತಮ್ಮ ಪೋಷಕರು ಕಷ್ಟಪಟ್ಟಿದ್ದನ್ನು ನೋಡಿ ಕಲೆಯಲ್ಲಿ ಮುಂದುವರಿಯಲು ಇಷ್ಟಪಡುವುದೇ ಇಲ್ಲ. ಹಾಗಾಗುವುದನ್ನು ತಪ್ಪಿಸಲು ನಾವು ಪ್ರಯತ್ನಿಸಬೇಕು. ಎಷ್ಟೋ ಪ್ರತಿಭೆಗಳಿಗೆ ಅವಕಾಶಗಳೇ ಸಿಗುವುದಿಲ್ಲ. ಅಂಥವರಿಗೆ ಅವಕಾಶ ಕಲ್ಪಿಸುವುದು ಮತ್ತು ಹಿರಿಯ ಕಲಾವಿದರನ್ನು ಗೌರವಿಸುವುದು ನಮ್ಮ ಕರ್ತವ್ಯ ಎಂದುಕೊಂಡಿದ್ದೇನೆ ಅಂತಾರೆ ಜಯಲಕ್ಷ್ಮಿ.

ಮೊದಲು ವಾರಾಂತ್ಯಗಳಲ್ಲಿ ತಮ್ಮ ಮನೆಯಲ್ಲಿ ನೃತ್ಯ ತರಗತಿಗಳನ್ನು ನಡೆಸುತ್ತಿದ್ದ ಜಯಲಕ್ಷ್ಮಿ ಅವರಿಗೆ ಕಲೆಗೆ ಸಂಬಂಧಿಸಿದಂತೆ ಹೆಚ್ಚಿನದನ್ನು ಮಾಡಬೇಕು ಎನಿಸಿತು. ಜೊತೆಗೆ ತಮ್ಮ ಭರತನಾಟ್ಯ ಗುರುವೂ ಆದ ತಂದೆ ಕರುಕುರುಚಿ ವೆಂಕಟನಾರಾಯಣನ್ ಗೌರವಾರ್ಥ ಏನಾದರೂ ಮಾಡಬೇಕು ಎಂದೆನಿಸಿದಾಗ ರೂಪುತಳೆದದ್ದು ಈ ಸಂಸ್ಥೆ. ಅದು ಆರಂಭವಾಗಿ ಕೆಲವೇ ತಿಂಗಳಲ್ಲಿ ಅವರ ತಂದೆ ತೀರಿಕೊಂಡರು. ತಮ್ಮ ತಂದೆ ಇರುವಾಗಲೇ ಸಂಸ್ಥೆಯನ್ನು ತೆರೆದ ನೆಮ್ಮದಿ ಜಯಲಕ್ಷ್ಮಿ ಅವರಲ್ಲಿದೆ.

image


ಕಲೆ ಎಲ್ಲರಿಗೂ ಒಲಿಯುವುದಿಲ್ಲ. ಆದರೆ ಒಲಿದಿರುವ ಹಲವರ ಬಳಿ ಅದನ್ನು ಮುಂದುವರಿಸಲು ಅವಕಾಶ ಸಿಗುವುದಿಲ್ಲ. ಬಡತನವೋ ಅಥವಾ ಅವಕಾಶ ವಂಚನೆಯೋ ಒಟ್ಟಿನಲ್ಲಿ ತಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಲು ಅದೆಷ್ಟೋ ಕಲಾವಿದರಿಗೆ ಆಗುವುದೇ ಇಲ್ಲ. ಇಂಥ ಕಲಾವಿದರ ನೆರವಿಗೆ ಹುಟ್ಟುಕೊಂಡಿದೆ ‘ಯೂನಿವರ್ಸ್ ಆರ್ಟ್ ಫೌಂಡೇಶನ್’ ಅಂತಾರೆ ಕಲಾವಿದೆ ರಮಾ ಶ್ರೀನಾಥ್.

ಕಲಾವಿದರಿಗಾಗಿ ಟ್ರೇಡ್​​ಮಾರ್ಕ್, ಕಾಪಿ ರೈಟ್, ಪೇಟೆಂಟ್ ಕುರಿತ ಕಾರ್ಯಾಗಾರಗಳು, ಪ್ರತಿ ಭಾನುವಾರ ಕಬ್ಬನ್ ಉದ್ಯಾನದಲ್ಲಿ ಸಂಗೀತ ಕಾರ್ಯಕ್ರಮ, ಸಣ್ಣಮಕ್ಕಳನ್ನು ಉತ್ತೇಜಿಸುವ ಸಲುವಾಗಿ ‘ಪುಟಾಣಿ ಹೆಜ್ಜೆ’ ನೃತ್ಯ ಕಾರ್ಯಕ್ರಮ, ಕಲಾವಿದರ ವೆಬ್​ಸೈಟ್, ಇತರ ಉತ್ಸವಗಳೊಂದಿಗೆ ಕೈಜೋಡಿಸಿ ಸಂಗೀತ ಕಾರ್ಯಕ್ರಮಗಳು, ತ್ಯಾಗರಾಜ ಮತ್ತು ಪುರಂದರದಾಸರ ಆರಾಧನಾ ಕಾರ್ಯಕ್ರಮ, ಎರಡು ದಿನಗಳ ಸಮರ್ಪಣಾ ಕಾರ್ಯಕ್ರಮಗಳು ಯುಎಎಫ್​ನಿಂದ ನಿರಂತರವಾಗಿ ನಡೆಯುತ್ತಿರುತ್ತವೆ.

image


ಬಡ ಕಲಾವಿದರು, ಮನೆಯಲ್ಲಿ ಯಾರೂ ನೋಡಿಕೊಳ್ಳಲು ಇರದೇ ಇರುವ ಕಲಾವಿದರಿಗೆ ವಸತಿ ಸೌಲಭ್ಯ ಕಲ್ಪಿಸುವುದು. ಹಾಗೆಯೇ ಒಂದು ವರ್ಷದಲ್ಲಿ ನೂರು ಕಲಾವಿದರಿಗೆ ವಿಮೆ ಮಾಡಿಸುವುದು, ವಯಸ್ಸಾದ ಕಲಾವಿದರಿಗೆ ಆರ್ಥಿಕ ಸಹಾಯ ಮಾಡುವುದು ಯೋಜನೆಗಳನ್ನು ಯೂನಿವರ್ಸ್ ಆರ್ಟ್ ಫೌಂಡೇಷನ್ ಹೊಂದಿದೆ ಅಂತ ತಮ್ಮ ಮುಂದಿನ ಯೋಜನೆಗಳ ಬಗ್ಗೆ ಹೇಳ್ತಾರೆ ಜಯಲಕ್ಷ್ಮಿ.

ಮೂಲತಃ ತಮಿಳುನಾಡಿನವರಾದ ಜಯಲಕ್ಷ್ಮಿ ಕಳೆದ ಮೂವತ್ತು ವರ್ಷಗಳಿಂದ ಬೆಂಗಳೂರಿನಲ್ಲೇ ವಾಸವಾಗಿದ್ದಾರೆ. ಇವರು ಕೇವಲ ಯೂನಿವರ್ಸ್ ಆರ್ಟ್ ಫೌಂಡೇಷನ್ ಸಂಸ್ಥೆಯೊಂದನ್ನೇ ನಡೆಸುತ್ತಿಲ್ಲ. ದೇಶದ ಯುಪಿಎಸ್ ಉದ್ಯಮದಲ್ಲಿ ತೊಡಗಿರುವ ಏಕೈಕ ಮಹಿಳೆ ಅಂದ್ರೆ ಈ ಜಯಲಕ್ಷ್ಮಿ.ಭರತನಾಟ್ಯ ಕಲಾವಿದೆಯಾಗಿ ನೃತ್ಯ ತರಗತಿಗಳನ್ನು ನಡೆಸುತ್ತ, ಶಾಲೆಯೊಂದರಲ್ಲಿ ಶಿಕ್ಷಕಿಯೂ ಆಗಿದ್ದ ಇವರಿಗೆ ಮದುವೆಯಾದ ಮೇಲೆ ಶಿಕ್ಷಕಿಯಾಗಿ ಮುಂದುವರಿಯಲು ಆಗಲಿಲ್ಲ. ಸ್ವಲ್ಪ ಕಾಲದ ನಂತರ ಅವರು ಏನಾದರೂ ವಿಭಿನ್ನ ವೃತ್ತಿಯಲ್ಲಿ ತೊಡಗಬೇಕು ಎಂದುಕೊಂಡು ಅಚಾನಕ್ಕಾಗಿ ಬಂದ ಅವಕಾಶವನ್ನು ಬಳಸಿಕೊಂಡು ಯುಪಿಎಸ್​​ಗಳ ಮಾರಾಟದ ಕೆಲಸದಲ್ಲಿ ತೊಡಗಿಕೊಂಡರು. ಸುಮಾರು 20 ವರ್ಷಗಳ ಹಿಂದೆ ಇವರು ಈ ಕೆಲಸ ಶುರುಮಾಡಿದಾಗ ಭಾರತದ ಯಾವ ಮಹಿಳೆಯೂ ಈ ಕೆಲಸದಲ್ಲಿ ತೊಡಗಿರಲಿಲ್ಲ. ಅವರು ಈಗ ಭಾರತದಾದ್ಯಂತ ಅನೇಕ ಕೈಗಾರಿಕೆಗಳು, ಕಂಪೆನಿಗಳು, ವಿದ್ಯಾ ಸಂಸ್ಥೆಗಳು, ಆಸ್ಪತ್ರೆಗಳು, ಸರ್ಕಾರಿ ಇಲಾಖೆಗಳು ಮೊದಲಾದವುಗಳ ನೆಟ್​ವರ್ಕ್ ಹೊಂದಿದ್ದು, ಅವುಗಳಿಗೆ ಪವರ್ ವ್ಯವಸ್ಥೆ ಕಲ್ಪಿಸುತ್ತಿದ್ದಾರೆ. ವಿಭಿನ್ನವಾದ ವೃತ್ತಿಯಲ್ಲಿ ತೊಡಗಿರುವ ಹೆಮ್ಮೆ ಜಯಲಕ್ಷ್ಮಿ ಅವರದ್ದು.

ಯುಪಿಎಸ್ ಉದ್ಯಮದ ಜೊತೆಗೆ ಯೂನಿವರ್ಸ್ ಆರ್ಟ್ ಫೌಂಡೇಶನ್ ಸಂಸ್ಥೆ ನಡೆಸುತ್ತಿರುವ ಜಯಲಕ್ಷ್ಮಿ ಅವರಿಗೆ ಕಲೆ ಮತ್ತು ಕಲಾವಿದರ ಉಳಿವಿಗಾಗಿ ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ. ವೈದ್ಯಕೀಯ ಖರ್ಚು ಭರಿಸಲು ಅಸಹಾಯಕರಾಗಿರುವ ಕಲಾವಿದರು ಮತ್ತು ಅವರ ಕುಟುಂಬಕ್ಕೆ ವೈದ್ಯಕೀಯ ಸೌಲಭ್ಯ ಕಲ್ಪಿಸುವುದು. ಆರ್ಥಿಕವಾಗಿ ಹಿಂದುಳಿದ ಕಲಾವಿದರ ಮಕ್ಕಳಿಗೆ ಶಿಕ್ಷಣಕ್ಕೆ ನೆರವಾಗುವುದು. ಉತ್ತಮ ತರಬೇತಿಗೆ ಅವಕಾಶ ಹಾಗೂ ಸಹಾಯಧನ ನೀಡುವ ಮೂಲಕ ಯುವ ಜನತೆ ಭಾರತೀಯ ಕಲೆ- ಸಂಸ್ಕೃತಿಯಲ್ಲಿ ಆಸಕ್ತಿಯನ್ನು ಹೊಂದುವಂತೆ ಮಾಡಲು ಪ್ರೇರೇಪಿಸುವುದು. ಯುವ ಪ್ರತಿಭೆಗಳಿಗೆ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಅವಕಾಶ ಕಲ್ಪಿಸುವುದು. ಹೀಗೆ ಹಲವು ಯೋಜನೆಗಳನ್ನು ಇಟ್ಟುಕೊಂಡು ಕಲೆ ಮತ್ತು ಕಲಾವಿದರಿಗಾಗಿ ತಮ್ಮ ಜೀವನ, ದುಡಿಮೆ ಮುಡಿಪಾಗಿಟ್ಟಿರುವ ಜಯಲಕ್ಷ್ನಿ ಅವರಿಗೊಂದು ಹ್ಯಾಟ್ಸ್ ಆಫ್.

Add to
Shares
1
Comments
Share This
Add to
Shares
1
Comments
Share
Report an issue
Authors

Related Tags