ಮಳೆ ಬಂದ್ರೂ ಮ್ಯಾಚ್​ ನಿಲ್ಲಲ್ಲ...ಟಿಕೆಟ್​ ಕೊಂಡವರಿಗೆ ಟೆನ್ಷನ್​ ಇಲ್ಲ..!

ಟೀಮ್​ ವೈ.ಎಸ್​. ಕನ್ನಡ

ಮಳೆ ಬಂದ್ರೂ ಮ್ಯಾಚ್​ ನಿಲ್ಲಲ್ಲ...ಟಿಕೆಟ್​ ಕೊಂಡವರಿಗೆ ಟೆನ್ಷನ್​ ಇಲ್ಲ..!

Wednesday June 15, 2016,

3 min Read

ದೇಶಕ್ಕೆ ಚಿನ್ನಸ್ವಾಮಿ ಸ್ಟೇಡಿಯಂ ಮಾದರಿಯಾಗುವಂತಹ ಮತ್ತೊಂದು ಕೆಲಸಕ್ಕೆ ಮುಂದಾಗಿದೆ. ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣದ ಹಿರಿಮೆಗೆ ಮತ್ತೊಂದು ಗರಿ ಲಭಿಸಿದೆ. ಭಾರತದಲ್ಲೇ ಮೊದಲ ಬಾರಿಗೆ ಮೈದಾನಕ್ಕೆ "ಸಬ್ ಏರ್" ವ್ಯವಸ್ಥೆ ಅಳವಡಿಸುವ ಕಾರ್ಯ ಆರಂಭವಾಗಿದ್ದು, ವೇಗವಾಗಿ ಕೆಲಸ ಸಾಗುತ್ತಿದೆ.

ಅದೆಷ್ಟೋ ರೋಚಕ ಪಂದ್ಯಗಳಿಗೆ ನಮ್ಮ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ವೇದಿಕೆಯಾಗಿದೆ. ಹಾಗೆಯೇ ಕೆಲ ಪಂದ್ಯಗಳು ಮಳೆಗೆ ಕೊಚ್ಚಿ ಹೋಗಿವೆ. ಆದ್ರೆ ಇನ್ಮುಂದೆ ಬೆಂಗಳೂರಿನಲ್ಲಿ ಮಳೆ ಬಂತು, ಪಂದ್ಯ ನಿಂತು ಹೋಯಿತು ಎಂಬ ಮಾತುಗಳು ಕೇಳಿ ಬರುವುದಿಲ್ಲ. ಯಾಕಂದ್ರೆ ಮಳೆ ನಿಂತ ಕೆಲವೇ ನಿಮಿಷಗಳಲ್ಲಿ ಕ್ರೀಡಾಂಗಣವನ್ನು ಕ್ಷಣಮಾತ್ರದಲ್ಲಿ ಒಣಗಿಸುವ ಆತ್ಯಾಧುನಿಕ ‘ಸಬ್ ಏರ್ ಸಿಸ್ಟಮ್’ ಅನ್ನು ಚಿನ್ನಸ್ವಾಮಿಗೆ ಅಳವಡಿಸಲಾಗುತ್ತಿದೆ. ಈಗಾಗಲೇ ಕಾಮಗಾರಿ ಬರದಿಂದ ಸಾಗಿದ್ದು, ಮೈದಾನಕ್ಕೆ ಕಾಯಕಲ್ಪ ಒದಗಿಸುವ ಕಾರ್ಯ ನಡೆಯುತ್ತಿದೆ.

ದಿನವೆಲ್ಲಾ ಮಳೆ ಬಂದು ಮೈದಾನವೆಲ್ಲಾ ತೊಯ್ದು ಹೋದರೂ ಕೆಲವೇ ನಿಮಿಷಗಳಲ್ಲಿ ಔಟ್‌ ಫೀಲ್ಡ್‌ ಅನ್ನು ಸ್ವಚ್ಚಗೊಳಿಸಿ ಪಂದ್ಯ ನಡೆಯುವಂತೆ ಮಾಡುವ ಸಾಮರ್ಥ್ಯ ‘ಸಬ್‌ ಏರ್‌’ ಯಂತ್ರ ಹೊಂದಿದೆ. ಇನ್ನು ಮೂರು ತಿಂಗಳಲ್ಲಿ ‘ಸಬ್‌ ಏರ್‌’ ಯಂತ್ರ ಅಳವಡಿಸುವ ಕಾರ್ಯ ಪೂರ್ಣಗೊಳ್ಳಲಿದೆ. ಹೈದರಾಬಾದ್‌ ಮೂಲದ ಗ್ರೇಟ್‌ ಸ್ಪೋರ್ಟ್ಸ್‌ ಇನ್‌ಫ್ರಾ ಎನ್ನುವ ಸಂಸ್ಥೆ ಈ ಕೆಲಸದ ಗುತ್ತಿಗೆ ಪಡೆದುಕೊಂಡಿದ್ದು, ಮೂರು ತಿಂಗಳಲ್ಲಿ ಕಾಮಗಾರಿ ಪೂರ್ಣವಾಗುವ ಸಾಧ್ಯತೆಯಿದೆ. ಈ ಮೂಲಕ ಸಬ್‌ ಏರ್‌ ಸಿಸ್ಟಮ್‌ ತಂತ್ರಜ್ಞಾನವನ್ನು ಅಳವಡಿಸಿದ ವಿಶ್ವದ ಮೊಟ್ಟ ಮೊದಲ ಕ್ರಿಕೆಟ್‌ ಕ್ರೀಡಾಂಗಣ ಎಂಬ ಹಿರಿಮೆಗೆ ಚಿನ್ನಸ್ವಾಮಿ ಪಾತ್ರವಾಗಲಿದೆ.

"ಅಮೆರಿಕ, ಲಂಡನ್ ಮತ್ತು ಆಸ್ಟ್ರೇಲಿಯಾದ ಗಾಲ್ಫ್ ಸ್ಟೇಡಿಯಂಗಳಲ್ಲಿ ಇಂತಹ ಅತ್ಯಾಧುನಿಕ ವ್ಯವಸ್ಥೆ ಇದೆ. ಇದನ್ನೇ ಅಧ್ಯಯನ ಮಾಡಿದ ಕೆಎಸ್​ಸಿಎ ಕಾರ್ಯದರ್ಶಿ ಬ್ರಿಜೇಶ್ ಪಟೇಲ್, ಕ್ರಿಕೆಟ್ ಕ್ಷೇತ್ರದಲ್ಲಿ ಈ ಆಧುನಿಕ ವ್ಯವಸ್ಥೆ ಅಳವಡಿಸಬೇಕೆಂದು ನಿರ್ಧರಿಸಿದ್ರು. ಅವರ ಕನಸಿನ ಫಲವೇ, ಇಂದು ವಿಶ್ವದಲ್ಲಿ ಸಬ್ ಏರ್ ಸಿಸ್ಟಂ ಅಳವಡಿಸಿಕೊಂಡ ಮೊಟ್ಟ ಮೊದಲ ಕ್ರಿಕೆಟ್​​ ಕ್ರೀಡಾಂಗಣ ಎಂಬ ಖ್ಯಾತಿಗೆ ಚಿನ್ನಸ್ವಾಮಿ ಪಾತ್ರವಾಗಿದೆ" 
        - ವಿನಯ್ ಮೃತ್ಯುಂಜಯ, ಕೆಎಸ್​​ಸಿಎ ಮಾಧ್ಯಮ ವಕ್ತಾರ

ಅಂದಹಾಗೇ ಕೆಎಸ್​ಸಿಎ ಇಂತಹ ಹೈಟೆಕ್​ ವ್ಯವಸ್ಥೆಯನ್ನು ಹೊಂದಲು ಕನಸು ಕಂಡಿದ್ದು ಇಂದು ನಿನ್ನೆಯಲ್ಲ. ಸುಮಾರು 10 ವರ್ಷಗಳ ಹಿಂದೆಯೇ ಯೋಜನೆ ಸಿದ್ಧವಾಗಿತ್ತು. ಆದರೆ ಹೆಚ್ಚು ಪಂದ್ಯಗಳಿದ್ದ ಕಾರಣ ಅದು ಸಾಧ್ಯವಾಗಿರಲಿಲ್ಲ. ಸೂಕ್ತ ಸಮಯ ನೋಡಿ ಈಗ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. 40 ವರ್ಷದ ಮಣ್ಣನ್ನು ಕೂಡ ಬದಲಾಗಿಸಲಾಗುತ್ತಿದೆ.

ಚಿನ್ನಸ್ವಾಮಿ ಮೈದಾನದ ಔಟ್‌ ಫೀಲ್ಡ್‌ ಸುತ್ತಲೂ ಒಂದೂವರೆ ಅಡಿ ಆಳದಲ್ಲಿ ನಾಲ್ಕು ಮೀಟರ್ಸ್ ಅಂತರದಲ್ಲಿ ಕೊಳವೆಗಳನ್ನು ಅಳ ವಡಿಸಲಾಗುತ್ತದೆ. ಎರಡು ಕೊಳವೆಗಳ ನಡುವೆ ಸಂಪರ್ಕ ಕಲ್ಪಿಸಲು ಸಣ್ಣ ಕೊಳವೆಗಳನ್ನು ಹಾಕಲಾಗುತ್ತದೆ. ಸಣ್ಣ ಕೊಳವೆಗಳ ಮೂಲಕ ಮುಖ್ಯ ಕೊಳವೆಗೆ ಸಂಪರ್ಕ ಕಲ್ಪಿಸಿ ಭೂಮಿಯ ಒಳಗಿನಿಂದಲೇ ನೀರು ಹೊರ ಹೋಗುವ ವ್ಯವಸ್ಥೆ ಇರುತ್ತದೆ. ಪಂದ್ಯದ ವೇಳೆ ಮಳೆ ಬಂದರೆ ಸಬ್‌ ಏರ್‌ ಯಂತ್ರದ ಕೆಲಸ ಆರಂಭವಾಗುತ್ತದೆ. ಮಳೆಯ ನೀರು ಭೂಮಿಯ ಮೂಲಕ ಕೊಳವೆಯ ಒಳಗೆ ಸೇರಲು ವ್ಯವಸ್ಥೆ ಇದೆ. ಮಳೆಯ ನೀರಿನ ಜೊತೆ ಮಣ್ಣು ಕೂಡ ಒಳ ಸೇರದಂತೆ ಎಚ್ಚರಿಕೆ ವಹಿಸಲು ಜಲ್ಲಿಕಲ್ಲು ಹಾಕಲಾಗುತ್ತದೆ.

ಕೃತಕವಾಗಿ ಹಾಕಲಾಗಿರುವ ಹುಲ್ಲಿನ ಮೇಲೆ ಬೀಳುವ ಮಳೆ ನೀರು ಸಣ್ಣ ಸಣ್ಣ ಕೊಳವೆಗೆ ಹೋಗುತ್ತದೆ. ಈ ನೀರು ಮುಖ್ಯ ಕೊಳವೆಗೆ ಸೇರಿ ಹೊರ ಹೋಗುತ್ತದೆ. ಹಾಗೆ ಕೊಳವೆಯಲ್ಲಿ ಸಂಗ್ರಹವಾದ ನೀರು ಹೊರ ಹೋದ ಬಳಿಕ ಒಂದೆಡೆ ಸಂಗ್ರಹಿಸಲು ಕೆಎಸ್‌ಸಿಎ ವ್ಯವಸ್ಥೆ ಮಾಡಿಕೊಂಡಿದೆ. ಮಳೆಯ ನೀರು ಹೊರಬಂದ ಬಳಿಕ ಅದೇ ಕೊಳವೆಯ ಮೂಲಕ ಯಂತ್ರದ ಸಹಾಯದಿಂದ ವೇಗವಾಗಿ ಗಾಳಿಯನ್ನು ಹಾಯಿಸಲಾಗುತ್ತದೆ. ಮಣ್ಣಿನ ಕೆಳಗಡೆ ನೀರನ್ನು ಎಳೆಯುವಂತಹ ಪೈಪ್​ಗಳನ್ನು ಆಳವಡಿಸಲಾಗುತ್ತದೆ. ಮಳೆಯಾದ 30-40 ನಿಮಿಷದಲ್ಲಿ ಮೈದಾನದ ಮೇಲಿರುವ ನೀರನ್ನು ಎಳೆದು, ಒಂದೆಡೆ ಸಂಗ್ರಹಿಸಲಾಗುತ್ತದೆ. ಆನಂತರ ಅದೇ ನೀರನ್ನು ಪುನರ್​​ಬಳಕ್ಕೆ ಮಾಡುವ ಕೆಎಸ್​ಸಿಎ, ಬೆಂಗಳೂರು ಜಲಮಂಡಳಿಗೆ ನೀರು ನೀಡುವ ಸಲುವಾಗಿ ಒಡಂಬಡಿಕೆ ಮಾಡಿಕೊಳ್ಳುವ ಯೋಚನೆಯಲ್ಲಿದೆ. ಒಟ್ಟು 4 ಕೋಟಿ ವೆಚ್ಚದಲ್ಲಿ ಈ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ ಎನ್ನುತ್ತಾರೆ ವಿನಯ್ ಮೃತ್ಯುಂಜಯ.

ಇದನ್ನು ಓದಿ: ವ್ಯಾಯಾಮ ಮಾಡಿ ವಿದ್ಯುತ್ ಉತ್ಪಾದಿಸಿ:ಭಾರತದ ಹಳ್ಳಿಗಳಿಗೆ ಕೋಟ್ಯಾಧಿಪತಿಯ ಕೊಡುಗೆ

ಚಿನ್ನಸ್ವಾಮಿ ಕ್ರಿಕೆಟ್​​ ವಲಯದಲ್ಲೇ ಸ್ಪೆಷಲ್​​

ಚಿನ್ನಸ್ವಾಮಿ ಮೈದಾನ ವಿಶ್ವದಲ್ಲೇ ವಿಶೇಷ ವ್ಯವಸ್ಥೆಯನ್ನು ಹೊಂದಿದ ಕ್ರಿಕೆಟ್​ ಮೈದಾನ. ಸೌರ ವಿದ್ಯುತ್‌ ವ್ಯವಸ್ಥೆ, ಮಳೆ ನೀರಿನ ಕೊಯ್ಲು ಅಳವಡಿಸಿಕೊಂಡಿರುವ ಕ್ರೀಡಾಂಗಣಗಳ ಪೈಕಿ ಚಿನ್ನಸ್ವಾಮಿ ಮೊದಲ ಸ್ಟೇಡಿಯಂ. ಕ್ರಿಕೆಟ್‌ ಪಂದ್ಯಗಳ ವೇಳೆ ವಿಶೇಷ ಚೇತನರಿಗೆ ನೆರವಾಗಲು ವಿದ್ಯುತ್‌ ಚಾಲಿತ ಕುರ್ಚಿಯನ್ನು ಅಳವಡಿಸಿರುವ ಚಿನ್ನಸ್ವಾಮಿಯ ವೈಶಿಷ್ಠ್ಯತೆಗೆ ಸಬ್‌ ಏರ್‌ ಸಿಸ್ಟಮ್‌ ಹೊಸ ಸೇರ್ಪಡೆಯಾಗಲಿದೆ. ಕ್ರಿಕೆಟ್​ನಲ್ಲಿ ಹಲವು ದಾಖಲೆಗಳಿಗೆ ಸಾಕ್ಷಿಯಾಗಿರುವ ಚಿನ್ನಸ್ವಾಮಿ ಈಗ ತಂತ್ರಜ್ಞಾನದ ಮೂಲಕವೂ ಮನೆಮಾತಾಗುತ್ತಿದೆ. 

ಇದನ್ನು ಓದಿ:

1. ಸಾಹರ್ ಜಮಾನ್- ಕಲೆಯ ರಚನೆ ಮತ್ತು ತಯಾರಿಕೆ ಸುಲಭ ಸಾಧ್ಯ

2. ಮೇಕಥಾನ್: ರೆಡ್‍ಕ್ರಾಸ್ ಮತ್ತು ಬೆಂಗಳೂರಿನ ಅನ್ವೇಶಕರು ವಿಕಲಚೇತನರ ಸಹಾಯಕ್ಕೆ ತಂಡವಾಗಿದ್ದಾರೆ

3. ಶಿಕ್ಷಣ ಲೋಕದಲ್ಲಿ ಹೊಸ ಬದಲಾವಣೆಯ ಅಲೆ... ಡಿಜಿಟಲ್ ಇಂಡಿಯಾ ಕನಸು ನನಸಾಗಿಸುವತ್ತ ಗೀತಾಂಜಲಿ ಖನ್ನಾ