ಫುಡ್ ಪ್ರಿಯರ ಹಾಟ್ಸ್ಪಾಟ್ ‘ಟಕ್ ಶಾಪ್’
ಅಶ್ವಿನಿ ಹೆಚ್.ಆರ್.
ಗ್ರಾಹಕರು ಆರಾಮಾಗಿ ಕೂರುವಂತೆ ನೀಟಾಗಿ ಜೋಡಿಸಿಟ್ಟಿರುವ ಮೇಜು-ಕುರ್ಚಿಗಳು, ಗೋಡೆಗಳ ಮೇಲೆ ಮೂಡಿರುವ ಫನ್ನಿ ಪೈಂಟಿಂಗ್ಸ್, ಘಮಗುಟ್ಟುವ ಬಿಸಿ ಬಿಸಿಯಾದ ರುಚಿಕಟ್ಟಾದ ಖಾದ್ಯಗಳು...ಆಹಾ! ಒಟ್ಟಾರೆಯಾಗಿ ಇಂಟಿರೀಯರ್, ಸವಿಯುವ ತಿನಿಸುಗಳು, ಆತಿಥ್ಯ, ಸರಳತೆ ಎಲ್ಲವೂ ಸೂಪರ್...! ಯಾರೇ ಆದರೂ ಒಮ್ಮೆ ಇಲ್ಲಿಗೆ ಕಾಲಿಟ್ಟರೆ ಪರ್ಮನೆಂಟ್ ಗ್ರಾಹಕರಾಗುವುದು ಗ್ಯಾರಂಟಿ. ಇಷ್ಟೆಲ್ಲಾ ಹೇಳುತ್ತಿದ್ದಂತೆ ನಿಮಗೊಂದು ಕೆಫೆ ನೆನಪಾಗುತ್ತಿದ್ದರೆ ನಿಮ್ಮ ಊಹೆ ಸರಿ, ನಾವು ಹೇಳುತ್ತಿರುವುದು ಕೂಡ ಅದೇ ಕೆಫೆಯ ಬಗ್ಗೆ ಅದೇ ಕೋರಮಂಗಲದಲ್ಲಿರುವ ‘ಟಕ್ ಶಾಪ್’.

‘ಟಕ್ ಶಾಪ್’... ಸಾಮಾನ್ಯವಾಗಿ ಬೆಂಗಳೂರಿಗರಿಗೆ ಈ ಹೆಸರು ಚಿರಪರಿಚಿತ. ಅದರಲ್ಲೂ ಸ್ನ್ಯಾಕ್ಸ್ ಪ್ರಿಯರಿಗೆ... 2003ರಲ್ಲಿ ಆರಂಭವಾದ ಈ ಕೆಫೆ ಬಹುಬೇಗ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಅದೆಷ್ಟು ಬೇಗ ಎಂದರೆ ಕೆಫೆ ಆರಂಭವಾದ ಮೂರೇ ತಿಂಗಳಲ್ಲಿ ಫೇಸ್ಬುಕ್ನಲ್ಲಿ ಗ್ರಾಹಕರಿಂದ 20,000 ಲೈಕ್ಸ್ ಪಡೆದುಕೊಂಡಿದೆ. ಹೌದು, ಅಲ್ಲಿನ ಫುಡ್ ಮಾಡುವ ಮ್ಯಾಜಿಕ್ ಇಂದು ‘ಟಕ್ ಶಾಪ್’ ಇಷ್ಟರ ಮಟ್ಟಿಗೆ ಬೆಳೆಯಲು ಕಾರಣವಾಗಿದೆ. ಕೇವಲ ಫುಡ್ನಿಂದ ಮಾತ್ರವಲ್ಲದೆ, ಅಲ್ಲಿನ ಪ್ರೀತಿಯ ಆತಿಥ್ಯ, ಮನೆಯ ವಾತವರಣ ಒಂದು ಸ್ವೀಟ್ ಫೀಲಿಂಗ್ ಕೊಡುತ್ತದೆ ಎಂದರೆ ತಪ್ಪಾಗಲಾರದು.
ಕೆಫೆ ಮಾಡುವ ಐಡಿಯಾ ಬಂದದ್ದು ಹೀಗೆ...
ಬೆಂಗಳೂರಿನಂಥ ಮಹಾನಗರಿಯಲ್ಲಿ ಜನ ಮೆಚ್ಚುವಂತಹ ಒಂದೊಳ್ಳೆಯ ಕೆಫೆ ಮಾಡುವುದು ಎಂದರೆ ಹುಡುಗಾಟದ ಮಾತಲ್ಲ, ಆದರೆ ಟಕ್ ಶಾಪ್ನಂಥ ಕೆಫೆ ನಿರ್ಮಾಣವಾಗಿದ್ದು ಮಾತ್ರ ಇಬ್ಬರು ಜಂಟಲ್ಮನ್ಗಳ ಪರಿಶ್ರಮದಿಂದ ಹಾಗೂ ಕಾರ್ಯಕ್ಷಮತೆಯಿಂದ. ನಿಜ, ಮಯಾಂಕ್ ಅಗರ್ವಾಲ್ ಹಾಗೂ ಅಹ್ಮದ್ ಶರೀಫ್ ಎಂಬ ಇಬ್ಬರು ಆಪ್ತ ಮಿತ್ರರು ಸೇರಿ ಹುಟ್ಟುಹಾಕಿರುವ ಈ ಟಕ್ಶಾಪ್ ಹೀಗೆ ಬೆಳೆದು ನಿಂತ ಪರಿ ಅದ್ಭುತ. ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಹೋಟೆಲ್ ಮ್ಯಾನೇಜ್ಮೆಂಟ್ ಕೋರ್ಸ್ ಮುಗಿಸಿದ ತಕ್ಷಣ ಸ್ವಂತಕ್ಕೆ ಏನಾದರೊಂದು ಬ್ಯೂಸಿನೆಸ್ ಮಾಡಬೇಕೆಂಬ ಐಡಿಯಾ ಇಬ್ಬರ ತಲೆಯಲ್ಲಿತ್ತು. ಇವರ ಕನಸನ್ನು ಮನಗಂಡ ಮಯಾಂಕ್ ಅವರ ಸಹೋದರ ವರುಣ್ ಇವರ ಕನಸಿನ ಗಿಡಕ್ಕೆ ನೀರೆರೆದು ಪ್ರೋತ್ಸಾಹಿಸಿದರು. ಜಗದ್ವಿಖ್ಯಾತ ಫಾಸ್ಟ್ ಫುಡ್ ತಯಾರಿಕಾ ಕಂಪನಿಗಳಾದ ಕೆಎಫ್ಸಿ ಮತ್ತು ಮೆಕ್ ಡೊನಾಲ್ಡ್ನಂತೆ ನಮ್ಮ ಲೋಕಲ್ನಲ್ಲೂ ಉತ್ತಮ ಗುಣಮಟ್ಟದ ಸ್ವಾದಿಷ್ಟ ಬರ್ಗರ್ಗಳು ತಯಾರಾಗಬೇಕು ಎಂಬುದು ವರುಣ್ ಅವರ ಅನಿಸಿಕೆಯಾಗಿತ್ತು. ಕೊನೆಗೆ ಅವರಿಂದಲೇ ಸ್ಫೂರ್ತಿ ಪಡೆದುಕೊಂಡ ಮಯಾಂಕ್ ಹಾಗೂ ಅಹ್ಮದ್ ಶರೀಫ್ ಇಂದು ತಿಂಗಳಿಗೆ 700 ಕ್ಕಿಂತಲೂ ಹೆಚ್ಚು ಬರ್ಗರ್ಗಳನ್ನು ಸರ್ವ್ ಮಾಡುವ ಮಟ್ಟಕ್ಕೆ ಬೆಳೆದಿದ್ದಾರೆ. ಹಾಗೆ ನೋಡಿದರೆ ಟಕ್ಶಾಪ್ ಬಿಟ್ಟರೆ ಕೆಲವೇ ಕೆಲವು ಸ್ಟೋರ್ಗಳಲ್ಲಿ ಮಾತ್ರ ಹೀಗೆ ಬರ್ಗರ್ ತ್ವರಿತವಾಗಿ ಖಾಲಿಯಾಗುವುದು!

ಸಿಂಪಲ್ಲಾಗಿ ಶುರುವಾಯ್ತು...
ಟಕ್ಶಾಪ್ನಲ್ಲಿ ಇಷ್ಟೆಲ್ಲಾ ತಿನಿಸುಗಳು ಸಿಗುತ್ತವೆ, ಅಂದಮೇಲೆ ಇಲ್ಲಿಯ ಶೆಫ್ಗಳು ಭರ್ಜರಿಯಾಗೇ ಇರಬೇಕು ಎಂದು ನಾವಂದುಕೊಂಡಿದ್ದರೆ, “ಹಾಗೇನು ಇಲ್ಲ, ನಾವು ಟಕ್ಶಾಪ್ ಆರಂಭಿಸುವಾಗ ಅಹ್ಮದ್ ಮತ್ತು ನನ್ನನ್ನು ಬಿಟ್ಟು ಇದ್ದದ್ದು ಮೂರು ಜನ ಕುಕ್ಗಳು. ನಾನು ಬೇಕರಿ ಹಾಗೂ ಕನ್ಫೆಕ್ಷನರಿಯಲ್ಲಿ ಸ್ಪೆಷಲೈಸೇಶನ್ ಮಾಡಿಕೊಂಡಿದ್ದರೆ, ಅಹ್ಮದ್ ಫುಡ್ ಅಂಡ್ ಬೆವರೇಜ್ ಪ್ರ್ರೊಡಕ್ಷನ್ನಲ್ಲಿ ತರಬೇತಿ ಪಡೆದಿದ್ದು, ಜೊತೆಗೆ ಇದಕ್ಕೆ ಸಂಬಂಧಿಸಿದಂತೆ ಇತರೆ ಸರ್ಟಿಫಿಕೇಟ್ಗಳನ್ನು ಪಡೆದುಕೊಂಡಿದ್ದೇವೆ. ಇದರಿಂದ ನಮಗೆ ಫುಡ್ ಇಂಡಸ್ಟ್ರಿ ಬಗ್ಗೆ ಸ್ವಲ್ಪ ನಾಲೆಡ್ಜ್ ಬಂದಿತ್ತು. ಆನಂತರ ನಾವು ಕುಟುಂಬದವರ ಸಹಾಯದಿಂದ ಲೋನ್ ಪಡೆದು, ಫೆಬ್ರವರಿ 2003ರಲ್ಲಿ ಟಕ್ ಶಾಪ್ ಆರಂಭಿಸಿದೆವು. ಪ್ರೊಫೆಶನಲ್ ಶೆಫ್ಗಳಿಗೆ ನೇಮಕ ಮಾಡಿಕೊಳ್ಳದೆ, ಹೋಮ್ ಶೆಫ್ಗಳನ್ನು ನೇಮಕ ಮಾಡಿಕೊಂಡೆವು. ಆನಂತರ ಅವರಿಗೆ ತರಬೇತಿ ಕೊಟ್ಟೆವು. ಈ ಪ್ಲಾನ್ ವರ್ಕ್ ಔಟ್ ಆಯಿತು. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ನಮ್ಮ ಕೆಫೆಯಲ್ಲಿ ಈಗ ಎಲ್ಲಾ ರೀತಿಯ ತಾಜಾ ತಿನಿಸುಗಳು ತಯಾರಾಗುತ್ತವೆ” ಎನ್ನುತ್ತಾರೆ ಮಯಾಂಕ್.
ಏನುಂಟು ಏನಿಲ್ಲ?
ಮೊದಲೇ ಹೇಳಿದ ಹಾಗೆ ಟಕ್ ಶಾಪ್ನಲ್ಲಿ ಎಲ್ಲಾ ರೀತಿಯ ಸ್ಪೈಸಿ, ಸ್ವಾದಿಷ್ಟಕರ ತಿನಿಸುಗಳು ಲಭ್ಯ. ಬ್ರೇಕ್ಫಾಸ್ಟ್ ಮಾಡುವವರಿಗೆ, ಸಂಜೆಯ ಸ್ನಾಕ್ಸ್ ಫುಡ್ ಬೇಕೆನ್ನುವವರಿಗೆ ಹೀಗೆ ಬೆಳಗ್ಗೆಯಿಂದ ರಾತ್ರಿವರೆಗೂ ವಿದೇಶಿ ತಿಂಡಿಗಳಿಂದ ಹಿಡಿದು, ಭಾರತೀಯ ಫುಡ್ಗಳು ಇಲ್ಲಿ ಲಭ್ಯ. ವೆರೈಟಿ ಬರ್ಗರ್ಸ್, ಡಬಲ್ ಎಗ್ ಆಮ್ಲೆಟ್, ಬೇಕನ್/ಸಲಾಮಿ, ಸಾಸೇಜ್ಗಳು, ಮ್ಯಾಶ್ಡ್ ಪೊಟಾಟೊ ರೆಸಿಪಿ, ಕ್ಯಾರಮೆಲೈಜ್ಡ್ ಆನಿಯನ್ಸ್, ಬೇಕ್ಡ್ ಬೀನ್ಸ್, ನಿಮ್ಮ ಫೇವರಿಟ್ ಬೆವರೇಜ್ನೊಂದಿಗೆ ಬಟರ್ಡ್ ಟೋಸ್ಟ್, ಹರ್ಬಲ್ ಜ್ಯೂಸ್ಗಳು, ಕಪ್ ಕೇಕ್, ಮಿಲ್ಕ್ ಶೇಕ್ಗಳು ಟಕ್ಶಾಪ್ನಲ್ಲಿ ಕ್ಷಣಾರ್ಧದಲ್ಲಿ ರೆಡಿಯಾಗುತ್ತವೆ. ಅಷ್ಟೇ ಅಲ್ಲ “ಸಖತ್ ಕ್ಲೀನ್ ಮತ್ತು ಟೇಸ್ಟಿಯಾಗಿರುವ ಈ ರೆಸಿಪಿಗಳನ್ನು ಒಮ್ಮೆ ಸವಿದರೆ ಮತ್ತೆ ಸವಿಯಬೇಕೆನಿಸುತ್ತದೆ” ಎನ್ನುತ್ತಾರೆ ಅಲ್ಲಿಗೆ ಇದುವರೆಗೂ ಭೇಟಿ ನೀಡಿರುವ ಗ್ರಾಹಕರು.

ಫುಡ್ ಲೋಕದಲ್ಲೊಂದು ಸುತ್ತು
ಕೋರಮಂಗಲ ಫುಡ್ ಇಂಡಸ್ಟ್ರಿಯಲ್ಲಿ ಸಾಧನೆ ಮಾಡುವವರಿಗೆ ಹಾಟ್ ಸ್ಪಾಟ್. ಆದರೂ ಈ ಇಂಡಸ್ಟ್ರಿ ಇಂದು ಏರಿಯಾಗಳನ್ನು ಮಾತ್ರ ಅವಲಂಬಿಸದೆ ಮುನ್ನುಗ್ಗುತ್ತಿದೆ. ಕಾರಣ ಜನರ ಲೈಫ್ ಸ್ಟೈಲ್, ವೀಕೆಂಡ್ ಮಸ್ತಿಗೆ ಇಂತಹ ಟಕ್ ಶಾಪ್, ರೆಸ್ಟೋರೆಂಟ್, ಹೋಟೆಲ್ಗಳನ್ನು ಆರಿಸುವ ಮಂದಿ ಒಂದು ಕಡೆಯಿದ್ದರೆ, ಮನೆ ಊಟಕ್ಕಿಂತಲೂ ಸ್ವಲ್ಪ ವಿಭಿನ್ನತೆಯಿಂದ ಕಾಣುವ ಕೆಫೆಗಳ ಊಟದ ಶೈಲಿಗೆ ಆಧುನಿಕ ತಲೆಮಾರಿನ ಜನರು ಒಗ್ಗಿ ಹೋಗಿರುವುದು. ಎಲ್ಲರಿಗೂ ಗೊತ್ತಿರುವ ಹಾಗೆ ವಿಶ್ವದಲ್ಲಿಯೇ ಬೇರೆ ಕ್ಷೇತ್ರಗಳಿಗಿಂತಲೂ ಆಹಾರ ಕ್ಷೇತ್ರ ಅತ್ಯಂತ ದೊಡ್ಡ ಕ್ಷೇತ್ರವಾಗಿ ವೇಗವಾಗಿ ಬೆಳೆಯುತ್ತಿದೆ. ಒಳ್ಳೆಯ ಊಟ ಸಿಗುತ್ತದೆ ಎಂದರೆ ಜನ ಎಷ್ಟೇ ಸಮಯ, ದುಡ್ಡು ಖರ್ಚಾದರೂ ಹುಡುಕಿಕೊಂಡು ಹೋಗಿ ತಿನ್ನುವುದೇ ಇದಕ್ಕೆ ಸಾಕ್ಷಿ. ಇನ್ನು ಜೊಮಾಟೊ ಮೌಲ್ಯಮಾಪನದ ವರದಿಯೂ ಇದೇ ಅಂಶವನ್ನು ಎತ್ತಿ ಹಿಡಿಯುತ್ತದೆ. ಭಾರತದಲ್ಲಿ ಕ್ಯೂಎಸ್ಆರ್ ಚೈನ್ ಕೂಡ ಬೆಳೆಯುತ್ತಿದ್ದು, ಬೆಂಗಳೂರಿನಲ್ಲಿ ಮಸ್ತ್ ಕಲಂದರ್, ಅಮ್ಮಿ ಬಿರಿಯಾನಿ ಮಾಡಿರುವ ಮೋಡಿ ಗೊತ್ತಿರುವ ಸಂಗತಿಯೇ.