ಕೇವಲ 20 ರೂಪಾಯಿಗೆ ವಾಟರ್ ಪ್ಯೂರಿಫೈಯರ್..!

ಟೀಮ್​ ವೈ.ಎಸ್​. ಕನ್ನಡ

ಕೇವಲ 20 ರೂಪಾಯಿಗೆ ವಾಟರ್ ಪ್ಯೂರಿಫೈಯರ್..!

Tuesday February 21, 2017,

3 min Read

ನೀರು ಅಮೂಲ್ಯ. ಅದನ್ನು ಯೋಚಿಸಿ ಬಳಸಿಕೊಳ್ಳಬೇಕು. ಅದರಲ್ಲೂ ಕುಡಿಯುವ ನೀರಿನ ಬಗ್ಗೆ ಇನ್ನಿಲ್ಲದ ಕಾಳಜಿ ಬೆಳೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಶುದ್ಧ ಕುಡಿಯುವ ನೀರಿಗಾಗಿ ಪರದಾಟ ನಡೆಯುತ್ತಿದೆ. ಇರುವ ನೀರನ್ನೇ ಶುದ್ಧಗೊಳಿಸಿ ಕುಡಿಯಲು ಉಪಯೋಗಿಸಿಕೊಳ್ಳುವ ದಿನವೂ ದೂರವಿಲ್ಲ. ಈ ಮಧ್ಯೆ ಬೆಂಗಳೂರು, ಮೈಸೂರು ಮತ್ತು ಇತರೆ ದೊಡ್ಡ ನಗರಗಳಲ್ಲಿ ಕಾರ್ಪೋರೇಷನ್​ ಅಥವಾ ಜಲಮಂಡಳಿ ಸಪ್ಲೈ ಮಾಡುವ ನೀರನ್ನು ಹಾಗೆಯೇ ಕುಡಿಯುವ ಸ್ಥಿತಿ ಈಗಿಲ್ಲ. ನೀರನ್ನು ಶುದ್ಧಗೊಳಿಸುವ ಪ್ರಕ್ರಿಯೆಯಲ್ಲಿ ಅನೇಕ ಕೆಮಿಕಲ್​ಗಳನ್ನು ಹಾಕಿ, ಅದನ್ನು ಜನರಿಗೆ ತಲುಪಿಸುತ್ತಾ ಇರುವುದು ಸುಳ್ಳಲ್ಲ.

image


ಮನುಷ್ಯನಿಗೆ ಕುಡಿಯುವ ನೀರು ಬಹಳ ಮುಖ್ಯ. ಅದು ಎಷ್ಟು ಶುದ್ಧವಾಗಿರುತ್ತದೋ ಅಷ್ಟೇ ನಮ್ಮ ಆರೋಗ್ಯವೂ ಶುದ್ಧವಾಗಿರುತ್ತದೆ. ಹಾಗಾಗಿ ಇತ್ತೀಚಿನ ದಿನಗಳಲ್ಲಿ ಹೆಚ್ಚೆಚ್ಚು ಕುಡಿಯುವ ನೀರಿನ ಶುದ್ಧಗೊಳಿಸುವ ಯಂತ್ರಗಳು ಬಂದಿವೆ. ಆದರೂ ಗ್ರಾಮೀಣ ಪ್ರದೇಶವನ್ನು ಆ ವಾಟರ್ ಪ್ಯೂರಿಫೈಯರ್​ಗಳು ಸಂಪೂರ್ಣವಾಗಿ ತಲುಪಿಲ್ಲ. ಪರಿಣಾಮ ಇಂದಿಗೂ ಅನೇಕ ಜನರು ಶುದ್ಧೀಕರಣಗೊಳ್ಳದ ನೀರನ್ನೇ ಸೇವಿಸುತ್ತಿದ್ದಾರೆ. ವಾಟರ್​ ಪ್ಯೂರಿಫೈಯರ್​ಗಳು ದುಬಾರಿ ಬೆಲೆ ಹೊಂದಿರುವುದರಿಂದ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಅದನ್ನು ಮನೆಗೆ ಹಾಕಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ರಾಸಾಯನಿಕಯುಕ್ತ ಅಥವಾ ಶುದ್ಧಗೊಳ್ಳದ ನೀರನ್ನೇ ಸೇವಿಸಿ ಸಾಕಷ್ಟು ಜನರು ಆರೋಗ್ಯದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.

ಆದರೆ ಈ ಸಮಸ್ಯೆಗಳಿಗೆಲ್ಲಾ ಫುಲ್​ ಸ್ಟಾಪ್​ ಹಾಕಲು ಕಾಲ ಕೂಡಿ ಬಂದಿದೆ. ಬೆಳಗಾವಿಯ ಎಂಜಿನಿಯರಿಂಗ್ ವಿದ್ಯಾರ್ಥಿ ನಿರಂಜನ್ ಕರಗಿ ಕೈಗೆಟುಕುವ ದರದಲ್ಲಿ ನೀರು ಶುದ್ಧೀಕರಣ ಯಂತ್ರವನ್ನು ಕಂಡುಹಿಡಿದಿದ್ದಾರೆ. ಅದು ಎಷ್ಟು ಕಡಿಮೆ ಎಂದರೆ ಆ ವಾಟರ್ ಪ್ಯೂರಿಫೈಯರ್ ಬೆಲೆ ಕೇವಲ 20 ರೂಪಾಯಿ.

image


ಪರಿಸರ ಸ್ನೇಹಿ

ವಾಟರ್ ಪ್ಯೂರಿಫೈಯರ್ ಪರಿಸರ ಸ್ನೇಹಿಯಾಗಿದೆ. ಬೆಳಗಾವಿಯ "ಅಂಗಡಿ ತಾಂತ್ರಿಕ ಮತ್ತು ವ್ಯವಸ್ಥಾಪನಾ ಮಹಾವಿದ್ಯಾಲಯ"ದಲ್ಲಿ ಅಂತಿಮ ವರ್ಷದ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ನಿರಂಜನ್​ಗೆ ಈ ವಾಟರ್ ಪ್ಯೂರಿಫೈಯರನ್ನು ಕಂಡು ಹಿಡಿಯಲು ಸೂರ್ತಿಯಾಗಿದ್ದು ಶಾಲಾಮಕ್ಕಳು..! ನಿರಂಜನ್ ಅವರ ಮನೆ ಬಳಿ ಇರುವ ಆಟದ ಮೈದಾನದಲ್ಲಿ ಶಾಲಾ ಮಕ್ಕಳು ಪ್ರತಿ ದಿನವೂ ಆಟ ಆಡುತ್ತಿದ್ದರಂತೆ. ಆಟ ಆಡಿದ ನಂತರ ಆ ಮಕ್ಕಳು ಹತ್ತಿರದಲ್ಲಿರುವ ಟ್ಯಾಂಕ್​ನಿಂದ ಕಲುಷಿತ ನೀರನ್ನು ಕುಡಿಯುತ್ತಿದ್ದರು. ಇದನ್ನು ಕಂಡ ನಿರಂಜನ್ ಯಾಕೆ ಒಂದು ವಾಟರ್ ಪ್ಯೂರಿಫೈಯರ್ ಕಂಡು ಹಿಡಿಯಬಾರದು ಎಂದು ತೀರ್ಮಾನಿಸಿದರು. ಅನೇಕ ಪ್ರಯತ್ನಗಳನ್ನು ಮಾಡಿದ್ದರು. ಕೆಲವೊಂದು ಯಶಸ್ವಿ ಆಗಲಿಲ್ಲ. ಇನ್ನು ಕೆಲವು ಉಪಯೋಗಿಸುವಂತೆ ಇರಲಿಲ್ಲ. ಆದ್ರೂ ನಿರಂಜನ್​ ತನ್ನ ಹಠ ಬಿಡಲಿಲ್ಲ. ಸತತ ಪ್ರಯತ್ನವನ್ನು ಮುಂದುವರೆಸಿದ್ರು.

" ನಮ್ಮ ಮನೆಯ ಮುಂದಿನ ಫೀಲ್ಡ್ ನಲ್ಲಿ ಹುಡುಗರು ಆಟವಾಡಿದ ನಂತರ ಅಲ್ಲಿನ ಗಲೀಜು ನೀರನ್ನು ಕುಡಿಯುತ್ತಿದ್ದರು ಆಗಲೇ ನನಗೆ ಈ ಪ್ಯೂರಿಫೈಯರ್ ಕಂಡುಹಿಡಿಬೇಕು ಎನಿಸಿದ್ದು. ಇದು ಗ್ರಾಮೀಣ ಪ್ರದೇಶದವರಿಗೆ ಮತ್ತು ಬಡವರಿಗೆ ಅನುಕೂಲವಾಗುತ್ತದೆ."
- ನಿರಂಜನ್, ಎಂಜಿನಿಯರಿಂಗ್ ವಿದ್ಯಾರ್ಥಿ

22 ವರ್ಷದ ನಿರಂಜನ್ ಅಗ್ಗದ ದರದಲ್ಲಿ ನೀರನ್ನು ಶುದ್ಧೀಕರಿಸುವ ಬಗ್ಗೆ ಕೆಲವು ದಿನಗಳ ಕಾಲ ಕೆಲಸ ಮಾಡಿದ ನಂತರ, ಒಂದಷ್ಟು ನೀರನ್ನು ಶುದ್ಧೀಕರಿಸಿ ಅದನ್ನು ಬೆಂಗಳೂರಿನಲ್ಲಿರುವ ಮುಖ್ಯ ಆಹಾರ ವಿಭಾಗೀಯ ಕಚೆರಿಗೆ ಕಳಿಸಿಹಿದರು. ಅಲ್ಲಿಂದ ಫಲಿತಾಂಶವೂ ಸಕಾರಾತ್ಮಕವಾಗಿ ಬಂದಿತ್ತು. ಈ ಯೋಜನೆಯನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲು ನಿರ್ಧಸಿದ ವಿದ್ಯಾರ್ಥಿ, ದೇಶಪಾಂಡೆ ಫೌಂಡೇಷನ್ ನ ಲೀಡರ್ಸ್ ಆಕ್ಸಿಲರೇಟಿಂಗ್ ಡೆವಲಪ್ ಮೆಂಟ್(ಎಲ್ ಇಎಡಿ) ಹಾಗೂ ಹುಬ್ಬಳ್ಳಿಯ ಸ್ಯಾಂಡ್ ಬಾಕ್ಸ್ ಸ್ಟಾರ್ಟ್ಅಪ್​ನೊಂದಿಗೆ ಚರ್ಚೆ ನಡೆಸಿದರು. ಎರಡೂ ಸಂಸ್ಥೆಗಳು ವಿದ್ಯಾರ್ಥಿ ನಿರಂಜನ್ ಕನಸಿಗೆ ಭಾಗಶಃ ಆರ್ಥಿಕ ನೆರವು ನೀಡಿದಾಗ ತಯಾರಾಗಿದ್ದೆ ಈ ಅಗ್ಗದ ನೀರು ಶುದ್ಧೀಕರಣ ಘಟಕ. 2016ರ ಜುಲೈನಲ್ಲಿ ಬಿಡುಗಡೆಯಾದ ಅಗ್ಗದ ದರದ ವಾಟರ್ ಪ್ಯೂರಿಫೈಯರ್ ಈ ವರೆಗೂ 8000 ಯುನಿಟ್​​ಗಳಷ್ಟು ಮಾರಾಟವಾಗಿದ್ದು, ಈ ಪೈಕಿ ಕೆಲವನ್ನು ಸೇನಾ ತರಬೇತಿಗಳಿಗೆಂದು ಬರುವ ಯೋಧರಿಗೂ ನೆರವಾಗಿದೆ.

ವಿದೇಶಗಳಿಂದಲೂ ಬೇಡಿಕೆ

ನಿರಂಜನ್ ತಯಾರಿಸಿರುವ ಈ ಅಗ್ಗದ ದರದ ವಾಟರ್ ಪ್ಯೂರಿಫೈಯರ್​ಗಾಗಿ ಆಫ್ರಿಕಾ, ಕತಾರ್ ದೇಶಗಳಿಂದಲೂ ಬೇಡಿಕೆ ಬರಲು ಪ್ರಾರಂಭವಾಗಿದೆ. ಸಧ್ಯಕ್ಕೆ ಯಾವುದೇ ಅಳತೆಯ ಬಾಟಲ್ ಗಳಿಗೂ ಸರಿ ಹೊಂದುವಂತಹ ವಾಟರ್ ಪ್ಯೂರಿಫೈಯರ್ ಮಾದರಿಯ ತಯಾರಿಕೆಯಲ್ಲಿ ನಿರತರಾಗಿರುವ ವಿದ್ಯಾರ್ಥಿ ನಿರಂಜನ್, ಕರ್ನಾಟಕ ರಾಜ್ಯ ಸರ್ಕಾರದೊಂದಿಗಿನ ಸಹಯೋಗದಲ್ಲಿ ರಾಜ್ಯಾದ್ಯಂತ ಇರುವ ಮಕ್ಕಳಿಗೆ ಈ ವಾಟರ್ ಪ್ಯೂರಿಫೈಯರ್ ನ್ನು ತಲುಪಿಸುವ ಉದ್ದೇಶ ಹೊಂದಿದ್ದಾರೆ. 

ಇದನ್ನು ಓದಿ:

1. ತೆರೆ ಹಿಂದೆ ಡಾಕ್ಟರ್​...ಸಿನಿಮಾದಲ್ಲಿ ಆ್ಯಕ್ಟರ್​​..!

2. ಕಷ್ಟದ ಜೊತೆ ಗುದ್ದಾಡಿ ಗೆದ್ದ ಛಲಗಾರ – ಸಿಎ ಪಾಸ್ ಮಾಡಿ ಚಾರ್ಟಡ್ ಅಕೌಂಟೆಂಟ್ ಆದ ಚಾಯ್ ವಾಲಾ 

3. ಅಪ್ಪನ ಪ್ರೀತಿ ಜೊತೆಗೆ ಕೇಕ್ ಉದ್ಯಮದಲ್ಲಿ ಯಶಸ್ವಿಯಾದ ಬೆಂಗಳೂರಿನ ಯುವತಿ