ಆವೃತ್ತಿಗಳು
Kannada

ಸಮಾಜದ ನಿಜವಾದ ಹೀರೋಗಳನ್ನು ಪುಸ್ತಕದ ಮೂಲಕ ಬೆಳಕಿಗೆ ತರುತ್ತಿರುವ ಮಹೇಶ್ ಭಟ್

ಟೀಮ್​​ ವೈ.ಎಸ್​​.

26th Oct 2015
Add to
Shares
4
Comments
Share This
Add to
Shares
4
Comments
Share

ಲೇಹ್‌ನಲ್ಲಿ ಕಲಾತ್ಮಕ ಹಿಮನದಿಗಳನ್ನು ನಿರ್ಮಿಸುವ 79 ವರ್ಷದ ಹಿಮನದಿಗಳ ಮನುಷ್ಯ ಚೆವಾಂಗ್ ನಾರ್ಫೆಲ್ ಅವರ ಬಗ್ಗೆ ಎಂದಾದರೂ ಕೇಳಿದ್ದೀರಾ? ಬೆಳ್ಳಿಕೂದಲುಗಳ, ಮೃದುವಾದ ಮಾತುಗಳ, ನಸುನಗೆಯ ಹಿಂದುಳಿದ ಮುಸ್ಲಿಂ ಮಹಿಳೆಯರಿಗೆ ಅವರ ಖುರಾನ್‌ ಪ್ರಕಾರದ ಸಂವಿಧಾನಿಕ ನಿಯಮಾವಳಿಗಳ ಅರಿವು ಮೂಡಿಸುವ ವ್ಯಕ್ತಿಯ ಕುರಿತು ಕೇಳಿದ್ದೀರಾ? ಅಥವಾ ಹಣವಿಲ್ಲದ ಕಾರಣ ವೈದ್ಯರು ಚಿಕಿತ್ಸೆ ನೀಡಲು ನಿರಾಕರಿಸಿದ ಸುಭಾಷಿಣಿ ಮಿಸ್ತ್ರಿಯವರ ಪತಿಯ ಪ್ರಕರಣ ನೆನಪಿದೆಯೇ? ಸುಭಾಷಿಣಿ ಅಡುಗೆ ಕೆಲಸ ಮಾಡುತ್ತಾರೆ, ನೆಲ ಒರೆಸುತ್ತಾರೆ, ಶೂ ಪಾಲಿಶ್ ಮಾಡುತ್ತಾರೆ ಮತ್ತು ತಮ್ಮ 4 ಮಕ್ಕಳನ್ನು ಬೆಳೆಸಲು ಹೇಗೆಲ್ಲಾ ಕಷ್ಟಪಟ್ಟು ಸಂಪಾದಿಸಬಹುದೋ ಹಾಗೆಲ್ಲಾ ಸಂಪಾದಿಸುತ್ತಾರೆ. ಅಲ್ಲದೇ ಉಚಿತವಾಗಿ ಹೆಲ್ತ್‌ ಕೇರ್ ಸೌಲಭ್ಯ ನೀಡುವ ಆಸ್ಪತ್ರೆ ನಿರ್ಮಾಣಕ್ಕೂ ಒದ್ದಾಡುತ್ತಿದ್ದಾರೆ.

ಇಂತಹ ನಿಜ ಜೀವನದ ಹೀರೋಗಳನ್ನು, ಅವರ ಕಥೆಗಳನ್ನು, ಅವರ ಬದುಕಿನ ಸಂಘರ್ಷಗಳನ್ನು ಅನ್ ಸಂಗ್ ಎಂಬ ಪುಸ್ತಕದ ಮೂಲಕ ಹೊರತಂದವರು ಮಹೇಶ್ ಭಟ್. ನಿಜವಾಗಿಯೂ ಇಂತಹ ಜನ ನಮ್ಮ ಮಧ್ಯೆಯೇ ಇದ್ದಾರೆ. ಅವರೆಲ್ಲರೂ ಸಮಾಜದಲ್ಲಿ ಒಂದೇ ಒಂದು ಸಣ್ಣ ಬದಲಾವಣೆ ತರಲು ಶ್ರಮಿಸುತ್ತಿದ್ದಾರೆ.

image


ಪ್ರಪಂಚಾದ್ಯಂತ ಅನೇಕ ಪತ್ರಿಕೆಗಳು ಮತ್ತು ಪ್ರಕಾಶನಗಳಲ್ಲಿ ಕೆಲಸ ಮಾಡಿ, ಅತ್ಯುತ್ತಮ ಫೋಟೋಜರ್ನಲಿಸ್ಟ್ ಎಂಬ ಮೆಚ್ಚುಗೆಗೆ ಪಾತ್ರವಾದವರು ಮಹೇಶ್ ಭಟ್. ಅದರಲ್ಲಿ ಪ್ರಮುಖವಾದವು ನ್ಯೂಸ್ ವೀಕ್ ಮಾರಿಕ್ಲೇರ್, ನ್ಯೂಯಾರ್ಕ್ ಟೈಮ್ಸ್ ಮ್ಯಾಗಜೀನ್ ಮತ್ತು ದಿ ಗಾರ್ಡಿಯನ್.

ಹಿಂದಿರುಗಿದ ಸಮಯ

ಕೆಲವೊಂದು ಘಟನೆಗಳು ಮಹೇಶ್‌ರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದುಬಿಟ್ಟಿದ್ದವು. ಇಂತಹ ಘಟನೆಗಳೇ ಅವರಿಗೆ ಪುಸ್ತಕ ಬರೆಯಲು ಪ್ರೇರೇಪಿಸಿದ್ದವು. 1986ರಲ್ಲಿ ಅವರು ಕಾಲೇಜಿನಲ್ಲಿ ಓದುತ್ತಿದ್ದ ಸಂದರ್ಭದಲ್ಲಿ ಅವರು ಟಿ.ಎಸ್.ಸತ್ಯನ್, ರಘುರಾಯ್, ಎಸ್.ಪಾಲ್ ರವರಂತಹ ಹಿರಿಯ ಫೋಟೋಗ್ರಾಫರ್‌ಗಳಿಗೆ ತಮ್ಮ ಫೋಟೋಗಳನ್ನು ತೋರಿಸಲು ದೆಹಲಿಗೆ ತೆರಳಿದ್ದರು. ಈ ವೇಳೆ ನಾಗಪುರದಲ್ಲಿ ರೈಲಿನ ಸೆಕೆಂಡ್ ಕ್ಲಾಸ್ ರಿಸರ್ವೇಶನ್ ಬೋಗಿಗೆ ಒಬ್ಬ ಮಹಿಳೆ ಮಗುವಿನೊಂದಿಗೆ ಹತ್ತಿದರು. ಅವರು ಸೀಟ್ ರಿಸರ್ವ್ ಮಾಡಿಸಿರಲಿಲ್ಲ. ಅವರ ಬಳಿ ರೈಲಿಗೆ ಟಿಕೆಟ್ ಇತ್ತು. ಹೀಗಾಗಿ ಅಲ್ಲಿ ದೊಡ್ಡ ಗಲಾಟೆಯೇ ನಡೆದುಹೋಯಿತು. ಪ್ರಯಾಣಿಕರು ಆ ಮಹಿಳೆ ರೈಲಿನಿಂದ ಇಳಿಯಲೇಬೇಕೆಂದು ಆಗ್ರಹಿಸಿದರು. ಆದರೆ ಕೆಲವರು ಆ ಮಹಿಳೆಯ ಜೊತೆ ಮಗು ಇದ್ದುದನ್ನು ಗಮನಿಸಿ ಅವರನ್ನು ರೈಲಿನಲ್ಲೇ ಉಳಿಸಿಕೊಳ್ಳಬೇಕೆಂದು ಹೇಳಿದರು. ಏನಾಗುತ್ತಿದೆ ಎಂದು ತಿಳಿಯಲು ಕೂತೂಹಲಿಯಾಗಿದ್ದ ಮಹೇಶ್ ಆ ಮಹಿಳೆಯನ್ನು ಮಾತನಾಡಿಸಿದರು. ಆಗ ತಿಳಿದಿದ್ದೇನೆಂದರೆ ಆ ಮಹಿಳೆಯ ತಾಯಿ ಭೂಪಾಲ್ ಗ್ಯಾಸ್ ದುರಂತದಲ್ಲಿ ಸಾವನ್ನಪ್ಪಿದ್ದರು. ಈಗ ಅವರು ಸಾವಿನಂಚಿನಲ್ಲಿದ್ದ ತಮ್ಮ ತಂದೆಯನ್ನು ನೋಡಲು ಹೋಗುತ್ತಿದ್ದರು. ಅವರ ತಾಯಿಯ ಸಾವಿಗೆ ಪರಿಹಾರ ಏನಾದರೂ ಸಿಕ್ಕಿದೆಯೇ ಎಂದು ಕೇಳಿದರು ಮಹೇಶ್. 10,000 ಪರಿಹಾರ ಧನ ಸಿಕ್ಕಿದ್ದರೂ ಅದರಲ್ಲಿ ಬಹುಪಾಲು ಹಣ ನುಂಗಣ್ಣಗಳ ಪಾಲಾಯಿತು ಎಂದಳು ಆ ಮಹಿಳೆ. ಇಂತಹ ಘಟನೆಗಳಿಂದ ಮಹೇಶ್ ಪ್ರೇರೇಪಿತರಾಗಿದ್ದರು.

ಮಹೇಶ್ ಅವರ ವೃತ್ತಿ ಅವರನ್ನು ದೂರದೂರಿಗೆ ಕರೆದೊಯ್ಯುತ್ತಿತ್ತು. ಇಂತಹ ವೇಳೆಗಳಲ್ಲಿ ಅವರಿಗೆ ಪರ್ವತವನ್ನು ಸರಿಸುವಂತಹ ಹಲವು ಸಾಮಾಜಿಕ ಪ್ರಯತ್ನಗಳನ್ನು ಮಾಡುತ್ತಿದ್ದ ಕೆಲವು ಜನರ ಭೇಟಿಯಾಗುತ್ತಿತ್ತು. ಅವರು ನಮ್ಮ ಮನಸ್ಸನ್ನು ಮುಟ್ಟುತ್ತಾರೆ. ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿಯಾದರೂ ಅದರ ಪರಿಣಾಮ ನಿಮ್ಮ ಮೇಲೆ ಆಗುತ್ತಲೇ ಇರುತ್ತದೆ.ಅವರು ಎಂದಿಗೂ ಗುರುತಿಸಲ್ಪಡುವುದಿಲ್ಲ. ಆ ಸಮಯದಲ್ಲಿ ಮಹೇಶ್ ಭಟ್ ಅವರು ಅನೇಕ ಜಾಹೀರಾತುಗಳಿಗಾಗಿ ಕೆಲಸ ಮಾಡುತ್ತಿದ್ದರು. ಆಗೆಲ್ಲಾ ಅವರು 2 ಪ್ರಪಂಚಗಳ ನಡುವಿನ ವ್ಯತ್ಯಾಸವನ್ನು ಸಮರ್ಪಕವಾಗಿ ಗುರುತಿಸುತ್ತಿದ್ದರು.

ಮಹೇಶ್ ಅವರು ಇದನ್ನೆಲ್ಲಾ ಗಮನಿಸಲು ಆರಂಭಿಸಿದಾಗಿನ್ನೂ ಸಾಮಾಜಿಕ ಮಾಧ್ಯಮಗಳಿನ್ನೂ ಆರಂಭವಾಗಿರಲಿಲ್ಲ. ಸಮಾಜಕ್ಕೆ ಕೊಡುಗೆ ನೀಡಿದ್ದ ವ್ಯಕ್ತಿಗಳ ಕಥೆಯನ್ನು ಪ್ರಕಟಿಸುವ ದಾರಿಯೂ ಇರಲಿಲ್ಲ. ಇಂದಿಗೂ ಅಷ್ಟೇ ಸಾಮಾನ್ಯ ಜನರ ಸಾಧನೆಯನ್ನು ಯಾರೂ ಗುರುತಿಸುತ್ತಿಲ್ಲ. ಅವರು ಬಿಸಿನೆಸ್​​​ನಿಂದ ಸಾಕಷ್ಟು ಹಣ ಸಂಗ್ರಹಿಸಿರಬೇಕು, ಅಥವ ಅವರ ಮಗ ಅಥವಾ ಮಗಳು ಏನಾದರೂ ಸಾಧಿಸಿರಬೇಕು ಆಗ ಮಾತ್ರ ಅದಕ್ಕೆ ಪ್ರಚಾರ ಸಿಗುತ್ತದೆ. ಅಂದರೆ ಬಡವರ ಸಾಧನೆಯನ್ನು ಗುರುತಿಸುತ್ತಿಲ್ಲ. ಶ್ರೀಮಂತರನ್ನು ಮಾತ್ರ ಇನ್ನಷ್ಟು ಶ್ರೀಮಂತರನ್ನಾಗಿಸುವ ಕೆಲಸ ಮಾಡುತ್ತಿದ್ದೇವೆ. ಇದು ನಿಜವಾಗಿಯೂ ದುರಂತ ಎನ್ನುತ್ತಾರೆ ಮಹೇಶ್.

ಪುಸ್ತಕದ ಜ್ಞಾನ ಶಾಶ್ವತವಾದುದು

ಪುಸ್ತಕಕ್ಕೆ ಒಂದು ಶಾಶ್ವತವಾದ ನೆಲೆ ಇದೆ. ಪುಸ್ತಕದ ಒಡೆಯರುಗಳು ಮಾತ್ರ ಬದಲಾಗಬಹುದು. ಅಂದರೆ ಹಳೆಯ, ಹೊಸ, ಗಿಫ್ಟ್ ಬಂದ, ಕೈಯಿಂದ ಕೈಗೆ ಬಂದ, ಸೆಕೆಂಡ್ ಹ್ಯಾಂಡ್ ಹೀಗೆ ಪುಸ್ತಕದ ಸ್ವರೂಪಗಳು ಬದಲಾಗಬಹುದು. ಆದರೆ ಪುಸ್ತಕದಲ್ಲಿ ಇರುವ ವಿಚಾರಗಳು ಶಾಶ್ವತವಾಗಿರುತ್ತವೆ. ಮಹೇಶ್‌ರ ಬಳಿ ಫೋಟೋಗ್ರಫಿಗೆ ಸಂಬಂಧಿಸಿದ 85 ವರ್ಷ ಹಳೆಯ ಪುಸ್ತಕಗಳಿವೆ. ತಂತ್ರಜ್ಞಾನ ಎಷ್ಟೇ ಮುಂದುವರೆದಿದ್ದರೂ ಪುಸ್ತಕದ ಪ್ರಾಮುಖ್ಯತೆ ಕಿಂಚಿತ್ತೂ ಕಡಿಮೆಯಾಗಿಲ್ಲ ಎನ್ನುತ್ತಾರೆ ಮಹೇಶ್.

1997ರಲ್ಲಿ ಕರ್ನಾಟಕದ ಬಗ್ಗೆ ಒಂದು ಪುಸ್ತಕ ಹಾಗೂ ಸಿಡಿಯನ್ನು ಬಿಡುಗಡೆ ಮಾಡಿದ್ದರು ಮಹೇಶ್. ಪುಸ್ತಕವನ್ನು ಇತಿಹಾಸ ಪೂರ್ವದ ಉತ್ಪನ್ನ ಅಂತ ಡಿಜಿಟಲ್ ಪ್ರಪಂಚದ ತಂತ್ರಜ್ಞಾನ ಎಷ್ಟೇ ಹೇಳಿದರೂ ಈಗಲೂ ಪುಸ್ತಕ ಸಂತೋಷದ ಒಂದು ಮೂಲವಾಗಿಯೇ ಉಳಿದಿದೆ. ಮಹೇಶ್‌ರ ಎರಡನೇ ಪುಸ್ತಕ ಅನ್‌ಸಂಗ್ ಎಕ್ಸ್‌ ಟ್ರಾ ಆರ್ಡಿನರಿ ಲಿವ್ಸ್ ನ ಒಂದು ಪುಟ ಶೀಘ್ರದಲ್ಲಿಯೇ ಹೊರ ಬೀಳಲಿದೆ.

image


ಪುಸ್ತಕವನ್ನು ಅಂತಿಮರೂಪಕ್ಕೆ ತಂದ ಮಾನದಂಡಗಳು ಯಾವುವು ಎಂದು ಮಹೇಶ್‌ರನ್ನು ಕೇಳಿದರೆ, ಸಾಧಕರು 10 ವರ್ಷಗಳಿಂದ ತಮ್ಮ ದೃಷ್ಟಿಯನ್ನು ಗುರಿಯತ್ತ ಕೇಂದ್ರೀಕರಿಸಿರಬೇಕು. ಎರಡನೆಯದಾಗಿ, ದೊಡ್ಡ ಸಾಮಾಜಿಕ ಪದ್ಧತಿಯ ವಿರುದ್ಧ ಹೋರಾಡಿ ದೊಡ್ಡ ವಿಚಾರವನ್ನು ಸಾಧಿಸಿರಬೇಕು. ಕೊನೆಯದಾಗಿ, ಅವರು ತಂದ ಬದಲಾವಣೆ ಭಾರತವಿಡೀ ಪಸರಿಸರಬೇಕು ಮತ್ತು ಪ್ರಕೃತಿಯನ್ನು ಸಂರಕ್ಷಿಸುವಂತಿರಬೇಕು ಎಂದಿದ್ದಾರೆ.

ಒಂದು ದೊಡ್ಡ ಫಲಿತಾಂಶ

ನಮ್ಮ ಮಧ್ಯೆ ಇರುವ ಜನನಾಯಕರನ್ನು ಬೆಳಕಿಗೆ ತರುವುದು ಮತ್ತು ಅವರು ಸಾಧಿಸಿದ ಅಸಾಧಾರಣ ಕೆಲಸವನ್ನು ತಿಳಿಯಪಡಿಸುವುದು ಪುಸ್ತಕದ ಪ್ರಮುಖ ಉದ್ದೇಶ. ಇದರಿಂದ ಸಾಧನೆ ಮಾಡಿದ ಜನರಿಗೆ ಹಣಸಂಗ್ರಹಿಸಲು ಉಪಯೋಗವಾಗಬೇಕು. ನಿಗದಿತ ಕಾರಣಗಳಿಗಾಗಿ ಪುಸ್ತಕದಿಂದ 90 ಲಕ್ಷ ಹಣ ಸಂಗ್ರಹಿಸುವುದು ಸಾಧ್ಯ ಅನ್ನುತ್ತಾರೆ ಮಹೇಶ್. ಪುಸ್ತಕದಲ್ಲಿ ಸಾಧಕರ ವಿಳಾಸ ಮತ್ತು ಫೋನ್‌ ನಂಬರ್‌ಗಳನ್ನೂ ಪ್ರಕಟಿಸಲಾಗಿದೆ. ಈ ಮೂಲಕ ಸಾಧಕರನ್ನು ಗುರುತಿಸುವ ಅವಕಾಶ ಆಗುತ್ತದೆ. ಸಾಧಕರು ಆಗಾಗ ನಿಮ್ಮಿಂದಾಗಿ ಇಂತಿಂಥ ಜನಗಳು ನಮಗೆ ಹಣ ಸಹಾಯ ಮಾಡಿದ್ದಾರೆ ಎಂದು ಹೇಳುತ್ತಿರುತ್ತಾರೆ ಎನ್ನುತ್ತಾರೆ ಮಹೇಶ್.

ಇಂಥದ್ದೊಂದು ಘಟನೆಯನ್ನು ಉದಾಹರಣೆ ಸಹಿತ ವಿವರಿಸುತ್ತಾರೆ ಮಹೇಶ್. ಸುಭಾಷಿಣಿ ಮಿಸ್ತ್ರಿಯವರ ಮಗ ಅಜಯ್ ಆರಂಭಿಸಿರುವ ಆಸ್ಪತ್ರೆ ಬಗ್ಗೆ ಮಾತನಾಡುತ್ತಾರೆ. ಪುಸ್ತಕ ಪ್ರಕಟವಾದ ನಂತರ 30 ಲಕ್ಷ ರೂ. ಹಣ ಸಂಗ್ರಹವಾಗಿದೆ ಎಂದು ಹೇಳಿದ್ದರಂತೆ ಅಜಯ್. ಅಮೀರ್ ಖಾನ್‌ರ ಸತ್ಯಮೇವ ಜಯತೇ ಕಾರ್ಯಕ್ರಮ ಕೂಡ ಅಜಯ್‌ರ ಸಾಧನೆಯನ್ನು ಗುರುತಿಸಿದೆ.

ಎರಡನೆಯ ಪುಸ್ತಕ: ಅನ್‌ಸಂಗ್ ಎಕ್ಸ್‌ ಟ್ರಾ ಆರ್ಡಿನರಿ ಲಿವ್ಸ್

ಮಹೇಶ್ ಈಗ ತಮ್ಮ ಎರಡನೆಯ ಪುಸ್ತಕ ರಚನೆಯಲ್ಲಿ ತೊಡಗಿಕೊಂಡಿದ್ದಾರೆ.ಈ ಪುಸ್ತಕವೂ ಸಮಾಜದ ಕಿವಿಹಿಂಡುವ ಕೆಲಸ ಮಾಡುತ್ತದೆ ಎಂಬ ವಿಶ್ವಾಸವಿದೆ. ಅದೇ ಹೃದಯಸ್ಪರ್ಶಿ ಮಾದರಿಯಲ್ಲಿ ಮೂಡಿಬರಲಿದೆ ಪುಸ್ತಕ. ಈ ಬಾರಿ 6 ಮಂದಿ ಫೋಟೋಗ್ರಾಫರ್‌ಗಳು, ಅನೇಕ ಬರಹಗಾರರು ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಪುಸ್ತಕದಲ್ಲಿ ಕಾಶ್ಮೀರದ ಅನಂತನಾಗ್‌ ಜಿಲ್ಲೆಯ ಜಾವೇದ್ ಅಹ್ಮದ್ ತಕ್ ಅವರ ಕಥೆಯೂ ಇದೆ. ತಮ್ಮನನ್ನು ಕಿಡ್ನಾಪ್ ಮಾಡಲು ಬಂದ ಉಗ್ರರಿಂದ ತಮ್ಮನನ್ನು ರಕ್ಷಿಸುವ ಸಂದರ್ಭದಲ್ಲಿ ಬಿದ್ದ ಗುಂಡಿನಿಂದ ಅವರ ಸೊಂಟದ ಕೆಳಭಾಗ ಕೆಲಸ ಮಾಡುತ್ತಿಲ್ಲ. ಆಸ್ಪತ್ರೆಯಿಂದ ಬಂದ ಬಳಿಕ ಜಾವೇದ್ ವಿಶೇಷ ಮಕ್ಕಳಿಗಾಗಿ ಕಂಪ್ಯೂಟರ್ ಮತ್ತು ಜೀವನ ಕೌಶಲ್ಯಗಳನ್ನು ಕಲಿಸುವ ಶಾಲೆಯೊಂದನ್ನು ತೆರೆಯಲು ನಿರ್ಧರಿಸಿದರು. ಇದಲ್ಲದೇ ಜಮ್ಮು ಕಾಶ್ಮೀರದ ಹೈಕೋರ್ಟ್‌ನಲ್ಲಿ ವಿಶೇಷ ಮಕ್ಕಳಿಗೆ ವಿಶೇಷ ಮಾನ್ಯತೆ ಒದಗಿಸುವ ಮಸೂದೆ ಜಾರಿಗೆ ತರುವಲ್ಲಿ ಶ್ರಮಿಸಿದ್ದರು. ಇದು ಜಾವೇದ್ ಏಕೆ ವಿಶೇಷ ವ್ಯಕ್ತಿಯಾಗಿ ಗುರುತಿಸಲ್ಪಡುತ್ತಾರೆ ಎಂಬುದಕ್ಕೆ ಒಂದು ಉದಾಹರಣೆ ಅಷ್ಟೇ. ಕುಖ್ಯಾತ ಉಗ್ರವಾದಿಗಳ ಮಕ್ಕಳಿಗೂ ಸಹ ತಮ್ಮ ಶಾಲೆಯಲ್ಲಿ ಓದಲು ಅವಕಾಶ ಮಾಡಿಕೊಟ್ಟಿದ್ದಾರೆ. ಜಾವೇದ್ ಹೇಳುವಂತೆ ಉಗ್ರವಾದಿಗಳ ಮಕ್ಕಳೂ ಬರೀ ಮಕ್ಕಳಷ್ಟೇ ಉಗ್ರವಾದಿಗಳಲ್ಲ. ಅವರಿಗೂ ತಮ್ಮ ಜೀವನವನ್ನು ಸರಿಯಾದ ಮಾರ್ಗದಲ್ಲಿ ರೂಪಿಸಿಕೊಳ್ಳುವ ಅವಕಾಶ ನೀಡಬೇಕು ಎಂಬುದು ಜಾವೇದ್‌ರ ನಿಲುವು. ಇಂತಹ ವಿಚಾರಗಳಲ್ಲದೇ ಕ್ಷಮೆಯಲ್ಲಿಯೇ ಸಂತೋಷವಿದೆ ಎಂಬುದನ್ನು ಕಂಡುಕೊಂಡ ಬೌದ್ಧಸನ್ಯಾಸಿಯ ಕಥೆಯೂ ಇದೆ. ಪುಸ್ತಕ ಈಗ ಪ್ರಕಟಣೆಗೆ ಸಿದ್ಧವಾಗಿದೆ. ಪುಸ್ತಕದ ಮುದ್ರಣಕ್ಕಾಗಿ ಕ್ರೌಡ್ ಫಂಡಿಂಗ್ ಮೂಲಕ ಹಣ ಸಂಗ್ರಹಿಸುತ್ತಿದ್ದಾರೆ ಮಹೇಶ್.

ಧ್ವನಿಗಳು ಕಳೆದುಹೋಗಬಹುದು ಆದರೆ ಕಥೆಗಳು ಶಾಶ್ವತವಾಗಿರುತ್ತವೆ ಎಂಬುದನ್ನು ಯುವರ್‌ಸ್ಟೋರಿ ನಂಬುತ್ತದೆ. ತಮ್ಮ ವಿಭಿನ್ನ ಪ್ರಯತ್ನದ ಮೂಲಕ ಸಾಧಕರನ್ನು, ವಿಶಿಷ್ಟ ವ್ಯಕ್ತಿಗಳನ್ನು, ನಮ್ಮ ಮಧ್ಯದ ನಾಯಕರನ್ನು ಜನರಿಗೆ ಪರಿಚಯಿಸುತ್ತಿರುವ ಮಹೇಶ್ ಭಟ್‌ ಅವರಿಗೆ ಶುಭವಾಗಲಿ.

Add to
Shares
4
Comments
Share This
Add to
Shares
4
Comments
Share
Report an issue
Authors

Related Tags