ಆವೃತ್ತಿಗಳು
Kannada

ಜನರ ನೀರಿನ ದಾಹ ಇಂಗಿಸ್ತಿದ್ದಾರೆ ಬಾಬುಲಾಲ್ –ಉಚಿತ ಜೀವಜಲ ನೀಡಿ ಜೀವದಾನ

ಟೀಮ್​ ವೈ.ಎಸ್.ಕನ್ನಡ

20th Dec 2015
Add to
Shares
0
Comments
Share This
Add to
Shares
0
Comments
Share


ಮೂರನೇ ಮಹಾಯುದ್ಧ ಆದ್ರೆ ಅದು ನೀರಿಗಾಗಿ. ಸಿಹಿ ನೀರಿನ ಕೊರತೆ ಹಾಗೂ ಸಮುದ್ರ ಮಟ್ಟದ ಏರಿಕೆಯಿಂದಾಗಿ ವಿಶ್ವದಲ್ಲಿ ದೊಡ್ಡ ಸಂಕಷ್ಟ ಎದುರಾಗಿದೆ. ದಿನದಿಂದ ದಿನಕ್ಕೆ ನೀರಿನ ಸಮಸ್ಯೆ ಉಲ್ಬಣಿಸುತ್ತಿದೆ. ದೇಶದಲ್ಲಿ ನೀರಿನ ಕೊರತೆ ಎಷ್ಟಿದೆ ಎಂದರೆ ಮುಂದಿನ ದಿನಗಳಲ್ಲಿ ನಾವು ಬಹಳಷ್ಟು ಕೆಟ್ಟ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಕೇವಲ ಒಂದೆರಡು ರಾಜ್ಯಗಳಲ್ಲಲ್ಲ. ಇಡೀ ದೇಶದ ಎಲ್ಲ ಗ್ರಾಮ, ನಗರ ಪ್ರದೇಶಗಳಲ್ಲೂ ಜೀವಜಲದ ಸಮಸ್ಯೆ ಇದೆ. ಪ್ರತಿ ವರ್ಷ ಅನೇಕ ರಾಜ್ಯ ಬರದಿಂದ ಬಳಲ್ತಾ ಇದೆ. ಹನಿ ನೀರಿಗೂ ಹಾಹಾಕಾರ ಶುರುವಾಗಿದೆ. ನೀರಿಗಾಗಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಆದ್ರೆ ಸಮಸ್ಯೆ ದೊಡ್ಡದಾಗಿರುವುದರಿಂದ ಸರ್ಕಾರದ ಯೋಜನೆಗಳು ಕಣ್ಣಿಗೆ ಕಾಣಿಸದಂತಾಗುತ್ತಿದೆ.

ಸದಾ ನೀರಿನ ಕೊರತೆ ಎದುರಿಸುವ ರಾಜ್ಯಗಳಲ್ಲಿ ರಾಜಸ್ತಾನ ಕೂಡ ಒಂದು. ಬೇಸಿಗೆ ಕಾಲದಲ್ಲಿ ಅಲ್ಲಿ ಹನಿ ನೀರಿಗೆ ಒದ್ದಾಟ. ರಾಜಸ್ತಾನದ ಬುಂದಿ ಜಿಲ್ಲೆಯ ನಿವಾಸಿ ಬಾಬುಲಾಲ್ ಕಳೆದ ಹಲವಾರು ವರ್ಷಗಳಿಂದ ಜನರ ನೀರಿನ ದಾಹ ನೀಗಿಸಲು ತಮ್ಮನ್ನು ತಾವು ಆಂದೋಲನದಲ್ಲಿ ತೊಡಗಿಸಿಕೊಂಡಿದ್ದಾರೆ.

image


ಬಾಬುಲಾಲ್ ಬುಂದಿ ಜಿಲ್ಲೆಯ ನಿವಾಸಿ. ಅವರ ಜನನ, ವಿದ್ಯಾಭ್ಯಾಸ ಕೂಡ ಇದೇ ಜಿಲ್ಲೆಯಲ್ಲಿ ಆಯ್ತು. ಅವರ ಕರ್ಮ ಭೂಮಿ ಕೂಡ ಇದೆ. ಎಲ್ಐಸಿಯಲ್ಲಿ ಏಜೆಂಟರ್ ಆಗಿ ಬಾಬುಲಾಲ್ ಕೆಲಸ ಮಾಡ್ತಿದ್ದಾರೆ. ಅವರ ಪೂರ್ವಿಕರ ಊರು ಬುಂದಿಯಿಂದ 20 ಕಿಲೋಮೀಟರ್ ದೂರದಲ್ಲಿದೆ. ಮೊದಲು ಅಲ್ಲಿಯೇ ವಾಸವಾಗಿದ್ದ ಬಾಬುಲಾಲ್, ಕೆಲಸಕ್ಕಾಗಿ ಬುಂದಿಗೆ ಬಂದು ನೆಲೆಸಿದ್ದಾರೆ. ನೀರು ಪ್ರತಿಯೊಬ್ಬನಿಗೂ ಸಿಗಬೇಕು ಎಂದು ಬಯಸುವ ಅವರು ವಾಸಿಸುವ ಪ್ರದೇಶದಲ್ಲಿ ಮಾತ್ರ ಸರಿಯಾಗಿ ನೀರು ಬರ್ತಾ ಇರಲಿಲ್ಲ. ಜೀವ ಜಲಕ್ಕಾಗಿ ಜನರು ಕಿಲೋಮೀಟರ್ ದೂರ ನಡೆದು ಹೋಗಬೇಕಿತ್ತು. ಅಲ್ಲಿಯೂ ಸುಲಭವಾಗಿ ನೀರು ಸಿಗ್ತಾ ಇರಲಿಲ್ಲ. ಮತ್ತೆ ಕಿಲೋಮೀಟರ್ ಉದ್ದದ ಸಾಲಿನಲ್ಲಿ ಗಂಟೆಗಟ್ಟಲೇ ನಿಂತು ನೀರು ತರಬೇಕಿತ್ತು.

ನೀರಿಗಾಗಿ ಪರದಾಡುತ್ತಿರುವ ಸಮಸ್ಯೆಗೆ ನಾನ್ಯಾಕೆ ಪರಿಹಾರ ಒದಗಿಸಬಾರದೆಂದು ಬಾಬುಲಾಲ್ ಯೋಚಿಸಿದ್ರು. ಹಾಗೆ ಮನೆಯಲ್ಲಿ ಬೋರ್ ವೆಲ್ ಅಳವಡಿಸಿ, ಜನರಿಗೆ ನೀರು ನೀಡಲು ಶುರುಮಾಡಿದರು. ನಿಸ್ವಾರ್ಥ ಸೇವೆ ಆರಂಭಿಸಿದ ಅವರು ತಮ್ಮ ಸುತ್ತಮುತ್ತಲ ಜನರಿಗೆ ತಮ್ಮ ಮನೆಯಿಂದ ಅವಶ್ಯವಿರುವಷ್ಟು ನೀರು ತೆಗೆದುಕೊಂಡು ಹೋಗುವಂತೆ ಹೇಳಿದ್ರು. ಹಾಗೆ ಜನರು ತಮ್ಮ ಅವಶ್ಯಕತೆಗೆ ತಕ್ಕಂತೆ ಇಲ್ಲಿಂದ ನೀರು ತೆಗೆದುಕೊಂಡು ಹೋಗ್ತಿದ್ದಾರೆ. 2008ರಿಂದ ಇಲ್ಲಿಯವರೆಗೂ ಬಾಬುಲಾಲ್ ಉಚಿತವಾಗಿ ಜನರಿಗೆ ನೀರು ನೀಡ್ತಿದ್ದಾರೆ. ಬೋರ್ ವೆಲ್ ಬಳಕೆಯಿಂದ ಕರೆಂಟ್ ಬಿಲ್ ಜಾಸ್ತಿ ಬರ್ತಾ ಇದೆ. ಆ ಖರ್ಚಿನ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಬಾಬುಲಾಲ್. ಈ ಪ್ರದೇಶದ 1500 ಜನರು ಬಾಬುಲಾಲ್ ಪ್ರಯತ್ನದ ಪ್ರಯೋಜನ ಪಡೆಯುತ್ತಿದ್ದಾರೆ.

ಒಮ್ಮೆ ತಮ್ಮ ಗ್ರಾಮಕ್ಕೆ ಹೋದ ಬಾಬುಲಾಲ್ ಅವರಿಗೆ ತಮ್ಮೂರಿನಲ್ಲೂ ನೀರಿನ ಸಮಸ್ಯೆ ಜಾಸ್ತಿಯಿರುವುದು ಅರಿವಾಯ್ತು. ಬಾವಿಯ ನೀರಿನಲ್ಲಿ ಕ್ಲೋರೈಡ್ ಅಂಶ ಜಾಸ್ತಿ ಇತ್ತು. ಇದರಿಂದ ಜನರು ಕೀಲು ನೋವು ಸೇರಿದಂತೆ ಅನೇಕ ಕಾಯಿಲೆಗಳನ್ನು ಎದುರಿಸ್ತಾ ಇದ್ದರು. ತಮ್ಮ ಗ್ರಾಮದ ಬಡ ಜನರಿಗೆ ಏಕೆ ಸಹಾಯ ಮಾಡಬಾರದೆಂದು ಯೋಚಿಸಿದ ಬಾಬುಲಾಲ್ ಕಾರ್ಯಪ್ರವೃತ್ತರಾದರು. ಬಾಬುಲಾಲ್ ಮನೆಯ ಒಂದು ಬಾವಿ ನದಿ ತೀರದಲ್ಲಿತ್ತು. ಅಲ್ಲಿನ ನೀರು ಶುದ್ಧವಾಗಿತ್ತು. ಸರ್ಕಾರಿ ಕಚೇರಿಗಳಿಗೆ ಅಲೆದು, ಸಾಕಷ್ಟು ಪ್ರಯತ್ನ ಮಾಡಿ, ಸಂಸದರ ನಿಧಿಯಿಂದ 80 ಸಾವಿರ ಪಡೆಯಲು ಯಶಸ್ವಿಯಾದ್ರು ಬಾಬುಲಾಲ್. ನಂತರ ಬಾವಿಗೆ ಮೋಟರ್ ಅವಳವಡಿಸಿದ್ರು. ಗ್ರಾಮಕ್ಕೆ ಪೈಪ್ ಲೈನ್ ಹಾಕಿಸಿ, ಗ್ರಾಮದಲ್ಲಿ ಎರಡು ನೀರಿನ ಟ್ಯಾಂಕ್ ಅಳವಡಿಸಿದ್ರು. ಇದರಿಂದ ಗ್ರಾಮಸ್ಥರು ಶುದ್ಧ ನೀರನ್ನು ಪಡೆಯಬಹುದಾಗಿದೆ. ಬಾಬುಲಾಲ್ ಶ್ರಮದಿಂದ ಗ್ರಾಮದ 500 ಮಂದಿ ಶುದ್ಧ ನೀರು ಪಡೆಯುತ್ತಿದ್ದಾರೆ.

image


ಅವರ ಗ್ರಾಮದಿಂದ ಎರಡು ಕಿಲೋಮೀಟರ್ ದೂರದಲ್ಲಿ ಹಿಂದುಳಿದ ಪ್ರದೇಶವೊಂದಿದೆ. ಅಲ್ಲಿಯೂ ಬಾಬುಲಾಲ್ ನೀರಿನ ವ್ಯವಸ್ಥೆ ಮಾಡಿದ್ದಾರೆ. ಸರ್ಕಾರಿ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ, ಟ್ಯಾಂಕ್ ಅಳವಡಿಸಿ, ಶುದ್ಧ ಕುಡಿಯುವ ನೀರನ್ನು ಒದಗಿಸಿಕೊಟ್ಟಿದ್ದಾರೆ.

ಬಾಬುಲಾಲ್ ಅವರ ಈ ಪ್ರಯತ್ನದ ಹಿಂದೆ ಅವರ ಪತ್ನಿ ಕಮಲೇಶ್ ಕುಮಾರಿಯವರ ಕೊಡುಗೆ ಇದೆ. ಬಾಬುಲಾಲ್ ಊರಲ್ಲಿಲ್ಲದ ಸಮಯದಲ್ಲಿ ಅವರ ಪತ್ನಿ ಜನರಿಗೆ ನೀರು ನೀಡ್ತಾರೆ. ಅಲ್ಲದೆ ಬಾಬುಲಾಲ್ ಸಮಾಜ ಸೇವೆಗೆ ಸದಾ ಪ್ರೋತ್ಸಾಹ ನೀಡುವ ಅವರು, ಕಷ್ಟದ ಸಮಯದಲ್ಲಿ ಪತಿಯೊಂದಿಗೆ ನಿಲ್ತಾರೆ.

ಜನರಿಗೆ ಶುದ್ಧ ನೀರು ಒದಗಿಸುವುದನ್ನು ಬಾಬುಲಾಲ್ ತಮ್ಮ ಧರ್ಮ ಎಂದು ಭಾವಿಸುತ್ತಾರೆ. ಹಣದ ಹಿಂದೆ ಬೀಳದ ಅವರಿಗೆ ಈ ಕೆಲಸ ಖುಷಿ ಜೊತೆಗೆ ತೃಪ್ತಿ ನೀಡುತ್ತದೆಯಂತೆ. ಸಮಾಜದಲ್ಲಿ ಒಬ್ಬರು ಇನ್ನೊಬ್ಬರಿಗೆ ನೆರವಾಗಬೇಕು. ಜಾತಿ, ಮತ ಮೀರಿ ಪರಸ್ಪರ ಭ್ರಾತೃತ್ವ ಮೆರೆಯ ಬೇಕು. ಬೇರೆಯವರ ಸಮಸ್ಯೆಗೆ ನಾವು ಹೆಗಲಾಗಬೇಕು. ಹಾಗೆ ಮಾಡಿದರೆ ಮಾತ್ರ ದೇಶ ಉನ್ನತಿ ಕಾಣಲು ಸಾಧ್ಯ. ಇಲ್ಲವಾದ್ರೆ ಸರ್ಕಾರ ಯಾವುದೇ ಯೋಜನೆ ಮಾಡಿದ್ರೂ ಏನೂ ಪ್ರಯೋಜನವಾಗುವುದಿಲ್ಲ. ನಾವೆಲ್ಲರೂ ಒಂದಾಗಿ ದೇಶವನ್ನು ಮುನ್ನೆಡೆಸುವ ಸಮಯ ಬಂದಿದೆ ಎನ್ನುತ್ತಾರೆ ಬಾಬುಲಾಲ್.


ಲೇಖಕರು : ಅಶುತೋಷ್ ಕಾಂತ್ವಾಲ್

ಅನುವಾದಕರು: ರೂಪಾ ಹೆಗಡೆ

Add to
Shares
0
Comments
Share This
Add to
Shares
0
Comments
Share
Report an issue
Authors

Related Tags