ಆನಂದ್ ಮಹೀಂದ್ರಾ ಅವರ ಗಮನ ಸೆಳೆದ ಕರ್ನಾಟಕದ ಮರ ಏರುವ ಯಂತ್ರ

ತೀವ್ರ ಕಾರ್ಮಿಕ ಕೊರತೆಯ ಸಮಸ್ಯೆಯಿರುವ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರ ಮುಂತಾದ ರಾಜ್ಯಗಳ ರೈತರಿಗೆ ಸಹಾಯ ಮಾಡಲು ಗಣಪತಿ ಭಟ್ ಮರ ಏರುವ ಬೈಕ್ ಕಂಡುಹಿಡಿದಿದ್ದಾರೆ.

ಆನಂದ್ ಮಹೀಂದ್ರಾ ಅವರ ಗಮನ ಸೆಳೆದ ಕರ್ನಾಟಕದ ಮರ ಏರುವ ಯಂತ್ರ

Wednesday March 11, 2020,

2 min Read

ಕೃಷಿ ನಿಸ್ಸಂದೇಹವಾಗಿ ಭಾರತದ ಅತಿದೊಡ್ಡ ಕ್ಷೇತ್ರಗಳಲ್ಲಿ ಒಂದಾಗಿದೆ. ಈ ವಲಯದಲ್ಲಿನ ಯಾವುದೇ ಆವಿಷ್ಕಾರಗಳು ಅದು ಬೆಳೆಗಳ ಗುಣಮಟ್ಟವನ್ನು ಹೆಚ್ಚಿಸುವ ಸಾವಯವ ಕೃಷಿಯಾಗಿರಲಿ ಅಥವಾ ಹೊಲದಲ್ಲಿ ಸಹಾಯ ಮಾಡುವ ಕೆಲವು ಯಂತ್ರೋಪಕರಣಗಳಾಗಿರಲಿ ಅವು ರೈತರಿಗೆ ವರದಾನವೆ.


ಅಂತೆಯೇ ಮರಗಳನ್ನು ಹತ್ತುವುದು ಬಹಳ ಕಷ್ಟದ ಕೆಲಸಗಳಲ್ಲಿ ಒಂದಾಗಿದೆ. ಕೃಷಿ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರು ಕೀಟನಾಶಕಗಳನ್ನು ಸಿಂಪಡಿಸಲು ಅಥವಾ ತೆಂಗಿನಕಾಯಿಗಳನ್ನು ಮರದಿಂದ ಕೀಳಲು ಮರವನ್ನು ಏರಲು ಬಹಳ ಕಷ್ಟಪಡುತ್ತಾರೆ.


ಈ ಸಮಸ್ಯೆಯನ್ನು ಪರಿಹರಿಸಲು 60 ವಯಸ್ಸಿನ ಕರ್ನಾಟಕದ ನಿವಾಸಿ ಅರೆಕಾ ಬೈಕ್ ಎಂಬ ಮರ ಹತ್ತುವ ಯಂತ್ರವನ್ನು ಅಭಿವೃದ್ಧಿಪಡಿಸಿದ್ದಾರೆ. ಕರ್ನಾಟಕದ ಕೋಮಲೆ ಗ್ರಾಮದ ಬಂಟ್ವಾಲ್ ತಾಲ್ಲೂಕಿನ ಗಣಪತಿ ಭಟ್ ಹೈಡ್ರಾಲಿಕ್ ಡ್ರಮ್ ಬ್ರೇಕ್, ಹ್ಯಾಂಡ್ ಗೇರ್, ಡಬಲ್ ಚೈನ್ ಮತ್ತು ಸೇಫ್ಟಿ ಬೆಲ್ಟ್‌ನಿಂದ ಬೈಕ್ ತಯಾರಿಸಿದ್ದಾರೆ.


ಕೇವಲ ಒಂದು ಲೀಟರ್ ಪೆಟ್ರೋಲ್ ನಿಂದ ರೈತ 90 ಮರಗಳನ್ನು ಏರಬಹುದು. ಬೈಕ್‌ಗಳು ತುಂಬಾ ಚೆನ್ನಾಗಿ ಮಾರಾಟವಾಗುತ್ತಿವೆ. ಕಳೆದ ಏಳು ತಿಂಗಳಲ್ಲಿ ಸುಮಾರು 1,000 ಬೈಕ್‌ಗಳು ಮಾರಾಟವಾಗಿವೆ. ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಆಂಧ್ರಪ್ರದೇಶದ ರಾಜ್ಯಗಳಲ್ಲಿನ ಕಾರ್ಮಿಕರ ತೀವ್ರ ಕೊರತೆಯನ್ನು ಪರಿಹರಿಸಲು ಈ ಯಂತ್ರವು ರೈತರಿಗೆ ಸೂಕ್ತವಾಗಿದೆ ಎನ್ನುತ್ತಾರೆ ಗಣಪತಿ.


ಗಣಪತಿ ಭಟ್ (ಚಿತ್ರಕೃಪೆ: ಇಂಡಿಯನ್ ಎಕ್ಸ್‌ಪ್ರೆಸ್‌)




ತಮ್ಮ ಮಾರಾಟದ ಬಗ್ಗೆ ಎಡೆಕ್ಸ್ ಲೈವ್ ನೊಂದಿಗೆ ಮಾತನಾಡಿದ ಗಣಪತಿ ಅವರು,


“ನಾನು ಕೇರಳ ಮತ್ತು ತಮಿಳುನಾಡಿನಲ್ಲಿ 380 ಕ್ಕೂ ಹೆಚ್ಚು ಬೈಕುಗಳನ್ನು ಮಾರಾಟ ಮಾಡಿದ್ದೇನೆ. ಕರ್ನಾಟಕದಲ್ಲಿ ಶಿವಮೊಗ್ಗ, ತೀರ್ಥಹಳ್ಳಿ, ಅಗುಂಬೆ, ಮತ್ತು ಶಿರಸಿಯಂತಹ ಸ್ಥಳಗಳಲ್ಲಿ ಬೇಡಿಕೆ ಹೆಚ್ಚಾಗಿದೆ. ಅಲ್ಲಿ ಅರೆಕಾ ಕಾಯಿ ಬೆಳೆಗಾರರು ಹೊಲಗಳಲ್ಲಿ ಕೆಲಸ ಮಾಡುತ್ತಾರೆ ಮತ್ತು ಕಾರ್ಮಿಕರ ಮೇಲೆ ಕಡಿಮೆ ಅವಲಂಬಿತರಾಗಿದ್ದಾರೆ. ದಕ್ಷಿಣ ಕನ್ನಡದಲ್ಲಿ, ಕಾರ್ಮಿಕರ ಲಭ್ಯತೆಯು ದೊಡ್ಡ ವಿಷಯವಲ್ಲವಾದ್ದರಿಂದ ಹೆಚ್ಚಿನ ಬೇಡಿಕೆಯಿಲ್ಲ,” ಎಂದರು.


28 ಕೆಜಿ ತೂಕ, ಎರಡು ಸ್ಟ್ರೋಕ್ ಎಂಜಿನ್‌ನ ಚಾಲಿತವಾಗಿರುವ ಈ ಬೈಕ್‌ನ ಬೆಲೆ ಜಿಎಸ್‌ಟಿ ಸೇರಿದಂತೆ 75,000 ರೂ. ಗಣಪತಿ ಅವರ ಪ್ರಕಾರ, ಅವರು 100 ಕ್ಕೂ ಹೆಚ್ಚು ಆರ್ಡರ್‌ಗಳನ್ನು ಪಡೆದಿದ್ದಾರೆ. ಉತ್ಪನ್ನವನ್ನು ಸುಲಭವಾಗಿ ಜೋಡಿಸಲು ಸುಧಾರಣೆಯ ಕಾರ್ಯವಾಗುತ್ತಿದೆ ಹಾಗೂ ವೆಚ್ಚವೂ ಕಡಿಮೆಯಾಗಬಹುದು.

ಒಬ್ಬ ರೈತ ಯಂತ್ರದ ಸಹಾಯದಿಂದ ಕೇವಲ 30 ಸೆಕೆಂಡುಗಳಲ್ಲಿ 30 ಮೀಟರ್ ಅನ್ನು ಸುಲಭವಾಗಿ ಏರಬಹುದು. ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಗಣಪತಿ ಅವರು ಬೈಕ್‌ ಅನ್ನು ಸ್ವತಃ ತಾವೇ ವಿನ್ಯಾಸಗೊಳಿಸಿ ಹಾಗೂ ಅದರ ಜೋಡಣೆಯನ್ನು ತಾವೇ ಮಾಡಿದ್ದಾರೆ.


ಮಹೀಂದ್ರಾ ಸಮೂಹದ ಅಧ್ಯಕ್ಷ ಆನಂದ್ ಮಹೀಂದ್ರಾ ಗಣಪತಿಯವರ ಈ ಆವಿಷ್ಕಾರವನ್ನು ಶ್ಲಾಘಿಸಿದ್ದಾರೆ. ಈಗ ಸಿಂಗಪುರ, ದಕ್ಷಿಣ ಆಫ್ರಿಕಾ ಮತ್ತು ಥೈಲ್ಯಾಂಡ್‌ನ ಕಂಪೆನಿಗಳು ಬೈಕ್‌ಗಾಗಿ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಅವರನ್ನು ಸಂಪರ್ಕಿಸಿವೆ.

“ರೈತರಿಗೆ ಅನುಕೂಲವಾಗುವಂತೆ ತಂತ್ರಜ್ಞಾನವನ್ನು ಹಂಚಿಕೊಳ್ಳಲು ನನಗೆ ಸಹಾಯ ಮಾಡುವ ಸಂಸ್ಥೆಯೊಂದಿಗೆ ಪಾಲುದಾರರಾಗಲು ನಾನು ಬಯಸುತ್ತೇನೆ. ಅಂತಹ ಉದ್ಯಮಕ್ಕಾಗಿ ನಾನು ರಾಯಧನವನ್ನು ಪಡೆಯಲು ಬಯಸುವುದಿಲ್ಲ. ಆದರೆ ಈ ಉತ್ಪನ್ನವು ಸಾಧ್ಯವಾದಷ್ಟು ರೈತರನ್ನು ತಲುಪಿ ಇದರಿಂದಾಗಿ ಒಂದು ರೀತಿಯಲ್ಲಿ ದೇಶದ ಒಟ್ಟಾರೆ ಕೃಷಿ ಅಭಿವೃದ್ಧಿಗೆ ಸಹಾಯ ಮಾಡುವಂತೆ ಮಾಡಲು ನಾನು ಬಯಸುತ್ತೇನೆ,” ಎನ್ನುತ್ತಾರೆ ಗಣಪತಿ ಭಟ್, ವರದಿ ದಿ ನ್ಯೂಸ್ ಮಿನಿಟ್.