ಕೆಲಸಕ್ಕೆ ಗುಡ್‍ಬೈ, ಸ್ಟಾರ್ಟ್‍ಅಪ್‍ಗೆ ಜೈ - ಕಲೆಯನ್ನೇ ನಂಬಿ ಉದ್ಯಮ ಆರಂಭಿಸಿದ ಸಾಹಸಿ

ಟೀಮ್​ ವೈ.ಎಸ್.ಕನ್ನಡ

ಕೆಲಸಕ್ಕೆ ಗುಡ್‍ಬೈ, ಸ್ಟಾರ್ಟ್‍ಅಪ್‍ಗೆ ಜೈ - ಕಲೆಯನ್ನೇ ನಂಬಿ ಉದ್ಯಮ ಆರಂಭಿಸಿದ ಸಾಹಸಿ

Friday March 18, 2016,

4 min Read

ನಮ್ಮೆಲ್ಲರ ಬದುಕಿನಲ್ಲೂ `ದಿಲ್ ಧಡಕನೆ ದೋ' ಸಿನೆಮಾದಲ್ಲಿ ಶೆಫಾಲಿ ಶಾಗೆ ಬಂದಂತಹ ಸಂದರ್ಭ ಬಂದೇ ಬರುತ್ತೆ. ಕೇಕ್‍ನಲ್ಲಿ ಮುಳುಗೇಳುವ ಶೆಫಾಲಿ, ಕಣ್ಣೀರಲ್ಲೇ ಅದನ್ನೆಲ್ಲ ತೊಳೆದುಕೊಳ್ತಾಳೆ. ಆದ್ರೆ ಇಲ್ಲಿ ಸಂದರ್ಭ ಮಾತ್ರ ವಿಭಿನ್ನ. ಇಂಥದ್ದೇ ಹಂತದಲ್ಲಿ ನನ್ನ ಸ್ಟಾರ್ಟ್‍ಅಪ್ ಕೂಡ ಆರಂಭವಾಯ್ತು. ಈ ಕಹಾನಿಯನ್ನು ಪರಿಚಯಿಸಲು ನಾನು ರೋಸಿಯರ್ ಚಿತ್ರವೊಂದನ್ನು ಪೇಂಟ್ ಮಾಡಬೇಕೆಂದು ಬಯಸಿದ್ದೆ, ಆದ್ರೆ ಹೃದಯದ ವಿಚಾರದಲ್ಲಿ ಎಲ್ಲರೂ ಸಂಕೋಚವಿಲ್ಲದೆ ಪ್ರಾಮಾಣಿಕರಾಗಿರಬೇಕು. ಮಾನಸಿಕ ಹಾಗೂ ದೈಹಿಕ ಆರೋಗ್ಯ ವಿಚಾರದಲ್ಲಿ ನಾನು ಕಠಿಣ ಹಂತಗಳನ್ನು ಎದುರಿಸಿದ್ದೇನೆ. ಕೆಲಸದ ತೀವ್ರ ಏಕತಾನತೆ ನನ್ನನ್ನು ಚೂರು ಮಾಡಿಬಿಟ್ಟಿತ್ತು. 8 ವರ್ಷಗಳ ಕಾನೂನು ವೃತ್ತಿ, 9 ವರ್ಷಗಳ ವೈವಾಹಿಕ ಬದುಕು, ಇದುವರೆಗೂ ಮಕ್ಕಳಿಲ್ಲ ಅನ್ನೋದು ನಮ್ಮ ದೇಶದಲ್ಲಿ ಬಹುದೊಡ್ಡ ಅಪರಾಧ. ನನ್ನ ತಾಳ್ಮೆಯ ಮಿತಿ ಬಾಕಿ ಉಳಿದಿಲ್ಲ. ಮುರಿದ ಕಾಲು, ಕೈಗಳನ್ನು ಜೋಡಿಸಲು ಆಸ್ಪತ್ರೆಗಳಿವೆ, ಆದ್ರೆ ನೋವುಂಡ ಆತ್ಮಕ್ಕೆ ಚಿಕಿತ್ಸೆ ಇಲ್ಲ. ಪ್ರತಿದಿನವೂ ಒಂದು ಯುದ್ಧವಿದ್ದಂತೆ, ಒತ್ತಾಯಪೂರ್ವಕವಾಗಿ ಕಾಲುಗಳನ್ನು ಎಳೆದುಕೊಂಡೇ ನಾನು ಕೆಲಸಕ್ಕೆ ಹೋಗುತ್ತಿದ್ದೆ. ನಾವು ಮಗುವನ್ನು ಹೊಂದುವುದು ಯಾವಾಗ ಎಂಬ ಪ್ರಶ್ನೆ ಎದುರಾದಾಗಲೆಲ್ಲ ನಾನು ಇವತ್ತು ಊಟಕ್ಕೆ ಮಗುವನ್ನು ಕರೆಯಬಹುದು ಎಂದುಕೊಳ್ಳುತ್ತೇನೆ. ಆದ್ರೆ ಈ ಸ್ಟಾರ್ಟ್ ಉತ್ತರ ಬೆಸ್ಟ್ ಉತ್ತರವಲ್ಲ. ಇಂತಹ ಸಂದರ್ಭಗಳಲ್ಲೆಲ್ಲ ``ಬದುಕು ನಿಮಗೆ ನಿಂಬೆ ಹಣ್ಣುಗಳನ್ನು ಕೊಟ್ಟಾಗ ಅದನ್ನು ಮಾರಿಬಿಡಿ, ಉದ್ಯಮವೊಂದನ್ನು ಆರಂಭಿಸಿ, ಸಾಮ್ರಾಜ್ಯವನ್ನು ಕಟ್ಟಿ'' ಎಂಬ ಮಾತು ನೆನಪಾಗುತ್ತಿತ್ತು. ಅದರಿಂದ ಪ್ರೇರಿತಳಾಗಿ ನನಗೂ ಕೂಡ ಉದ್ಯಮವೊಂದರ ಪರಿಕಲ್ಪನೆ ಹೊಳೆದಿತ್ತು.

image


ಉದ್ಯೋಗ ಮತ್ತು ಸ್ಟಾರ್ಟ್‍ಅಪ್

ನನ್ನ ವೃತ್ತಿಯಿಂದಾಗೆಯೇ ನಾನಾಕೆಯನ್ನು ಯೋಜಿತವಲ್ಲದ ಮಗು ಎಂದು ಕರೆಯುತ್ತೇನೆ. ವಕೀಲರ ನಾಲ್ಕು ತಲೆಮಾರಿನ ಕುಟುಂಬದಲ್ಲಿ ಹುಟ್ಟಿದ ನಾನು ಉದ್ಯೋಗಕ್ಕೆ ಸೇರಿದೆ. `ಜಿಂದಗಿ ನಾ ಮಿಲೇಗಿ ದೊಬಾರಾ'ದಲ್ಲಿ ನಾಸಿರುದ್ದೀನ್ ಶಾ ಹೇಳಿದಂತೆ ``ತಪ್ಪು ನಮ್ಮೆಲ್ಲರಿಂದ್ಲೂ ಆಗುತ್ತೆ''. ಭಾರತದ ಅತ್ಯಂತ ಶ್ರೇಷ್ಠ ಕಾನೂನು ಸಂಸ್ಥೆಯೊಂದರ ಕೋಲ್ಕತ್ತಾ ಕಚೇರಿಯಲ್ಲಿ ನಾನು ಕೆಲಸ ಮಾಡ್ತಾ ಇದ್ದೆ. ನಾನು ದ್ವಿತೀಯ ಪಿಯುಸಿ ಪಾಸಾದ ದಿನಗಳು ನನಗಿನ್ನೂ ನೆನಪಿವೆ. ಕಲಾ ವಿಭಾಗದಲ್ಲಿ ಮುಂದುವರಿಯಬೇಕೆಂದು ನಾನು ಬಯಸಿದ್ದೆ, ಕೋಲ್ಕತ್ತಾದ ಸರ್ಕಾರಿ ಕಲಾ ಕಾಲೇಜು, ವಿಶ್ವಭಾರತಿ ಅಥವಾ ಶಾಂತಿನಿಕೇತನದಲ್ಲಿ ಶಿಕ್ಷಣ ಪಡೆಯಬೇಕು ಎಂದುಕೊಂಡಿದ್ದೆ. ಆದ್ರೆ ಕಲೆ ಮತ್ತು ವೃತ್ತಿ ಜೀವನ ಜೊತೆಜೊತೆಯಲ್ಲಿ ಸಾಗಲು ಸಾಧ್ಯವಿರಲಿಲ್ಲ. ನಿಮ್ಮ ದೇಹಕ್ಕೆ ವೃತ್ತಿ ಆಹಾರವಾದ್ರೆ, ಆತ್ಮಕ್ಕೆ ಕಲೆ ಆಹಾರವಾಗಬಲ್ಲದು. ಹಾಗಾಗಿ ಎಲ್ಲರ ಆಯ್ಕೆ ವೃತ್ತಿ. ನಾನು ಕೂಡ ಕಾನೂನು ಶಿಕ್ಷಣವನ್ನೇ ಆಯ್ಕೆ ಮಾಡಿಕೊಂಡೆ, ಯೂನಿವರ್ಸಿಟಿಯಲ್ಲಿ ಟಾಪರ್ ಆಗಿದ್ದೆ. ಕಾನೂನು ಪದವಿ ಪಡೆಯುತ್ತಿದ್ದಂತೆ ನಾನು ಕೋಲ್ಕತ್ತಾದ ಶ್ರೇಷ್ಠ ಕಾನೂನು ಸಂಸ್ಥೆಯನ್ನು ಸೇರಿಕೊಂಡೆ. ನನ್ನ ಬ್ಯಾಂಕ್ ಅಕೌಂಟ್‍ಗಳಲ್ಲಿ ಮುಗುಳ್ನಗೆ ಹೊರಹೊಮ್ಮಿತ್ತಾದ್ರೂ ಆತ್ಮ ಮಾತ್ರ ಅಪೌಷ್ಠಿಕತೆಯಿಂದ ಬಳಲಿತ್ತು.

ಇದನ್ನು ಓದಿ: ಬಡವರ ಹಸಿವು ನೀಗಿಸೋ ‘ಅನ್ನಕೂಟ’

ನನ್ನ ಹವ್ಯಾಸಗಳನ್ನು ನಾನು ಮುಂದುವರಿಸಿದ್ದೆ. ಹಳೆಯ ಸೀರೆಗಳೆಲ್ಲ ಕರ್ಟನ್‍ಗಳಾದ್ವು, ಬಾಚಣಿಕೆ ನೆಕ್ಲೆಸ್ ಆಗಿ ಬದಲಾಯ್ತು, ಅಳಿದುಳಿದ ಬಟ್ಟೆಗಳಿಂದ ಸುಂದರ ಕುಷನ್ ಕವರ್ ಕೂಡ ಸಿದ್ಧವಾಗಿತ್ತು. ಹಣಕಾಸಿನ ರಿಸ್ಕ್ ಇದ್ದಿದ್ರಿಂದ ಹವ್ಯಾಸವನ್ನೇ ವೃತ್ತಿಯನ್ನಾಗಿ ಬದಲಾಯಿಸಿಕೊಳ್ಳುವುದು ನನ್ನಿಂದ ಸಾಧ್ಯವಿರಲಿಲ್ಲ. ನಾನು ತಾಳ್ಮೆ ಕಳೆದುಕೊಳ್ಳುವವರೆಗೂ ಇದೇ ಸ್ಥಿತಿ ಮುಂದುವರಿದಿತ್ತು. ದೈನಂದಿನ ಏಕತಾನತೆಯಿಂದ ಹೊರಬಂದು ಖುಷಿಯಿಂದ ಬದುಕಲು ನಾನು ಬಯಸಿದ್ದೆ.

image


ಉದ್ಯೋಗ ತ್ಯಜಿಸಲು ಧೈರ್ಯ ಒಗ್ಗೂಡಿಸುವಿಕೆ...

ನನ್ನ ಸ್ಟಾರ್ಟ್‍ಅಪ್‍ನಲ್ಲಿ ನಾನು ಸದಾ ಅನುಸರಿಸುವ ತತ್ವ ಅಂದ್ರೆ: ನಿಮ್ಮ ವೈಯಕ್ತಿಕ ಪ್ರಾಜೆಕ್ಟ್‍ಗಳ ಮೇಲೆ ಕಚೇರಿಯಲ್ಲಿ ಕೆಲಸ ಮಾಡಬೇಡಿ. ನಿಮ್ಮ ಕಚೇರಿಯ ಸಂಸ್ಕೃತಿಯನ್ನು ಇದು ಹಾಳುಮಾಡುತ್ತದೆ. ನಾನು ನನ್ನ ನಿದ್ರೆಯನ್ನು ತ್ಯಾಗ ಮಾಡಬೇಕಾಗಿ ಬಂತು, ಉದ್ಯಮದ ಬೆಳವಣಿಗೆಗಾಗಿ ವೀಕೆಂಡ್‍ಗಳಲ್ಲೂ ಕೆಲಸ ಮಾಡಬೇಕಾಯ್ತು. ನಾನು ವೃತ್ತಿ ಮತ್ತು ಆಸಕ್ತಿ ಎರಡನ್ನೂ ಗಾಳಿತೂರದ ಕೋಣೆಗಳಲ್ಲಿಡುತ್ತೇನೆ. ನೆಮ್ಮದಿಯಿಂದ್ಲೇ ನಾನು ಕೆಲಸ ಮುಂದುವರಿಸಿದ್ದೆ, ಹಂತಹಂತವಾಗಿ ಬೆಳವಣಿಗೆಯೂ ಇತ್ತು. ಆದ್ರೆ ಹೃದಯದ ವಿಷಯಗಳು ಸದಾ ಅನಿರೀಕ್ಷಿತ ವೇಗದಲ್ಲಿ ಬೆಳೆಯುತ್ತವೆ.

ಉದ್ಯೋಗ ಹಾಗೂ ಉದ್ಯಮ ಎರಡನ್ನೂ ಸಂಭಾಳಿಸುವುದು ಕಷ್ಟವಾಯ್ತು. ನೆರವಾಗಲು ಸಿಬ್ಬಂದಿ ಕೂಡ ಇರಲಿಲ್ಲ. ಅಗತ್ಯ ವಸ್ತುಗಳನ್ನು ಸಂಗ್ರಹಿಸಲು ನಾನು ದೂರದ ಊರುಗಳಿಗೆ ಪ್ರಯಾಣಿಸುತ್ತಿದ್ದೆ, ಕುಶಲಕರ್ಮಿಗಳನ್ನು ನಿರ್ವಹಿಸುತ್ತಿದ್ದೆ, ದಾಖಲೆಗಳನ್ನು ಮೆಂಟೇನ್ ಮಾಡುತ್ತಿದ್ದೆ, ನಾನು ತೆಗದ ಫೋಟೋಗಳನ್ನು ಜೋಡಿಸುವುದು, ಸೇಲ್ಸ್ ನಿರ್ವಹಣೆ, ಉತ್ಪನ್ನಗಳ ಡೆಲಿವರಿ ಎಲ್ಲವೂ ನನ್ನದೇ ಕೆಲಸ. ಎಲ್ಲವನ್ನೂ ಸಂಭಾಳಿಸುವುದು ಕಷ್ಟವಾಗುತ್ತಿತ್ತು, ಹಾಗಾಗಿ ಕಾನೂನು ಸಂಸ್ಥೆಯಲ್ಲಿ ನಿರ್ವಹಿಸ್ತಾ ಇದ್ದ ಉದ್ಯೋಗವನ್ನು ತ್ಯಜಿಸಲು ನಿರ್ಧಾರ ಮಾಡಿದೆ.

ನಾನು ಬಾಧಕಗಳನ್ನೆಲ್ಲ ತೂಕ ಹಾಕುತ್ತಿದ್ದೆ. ಬ್ಯುಸಿನೆಸ್‍ನಲ್ಲಿ ಲಾಭವೇನೋ ಬರುತ್ತಿದೆ, ಆದ್ರೆ ನಾನು ಕೆಲಸದಲ್ಲಿದ್ದಾಗ ಮಾಡಿದಂತೆ ತಿಂಗಳ ಕೊನೆಯಲ್ಲಿ ಬ್ಯಾಲೆನ್ಸ್ ಮಾಡಲು ಸಾಧ್ಯವಾಗ್ತಿಲ್ಲ. ನಾನು ತುಂಬಾನೇ ದೊಡ್ಡ ರಿಸ್ಕ್ ತೆಗೆದುಕೊಂಡಿದ್ದೆ, ಯಾಕಂದ್ರೆ ನನ್ನ ಪತಿ ಕೂಡ ಎರಡು ವರ್ಷಗಳ ಹಿಂದಷ್ಟೆ ಸ್ವಂತ ಉದ್ಯಮ ಆರಂಭಿಸಿದ್ದಾರೆ. ಒಂದು ಕುಟುಂಬದಲ್ಲಿ ಎರಡು ಅಂಬೆಗಾಲಿಡುವ ಯೋಜನೆಗಳಿರೋದು ಸಂತೋಷದ ವಿಚಾರ, ಆದ್ರೆ ಬುದ್ಧಿವಂತಿಕೆಯಿಂದ ಕೂಡಿದ್ದಲ್ಲ. ಪ್ರಾಮಾಣಿಕವಾಗಿ ಹೇಳಬೇಕಂದ್ರೆ ಕಾನೂನು ವಿಭಾಗವನ್ನು ಸಂಪೂರ್ಣವಾಗಿ ತ್ಯಜಿಸಲು ನನಗೆ ಇಷ್ಟವಿಲ್ಲ. ಕೆಲ ದಿನಗಳ ಕಾಲ ಟಗ್ ಆಫ್ ವಾರ್ ಮುಂದುವರೀತು, ಕೊನೆಗೆ ನಾನೊಂದು ನಿರ್ಧಾರಕ್ಕೆ ಬಂದೆ. ಕಾನೂನು ಸಂಸ್ಥೆಯೊಂದರಲ್ಲಿ ಕನ್ಸಲ್ಟಂಟ್ ಆಗಿ ವಾರದ ಮೂರು ದಿನ ಕೆಲಸ ಮಾಡುವುದು, ಉಳಿದ ದಿನಗಳನ್ನು ನನ್ನ ಕನಸಿನ ಕೂಸು `ಪರಮ'ಗಾಗಿ ಮೀಸಲಿಡಬೇಕೆಂದು ತೀರ್ಮಾನಿಸಿದೆ.

ಅಧಿಕ ಸಿದ್ಧತೆಗಳು...

ಮೊದಲ ಹಾಗೂ ಅತ್ಯಂತ ಮಹತ್ವದ ಕೆಲಸ ಅಂದ್ರೆ ನಿಮ್ಮನ್ನು ನೀವು ಸಿದ್ಧಗೊಳಿಸುವುದು. ನಿರಾಸೆ, ಆಶಾಭಂಗ ಸಹಜ. ಟೈಲರ್‍ಗಳು ಮತ್ತು ಕುಶಲಕರ್ಮಿಗಳನ್ನು ಹುಡುಕುವುದೇ ಬಹುದೊಡ್ಡ ಸಮಸ್ಯೆ. ಅವರಲ್ಲಿ ಕೆಲವರು ನನ್ನನ್ನು ಮಗಳಂತೆ ಆದರಿಸಿದ್ದಾರೆ. ಆದ್ರೆ ಒಬ್ಬ ಹಣ ಮತ್ತು ಫ್ಯಾಬ್ರಿಕ್‍ಗಳನ್ನೆಲ್ಲ ಕದ್ದು ಪರಾರಿಯಾದ್ರೆ ಇನ್ನೊಬ್ಬ ನನ್ನ ವಿನ್ಯಾಸವನ್ನೆಲ್ಲ ತನ್ನದೆಂದು ಬಿಂಬಿಸಿಕೊಂಡಿದ್ದ. ಆದ್ರೆ ಕಳೆದ ಒಂದು ವರ್ಷದಿಂದ ನಾನು ಕೇರ್‍ಫುಲ್ ಆಗಿದ್ದೇನೆ. ನನ್ನ ಉದ್ಯಮಕ್ಕಾಗಿ ನಾನು ಸಾಲ ಪಡೆದಿರಲಿಲ್ಲ. ಎಲ್ಲದಕ್ಕೂ ಎಟಿಎಂ ಅನ್ನೇ ಅವಲಂಬಿಸುವ ಬದಲು ಖರ್ಚು ವೆಚ್ಚಗಳ ಪಕ್ಕಾ ಲೆಕ್ಕ ಇಡುವಂತೆ ಸ್ನೇಹಿತರು ಸಲಹೆ ಕೊಟ್ರು. ಮುಂದಿನ ಹಂತ ಉತ್ಪನ್ನಗಳಿಗೆ ಒಂದು ಬ್ರಾಂಡ್ ಸೃಷ್ಟಿ ಮಾಡೋದು. ಪೇಪರ್ ವರ್ಕ್, ಅಕೌಂಟ್ಸ್, ಲೋಗೋ, ಟ್ರೇಡ್‍ಮಾರ್ಕ್​ಗಾಗಿ ಅರ್ಜಿ ಹಾಕೋದು ಹೀಗೆ ಹತ್ತಾರು ಕೆಲಸಗಳು ಹೆಗಲೇರಿದ್ವು. ಎಲ್ಲದಕ್ಕಿಂತ ಮುಖ್ಯವಾಗಿ ಉತ್ಪನ್ನಗಳನ್ನು ಕ್ಯಾಟಲಾಗ್ ಮಾಡಿದೆವು. ಎಲ್ಲವೂ ಬಹಳ ಶಿಸ್ತುಬದ್ಧವಾಯ್ತು.

image


ಈ ಉದ್ಯಮದಲ್ಲಿ ನನಗೆ ಅತಿ ಹೆಚ್ಚು ನೆರವಾಗಿದ್ದು ಫ್ಯಾಬ್ರಿಕ್‍ಗಳ ಜನಪ್ರಿಯತೆ ಮತ್ತು ಪರಿಚಯ. ಯಾವುದೇ ವಿಚಾರದ ಬಗೆಗಾದ್ರೂ ನಾವು ಚೆನ್ನಾಗಿ ತಿಳಿದುಕೊಂಡಿದ್ದರೆ ಯಾರೂ ನಮ್ಮನ್ನು ಹಾದಿ ತಪ್ಪಿಸಲು ಸಾಧ್ಯವಿಲ್ಲ ಎಂಬುದು ನನ್ನ ನಂಬಿಕೆ. ಹಾಗಾಗಿ ಸ್ಟಾರ್ಟ್‍ಅಪ್‍ಗೂ ಮುನ್ನ ಪ್ರತಿಯೊಬ್ಬರೂ ಹೋಮ್ ವರ್ಕ್ ಮಾಡಿಕೊಳ್ಳಲೇಬೇಕು.

ಹೊಸ ಬದುಕು...

ಪ್ರತಿ ಬಾರಿ ನನ್ನ ನಿರ್ಧಾರ ಸರಿಯೇ ಎಂದು ಕೇಳಿದಾಗ ನನ್ನ ಆಧ್ಯಾತ್ಮಿಕ ಗುರುಗಳ ಮಾತು ನೆನಪಾಗುತ್ತದೆ ``ನೀನು ತಪ್ಪು ಮಾಡಲಿ ಎಂದೇ ನಾನು ನಿರೀಕ್ಷಿಸುತ್ತೇನೆ, ಯಾಕೆಂದರೆ ನೀನು ತಪ್ಪು ಮಾಡಿದ್ದೀಯಾ ಎಂದಾದರೆ ನೀನು ಹೊಸದನ್ನೇನೋ ಮಾಡುತ್ತಿದ್ದೀಯಾ ಎಂದರ್ಥ. ಕಲಿಕೆ, ಬದುಕು, ನಿನ್ನನ್ನು ನೀನು ಪ್ರೋತ್ಸಾಹಿಸಿಕೊಳ್ಳುವುದು, ಬದಲಾಯಿಸಿಕೊಳ್ಳುವುದು ನಿನ್ನ ಜಗತ್ತನ್ನೇ ಬದಲಾಯಿಸುತ್ತದೆ. ಈ ಮೊದಲು ಮಾಡಿರದ ಕೆಲಸವನ್ನು ನೀನು ಮಾಡುತ್ತಿರುತ್ತೀಯ.''

`ಪರಮ' ಒಂದು ವರ್ಷ ಪೂರೈಸುತ್ತಿದೆ. ಕಳೆದ ಒಂದು ವರ್ಷದಲ್ಲಿ ಆಕೆ ದಣಿದ ಆತ್ಮಕ್ಕೆ ನಿರಂತರ ಸಂಗೀತ ಒದಗಿಸಿದ್ದಾಳೆ. ನನ್ನ ಭಯ ದೂರಮಾಡಿದ್ದಾಳೆ. ಮಾನವೇತರ ಮಕ್ಕಳು ಎಷ್ಟು ಸುಂದರ ಅನ್ನೋದನ್ನು ಕಲಿಸಿಕೊಟ್ಟಿದ್ದಾಳೆ. ಒಂಟಿಯಾಗಿ ಪ್ರಯಾಣ ಮಾಡುವ ಆತ್ಮವಿಶ್ವಾಸ, ಸಂಧಾನ, ನಂಬಿಕೆ ಅಥವಾ ಅಪನಂಬಿಕೆ ಎಲ್ಲವನ್ನೂ ಪಾಠ ಮಾಡಿದ್ದಾಳೆ. ಭೂಮಿಯ ಮೇಲಿರುವ ಅದೆಷ್ಟೋ ಅದ್ಭುತ ವ್ಯಕ್ತಿಗಳನ್ನು ಭೇಟಿ ಮಾಡಲು ಅವಳೇ ಕಾರಣ.

ಇದೀಗ ನನಗಿಷ್ಟವಾದ ಕುಶಲಕರ್ಮಿಯೊಬ್ಬಳು ಮನೆ ಕಟ್ಟೋದನ್ನು ನಾನು ನೋಡುತ್ತೇನೆ. ಆಕೆ ನನ್ನನ್ನೂ ಆ ಪ್ರಕ್ರಿಯೆಯ ಭಾಗವಾಗಿಸುತ್ತಾಳೆ. ಒಂದಲ್ಲ ಒಂದು ದಿನ `ಪರಮ' ಮೂಲಕ ನೀವು ದೊಡ್ಡ ಸಾಧನೆ ಮಾಡುತ್ತೀರಾ ಎನ್ನುತ್ತಾಳೆ ಅವಳು. ಇದೇ ಉದ್ಯಮ ನಡೆಸುತ್ತಿರುವ ಸ್ನೇಹಿತರು ಅಬಧ್ರತೆಯಲ್ಲೇ ಬದುಕುತ್ತಿದ್ದಾರೆ. ಆದ್ರೆ ನಾನು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದ್ದೇನೆಂಬ ವಿಶ್ವಾಸ ನನಗಿದೆ. ಯಾಕಂದ್ರೆ ನನ್ನ ಕೆಲಸವನ್ನು ನಾನು ಪ್ರೀತಿಸುತ್ತೇನೆ. ಇದೇ ತತ್ವವನ್ನು ಸ್ವಉದ್ಯಮ ಆರಂಭಿಸುವ ಪ್ರತಿಯೊಬ್ಬರೂ ಅನುಸರಿಸಬೇಕು. ಉದ್ಯಮಿ ಅನ್ನೋದೊಂದು ಅಲಂಕಾರಿಕ ಶಬ್ಧ ಅನ್ನೋ ಕಾರಣಕ್ಕೆ ಕಂಪನಿ ಆರಂಭಿಸಬೇಡಿ, ಇಡೀ ಜಗತ್ತು ಅದನ್ನೇ ಮಾಡುತ್ತಿದೆ ಅನ್ನೋ ಕಾರಣಕ್ಕೆ ನೀವು ಸ್ಟಾರ್ಟ್‍ಅಪ್ ಆರಂಭಿಸಬೇಡಿ, ನೀವದನ್ನು ಪ್ರೀತಿಸುತ್ತೀರಾ ಎಂಬ ಕಾರಣಕ್ಕೆ ಮಾಡಿ. ಆಗ ಆ ಉದ್ಯಮ ಕೂಡ ನಿಮ್ಮನ್ನು ಪ್ರೀತಿಸುವುದರಲ್ಲಿ ಅನುಮಾನವೇ ಇಲ್ಲ.

ಲೇಖಕರು: ಪರಮ ಘೋಷ್

ಅನುವಾದಕರು: ಭಾರತಿ ಭಟ್ 

ಇದನ್ನು ಓದಿ

1. ಜ್ಯೂಟ್ ಬ್ಯಾಗ್ ಕಾಲದ ನಂತ್ರ, ಈಗ ಬಾಳೆನಾರಿನ ಬ್ಯಾಗ್ ..

2. `ಬೆಳ್ಳಿ' ಆಭರಣ ಲೋಕದಲ್ಲಿ ಸಹೋದರಿಯರು ಶೈನಿಂಗ್...

3. ಹಳೆ ವಾಹನಗಳಿಗೆ ಹೊಸ ಲುಕ್ ನೀಡುತ್ತೆ ಈ ಸಂಸ್ಥೆ..!