ಆವೃತ್ತಿಗಳು
Kannada

ನಮ್ಮ ಬೆಂಗಳೂರುನಲ್ಲಿ ಎಲ್ಲವೂ ಇದೆ..!

ಟೀಮ್​ ವೈ.ಎಸ್​. ಕನ್ನಡ

YourStory Kannada
2nd Feb 2016
Add to
Shares
0
Comments
Share This
Add to
Shares
0
Comments
Share

21ನೇ ಶತಮಾನದ ಜಾಗತಿಕ ಸ್ಥಳದಲ್ಲಿ ವ್ಯವಹಾರದ ಲಯವನ್ನು ಇಲ್ಲಿ ಅನುಭವಿಸಬಹುದು ಮತ್ತು ವಿಶ್ವ ಆರ್ಥಿಕ ಸಂಘಟನೆಯ ನಾವಿನ್ಯತೆಯ ಗೊಂಚಲನ್ನು ಇಲ್ಲಿ ಬಿಚ್ಚಬಹುದು. ಇದನ್ನು ಭಾರತದ ಸಿಲಿಕಾನ್ ವ್ಯಾಲಿ ಎನ್ನುತ್ತಾರೆ, ಏಷ್ಯಾದ ಅತಿದೊಡ್ಡ ಟೆಕ್ನಾಲಜಿ ತಳಪಾಯವಾಗಿದೆ. ನಮ್ಮ ಬೆಂಗಳೂರು ವಿಶ್ವದಲ್ಲೇ ನಾಲ್ಕನೇ ಅತಿದೊಡ್ಡ ತಂತ್ರಜ್ಞಾನ ಕೇಂದ್ರವಾಗಿದೆ. ವಿಶ್ವದ ಒಟ್ಟು 87 ಎಸ್‍ಇಐ- ಸಿಎಂಎಂ ದರ್ಜೆಯ 5ನೇ ಹಂತದ ಕಂಪನಿಗಳಲ್ಲಿ ಬೆಂಗಳೂರಲ್ಲಿ 63 ಕಂಪನಿಗಳು ಇವೆ ಅಂದ್ರೆ ಇಲ್ಲಿನ ಶಕ್ತಿ ಅಗಾಧವಾಗಿದೆ ಎಂದು ಒಂದು ವಾಕ್ಯದಲ್ಲೇ ಹೇಳಬಹುದು. ಕರ್ನಾಟಕದ ಆಗ್ನೇಯ ಭಾಗದ ಡೆಕ್ಕನ್ ಪ್ರಸ್ತಭೂಮಿಯಲ್ಲಿ ಬೆಂಗಳೂರು ಇದೆ. 2208 ಚದರ ಕಿಮೀ ವಿಸ್ತೀರ್ಣದ ವಿಶಾಲ ಜಿಲ್ಲೆಯಲ್ಲಿ ಬೆಂಗಳೂರು ಉತ್ತರ, ಬೆಂಗಳೂರು ಪೂರ್ವ, ಬೆಂಗಳೂರು ದಕ್ಷಿಣ ಹಾಗೂ ಆನೇಕಲ್ ತಾಲ್ಲೂಕುಗಳಿವೆ.

image


ಆರ್ಥಿಕ ಅವಲೋಕನ

ರಾಜ್ಯದ ಆರ್ಥಿಕತೆಗೆ ಬೆಂಗಳೂರು ಅತ್ಯುನ್ನತ ಕೊಡುಗೆ ನೀಡುತ್ತಿದೆ. ಇದರ ಒಟ್ಟು ಜಿಡಿಪಿ 993.25 ಶತಕೋಟಿ ರೂಗಳಾಗಿದ್ದು, ರಾಜ್ಯ ಜಿಎಸ್‍ಡಿಪಿಗೆ 33.3% ಕೊಡುಗೆ ನೀಡುತ್ತಿದೆ. ಇಲ್ಲಿನವರ ವಾರ್ಷಿಕ ತಲಾ ಆದಾಯ 2,02,340 ರೂಪಾಯಿಗಳು. ಸೇವಾ ವಲಯ ರಾಜ್ಯದ ಬೊಕ್ಕಸಕ್ಕೆ 683.30 ಶತಕೋಟಿ ರೂಪಾಯಿಗಳ ಕೊಡುಗೆ ನೀಡಿದೆ.

ವ್ಯವಸಾಯಕ್ಕೆ ಪ್ರಾಮುಖ್ಯತೆ

ಬೆಂಗಳೂರಿನ ಒಟ್ಟು ವಿಸ್ತೀರ್ಣದಲ್ಲಿ ಶೇಕಡಾ 14.09 ರಷ್ಟು ಭೂಮಿಯಲ್ಲಿ ವ್ಯವಸಾಯ ಮಾಡಲಾಗುತ್ತದೆ. ಇದರಲ್ಲಿ ಬೇಳೆಕಾಳುಗಳು 66.36% ಭೂಮಿಯಲ್ಲಿ ಕೇಂದ್ರೀಕೃತವಾಗಿದ್ರೆ, ದ್ವಿದಳ ಧಾನ್ಯಗಳು 9.94% ವಿಸ್ತೀರ್ಣದ ಭೂಮಿಯಲ್ಲಿ ಬೆಳೆಲಾಗುತ್ತದೆ. ಆನೇಕಲ್ ತಾಲ್ಲೂಕನ್ನು ರಾಜ್ಯದ ರಾಗಿ ಬಟ್ಟಲು ಎಂದು ಕರೆಯುತ್ತಾರೆ. ಬೆಂಗಳೂರು ನಗರ ಹೂ ಕೃಷಿಯಲ್ಲಿ ಅತ್ಯುನ್ನತ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಇಲ್ಲಿನ ಪ್ರಮುಖ ಬೆಳೆಗಳು ಭತ್ತ, ರಾಗಿ, ಜೋಳ, ಹುರುಳಿಕಾಳು, ಎಣ್ಣೆ ಬೀಜಗಳು. ಇದಲ್ಲದೇ ಬಾಳೆಹಣ್ಣು, ದ್ರಾಕ್ಷಿ, ಪಪ್ಪಾಯ, ಮಾವು, ಸಪೋಟ, ದಾಳಿಂಬೆ, ತೆಂಗು ಹಾಗೂ ಗುಲಾಬಿ ಬೆಳೆಯಲಾಗುತ್ತದೆ. ಜಿಲ್ಲೆಯ 649 ಹಾಲು ಉತ್ಪಾದಕ ಸಹಕಾರಿ ಸಂಘಗಳು ವಾರ್ಷಿಕವಾಗಿ 119 ದಶಲಕ್ಷ ಲೀಟರ್ ಹಾಲು ಉತ್ಪಾದಿಸುತ್ತವೆ. 34.7 ದಶಲಕ್ಷ ಮೊಟ್ಟೆ ಹಾಗೂ 5880 ಟನ್ ಮಾಂಸ ಉತ್ಪಾದನೆಯಾಗುತ್ತದೆ.

ಕೈಗಾರಿಕಾ ಭೂ ಪ್ರದೇಶ

ಬೆಂಗಳೂರು ಜೀವಂತ ಉತ್ಸಾಹಭರಿತ ವ್ಯಾಪಾರ ಕೇಂದ್ರವಾಗಿದೆ. ಇಲ್ಲಿ 147.9249 ಶತಕೋಟಿ ರೂ ಹೂಡಿಕೆಯ 315 ಬೃಹತ್ ಕೈಗಾರಿಕೆಗಳು, 134.233 ಶತಕೋಟಿ ರೂ ಹೂಡಿಕೆಯ 211 ಮಧ್ಯಮ ಕೈಗಾರಿಕೆಗಳು ಮತ್ತು 412.13 ಶತಕೋಟಿ ರೂ ಹೂಡಿಕೆಯ ಸಣ್ಣ ಕೈಗಾರಿಕೆಗಳು ಇವೆ. ಅಲ್ಲದೇ ಜಿಲ್ಲೆಯಲ್ಲಿ ಸುಮಾರು 16 ಕೈಗಾರಿಕಾ ವಲಯಗಳಿವೆ. ಅದರಲ್ಲಿ ಬೆಂಗಳೂರಿನ ಪೀಣ್ಯ ಏಷ್ಯಾದಲ್ಲೇ ಅತಿದೊಡ್ಡ ಕೈಗಾರಿಕಾ ವಲಯವಾಗಿದೆ. ಇಷ್ಟುಮಾತ್ರವಲ್ಲದೇ 13 ಕೈಗಾರಿಕಾ ಎಸ್ಟೇಟ್‍ಗಳು, 14 ವಿಶೇಷ ಆರ್ಥಿಕ ವಲಯಗಳು ಬೆಂಗಳೂರಿನ ಕೈಗಾರಿಕೆಗಳಿಗೆ ಹೆಸರು ತಂದುಕೊಟ್ಟಿವೆ.

ಭಾರತದ ಐಟಿ ಮತ್ತು ಬಿಟಿ ರಾಜಧಾನಿ:ಬೆಂಗಳೂರು ದೇಶದ ಅತಿದೊಡ್ಡ ಐಟಿ ರಫ್ತುದಾರನಾಗಿದ್ದು, ಭಾರತದ ಐಟಿ ಉತ್ಪಾದನೆಯ 35% ಬೆಂಗಳೂರಿನಿಂದರಫ್ತು ಆಗುತ್ತದೆ. ಇಲ್ಲಿ ಅತಿಹೆಚ್ಚು ಫಾರ್ಚೂನ್ ಪಟ್ಟಿಯ ಎಂಎನ್‍ಸಿ ಐಟಿ ಬಿಟಿ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಐಟಿ ಮಾತ್ರವಲ್ಲದೇ ಬಯೋ ಟೆಕ್ನಾಲಜಿ ವಲಯದಲ್ಲೂ ಬೆಂಗಳೂರು ಮುಂದಿದ್ದು ಭಾರತದ 40% ಬಿಟಿ ಕಂಪನಿಗಳು ಬೆಂಗಳೂರಿನಲ್ಲಿ ನೆಲೆಯೂರಿದೆ. ದೇಶದಲ್ಲಿರೋ 340 ಬಿಟಿ ಕಂಪನಿಗಳಲ್ಲಿ 137 ಬೆಂಗಳೂರಿನಲ್ಲಿದೆ. ಮತ್ತು ದೇಶದ 30 ಅತ್ಯುನ್ನತ ಬ್ಯುಸಿನೆಸ್ ಸ್ಕೂಲ್‍ಗಳಲ್ಲಿ ಬೆಂಗಳೂರು 20 ತನ್ನ ಒಡಲಲ್ಲಿ ಇಟ್ಟುಕೊಂಡಿದೆ.ಸುಮಾರು 100 ಎಕರೆ ಪ್ರದೇಶದಲ್ಲಿ ಪ್ರಸ್ತಾವಿತ ಬಯೋಟೆಕ್ ಪಾರ್ಕ್‍ಗೆ ವಿಶ್ವದರ್ಜೆಯ ಮೂಲಸೌಕರ್ಯ ಒದಗಿಸಲಾಗುತ್ತಿದ್ದು ಸುಸಜ್ಜಿತ ಬಯೋಟೆಕ್ ಇನ್ಕ್ಯುಬೇಟರ್ಸ್ ಮತ್ತು ಡಿಎನ್‍ಎ ಟೆಸ್ಟ್ ಲ್ಯಾಬೊರೇಟರಿ ಸ್ಥಾಪನೆಯಾಗಲಿದೆ.

ಏರೋಸ್ಪೇಸ್ ಕೇಂದ್ರ

ಬೆಂಗಳೂರು ಭಾರತದ ಏರೋಸ್ಟೇಸ್ ಇಂಡಸ್ಟ್ರಿಯ ಕೇಂದ್ರವಾಗಿದೆ. ಇಸ್ರೋ, ಡಿಆರ್‍ಡಿಒ ಸೇರಿದಂತೆ, ಎಚ್‍ಎಎಲ್, ಎಡಿಎ, ಎನ್‍ಎಎಲ್, ಐಐಎಸ್‍ಸಿ ನಂತಹ ವಿಶ್ವಮಾನ್ಯತೆ ಪಡೆದ ಸಂಸ್ಥೆಗಳು ಇಲ್ಲಿವೆ. ಎಚ್‍ಎಎಲ್‍ನ 9 ಆರ್ ಅಂಡ್ ಡಿ ಕೇಂದ್ರಗಳಲ್ಲಿ 4 ಹಾಗೂ ಡಿಆರ್‍ಡಿಒದ 5 ಏರೋನಾಟಿಕಲ್ ಕೇಂದ್ರಗಳು ಬೆಂಗಳೂರಿನಲ್ಲಿವೆ. ಭಾತರದ ಪ್ರಥಮ ಖಾಸಗೀ ಏರ್‍ಕ್ರಾಫ್ಟ್ ಫ್ಯಾಕ್ಟರಿ ಬೆಂಗಳೂರಿನಲ್ಲಿದೆ. ಇನ್ನು ದೇವನಹಳ್ಳಿ ಇಂಟರ್‍ನ್ಯಾಷನಲ್ ಏರ್‍ಪೋರ್ಟ್ ಬಳಿ ಪ್ರಸ್ತಾವಿತ 250 ಎಕರೆ ಏರೋಸ್ಪೇಸ್ ಎಸ್‍ಇಝಡ್ ಬೆಂಗಳೂರಿನ ಏರೋಸ್ಪೇಸ್ ಗರಿಮೆಯನ್ನು ಎತ್ತರಕ್ಕೆ ಕೊಂಡೊಯ್ಯಲಿದೆ.

ನಾವಿನ್ಯಕೇಂದ್ರ ಸಮೂಹಗಳು

ಮೈಕ್ರೋಸಾಫ್ಟ್‍ನ ಎರಡನೇ ಆರ್ ಅಂಡ್ ಡಿ ಘಟಕಕ್ಕೆ ಬೆಂಗಳೂರು ನೆಲೆಯಾಗಿದೆ. ಅಲ್ಲದೇ ಐಬಿಎಂನ 10 ಇನ್ನೊವೇಷನ್ ಸೆಂಟರ್‍ಗಳಲ್ಲಿ ಒಂದು ಬೆಂಗಳೂರಿನಲ್ಲಿ 1992ರಿಂದ ಕಾರ್ಯನಿರ್ವಹಿಸುತ್ತಿದೆ. ಅದೇ ರೀತಿ ಫಿಲಿಪ್ಸ್ ಇನ್ನೋವೇಟೀವ್ ಕ್ಯಾಂಪಸ್ ನಾವಿನ್ಯ ಎಂಜಿನಿಯರಿಂಗ್, ಆರೋಗ್ಯ ಮತ್ತು ಗ್ರಾಹಕ ವಸ್ತುಗಳ ಉತ್ಪಾದನೆಯಲ್ಲಿ ತೊಡಗಿದೆ. ಜಿಇ ಹೆಲ್ತ್‍ಕೇರ್ ಮೆಡಿಕಲ್ ಇಂಡಸ್ಟ್ರಿಗೆ ಹೊಸ ರೂಪು ಕೊಟ್ಟಿದೆ. ಇದರ ಸಹಾಯದಿಂದ ಬೆಂಗಳೂರಿನಲ್ಲಿ ವಿಶ್ವದ ಅತಿದೊಡ್ಡ ಚಿಕಿತ್ಸಾ ಕೇಂದ್ರಗಳು ಹಾಗೂ ಟೆಲಿಮೆಡಿಸಿನ್ ಕೇಂದ್ರವಿದೆ.

ಎಂಜಿನಿಯರಿಂಗ್ ಉತ್ಪಾದನೆ

ಬೆಂಗಳೂರು ಭಾರತದ ಎಂಜಿನಿಯರಿಂಗ್ ಶಕ್ತಿಕೇಂದ್ರವಾಗಿದೆ. ದಕ್ಷಿಣ ಏಫ್ಯಾದ ಅತಿದೊಡ್ಡ ಮಷಿನ್ ಟೂಲ್ಸ್ ಪ್ರದರ್ಶನ ಇಂಟೆಕ್ಸ್ ಬೆಂಗಳೂರಿನಲ್ಲಿ ಜರುಗುತ್ತದೆ. ಟೊಯೊಟಾ, ಬಾಷ್, ಎಲ್&ಟಿ, ಕಿರ್ಲೋಸ್ಕರ್ ಎಸ್ಕಾಟ್ರ್ಸ್ ಓಮಾಕ್ಸ್ ಆಟೋ ಲಿಮಿಟೆಡ್, ಏರ್‍ಬಸ್‍ನ ಎಂಜಿನಿಯರಿಂಗ್ ಕೇಂದ್ರ ಸೇರಿದಂತೆ ಎಂಜಿನಿಯರಿಂಗ್ ದೈತ್ಯ ಕಂಪನಿಗಳು ಇಲ್ಲಿವೆ. ಇಲ್ಲಿನ ವ್ಹೀಲ್ ಮತ್ತು ಆಕ್ಸಲ್ ಇಂಡಸ್ಟ್ರಿ ಏಷ್ಯಾದಲ್ಲೇ ಅತಿಹೆಚ್ಚು ಯೂನಿಟ್ ಉತ್ಪಾದನೆ ಮಾಡುತ್ತದೆ.

ವ್ಯವಸಾಯ ಮತ್ತು ಆಹಾರ ಸಂಸ್ಕರಣೆಯಲ್ಲಿ ವ್ಯಾಪಾರ ವಿಕಸನ:ಭಾರತದಿಂದ ರಫ್ತಾಗುವ 70% ಗುಲಾಬಿ ಹೂವುಗಳು ಬೆಳೆಯುವುದು ಬೆಂಗಳೂರಿನಲ್ಲಿ. ಹೂ ಹರಾಜು ಕೇಂದ್ರ ಮತ್ತು ಅಂತರಾಷ್ಟ್ರೀಯ ಹೂ ಹರಾಜು ಮಂಡಳಿ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಜಿಲ್ಲಾ ವ್ಯವಸಾಯ ತರಬೇತಿ ಕೇಂದ್ರ ಆನೇಕಲ್ ತಾಲ್ಲೂಕಿನಲ್ಲಿದೆ. ಸಹಕಾರ ಸಂಘವಾದ ಕಾಪ್‍ಕಾಮ್ಸ್ ದಿನವೂ 100 ಮೆಟ್ರಿಕ್ ಟನ್ ತೋಟಗಾರಿಕೆ ವಸ್ತುಗಳನ್ನು ಮಾರಾಟ ಮಾಡುತ್ತಿದೆ. ಜಿಲ್ಲೆಯ ಒಟ್ಟು ಎಂಎಸ್‍ಎಂಇ ಯೂನಿಟ್‍ಗಳಲ್ಲಿ 10% ವ್ಯವಸಾಯ ಮತ್ತು ಆಹಾರ ಸಂಸ್ಕರಣ ಕೈಗಾರಿಕೆಗಳಾಗಿರೋದ್ರಿಂದ ಸಂಶೋಧನೆ ಮತ್ತು ತರಬೇತಿ ಸಂಸ್ಥೆಗಳಿಗೆ ಬೆಂಗಳೂರಿನಲ್ಲಿ ಉತ್ತಮ ಭವಿಷ್ಯವಿದೆ.

ಸ್ವಾಸ್ಥ್ಯ ಪ್ರವಾಸೋದ್ಯದಲ್ಲಿ ಬೆಂಗಳೂರು ದಾಪುಗಾಲಿಡುತ್ತಿದ್ದು, ವಿಧ್ವದಾದ್ಯಂತ 6 ಸಾವಿರ ರೋಗಿಗಳ ಶುಶ್ರೂಶೆಯಲ್ಲಿ ತೊಡಗಿದೆ. ಬೆಂಗಳೂರು ಖಾಸಗೀ ಮತ್ತು ಸರ್ಕಾರಿ ಪಾಲುದಾರಿಕೆಯ (ಪಿಪಿಪಿ) ಯೋಜನೆಗಳನ್ನು ಜಾರಿ ಮಾಡುವಲ್ಲಿ ಭಾರತದಲ್ಲೇ ಅತ್ಯುನ್ನತ ಸ್ಥಾನದಲ್ಲಿದೆ.

ಮೂಲ ಸೌಕರ್ಯ ಮತ್ತು ಸಂಪನ್ಮೂಲಗಳು

ಭೂಮಿ ಮತ್ತು ಮಣ್ಣು: ಬೆಂಗಳೂರಿನಲ್ಲಿ 40.76% ವ್ಯವಸಾಯ ಮಾಡದ ಲ್ಯಾಂಡ್ ಬ್ಯಾಂಕ್ ಇದೆ. ಉಳಿದ 43.66% ಭೂಮಿಯಲ್ಲಿ 14.09% ಭೂಮಿಯಲ್ಲಿ ವ್ಯವಸಾಯ ಮಾಡಲಾಗುತ್ತಿದೆ ಮತ್ತು 1.49% ರಷ್ಟು ಭೂಮಿ ಅರಣ್ಯ ಪ್ರದೇಶವಾಗಿದೆ. ಬೆಂಗಳೂರು ಭೂ ಪ್ರದೇಶದಲ್ಲಿ ಗ್ರಾನೈಟ್, ಜೆನೆಸಿಸ್, ಮಿಗ್ಮಟೈಟ್ಸ್ ಇದ್ದು ಕೆಂಪು ಮಣ್ಣು ಮತ್ತು ಜೇಡಿ ಮಣ್ಣನ್ನು ಹೊಂದಿದೆ. ಬೆಂಗಳೂರಲ್ಲಿ ಮಧ್ಯಮ ಮತ್ತು ಎರಡು ಮಾದರಿ ಮಳೆ ವಿನ್ಯಾಸವಿದ್ದು ಸಣ್ಣ ಮತ್ತು ದೀರ್ಘ ಅವಧಿಯ ಬೆಳೆಗಳನ್ನು ಬೆಳೆಯಲು ಪ್ರಶಸ್ತವಾಗಿದೆ.

ಜಲಾಶಯಗಳು

ಬೆಂಗಳೂರಿಗೆ ಬಿಡ್ಬ್ಬ್ಲ್ಯೂಎಸ್‍ಎಸ್‍ಬಿ ನೀರು ಪೂರೈಕೆ ಮಾಡುತ್ತದೆ. ಕುಡಿಯುವ ನೀರಿಗಾಗಿ ಅರ್ಕಾವತಿ ನದಿ ಮತ್ತು ಕಾವೇರಿ ನದಿಗಳಿಂದ ನೀರು ಸರಬರಾಜು ಮಾಡಲಾಗುತ್ತದೆ. ಬೆಂಗಳೂರಿನಲ್ಲಿ ವ್ಯವಸಾಯಕ್ಕೆ 461 ನೀರಿನ ಟ್ಯಾಂಕ್‍ಗಳು ಇದೆ. ಅಲ್ಲದೇ 52 ನೀರು ಶೇಖರಣಾ ಕೇಂದ್ರಗಳು 118 ನೆಲಮಟ್ಟದ ನೀರು ಶೇಖರಣಾ ಕೇಂದ್ರಗಳು ಹೊಂದಿದೆ.

ವಿದ್ಯುತ್ ಸರಬರಾಜು

ಬೆಂಗಳೂರಿಗೆ ವಿದ್ಯುತ್ ಸರ¨ರಾಜು ಜವಾಬ್ದಾರಿ ಬೆಸ್ಕಾಂ ಮೇಲಿದೆ. ಜಿಲ್ಲೆಗೆ ವಾರ್ಷಿಕ 14,225 ಮಿಲಿಯನ್ ಯೂನಿಟ್ ಸರಾಸರಿ ಬಳಕೆ ಇದೆ. ಹನುಮನಮಟ್ಟಿ ಮತ್ತು ಕತ್ತಪ್ಪಗುಡ್ಡದಲ್ಲಿ ಪವನ ವಿದ್ಯುತ್ ಘಟಕ ಸ್ಥಾಪನೆ ಮೂಲಕ ಅನಿಯಮಿತ ವಿದ್ಯುತ್ ಸಂಪರ್ಕಕ್ಕೆ ಯೋಜನೆ ರೂಪಿಸಲಾಗಿದೆ.

ಜ್ಞಾನಕೇಂದ್ರ

ರಾಜ್ಯದ ಶೇಕಡಾ 36 ರಷ್ಟು ವಿದ್ಯಾರ್ಥಿಗಳಿಗೆ ಬೆಂಗಳೂರು ಜ್ಞಾನಾರ್ಜನೆಯ ಕೇಂದ್ರವಾಗಿದೆ. ಖ್ಯಾತ ವಿದ್ಯಾಸಂಸ್ಥೆಗಳು, ವೃತ್ತಿಪರ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಶಾಲೆ - ಕಾಲೇಜುಗಳು ಸುಮಾರು 1.8 ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯೆ ಕಲಿಸುತ್ತಿದೆ. ದೇಶದಲ್ಲೇ ಅತಿಹೆಚ್ಚು ಎಂಜಿನಿಯರ್ ಕಾಲೇಜುಗಳನ್ನು (84) ಹೊಂದಿರೋ ಖ್ಯಾತಿ ಬೆಂಗಳೂರಿಗಿದೆ. 10 ಮೆಡಿಕಲ್, 16 ಡೆಂಟಲ್, 64 ಡಿಗ್ರಿ ಕಾಲೇಜು ಸೇರಿದಂತೆ 8 ಖಾಸಗೀ ವಿಶ್ವವಿದ್ಯಾಲಯಗಳು, 6 ರಾಜ್ಯ ವಿಶ್ವವಿದ್ಯಾಲಯಗಳು ಮತ್ತು 4 ಡೀಮ್ಡ್ ಯೂನಿವರ್ಸಿಟಿ ಹೊಂದಿದೆ. ಐಐಎಂಬಿ, ನ್ಯಾಷನಲ್ ಲಾ ಸ್ಕೂಲ್, ಐಐಎಸ್‍ಸಿ, ನಿಫ್ಟ್, ಐಐಐಟಿ, ಬೆಂಗಳೂರು ಯೂನಿವರ್ಸಿಟಿ, ಕೃಷಿ ವಿಜ್ಞಾನ ವಿಶ್ವವಿದ್ಯಾಲಯಗಳಂತಹ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಬೆಂಗಳೂರಿನಲ್ಲಿವೆ.

ವೈದ್ಯಕೀಯ ಸಂಪನ್ಮೂಲ

ವೈದ್ಯಕೀಯ ಸೌಲಭ್ಯದಲ್ಲಿ ಬೆಂಗಳೂರು ದೇಶದಲ್ಲೇ ಮುಂಚೂಣಿಯಲ್ಲಿದೆ. ಬೆಂಗಳೂರಿನಲ್ಲಿ 79 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. 195 ಖಾಸಗೀ ಆಸ್ಪತ್ರೆಗಳು, 5 ಸಮುದಾಯ ಆರೋಗ್ಯ ಕೇಂದ್ರಗಳು, 9 ಅಲೋಪತಿ ಮತ್ತು 6 ಆಯುರ್ವೇದ ಆಸ್ಪತ್ರೆಗಳಿವೆ.

ಸಂಪರ್ಕ ವ್ಯವಸ್ಥೆ

ಜಿಲ್ಲೆಯಲ್ಲಿ ಉತ್ತಮ ಸಂಪರ್ಕ ವ್ಯವಸ್ಥೆಯಿದೆ ರಸ್ತೆಮಾರ್ಗವಾಗಿ ಜಿಲ್ಲೆಯಲ್ಲಿ 147 ಕಿಮೀ ಉದ್ದದ 3 ರಾಷ್ಟ್ರೀಯ ಹೆದ್ದಾರಿ ಹಾದು ಹೋಗುತ್ತದೆ. ರಾಜ್ಯದ ಬಹುತೇಕ ಜಿಲ್ಲೆಗಳಿಗೆ ಮತ್ತು ರಾಷ್ಟ್ರದ ಪ್ರಮುಖ ನಗರಗಳಿಗೆ ಬೆಂಗಳೂರಿನಿಂದ ರೈಲ್ವೆ ಸಂಪರ್ಕ ಇದೆ. ಜಿಲ್ಲೆಯಲ್ಲಿ 148.32ಕಿಮೀ ಉದ್ದದ ರೈಲ್ವೆ ಮಾರ್ಗದಲ್ಲಿ 18 ರೈಲ್ವೆ ನಿಲ್ದಾಣಗಳು ಇವೆ. 2017ರ ವೇಳೆಗೆ ಬೆಂಗಳೂರಿನ ಸಮೂಹ ಸಾರಿಗೆ ವ್ಯವಸ್ಥೆಯಾದ ನಮ್ಮ ಮೆಟ್ರೋ 137 ಕಿಮೀ ಮಾರ್ಗ ವಿಸ್ತರಿಸಿರುತ್ತದೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಾಷ್ಟ್ರದಲ್ಲೇ ನಾಲ್ಕನೇ ಅತ್ಯಂತ ದಟ್ಟಣೆಯ ವಿಮಾನ ನಿಲ್ದಾಣವಾಗಿದೆ. 1.05 ಲಕ್ಷ ವಿಮಾನಯಾನ, 9.92 ದಶಲಕ್ಷ ಪ್ರಯಾಣಿಕರನ್ನು ಹಾಗೂ 1.75 ಲಕ್ಷ ಟನ್ ಕಾರ್ಗೋ ಸಾಗಾಟವನ್ನು 2009ರಲ್ಲಿ ಇಲ್ಲಿ ನಿಭಾಯಿಸಲಾಗಿದೆ. ಗಂಟೆಗೆ 3 ಸಾವಿರ ಪ್ರಯಾಣಿಕರನ್ನು ಕೊಂಡೊಯ್ಯವ ಸಾಮಥ್ರ್ಯ ಇದಕ್ಕಿದೆ. ಬೆಂಗಳೂರು ಏರ್‍ಪೋರ್ಟ್‍ನ 2ನೇ ಹಂತದ ಉನ್ನತೀಕರಣ ಪ್ರಾರಂಭವಾಗಿದ್ದು ಇದರಿಂದ ಮತ್ತಷ್ಟು ವೇಗದಿಂದ ಕೆಲಸಗಳು ಆಗುತ್ತವೆ.

ಬೆಂಗಳೂರಿಗೆ ಮಂಗಳೂರು, ಚೆನ್ನೈ, ಕಾರವಾರ ಮತ್ತು ಗೋವಾ ಬಂದರಿನಿಂದ ಜಲಾನಯನ ಸಂಪರ್ಕ ವ್ಯವಸ್ಥೆ ಇದೆ.

ಮೂಲ ಸೌಕರ್ಯ ಅಭಿವೃದ್ಧಿ

ಕೈಗಾರಿಕಾ ಅಗತ್ಯತೆಗಳನ್ನು ಪೂರೈಸಲು ಬೆಂಗಳೂರು ನಗರದಲ್ಲಿ ವಿಶ್ವದರ್ಜೆಯ ಮೂಲಸೌಕರ್ಯವಿದೆ. ಮಧ್ಯ ಏಷ್ಯಾ ವಲಯದಲ್ಲಿ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅತ್ಯುತ್ತಮ ಬಹುಮಾನ ಸಿಕ್ಕಿದ್ದು, ಭಾರತದಲ್ಲಿ ಮೂರನೇ ಅತಿದೊಡ್ಡ ವಿಮಾನ ನಿಲ್ದಾಣವಾಗಿದೆ. ಬೆಂಗಳೂರು ಅಂತರಾಷ್ಟ್ರೀಯ ಕನ್ವೆನ್ಷನ್ ಸೆಂಟರ್ ಏರ್‍ಪೋರ್ಟ್‍ಗೆ ಸನಿಹದಲ್ಲೇ ಇದ್ದು ಇಲ್ಲಿ 6 ಸಾವಿರ ಜನರು ಏಕಕಾಲದಲ್ಲಿ ಕೂರಬಹುದಾದ ವ್ಯವಸ್ಥೆ ಇದೆ.

ಜೀವ ವಿಜ್ಞಾನ ವಿಭಾಗದಲ್ಲಿ ಸ್ಟಾರ್ಟ್ ಅಪ್‍ಗಳನ್ನು ಬೆಳೆಸುವ ಬೆಂಗಳೂರು ಬಯೋ ಇನ್ನೋವೇಶನ್ ಸೆಂಟರ್ 10 ಎಕರೆ ವಿಶಾಲ ಪ್ರದೇಶದಲ್ಲಿ ನಿರ್ಮಾಣವಾಗುತ್ತಿದೆ. ಇದು ರಾಜ್ಯ ಸರ್ಕಾರ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾಗಿದ್ದು, ರಾಜ್ಯ ಸರ್ಕಾರದ ಬಯೋಟೆಕ್ನಾಲಜಿ ಇಲಾಖೆ ಮತ್ತು ಕೇಂದ್ರ ಸರ್ಕಾರಗಳು ಕೇಂದ್ರಕ್ಕಾಗಿ ಅನುದಾನ ಬಿಡುಗಡೆ ಮಾಡಿವೆ.

ಇದಲ್ಲದೇ ಗಮನ ಸೆಳೆಯುವ ಇತರೆ ಯೋಜನೆಗಳೆಂದ್ರೆ 4 ಏರೋಸ್ಪೇಸ್ ಎಸ್‍ಇಝಡ್ ಮತ್ತು 15 ಇತರೆ ಕಾರ್ಯಪ್ರವೃತ್ತವಾಗಿರೋ ಎಸ್‍ಇಝಡ್‍ಗಳು, ನೈಸ್ ಕಾರಿಡಾರ್‍ನ 110 ಕಿಮೀ ಬೆಂಗಳೂರು ಮೈಸೂರು ಕಾರಿಡಾರ್, ಬೆಂಗಳೂರು ಮದ್ದೂರು ಹೈವೇ, ನೆಲಮಂಗಲ - ಪೀಣ್ಯ, ದೇವನಹಳ್ಳಿ – ಯಲಹಂಕ ಮತ್ತು ಜಿಗಣಿ ಎಲೆಕ್ಟ್ರಾನಿಕ್ ಸಿಟಿನಡುವೆ ಸಮೂಹ ನಗರ ಅಭಿವೃದ್ಧಿ ಯೋಜನೆ.

ಇವೆಲ್ಲಾ ನಗರ ಅಭಿವೃದ್ಧಿ ಯೋಜನೆಗಳು ಮುಂದಿನ ಪೀಳಿಗೆಯ ಆರ್ಥಿಕ ಬೆಳವಣಿಗೆ ಮತ್ತು ನಾವಿನ್ಯತೆ ಅಭಿವೃದ್ಧಿಯಲ್ಲಿ ಅತ್ಯುತ್ತಮವಾಗಿ ಒಳಗೊಂಡು ಅವಶ್ಯಕವಾದ ಅಭಿವೃದ್ಧಿ ಮಾಗದಲ್ಲಿ ಕೊಂಡೊಯ್ಯವುದರಲ್ಲಿ ಸಂಶಯವಿಲ್ಲ.

Add to
Shares
0
Comments
Share This
Add to
Shares
0
Comments
Share
Report an issue
Authors

Related Tags