ಆವೃತ್ತಿಗಳು
Kannada

ಅನ್ನದಾತರಿಗೆ ಬೆನ್ನೆಲುಬಾದ ಸಾಫ್ಟ್​​ ವೇರ್ ಎಂಜಿನಿಯರ್ - ಸಾಲದ ಸುಳಿಗೆ ಸಿಲುಕಿದ್ದ ರೈತರಿಗೆ ಹೊಸ ಬದುಕು ಕಟ್ಟಿಕೊಟ್ಟ `ಆರ್ಗೆನಿಕ್ ಮಂಡ್ಯ'

ಟೀಮ್ ವೈ.ಎಸ್​. ಕನ್ನಡ

22nd Mar 2016
Add to
Shares
19
Comments
Share This
Add to
Shares
19
Comments
Share

`ಆರ್ಗೆನಿಕ್ ಮಂಡ್ಯ' ಮಳಿಗೆಗೆ ಬಂದ ಅನ್ನದಾತ ಟೊಮ್ಯಾಟೋ ಹಾಗೂ ಮೆಣಸಿನ ಕಾಯಿ ತುಂಬಿದ ಚೀಲಗಳನ್ನೆಲ್ಲ ಟೇಬಲ್ ಮೇಲಿಡ್ತಾನೆ. ಅಂಗಡಿಯ ಕ್ಯಾಶಿಯರ್ ಅದನ್ನು ಕರೆಕ್ಟಾಗಿ ತೂಕ ಮಾಡಿ ಹಣ ಕೊಡ್ತಾನೆ. ಹಣ ಪಡೆದುಕೊಂಡ ರೈತ ಮನೆಯ ಕಡೆಗೆ ನಡೆಯುತ್ತಾನೆ. ಇಡೀ ಪ್ರಕ್ರಿಯೆ ನಡೆಯೋದು 6 ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ. ಇಲ್ಲಿ ವಿಳಂಬವಿಲ್ಲ, ಸಂಧಾನವಿಲ್ಲ, ಮಧ್ಯವರ್ತಿಗಳ ಹಾವಳಿಯಿಲ್ಲ, ರೈತರು ನಿರಾಸೆಗೊಳಗಾಗುವ ಪ್ರಮೇಯವೂ ಇಲ್ಲ.

image


ಆದ್ರೆ ವರ್ಷದ ಹಿಂದೆ ಮಂಡ್ಯ ಹೀಗಿರಲಿಲ್ಲ. 2015ರ ಜುಲೈನಲ್ಲಿ 20ಕ್ಕೂ ಹೆಚ್ಚು ಕಬ್ಬು ಬೆಳೆಗಾರರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಂಡ್ಯ, ರಾಷ್ಟ್ರರಾಜಧಾನಿ ಬೆಂಗಳೂರಿನಿಂದ ಕೇವಲ 100 ಕಿಲೋ ಮೀಟರ್ ದೂರದಲ್ಲಿದೆ ಅಷ್ಟೆ. ಆದ್ರೆ ಮಂಡ್ಯದ ರೈತರೆಲ್ಲ ಸಾಲದ ಸುಳಿಗೆ ಸಿಲುಕಿದ್ದಾರೆ. ಕಳೆದ ಸಾಲಿನಲ್ಲಿ ಮಂಡ್ಯ ಜಿಲ್ಲೆಯ ರೈತರು ಸುಮಾರು 1200 ಕೋಟಿ ರೂಪಾಯಿ ಸಾಲ ಪಡೆದಿದ್ದಾರೆ. ಸರ್ಕಾರದ ನಿರಾಸಕ್ತಿ, ಬೆಲೆ ಕುಸಿತ, ಹೆಚ್ಚುವರಿ ದಾಸ್ತಾನು, ಸರಿಯಾದ ಕೃಷಿ ವಿಧಾನ ಅಳವಡಿಕೆಗೆ ಮಾರ್ಗದರ್ಶನದ ಕೊರತೆ ಇಂತಹ ಕಠೋರ ಸನ್ನಿವೇಶಗಳಿಗೆ ಸಿಕ್ಕು ರೈತರು ಸಾಲದ ಹೊರೆ ಹೊರುವಂತಾಗಿದೆ.

ಇದನ್ನು ಓದಿ: ಖಾದಿ ಬಟ್ಟೆಗಳಿಗೆ ಈಗ ಎಲ್ಲಿಲ್ಲದ ಡಿಮ್ಯಾಂಡ್: ಯಶಸ್ಸಿನತ್ತ ಖಾದಿ ಮಂಡಳಿ

ಮಣ್ಣಿನ ಮಕ್ಕಳಿಗೆ ಎದುರಾದ ದುಸ್ಥಿತಿಯನ್ನು ನೋಡಿ 37 ವರ್ಷದ ಮಧು ಚಂದನ್ ಚಿಕ್ಕದೇವಯ್ಯ, ಕೃಷಿಕರ ಬೆಂಬಲಕ್ಕೆ ಟೊಂಕಕಟ್ಟಿ ನಿಂತಿದ್ದಾರೆ. ಐಟಿ ಉದ್ಯೋಗಿ ಮಧು ಚಂದನ್ ಕ್ಯಾಲಿಫೋರ್ನಿಯಾದಲ್ಲಿ ಕನಸಿನ ಬದುಕು ಕಟ್ಟಿಕೊಳ್ಳುವುದನ್ನು ಬಿಟ್ಟು ಅನ್ನದಾತರ ಶ್ರೇಯೋಭಿವೃದ್ಧಿಗಾಗಿ ದುಡಿಯುತ್ತಿದ್ದಾರೆ. ಮಧು ಚಂದನ್ ಕೂಡ ಸಕ್ಕರೆ ನಾಡಿನ ರೈತ ಕುಟುಂಬದಲ್ಲಿ ಹುಟ್ಟಿ ಬೆಳೆದವರು. ಅವರ ತಂದೆ ಬೆಂಗಳೂರಿನ ಕೃಷಿ ವಿವಿಯಲ್ಲಿ ವೈಸ್ ಛಾನ್ಸಿಲರ್ ಆಗಿದ್ದರು. ಸಾಫ್ಟ್‍ವೇರ್ ಕ್ಷೇತ್ರವನ್ನು ಆಯ್ದುಕೊಂಡ ಮಧು ಚಂದನ್, ಜಗತ್ತು ಸುತ್ತಿ ಬಂದಿದ್ದಾರೆ. ಅಷ್ಟೇ ಅಲ್ಲ ವೆರಿಫಯಾ ಕಾರ್ಪೊರೇಷನ್ ಎಂಬ ಕಂಪನಿಯೊಂದರ ಸಹ ಸಂಸ್ಥಾಪಕರೂ ಆಗಿದ್ದರು. ಸಾಫ್ಟ್​​ವೇರ್ ಎಂಜಿನಿಯರ್ ಆಗಿದ್ರೂ ಮಧು ಅವರಲ್ಲಿ ರೈತ ಮನಸ್ಸಿದೆ.

image


2014ರ ಆಗಸ್ಟ್​​ನಲ್ಲಿ ಉದ್ಯೋಗ ತ್ಯಜಿಸಿದ ಮಧು, ಮಂಡ್ಯ ರೈತರಿಗೆ ಒಳಿತು ಮಾಡಬೇಕೆಂದು ನಿರ್ಧರಿಸಿ ಸಕ್ಕರೆ ನಾಡಿಗೆ ಮರಳಿದ್ರು. ``ಇಡೀ ವಿಶ್ವದಲ್ಲಿ ಸಗಟು ಮಾರಾಟ ಮಾಡಿ, ಚಿಲ್ಲರೆ ಬೆಲೆಗೆ ಖರೀದಿಸುವವರು ರೈತರು ಮಾತ್ರ'' ಎನ್ನುತ್ತಾರೆ ಅವರು. 

"ರೈತರು ಕೃಷಿ ಬಿಟ್ಟು ಮನೆಗೆಲದಂತಹ ಉದ್ಯೋಗ ಹುಡುಕಿಕೊಂಡು ಎಲ್ಲರೂ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಕೆಲಸದಲ್ಲಿ ಸ್ಥಿರತೆ ಇಲ್ಲದೇ ಇರುವುದರಿಂದ ಆರ್ಥಿಕ ಸಂಕಷ್ಟ ಎದುರಾಗಿದೆ. ಕುಟುಂಬ ನಿರ್ವಹಣೆ ಸಾಧ್ಯವಾಗುತ್ತಿಲ್ಲ. ಪರಿಣಾಮ ಸಾಲಬಾಧೆ ತಾಳಲಾರದೆ ರೈತರು ಸಾವಿಗೆ ಶರಣಾಗುತ್ತಿದ್ದಾರೆ. ಸಂಕಷ್ಟದಲ್ಲಿರುವ ರೈತರಿಗೆಲ್ಲ `ಆರ್ಗೆನಿಕ್ ಮಂಡ್ಯ' ಹೊಸ ಬದುಕು ಕಟ್ಟಿಕೊಡುತ್ತಿದೆ''.
                     - ಮಧು, ಆರ್ಗನಿಕ್​ ಮಂಡ್ಯ ಸಂಸ್ಥಾಪಕರು

`ಆರ್ಗೆನಿಕ್ ಮಂಡ್ಯ' ಬೀಜಗಳು...

ಮಧು ಮಂಡ್ಯಕ್ಕೆ ಮರಳಿದ ಮೇಲೆ ಮೊದಲು ಗಮನಹರಿಸಿದ್ದು ಚದುರಿದ ಭೂದೃಶ್ಯಗಳತ್ತ. ಹಲವಾರು ರೈತರು ಸಾವಯವ ಕೃಷಿಯನ್ನೇ ಅಳವಡಿಸಿಕೊಂಡಿದ್ರು. ಸ್ಥಳೀಯ ತಂತ್ರಗಳನ್ನೇ ಅಳವಡಿಸಿಕೊಂಡು ಯೋಗ್ಯ ಇಳುವರಿ ಪಡೆಯುತ್ತಿದ್ರು. ಆದ್ರೆ ಸಂಘಟಿತ ಮಾರುಕಟ್ಟೆ ಮತ್ತು ಮಾಹಿತಿ ವಿನಿಮಯದ ಕೊರತೆ ರೈತರನ್ನು ಸಂಕಷ್ಟಕ್ಕೆ ದೂಡಿತ್ತು. ತಮ್ಮ ಸ್ನೇಹಿತರು ಮತ್ತು ಮಾಜಿ ಸಹೋದ್ಯೋಗಿಗಳನ್ನೆಲ್ಲ ಒಟ್ಟುಗೂಡಿಸಿದ ಮಧು, ಒಂದು ಕೋಟಿ ರೂಪಾಯಿ ಸಂಗ್ರಹಿಸಿ `ಮಂಡ್ಯ ಆರ್ಗೆನಿಕ್ ಕೋಆಪರೇಟಿವ್ ಸೊಸೈಟಿ' ಆರಂಭಿಸಿದ್ರು. ಮೊದಲ ಹಂತದಲ್ಲಿ 240 ಸಾವಯವ ಕೃಷಿಕರಿಗೆ ನೆರವಾದ್ರು. ಇದರ ಜೊತೆಗೆ ಕೃಷಿಕರು ನೇರವಾಗಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು `ಮಂಡ್ಯ ಆರ್ಗೆನಿಕ್' ಅನ್ನೋ ಮಳಿಗೆಯೊಂದನ್ನು ತೆರೆದರು. 8 ತಿಂಗಳುಗಳಲ್ಲಿ ಅವರ ಈ ಪ್ರಯತ್ನ ಸಫಲವಾಯ್ತು.

``ನಾವು ಹೊಸ ಹೊಸ ಪರಿಕಲ್ಪನೆಗಳನ್ನು ಹುಟ್ಟು ಹಾಕಿದ್ವಿ. ಬೆಂಗಳೂರಿನಲ್ಲಿ ಸಾವಯವ ಅಂಗಡಿಗಳ ಸರಣಿಯನ್ನೇ ಆರಂಭಿಸಿದೆವು. ಜೊತೆಗೆ ಇ-ಕಾಮರ್ಸ್ ವೆಬ್‍ಸೈಟ್ ಕೂಡ ಲಾಂಚ್ ಮಾಡಿದ್ವಿ. ಉತ್ಪನ್ನಗಳನ್ನು ಮಾರಾಟ ಮಾಡಲು ರೆಸ್ಟೋರೆಂಟ್‍ಗಳ ಜೊತೆಗೆ ಟೈಅಪ್ ಕೂಡ ಮಾಡಿಕೊಳ್ಳಲಾಯ್ತು. ಆದ್ರೆ ಗ್ರಾಹಕರ ಜೊತೆ ನೇರವಾಗಿ ಸಂಪರ್ಕ ಕಲ್ಪಿಸಲು ಯಾರೂ ಅವಕಾಶ ಕೊಡುತ್ತಿರಲಿಲ್ಲ. ಆದ್ರೆ ನಾನು ಅದಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದೇನೆ. ರೈತರು ಪಟ್ಟ ಶ್ರಮವನ್ನು ಗ್ರಾಹಕರು ಅರ್ಥಮಾಡಿಕೊಳ್ಳಬೇಕು, ಗ್ರಾಹಕರ ಅಗತ್ಯಗಳು ರೈತರಿಗೆ ಮನವರಿಕೆಯಾಗಬೇಕು'' 
           -ಮಧು, ಆರ್ಗನಿಕ್​ ಮಂಡ್ಯ ಸಂಸ್ಥಾಪಕರು

ಬೆಂಗಳೂರು ಮತ್ತು ಮೈಸೂರನ್ನು ಸಂಪರ್ಕಿಸುವ ಮಂಡ್ಯ ಹೆದ್ದಾರಿಯನ್ನು ಹತೋಟಿಗೆ ತೆಗೆದುಕೊಳ್ಳಲು ಮಧು ನಿರ್ಧರಿಸಿದ್ರು. ಪ್ರಯಾಣಿಕರು ಉತ್ಪನ್ನಗಳನ್ನು ಕೊಂಡುಕೊಳ್ಳಲು ಇದೇ ಜಾಗದಲ್ಲಿ ಒಮ್ಮೆ ನಿಲ್ತಾರೆ ಅನ್ನೋದು ಅವರಿಗೆ ಮನವರಿಕೆಯಾಗಿತ್ತು. ನಂತರ ಈ ಮಳಿಗೆಯ ಪಕ್ಕದಲ್ಲೇ ಅವರು ಸಾವಯವ ರೆಸ್ಟೋರೆಂಟ್ ಒಂದನ್ನು ಕೂಡ ಆರಂಭಿಸಿದ್ರು. ``ಪ್ರಯಾಣಿಕರು ತಿಂಡಿ-ತೀರ್ಥ ಸೇವನೆಗೆ ರೆಸ್ಟೋರೆಂಟ್‍ಗೆ ಬಂದ್ರೆ, ಪಕ್ಕದಲ್ಲೇ ಇರುವ ಸಾವಯವ ಮಳಿಗೆಯಲ್ಲಿ ವಾರಕ್ಕೆ ಬೇಕಾಗುವ ದಿನಸಿ ಪದಾರ್ಥಗಳನ್ನೆಲ್ಲ ಖರೀದಿಸುತ್ತಾರೆ ಅನ್ನೋದು ನನ್ನ ಲೆಕ್ಕಾಚಾರ. ಆದ್ರೆ ತಿಂಗಳಾಗುವಷ್ಟರಲ್ಲಿ ಟ್ರೆಂಡ್ ಬದಲಾಯ್ತು, ಜನರು ಮೊದಲು ನಮ್ಮ ಅಂಗಡಿಗೆ ಬರಲಾರಂಭಿಸಿದ್ರು'' ಎನ್ನುತ್ತಾರೆ ಮಧು.

image


ಉತ್ತಮ ಅಭ್ಯಾಸಗಳ ಸಂಘಟನೆ...

ಒಂದೆಡೆ ದುಬಾರಿ ಅನ್ನೋ ಕಾರಣಕ್ಕೆ ಸಾವಯವ ಉತ್ಪನ್ನಗಳನ್ನು ಖರೀದಿಸಲು ಜನರು ಹಿಂದೇಟು ಹಾಕ್ತಾರೆ. ಇನ್ನೊಂದೆಡೆ ಅತಿಯಾದ ರಾಸಾಯನಿಕ ಪ್ರಭಾವಕ್ಕೊಳಗಾದ 24 ವರ್ಷದ ರೈತ ಕ್ಯಾನ್ಸರ್‍ನಿಂದ ಬಳಲಿ ಸಾವನ್ನಪ್ಪಿದ್ದಾನೆ. ಹಾಗಾಗಿ ಸಾವಯವ ಉತ್ಪನ್ನಗಳ ಪ್ರಯೋಜನಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಅತ್ಯಗತ್ಯ. ಸಾಮಾನ್ಯ ವೇದಿಕೆಯೊಂದನ್ನು ಸೃಷ್ಟಿಸದ ಹೊರತು ಅದು ಸಾಧ್ಯವಿಲ್ಲ. `ಆರ್ಗೆನಿಕ್ ಮಂಡ್ಯ' ಪರಿಕಲ್ಪನೆಯ ನಿಜವಾದ ಸೌಂದರ್ಯ ರೈತರು ಮತ್ತು ಗ್ರಾಹಕರ ಮಧ್ಯೆ ಸಂಪರ್ಕ ಕಲ್ಪಿಸುವುದರಲ್ಲಿದೆ. ಕಂಪನಿಯ ಸಾವಯವ ಪ್ರವಾಸೋದ್ಯಮ ಜನ್ಮ ತಾಳಲು ಈ ಕೆಳಗಿನ ಅಂಶಗಳು ಪ್ರೇರಣೆಯಾಗಿವೆ.

image


1. ಸಿಹಿ ಕೊಡುಗೆ ಕ್ಯಾಂಪೇನ್: ಯಾರಿಂದಲೂ ಹಣ ಪಡೆಯುವುದು ಈ ಕ್ಯಾಂಪೇನ್ ಉದ್ದೇಶವಲ್ಲ. ಸಕಾಲಕ್ಕೆ ಕಾರ್ಮಿಕರು ಸಿಗದೇ ರೈತರಿಗೆ ಶೇ.20ರಷ್ಟು ಇಳುವರಿ ಕೊರತೆ ಉಂಟಾಗುತ್ತದೆ. ಈ ವಿನೂತನ ಕೃಷಿ ಪದ್ಧತಿಯನ್ನು ಇಷ್ಟಪಡುವವರು ವೀಕೆಂಡ್‍ಗಳಲ್ಲಿ ಆರ್ಗೆನಿಕ್ ಮಂಡ್ಯದ ಹೊಲಗಳಲ್ಲಿ ಕೃಷಿ ಮಾಡಬಹುದು. ಈ ಬಗ್ಗೆ ಉದಾಹರಣೆ ಸಮೇತ ಮಧು ವಿವರಿಸಿದ್ದಾರೆ. ``ರೈತನೊಬ್ಬನಿಗೆ ಪ್ರತಿ ದಿನ ಕಾರ್ಮಿಕರಿಗಾಗಿ 3000 ರೂಪಾಯಿ ವೆಚ್ಚ ಮಾಡುವ ಸಾಮಥ್ರ್ಯವಿರಲಿಲ್ಲ. ಆದ್ರೆ ತಮ್ಮ ಜಮೀನಿನಲ್ಲಿ ಕಸಿ ಮಾಡಲು ಆತ ಬಯಸಿದ್ದ. ಈ ವಿನಂತಿಯನ್ನು ನಾವು ನಮ್ಮ ಫೇಸ್‍ಬುಕ್ ಪೇಜ್‍ನಲ್ಲಿ ಹಾಕಿದೆವು. 24 ಸ್ವಯಂಸೇವಕರು ಆ ಕೆಲಸವನ್ನು ಕೇವಲ ಅರ್ಧದಿನದಲ್ಲಿ ಮಾಡಿ ಮುಗಿಸಿದ್ರು''. ಕಳೆದ ಕೆಲ ದಿನಗಳಲ್ಲಿ ಕಾಲೇಜು ವಿದ್ಯಾರ್ಥಿಗಳು, ಐಟಿ ಉದ್ಯೋಗಿಗಳು, ನಿವೃತ್ತ ದಂಪತಿಗಳು ಸೇರಿದಂತೆ ಬೆಂಗಳೂರಿನಲ್ಲಿ 1000ಕ್ಕೂ ಹೆಚ್ಚು ಸ್ವಯಂಸೇವಕರು `ಸ್ವೀಟ್ ಡೊನೇಶನ್ ಕ್ಯಾಂಪೇನ್' ಕಡೆಗೆ ಆಕರ್ಷಿತರಾಗಿದ್ದಾರೆ.

2. ಕೃಷಿ ಪಾಲು: ಇದು ಇನ್ನೊಂದು ವಿಶಿಷ್ಟ ಉಪಕ್ರಮ. ಜನರು ತಮ್ಮ ಅರ್ಧ ಅಥವಾ 2 ಎಕರೆ ಹೊಲವನ್ನು ಮೂರು ತಿಂಗಳ ಮಟ್ಟಿಗೆ 35,000 ರೂಪಾಯಿಗೆ ಬಾಡಿಗೆ ಕೊಡಬಹುದು. ತಮ್ಮ ಆಹಾರವನ್ನು ತಾವೇ ಬೆಳೆಯಬಹುದು. ಈ ಪ್ಯಾಕೇಜ್‍ನಲ್ಲಿ 3 ತಿಂಗಳ ಅವಧಿಯಲ್ಲಿ ಸುಮಾರು 8-9 ರಾತ್ರಿ ಕುಟುಂಬಗಳು ಅಲ್ಲಿ ನೆಲೆಸಬಹುದು, ಕೃಷಿಯನ್ನು ಕಲಿಯಬಹುದು. ಅವರ ಗೈರು ಹಾಜರಿಯಲ್ಲಿ ಆರ್ಗೆನಿಕ್ ಮಂಡ್ಯದ ರೈತ ಜಮೀನಿನ ಉಸ್ತುವಾರಿ ನೋಡಿಕೊಳ್ಳುತ್ತಾನೆ. ಇಳುವರಿ ಬಂದ ಮೇಲೆ ಆ ಕುಟುಂಬದವರು ಅದನ್ನು ಬಳಸಿಕೊಳ್ಳಬಹುದು ಅಥವಾ ಆರ್ಗೆನಿಕ್ ಮಂಡ್ಯ ಮಳಿಗೆಗೆ ಮಾರಾಟ ಮಾಡಬಹದು. ಇದರಿಂದ ರೈತರಿಗೆ ನಿರಂತರ ಆದಾಯ ದೊರೆಯುತ್ತದೆ ಹಾಗೂ ನಗರ ಪ್ರದೇಶದ ಜನರು ಕೂಡ ಸಾವಯವ ಕೃಷಿ ಬಗ್ಗೆ ತಿಳಿದುಕೊಳ್ಳಲು ಅವಕಾಶ ಸಿಗುತ್ತದೆ.

3. ಟೀಮ್ @ ಫಾರ್ಮ್: ತನ್ನ ಉದ್ಯೋಗಿಗಳಿಗೆ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಕಂಪನಿಗಳಿಗೆ ಈ ಯೋಜನೆ ಅನುವು ಮಾಡಿಕೊಡುತ್ತದೆ. ಕಬಡ್ಡಿ, ಗಿಲ್ಲಿ ದಾಂಡು, ಲಗೋರಿಯಂತಹ ಗ್ರಾಮೀಣ ಕ್ರೀಡೆಗಳನ್ನು ಆಡಬಹುದು. ಕಬ್ಬಿನ ಗದ್ದೆಗೆ ತೆರಳಿ ಬೆಲ್ಲ ಉತ್ಪಾದನೆಯ ಸಂಪೂರ್ಣ ಪ್ರಕ್ರಿಯೆಯನ್ನು ತಿಳಿದುಕೊಳ್ಳಬಹುದು. ಇದಕ್ಕೆ ತಗುಲುವ ವೆಚ್ಚ ದಿನಕ್ಕೆ 1300 ರೂಪಾಯಿ.

image


ಅನುಕೂಲತೆಗಳನ್ನು ಪಡೆದುಕೊಳ್ಳುವುದು...

ಕಳೆದ 6 ತಿಂಗಳಿನಿಂದ `ಆರ್ಗೆನಿಕ್ ಮಂಡ್ಯ' ಕಾರ್ಯಾಚರಣೆ ನಡೆಸುತ್ತಿದೆ, ಯಶಸ್ಸಿನ ದಾರಿಯಲ್ಲಿ ಮುನ್ನಡೆಯುತ್ತಿದೆ. ಸುಮಾರು 200 ಎಕರೆ ಜಮೀನು ಹೊಂದಿರುವ 500ಕ್ಕೂ ಹೆಚ್ಚು ರೈತರು ಆರ್ಗೆನಿಕ್ ಮಂಡ್ಯ ಜೊತೆಗೆ ನಿಕಟ ಸಂಪರ್ಕ ಹೊಂದಿದ್ದಾರೆ. ಅಕ್ಕಿ, ಧಾನ್ಯ, ಕಾಳುಗಳು, ಖಾದ್ಯ ತೈಲಗಳು, ವೈಯಕ್ತಿಕ ಆರೋಗ್ಯ ಉತ್ಪನ್ನಗಳು, ಪಾನೀಯಗಳು, ಮಸಾಲಾ, ಮೆಣಸು ಹೀಗೆ 70 ಬಗೆಯ ಉತ್ಪನ್ನಗಳನ್ನು ರೈತರು ಬೆಳೆದು ಆರ್ಗೆನಿಕ್ ಮಂಡ್ಯಕ್ಕೆ ಮಾರಾಟ ಮಾಡುತ್ತಿದ್ದಾರೆ. ಇನ್ನು ಆದಾಯದ ವಿಚಾರಕ್ಕೆ ಬಂದ್ರೆ ಕೇವಲ 4 ತಿಂಗಳುಗಳಲ್ಲಿ ಆರ್ಗೆನಿಕ್ ಮಂಡ್ಯ ಒಂದು ಕೋಟಿ ರೂಪಾಯಿ ವಹಿವಾಟು ನಡೆಸಿದೆ. 999, 1499, 1999 ರೂಪಾಯಿಯ ಮಂತ್ಲಿ ಬಾಸ್ಕೆಟ್‍ಗಳನ್ನು ಗ್ರಾಹಕರು ಖರೀದಿಸುತ್ತಿದ್ದಾರೆ. ಆರೋಗ್ಯಕರ ಉತ್ಪನ್ನಗಳನ್ನು ಬಯಸದವರು ಆನ್‍ಲೈನ್ ಮೊರೆ ಹೋಗ್ತಾರೆ ಅನ್ನೋದು ಮಧು ಅವರ ಬೇಸರದ ನುಡಿ.

``ನಗರಕ್ಕೆ ವಲಸೆ ಹೋದವರು ಮರಳಿ ಹಳ್ಳಿಗೆ ಬಂದು ಕೃಷಿಯಲ್ಲಿ ತೊಡಗಿಕೊಂಡ್ರೆ ಅದೇ ನನ್ನ ನಿಜವಾದ ಯಶಸ್ಸು. ಇದುವರೆಗೆ 57 ಮಂದಿ ಮರಳಿ ಕೃಷಿ ಆರಂಭಿಸಿದ್ದಾರೆ. ಇದು ಗ್ರಾಮೀಣ ಸಾವಯವ ಕ್ರಾಂತಿಯ ಆರಂಭ'' ಅಂತಾ ಮಧು ಖುಷಿಯಿಂದ ಹೇಳಿಕೊಳ್ತಾರೆ.

ಸಮರ್ಥನೀಯ ಭವಿಷದ್ಯದ ಹಾದಿ...

ಯಾವುದೇ ಉದ್ಯಮದ ಯಶಸ್ಸಿಗೆ ಸಂರಕ್ಷಣೆ ಅತ್ಯಂತ ಪ್ರಮುಖ ಅಂಶ ಅನ್ನೋದನ್ನು ಮಧು ಅರ್ಥಮಾಡಿಕೊಂಡಿದ್ದಾರೆ. ರೈತರು ಮತ್ತು ಗ್ರಾಹಕರು ಇಬ್ಬರಿಗೂ ಅದರಿಂದ ನೆರವು ಸಿಗಬೇಕು ಅನ್ನೋದು ಅವರ ಉದ್ದೇಶ. ಇನ್ನೊಂದು ವರ್ಷದಲ್ಲಿ 10,000 ಕುಟುಂಬಗಳನ್ನು ಕೃಷಿಗೆ ಬಳಸಿಕೊಂಡು 30 ಕೋಟಿ ಆದಾಯ ಸಂಗ್ರಹಿಸುವ ಗುರಿ ಹಾಕಿಕೊಂಡಿದ್ದಾರೆ. ``ಕುಟುಂಬಗಳಿಗೆ ಸದಸ್ಯತ್ವ ನೋಂದಣಿ ಮಾಡಿಡುವ ಹೊಸ ಐಡಿಯಾ ಕೂಡ ಇದೆ, ಇದಕ್ಕೆ ವರ್ಷಕ್ಕೆ 1000 ರೂಪಾಯಿ ಖರ್ಚಾಗಲಿದೆ. ಇದರಲ್ಲಿ ಎರಡು ರೀತಿಯ ಪ್ರಯೋಜನಗಳಿವೆ - ನಮ್ಮಲ್ಲಿ ದೊರೆಯುವ ಎಲ್ಲಾ ಉತ್ಪನ್ನಗಳ ಮೇಲೆ ವರ್ಷಪೂರ್ತಿ ಅವರಿಗೆ ರಿಯಾಯಿತಿ ದೊರೆಯುತ್ತದೆ ಜೊತೆಗೆ ಆರೋಗ್ಯಕರವಾದುದನ್ನೇ ತಿನ್ನುವ ಹವ್ಯಾಸವನ್ನು ಪರಿಚಯಿಸಲು ಕೂಡ ಇದು ನೆರವಾಗಲಿದೆ'' ಎನ್ನುತ್ತಾರೆ ಮಧು. 2020ರ ವೇಳೆಗೆ ಮಂಡ್ಯ ಜಿಲ್ಲೆಯನ್ನು ಸಂಪೂರ್ಣ ಸಾವಯವಗೊಳಿಸುವುದು ಮಧು ಅವರ ಮುಂದಿರುವ ಬೃಹತ್ ಗುರಿ. ಅದನ್ನು ಯಶಸ್ವಿಯಾಗಿ ಅವರು ತಲುಪಲಿ ಅನ್ನೋದೇ ನಮ್ಮ ಹಾರೈಕೆ. 

ಲೇಖಕರು: ಶ್ವೇತಾ ವಿಟ್ಟ

ಅನುವಾದಕರು: ಭಾರತಿ ಭಟ್ 

ಇದನ್ನು ಓದಿ:

1. ಫೇಸ್ ಬುಕ್ ಮೆಸೆಂಜರ್ ಗೆ ದಿಟ್ಟ ಉತ್ತರ ಕೊಟ್ಟ ಭಾರತದ ಐಐಎಂ-ಬಿ ಗ್ರ್ಯಾಜುಯೆಟ್ಸ್ ...

2. ಹೊಸ ಜಮಾನದ ಥ್ರಿಲಿಂಗ್ ಗೇಮ್ಸ್ ಸ್ಮ್ಯಾಶ್ ನಲ್ಲಿ

3. ಆನ್‍ಲೈನ್‍ನಲ್ಲಿ ಚಪಾತಿ ಮಾರಲು ಹೊರಟವಳೀಗ ಕ್ಲೌಡ್ ಟೆಕ್ ಕಂಪನಿಯ ಒಡತಿ... !

Add to
Shares
19
Comments
Share This
Add to
Shares
19
Comments
Share
Report an issue
Authors

Related Tags