ಓದುವುದನ್ನು ಉತ್ತೇಜಿಸಲು ಪ್ರತಿದಿನ 4 ಕಿ.ಮೀ. ನಡೆಯುವ ಕೇರಳದ 73 ವರ್ಷದ ಗ್ರಂಥಪಾಲಕಿ

ಕಳೆದ 14 ವರ್ಷಗಳಲ್ಲಿ ಉಮಾದೇವಿ ಅಂತರ್ಜನಂ ಅವರು ಕೇರಳದ ಬುಧನೂರು ಗ್ರಾಮದಲ್ಲಿ ಕನಿಷ್ಠ 220 ಮನೆಗಳಿಗೆ ಭೇಟಿ ನೀಡಿ ಪುಸ್ತಕಗಳನ್ನು ವಿತರಿಸಿ ಓದುವುದನ್ನು ಉತ್ತೇಜಿಸಿದ್ದಾರೆ.

ಓದುವುದನ್ನು ಉತ್ತೇಜಿಸಲು ಪ್ರತಿದಿನ 4 ಕಿ.ಮೀ. ನಡೆಯುವ ಕೇರಳದ 73 ವರ್ಷದ ಗ್ರಂಥಪಾಲಕಿ

Thursday March 05, 2020,

2 min Read

ನೀವು ಪುಸ್ತಕವನ್ನು ಹಿಡಿದು ಅದರ ಪುಟಗಳ ನಡುವೆ ಸುವಾಸನೆಯ ಪರಿಮಳವನ್ನು ಅನುಭವಿಸುತ್ತ, ಅದನ್ನು ಓದುತ್ತ ಕಳೆದುಹೋದದ್ದು ಯಾವಾಗ? ಉತ್ತರಿಸುವುದು ಸ್ವಲ್ಪ ಕಷ್ಟವಲ್ಲವೆ. ಸಾಮಾಜಿಕ ಮಾಧ್ಯಮಗಳ ಇಂದಿನ ಜಗತ್ತಿನಲ್ಲಿ ಹೊರಾಂಗಣ ಆಟಗಳನ್ನು ಆಡುವುದು, ನೃತ್ಯ ಅಥವಾ ಸಂಗೀತ ತರಗತಿಗಳಲ್ಲಿ ಭಾಗವಹಿಸುವುದು ಅಥವಾ ಪುಸ್ತಕಗಳನ್ನು ಓದುತ್ತ, ಅದರೊಳಗೆ ನಾವೇ ಕಳೆದು ಹೋಗುವುದು ಮುಂತಾದ ಬಾಲ್ಯದಲ್ಲಿ ಮಾಡುತ್ತಿದ್ದ ಅಭ್ಯಾಸಗಳನ್ನು ಇಂದು ನಾವು ಮರೆತೇ ಬಿಟ್ಟಿದ್ದೇವೆ.


ಪುಸ್ತಕ ಓದುವ ಹವ್ಯಾಸ ಕುಸಿಯುತ್ತಿದೆ, ಅದರಲ್ಲೂ ವಿಶೇಷವಾಗಿ ಯುವಕರಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಉಪರಾಷ್ಟ್ರಪಿತ ಎಂ.ವೆಂಕಯ್ಯ ನಾಯ್ಡು ಇತ್ತೀಚೆಗೆ ಅದರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಆದರೆ ಕೇರಳದ ಮಹಿಳೆಯೊಬ್ಬರು ಅದನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದಾರೆ.


ಉಮಾದೇವಿ ಅಂತರ್ಜನಂ (ಚಿತ್ರಕೃಪೆ: ದಿ ಹಿಂದು)


ಓದುವುದನ್ನು ಉತ್ತೇಜಿಸಲು ಕೇರಳದ 73 ವರ್ಷದ ಉಮಾದೇವಿ ಅಂತರ್ಜನಂ ರಸ್ತೆಗಿಳಿದು ಪ್ರತಿದಿನ ನಾಲ್ಕೈದು ಕಿ.ಮೀ ನಡೆದು ಹೋಗುತ್ತಾರೆ. ಅವರು ಪುಸ್ತಕ ತುಂಬಿದ ಚೀಲವನ್ನು ಹೊತ್ತುಕೊಂಡು ಹೋಗುವುದನ್ನು ಕಾಣಬಹುದು. ಇವರು ಕಳೆದ 14 ವರ್ಷಗಳಲ್ಲಿ ಕೇರಳದ ಚೆಂಗಣ್ಣೂರು ಬಳಿಯ ಬುಧನೂರು ಗ್ರಾಮದಲ್ಲಿ ಕನಿಷ್ಠ 220 ಮನೆಗಳಿಗೆ ಭೇಟಿ ನೀಡಿದ್ದಾರೆ.


ಮ್ಯಾಟರ್ಸ್ ಇಂಡಿಯಾ ದೊಂದಿಗೆ ಮಾತನಾಡಿದ ಉಮಾದೇವಿ,


“ನಾನು ಪುಸ್ತಕಗಳನ್ನು ಸಂಗ್ರಹಿಸಲು ಮೂರು ಗಂಟೆಯ ಹೊತ್ತಿಗೆ ಗ್ರಂಥಾಲಯಕ್ಕೆ ಹೋಗುತ್ತೇನೆ. ಹೆಚ್ಚಾಗಿ ಮಕ್ಕಳು ಮತ್ತು ಮಹಿಳೆಯರು ನನ್ನಿಂದ ಪುಸ್ತಕಗಳನ್ನು ಓದಲು ತೆಗೆದುಕೊಳ್ಳುತ್ತಾರೆ. ವಿದ್ಯಾರ್ಥಿಗಳ ವಿಷಯದಲ್ಲಿ ಅವರಿಗೆ ಯಾವ ಪುಸ್ತಕ ಬೇಕು ಎಂಬುದನ್ನು ಅವರು ಮೊದಲೇ ನನಗೆ ತಿಳಿಸುತ್ತಾರೆ. ನಾನು ಅದನ್ನು ಗ್ರಂಥಾಲಯದಿಂದ ಸಂಗ್ರಹಿಸಿ ಅವರಿಗೆ ತಲುಪಿಸುತ್ತೇನೆ,” ಎಂದರು.


ಹಳ್ಳಿಯಲ್ಲಿರುವ ಗ್ರಂಥಾಲಯವು ಎಲ್ಲಾ ವಿಷಯಗಳ ಪುಸ್ತಕಗಳಿಂದ ತುಂಬಿರುತ್ತದೆ. ಕಾದಂಬರಿ, ಕಾಲ್ಪನಿಕವಲ್ಲದ ಮತ್ತು ಪತ್ತೇದಾರಿ ಕಾದಂಬರಿಗಳು ಹಾಗೂ ಹೆಚ್ಚಾಗಿ ಹಿರಿಯರು ಓದುವ ಪೌರಾಣಿಕ ಪುಸ್ತಕಗಳು ಇವೆಲ್ಲವೂ ಇರುತ್ತವೆ.


ಗ್ರಂಥಾಲಯದ ಸದಸ್ಯರು ಕೊಟ್ಟ ಪುಸ್ತಕಗಳನ್ನು ಓದುತ್ತಿದ್ದಾರೆ ಎಂಬಿದನ್ನು ಉಮಾದೇವಿ ಖಚಿತಪಡಿಸಿಕೊಳ್ಳುತ್ತಾರೆ. ಒಂದೆರಡು ವಾರಗಳ ನಂತರ ಅವುಗಳನ್ನು ಸಂಗ್ರಹಿಸಲು ಹಿಂತಿರುಗಿದಾಗ, ಪುಸ್ತಕಗಳಿಂದ ಕಲಿತದ್ದನ್ನು ಹೇಳಬೇಕೆಂದು ಮಕ್ಕಳನ್ನು ಅವರು ಕೇಳುತ್ತಾರೆ. ಜನರು ಒಂದು ದಶಕದಿಂದ ಉಮಾದೇವಿಯನ್ನು ತಿಳಿದಿದ್ದರಿಂದ, ಯಾವ ಪುಸ್ತಕಗಳನ್ನು ಓದಬೇಕೆಂದು ಉಮಾದೇವಿ ಅವರಿಂದ ಸಲಹೆ ಪಡೆಯುತ್ತಾರೆ.


ಗ್ರಂಥಾಲಯದ ಅಧ್ಯಕ್ಷ ವಿಶ್ವಭರಣ್ ಪ್ಯಾನಿಕರ್ ಉಮಾದೇವಿಯವರನ್ನು ಗ್ರಂಥಾಲಯದಲ್ಲಿ ಕೆಲಸ ಮಾಡಲು ಆಹ್ವಾನಿಸಿದ ನಂತರ ಅವರು ಹಳ್ಳಿಯಲ್ಲಿ ಪುಸ್ತಕಗಳನ್ನು ವಿತರಿಸಲು ಮತ್ತು ಪುಸ್ತಕ ಓದುವ ಅಭ್ಯಾಸವನ್ನು ಬೆಳೆಸಲು ಪ್ರಾರಂಭಿಸಿದರು.


ಕಾಂಗ್ರೆಸ್ ಸಂಸದ ಶಶಿ ತರೂರ್ ಶುಭಾಶಯ ಕೋರುತ್ತಿರುವುದು (ಚಿತ್ರಕೃಪೆ: ಟ್ವಿಟರ್)


“ನಂಬೂದಿರಿ ಸಮುದಾಯಕ್ಕೆ ಸೇರಿದ ನನಗೆ ಮೊದಲೇ ಹೊರಗೆ ಹೋಗಲು ಅವಕಾಶವಿರಲಿಲ್ಲ. ನಾನು ಬಿಎ ವಿದ್ಯಾರ್ಥಿಯಾಗಿದ್ದಾಗ ಮದುವೆಯಾಗಿದ್ದೆ. ನಾನು ಬಂದ ಕುಟುಂಬವು ಸಂಪ್ರದಾಯಗಳು ಮತ್ತು ಪದ್ಧತಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿತ್ತು. ನಾನು ಈ ಹಿಂದೆ 20 ವರ್ಷಗಳಿಗೂ ಹೆಚ್ಚು ಕಾಲ ಟುಷನ್‌ ಶಿಕ್ಷಕಿಯಾಗಿ ಕೆಲಸ ಮಾಡಿದ್ದೇನೆ. ನಾನು ಟುಷನ್‌ಗಳಿಗೆ ಹೋಗಿ ವಿದ್ಯಾರ್ಥಿಗಳಿಗೆ ಕಲಿಸುತ್ತಿದ್ದೆ. ಆದರೆ 18 ವರ್ಷಗಳ ಹಿಂದೆ ನನ್ನ ಗಂಡನ ಮರಣದ ನಂತರ ನಾನು ನನ್ನ ಆಶಯಗಳನ್ನು ಪೂರೈಸಲು ಹೆಣಗಾಡಿದೆ,” ಎಂದರು, ವರದಿ ಇಂಗ್ಲೀಷ್ ಮಾತೃಭೂಮಿ.

ಉಮಾದೇವಿಯವರ ಉಪಕ್ರಮ ಮತ್ತು ಓದುವ ಬಗೆಗಿನ ಪ್ರೀತಿಯನ್ನು ಗುರುತಿಸಿ ಕಾಂಗ್ರೆಸ್ ಸಂಸದ ಶಶಿ ತರೂರ್ ಮತ್ತು ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಕೂಡ ಗೌರವಿಸಿದ್ದಾರೆ.