ಆವೃತ್ತಿಗಳು
Kannada

ಭಗತ್ ಸಿಂಗ್ ಹೆಸರಲ್ಲಿ ಸಂಘ ಪರಿವಾರದ ರಾಜಕೀಯ..?

ಆಶುತೋಶ್​ 

31st Mar 2016
Add to
Shares
0
Comments
Share This
Add to
Shares
0
Comments
Share

ಶಹೀದ್ ಭಗತ್ ಸಿಂಗ್ ಇದ್ದಕ್ಕಿದ್ದಂತೆ ಮತ್ತೆ ಸುದ್ದಿಯಲ್ಲಿದ್ದಾರೆ. ಎಲ್ಲ ರಾಜಕೀಯ ಪಕ್ಷಗಳು ಅವರ ಬಗ್ಗೆ ಮಾತನಾಡುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಅವರಿಂದ ಹಿಡಿದು ರಾಹುಲ್ ಗಾಂಧಿ, ಅರವಿಂದ್ ಕೇಜ್ರಿವಾಲ್​ವರೆಗೆ ಎಲ್ಲರೂ ಅವರನ್ನು ಹಾಡಿ ಹೊಗಳುತ್ತಿದ್ದಾರೆ. ಭಗತ್ ಸಿಂಗ್ ಅವರಿಗೆ ಭಾರತ ರತ್ನ ಸಲ್ಲಬೇಕು ಎಂಬುದನ್ನು ಅಕಾಲಿ ದಳ ಅರ್ಥಮಾಡಿಕೊಂಡಿದೆ. ಇದಕ್ಕಾಗಿ ರಾಷ್ಟ್ರಪತಿಗಳಿಗೆ ಅರ್ಜಿಯೊಂದನ್ನು ಬರೆಯಲು ಅವರು ಮುಂದಾಗಿದೆ. ಅಷ್ಟೇ ಅಲ್ಲ ದೆಹಲಿ ಅಸೆಂಬ್ಲಿ ಆವರಣದಲ್ಲಿ ಪೇಟ ರಹಿತ ಪ್ರತಿಮೆಯನ್ನು ಸ್ಥಾಪಿಸಿರುವ ಬಗ್ಗೆ ಕೂಡ ಅಕಾಲಿದಳ ಆಕ್ಷೇಪ ಎತ್ತಿದೆ. ಅದೇ ರೀತಿ ಅಕಾಲಿದಳದ ರಾಜಕೀಯ ಸಂಗಾತಿ ಬಿಜೆಪಿಯ ರಾಜಕೀಯ ಮಾರ್ಗದರ್ಶಿ ಆರ್​​ಎಸ್​ಎಸ್​ ಕೂಡ ಅವರ ಬಗ್ಗೆ ಉತ್ಸುಕತೆ ತೋರುತ್ತಿದೆ. ಇದ್ದಕ್ಕಿದ್ದಂತೆ ರಾಷ್ಟ್ರೀಯತೆ ಬಗ್ಗೆ ಚರ್ಚೆಯಲ್ಲಿ ತೊಡಗಿದೆ. ದೇಶಭಕ್ತಿಯನ್ನು ಪರೀಕ್ಷಿಸಲು ಭಗತ್ ಸಿಂಗ್ ಅವರೇ ಅಂತಿಮ ಮಾನದಂಡ. ಆದ್ರೆ ಶಶಿ ತರೂರ್ ಅವರಂಥವರು ಭಗತ್ ಸಿಂಗ್​ರನ್ನು ಕನ್ಹಯ್ಯ ಕುಮಾರ್​ಗೆ ಹೋಲಿಸುತ್ತಿರುವುದು ದುರಂತ. ಕೆಲ ದಿನಗಳ ಹಿಂದಷ್ಟೆ ನಾನು ಸುದ್ದಿವಾಹಿನಿಯ ಚರ್ಚೆಯೊಂದರಲ್ಲಿ ಪಾಲ್ಗೊಂಡಿದ್ದೆ, ಅಲ್ಲಿ ವಿದ್ಯಾರ್ಥಿನಿಯೊಬ್ಬಳು ಭಗತ್ ಸಿಂಗ್​ರನ್ನು ಕನ್ಹಯ್ಯ ಕುಮಾರ್​ಗೆ ಹೋಲಿಸಿದ್ದಕ್ಕೆ ಆಕ್ರೋಶ ಹೊರಹಾಕಿದ್ಲು.

image


ಭಗತ್ ಸಿಂಗ್ ಭಾರತೀಯರ ಪಾಲಿಗೆ ನಿಸ್ಸಂದೇಹವಾಗಿ ಪೂಜನೀಯ ವ್ಯಕ್ತಿ. ಸ್ವಾತಂತ್ರ್ಯ ಹೋರಾಟದಲ್ಲಿ ಅಪ್ರತಿಮ ಪಾತ್ರ ವಹಿಸಿದ್ರು. ಆದ್ರೆ ಗಾಂಧೀಜಿ ಅವರೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದರು ಅನ್ನೋದು ಸತ್ಯ. ಸ್ವಾತಂತ್ರ್ಯಕ್ಕಾಗಿ ಹಿಂಸಾತ್ಮಕ ಹೋರಾಟದ ಹಾದಿ ತುಳಿಯಬೇಕೆಂಬ ಅವರ ಅಭಿಪ್ರಾಯವನ್ನು ಗಾಂಧೀಜಿ ಒಪ್ಪಿರಲಿಲ್ಲ. ಆದ್ರೆ 1931ರಲ್ಲಿ ಸುಖದೇವ್​ ಮತ್ತು ರಾಜ್​ಗುರು ಅವರೊಂದಿಗೆ ಭಗತ್ ಸಿಂಗ್​ರನ್ನು ಗಲ್ಲಿಗೇರಿಸಿದಾಗ ಅವರ ತ್ಯಾಗ ಇಡೀ ರಾಷ್ಟ್ರವನ್ನೇ ಹುರಿದುಂಬಿಸಿತ್ತು. ಆಗಿನ್ನೂ ಅವರಿಗೆ 23ರ ಹರೆಯ, ಅನೇಕ ತಲೆಮಾರುಗಳವರೆಗೆ ಕ್ರಾಂತಿಗೆ ಸ್ಪೂರ್ತಿಯಾದವರು ಭಗತ್ ಸಿಂಗ್. ಆದ್ರೆ ಆರ್​ಎಸ್​ಎಸ್​, ಬಿಜೆಪಿ ಮತ್ತದರ ಅಂಗಪಕ್ಷಗಳು ಅವರನ್ನು ಅಳವಡಿಸಿಕೊಳ್ಳಲು ಮಾಡಿದ ಪ್ರಯತ್ನ ಸ್ಪೂರ್ತಿದಾಯಕವಾಗೇನೂ ಇಲ್ಲ. ಇದಕ್ಕೂ ಮುನ್ನ ಸುಭಾಷ್ ಚಂದ್ರ ಬೋಸ್ ಹಾಗೂ ಸರ್ದಾರ್ ವಲ್ಲಭ್ ಭಾಯ್ ಪಟೇಲ್ ಅವರ ಹೆಸರನ್ನೂ ಇದೇ ರೀತಿ ಬಳಸಿಕೊಳ್ಳಲು ಬಿಜೆಪಿ ಯತ್ನಿಸಿತ್ತು. ಅವರಿಗೆ ಆರ್​ಎಸ್​ಎಸ್​ ಜೊತೆ ಯಾವುದೇ ನಂಟು ಇರಲಿಲ್ಲ. ಆರ್​ಎಸ್​ಎಸ್​ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿರಲಿಲ್ಲ. ಅವರಿಬ್ಬರೂ ಕಾಂಗ್ರೆಸ್ ಪಕ್ಷದ ಕಟ್ಟಾಳುಗಳಾಗಿದ್ದರು. ಆರ್​ಎಸ್​ಎಸ್​ ಜೊತೆ ಸರ್ದಾರ್ ಪಟೇಲರ ಸೈದ್ಧಾಂತಿಕ ಆಕರ್ಷಣ ಬಲವಿದೆ ಎನ್ನಬಹುದು ಆದ್ರೆ ಸುಭಾಷ್ ಚಂದ್ರ ಬೋಸ್ ಅವರ ಆಲೋಚನಾ ಲಹರಿ ವಿಭಿನ್ನವಾಗಿತ್ತು. ಅವರು ಸಮಾಜವಾದಿ ಪ್ರವೃತ್ತಿ ಮತ್ತು ಕ್ರಾಂತಿಕಾರಿ ಧೋರಣೆಯನ್ನು ಹೊಂದಿದ್ದರು.

ಅದೇ ರೀತಿ ಭಗತ್ ಸಿಂಗ್ ಕೂಡ ಬಿಜೆಪಿ ಅಥವಾ ಆರ್ಎಸ್ಎಸ್ ಜೊತೆ ಯಾವುದೇ ರೀತಿಯ ಸೈದ್ಧಾಂತಿಕ ನಂಟು ಬೆಳೆಸಿಕೊಂಡಿಲ್ಲ. ಅವರು ಬದುಕಿದ್ದಿದ್ದರೆ ಮೋದಿ ಸರ್ಕಾರ ಹಾಗೂ ಆರ್​ಎಸ್​ಎಸ್​ ನಡೆಯನ್ನು ಟೀಕಿಸುತ್ತಿದ್ದರು ಎಂಬ ಬಗ್ಗೆ ಯಾವುದೇ ಅನುಮಾನ ಬೇಡ. ಜೆಎನ್​ಯು ಬಗ್ಗೆ ಆರ್​ಎಸ್​ಎಸ್​ ಹಾಗೂ ಬಿಜೆಪಿ ಧೋರಣೆ ಅವರನ್ನು ಕೆರಳಿಸುತ್ತಿತ್ತು. ಆರ್​ಎಸ್​ಎಸ್​ ಹಾಗೂ ಮೋದಿ ಸರ್ಕಾರ, ಜೆಎನ್​ಯು ರಾಷ್ಟ್ರ ವಿರೋಧಿ ಹಾಗೂ ಭಯೋತ್ಪಾದನೆಯ ಒಂದು ಭದ್ರಕೋಟೆ ಎಂಬಂತೆ ಬಿಂಬಿಸುತ್ತಿದೆ. ಆರ್​ಎಸ್​ಎಸ್​ ಕಮ್ಯೂನಿಸಂ ವಿರೋಧಿಯಾದ್ರೆ, ಜೆಎನ್​ಯು ಕಮ್ಯೂನಿಸ್ಟ್ ಸಿದ್ಧಾಂತದ ಭದ್ರಕೋಟೆ. ಹಾಗಾಗಿ ಆರ್​ಎಸ್​ಎಸ್​ ಜೆಎನ್​ಯುವನ್ನು ಟಾರ್ಗೆಟ್ ಮಾಡುತ್ತಿದೆ. ಜೆಎನ್​ಯು ಕಾರ್ಯಕರ್ತರೆಲ್ಲ ದುಷ್ಟರು ಎಂಬಂತೆ ಬಿಂಬಿಸಲು ರಾಷ್ಟ್ರ ವಿರೋಧಿ ಘೋಷಣೆ ಅವಕಾಶ ಮಾಡಿಕೊಟ್ಟಿದೆ. ಭಗತ್ ಸಿಂಗ್ ನಮ್ಮಲ್ಲೊಬ್ಬರಾಗಿದ್ದರು, ರಾಷ್ಟ್ರೀಯತೆ ಮತ್ತು ದೇಶಭಕ್ತಿಯ ಮೈಲುಗಲ್ಲು ಎಂದು ಹೇಳುತ್ತಿರುವ ಆರ್​ಎಸ್​ಎಸ್​ ಮಾತಿನ ಹಿಂದೆ ಬೇರೆಯೇ ಉದ್ದೇಶವಿದ್ದಂತಿದೆ.

ಭಗತ್ ಸಿಂಗ್ ಸಮತಾವಾದಿಯಾಗಿದ್ದರು. ಎಳೆಯ ವಯಸ್ಸಿನಲ್ಲೇ ಕಾರ್ಲ್ ಮಾರ್ಕ್ಸ್​ ಹಾಗೂ ಲೆನಿನ್ ಸಿದ್ಧಾಂತವನ್ನು ಅಳವಡಿಸಿಕೊಂಡಿದ್ರು. ಬೋಲ್ಷೆವಿಕ್ ಕ್ರಾಂತಿ ಅವರಿಗೆ ಸ್ಪೂರ್ತಿಯಾದ್ರೆ, ಲೆನಿನ್ ಮಾದರಿ ವ್ಯಕ್ತಿಯಾಗಿದ್ರು. ಸೋವಿಯತ್ ಯೂನಿಯನ್​ ಕಮ್ಯೂನಿಸ್ಟ್ ಕ್ರಾಂತಿಯ ಮೂಲಕ ಭಾರತದ ಸ್ವಾತಂತ್ರ ಹಾಗೂ ಸಮಸ್ಯೆಗಳಿಗೆ ಪರಿಹಾರದ ಹುಡುಕಾಟದಲ್ಲಿದ್ರು. ಕಾರ್ಮಿಕ ವರ್ಗದ ಸರ್ವಾಧಿಕಾರ ಭಾರತದ ಬಡವರನ್ನು ಸಾಮಾಜಿಕ-ಆರ್ಥಿಕ ಸರಪಣಿಯಿಂದ ಬೇರ್ಪಡಿಸಲಿದೆ ಎಂಬುದನ್ನು ಅರ್ಥಮಾಡಿಕೊಂಡಿದ್ದರು. ದಾಸ್ ಕ್ಯಾಪಿಟಲ್ ಮತ್ತು ಕಮ್ಯೂನಿಸ್ಟ್ ಪ್ರಣಾಳಿಕೆ ಬಗ್ಗೆ ಸುಖದೇವ್​ ಹಾಗೂ ರಾಜ್​ಗುರು ವಿಧಾನಸಭೆಯಲ್ಲಿ ಕರಪತ್ರ ಎಸೆದಿದ್ದಿಕ್ಕೆ ಭಗತ್ ಸಿಂಗ್​ರನ್ನು ಬಂಧಿಸಿ ಗಲ್ಲಿಗೇರಿಸಲಾಯ್ತು. ``ಮಾನವರ ಮೇಲೆ ಮಾನವರ ಶೋಷಣೆ, ರಾಷ್ಟ್ರಗಳ ಮೇಲೆ ರಾಷ್ಟ್ರಗಳ ಶೋಷಣೆ ನಿಲ್ಲುವವರೆಗೆ ಮಾನವೀಯತೆಗೆ ಆಗುತ್ತಿರುವ ಹಾನಿಯನ್ನು ತೊಡೆದುಹಾಕಲು ಸಾಧ್ಯವಿಲ್ಲ. ಅದು ನಿಜವಾದ ಸಾರ್ವಭೌಮತ್ವವನ್ನು ಅದುಮಿಡುತ್ತಿದೆ. ಬಂಡವಾಳಶಾಹಿಯ ಉಪದ್ರವಗಳು ಮತ್ತು ಸಾಮ್ರಾಜ್ಯವಾದಿ ಯುದ್ಧವನ್ನು ನಾಶ ಮಾಡಿದಾಗ ಮಾತ್ರ ಜಗತ್ತಿನಲ್ಲಿ ಮಾನವೀಯತೆಗೆ ಸ್ವಾತಂತ್ರ್ಯ ಸಿಗಲಿದೆ'' ಎಂದು ಕರಪತ್ರದಲ್ಲಿ ಬರೆಯಲಾಗಿತ್ತು. ಆಡಳಿತವಲ್ಲ, ವ್ಯವಸ್ಥೆ ಬದಲಾಗಬೇಕು ಅನ್ನೋದು ಅವರ ಅಭಿಪ್ರಾಯವಾಗಿತ್ತು. ಹಿಂದೂಗಳ ಐಕ್ಯತೆ ಬಗ್ಗೆ ಮಾತನಾಡುವ ಆರ್​ಎಸ್​ಎಸ್​ ಕೆಳವರ್ಗದ ಐಕ್ಯತೆ ಬಗ್ಗೆ ಸೊಲ್ಲೆತ್ತಿಲ್ಲ. ಜನರ ಸರ್ಕಾರವನ್ನು ಸ್ಥಾಪಿಸಲು ಕಾರ್ಮಿಕರೆಲ್ಲ ಒಂದಾಗಬೇಕೆಂಬುದು ಭಗತ್ ಸಿಂಗ್​ರ ಅಭಿಪ್ರಾಯವಾಗಿತ್ತು.

ಧರ್ಮ ಜನರನ್ನು ಒಡೆಯುತ್ತೆ ಅನ್ನೋದು ಸಮತಾವಾದದ ನಂಬಿಕೆ. ಧರ್ಮ ದ್ರವ್ಯರಾಶಿಗಳ ಅಫೀಮು ಎನ್ನುತ್ತಾರೆ ಕಾರ್ಲ್ ಮಾರ್ಕ್ಸ್​. ಆದ್ರೆ ಧರ್ಮ ಆರ್​ಎಸ್​ಎಸ್​ ಸಿದ್ಧಾಂತದ ಮೂಲಾಧಾರವಾಗಿದೆ. ಭಗತ್ ಸಿಂಗ್ ಕಮ್ಯೂನಿಸಂ ಮತ್ತು ಸಮಾಜವಾದದ ನಿಜವಾದ ಆತ್ಮ, ಅವರೊಬ್ಬ ನಾಸ್ತಿಕರೂ ಹೌದು. ಇದನ್ನವರು ಯಾರಿಂದಲೂ ಮುಚ್ಚಿಟ್ಟಿರಲಿಲ್ಲ. `` ವೈ ಐ ಆ್ಯಮ್ ಎನ್ ಏಥಿಯಿಸ್ಟ್'' ಅನ್ನೋ ಐತಿಹಾಸಿಕ ಕೃತಿಯನ್ನು ಎಲ್ಲರೂ ಓದಬೇಕು. ಅವರ ಚಿಂತನೆಗಳ ಒಳಹೊಕ್ಕು, ಭಗತ್ ಸಿಂಗ್ ಎಂಬ ವ್ಯಕ್ತಿಯನ್ನು ಅರಿಯಲು ಇದು ನೆರವಾಗುತ್ತದೆ. ದೇವರ ಅಸ್ಥಿತ್ವಕ್ಕೆ ಅವರು ಸವಾಲೊಡ್ಡಿದ್ದರು. ದೇವರಿದ್ದಾನೆ ಅಂತಾದ್ರೆ ಜಗತ್ತಿನಲ್ಲಿ ಇಷ್ಟೊಂದು ವಿಪತ್ತು, ದುರ್ದೆಸೆಗಳೇಕಿವೆ? ಬಡತನ ಏಕಿದೆ? ಅನ್ನೋದು ಅವರ ಪ್ರಶ್ನೆ. ದೇವರು ಸರ್ವಶಕ್ತ, ಸರ್ವಜ್ಞ, ಸರ್ವವ್ಯಾಪಿ ಎಂದಾದ್ರೆ ಈ ವಿಶ್ವವನ್ನು ಸೃಷ್ಟಿಸಿದ್ದು ಯಾರು? ಯಾಕೆ ಈ ಜಗತ್ತನ್ನು ಸೃಷ್ಟಿಸಲಾಯ್ತು ಅನ್ನೋ ಬಗ್ಗೆ ಯಾರಾದ್ರೂ ಹೇಳಿ. ದುಃಖ ಹಾಗೂ ವಿಪತ್ತುಗಳಿಂದ ಕೂಡಿದ ಜಗತ್ತು ಇದು, ಯಾರೊಬ್ಬರೂ ಇಲ್ಲಿ ಸಂತೋಷವಾಗಿಲ್ಲ ಎಂದು ಭಗತ್ ಸಿಂಗ್ ಬರೆದುಕೊಂಡಿದ್ದಾರೆ.

image


ಆರ್​ಎಸ್​ಎಸ್​ ವರ್ಣಪಟಲದ ಇನ್ನೊಂದು ತುದಿಯಲ್ಲಿದೆ. ದೇವರು ಹಾಗೂ ಧರ್ಮದ ಬಗ್ಗೆ ಭಗತ್ ಸಿಂಗ್ ಅವರ ಅಭಿಪ್ರಾಯಗಳನ್ನು ಆರ್​ಎಸ್​ಎಸ್​ ಒಪ್ಪಿಕೊಳ್ಳುತ್ತಾ ಅನ್ನೋದು ನನ್ನ ಪ್ರಶ್ನೆ. ಭಗತ್ ಸಿಂಗ್ ಅವರ ಕಮ್ಯೂನಿಸ್ಟ್ ಸಿದ್ಧಾಂತವನ್ನು ಆರ್​ಎಸ್​ಎಸ್​ ಒಪ್ಪಿಕೊಳ್ಳುತ್ತದೆಯೇ? ಹೌದು ಎಂದಾದ್ರೆ ಎರಡನೇ ಮುಖ್ಯಸ್ಥರೇಕೆ? ಭಾರತಕ್ಕೆ ಮೂವರು ಶತ್ರುಗಳಿದ್ದಾರೆ, ಮುಸಲ್ಮಾನರು, ಕ್ರಿಶ್ಚಿಯನ್ನರು ಹಾಗೂ ಕಮ್ಯೂನಿಸ್ಟ್​​ಗಳು ಅಂತಾ ತಮ್ಮ `ಬಂಚ್ ಆಫ್ ಥಾಟ್ಸ್' ಪುಸ್ತಕದಲ್ಲಿ ಗುರೂಜಿ ಗೋಲ್ವಾಲ್ಕರ್ ಬರೆದಿದ್ದಾರೆ. ಈ ಸಾಲುಗಳೇ ವ್ಯತಿರಿಕ್ತವಾಗಿವೆ. ಗೋಲ್ವಾಲ್ಕರ್ ಅವರ ಲಾಜಿಕ್ ಪ್ರಕಾರ ಆರ್​ಎಸ್​ಎಸ್​ ಹಾಗೂ ಭಗತ್ ಸಿಂಗ್​ರ ಸಿದ್ಧಾಂತಗಳು ಜೊತೆಯಾಗಿ ಸಾಗಲು ಸಾಧ್ಯವಿಲ್ಲ. ಭಗತ್ ಸಿಂಗ್, ಜವಾಹರ ಲಾಲ್ ನೆಹರೂ ಅವರನ್ನು ಗೌರವಿಸುತ್ತಿದ್ದರು, ಆದ್ರೆ ಮೋದಿ ಸರ್ಕಾರ ಹಾಗೂ ಆರ್​ಎಸ್​ಎಸ್​ ಅವರನ್ನು ಜರಿಯುತ್ತಲೇ ಬಂದಿವೆ. ಸುಭಾಷ್ ಚಂದ್ರ ಬೋಸ್ ಭಾವನಾತ್ಮಕವಾಗಿದ್ರೆ, ನೆಹರೂ ವಿಚಾರಶಕ್ತಿಯುಳ್ಳವರಾಗಿದ್ದರು ಎನ್ನುತ್ತಿದ್ದರು ಭಗತ್ ಸಿಂಗ್. ನೆಹರೂ ಅವರನ್ನು ಅನುಸರಿಸುವಂತೆ ಪಂಜಾಬ್ ಯುವಕರಿಗೆ ಅವರು ಕರೆಕೊಟ್ಟಿದ್ದರು. ಇದು ಆರ್​ಎಸ್​ಎಸ್​ಗೆ ಸಹ್ಯವೇ? ನೆಹರೂ ಅವರ ಜನಪ್ರಿಯತೆಯನ್ನು ಅಳಿಸಿ ಹಾಕಲು ಆರ್​ಎಸ್​ಎಸ್​ ಬೋಸ್ ಹಾಗೂ ಭಗತ್ ಸಿಂಗ್​ರ ಹೆಸರು ಹೇಳುತ್ತಿದೆ. ಯಾಕಂದ್ರೆ ನೆಹರೂ ಅವರ ಸೈದ್ಧಾಂತಿಕ ಪ್ರಾಭಲ್ಯದ ಎದುರು ತಮ್ಮ ಸಿದ್ಧಾಂತ ಮಂಕಾಗಿದೆ ಎಂಬುದರ ಅರಿವು ಆರ್​ಎಸ್​ಎಸ್​ಗಿದೆ. 

ನೆಹರೂ ಅವರಿಂದಾಗಿ ಭಾರತ ಎಷ್ಟು ಪ್ರಚಲಿತದಲ್ಲಿದೆ ಎಂಬ ಸತ್ಯವನ್ನು ಮರೆಮಾಚಲು ಮೋದಿ ಸರ್ಕಾರ ಕಸರತ್ತು ಮಾಡುತ್ತಿದೆ. ನೆಹರೂ ಅವರ ಬಗ್ಗೆ ಇದ್ದ ಭಾವನೆಗಳನ್ನು ಭಗತ್ ಸಿಂಗ್ ಬದಲಾಯಿಸಿಕೊಳ್ತಾರೆ ಎಂದು ಊಹಿಸಲೂ ಸಾಧ್ಯವಿಲ್ಲ. ಹಾಗಿದ್ಮೇಲೆ ಆರ್​ಎಸ್​ಎಸ್​ ತನ್ನ ಸಿದ್ಧಾಂತವನ್ನೇ ಬದಲಾಯಿಸಿಕೊಂಡಿದೆ ಎಂದು ಭಾವಿಸಬಹುದೇ? ಭಗತ್ ಸಿಂಗ್ ತನಗೆ ಆದರ್ಶ ಎನ್ನುತ್ತಿರುವ ಆರ್​ಎಸ್​ಎಸ್​ ಧೋರಣೆಯ ಉದ್ದೇಶ ಬಹುಷಃ ರಾಜಕೀಯ ಲೆಕ್ಕಾಚಾರ ಇರಬಹುದು. ಆದ್ರೆ ಭಗತ್ ಸಿಂಗ್ರಂತಹ ಅಪ್ರತಿಮ ದೇಶಭಕ್ತರ ಹೆಸರನ್ನು ರಾಜಕೀಯಕ್ಕೆ ಎಳೆದು ತರುವುದು ಸರಿಯಲ್ಲ. ಇದು ಅವರ ಪರಂಪರೆ ಮತ್ತು ಕ್ರಾಂತಿಕಾರಿ ಹೋರಾಟಕ್ಕೆ ಅವಮಾನ ಮಾಡಿದಂತೆ.

ಲೇಖಕರು: ಆಶುತೋಶ್, ಎಎಪಿ ಮುಖಂಡ

ಅನುವಾದಕರು: ಭಾರತಿ ಭಟ್ 

Add to
Shares
0
Comments
Share This
Add to
Shares
0
Comments
Share
Report an issue
Authors

Related Tags