ಆವೃತ್ತಿಗಳು
Kannada

ಶಿಕ್ಷಣವೇ ಶಕ್ತಿ : ರಶ್ಮಿ ಜಲನ್, ಸುಚರಿತಾ ಚೌಧರಿ ಹೊಸ ಕ್ರಾಂತಿ..

ಟೀಮ್​ ವೈ.ಎಸ್​​.

6th Oct 2015
Add to
Shares
6
Comments
Share This
Add to
Shares
6
Comments
Share

ಶಿಕ್ಷಣ ಅನ್ನೋದು ಇತ್ತೀಚಿನ ದಿನಗಳಲ್ಲಿ ವ್ಯಾಪಾರೀಕರಣವಾಗುತ್ತಿದೆ. ಶಿಕ್ಷಣ ಬಡವರು ಹಾಗೂ ಮಧ್ಯಮವರ್ಗದವರಿಗೆ ಗಗನ ಕುಸುಮವಾಗೋ ದಿನಗಳು ದೂರವೇನಿಲ್ಲ. ಹಣವಿದ್ದವರಿಗೆ ಮಾತ್ರ ವಿದ್ಯೆ ಎನ್ನುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಶಿಕ್ಷಣ ಲೋಕದಲ್ಲಾಗುತ್ತಿರುವ ಈ ಅನಾರೋಗ್ಯಕರ ಬೆಳವಣಿಗೆಗೆ ಮದ್ದು ಹುಡುಕೋ ಪ್ರಯತ್ನವನ್ನು ರಶ್ಮಿ ಜಲನ್ ಹಾಗೂ ಸುಚರಿತಾ ಚೌಧರಿ ಮಾಡುತ್ತಿದ್ದಾರೆ. ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ನುರಿತ ಶಿಕ್ಷಕರ ಹುಡುಕಾಟದಲ್ಲಿರುವ ಪೋಷಕರು ಹಾಗೂ ಪ್ರತಿಭಾವಂತ ಶಿಕ್ಷಕರಿಗೆ ವಿನೂತನ ರೀತಿಯಲ್ಲಿ ನೆರವಾಗುತ್ತಿದ್ದಾರೆ. ರಶ್ಮಿ ಜಲನ್ ಹಾಗೂ ಸುಚರಿತಾ ಚೌಧರಿ ಜೊತೆಯಾಗಿ ಲೋಕಲಾವ್ಲ್ಸ್(Localowls) ಅನ್ನೋ ಸಂಸ್ಥೆಯೊಂದನ್ನ ಹುಟ್ಟುಹಾಕಿದ್ದಾರೆ. ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನು ಬೆಸೆಯುವ ವೇದಿಕೆ ಇದು.

ಸುಚರಿತಾ ಚೌಧರಿ ಹುಟ್ಟಿ ಬೆಳೆದಿದ್ದೆಲ್ಲ ದೆಹಲಿಯಲ್ಲಿ. ದೆಹಲಿ ವಿವಿಯಲ್ಲಿ ತಂದೆ-ತಾಯಿ ಇಬ್ಬರೂ ಪ್ರಾಧ್ಯಾಪಕರಾಗಿದ್ದರು. ಕಲೆ ಹಾಗೂ ಸಂಸ್ಕೃತಿಯಲ್ಲಿ ಬಾಲ್ಯದಿಂದಲೆ ಆಸಕ್ತಿ ಹೊಂದಿದ್ದ ಸುಚರಿತಾ , ದೆಹಲಿ ವಿಶ್ವವಿದ್ಯಾನಿಲಯದಲ್ಲೇ ಅರ್ಥಶಾಸ್ತ್ರ ಪದವಿ ಪಡೆದರು. ನಂತರ ಐಐಎಮ್ ಕೋಲ್ಕತ್ತಾದಲ್ಲಿ ಎಂಬಿಎ ಮಾಡಿದರು. ಐಐಎಂನಲ್ಲಿದ್ದಾಗಲೇ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದ ಸುಚರಿತಾ ವಿವಾಹ ಬಂಧನಕ್ಕೂ ಒಳಗಾದರು. 1998ರಲ್ಲಿ ಟಾಟಾ ಇನ್ಸ್​​​ಟಿಟ್ಯೂಟ್ ಮೂಲಕ ವೃತ್ತಿ ಜೀವನ ಆರಂಭಿಸಿದ ಸುಚರಿತಾ, 10 ವರ್ಷಕ್ಕೂ ಅಧಿಕ ಕಾಲ ಬ್ಯಾಂಕಿಂಗ್ ಕ್ಷೇತ್ರದಲ್ಲೂ ಸೇವೆ ಸಲ್ಲಿಸಿದ್ದಾರೆ. ಇನ್ನು ರಶ್ಮಿ ಜಲನ್ ಕೂಡ ಶಿಕ್ಷಣ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು. ಕೋಲ್ಕತ್ತಾ ಮೂಲದ ರಶ್ಮಿ ಖ್ಯಾತ ಕಥಕ್ ನೃತ್ಯಗಾತಿ. ಪಿಯಾನೋವನ್ನು ಕೂಡ ನುಡಿಸಬಲ್ಲರು. ಕೋಲ್ಕತ್ತಾ ವಿಶ್ವವಿದ್ಯಾನಿಲಯದಲ್ಲೇ ಅರ್ಥಶಾಸ್ತ್ರದಲ್ಲಿ ಬಿಎಸ್‍ಸಿ ಮುಗಿಸಿದ ರಶ್ಮಿ ಪ್ರೇಮ ನಿವೇದನೆಗಾಗಿ ಲಂಡನ್‍ಗೆ ಹಾರಿದ್ದರು. ಅಲ್ಲೇ ಇಂಟರ್‍ನ್ಯಾಷನಲ್ ಬ್ಯಾಂಕಿಂಗ್ ಹಾಗೂ ಫೈನಾನ್ಸ್​​ನಲ್ಲಿ ಎಂಬಿಎ ಮುಗಿಸಿ ಮುಂಬೈಗೆ ವಾಪಸ್ಸಾದ್ರು. ಆಕ್ಸಿಸ್ ಬ್ಯಾಂಕ್, ಎಚ್‍ಎಸ್‍ಬಿಸಿ ಸೇರಿದಂತೆ ಹಲವು ಬ್ಯಾಂಕ್‍ಗಳಲ್ಲಿ ಸುಮಾರು 12 ವರ್ಷ ಕೆಲಸ ಮಾಡಿದ್ದಾರೆ. ತಾಯಿಯಾಗುತ್ತಿದ್ದಂತೆ ವೃತ್ತಿ ಮುಂದುವರಿಸುವುದು ಹೇಗೆ ಎಂಬ ಆತಂಕ ರಶ್ಮಿ ಅವರನ್ನು ಕಾಡುತ್ತಿತ್ತು. ಮನೆಯವರ ಬೆಂಬಲದಿಂದಾಗಿ ರಶ್ಮಿ ತಾಯಿಯಾದ ಮೇಲೂ ವೃತ್ತಿ ಜೀವನಕ್ಕೆ ಗುಡ್ ಬೈ ಹೇಳಬೇಕಾದ ಪರಿಸ್ಥಿತಿ ಎದುರಾಗಲಿಲ್ಲ.

ಸುಚರಿತಾ ಮತ್ತು ರಶ್ಮಿ

ಸುಚರಿತಾ ಮತ್ತು ರಶ್ಮಿ


ಶಿಕ್ಷಣದ ಬಗ್ಗೆ ಅಪಾರ ಕಳಕಳಿ ಹೊಂದಿದ್ದ ರಶ್ಮಿ ಜಲನ್ ಹಾಗೂ ಸುಚರಿತಾ ಚೌಧರಿ ಎಂಬ ಈ ಇಬ್ಬರು ಸಮಾನ ಮನಸ್ಕರು ಈಗ ಜೊತೆಯಾಗಿ ಸಂಸ್ಥೆಯೊಂದನ್ನ ಕಟ್ಟಿ ಬೆಳೆಸಿದ್ದಾರೆ. ಸುಮಾರು 15 ವರ್ಷಗಳ ಕಾಲ ಬೇರೆ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವವಿದ್ರೂ ಅದನ್ನು ಬಿಟ್ಟು, ಶಿಕ್ಷಣ ಕ್ಷೇತ್ರಕ್ಕೆ ತಮ್ಮದೇ ಆದ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಸಂಸ್ಥೆ ಮೂಲಕ ನುರಿತ ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನ ಪರಸ್ಪರ ಪರಿಚಯಿಸಿ ಅವರ ಭವಿಷ್ಯಕ್ಕೊಂದು ದಾರಿ ಮಾಡಿಕೊಡುತ್ತಿದ್ದಾರೆ. ಆನ್‍ಲೈನ್ ಹಾಗೂ ಆಫ್‍ಲೈನ್ ಮುಖಾಂತರ ಬಳಕೆದಾರರು ಹಾಗೂ ತಜ್ಞರನ್ನು ತಲುಪುತ್ತಿದ್ದಾರೆ. ಆಫ್‍ಲೈನ್ ಪ್ರಚಾರಕ್ಕಾಗಿ ಟ್ವಿಟ್ಟರ್ ಹಾಗೂ ಫೇಸ್‍ಬುಕ್ ಬಳಸಿಕೊಳ್ಳುತ್ತಿದ್ದಾರೆ. ನಿಪುಣ ಶಿಕ್ಷಕರು ಕೆಲಸದ ಹುಡುಕಾಟದಲ್ಲಿದ್ದಲ್ಲಿದ್ದವರೆಲ್ಲ ಲೋಕಲಾವ್ಲ್ಸ್(Localowls) ವೆಬ್‍ಸೈಟ್‍ಗೆ ಲಾಗಿನ್ ಆಗಿ ತಮ್ಮ ಪ್ರೊಫೈಲ್ ಕ್ರಿಯೇಟ್ ಮಾಡಬೇಕು. ಅವರ ಬಗೆಗಿನ ಮಾಹಿತಿ, ಫೋಟೋ ಹಾಗೂ ವೀಡಿಯೋಗಳನ್ನು ಅಪ್‍ಲೋಡ್ ಮಾಡಬೇಕು. ಅವರ ದಾಖಲೆಗಳು, ಯಾವ ವಿಷಯದಲ್ಲಿ ನಿಪುಣರಿದ್ದಾರೆ ಅನ್ನೋದನ್ನು ರಶ್ಮಿ ಹಾಗೂ ಸುಚರಿತಾ ಪರಿಶೀಲಿಸುತ್ತಾರೆ. ಎಲ್ಲ ವಿವರಗಳನ್ನು ಗ್ರಾಹಕರಿಗೆ ಒದಗಿಸುತ್ತಾರೆ. ಈ ಶಿಕ್ಷಕರು ಪಾಠ ಮಾಡುವ ಬಗೆ ಹಾಗೂ ಅದರಿಂದ ವಿದ್ಯಾರ್ಥಿಗಳಿಗೆ ಎಷ್ಟರಮಟ್ಟಿಗೆ ಪ್ರಯೋಜನವಾಗುತ್ತಿದೆ ಅನ್ನೋದನ್ನು ಕೂಡ ತಿಳಿದುಕೊಳ್ಳುತ್ತಾರೆ. ವಿಶೇಷ ಅಂದ್ರೆ ವಿದ್ಯಾರ್ಥಿಗಳೇ ನೇರವಾಗಿ ಅವರಿಗನಿಸಿದ್ದನ್ನು, ತಮ್ಮ ಅನುಭವವನ್ನು ನೇರವಾಗಿ ವೆಬ್‍ಸೈಟ್‍ನಲ್ಲಿ ಪೋಸ್ಟ್ ಮಾಡಬಹುದು.

ಇದರ ಆಧಾರದ ಮೇಲೆ ತಜ್ಞರಿಗೆ ರೇಟಿಂಗ್ ಕೂಡ ನೀಡಲಾಗುತ್ತಿದೆ. ರೇಟಿಂಗ್ ಹಾಗೂ ವಿದ್ಯಾರ್ಥಿಗಳ ವಿಮರ್ಷೆಯ ಆಧಾರದ ಮೇಲೆ ಶಿಕ್ಷಕರನ್ನು ಅಗತ್ಯವಿರುವವರಿಗೆ ಶಿಫಾರಸು ಮಾಡುತ್ತಾರೆ. ಇದಕ್ಕೆಲ್ಲ ನುರಿತ ತಂತ್ರಜ್ಞರ ತಂಡವೇ ಇದೆ. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಅನುಭವ ರಶ್ಮಿ ಹಾಗೂ ಸುಚರಿತಾಗೆ ಇಲ್ಲಿ ವರದಾನವಾಗಿದೆ. ಬಳಕೆದಾರರ ಮಾರುಕಟ್ಟೆ, ಅವರ ಅಗತ್ಯಗಳಿಗೆ ಅನುಗುಣವಾಗಿ ಸೇವೆಯನ್ನು ಒದಗಿಸಲಾಗುತ್ತಿದೆ. ಜೊತೆಗೆ ಮಕ್ಕಳ ಶಿಕ್ಷಣದ ಬಗ್ಗೆ ಕಾಳಜಿಯನ್ನಿಟ್ಟುಕೊಂಡೇ ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಲೋಕಲಾವ್ಲ್ಸ್ ನ (Localowls) ಸಂಸ್ಥಾಪಕಿಯರಾದ ರಶ್ಮಿ ಹಾಗೂ ಸುಚರಿತಾ ಅವರ ಬೌದ್ಧಿಕ ಶಕ್ತಿ ಇಲ್ಲಿ ವರ್ಕೌಟ್ ಆಗ್ತಾ ಇದೆ. ತಜ್ಞರ ನೋಂದಣಿ, ನೆಟ್‍ವರ್ಕ್ ವಿಸ್ತರಣೆ, ವಿನ್ಯಾಸ, ಹೊಸ ಸೇವೆಗಳ ಪರಿಚಯ, ಗ್ರಾಹಕರು ಹಾಗೂ ತಜ್ಞರ ನಡುವೆ ಪರಸ್ಪರ ಸಂಪರ್ಕ ಕಲ್ಪಿಸುವುದು ಈ ಎಲ್ಲ ವ್ಯವಸ್ಥೆಯನ್ನೂ ರಶ್ಮಿ ನೋಡಿಕೊಳ್ಳುತ್ತಾರೆ. ಆನ್‍ಲೈನ್ ಮತ್ತು ಆಫ್‍ಲೈನ್ ಮಾರ್ಕೆಟಿಂಗ್ ತಂತ್ರ, ಹೊಸ ಪ್ರಾಡಕ್ಟ್​​ಗಳ ಪರಿಚಯ, ವಿನ್ಯಾಸ ಮತ್ತು ವಿನೂತನ ತಂತ್ರಜ್ಞಾನಗಳ ಅಳವಡಿಕೆಯ ಜವಾಬ್ಧಾರಿ ಸುಚರಿತಾ ಅವರದ್ದು.

ಕಿರಣ್ ಮಜುಮ್‍ದಾರ್, ಇಂದಿರಾ ನೂಯಿ ಅವರಂಥ ಸಾಧಕಿಯರೇ ಇವರಿಗ ಪ್ರೇರಣೆ. ಸದ್ಯ ಮುಂಬೈನಲ್ಲಿ ಮಾತ್ರ ರಶ್ಮಿ ಹಾಗೂ ಸುಚರಿತಾ ಸೇವೆ ಸಲ್ಲಿಸುತ್ತಿದ್ದಾರೆ. ಈ ಸೇವೆಯನ್ನು ಉಳಿದ ನಗರಗಳಿಗೂ ವಿಸ್ತರಿಸುವ ಯೋಜನೆ ಇವರ ಮುಂದಿದೆ. ಸ್ವಂತ ಉದ್ಯಮದ ಮೂಲಕ ಶಿಕ್ಷಣ ಕ್ಷೇತ್ರದ ಉನ್ನತಿಗೆ ಶ್ರಮಿಸುತ್ತಿರುವ ಇವರ ಸಾಧನೆಯನ್ನು ಮೆಚ್ಚಲೇಬೇಕು.

Add to
Shares
6
Comments
Share This
Add to
Shares
6
Comments
Share
Report an issue
Authors

Related Tags