ಆವೃತ್ತಿಗಳು
Kannada

ಕಲೋತ್ಸವ - 2015 - ಕವಿ ಸಮ್ಮೇಳನ - ಒಂದು ವರದಿ

26th Dec 2015
Add to
Shares
1
Comments
Share This
Add to
Shares
1
Comments
Share

ಕಲೆಯ ಬತ್ತದ ಸೆಲೆಯಾಗಿ ಕಲೆಯನ್ನೇ ನೆಲೆಯಾಗಿಸಿಕೊಂಡಿದ್ದ ಅಪ್ರತಿಮ ನಾಟಕಕಾರ, ರಂಗಕರ್ಮಿ ಶ್ರೀ ಎ.ಎಸ್.ಮೂರ್ತಿಯವರು ಈಗ ನಮ್ಮೊಂದಿಗಿಲ್ಲ. ಡಿಸೆಂಬರ್ 18ಕ್ಕೆ ಅವರು ನಮ್ಮನ್ನಗಲಿ ಮೂರು ವರ್ಷಗಳಾದವು. ಶ್ರೀಯುತರು ಕರ್ನಾಟಕದ ಮೊತ್ತಮೊದಲ ಖಾಸಗಿ ಕಲಾಶಾಲೆ ಕಲಾಮಂದಿರವನ್ನು (1919) ಆರಂಭಿಸಿದ ಶ್ರೀ ಅ.ನ.ಸುಬ್ಬರಾಯರ ಪುತ್ರರಾಗಿದ್ದರು. ತಂದೆ ಹೇಗೆ ಕಲೆಗಾಗಿ ಜೀವನ ಮುಡಿಪಾಗಿಟ್ಟರೋ ಅವರಂತೆ ಶ್ರೀ ಎ.ಎಸ್.ಮೂರ್ತಿವರೂ ತಮ್ಮ ಜೀವನವಿಡೀ ನಾಟಕ, ಚಿತ್ರಕಲೆ, ಸಂಗೀತ, ಸಾಹಿತ್ಯ, ಇತ್ಯಾದಿ ಹಲವಾರು ಕಲಾ ಪ್ರಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅವುಗಳಲ್ಲಿ ನಿರಂತರ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಲೇ ಬಂದವರು. ಅವರ ಮಕ್ಕಳಾದ ಶ್ರೀ ಎ.ಎಂ.ಪ್ರಕಾಶ್, ಶ್ರೀಮತಿ ಗೌರಿದತ್ತು ಹಾಗೂ ಶ್ರೀಮತಿ ಇಂದಿರಾ ಸುಂದರ್ ತಮ್ಮ ತಂದೆಯವರ ಸವಿನೆನಪಿಗಾಗಿ ಅವರಿಗಿಷ್ಟವಾದ ಕಲೆಯ ಜಾತ್ರೆ - ಕಲೋತ್ಸವ ಏರ್ಪಡಿಸುವ ಮೂಲಕ ವಿಶಿಷ್ಟ ಭಾವಪೂರ್ಣ ಶ್ರದ್ಧಾಂಜಲಿಯನ್ನು ನೀಡಿದ್ದಾರೆ. ಎರಡು ದಿನಗಳ ಕಲೋತ್ಸವ ಡಿಸೆಂಬರ್ 19, 20ರಂದು ಹನುಮಂತ ನಗರದ ರಾಮಾಂಜನೇಯ ಗುಡ್ಡದಲ್ಲಿ ಯಶಸ್ವಿಯಾಗಿ ಜರುಗಿತು. ಡಿ.20ರಂದು ದಿನವಿಡೀ ನಡೆದ ಕಾರ್ಯಕ್ರಮಗಳಲ್ಲಿ ಕಾವ್ಯ ಸಂಚಯವೂ ಒಂದಾಗಿತ್ತು. ಡಾ.ಎಚ್.ಎಸ್.ವೆಂಕಟೇಶ ಮೂರ್ತಿಯವರು ಈ ಕಾವ್ಯ ಸಂಚಯವೆಂಬ ಕವಿ ಸಮ್ಮೇಳನದ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಭಾಗವಹಿಸಿದ ಇನ್ನಿತರ ಕವಿ, ಕವಯತ್ರಿಯರು ಶ್ರೀಮತಿ ಪ್ರತಿಭಾ ನಂದಕುಮಾರ್, ಶ್ರೀಮತಿ ಲಲಿತಾ ಸಿದ್ಧಬಸವಯ್ಯ, ಶ್ರೀ ಟಿ.ಎಲ್ಲಪ್ಪ ಮತ್ತಿ ಶ್ರೀ ರುದ್ರೇಶ್ವರ ಸ್ವಾಮಿಯವರು. ಡಾ. ಎಚ್ಚೆಸ್ವಿಯವರು ಕವಿ ಸಮ್ಮೇಳನದ ಹಿನ್ನೆಲೆ, ಔಚಿತ್ಯ, ಅದಕ್ಕೆ ಸೂಕ್ತ ಸಮಯ ಹಾಗೂ ವಾತಾವರಣದ ಅಗತ್ಯ, ಕವಿ ಮನಸ್ಸುಗಳಿಗೆ ಪ್ರತಿಸ್ಪಂದಿಸುವ ಪ್ರೇಕ್ಷಕವರ್ಗದ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದರು. 


ಕಾವ್ಯ ಸಂಚಯದ ಮೊದಲ ಕವನವನ್ನು ಓದಿದವರು ಶ್ರೀಮತಿ ಪ್ರತಿಭಾ ನಂದಕುಮಾರ್ರವರು. ``ನಾವು ಹುಡುಗಿಯರೇ ಹೀಗೆ'' ಎಂಬ ಕವನ ಸಂಕಲನದಿಂದಲೂ ನಿರ್ಭಿಡೆಯ ಕವನಗಳಿಗೆ ಹೆಸರಾದವರು. ತಮಗನಿಸಿದ್ದನ್ನು ನಿರ್ಭೀತಿಯಿಂದ ಕವನಗಳ ಮೂಲಕ ವ್ಯಕ್ತಪಡಿಸುವ ಛಾತಿ ಉಳ್ಳವರು. ಅವರು ಇಂದಿನ ಸಮಾಜದಲ್ಲಿ ಮಹಿಳೆಯರ ಮೇಲಿನ ಶೋಷಣೆ, ಅತ್ಯಾಚಾರದ ಬಗ್ಗೆ ಹಾಗೂ ಅದಕ್ಕೆ ಸಮಾಜ ಸ್ಪಂದಿಸುವ ಪರಿಯ ಬಗ್ಗೆ ಕವನ ವಾಚಿಸಿದರು. 

2.ಶ್ರೀಮತಿ ಲಲಿತಾ ಸಿದ್ಧ ಬಸವಯ್ಯನವರು - ಶ್ರೀ ಎ.ಎಸ್.ಮೂರ್ತಿಯವರು ಆಕಾಶವಾಣಿಯಲ್ಲಿ ಈರಣ್ಣನ ಪಾತ್ರದ ಮೂಲಕ ಬಡವರ್ಗದ, ಸಮಾಜದ ಸಮಸ್ಯೆಗಳಿಗೆ ಧ್ವನಿಯಾಗಿದ್ದರು. ತಮ್ಮ ಕಂಚಿನ ಕಂಠದಿಂದಲೂ, ತಮ್ಮ ಮಾತುಗಾರಿಕೆಯಿಂದಲೂ ಮನೆಮಾತಾಗಿದ್ದ ಈರಣ್ಣನ ಬಗ್ಗೆ ತಮ್ಮ ಬಾಲ್ಯದ ನೆನಪುಗಳನ್ನು ಸ್ಮರಿಸುತ್ತಾ ಅವರ ಗೌರವಾರ್ಥ ಶ್ರೀಮತಿ ಲಲಿತಾ ಅವರು `ಬಿಡ್ತೂ ಅನ್ನಿ' ಎಂಬ ಕವನವನ್ನು ಓದಿದರು. ಹಾಸ್ಯದ ಲೇಪ ಇರುವ ಈ ಕವನ ಮಧ್ಯಮವರ್ಗದ ಹೆಣ್ಣಿನ ಮನಃಸ್ಥಿತಿಯನ್ನು, ರಾಜಿ ಮನೋಭಾವವನ್ನು ಚಿತ್ರಿಸುತ್ತದೆ. ಸಂಸಾರದಲ್ಲಿ ಏನೇ ತಪ್ಪಾದರೂ, ತೊಂದರೆ ಬಂದರೂ, ಆ ಕ್ಷಣಕ್ಕೆ ಆರ್ಭಟಿಸಿ (ಮನಸ್ಸಿನ ಭಾರ ಹೊರಹಾಕಿ) ಆಮೇಲೆ ಎಲ್ಲಾ ಮರೆತು ಕ್ಷಮಯಾಧರಿತ್ರಿಯಂತೆ ಸಂಸಾರದಲ್ಲಿ ಮುಂದುವರಿಯುತ್ತಾಳೆ ಎಂಬುದನ್ನು ಕವನ ಸುಂದರವಾಗಿ ಬಿಂಬಿಸಿದೆ. `ಸರೀಗಾ ಚ್ವೆಪ್ಪುರಾ ನಾ ಸ್ವಾಮೀ' ಅವರದೇ ಮತ್ತೊಂದು ಕವನ ಜೀವನಕ್ಕೆ ಅನ್ವಯಿಸುವಂಥದ್ದು. ಕವನದಲ್ಲಿ ಉಲ್ಲೇಖಗೊಳ್ಳುವ `ನದಿ' - ನಾವು ಎದುರಿಸುವ ಕಷ್ಟ ಕಾರ್ಪಣ್ಯಗಳನ್ನು `ದಡಗಳು' - ಕಷ್ಟಗಳನ್ನು ಎದುರಿಸಿ ನೆಮ್ಮದಿಯ ದಡ ಸೇರುವುದನ್ನು ಸಂಕೇತಿಸುತ್ತವೆ. ಜೀವನದಲ್ಲಿ ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ಬಾರಿ ಈ ಜೀವನ ಜಂಜಾಟಗಳು ಸಾಕೆನ್ನಿಸಿ, ಅವರವರ ಧರ್ಮ, ಭಾವಕ್ಕೆ ತಕ್ಕಂತೆ ಆ ಜಗನ್ನಿಯಾಮಕನಿಗೆ ಮೊರೆ ಹೋಗುವ ಶರಣಾಗತಿ ಭಾವವನ್ನು ಕವನ ಸುಂದರವಾಗಿ ಚಿತ್ರಿಸಿದೆ.

3. ಶ್ರೀ ಟಿ.ಎಲ್ಲಪ್ಪನವರು - ಪುರುಷ ಪ್ರಧಾನ ಸಮಾಜದಲ್ಲಿ ಅವಕಾಶ ವಂಚಿತೆ ಹೆಣ್ಣಿನ ದಯನೀಯ ಸ್ಥಿತಿ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಮೊದಲ ಕವನ ಅಕ್ಕ, ಚಿಟ್ಟೆ, ಗಾಳಿಪಟದಲ್ಲಿ ಮಧ್ಯಮವರ್ಗದ ಹೆಣ್ಣು ಬಾಲ್ಯದಿಂದಲೂ ಸಾಮಾಜಿಕ ಕಟ್ಟುಪಾಡುಗಳಿಗೆ ಒಳಪಟ್ಟು, ಕೇವಲ ಹೆಣ್ಣಾಗಿ ಹುಟ್ಟಿದ ಕಾರಣಕ್ಕಾಗಿ ಹೇಗೆ ಜೀವನದ ಎಲ್ಲ ಸ್ತರಗಳಲ್ಲೂ ಅವಕಾಶ ವಂಚಿತಳಾಗುತ್ತಾಳೆ ಎಂಬುದನ್ನು ಹೇಳಿದ್ದಾರೆ. ತಮ್ಮನ ಒತ್ತಾಸೆಯಿಂದ ಬಂಧನದಿಂದ ತಪ್ಪಿಸಿಕೊಂಡು ಸಮಾಜವನ್ನು ಎದುರಿಸ ಹೊರಟರೆ ಅವಳು ಯಾವ ಸ್ಥಿತಿಗೆ ತಲುಪುತ್ತಾಳೆ ಎಂಬುದನ್ನು ತಮ್ಮನ ನಿರೂಪಣೆಯ ಮೂಲಕ ಮನಕಲಕುವಂತೆ ವರ್ಣಿಸಿದ್ದಾರೆ. ಚಿಟ್ಟೆಯಂತೆ ಸ್ವತಂತ್ರವಾಗಿ ಹಾರಾಡಬೇಕಾಗಿದ್ದ ಹೆಣ್ಣು ತಮ್ಮನನ್ನು ಸಂತೈಸಲು ಗಾಳಿಪಟದ ರೂಪದಲ್ಲಿ ಕಾಣಿಸಿಕೊಳ್ಳುತ್ತಾಳೆ ಎಂಬ ಕಲ್ಪನೆ ವಿಶಿಷ್ಟವಾಗಿತ್ತು.

ಅವರ ಮತ್ತೊಂದು ಕವಿತೆ `ಅವ್ವ' ತೀರಾ ಕೆಳವರ್ಗದ, ಆರ್ಥಿಕವಾಗಿಯೂ ಹಿಂದುಳಿದ ವರ್ಗಕ್ಕೆ ಸೇರಿದ ಸ್ವಾಭಿಮಾನಿ ತಾಯಿಯೊಬ್ಬಳು ತನ್ನ ಮಕ್ಕಳನ್ನು ಹೇಗೆ ಕಷ್ಟದಿಂದ ಸಾಕಿ ಸಲಹುತ್ತಾಳೆ, ಹೊಟ್ಟೆ ಬಟ್ಟೆ ಕಟ್ಟಿ ಅವರನ್ನು ವಿದ್ಯಾವಂತರನ್ನಾಗಿ ಮಾಡುತ್ತಾಳೆ, ಅವರ ವಿದ್ಯೆಯಲ್ಲೇ ಸಾರ್ಥಕ್ಯದ ಭಾವ ಅನುಭವಿಸುತ್ತಾಳೆ ಎಂಬುದನ್ನು ಹೃದಯ ಸ್ಪರ್ಶಿಯಾಗಿ ವಿವರಿಸಿದ್ದಾರೆ. 

4. ಶ್ರೀ ರುದ್ರೇಶ್ವರ ಸ್ವಾಮಿಯವರು - `ಮುದ್ದಣ ಕಾವ್ಯ ಪುರಸ್ಕಾರ' ಪಡೆದ `ಅವಳ ಕವಿತೆ' ಸಂಕಲನದಿಂದ ಆಯ್ದ ಎರಡು ಕವಿತೆಗಳನ್ನು ವಾಚನ ಮಾಡಿದ್ದಾರೆ. ವಿಶೇಷವೆಂದರೆ ಇವು ಖಂಡಕಾವ್ಯದಂತೆ ಓದಬಹುದಾಗಿದೆ, ಶೀರ್ಷಿಕೆ ಕೊಟ್ಟಿಲ್ಲ. ಆದರೆ ಪ್ರತೀ ಕವಿತೆಗೆ ಆಂಗ್ಲ ಅಡಿಬರಹ (Tagline ) ನೀಡಲಾಗಿದೆ. ಮೊದಲನೆಯದು `` She crird, that a wolf in sheep's clothing''

ಪ್ರಸ್ತುತ ಸಮಾಜದಲ್ಲಿ ಹೆಣ್ಣು ಗಂಡಿನ ಸಂಬಂಧ ಶಿಥಿಲಗೊಳ್ಳುತ್ತಿರುವ ಸಂದರ್ಭದಲ್ಲಿ ಹೆಣ್ಣು ಪ್ರತಿಯೊಬ್ಬನನ್ನೂ ಅನುಮಾನದ ದೃಷ್ಟಿಯಲ್ಲಿ ನೋಡುವ ಹಿನ್ನೆಲೆಯಲ್ಲಿ ಈ ಕವಿತೆ ಮೂಡಿಬಂದಿದೆ. ಕವಿತೆಯಲ್ಲಿ ಬರುವ ತರುಣಿ ಪಾತ್ರ ರೈಲಿನಲ್ಲಿ ತನ್ನ ಸಹಪ್ರಯಾಣಿಕನನ್ನು ನಿರುಕಿಸಿ ಅವ ಯಾರ ಹಾಗೆ ಹೋಲುತ್ತಾನೆ? ಎಂದು ಪ್ರಶ್ನಿಸಿಕೊಳ್ಳುವುದು ಇಂದಿನ ಸಮಾಜದಲ್ಲಿ ಹಲವಾರು ಉದಾಹರಣೆಗಳಲ್ಲಿ ಸಂಬಂಧಿಕರೇ ಹೆಣ್ಣಿನ ಶೋಷಕರು ಎಂಬುದನ್ನು ಪ್ರತಿಬಿಂಬಿಸುತ್ತದೆ. `` Live in their beautiful world she can hear his heart'' ಎಂಬ ಕವಿತೆ ಹೆಣ್ಣಿನ ಅದಮ್ಯ ಜೀವನ ಪ್ರೀತಿಯನ್ನು ಎಲ್ಲ ಪೂರ್ವಾಗ್ರಹ ಮೀರಿ ಬೆಳೆವ ಪ್ರೀತಿಯನ್ನು ಧ್ವನಿಸುತ್ತದೆ. ಏನನ್ನೂ ತ್ಯಜಿಸದ ಹೆಣ್ಣಿನ ಗುಣವೆ ಅವಳ ಅಸಾಧಾರಣ ಜೀವಧಾತು ಎಂಬ ಅಂಶವನ್ನು ಈ ಕವಿತೆ ಸುಂದರವಾಗಿ ಪ್ರತಿಪಾದಿಸುತ್ತದೆ. 

5. ಕೊನೆಯಲ್ಲಿ ಕಾವ್ಯ ಸಂಚಯದ ಅಧ್ಯಕ್ಷರಾದ ಡಾ.ಎಚ್ಚೆಸ್ವಿ (ಎಚ್.ಎಸ್.ವೆಂಕಟೇಶ ಮೂರ್ತಿಯವರು) ತಮ್ಮ `ಸುನೀತ ಭಾವ' ಎಂಬ ಸುನೀತಗಳ ಸಂಗ್ರಹದಿಂದ ಎರಡು ಸುನೀತಗಳನ್ನು ಪ್ರಸ್ತುತಿಗೊಳಿಸಿದರು. ಸುನೀತ ಎಂಬುದು 14 ಸಾಲುಗಳ ಒಂದು ಕಾವ್ಯ ಪ್ರಕಾರವಾಗಿದೆ. ಇದು ಆಂಗ್ಲ ಸಾನೆಟಿನ (Sonnet )ಕನ್ನಡ ರೂಪ. ದ.ರಾ.ಬೇಂದ್ರೆಯವರು ಭಾವ, ಶಬ್ಧ , ರಸಗಳನ್ನು ಹೇಗೆ ಉಪಯೋಗಿಸಿಕೊಳ್ಳುತ್ತಿದ್ದರು ಎಂಬುದನ್ನು ಮೊದಲನೆಯ ಸುನೀತ ತಿಳಿಸಿಕೊಟ್ಟಿತು. ಜೊತೆಗೆ ಅವರ ಕಾವ್ಯ ಸ್ವರೂಪ ಚಿತ್ರಣ ಮತ್ತು ವ್ಯಕ್ತಿತ್ವ ಪರಿಚಯ ಮಾಡಿಕೊಟ್ಟಿತು. ದಿವಂಗತ ಸಿ.ಅಶ್ವಥ್ ಕನ್ನಡ ನಾಡು ಕಂಡ ಪ್ರತಿಭಾಶಾಲಿ ಸಂಗೀತ ಸಂಯೋಜಕ ಹಾಗೂ ಗಾಯಕರಲ್ಲಿ ಒಬ್ಬರಾಗಿದ್ದರು. ತಮ್ಮ ಸಿರಿಕಂಠ ಹಾಗೂ ವಿಶಿಷ್ಟ ಗಾಯನ ಶೈಲಿಯಿಂದ ಕೇಳುಗರನ್ನು ಮಂತ್ರಮುಗ್ಧರಾಗಿಸುತ್ತಿದ್ದ  ಸಿ.ಅಶ್ವಥ್​ರ ಬಗ್ಗೆ ಡಾ.ಎಚ್ಚೆಸ್ವಿಯವರು ದ್ವಿತೀಯ ಸುನೀತವನ್ನು ವಾಚನ ಮಾಡಿದರು. ಶ್ರೀಯುತರು ಭಾಷೆಗಿರುವ ಅನಂತ ಸಾಧ್ಯತೆಗಳ ಬಗ್ಗೆಯೂ ಪ್ರೇಕ್ಷಕರ ಗಮನ ಸೆಳೆದರು. ಒಟ್ಟಿನಲ್ಲಿ ಈ `ಕಾವ್ಯ ಸಂಚಯ' ಪ್ರಸ್ತುತ ಸ್ಥಿತಿಯ, ಸಮಾಜದ ಆಗುಹೋಗುಗಳಿಗೆ ಕನ್ನಡಿ ಹಿಡಿಯುವಂತಿತ್ತು. ಕೇಳುಗರ ಸಾಕ್ಷಿಪ್ರಜ್ಞೆಯನ್ನು ಎಚ್ಚರಿಸಿ ಅವರನ್ನು ಮಹಿಳೆಯರು ಶೋಷಿತರ ಬಗ್ಗೆ ಸಂವೇದನಾಶೀಲರನ್ನಾಗಿ ಮಾಡುವುದರಲ್ಲಿ ಯಶಸ್ಸು ಕಂಡಿದೆ. ಡಾ.ಎಚ್ಚೆಸ್ವಿಯವರು ಖ್ಯಾತನಾಮರಾದರೂ (ಜನಪ್ರಿಯ ಕವಿಗಳಾದರೂ) ಸಹಕವಿಗಳ ಬಗ್ಗೆ, ಕವನದ ಬಗ್ಗೆ ಪ್ರಶಂಸೆಯ ಮಾತನಾಡಿ ಹಿರಿಮೆ ಮೆರೆದರು. 


ಶ್ರೀಯುತ ಎ.ಎಸ್.ಮೂರ್ತಿಯವರು ಸದಾ ಯುವಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಾ ಅವರು ಮುಂದೆ ಬರುವಲ್ಲಿ ಸಹಾಯಹಸ್ತ ನೀಡುತ್ತಲೇ ಬಂದವರು. ಅವರ ಸಂಸ್ಮರಣಾರ್ಥ ಕಲಾಮಂದಿರ, ಅಭಿನಯ ತರಂಗ ಹಾಗೂ ಹನುಮಂತ ನಗರ ಬಿಂಬ ಇವುಗಳ ಜಂಟಿ ಆಶ್ರಯದಲ್ಲಿ ಜರುಗಿದ ಕಲೋತ್ಸವ ಹಾಗೂ ಕವಿ ಸಮ್ಮೇಳನದ ಸಂಸ್ಥಾಪಕರ ಹಾಗೂ ಕಾರ್ಯಕ್ರಮ ಆಯೋಜಕರ ಮೂಲ ಆಶಯಕ್ಕೆ ಸಮರ್ಥ ಬೆಂಬಲ ನೀಡಿದೆ ಎಂದು ಹೇಳಬಹುದು. 

ಲೇಖಕಿ : ಶ್ರೀಮತಿ ವಿಜಯಾ ಉಪಾಧ್ಯಾಯ

Add to
Shares
1
Comments
Share This
Add to
Shares
1
Comments
Share
Report an issue
Authors

Related Tags