ಆವೃತ್ತಿಗಳು
Kannada

ಆರಂಭಿಕ ಉದ್ಯಮಗಳಿಗೆ ಅಮೂಲ್ಯವಾದ ಮಾರಾಟದ ಸಲಹೆಗಳು

ಟೀಮ್​ ವೈ.ಎಸ್​. ಕನ್ನಡ

23rd Dec 2015
Add to
Shares
0
Comments
Share This
Add to
Shares
0
Comments
Share


ನನ್ನ ಸ್ನೇಹಿತರು ಆರಂಭಿಸಿರುವಂತೆ ನಾನು ಉತ್ಪನ್ನಗಳ ಸ್ಟಾರ್ಟ್ ಅಪ್ ಸಂಸ್ಥೆಯನ್ನು ನಡೆಸುತ್ತಿಲ್ಲ. ನಾನೊಂದು ಸಾಫ್ಟ್‌ ವೇರ್ ಟೆಸ್ಟಿಂಗ್ ಸರ್ವಿಸ್‌ನ ಸ್ಟಾರ್ಟ್ ಅಪ್ ಆರಂಭಿಸಿದ್ದೇನೆ. ಇಲ್ಲಿ ಉತ್ಪನ್ನಗಳ ಸರ್ವಿಸ್‌ನಂತೆ ಕೆಲವೊಂದು ಸಾಮಾನ್ಯ ಹಾಗೂ ಮತ್ತೆ ಕೆಲವು ವಿಭಿನ್ನ ಸವಾಲುಗಳಿವೆ.

ನಮ್ಮ ಸ್ಟಾರ್ಟ್ ಅಪ್‌ನ ಟೆಸ್ಟ್‌ ಲ್ಯಾಬ್‌ನಲ್ಲಿ ನಾವು ಸಾಕಷ್ಟು ಇತರೆ ಕಂಪನಿಗಳ ಕೆಲಸಗಳನ್ನು ನಿರ್ವಹಿಸುತ್ತಿದ್ದೇವೆ. ನಮ್ಮ ಮುಂದೆ ಸಾಕಷ್ಟು ಅವಕಾಶಗಳಿವೆ.(ಇಲ್ಲಿಯ ತನಕ 27 ಸಂಸ್ಥೆಗಳ ಪ್ರಾಜೆಕ್ಟ್ ಮುಗಿಸಿದ್ದೇವೆ)

ವ್ಯವಹಾರದಿಂದ ವ್ಯವಹಾರ ಹಾಗೂ ವ್ಯವಹಾರದಿಂದ ಗ್ರಾಹಕ ಕಾರ್ಯಾಚರಣೆ ನಿರ್ವಹಿಸುವ ಹಲವು ನನ್ನ ಸ್ನೇಹಿತರು ಹಾಗೂ ಉದ್ಯಮಿಗಳೊಂದಿಗೆ ನಾನು ಆಗಾಗ ವ್ಯಾವಹಾರಿಕ ಬೆಳವಣಿಗೆಗಳ ಬಗ್ಗೆ ಚರ್ಚಿಸುತ್ತಿರುತ್ತೇನೆ. ಬಹುತೇಕ ವ್ಯಾವಹಾರಿಕ ಕಾರ್ಯಾಚರಣೆ ವಿಭಾಗದಲ್ಲಿ ಒಂದು ಸಮಸ್ಯೆ ನನ್ನನ್ನು ಸಾಕಷ್ಟು ಕಾಡಿದೆ.

image


ಪ್ರಾಯೋಗಿಕ ಗ್ರಾಹಕರಿಂದ ಪಾವತಿ ಮಾಡಿಕೊಳ್ಳುವ ಬಗೆ ಹೇಗೆ?

• ಅವರನ್ನು ಸದಾ ಕಾಲ ಪಾವತಿಸುವಂತೆ ಮಾಡುವುದು

• ಗ್ರಾಹಕರನ್ನು ಆಕರ್ಷಿಸಲು ಈಗಾಗಲೇ ಸಾಕಷ್ಟು ಕಸರತ್ತು ಮಾಡಿದರೂ ಅವರಿಂದ ಪಾವತಿ ಆಗುತ್ತಿಲ್ಲ

• ನಾವು ನಮ್ಮ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಹೆಚ್ಚಿನ ಮೊತ್ತವನ್ನು ವಿನಿಯೋಗಿಸುತ್ತಿದ್ದೇವೆ

• ಸಾಕಷ್ಟು ಸೈನ್‌ ಅಪ್‌ಗಳಾಗುತ್ತಿದ್ದರೂ ಅದರ ಜೊತೆಯಲ್ಲೇ ತಾಂತ್ರಿಕ ಸಮಸ್ಯೆಗಳು ಅಷ್ಟೇ ಪ್ರಮಾಣದಲ್ಲಿವೆ. ಇದನ್ನು ಸಮರ್ಥವಾಗಿ ನಡೆಸಲು ಹಣದ ಕೊರತೆ ಇದೆ.

• ನಾವು ಪ್ರಗತಿಯತ್ತ ಸಾಗುತ್ತಿದ್ದೇವೆಯೇ? ಈ ಗ್ರಾಹಕರು ಪಾವತಿ ಮಾಡುವುದು ಎಂದು?

• ಈ ವಿಚಾರಣಾಧೀನ ಗ್ರಾಹಕರನ್ನು ಮುಂದುವರೆಸಲು ಮಾಡಬೇಕಾದ ಹೆಚ್ಚುವರಿ ಪ್ರಯತ್ನಗಳೇನು?

ಇದರ ಜೊತೆ ಇನ್ನೊಂದಷ್ಟು ಹೆಚ್ಚುವರಿ ಅಂಶಗಳಿವೆ.

• ನಮ್ಮಲ್ಲೊಂದು ಸ್ವಯಂಸೇವಾ ಮಾದರಿಯಿದೆ. ಆದರೂ ಇದು ನಮ್ಮ ಗ್ರಾಹಕರಿಗೇಕೆ ಅರ್ಥವಾಗುತ್ತಿಲ್ಲ? ಗ್ರಾಹಕರು ಇದರ ಬಗ್ಗೆ ಏಕೆ ಬೇರೆಯವರೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ?

• ಸಾಸ್ ಮಾದರಿಯಲ್ಲಿ ಸಣ್ಣ ಮತ್ತು ಮಧ್ಯಮ ವರ್ಗದ ವ್ಯವಹಾರಗಳು ಅರ್ಥವಾಗುತ್ತಿಲ್ಲವೆಂದರೆ ಇದರಲ್ಲಿನ ಸಮಸ್ಯೆಯಾದರೂ ಏನು?

• ನಮ್ಮ ಉತ್ಪನ್ನ ಅತ್ಯುತ್ತಮವಾಗಿದೆ. ಗ್ರಾಹಕರಿದನ್ನು ಬಳಸುತ್ತಿದ್ದಾರೆ. ಆದರೂ ಪಾವತಿ ಮಾಡುತ್ತಿಲ್ಲ ಏಕೆ?

• ಜಿ-ಮೇಲ್ ಉಚಿತವಾಗಿ ಕಾರ್ಯಾಚರಣೆ ನಡೆಸುತ್ತಿದೆ. ಹಾಗಿದ್ದಲ್ಲಿ ನಾವು ಪಾವತಿ ಮಾಡುವ ಅಗತ್ಯವಿದೆಯೇ ಎಂದು ಗ್ರಾಹಕರೇಕೆ ಕೇಳುತ್ತಿದ್ದಾರೆ?

• ಇನ್ನೊಂದು ಅವಕಾಶವಿದ್ದರೆ, ನಾನು ಉಚಿತ ಪ್ರಾಯೋಗಿಕ ಮಾಡುವುದಿಲ್ಲ

• ನಮ್ಮ ಉತ್ಪನ್ನ ವಿಭಿನ್ನವಾಗಿದೆ, ಆದರೂ ಗ್ರಾಹಕರು ಬೇರೆ ಉತ್ಪನ್ನಗಳೊಂದಿಗೆ ತುಲನೆ ಮಾಡುತ್ತಿದ್ದಾರೆ.

ಇಲ್ಲಿರುವ ಬಹುತೇಕ ಸಂಗತಿಗಳು ಎಲ್ಲಾ ಉದ್ದಿಮೆದಾರರಿಗೂ ಕಾಡುವ ಸಾಮಾನ್ಯ ಸವಾಲುಗಳು.

ಉತ್ಪನ್ನವೊಂದನ್ನು ನಿರ್ಮಿಸುವುದು ಹಾಗೂ ಉತ್ಪನ್ನವನ್ನು ಮಾರುವುದು ಎರಡೂ ವಿಭಿನ್ನ ಸವಾಲುಗಳು. ನಿಮಗಿದು ಗೊತ್ತಿಲ್ಲದಿದ್ದರೆ ನಿಮಗೆ ದೊಡ್ಡ ಪ್ರಮಾಣದ ನಷ್ಟವಾಗುತ್ತದೆ. ಈ ಸವಾಲುಗಳನ್ನು ನೀವು ಮರೆತು ಕೇವಲ ಉತ್ಪನ್ನಗಳ ಬಗ್ಗೆ ಮಾತ್ರ ಗಮನಹರಿಸಿದರೆ ಈ ರೀತಿಯ ತೊಡಕುಗಳಾಗುತ್ತವೆ. ಮಾರಾಟ ಅನ್ನುವುದು ವಿಭಿನ್ನ ಹಾಗೂ ನಿರ್ಣಾಯಕ ಸವಾಲು. ಉತ್ಪನ್ನವನ್ನು ನಿರ್ಮಿಸುವಷ್ಟೇ ಪ್ರಾಧಾನ್ಯತೆಯನ್ನು ಉತ್ಪನ್ನದ ಮಾರಾಟಕ್ಕೂ ನೀಡಬೇಕು. ಈ ಸಂದರ್ಭದಲ್ಲಿ ಉಚಿತ ಪ್ರಯೋಗಗಳಿಗೆ ಒತ್ತು ನೀಡಲು ಸಾಧ್ಯವಿಲ್ಲವಾದರೂ ಗ್ರಾಹಕರ ಆಕರ್ಷಣೆಗೆ ಅನಿವಾರ್ಯವಾಗಿ ಕೆಲವು ಮಾರ್ಪಾಡುಗಳನ್ನು ಮಾಡಿಕೊಳ್ಳಬೇಕಾಗುತ್ತದೆ.

ನಾನು ಬಿಸಿನೆಸ್ ಗುರು ಅಲ್ಲವಾದರೂ ನನ್ನ ಅನುಭವದ ಆಧಾರದಲ್ಲಿ ಕೆಲವು ಮಾರಾಟದ ಸಲಹೆಗಳನ್ನು ನೀಡುತ್ತೇನೆ.

ನಿಮ್ಮ ಹತಾಶೆ ನಿಮ್ಮ ಮಾರಾಟದ ಸಾಮರ್ಥ್ಯವನ್ನು ಕೊಲ್ಲುತ್ತದೆ

ಗ್ರಾಹಕರನ್ನು ಗೆಲ್ಲುವ ಪ್ರಯತ್ನದಲ್ಲಿ ವಿಫಲರಾಗಿ ನೀವು ಹತಾಶಗೊಂಡರೆ ಅದರ ಪರಿಣಾಮ ನಿಮ್ಮ ಮಾರಾಟದ ಮೇಲೆ ನೇರವಾಗಿ ಬೀಳುತ್ತದೆ.

ಗ್ರಾಹಕರ ಅಗತ್ಯಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಎಷ್ಟು ಸಮಯ ತೆಗೆದುಕೊಳ್ಳುತ್ತೀರಿ ಎನ್ನುವುದರ ಮೇಲೆ ನಿಮ್ಮ ವ್ಯವಹಾರದ ಯಶಸ್ಸು ನಿಂತಿರುತ್ತದೆ. ಇದರಿಂದ ಆರೋಗ್ಯಪೂರ್ಣ ವ್ಯಾವಹಾರಿಕ ಒಪ್ಪಂದಗಳು ಸಾಧ್ಯ. ಒಂದು ವೇಳೆ ಮಿಲಿಯನ್ ಡಾಲರ್ ಗ್ರಾಹಕರು ಪಾವತಿ ಮಾಡಲು ನಿರಾಕರಿಸಿದರೆ ಹತಾಶರಾಗಬೇಡಿ. ಅದಕ್ಕಾಗಿ ನಿಮ್ಮ ಸ್ಟಾರ್ಟ್ ಅಪ್ ಸಂಸ್ಥೆ ನರಳುವ ಅವಶ್ಯಕತೆ ಇಲ್ಲ. ಅದೇ ನಿಮ್ಮ ಉದ್ಯಮದ ಅಂತ್ಯವೂ ಆಗಿರುವುದಿಲ್ಲ. ನೀವು ಆ ಗ್ರಾಹಕರನ್ನು ಮಾತ್ರ ಕಳೆದುಕೊಳ್ಳಬಹುದು. ಹಾಗಂತ ನಿಮ್ಮ ಸ್ಥೈರ್ಯವನ್ನು ಉತ್ತೇಜಿಸುವುದನ್ನು ಬಿಡಬೇಡಿ.

ದರ, ರಿಯಾಯಿತಿ ಹಾಗೂ ಉಚಿತ ಕಾರ್ಯ ನಿರ್ವಹಣೆ

ಹಣ ಗಳಿಸುವುದಕ್ಕಿಂತ ಗ್ರಾಹಕರನ್ನು ಗಳಿಸಿಕೊಳ್ಳುವ ಸ್ಟ್ರಾಟೆಜಿ ಇದ್ದರೆ ಉಚಿತ ಕಾರ್ಯ ನಿರ್ವಹಣೆ ಅತ್ಯುತ್ತಮ ವಿಧಾನ. ನಿಮ್ಮ ಸಂಸ್ಥೆಯ ಯಶಸ್ಸಿನ ಪ್ರಮಾಣಪತ್ರ ವ್ಯವಹಾರ ತಂತ್ರವಲ್ಲ, ಅದೇ ನಿಮ್ಮ ಗ್ರಾಹಕರು ನಿಮ್ಮ ಸಂಸ್ಥೆಯನ್ನು ಅಳೆಯುವ ಮಾನದಂಡ. ಹಾಗಂತ ಉದ್ಯಮಿ ಕೇವಲ ಇಂತಹ ಪ್ರಶಂಸಾಪತ್ರಗಳಿಗಾಗಿ ಉಚಿತ ಸೇವೆಗಳನ್ನು ಅಧಿಕಗೊಳಿಸಿದರೆ ಅಂತಿಮವಾಗಿ ಆದಾಯದ ಬದಲಿಗೆ ಪ್ರಶಂಸೆ ಮಾತ್ರ ಉಳಿಯುತ್ತದೆ.

ರಿಯಾಯಿತಿ, ನಿಮ್ಮ ಸಂಸ್ಥೆಯನ್ನು ಅನುಸರಿಸುವ ಗ್ರಾಹಕರಿಗೆ ಉತ್ತೇಜನ ನೀಡುವ ಸಂಗತಿ. ಆದರೆ ಆ ರಿಯಾಯಿತಿಗಳನ್ನು ನೀಡಬಹುದಾದ ಸೂಕ್ತ ಬಜೆಟ್ ಮಾದರಿಯನ್ನು ನೀವು ಅನುಸರಿಸಬೇಕು. ನಿಮ್ಮ ಉತ್ಪನ್ನ ರಿಯಾಯಿತಿ ಆಧಾರದಲ್ಲಿ ಮಾತ್ರ ಮಾರಾಟವಾಗುತ್ತಿದ್ದರೆ, ಇದರ ಬಗ್ಗೆ ಗಂಭೀರವಾಗಿ ಚಿಂತಿಸಿ ಹೊಸ ನೀತಿ ರೂಪಿಸಬೇಕಾದ ಅವಶ್ಯಕತೆ ಇದೆ.

ಇಲ್ಲೊಂದು ಸ್ಟಾರ್ಟ್ ಅಪ್ ಸಂಸ್ಥೆ ಶೇ.80ರಷ್ಟು ರಿಯಾಯಿತಿ ನೀಡಿದರೂ, ಲಾಂಚ್ ಆಗಿ ವಾರ ಕಳೆದರೂ ಮಾರಾಟ ಸಮರ್ಪಕವಾಗಿಲ್ಲ. ಹಾಗಿದ್ದರೆ ಸರಿಯಾದ ದರ ನೀತಿ ಯಾವುದು? ಸಂಸ್ಥೆಯ ಪ್ಲಾನಿಂಗ್ ಮಾಡುವವರಿಗೆ ಇದು ಗೊತ್ತಿಲ್ಲದಿದ್ದರೆ, ರಿಯಾಯಿತಿ ಪ್ರಮಾಣ ದರ ನಿರ್ಧರಣೆಯನ್ನು ಅಸಮರ್ಪಕಗೊಳಿಸುತ್ತದೆ.

ಒಂದು ವೇಳೆ ಗ್ರಾಹಕರು ನಿಮ್ಮ ಉತ್ಪನ್ನಗಳನ್ನು ಕೇವಲ ಸೋವಿಯಲ್ಲಿ ಸಿಗುತ್ತಿದೆ ಎಂಬ ಒಂದೇ ಕಾರಣಕ್ಕೆ ಖರೀದಿಸಿದರೆ, ಈ ರಣತಂತ್ರ ಯಾವತ್ತಿಗೂ ನಿಮ್ಮ ಸಂಸ್ಥೆಯ ಪ್ರಗತಿಗೆ ಪೂರಕವಾಗಿರುವುದಿಲ್ಲ.

ನಿಮ್ಮ ಸಂಸ್ಥೆಯ ಪ್ರಗತಿ ಅಥವಾ ವೈಫಲ್ಯ ಎರಡಕ್ಕೂ ನಿಮ್ಮ ಅಹಂಕಾರವೂ ಕಾರಣವಾಗಿರಬಹುದು

ನಿಮ್ಮ ಉತ್ಪನ್ನ ಅತ್ಯುತ್ತಮವಾಗಿದೆ ಎಂಬುದು ಮಾರಾಟದ ವೇಳೆಯಲ್ಲಿ ನಿಮ್ಮ ಬಾಡಿಲಾಂಗ್ವೇಜ್‌ನಿಂದಲೇ ವ್ಯಕ್ತವಾಗುತ್ತದೆ. ಒಂದು ವೇಳೆ ನಿಮ್ಮ ಉತ್ಪನ್ನ ಅತ್ಯುತ್ತಮವಾಗಿದ್ದು, ನಿಮ್ಮ ಅಪ್ರೋಚ್ ಒಬ್ಬ ಯಕಶ್ಚಿತ್ ಹಾವಿನ ವಿಷ ಮಾರುವ ಸೇಲ್ಸ್‌ ಮನ್ ಶೈಲಿಯಲ್ಲಿದ್ದರೆ ಗ್ರಾಹಕರು ನಿಮ್ಮನ್ನು ಹಾವಿನ ವಿಷ ಮಾರುವ ಸೇಲ್ಸ್ ಮನ್ ಎಂದೇ ಬಗೆಯುತ್ತಾರೆ. ಇದರಿಂದ ನೀವು ಹತಾಶರಾಗುವ ಅವಶ್ಯಕತೆ ಇಲ್ಲ.

ನಿಮ್ಮಲ್ಲಿರುವ ಯಾವುದೋ ಒಂದು ಅಹಂಕಾರವನ್ನು ವ್ಯಾವಹಾರಿಕ ಜಗತ್ತು ಸ್ವೀಕರಿಸುತ್ತಿಲ್ಲ ಹಾಗೂ ಈ ಅಹಂಕಾರದ ಕಾರಣ ನಿಮ್ಮ ಸ್ಟಾರ್ಟ್ ಅಪ್ ಸೊರಗುತ್ತದೆ ಎಂದರೆ ನೀವು ಗಂಭೀರವಾಗಿ ಚಿಂತಿಸಬೇಕಾದ ಅವಶ್ಯಕತೆ ಇದೆ.

ನಿಮ್ಮ ಉತ್ಪನ್ನ ಅಭಿವೃದ್ಧಿಯ ಜೊತೆಗೆ ಮಾರಾಟ ಚಟುವಟಿಕೆಗಳು ನಡೆಯುತ್ತಿರಬೇಕು

ನಿಮ್ಮ ಉತ್ಪನ್ನವನ್ನು ನಿರ್ಮಿಸುವ ಜೊತೆಗೆ ಅದರ ಮಾರಾಟಕ್ಕೂ ಸೂಕ್ತ ಯೋಜನೆಗಳನ್ನು ರಚಿಸಿ. ನಾನು ಗಮನಿಸಿದಂತೆ ಬಹುತೇಕ ಸ್ಟಾರ್ಟ್ ಅಪ್ ಸಂಸ್ಥೆಗಳು ಸೂಕ್ತ ಮಾರಾಟದ ನೀಲಿನಕ್ಷೆ ತಯಾರಿಸಿಕೊಳ್ಳದೇ ರಂಗಕ್ಕಿಳಿದಿರುತ್ತವೆ. ಇದೇ ಅವುಗಳ ವೈಫಲ್ಯಕ್ಕೆ ಮುಖ್ಯ ಕಾರಣವಾಗಿರುತ್ತದೆ. ಕೇವಲ ಉತ್ಪನ್ನಗಳನ್ನು ವಿನ್ಯಾಸಗೊಳಿಸಿ ಅವುಗಳ ಸಂಸ್ಥಾಪಕರು ತಮ್ಮ ರಾಕೆಟ್ ಗುರು ಗ್ರಹ ತಲುಪಲು ರೆಡಿ ಇದೆ ಎಂದುಕೊಂಡಿರುತ್ತಾರೆ. ನಿಮ್ಮ ಗ್ರಾಹಕರು ಈಗಲೇ ಗುರು ಗ್ರಹ ತಲುಪಲು ಸಿದ್ಧರಿಲ್ಲ. ಮೊದಲು ಅವರನ್ನು ಚಂದ್ರಗ್ರಹಕ್ಕೆ, ಬಳಿಕ ಮಂಗಳಕ್ಕೆ ಕರೆದೊಯ್ಯಿರಿ. ಆನಂತರ ಗುರುಗ್ರಹದ ಆಮಿಷವೊಡ್ಡಿ.

ಟ್ವಾಂಗ್ ಅನ್ನುವ ಸಂಗೀತ ಆ್ಯಪ್ ಸ್ಟಾರ್ಟ್ ಅಪ್‌ವೊಂದನ್ನು ನಾವು ವಿನ್ಯಾಸಗೊಳಿಸಿದ್ದೆವು. ಅದೀಗ ಇಲ್ಲಿವರೆಗೂ 50,000 ಇನ್‌ಸ್ಟಾಲೇಶನ್ ಕಾಣುತ್ತಿದೆ. ಈ ಆ್ಯಪ್‌ನ ಮೊತ್ತ ಮೊದಲ ಲೈನ್ ಸಾಫ್ಟ್‌ ವೇರ್ ಕೋಡಿಂಗ್ ಬರವಣಿಗೆ ಶುರುವಾಗುತ್ತಿದ್ದಂತೆ ಇದರ ಮಾರಾಟದ ಯೋಜನೆಗಳು ಸಿದ್ಧವಾಗಿದ್ದವು. ಆ್ಯಪ್ ಅಧಿಕೃತವಾಗಿ ಲಾಂಚ್ ಆಗುವ ಮೊದಲೇ ಪ್ರಸಿದ್ಧ ಗಾಯಕರು ಇದನ್ನು ಸೈನ್ ಅಪ್ ಮಾಡಿದ್ದರು.

ಪರಿಣಿತರು ಹಾಗೂ ವಿಶ್ಲೇಷಕರು ವ್ಯವಹಾರಕ್ಕೆ ಸಂಬಂಧಿಸಿದ ನಿಮ್ಮ ಸಮಸ್ಯೆಗಳನ್ನು ದೂರ ಮಾಡುತ್ತಾರೆ

ನೀವು ನಿಮ್ಮ ಸಂಸ್ಥೆಯ ಸಹಸಂಸ್ಥಾಪಕರಾದ ಮಾತ್ರಕ್ಕೆ ಮಾರಾಟ ಕಾರ್ಯಾಚರಣೆಯ ಸೂಕ್ಷ್ಮಗಳು ಹಾಗೂ ತಂತ್ರಗಳು ತಿಳಿಯದಿದ್ದರೂ ಮಾರಾಟದ ಯೋಜನೆ ಹೆಣೆಯಬೇಡಿ. ವ್ಯಾವಹಾರಿಕ ಪರಿಣಿತರು ಹಾಗೂ ತಜ್ಞ ವಿಶ್ಲೇಷಕರಿಂದ ಸೂಕ್ತ ಮಾರಾಟದ ಸಂಗತಿಗಳನ್ನು ಅರಿತುಕೊಂಡು ಮುನ್ನಡೆಯುವುದು ಒಳ್ಳೆಯ ಸಲಹೆ.

ಪೈ ಗ್ರೂಪ್ ಆಫ್ ಹೋಟೆಲ್‌ನ ಸಹ ಮಾಲೀಕ ಸುಜಯ್ ಪೈ ನನ್ನ ಸ್ನೇಹಿತರಲ್ಲೊಬ್ಬ. 90ರ ದಶಕದಲ್ಲಿ ಅವರು ದರ್ಶಿನಿ ಮಾದರಿಯ ಚಿಕ್ಕ ಹೋಟೆಲ್ ನಡೆಸುತ್ತಿದ್ದರು. ನನ್ನ ಸ್ನೇಹಿತ ಹಾಗೂ ಆತನ ಅಣ್ಣ, 3,4 ಸ್ಟಾರ್ ಹೋಟೆಲ್‌ಗಳಿಗೆ ಸಲಹೆ ನೀಡುವ ಪರಿಣಿತರನ್ನು ಸಂಪರ್ಕಿಸಿ ಸಲಹೆ ಪಡೆದುಕೊಂಡರು. ವ್ಯಾವಹಾರಿಕ ಅಭಿವೃದ್ಧಿಯ ಸಲಹೆ ಪಡೆದುಕೊಂಡ 3 ವರ್ಷಗಳ ನಂತರ ಅವರು 9 ಹೋಟೆಲ್‌ಗಳನ್ನು ನಡೆಸುತ್ತಿದ್ದಾರೆ. ಎರಡು ರಾಜ್ಯದ ಬೇರೆ ಬೇರೆ ಮುಖ್ಯ ಸ್ಥಳಗಳಲ್ಲಿ ಹೋಟೆಲ್‌ ಉದ್ಯಮ ನಡೆಸುತ್ತಿದ್ದಾರೆ.

ಭಾಗಶಃ ಯಶಸ್ಸು ಸಂಸ್ಥೆಯ ಪಾಲಿಗೆ ಮಾರಕವಾಗಲೂಬಹುದು

ಉದ್ಯಮಗಳ ಪಾಲಿನ ಕೆಲವು ಮಾರಕ ಸಂಗತಿಗಳ ಜೊತೆ ಈ ಭಾಗಶಃ ಯಶಸ್ಸು ಕೂಡ ಒಂದು. ಸ್ಟಾರ್ಟ್ ಅಪ್ ಸಂಸ್ಥೆಗಳಿಗೆ ಆರಂಭದಲ್ಲೇ ನಿರೀಕ್ಷಿತ ಯಶಸ್ಸು ಸಿಕ್ಕರೆ, ಬಳಿಕ ಪರಿಣಿತ ಸಲಹೆಗಳನ್ನು ಸ್ವೀಕರಿಸುವ ಮನಸ್ಥಿತಿಯಾಗಲಿ ಅಥವಾ ಮಾರಾಟವನ್ನು ಹೆಚ್ಚಿಸುವ ಹೊಸ ಆಲೋಚನೆಗಳಾಗಲಿ ಸಾಧ್ಯವಾಗುವುದಿಲ್ಲ. ಇದರಿಂದ ಸಂಸ್ಥೆಯ ಪ್ರಗತಿ ಕುಂಠಿತಗೊಳ್ಳುತ್ತದೆ.

ಡಿಜಿಟಲ್ ಮಾರ್ಕೆಟಿಂಗ್ ಸ್ಟಾರ್ಟ್ ಅಪ್ ಸಂಸ್ಥೆಯ ಸಹಸಂಸ್ಥಾಪಕ ನಂದನ್ ಪೂಜಾರ್ ನನ್ನ ಇನ್ನೊಬ್ಬ ಸ್ನೇಹಿತ. ನಂದನ್‌ನ ಸಂಸ್ಥೆ ಸಾಕಷ್ಟು ಸಿದ್ಧತೆಗಳನ್ನು ನಡೆಸಿಕೊಂಡು ಮಾರಾಟವನ್ನು ಹೆಚ್ಚಿಸಿಕೊಂಡಿತು. ಆದರೂ ಚಿಕ್ಕಪುಟ್ಟ ವ್ಯಾವಹಾರಿಕ ಸಲಹೆಗಳನ್ನು ಸ್ವೀಕರಿಸುವ ಮೂಲಕ ಕೆಲವೇ ವರ್ಷಗಳಲ್ಲಿ ಸ್ಥಿರತೆಯನ್ನು ಕಂಡಿತು. ಒಂದು ವೇಳೆ ಈ ಸಂಸ್ಥೆ ತನ್ನ ಆರಂಭಿಕ ಯಶಸ್ಸಿನಿಂದ ಮೈಮರೆತಿದ್ದರೆ, ಇಂದು ಈ ಸ್ಥಿತಿಯಲ್ಲಿರುತ್ತಿರಲಿಲ್ಲ ಅಥವಾ ಮಾರುಕಟ್ಟೆಯಲ್ಲೇ ಇರುತ್ತಿರಲಿಲ್ಲ.

ಮಾರಾಟ ಮಾಡುವ ಕೌಶಲ್ಯ ಹಾಗೂ ಧೈರ್ಯ

ಬ್ಯಾಂಕಿನಲ್ಲಿರುವ ಠೇವಣಿ ಅಥವಾ ಭವಿಷ್ಯ ನಿಧಿ ಕಡಿಮೆಯಾಗತೊಡಗಿದರೆ ಸಹಜವಾಗಿಯೇ ನಿಮ್ಮ ಧೈರ್ಯ ಉಡುಗುತ್ತದೆ. ಧೈರ್ಯ ಹಾಗೂ ಹಣ ಕೆಲವೇ ಜನರಲ್ಲಿ ನೇರ ಸಂಪರ್ಕ ಹೊಂದಿರುವುದಿಲ್ಲ. ಬಹುತೇಕ ಉದ್ಯಮಿಗಳಲ್ಲಿ ಇವೆರಡರ ಮಧ್ಯ ಇರುವ ಸಂಪರ್ಕ ಅವರ ವ್ಯಾವಹಾರಿಕ ಯಶಸ್ಸು ಅಥವಾ ವೈಫಲ್ಯಕ್ಕೆ ಕಾರಣವಾಗಿರುತ್ತದೆ. ನಾನು ಈ ಎರಡೂ ಅಂಶಗಳ ಮಧ್ಯೆ ಸಂಪರ್ಕ ಹೊಂದಿರದೇ ಇರುವ ಉದ್ಯಮಿ. ನಾನು ಬಹಳಷ್ಟು ಸಲ ದಿವಾಳಿಯಾಗಿದ್ದೇನೆ. ಆದರೂ ಹಣ ನನ್ನ ಧೈರ್ಯವನ್ನು ಕಡಿಮೆ ಮಾಡಿಲ್ಲ. ಹಾಗಾಗಿ ವ್ಯಾವಹಾರಿಕ ಕೌಶಲ್ಯಗಳು ಮತ್ತು ಧೈರ್ಯ ಎರಡೂ ಈ ಕ್ಷೇತ್ರದಲ್ಲಿ ಮಹತ್ವ ಪಡೆದುಕೊಳ್ಳುತ್ತದೆ. (ಇದಕ್ಕೆ ಸಂಬಂಧಿಸಿದಂತೆ ಮಾಲ್ಕಂ ಗ್ಲಾಡ್‌ವೆಲ್‌ನ ಡೇವಿಡ್ ಎಂಡ್ ಗೋಲಿಯತ್ ಪುಸ್ತಕವನ್ನು ಓದಿ)

ನಮ್ಮ ಸಾಫ್ಟ್‌ ವೇರ್ ಟೆಸ್ಟಿಂಗ್ ಸ್ಟಾರ್ಟ್ ಅಪ್ ಸಂಸ್ಥೆಯ ಗ್ರಾಹಕರು ಒಮ್ಮೆ ಕೇಳಿದ್ದರು, ಅವರಿಗೆ ಸಾಫ್ಟ್‌ ವೇರ್ ಸಂಬಂಧಿಸಿದಂತೆ ರಿಗ್ರೇಷನ್ ಟೆಸ್ಟಿಂಗ್, ಯೂಸರ್ ಅಕ್ಸಪ್ಟೆನ್ಸ್ ಟೆಸ್ಟಿಂಗ್ ಹಾಗೂ ಪರ್ಫಾಮೆನ್ಸ್ ಟೆಸ್ಟಿಂಗ್ ಅಗತ್ಯವಿದೆ. ಅದಕ್ಕೆ ಪ್ರತಿಕ್ರಿಯಿಸುತ್ತಾ ನಾನು ಹೇಳಿದ್ದೆ, ಪ್ರಾಯಶಃ ನಮ್ಮ ಸೇವೆಯಲ್ಲಿ ಈ ಎಲ್ಲಾ ಟೆಸ್ಟಿಂಗ್‌ಗಳೂ ಅಡಕವಾಗಿದೆ ಎಂದು ನೀವು ಗಮನಿಸಿಲ್ಲ ಎಂದು. ಕೂಡಲೇ ಆ ಗ್ರಾಹಕರು ನಮ್ಮ ವ್ಯಾವಹಾರಿಕ ಮೌಲ್ಯಗಳಿಗೆ ಬೆಲೆ ಕೊಟ್ಟು ಸೈನ್ ಅಪ್ ಮಾಡಿಕೊಂಡಿದ್ದರು. ನಮ್ಮ ತಂಡದಲ್ಲಿ ಕೆಲವು ಪರಿಣಿತ ಹಾಗೂ ತೃಪ್ತಿಕರ ಕಾರ್ಯ ನಿರ್ವಹಿಸಬಲ್ಲ ಪ್ರತಿಭಾವಂತರಿದ್ದಾರೆ. ಅವರು ಗ್ರಾಹಕರ ಎಲ್ಲಾ ರೀತಿಯ ಸಮಸ್ಯೆಗಳನ್ನು ಅರಿತು, ಪರಿಹರಿಸಲು ಶಕ್ತರಾಗಿದ್ದಾರೆ.

ಯಾವ ವಿಷಯಕ್ಕೆ ಮತ್ತು ಏಕೆ ನೀವು ಬೆಲೆ ತೆರಬೇಕು ಹಾಗೂ ಅದರಿಂದ ನೀವೇನು ಕಲಿಯಬಲ್ಲಿರಿ ಎಂದು ನಿಮಗೆ ನೀವೇ ಕೇಳಿಕೊಳ್ಳಿ

ಈ ಸಂದರ್ಭವನ್ನು ಗಮನಿಸಿ ನೀವೀಗ ಕಷ್ಟದ ಪರಿಸ್ಥಿತಿಯಲ್ಲಿದ್ದೀರ. ನಿಮ್ಮ ಸಂಸ್ಥೆ ಆರ್ಥಿಕವಾಗಿ ನರಳುತ್ತಿದೆ. ಆದರೂ ನೀವು ಕೆಲವು ಸಂಗತಿಗಳಿಗೆ ಬೆಲೆ ತೆರಲೇಬೇಕಾಗುತ್ತದೆ. ಏಕೆಂದರೆ ಅದರಲ್ಲಿ ಹೊಸದಾಗಿ ಕಲಿಯಬಲ್ಲ ಸಂಗತಿಗಳಿರುತ್ತವೆ.

ಉದಾಹರಣೆಗೆ, ನೀವೊಂದು ಪವರ್ ಬ್ಯಾಕ್ ಅಪ್ ಯುಪಿಎಸ್ ಖರೀದಿಸಿದಿರಿ. ಏಕೆ? ಇದು ನಿಮ್ಮ ಗ್ರಾಹಕರಿಗೆ ಯಾವುದೇ ತೊಂದರೆಯಾಗದಂತೆ, ವಿಳಂಬವಿಲ್ಲದಂತೆ ಸೇವೆ ಒದಗಿಸಲು ಸಹಕರಿಸುತ್ತದೆ. ನಿಮ್ಮ ಗ್ರಾಹಕರ ಪ್ರಮಾಣ ಹೆಚ್ಚುತ್ತಿದ್ದಂತೆ ಇಂತಹ ಕೆಲವು ಸೌಕರ್ಯಗಳನ್ನು ಹೆಚ್ಚಿಸಿಕೊಳ್ಳಲೇಬೇಕಾಗುತ್ತದೆ. ಮೊದಲು ಗ್ರಾಹಕರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಪರಿಹರಿಸಬೇಕು. ಆದ್ಯತೆ ಈ ಅಂಶಕ್ಕೆ ನೀಡಬೇಕೆ ವಿನಃ, ನೀವು ಖರೀದಿಸುವ ಪವರ್ ಬ್ಯಾಕ್ ಅಪ್‌ನ ಹೆಚ್ಚುವರಿ ಶುಲ್ಕದ ಬಗ್ಗೆ ಅಲ್ಲ.

ಅಂತಿಮವಾಗಿ...

ಛೀಫ್ ಪೀಪಲ್ ಆಫೀಸರ್ ಮೆಕಿನ್ ಮಹೇಶ್ವರಿ ಹೇಳಿದ ಮಾತು ನನಗಿನ್ನೂ ನೆನಪಿದೆ. ನಾವಿಬ್ಬರೂ ಅಂದು ಫ್ಲಿಪ್‌ಕಾರ್ಟ್‌ನ ವೆಬ್ ಹಾಗೂ ಮೊಬೈಲ್ ಆ್ಯಪ್‌ಗಳ ಟೆಸ್ಟಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೆವು. ಆ ಸಂದರ್ಭದಲ್ಲಿಯೇ ನಾನು ಮೆಕಿನ್‌ರನ್ನು ಭೇಟಿಯಾಗಿದ್ದು.(ಮೂಲ್ಯ ಸಂಸ್ಥೆಯನ್ನು ಆರಂಭಿಸುವ ಮುಂಚೆ 2011ರಲ್ಲಿ ಮೊದಲು ಇ-ಸ್ಪಾರ್ಕ್ಸ್‌ ನಲ್ಲಿ ಭೇಟಿಯಾಗಿದ್ದೆ) 2012ರಲ್ಲಿ ಫ್ಲಿಪ್‌ಕಾರ್ಟ್‌ನಲ್ಲಿ ಜೊತೆಯಾಗಿ ಕೆಲಸ ಮಾಡುವ ಅವಕಾಶ ಒದಗಿತ್ತು. ನಾವಿಬ್ಬರೂ ಜೊತೆಯಲ್ಲಿ ಕೆಲಸ ಮಾಡಿದ ಕಾರಣ ನಮ್ಮಿಬ್ಬರ ಸಾಮರ್ಥ್ಯ ಇಬ್ಬರಿಗೂ ಅರ್ಥವಾಗಿತ್ತು. ಅದೇ ಸಂದರ್ಭದಲ್ಲಿ ಮೆಕಿನ್ ಮಹೇಶ್ವರಿ, ನೀನು ಹೊಂದಿರುವ ಮೌಲ್ಯಗಳು ನಿನ್ನ ಸಂಸ್ಥೆಯನ್ನು ದೀರ್ಘಕಾಲ ಬಾಳಿಸುತ್ತವೆ ಎಂದು ಹೇಳಿದ್ದರು.

ನಾವು ಫ್ಲಿಪ್‌ಕಾರ್ಟ್‌ನೊಂದಿಗೆ ನಿರಂತರ ವ್ಯವಹಾರ ನಡೆಸಿದ್ದೇವೆ. ಫ್ಲಿಪ್‌ಕಾರ್ಟ್‌ನ ಪ್ರಗತಿಯಲ್ಲಿ ನಮ್ಮದೂ ಪಾಲಿದೆ. ಇತ್ತೀಚೆಗಷ್ಟೇ ಫ್ಲಿಪ್‌ಕಾರ್ಟ್ 1 ಬಿಲಿಯನ್ ಡಾಲರ್ ಮಾರಾಟ ಪ್ರಮಾಣ ಸಾಧಿಸಿದ್ದನ್ನು ಘೋಷಿಸಿಕೊಂಡಿತು. ಇದು ಸಹಜವಾಗಿಯೇ ನಮಗೆ ಖುಷಿ ತಂದಿದೆ. ಏಕೆಂದರೆ ಗ್ರಾಹಕರ ಪ್ರತಿಕ್ರಿಯೆ ಪರೋಕ್ಷವಾಗಿ ನಮ್ಮ ಶ್ರಮಕ್ಕೆ ಸಿಕ್ಕ ಪ್ರತಿಫಲ.

ಈ ಎಲ್ಲಾ ವಿಚಾರಗಳಲ್ಲಿ ನಾನು ಯಶಸ್ಸನ್ನು ಹೊಂದಿದ್ದರೂ, ನನ್ನ ಹೆಂಡತಿಗೆ ವ್ಯಾವಹಾರಿಕ ಪಾಠ ಹೇಳಿಕೊಡುವುದು ಕಷ್ಟವಾಗಿದೆ. ನನ್ನ ಪತ್ನಿ ಆಭರಣಗಳ ವಿನ್ಯಾಸದಲ್ಲಿ ಆಸಕ್ತಿ ಹೊಂದಿದ್ದು, ಅದರದ್ದೇ ವ್ಯವಹಾರದಲ್ಲಿ ನಿರತಳಾಗಿದ್ದಾಳೆ. ಆಕೆ ಅತ್ಯುತ್ತಮ ವಿನ್ಯಾಸಕಿಯಾದರೂ ಮಾರಾಟದ ವಿಚಾರದಲ್ಲಿ ಅಷ್ಟೇನೂ ಉತ್ತಮ ಆಲೋಚನೆಗಳನ್ನು ಹೊಂದಿಲ್ಲ. ನಾನು ಹೇಳಿದಂತೆ ಕೇಳಿದ ಪರಿಣಾಮ ಅವಳೊಂದು ಒಪ್ಪಂದ ಸಾಧಿಸಿದ್ದಾಳೆ. ಆಗ ನನಗನ್ನಿಸಿದ್ದು, ಹೆಂಡತಿಯನ್ನು ಒಪ್ಪಿಸಿದರೆ ಜಗತ್ತನ್ನು ಒಪ್ಪಿಸುವುದು ಸರಳ.

imageಲೇಖಕರು- ಪ್ರದೀಪ್ ಸುಂದರ್ ರಾಜನ್, ಮೂಲ್ಯ ಸಾಫ್ಟ್‌ ವೇರ್ ಟೆಸ್ಟಿಂಗ್ ಸ್ಟಾರ್ಟ್ ಅಪ್‌ನ ಸಂಸ್ಥಾಪಕರು ಹಾಗೂ ಸಿಇಓ

ಅನುವಾದಕರು- ವಿಶ್ವಾಸ್

Add to
Shares
0
Comments
Share This
Add to
Shares
0
Comments
Share
Report an issue
Authors

Related Tags