24x7 ಆರೋಗ್ಯಕ್ಕಾಗಿ 24x7 ಸೇವೆ ನೀಡುವ ಆ್ಯಪ್..!

ಟೀಮ್​ ವೈ.ಎಸ್​. ಕನ್ನಡ

24x7 ಆರೋಗ್ಯಕ್ಕಾಗಿ 24x7 ಸೇವೆ ನೀಡುವ ಆ್ಯಪ್..!

Wednesday July 27, 2016,

3 min Read

ಇಂದಿನ ಬ್ಯುಸಿ ಜೀವನ ವಿಧಾನದಲ್ಲಿ ಯಾವಾಗ ಏನು ಆರೋಗ್ಯದ ಸಮಸ್ಯೆ ಕಾಡುತ್ತದೆ ಅನ್ನೋದನ್ನ ಹೇಳಲು ಆಗುವುದಿಲ್ಲ. ನಗರ ಜೀವನದ ವ್ಯವಸ್ಥೆ, ಬ್ಯುಸಿ ಜೀವನದಿಂದಾಗಿ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಲೇ ಇವೆ. ಕುಳಿತಲ್ಲಿಯೇ ವೈದ್ಯರ ಸಲಹೆ, ಸೂಚನೆ ಮತ್ತು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಆನ್ ಲೈನ್ ನಲ್ಲಿ ಜಾಲಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇಷ್ಟಾದರೂ ಸರಿಯಾದ ಮಾಹಿತಿ , ಸಲಹೆ ಸಿಗುತ್ತದೆ ಎಂಬ ಗ್ಯಾರಂಟಿ ಇಲ್ಲ. ಇನ್ನು ಕೆಲವು ವೆಬ್​ಸೈಟ್​ಗಳು ಕಷ್ಟವನ್ನೇ ಬಂಡವಾಳ ಮಾಡಿಕೊಂಡು ಸರಿಯಾಗಿ ಟೋಪಿ ಹಾಕುತ್ತವೆ.

image


ಯಾವುದೇ ಸಮಯದಲ್ಲಿ ಕುಳಿತಲ್ಲಿಯೇ ಪರಿಣತ ವೈದ್ಯರ ಸಲಹೆ ಸಿಗುವಂತಹ ಸೌಲಭ್ಯ ಇರಬೇಕೆಂಬ ಅನೇಕರ ಆಶಯ. ಈಗ ನಿಜವಾಗಿದೆ. ಹೌದು doctor24x7 ಹೆಸರಿನ ಮೊಬೈಲ್‌ ಆ್ಯಪ್‌ ಇಂತಹ ಅಗತ್ಯಗಳನ್ನು ಪೂರೈಸಲಿದೆ. ಅದು ಯಾವ ಸಮಯದಲ್ಲಿ ಬೇಕಾದರೂ, ಅಂದರೆ 24x7 ಅವಧಿಯಲ್ಲೂ ಸೇವೆ ನೀಡುವ ಅಪರೂಪದ ಆ್ಯಪ್ ಇದಾಗಿದೆ.

ನಗರಗಳಲ್ಲಿನ ನೊಂದಣೆಯಾಗಿರುವಂತಹ ಅರ್ಹ ಮತ್ತು ಅನುಭವಿ ವೈದ್ಯರು, ಪರಿಣಿತ ತಜ್ಞ ವೈದ್ಯರು ಈ ಆ್ಯಪ್‌ ಮೂಲಕ ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ಸೂಕ್ತ ಸಲಹೆ ನೀಡಲಿದ್ದಾರೆ. 2015ರ ನವೆಂಬರ್‌ನಲ್ಲಿ ಈ ಸೌಲಭ್ಯ ಬಳಕೆಗೆ ಬಂದಿದ್ದು, ಇಲ್ಲಿಯವರೆಗೆ ಬಳಕೆದಾರರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ.

ಐಟಿಸಿ, ಪೆಪ್ಸಿಕೊ ಕಂಪನಿಗಳಲ್ಲಿ ಉನ್ನತ ಹುದ್ದೆ ನಿಭಾಯಿಸಿ ಕ್ರಮವಾಗಿ 13 ವರ್ಷ ಸಿಗರೇಟ್‌, 7 ವರ್ಷ ತಂಪು ಪಾನೀಯ ಮಾರಾಟ ಮಾಡಿದ, ಇಎಸ್‌ಪಿಎನ್‌ ಸ್ಟಾರ್‌ ಸ್ಪೋರ್ಟ್ಸ್‌ನ ವ್ಯವಸ್ಥಾಪಕ ನಿರ್ದೇಶಕರಾಗಿಯೂ ಕೆಲಸ ಮಾಡಿರುವ ಅಲೋಕ್‌ ಮಲಿಕ್‌ ಅವರು ಈ ಸ್ಟಾರ್ಟ್‌ಅಪ್‌ನ ಸ್ಥಾಪಕರು. ಈ ಸ್ಟಾರ್ಟ್‌ಅಪ್‌ನ ಆರಂಭದಲ್ಲಿ ಸ್ವಂತ ಹಣ ಹೂಡಿಕೆ ಮಾಡಿರುವ ಅಲೋಕ್‌, ಉದ್ದಿಮೆಯ ವಿಸ್ತರಣೆಗೆ ಇತರ ಮೂಲಗಳಿಂದ ಸಂಪನ್ಮೂಲ ಸಂಗ್ರಹಿಸಲು ಈಗ ಮುಂದಾಗಿದ್ದಾರೆ.

image


ಲಕ್ಷಾಂತರ ಡಾಲರ್ ಸಂಬಳವಿದ್ದ ಹುದ್ದೆ ತೊರೆದು ಮೂರು ವರ್ಷದ ಹಿಂದೆ ಸಮಾಜಕ್ಕೆ ಇನ್ನಷ್ಟು ಉಪಯುಕ್ತವಾಗುವ ಸೇವಾ ಉದ್ದಿಮೆ ಸ್ಥಾಪಿಸುವ ಬಗ್ಗೆ ಅಲೋಕ್‌ ನಿರ್ಧರಿಸಿದ್ದರು. ಕೆಲಸದ ಒತ್ತಡದಿಂದ ತಮ್ಮ ತಂದೆ ತಾಯಿಗೆ ಸಕಾಲದಲ್ಲಿ ವೈದ್ಯಕೀಯ ನೆರವು ಕಲ್ಪಿಸಲು ಸಾಧ್ಯವಾಗದ ಅಸಹಾಯಕತೆಯೇ ಈ ವಿಶಿಷ್ಟ ಸ್ಟಾರ್ಟ್‌ಅಪ್‌ ಸ್ಥಾಪಿಸಲು ಅಲೋಕ್‌ ಅವರಿಗೆ ಪ್ರೇರಣೆಯಾಗಿದೆ.

ಇದನ್ನು ಓದಿ: ಪ್ರಚಾರ ಸಿಕ್ಕಿದ್ದು ಕಬಾಲಿಯಿಂದ- ಬೇಡಿಕೆ ಇರುವುದು ಗಣಪತಿಗೆ..!

ಅಮೆರಿಕ, ಯೂರೋಪ್ ಮತ್ತು ಆಸ್ಟ್ರೇಲಿಯಾದಂತಹ ರಾಷ್ಟ್ರಗಳಲ್ಲಿ ಇಂತಹ ಟೆಲಿ ಮೆಡಿಸಿನ್‌ ಉದ್ದಿಮೆ ದೊಡ್ಡದಾಗಿ ಬೆಳೆದಿದೆ. ಭಾರತದಲ್ಲಿಯೂ ಇಂತಹ ಉದ್ದಿಮೆ ಬೆಳೆಯಲು ವಿಪುಲ ಅವಕಾಶಗಳಿವೆ ಎಂಬುದು ಅಲೋಕ್ ಮಲಿಕ್ ಅವರ ಅಭಿಪ್ರಾಯ.

ದೊಡ್ನ ದೊಡ್ಡ ನಗರಗಳಲ್ಲಿ ವೈದ್ಯರನ್ನು ಸುಲಭವಾಗಿ ಭೇಟಿಯಾಗಲು ಸಾಧ್ಯವಿಲ್ಲ. ಭೇಟಿಗೆ ದಿನ, ಸಮಯವನ್ನು ಮುಂಚಿತವಾಗಿಯೇ ನಿಗದಿ ಮಾಡಬೇಕು. ವೈದ್ಯರ ಹತ್ತಿರ ಹೋಗಿ ಬರಲು 2ರಿಂದ 3 ಗಂಟೆಗಳಷ್ಟು ಸಮಯ ಬೇಕಾಗುವುದರ ಜತೆಗೆ ಹೋಗಿ ಬರಲು ಸಾಕಷ್ಟು ಹಣವನ್ನೂ ವೆಚ್ಚ ಮಾಡಬೇಕಾಗುತ್ತದೆ. ಕೆಲ ಕಾಯಿಲೆಗಳಿಗೆ ವೈದ್ಯರನ್ನು ಮುಖತಃ ಭೇಟಿಯಾಗುವ ಅವಶ್ಯಕತೆಯೂ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ನಮ್ಮ ಆ್ಯಪ್ ಸಹಕಾರಿಯಾಗಲಿದೆ ಎಂದು ಅಲೋಕ್ ಮಲಿಕ್ ತಮ್ಮ ಸ್ಟಾರ್ಟ್ ಆ್ಯಪ್ ಬಗ್ಗೆ ವಿವರಿಸುತ್ತಾರೆ.

image


ತುರ್ತು ಸಂದರ್ಭಗಳಲ್ಲಿ ಸಣ್ಣ ಪುಟ್ಟ ಕಾಯಿಲೆಗಳಿಗೆ, ಕೆಲ ನಿರ್ದಿಷ್ಟ ಪ್ರಕರಣಗಳಲ್ಲಿ ಪರಿಣತರ ಸಲಹೆ ಪಡೆಯಲು ಮೊಬೈಲ್‌ ಮೂಲಕವೇ ವೈದ್ಯರನ್ನು ಸಂಪರ್ಕಿಸುವುದು ಹೆಚ್ಚು ಉಪಯುಕ್ತ ಎನ್ನುವ ಸಂದರ್ಭಗಳಲ್ಲಿ ಈ ಆ್ಯಪ್‌ ಹೆಚ್ಚು ಉಪಯುಕ್ತವಾಗಿರಲಿದೆ.

"ಈಗಂತೂ ಯುವ ಸಮೂಹ ಕೆಲಸದ ಒತ್ತಡದಲ್ಲಿ ದಿನ ದೂಡುವಂತಾಗಿದೆ. ದುಡಿಯುವುದು ಅನಿವಾರ್ಯ ಕರ್ಮ ಆಗಿರುವುದರಿಂದ ಮನೆಯಲ್ಲಿ ಇರುವ ವೃದ್ಧ ತಂದೆ – ತಾಯಿಯರಿಗೆ ಸಕಾಲದಲ್ಲಿ ವೈದ್ಯರ ಸಲಹೆ ದೊರೆಯುವಂತಾಗಲು ಈ ಆ್ಯಪ್ ಸಹಕಾರಿಯಾಗಲಿದೆ. ಕುಟುಂಬದಿಂದ ದೂರ ಇರುವ ಯುವಕ – ಯುವತಿಯರಲ್ಲಿ ಮತ್ತು ಹೊತ್ತಲ್ಲದ ಹೊತ್ತಿನಲ್ಲಿ ಎಳೆಯ ಮಕ್ಕಳಲ್ಲಿ ಕಾಣುವ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು, ಪ್ರವಾಸ ಮತ್ತಿತರ ಕಾರಣಗಳಿಗೆ ಇತರ ನಗರಗಳಿಗೆ ಭೇಟಿ ನೀಡಿದಾಗ ವೈದ್ಯರಿಂದ ಸಲಹೆ ಪಡೆಯಲು ಈ ಆ್ಯಪ್‌ ಆಪತ್ಬಾಂಧವನಂತೆ ಕೆಲಸ ಮಾಡುತ್ತದೆ. ದುಡಿಯುವ ಮಹಿಳೆಯರಿಗೆ, ಅವಿಭಕ್ತ ಕುಟುಂಬಗಳ ಗೃಹಿಣಿಯರಿಗೂ ಇದರಿಂದ ಹೆಚ್ಚು ಪ್ರಯೋಜನ ಇದೆ"
- ಅಲೋಕ್‌, ಸಂಸ್ಥಾಪಕರು

 ಆ್ಯಪ್‌ನಲ್ಲಿ ಮೊದಲಿಗೆ ಲಭ್ಯ ಇರುವ ವೈದ್ಯರು ತಕ್ಷಣಕ್ಕೆ ಸ್ಪಂದಿಸುತ್ತಾರೆ. ಇಂಗ್ಲಿಷ್‌, ಹಿಂದಿ ಮತ್ತು ಸ್ಥಳೀಯ ಭಾಷೆಗಳಲ್ಲೂ ವೈದ್ಯರು ರೋಗಿ ಜತೆ ಸಂವಹನ ನಡೆಸುತ್ತಾರೆ. ಜನರು ಮತ್ತು ವೈದ್ಯರ ಮಧ್ಯೆ ಸಂಪರ್ಕ ಕೊಂಡಿ ಬೆಸೆಯುವ ತಂತ್ರಜ್ಞಾನ ಹೊಂದಿಸುವುದು ಸವಾಲಿನ ಕೆಲಸ ವಾಗಿತ್ತು. ವೈದ್ಯರ ಸಲಹೆ ಪಡೆಯಲು ಯಾವುದೇ ಕಾಲ ಮಿತಿ ನಿಗದಿ ಮಾಡಿಲ್ಲ. ಕಾಯಿಲೆಯ ಲಕ್ಷಣ ಆಧರಿಸಿ ವೈದ್ಯರು ಸೂಕ್ತ ಸಲಹೆ ನೀಡುತ್ತಾರೆ. ತುರ್ತು ಸಂದರ್ಭಗಳಲ್ಲಿಯೂ ಸೂಕ್ತವಾಗಿ ಮಾರ್ಗದರ್ಶನ ಮಾಡಲಿದ್ದಾರೆ.

‘₹ 200 ಹಣ ಪಾವತಿಸಿ ಹೆಸರು ನೋಂದಾಯಿಸಿದ ನಂತರ ಈ ಸೇವೆ ಪಡೆಯಬಹುದು. ರಕ್ತ ಮತ್ತಿತರ ಪರೀಕ್ಷೆಗಳ ವಿವರಗಳನ್ನು ವೈದ್ಯರ ಗಮನಕ್ಕೆ ತಂದು ಸಲಹೆ ಪಡೆಯಬಹುದು. ಸದ್ಯಕ್ಕೆ ಧ್ವನಿ ಆಧಾರಿತ ಸೇವೆ ದೇಶದಾದ್ಯಂತ ಲಭ್ಯ ಇದೆ. ಮೂರು ತಿಂಗಳಲ್ಲಿ ವಿಡಿಯೊ ಸೇವೆ ಕೂಡ ಆರಂಭಿಸಲಾಗುವುದು. ಮಾಹಿತಿಗೆ ಅಂತರ್ಜಾಲ ತಾಣ doctor24X7.com ಕ್ಕೆ ಭೇಟಿ ನೀಡಬಹುದು. ಪ್ಲೇ ಸ್ಟೋರ್ ನಲ್ಲೂ ಈ ಆ್ಯಪ್ ಲಭ್ಯವಿದೆ. 

ಇದನ್ನು ಓದಿ:

1. ಪರಿಸರ ಉಳಿಸಲು ಹೊಸ ಪ್ಲಾನ್​- ಎಲೆಕ್ಟ್ರಿಕ್​ ಕಾರುಗಳನ್ನು ಬಳಸುವ ಚಿಂತನೆ

2. ಅಂದು ಕೂಲಿ, ಇಂದು 5 ಕಂಪನಿಗಳ ಒಡೆಯ!

3. ಲಾಜಿಸ್ಟಿಕ್​ ಉದ್ಯಮಕ್ಕೆ ಹೊಸ ಕಿಕ್- ಲಾರಿ ಮಾಲೀಕರ ಮನಗೆದ್ದ "Blackbuck"​​