ಆವೃತ್ತಿಗಳು
Kannada

ದಾವಣಗೆರೆಯಲ್ಲಿ ಬೆಣ್ಣೆ ದೋಸೆಗಿಂತಲೂ ಫೇಮಸ್ ‘ಗಂಗಾವತಿ ಎಕ್ಸ್​​ಪೋರ್ಟ್ಸ್’..!

ಟೀಮ್​ ವೈ.ಎಸ್​​.

7th Nov 2015
Add to
Shares
2
Comments
Share This
Add to
Shares
2
Comments
Share

ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಅಂತ ಎಲ್ಲರೂ ಬಯಸ್ತಾರೆ. ಆದ್ರೆ ಸಾವಿರಾರು ಕಷ್ಟಗಳ ನಡುವೆ ಕೆಲವರಿಗೆ ಬದುಕೋದೆ ದೊಡ್ಡ ಸಾಧನೆಯಾಗಿಬಿಡುತ್ತದೆ, ಅಂತಹ ಬದುಕಿನಲ್ಲಿಯೂ ಕನಸಿನ ಬೆನ್ನು ಹತ್ತಿ ಅದರಲ್ಲಿ ಯಶಸ್ವಿಯಾದ ಅಪರೂಪದ ಮಹಿಳೆ ಗಿರಿಜಾ ಜಿ. ಪಾವಟೆ. ಕರ್ನಾಟಕದ ಕುಗ್ರಾಮವೊಂದರಲ್ಲಿ ಹುಟ್ಟಿ ಇದೀಗ ಜಗತ್ತೇ ತನ್ನತ್ತ ಬೆರಗಾಗುವಂತೆ ದಿಟ್ಟಿಸುವಂತೆ ಮಾಡಿದ ಸಾಧಕಿ.

ಗಿರಿಜಾ ಜಿ.ಪಾವಟೆ. ಕರ್ನಾಟಕ ರಾಜ್ಯದ ಜಿಲ್ಲೆಯೊಂದರಲ್ಲಿ ಸಾಧಾರಣ ಕುಟುಂಬವೊಂದರಲ್ಲಿ ಹುಟ್ಟಿ ಬೆಳೆದ ಮಹಿಳೆ. ಆದ್ರೆ ಅವರು ಮಾಡಿದ ಸಾಧನೆ ಮಾತ್ರ ಅಸಾಧಾರಣ. ದಾವಣಗೆರೆಯಿಂದ ಬೆಂಗಳೂರು ಬಸ್ಸು ಹತ್ತಿ ಬಂದ ಗಿರಿಜಾ ಬದುಕು ಮಹಾನಗರದದಿಂದ ಮರಳಬೇಕಾದರೆ ತನ್ನ ದಿಕ್ಕನ್ನೇ ಬದಲಾಯಿಸಿ ಬಿಟ್ಟಿತ್ತು. ಸಣ್ಣದೊಂದು ಯೋಜನೆಯೊಂದಿಗೆ ಗಂಗಾವತಿ ಎಕ್ಸ್​​ಪೋರ್ಟ್ಸ್​​​ನ್ನು ಆರಂಭಿಸಿದ ಗಿರಿಜಾ ಎಲ್ಲರೂ ನೋಡುನೋಡುವಷ್ಟರಲ್ಲಿ ಆಗಸದೆತ್ತರಕ್ಕೆ ಬೆಳೆದು ಬಿಟ್ಟಿದ್ದರು..ಸಾಧಿಸಿದರೆ ಸಬಲವನ್ನೂ ಮಾಡಬಹುದು ಅನ್ನೋ ಮಾತು ಗಿರಿಜಾ ಪಾಲಿಗೆ ಅಕ್ಷರಶಃ ನಿಜವಾಗಿತ್ತು.

image


ದಾವಣಗೆರೆಯ ಸಣ್ಣ ಹಳ್ಳಿಯೊಂದರಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಗಿರಿಜಾ ಡಾಕ್ಟರ್ ಆಗಬೇಕೆಂಬ ಕನಸು ಕಂಡಿದ್ದರು. ಆದ್ರೆ ಪೋಷಕರು ತುಂಬಾ ಚಿಕ್ಕ ವಯಸ್ಸಿನಲ್ಲಿಯೇ ಗಿರಿಜಾ ಮದುವೆ ಮಾಡಿದ ಕಾರಣ ಅವರ ಕನಸುಗಳೆಲ್ಲಾ ಕಮರಿಹೋಗಿದ್ದವು. ದಿನಚರಿ ಅನ್ನೋದು ಗಂಡ, ಅಡುಗೆ ಮನೆ, ಕುಟುಂಬ ಎಂಬುಂದಕ್ಕಷ್ಟೇ ಸೀಮಿತವಾಗಿತ್ತು.

‘ನಾನು ಗಂಡ ಮತ್ತು ಕುಟುಂಬ ಎಲ್ಲವನ್ನೂ ಸಂಬಾಳಿಸಿಕೊಂಡು ಕಾಲೇಜಿಗೆ ಹೋಗಬೇಕೆಂದು ನಿರ್ಧರಿಸಿದೆ. ಆದ್ರೆ ಅದು ತುಂಬಾ ಕಷ್ಟಕರವಾಗಿತ್ತು. ಹೀಗಾಗಿ ನಾನು ನನ್ನ ಮಕ್ಕಳಿಗಾದರೂ ಉತ್ತಮ ವಿದ್ಯಾಭ್ಯಾಸ ನೀಡಬೇಕು ಅನ್ನೋದನ್ನು ಮನಸ್ಸಿನಲ್ಲಿಯೇ ತೀರ್ಮಾನಿಸಿದೆ’ ಹೀಗೆ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾರೆ ಗಿರಿಜಾ.

ಸ್ವತಃ ತನಗೆ ಆಂಗ್ಲ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಪಡೆಯಲು ಸಾಧ್ಯವಾಗದಿದ್ದರೂ ಗಿರಿಜಾ ತನ್ನ ಮಕ್ಕಳನ್ನು ಆಂಗ್ಲ ಮಾಧ್ಯಮಕ್ಕೆ ಸೇರಿಸಿ ವಿದ್ಯಾಭ್ಯಾಸ ಕೊಡಿಸಿದ್ರು. ಅವ್ರ ಅಭಿವೃದ್ಧಿಯಲ್ಲಿಯೇ ತನ್ನ ಖುಷಿಯನ್ನು ಗುರುತಿಸಿಕೊಂಡರು. ಮಕ್ಕಳಿಗೆ ಸ್ಕೂಲ್ ಹೋಂವರ್ಕ್ ಹೇಳಿ ಕೊಡುತ್ತಲೇ ತಾವೂ ಕೂಡಾ ಸಾಕಷ್ಟು ವಿಚಾರಗಳನ್ನು ತಿಳಿದುಕೊಂಡರು. ‘ಯಾವುದೇ ಕಾರ್ಯದಲ್ಲಾಗಲಿ ಮನಸ್ಸನ್ನು ಸಂಪೂರ್ಣವಾಗಿ ತೊಡೆಗಿಸಿಕೊಂಡರೆ ಯಾವುದೂ ಅಸಾಧ್ಯವಲ್ಲ’ ಅನ್ನೋದು ಗಿರಿಜಾ ಜಿ.ಪಾವಟೆ ನಂಬಿಕೆ.

ಗಿರಿಜಾ ಪತಿ ದಾವಣಗೆರೆಯಲ್ಲಿ ಸೀರೆಗಳ ಮಳಿಗೆ ನಡೆಸುತ್ತಿದ್ದರು. ಗಿರಿಜಾ ಕುಟುಂಬವನ್ನು ನೋಡಿಕೊಳ್ಳುತ್ತಿದ್ದರೆ, ಗಂಡ ಸೀರೆ ಉದ್ಯಮವನ್ನು ನಿರ್ವಹಿಸುತ್ತಿದ್ದರು. ಕೇವಲ ಗಂಡ, ಮಕ್ಕಳ ಆರೈಕೆ, ಸಂಬಂಧಿಕರ ಉಪಚಾರ ಇಷ್ಟಕ್ಕೇ ಗಿರಿಜಾ ಬದುಕು ಸೀಮಿತವಾಗಿತ್ತು. ಏನಾದರೂ ಸಾಧನೆ ಮಾಡಬೇಕು ಎಂಬುದರ ಬಗ್ಗೆಯೂ ಯೋಚಿಸಲೂ ಸಾಧ್ಯವಾಗದಂತಹ ಬಿಡುವಿಲ್ಲದ ಬದುಕು..

ಬೆಂಗಳೂರಿಗೆ ಬರುವ ವರೆಗೂ ಗಿರಿಜಾ ತಾನೂ ಒಬ್ಬ ಉದ್ಯಮಿಯಾಗುತ್ತೇನೆ ಅಂತ ಕನಸಲ್ಲೂ ಅಂದುಕೊಂಡಿರಲ್ಲಿಲ್ಲವಂತೆ. ಆದ್ರೆ ದಾವಣಗೆರೆಯಿಂದ ಬೆಂಗಳೂರಿನ ವರೆಗಿನ ಪಯಣ ಗಿರಿಜಾ ಬದುಕಲ್ಲಿ ಮಹತ್ತರ ತಿರುವನ್ನೇ ತಂದುಕೊಟ್ಟಿತ್ತು. ಬೆಂಗಳೂರಿಗೆ ಆಗಮಿಸಿದ್ದ ಗಿರಿಜಾ ಶಾಪಿಂಗ್ ನಡೆಸುತ್ತಿದ್ದ ಸಂದರ್ಭದಲ್ಲಿ ಮಹಿಳೆಯರಿಗೆ ನಾನಾರೀತಿಯ ಡಿಸೈನ್, ಗುಣಮಟ್ಟದ ಒಳಉಡುಪುಗಳು ಲಭ್ಯವಿರೋದನ್ನು ಗಮನಿಸಿದ್ರು. ಆದ್ರೆ ಇಷ್ಟು ವೈವಿಧ್ಯಮಯ ಒಳಉಡುಪುಗಳ ಲಭ್ಯತೆ, ಮಾರಾಟ ಯಾವುದೂ ಗ್ರಾಮದಲ್ಲಿ ಇಲ್ಲ ಅನ್ನೋದು ಕೂಡಾ ಗಿರಿಜಾ ಗಮನಕ್ಕೆ ಬಂತು.

ದಾವಣಗೆರೆಯಲ್ಲಿ ಸಣ್ಣ ಗ್ರಾಮವಾಗಿರುವ ಗಿರಿಜಾ ಊರಿನಲ್ಲಿ ಮಹಿಳಾ ಒಳಉಡುಪುಗಳ ಖರೀದಿಗೆ ಸೂಕ್ತ ಮಳಿಗೆಗಳಿರಲ್ಲಿಲ್ಲ.. ಬಟ್ಟೆ ಮಳಿಗೆಗಲ್ಲಿ ಗಂಡಸರೇ ಇರುತ್ತಾರೆ ಎಂಬ ಕಾರಣಕ್ಕೆ ಅಲ್ಲಿಗೆ ತೆರಳಿ ಒಳಉಡುಪುಗಳ ಖರೀದಿಗೆ ಮಹಿಳೆಯರು ಹಿಂಜರಿಯುತ್ತಿದ್ದರು, ಉಡುಪುಗಳ ಮಳಿಗೆಗೆ ಪ್ರವೇಶಿಸಿ ಒಳಉಡುಪುಗಳನ್ನು ಆಯ್ಕೆ ಮಾಡಿಕೊಳ್ಳಲು ಕೂಡಾ ಮುಜುಗರ ಪಡುತ್ತಿದ್ದರು. ಈ ಬಗ್ಗೆ ಮನಸ್ಸಿನಲ್ಲೇ ಚಿಂತಿಸಿದ ಗಿರಿಜಾ, ಗ್ರಾಮದಲ್ಲಿ ಎಲ್ಲಾ ಮಹಿಳೆಯರಿಗೆ ವೈವಿಧ್ಯಮಯ, ಉತ್ತಮ ಗುಣಮಟ್ಟದ ಮಹಿಳಾ ಒಳಉಡುಪುಗಳು ಸುಲಭವಾಗಿ ದೊರಕುವಂತೆ ಮಾಡಬೇಕು ಎಂಬ ತೀರ್ಮಾನಕ್ಕೆ ಬಂದರು..

ಹೀಗಾಗಿ ತಮ್ಮ ಗಂಡನ ಸೀರೆ ಮಳಿಗೆಯಲ್ಲಿಯೇ ಮಹಿಳಾ ಒಳಉಡುಪುಗಳನ್ನುಮಾರಾಟ ಮಾಡಲು ತೀರ್ಮಾನಿಸಿದ್ರು..ಈ ವಿಷಯದ ಬಗ್ಗೆ ಕುಟುಂಬ ಸದಸ್ಯರ ಜತೆ ಚರ್ಚೆ ಕೂಡಾ ನಡೆಸಿದ್ರು..ಮಳಿಗೆಯಲ್ಲಿ ಮಾರಾಟ ಮಾಡುವುದಕ್ಕಿಂತ ಪ್ರಸ್ತುತವಾಗಿ ಹೆಚ್ಚು ಪ್ರಚಲಿತದಲ್ಲಿರುವ ಆನ್​​ಲೈನ್​​ನಲ್ಲಿ ಮಹಿಳಾ ಒಳ ಉಡುಪುಗಳನ್ನು ಮಾರಾಟ ಮಾಡಿದರೆ ಹೇಗೆ ಎಂಬ ಆಲೋಚನೆ ಗಿರಿಜಾ ಮನಸ್ಸಿನಲ್ಲಿ ಬಂತು..ಇದು ಮಹಿಳೆಯರಿಗೆ ಒಳಉಡುಪುಗಳನ್ನು ಆಯ್ಕೆ ಮಾಡಿಕೊಳ್ಳಲು ಅನುಕೂಲ ಮತ್ತು ಆರಾಮದಾಯಕ ಅನ್ನೋ ದೃಷ್ಟಿಯಿಂದ ಆನ್​ಲೈನ್​​​ನಲ್ಲಿ ಒಳಉಡುಪುಗಳ ಮಾರಾಟಕ್ಕೆ ಗಿರಿಜಾ ರೂಪುರೇಷೆ ಸಿದ್ಧಗೊಳಿಸಿದ್ರು..

‘ಇತ್ತೀಚಿನ ದಿನಗಳಲ್ಲಿ ಕಂಪ್ಯೂಟರ್​​ನಲ್ಲಿ ಕೆಲಸ ಮಾಡುವುದರಲ್ಲಿ ಎಲ್ಲರೂ ತೊಡಗಿಕೊಂಡಿದ್ದಾರೆ. ನನ್ನ ಗ್ರಾಮದಲ್ಲಿಯೂ ಜನರು ಉತ್ತಮ ಕಂಪ್ಯೂಟರ್​​ಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಆದ್ರೆ ಉತ್ತಮ ಒಳಉಡುಪುಗಳನ್ನಲ್ಲ. ಹೀಗಾಗಿ ನಾನು ಇವೆರಡನ್ನೂ ಜತೆಯಾಗಿಸಲು ಹೊರಟೆ. ಆನ್​​ಲೈನ್​​ನಲ್ಲಿ ಮಹಿಳಾ ಒಳಉಡುಪುಗಳು ಲಭ್ಯವಾಗುವಂತೆ ಮಾಡುವುದು ನನ್ನ ಉದ್ದೇಶವಾಗಿತ್ತು’ ಅಂತಾರೆ ಗಿರಿಜಾ.

ಆದ್ರೆ ಇಷ್ಟೆಲ್ಲಾ ಚಿಂತಿಸುವಾಗ ಗಿರಿಜಾಗೆ ಈ ವೆಬ್​​ಸೈಟ್​​ನ್ನು ಕಾರ್ಯಗತಗೊಳಿಸುವುದು ಮಾತ್ರ ಅಷ್ಟು ಸುಲಭವಲ್ಲ ಅನ್ನೋದು ಸ್ಪಷ್ಟವಾಯ್ತು. ಆದ್ರೆ ಅದೇನು ಅಡೆತಡೆ ಬಂದ್ರೂ ಗಿರಿಜಾ ಮನಸ್ಸಿನಲ್ಲಿ ಯೋಜನೆ ನಿಚ್ಚಳವಾಗಿತ್ತು. ಮನಸ್ಸಿದ್ದರೆ ಮಾರ್ಗವಿದೆ ಎಂಬುದು ಕೂಡಾ ಸ್ಪಷ್ಟವಾಗಿತ್ತು. ಹೀಗಾಗಿ ಶೀಘ್ರವೇ ದಾವಣಗೆರೆಯ ತಮ್ಮ ಗ್ರಾಮದಲ್ಲಿಯೇ ಈ ಯೋಜನೆಗೆ ಚಾಲನೆ ನೀಡಲು ಗಿರಿಜಾ ತೀರ್ಮಾನಿಸಿದ್ರು..ಗಿರಿಜಾ ಕನಸನ್ನು ಸಾಕಾರಗೊಳಿಸಲು ಮಗ ಕೂಡಾ ನೆರವಾದ. ಮಹಿಳಾ ಒಳಉಡುಪುಗಳ ಮಾರಾಟಕ್ಕೆ ಆನ್​ಲೈನ್ ಶಾಪಿಂಗ್ ವೆಬ್​ಸೈಟ್​​ನ್ನು ಆರಂಭಿಸಿ ಅಗತ್ಯ ತಂತ್ರಜ್ಞಾನವನ್ನು ಅಳವಡಿಸಿದ. ಮನೆಯ ಸದಸ್ಯರು ಗಿರಿಜಾ ಯೋಜನೆಗೆ ಬೆಂಬಲಿಸಿದ್ರು.

ಈ ರೀತಿ ಮಹಾನಗರದಲ್ಲಿ ಹುಟ್ಟಿ ಬೆಳೆದ ಸಣ್ಣದೊಂದು ಯೋಜನೆ, ಯೋಜನೆಯಾಗಲು ಹೆಚ್ಚು ದಿನಗಳೇನು ಬೇಕಾಗಲಲ್ಲಿಲ್ಲ.. ಸಣ್ಣದೊಂದು ಚಿಂತನೆಯಿಂದ ಹುಟ್ಟಿಕೊಂಡ ಗಂಗಾವತಿ ಎಕ್ಸ್​​ಪೋರ್ಟ್ಸ್​​ ಜೀವ ಪಡೆದುಕೊಂಡಿತು. ಗಿರಿಜಾ ಬದುಕಿನಲ್ಲಿ ಹೊಸ ಅಧ್ಯಾಯವೊಂದರ ಉದಯವಾಯಿತು.

ಗ್ರಾಮೀಣ ಭಾಗದ ಯುವತಿಯರಿಗೆ, ಮಹಿಳೆಯರಿಗೆ ವೈವಿಧ್ಯಮಯ ರೀತಿಯ ಉತ್ತಮ ಗುಣಮಟ್ಟದ ಒಳಉಡುಪುಗಳನ್ನು ಕಡಿಮೆ ಬೆಲೆಯಲ್ಲಿ ಒದಗಿಸುವುದು ಗಿರಿಜಾ ಅವ್ರ ಮುಖ್ಯ ಉದ್ದೇಶವಾಗಿತ್ತು. ಆದ್ರೆ ಇವುಗಳನ್ನು ನಗರದಿಂದ ಗ್ರಾಮಕ್ಕೆ ಕೊಂಡೊಯ್ಯುವುದು, ಆನ್​ಲೈನ್ ಮೂಲಕ ಗ್ರಾಹಕರನ್ನು ತಲುಪಿಸುವುದು ಮಾತ್ರ ಅಷ್ಟು ಸುಲಭವಾಗಿರಲ್ಲಿಲ್ಲ. ಸಮರ್ಪಕ ರಸ್ತೆ ವ್ಯವಸ್ಥೆ ಇಲ್ಲದ ಗ್ರಾಮಗಳಲ್ಲಿ ಗ್ರಾಹಕರನ್ನು ತಲುಪುವುದೇ ಕಷ್ಟಕರವಾಗಿತ್ತು..ಹೀಗಿದ್ರೂ ಗಿರಿಜಾ ಧೃತಿಗೆಡಲ್ಲಿಲ್ಲ.

ಸ್ಪೀಡ್​ಪೋಸ್ಟ್ ಮೂಲಕ ಶೀಘ್ರವಾಗಿ ಉತ್ಪನ್ನ ಗ್ರಾಹಕರಿಗೆ ತಲುಪುವಂತೆ ಮಾಡಲು ತೀರ್ಮಾನಿಸಿದ್ರು.. ಆದ್ರೆ ಗ್ರಾಮೀಣ ಭಾಗಗಳಿಗೆ ಈ ಪೋಸ್ಟ್ ತಲುಪಲು ದಿನಗಳೇ ತಗಲುತ್ತಿದ್ದವು. ಇನ್ನೇನು ಈ ಆನ್​ಲೈನ್ ಮಳಿಗೆಯನ್ನು ಮುಂದುವರೆಸುವುದು ಕಷ್ಟ ಅಂತನಿಸಿದ್ರೂ ಗಿರಿಜಾ ಪಟ್ಟು ಬಿಡಲ್ಲಿಲ್ಲ..ಗ್ರಾಮೀಣ ಭಾಗಗಳಲ್ಲಿ ಸ್ಥಳೀಯ ಕೊರಿಯರ್ ಕಂಪೆನಿಗಳ ಪರಿಚಯ ಮಾಡಿಕೊಂಡರು. ಈ ಸಣ್ಣ ಸಣ್ಣ ಕೊರಿಯರ್ ಕಚೇರಿಗಳ ಸಹಾಯದಿಂದ ಪೋಸ್ಟ್ ಸುಲಭವಾಗಿ ಗ್ರಾಹಕರನ್ನು ತಲುಪಲು ಸಾಧ್ಯವಾಯಿತು..ಮಹಿಳಾ ಒಳಉಡುಪುಗಳು ಸುಲಭವಾಗಿ ಕೈ ಸೇರುವುದರಿಂದ ಗ್ರಾಮದ ಮಹಿಳೆಯರ ಮುಜುಗರವೂ ತಪ್ಪಿತು..ಗಿರಿಜಾ ಸಾಧನೆಯನ್ನು ಎಲ್ಲರೂ ಶ್ಲಾಘಿಸಿದ್ರು..

ಗಂಗಾವತಿ ಎಕ್ಸ್​​ಪೋರ್ಟ್ಸ್ ಯಶಸ್ವಿಯಾಗಿ ಮುಂದೆ ಸಾಗುತ್ತಿರುವಾಗಲೇ ಆನ್​ಲೈನ್ ಶಾಪಿಂಗ್ ತಾಣ ‘ಇಬೇ’ ಗಿರಿಜಾ ಸಾಧನೆಗೆ ಸಾಥ್ ನೀಡಿತು. ‘ಇಬೇ’ಯಲ್ಲಿ ಗಿರಿಜಾ ವ್ಯಾಪಾರ ವಹಿವಾಟು ಮತ್ತಷ್ಟು ಚುರುಕು ಪಡೆದುಕೊಂಡಿತು. ಗಂಗಾವತಿ ಎಕ್ಸ್​​ಪೋರ್ಟ್ಸ್​​​ಗೆ ಆಮದು, ಬೇಡಿಕೆ ಹೆಚ್ಚಾಗಲು ಶುರುವಾದ ಕೂಡಲೇ ಸಂಸ್ಥೆಯನ್ನು ಮುನ್ನಡೆಸಲು ಗಿರಿಜಾ ಗ್ರಾಮದ ಮಹಿಳೆಯರನ್ನೂ ಭಾಗಿಗೊಳಿಸಲು ಮುಂದಾದ್ರು. ಮಹಿಳಾ ಒಳಉಡುಪುಗಳ ಕೊಳ್ಳುವಿಕೆ, ಮಾರಾಟ ಮಹಿಳೆಯರಿಂದಲೇ ಆದಾಗ ಇದು ಇನ್ನಷ್ಟು ಆರಾಮದಾಯಕವೆನಿಸತು..

ಗಿರಿಜಾ ಸಾಧನೆ ಹಲವು ಸಂಘ-ಸಂಸ್ಥೆಗಳು ಬೆರಗಾದವು..ಗ್ರಾಮೀಣ ಮಹಿಳೆಯೊಬ್ಬಳು ಇಂತಹ ಮಹತ್ತರ ಸಾಧನೆಯನ್ನೂ ಮಾಡಲು ಸಾಧ್ಯವಿದೆಯಾ ಅಂತ ಅಚ್ಚರಿ ವ್ಯಕ್ತಪಡಿಸಿದ್ರು. ‘ಇಬೇ’ ಪ್ರಶಸ್ತಿ ಕಿರೀಟ ಕೂಡಾ ಗಿರಿಜಾ ಪಾಲಿಗೆ ಒಲಿದುಬಂತು. ಇಬೇ ನೀಡುವ "ಶೀ ಮೀನ್ಸ್ ಬಿಸಿನೆಸ್ ಕಾಂಟೆಸ್ಟ್"ನ 9 ವಿಜೇತರಲ್ಲಿ ಗಿರಿಜಾ ಜಿ.ಪಾವಟೆ ಕೂಡಾ ಒಬ್ಬರಾಗಿದ್ದಾರೆ. ಸಣ್ಣದೊಂದು ಯೋಜನೆಯೊಂದಿಗೆ ಗಂಗಾವತಿ ಎಕ್ಸ್​​ಪೋರ್ಟ್ಸ್​​​ ಆರಂಭಿಸಿದ ದಾವಣಗೆರೆಯ ಗಿರಿಜಾ ಜಿ.ಪಾವಟೆ ಸಾಧನೆ ನಿಜಕ್ಕೂ ಎಲ್ಲರೂ ಹುಬ್ಬೇರಿಸುವಂತೆ ಮಾಡಿತು.

ಸಾಧನೆಗೆ ಬಡತನ, ವಯಸ್ಸು ಯಾವುದರ ಹಂಗಿಲ್ಲ ಅನ್ನೋದನ್ನು ಗಿರಿಜಾ ಜಿ.ಪಾವಟೆ ನಿರೂಪಿಸಿದ್ರು. ಇವತ್ತು ಕೇವಲ ದಾವಣಗೆರೆ ಮಾತ್ರವಲ್ಲದೆ ದೇಶಾದ್ಯಂತ, ಅಷ್ಟೇ ಯಾಕೆ ಜಗತ್ತಿನಾದ್ಯಂತ ಗಂಗಾವತಿ ಎಕ್ಸ್​​ಪೋರ್ಟ್ಸ್ ಪ್ರಸಿದ್ಧಿಯಾಗಿದೆ. ಕುಗ್ರಾಮದಲ್ಲಿ ಹುಟ್ಟಿ ಬೆಳೆದ ಗಿರಿಜಾ ಸಾಧನೆ ವಿಶ್ವಾದ್ಯಂತ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ..

Add to
Shares
2
Comments
Share This
Add to
Shares
2
Comments
Share
Report an issue
Authors

Related Tags