ಆವೃತ್ತಿಗಳು
Kannada

ರೊಟ್ಟಿ ಮಾಡುವ ರೋಬೋಟ್...

ಟೀಮ್​ ವೈ.ಎಸ್. ಕನ್ನಡ

21st Dec 2015
Add to
Shares
0
Comments
Share This
Add to
Shares
0
Comments
Share

ಪ್ರನೊತಿ ನಗರ್ಕರ್ ಅವರಿಗೆ ಸರಳೀಕರಣದಲ್ಲಿ ಅಪಾರ ನಂಬಿಕೆ. ತಮ್ಮ ವೈಯಕ್ತಿಕ ತತ್ವವನ್ನು ಸರಳಗೊಳಿಸುವುದು ಹಾಗೂ ತಮ್ಮ ತಂಡಕ್ಕೆ ಮಾರ್ಗದರ್ಶನ ಮಾಡುವ ಮೂಲಕ ಪ್ರನೊತಿ `ರೋಟಿಮ್ಯಾಟಿಕ್' ಅನ್ನು ಹುಟ್ಟುಹಾಕಿದ್ದಾರೆ. `ರೋಟಿಮ್ಯಾಟಿಕ್', `ಜಿಂಪ್ಲಿಸ್ಟಿಕ್'ನ ಒಂದು ಉತ್ಪನ್ನ. ಆರೋಗ್ಯಕರ ರೊಟ್ಟಿಗಳನ್ನು ತಯಾರಿಸುವ ಏಕೈಕ ರೋಬೋಟ್ ಇದು. ವಿಶೇಷ ಅಂದ್ರೆ `ರೋಟಿಮ್ಯಾಟಿಕ್' ರೋಬೋಟ್ ಒಂದೇ ಸ್ಪರ್ಷದಲ್ಲಿ ರೊಟ್ಟಿಗಳನ್ನು ಸುರುಳಿ ಸುತ್ತಬಲ್ಲ ಸಾಮರ್ಥ್ಯ ಹೊಂದಿದೆ. ಆಗಷ್ಟೇ ಪ್ರನೊತಿ ಅವರಿಗೆ ಮದುವೆಯಾಗಿತ್ತು, ಮನೆಯಲ್ಲಿ ಆರೋಗ್ಯಕರವಾದ ಅಡುಗೆ ಮಾಡಬೇಕು ಅನ್ನೋದು ಅವರ ಬಯಕೆ. ಆದ್ರೆ ಒಂದ್ಕಡೆ ವೃತ್ತಿ, ಇನ್ನೊಂದ್ಕಡೆ ಮನೆ ಕೆಲಸದ ಮಧ್ಯೆ ಬಿಡುವು ಸಿಗುತ್ತಿರಲಿಲ್ಲ. ಇದೇ ಕಾರಣಕ್ಕೆ ಪ್ರನೊತಿ ತಾವೇ ಈ ರೋಬೋಟ್ ಅನ್ನು ಆವಿಷ್ಕರಿಸಿದ್ದಾರೆ. 2015ರ ಜುಲೈನಲ್ಲಿ ಅವರ `ಜಿಂಪ್ಲಿಸ್ಟಿಕ್' ಸಂಸ್ಥೆ 11.5 ಮಿಲಿಯನ್ ಡಾಲರ್ ಬಂಡವಾಳದ ನೆರವನ್ನು ಪಡೆದಿದೆ.

ಸ್ಥಾಪನೆಯ ವರ್ಷಗಳು...

ಪ್ರನೊತಿ ಅವರದ್ದು ಎಂಜಿನಿಯರ್‍ಗಳ ಕುಟುಂಬ ಅಂದ್ರೆ ತಪ್ಪಾಗಲಾರದು. ಹಾಗಾಗಿ ಸಂಶೋಧಕಿಯಾಗಬೇಕು ಅನ್ನೋ ಆಸೆ ಮೊದಲಿನಿಂದಲೂ ಪ್ರನೊತಿ ಅವರಿಗಿತ್ತು. ಒಂದು ವಿಧದಲ್ಲಿ ತಮ್ಮ ತಂದೆ-ತಾಯಿ ಇಬ್ಬರು ಕೂಡ ಉದ್ಯಮಿಗಳು ಎನ್ನುತ್ತಾರೆ ಪ್ರನೊತಿ. ಅಮ್ಮ ಕ್ರಿಯಾಶೀಲ ಮಹಿಳೆ, ಅದ್ಭುತ ಚಿತ್ರ ಕಲಾವಿದೆ. ತಮ್ಮದೇ ಸ್ವಂತ ಇಂಟೀರಿಯರ್ ಡಿಸೈನಿಂಗ್ ಕನ್ಸಲ್ಟೆನ್ಸಿಯನ್ನು ಅವರು ನಡೆಸುತ್ತಿದ್ದಾರೆ. ಹತ್ತಾರು ಪ್ರಶಸ್ತಿಗಳು ಅವರನ್ನು ಅರಸಿ ಬಂದಿವೆ. ಸದ್ಯ ಅವರು ಗಣಿತ ಶಿಕ್ಷಕಿಯಾಗಿಯೂ ಕರ್ತವ್ಯ ನಿರ್ವಹಿಸ್ತಿದ್ದಾರೆ. ಇನ್ನು ಪ್ರನೊತಿ ಅವರ ತಂದೆ ಅತ್ಯಂತ ತಾರ್ಕಿಕ, ಮತ್ತು ಪ್ರಾಯೋಗಿಕ ಮನಸ್ಥಿತಿ ಉಳ್ಳವರು. ಯಂತ್ರಗಳ ವಿನ್ಯಾಸದ ಮೂಲಕ ಅವರು ವೃತ್ತಿ ಜೀವನ ಆರಂಭಿಸಿದ್ರು. 50ರ ಹರೆಯದಲ್ಲೇ ತಮ್ಮದೇ ಸ್ವಂತ ಉದ್ಯಮವೊಂದನ್ನು ಆರಂಭಿಸಿದ್ರು. ತಂದೆ ತಾಯಿ ಇಬ್ಬರ ವಿಚಾರಧಾರೆ, ಸೃಜನಶೀಲತೆ ಮತ್ತು ಕೌಶಲ್ಯ ತಮಗೆ ವರವಾಗಿ ಬಂದಿದೆ ಎನ್ನುತ್ತಾರೆ ಪ್ರನೊತಿ. ಅವರು ಹುಟ್ಟಿ ಬೆಳೆದದ್ದೆಲ್ಲ ಪುಣೆಯಲ್ಲಿ. ಯುವ ವಿದ್ಯಾರ್ಥಿವೇತನವನ್ನು ಗಿಟ್ಟಿಸಿಕೊಂಡಿದ್ದ ಅವರು, ನ್ಯಾಶನಲ್ ಕಾಲೇಜಿನಲ್ಲಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಸಿಂಗಾಪುರಕ್ಕೆ ತೆರಳಿದ್ರು. ಮೆಕ್ಯಾನಿಕಲ್ ಎಂಜಿನಿಯರಿಂಗ್‍ನಲ್ಲಿ ಪದವಿ ಪಡೆದ ಪ್ರನೊತಿ, ಸಿಂಗಾಪುರದ ರಾಷ್ಟ್ರೀಯ ವಿಶ್ವವಿದ್ಯಾನಿಲಯದಲ್ಲಿ ಪ್ರಾಡಕ್ಟ್ ಡಿಸೈನ್ ವಿಭಾಗಕ್ಕೆ ಸೇರಿಕೊಂಡ್ರು.

image


`ರೋಟಿಮ್ಯಾಟಿಕ್'ನ ಆವಿಷ್ಕಾರ...

ಖ್ಯಾತ ಗ್ರಾಹಕ ಬ್ರಾಂಡ್ ಜೊತೆಗೆ ವೃತ್ತಿ ಆರಂಭಿಸಿದ ಪ್ರನೊತಿ ಅವರಿಗೆ, ಎಲ್ಲಾ ವರ್ಗದ ಜನರನ್ನು ಸೆಳೆಯುವಂಥದ್ದನ್ನೇನಾದ್ರೂ ಮಾಡಬೇಕೆಂಬ ಕನಸಿತ್ತು. ಜೊತೆಗೆ ಜನರ ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಗುರಿಯಿತ್ತು. ಹಾಗಾಗಿ 2008ರಲ್ಲಿ ಪ್ರನೊತಿ `ಜಿಂಪ್ಲಿಸ್ಟಿಕ್' ಆರಂಭಿಸಿದ್ರು. ವಿಶ್ವದ ಮೊಟ್ಟ ಮೊದಲ ಸಂಪೂರ್ಣ ಸ್ವಯಂ ಚಾಲಿತ ರೊಟ್ಟಿ ತಯಾರಿಸುವ ರೋಬೋಟ್ `ರೋಟಿಮ್ಯಾಟಿಕ್'ಗಾಗಿ ಅವರು ಕೂಡಿಟ್ಟಿದ್ದ ಹಣ, ಸಮಯವನ್ನೆಲ್ಲ ಮೀಸಲಾಗಿಟ್ಟಿದ್ದರು. ಕಳೆದ 7 ವರ್ಷಗಳಿಂದ ಪ್ರನೊತಿ ಮತ್ತವರ ತಂಡ ಸಂಸ್ಥೆಯ ಯಶಸ್ಸಿಗಾಗಿ ಹಗಲಿರುಳು ಶ್ರಮಿಸುತ್ತಿದೆ. ಇದರ ಫಲವಾಗಿ `ಇಂಟೆಲ್ ಬಕ್ರ್ಲಿ ಟೆಕ್ನಾಲಜೀಸ್ ಎಂಟರ್‍ಪ್ರೆನ್ಯೂರ್‍ಶಿಪ್ ಚಾಲೆಂಜ್'ನಲ್ಲಿ ಜಿಂಪ್ಲಿಸ್ಟಿಕ್ `ಸ್ಟಾರ್ಟ್‍ಅಪ್ @ ಸಿಂಗಪೂರ್' ಅನ್ನೋ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಬೆಳವಣಿಗೆ ಪ್ರಕ್ರಿಯೆಯನ್ನು ಅರಿಯಲು ಪ್ರನೊತಿ 2 ವರ್ಷಗಳ ಕಾಲ ಪ್ರಾಡಕ್ಟ್ ಡಿಸೈನ್ ಕನ್ಸಲ್ಟೆನ್ಸಿಯಲ್ಲಿ ಕೆಲಸ ಮಾಡಿದ್ದಾರೆ. ಆ ಸಮಯದಲ್ಲೇ ಅವರೇನು ಮಾಡಬೇಕೆಂದುಕೊಂಡಿದ್ರೋ ಅದೆಲ್ಲಾ ಐಡಿಯಾಗಳನ್ನು ಪಟ್ಟಿ ಮಾಡಿಟ್ಟುಕೊಂಡಿದ್ರು. ಮೊದಲಿನಿಂದ್ಲೂ ಅವರಿಗೆ ಆರೋಗ್ಯದ ಬಗ್ಗೆ ವಿಪರೀತ ಕಾಳಜಿ. ಮದುವೆಯ ನಂತರ ಬ್ಯುಸಿ ಲೈಫ್‍ನಲ್ಲೂ ಆರೋಗ್ಯಕರ ಆಹಾರ ತಿನ್ನುವುದು ಹೇಗೆ ಅನ್ನೋ ಸಾಮೂಹಿಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಅವರು ತೀರ್ಮಾನಿಸಿದ್ರು.

`ರೋಟಿಮ್ಯಾಟಿಕ್' ಭವಿಷ್ಯ...

ನಿಮಿಷಕ್ಕೆ ಒಂದು ರೊಟ್ಟಿಗಳಂತೆ, ರೋಟಿಮ್ಯಾಟಿಕ್ ಒಂದು ಬಾರಿ 20 ರೊಟ್ಟಿಗಳನ್ನು ತಯಾರಿಸಬಲ್ಲದು. ರೊಟ್ಟಿಗೆ ಬೇಕಾದ್ರೆ ಎಣ್ಣೆ ಹಾಕಬಹುದು, ರೋಸ್ಟ್ ಮಾಡಬಹುದು ಅಥವಾ ಮೆದುವಾಗಿ ಬೇಕಾದ್ರೂ ಬೇಯಿಸಬಹುದು. `ರೋಟಿಮ್ಯಾಟಿಕ್' ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮುನ್ನ ಪ್ರನೊತಿ ಪ್ರಿ-ಆರ್ಡರ್ ಕ್ಯಾಂಪೇನ್ ನಡೆಸಿದ್ರು. ಆಗ ಸಾವಿರಾರು ಗ್ರಾಹಕರು ರೋಟಿಮ್ಯಾಟಿಕ್ ಕೊಳ್ಳಲು ಮುಂದಾಗಿದ್ದು ವಿಶೇಷ. ಸದ್ಯ 35ಕ್ಕೂ ಹೆಚ್ಚು ಸಿಬ್ಬಂದಿ ಪ್ರನೊತಿ ಅವರ ಜೊತೆ ಕಾರ್ಯನಿರ್ವಹಿಸುತ್ತಿದ್ದಾರೆ. ಉತ್ತಮ ಕೆಲಸ ಮಾಡುವ ಮನೋಭಾವದ ಜೊತೆಗೆ ನಾವೀನ್ಯದ ಪ್ರಬಲ ಸಂಸ್ಕøತಿ ನಿರ್ಮಾಣ ಹಾಗೂ ಒಂದು ಕುಟುಂಬದಂತಹ ವಾತಾವರಣ ನಿರ್ಮಿಸಿದಾಗ ಮಾತ್ರ `ರೋಟಿಮ್ಯಾಟಿಕ್'ನಂತಹ ಉತ್ಪನ್ನಗಳ ಸಂಶೋಧನೆ ಸಾಧ್ಯ ಅನ್ನೋದು ಪ್ರನೊತಿ ಅವರ ಅಭಿಪ್ರಾಯ. ಅಮೆರಿಕದಲ್ಲಿ ವಾಸಿಸುತ್ತಿರುವ ಭಾರತೀಯರಿಂದ ಈ ರೋಬೋಟ್‍ಗೆ ಭಾರೀ ಬೇಡಿಕೆ ಬಂದಿದೆ. ರೊಟ್ಟಿ ಪಥ್ಯದ ಆಹಾರ, ಆದ್ರೆ ಅದನ್ನು ಮಾಡಲು ಸಮಯ ಹಿಡಿಯುತ್ತೆ. ರೋಟಿಮ್ಯಾಟಿಕ್ ಇದ್ರೆ ಪ್ರತಿದಿನ ಅವರು ತಾಜಾ ರೊಟ್ಟಿಗಳನ್ನು ತಿನ್ನಬಹುದು. ದಕ್ಷಿಣ ಅಮೆರಿಕ, ಇಥಿಯೋಪಿಯಾ, ಇಟಲಿ ಸೇರಿದಂತೆ ವಿಶ್ವದ ಬಹುತೇಕ ಕಡೆಗಳಲ್ಲಿ ಮಿಲಿಯನ್‍ಗಟ್ಟಲೆ ಕುಟುಂಬದವರು ಫ್ಲಾಟ್‍ಬ್ರೆಡ್‍ಗಳನ್ನು ಸೇವಿಸುತ್ತಾರೆ. ಮುಂದಿನ ದಿನಗಳಲ್ಲಿ ರೋಟಿಮ್ಯಾಟಿಕ್ ಮೂಲಕ ಬ್ರೆಡ್ ತಯಾರಿಸುವ ತಂತ್ರಜ್ಞಾನ ಆವಿಷ್ಕರಿಸಲು ಪ್ರನೊತಿ ಮುಂದಾಗಿದ್ದಾರೆ.

ತಂತ್ರಜ್ಞಾನದಲ್ಲಿ ಮಹಿಳೆ...

ಹಾರ್ಡ್‍ವೇರ್ ಉತ್ಪನ್ನವೊಂದು ತಯಾರಿಸುವುದು ಮಹಿಳೆಯರ ಪಾಲಿಗೆ ಕೊಂಚ ಅಸಹಜವಾದ ಪ್ರಕ್ರಿಯೆ. ಪ್ರನೊತಿ ಮುಖ್ಯ ತಾಂತ್ರಿಕ ಅಧಿಕಾರಿ ಅನ್ನೋದು ಯಾರಿಗೂ ಗೊತ್ತಿರಲಿಲ್ಲ, ಆಕೆ ಸೇಲ್ಸ್ ಅಥವಾ ಮಾರ್ಕೆಟಿಂಗ್ ವಿಭಾಗದಲ್ಲಿ ಕೆಲಸ ಮಾಡ್ತಿದ್ದಾರೆ ಅಂತಾನೇ ಎಲ್ಲರೂ ಭಾವಿಸಿದ್ರು. ತಾವು ವಿಭಿನ್ನ ಅನ್ನೋದನ್ನು ತೋರಿಸಿಕೊಳ್ಳಲು ಪ್ರನೊತಿ ಮೋಟರ್‍ಬೈಕ್ ಚಲಾಯಿಸಿಕೊಂಡು ಸಭೆಗಳಿಗೆ ಬರ್ತಾ ಇದ್ರಂತೆ. ಗರ್ಭಿಣಿಯಾಗಿದ್ದಾಗ ಕೂಡ ಪ್ರನೊತಿ ಕೆಲಸ ನಿರ್ವಹಿಸುತ್ತಿದ್ರು. ಸ್ತ್ರೀ ಸಹಜ ಗುಣಗಳನ್ನು ನಾವು ಬಿಟ್ಟುಕೊಡಬೇಕಾಗಿಲ್ಲ, ಇದು ಕೇವಲ ಪುಲ್ಲಿಂಗ ಮತ್ತು ಸ್ತ್ರೀಲಿಂಗದ ನಡುವಣ ಸಮತೋಲನ ಕಾಯ್ದುಕೊಳ್ಳುವಿಕೆ ಅನ್ನೋದು ಅವರ ಅಭಿಪ್ರಾಯ. ಹೊಂದಾಣಿಕೆ ಮಾಡಿಕೊಳ್ಳುವ ಬದಲು ನೂರಕ್ಕೆ ನೂರರಷ್ಟು ಪ್ರಯತ್ನ ಅತ್ಯಗತ್ಯ ಅನ್ನೋದು ಅವರ ಅನುಭವದ ಮಾತು. `ಜಿಂಪ್ಲಿಸ್ಟಿಕ್'ನ ಸಹಸಂಸ್ಥಾಪಕರು ಬೇರೆ ಯಾರೂ ಅಲ್ಲ, ಅವರ ಪತಿ ರಿಶಿ ಇಸ್ರಾನಿ. ಆರಂಭದಿಂದ್ಲೂ ಈ ಪಯಣಕ್ಕೆ ಅವರು ಜೊತೆಯಾಗಿದ್ದಾರೆ. ಆರೋಗ್ಯಕರ ಕುಟುಂಬಕ್ಕಾಗಿ ಒಂದು ಅದ್ಭುತ ರೆಸ್ಟೋರೆಂಟ್ ಆರಂಭಿಸುವ ಯೋಚನೆ ರಿಶಿ ಅವರಿಗಿತ್ತು. ನೀವು ಜೊತೆಯಾಗಿ ಬದುಕುತ್ತ, ಜೊತೆಯಾಗಿ ಕೆಲಸ ಮಾಡುತ್ತಿದ್ರೆ, ಸಮಯದ ಮಿತಿಯೇ ಇರುವುದಿಲ್ಲ ಎನ್ನುತ್ತಾರೆ ಪ್ರನೊತಿ. ಅವರವರ ಶಕ್ತಿ ಸಾಮಥ್ರ್ಯಕ್ಕೆ ಅನುಗುಣವಾಗಿ ಕೆಲಸ ಮಾಡಬೇಕು ಅನ್ನೋದು ಅವರ ಅಭಿಮತ.

ಮೊದಲು ತಮ್ಮ ಅಡುಗೆ ಮನೆಯಲ್ಲೇ ಪ್ರನೊತಿ `ರೋಟಿಮ್ಯಾಟಿಕ್' ಅನ್ನು ಪ್ರಯೋಗ ಮಾಡಿದ್ದಾರೆ. ಆರೋಗ್ಯಕರ ಆಹಾರ ಸೇವಿಸಬೇಕೆಂಬ ಅವರ ಉದ್ದೇಶವೂ ಈಡೇರಿದೆ. ಇಚ್ಛೆಯನ್ನು ಅರಿತು ನಡೆವ ಪತಿ, ಮುದ್ದು ಮಗ, ಸ್ವಂತ ಉದ್ಯಮ ಇದರ ಜೊತೆಗೆ ರೋಟಿಮ್ಯಾಟಿಕ್ ತಮ್ಮ ದಿನನಿತ್ಯದ ಕುಕ್ಕಿಂಗ್‍ನ ಭಾಗವಾಗಿದೆ ಅಂತಾ ಪ್ರನೊತಿ ಖುಷಿಯಾಗಿ ಹೇಳಿಕೊಳ್ತಾರೆ. ಆರೋಗ್ಯವೇ ಭಾಗ್ಯ ಅನ್ನೋದನ್ನು ಅರಿತ ಅವರು ರೊಟ್ಟಿ ಮಾಡುವ ರೋಬೋಟ್ ಮೂಲಕ ಸಾರ್ವಜನಿಕರಿಗೆ ನೆರವಾಗಿದ್ದಾರೆ.

ಲೇಖಕರು : ಸ್ಮೃತಿ ಮೋದಿ

ಅನುವಾದಕರು : ಭಾರತಿ ಭಟ್

Add to
Shares
0
Comments
Share This
Add to
Shares
0
Comments
Share
Report an issue
Authors

Related Tags