ಆವೃತ್ತಿಗಳು
Kannada

ರಿಪೇರ್ ಕೆಫೆ- ಹಳೆಯ ವಸ್ತುಗಳಿಗೆ ನ್ಯೂ ಟಚ್​​​..!

ವಿಶಾಂತ್​​​

VISHANTH
6th Dec 2015
Add to
Shares
1
Comments
Share This
Add to
Shares
1
Comments
Share
image


ಮೊಬೈಲ್ ಹಾಳಾದ್ರೆ ಮೊಬೈಲ್ ರಿಪೇರಿ ಅಂಗಡಿಗೆ ಹೋಗ್ಬೇಕು, ಅಡುಗೆ ಮನೆಯ ಮಿಕ್ಸಿ ಅಥವಾ ಡಿವಿಡಿ ಪ್ಲೇಯರ್ ಹಾಳಾದ್ರೆ ಎಲೆಕ್ಟ್ರಾನಿಕ್ ವಸ್ತುಗಳ ರಿಪೇರಿ ಅಂಗಡಿ ಹೋಗ್ಬೇಕು, ಕ್ಯಾಮರಾ ಹಾಳಾದ್ರೆ ಕ್ಯಾಮರಾ ರಿಪೇರಿ ಅಂಗಡಿಗೆ ಹಾಗೂ ಬಟ್ಟೆ ಹರಿದ್ರೆ ಅಥವಾ ಬ್ಯಾಗ್ ಜಿಪ್ ಕಿತ್ತುಹೋದ್ರೆ ಟೇಲರ್ ಅಂಗಡಿಗೆ ಹೋಗ್ಬೇಕು. ಸಾಮಾನ್ಯವಾಗಿ ಹಾಳಾದ ದುಬಾರಿಯಲ್ಲದ ವಸ್ತುಗಳನ್ನು ಸರಿ ಮಾಡಿಸಲು ರಿಪೇರಿ ಅಂಗಡಿಯನ್ನು ಹುಡುಕಿಕೊಂಡು ಹೋಗೋದು, ಬಳಿಕ ರಿಪೇರಿಯಾದ ನಂತರ ವಾಪಸ್ ತೆಗೆದುಕೊಂಡು ಬರೋದು, ಅಷ್ಟೇ ಯಾಕೆ ರಿಪೇರಿಯಾದ ವಸ್ತು ಎಷ್ಟು ದಿನ ಬಳಕೆಗೆ ಬರುತ್ತೆ ಅನ್ನೋ ಅನುಮಾನ ಹಾಗೂ ಆ ವಸ್ತುಗಳು ಮತ್ತೆ ಕೆಡುವ ಭಯದಿಂದ ಹಲವರು ಹಾಳಾದ ವಸ್ತುಗಳನ್ನು ರಿಪೇರಿಗೆ ಕೊಡುವ ಗೋಜಿಗೇ ಹೋಗೋದಿಲ್ಲ. ಹೀಗೆ ರಿಪೇರಿ ಮಾಡಿಸದೇ ಹಾಗೇ ಇಟ್ಟ ಹಲವು ವಸ್ತುಗಳು ಎಲ್ಲರ ಮನೆಯಲ್ಲೂ ದೊರೆಯುತ್ತವೆ. ಕೆಲವೊಮ್ಮೆ ಇಂತಹ ವಸ್ತುಗಳು ಇದ್ದರೆಷ್ಟು, ಬಿಟ್ಟರೆಷ್ಟು ಅಂತ ಗುಜರಿ ಅಂಗಡಿ ಸೇರೋದೂ ಉಂಟು. ಅಂಥವರ ಸಹಾಯಕ್ಕಾಗಿಯೇ ಬಂದಿದೆ ರಿಪೇರ್ ಕೆಫೆ...

image


ಏನಿದು ರಿಪೇರ್ ಕೆಫೆ?

ಈ ರಿಪೇರ್ ಕೆಫೆಯಲ್ಲಿ ಎಲ್ಲಾ ಬಗೆಯ ವಸ್ತುಗಳನ್ನೂ ರಿಪೇರಿ ಮಾಡುವ ನುರಿತ ಮಂದಿಯನ್ನು ಒಂದೇ ಜಾಗದಲ್ಲಿ ನೋಡಬಹುದು. ಈ ಮೂಲಕ ಹರಿದ ಬಟ್ಟೆ, ಹಾಳಾದ ಮಿಕ್ಸಿ ಮತ್ತು ಕ್ಯಾಮರಾ... ಹೀಗೆ ಎಲ್ಲಾ ವಸ್ತುಗಳನ್ನೂ ಒಂದೇ ಬಾರಿ ತಂದು, ಒಂದೇ ಜಾಗದಲ್ಲಿ ಇರುವ ಎಲೆಕ್ಟ್ರೀಶಿಯನ್, ಟೈಲರ್ ಬಳಿಕ ಕೊಟ್ಟು 2ರಿಂದ 3 ತಾಸುಗಳಲ್ಲಿ ರಿಪೇರಿ ಮಾಡಿಸಿಕೊಂಡು ಹೋಗಬಹುದು. ಈ ಪರಿಕಲ್ಪನೆಯೇ ರಿಪೇರ್ ಕೆಫೆ.

ಯೂರೋಪ್, ಅಮೆರಿಕಾ ಹಾಗೂ ದಕ್ಷಿಣ ಏಷ್ಯಾದಲ್ಲಿ ಹೆಚ್ಚು ಪ್ರಚಲಿತವಿರುವ ರಿಪೇರ್ ಕೆಫೆ, ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲೂ ಆಯೋಜಿಸಲಾಗಿತ್ತು. ಭಾರತದಲ್ಲೇ ಇದೇ ಮೊದಲ ಬಾರಿಗೆ ಈ ಪರಿಕಲ್ಪನೆಯನ್ನು ಬೆಂಗಳೂರಿನಲ್ಲಿ ಪರಿಚಯಿಸಿದವರು ಸಿವಿಲ್ ಎಂಜಿನಿಯರ್ ಪೂರ್ಣಾ ಸರ್ಕಾರ್ ಹಾಗೂ ಅಂತರಾ ಮುಖರ್ಜಿ ಎಂಬ ಇಬ್ಬರು ಮಹಿಳೆಯರು. ಈ ಮೂಲಕ ಭಾರತ ರಿಪೇರ್ ಕೆಫೆ ಅಳವಡಿಸಿಕೊಂಡ ವಿಶ್ವದ 20ನೇ ರಾಷ್ಟ್ರ ಎಂಬ ಖ್ಯಾತಿಯನ್ನೂ ಪಡೆದಿದೆ.

image


ಬೆಂಗಳೂರಿನಲ್ಲೂ ನಡೀತು ರಿಪೇರ್ ಕೆಫೆ!

ಎಮ್‍ಜಿ ರಸ್ತೆಯ ರಂಗೋಲಿ ಮೆಟ್ರೋ ಆವರಣದಲ್ಲಿ ಈ ರಿಪೇರ್ ಕೆಫೆ ನಡೀತು. ಸುಮಾರು 25ಕ್ಕೂ ಹೆಚ್ಚು ಮಂದಿ ಮನೆಯ ಮೂಲೆ ಅಥವಾ ಅಟ್ಟ ಸೇರಿದ್ದ ಕ್ಯಾಮರಾ, ಬಟ್ಟೆ, ಮಿಕ್ಸಿ ಸೇರಿದಂತೆ ಹಾಳಾದ ಹಲವು ಉಪಕರಣಗಳು ಮತ್ತು ವಸ್ತುಗಳನ್ನು ತಂದು ಇಲ್ಲಿ ರಿಪೇರಿ ಮಾಡಿಸಿಕೊಂಡ್ರು. ಒಂದೇ ಜಾಗದಲ್ಲಿ ಹಲವು ಬಗೆಯ ವಸ್ತುಗಳನ್ನು ರಿಪೇರಿ ಮಾಡಿಸಿಕೊಂಡ ಖುಷಿ ಅವರದು. ಹಾಗೇ ವಿದ್ಯುತ್ ಉಪಕರಣಗಳನ್ನು ರಿಪೇರಿಗೆ ಕೊಟ್ರೆ 2 ದಿನ ಅಥವಾ 3 ದಿನ ಬಿಟ್ಟು ಬನ್ನಿ ಅನ್ನೋ ಉತ್ತರದಿಂದ ಬೇಸತ್ತಿದ್ದ ಮಂದಿ, ಇಲ್ಲಿ 2, 3 ತಾಸುಗಳಲ್ಲೇ ರಿಪೇರಿಯಾದ ವಸ್ತುಗಳನ್ನು ಪಡೆದು ಸಂಭ್ರಮಿಸಿದ್ರು. ಹಾಗೇ ಇತ್ತೀಚಿನ ವರ್ಷಗಳಲ್ಲಿ ಜನರಲ್ಲಿ ಹೆಚ್ಚುತ್ತಿರುವ ಯೂಸ್ ಆಂಡ್ ಥ್ರೋ ಮನೋಭಾವದಿಂದ ಕೆಲಸವಿಲ್ಲದೇ ಪರಿತಪಿಸುತ್ತಿದ್ದ ಟೇಲರ್, ಎಲೆಕ್ಟ್ರೀಶಿಯನ್ ಮತ್ತು ವಿದ್ಯುತ್ ಉಪಕರಣಗಳನ್ನು ರಿಪೇರಿ ಮಾಡುವ ಮಂದಿಗೂ ದಿನಪೂರ್ತಿ ಕೈತುಂಬಾ ಕೆಲಸ ಸಿಕ್ಕ ಖುಷಿ. ತಾವು ತಂದ ವಸ್ತುಗಳು ರಿಪೇರಿಯಾಗೋವರೆಗೂ ಇಲ್ಲಿ ಗ್ರಾಹಕರು ಕುಳಿತುಕೊಂಡು ಕಾಫಿ/ ಟೀ ಹೀರಬಹುದು, ಪುಸ್ತಕಗಳನ್ನು ಓದಬಹುದು ಅಥವಾ ರಂಗೋಲಿ ಮೆಟ್ರೋನಲ್ಲಿರುವ ಗ್ಯಾಲರಿಯನ್ನು ವೀಕ್ಷಿಸಬಹುದು. ವಿಶೇಷ ಅಂದ್ರೆ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಡೆದ ರಿಪೇರಿ ಕೆಫೆಯಲ್ಲಿ ಸಂಗೀತ ಕಾರ್ಯಕ್ರಮವನ್ನೂ ಆಯೋಜಿಸಿದ್ದು ವಿಶೇಷ.

image


‘ಹೆಚ್ಚು ಹಣ ಸುರಿದು ಹೊಸ ವಸ್ತುಗಳನ್ನು ಖರೀದಿಸುವ ಬದಲು ಹಳೆಯ ವಸ್ತುಗಳನ್ನೇ ರಿಪೇರಿ ಮಾಡಿಸಿಕೊಂಡು ಪುನರ್‍ಬಳಕೆ ಮಾಡುವ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಉದ್ದೇಶ ನಮ್ಮದು. ಈ ನಿಟ್ಟಿನಲ್ಲಿ ಭಾರತದಲ್ಲೇ, ಬೆಂಗಳೂರಿನಲ್ಲಿ ಮೊದಲ ಬಾರಿ ಆಯೋಜಿಸಿದ್ದ ರಿಪೇರ್ ಕೆಫೆಗೆ ಜನರಿಂದ ಅತ್ಯುತ್ತಮ ರೆಸ್ಪಾನ್ಸ್ ಸಿಕ್ಕಿದೆ. ಇದು ನಮಗೂ ಸಂತಸ ನೀಡಿದ್ದು, ಮುಂದಿನ ದಿನಗಳಲ್ಲಿ ನಗರದ ಇನ್ನೂ ಹಲವು ಭಾಗಗಳಲ್ಲಿ ಹೆಚ್ಚೆಚ್ಚು ರಿಪೇರ್ ಕೆಫೆ ಶಿಬಿರಗಳನ್ನು ಆಯೋಜಿಸುವ ಸ್ಫೂರ್ತಿ ತುಂಬಿದೆ’ ಅಂತ ರಿಪೇರ್ ಕೆಫೆ ಕುರಿತು ಹೇಳುತ್ತಾರೆ ಆಯೋಜಕಿ ಪೂರ್ಣಾ ಸರ್ಕಾರ್.

ಈ ರಿಪೇರ್ ಕೆಫೆಯಲ್ಲಿ 10ಕ್ಕೂ ಹೆಚ್ಚು ಮಂದಿ ಟೇಲರ್‍ಗಳು ಮತ್ತು ಎಲೆಕ್ಟ್ರೀಶಿಯನ್‍ಗಳು ಭಾಗವಹಿಸಿದ್ದರು. ಗ್ರಾಹಕರು ಕುಕ್ಕರ್, ಮಿಕ್ಸರ್ ಗ್ರೈಂಡರ್, ಹಳೆಯ ರೇಡಿಯೋ, ಕ್ಯಾಮರಾ, ಇಂಡಕ್ಷನ್ ಸ್ಟೌವ್ ಸೇರಿದಂತೆ 20ಕ್ಕೂ ಹೆಚ್ಚು ಉಪಕರಣಗಳನ್ನು ರಿಪೇರಿ ಮಾಡಿಸಿಕೊಂಡ್ರು. ಜೊತೆಗೆ ಕೆಲ ಮಹಿಳೆಯರು ಮತ್ತು ಯುವತಿಯರು ಹರಿದ ವ್ಯಾನಿಟಿ ಬ್ಯಾಗ್ ಜಿಪ್ ಸರಿ ಮಾಡಿಸಿಕೊಂಡ್ರೆ ಇನ್ನೂ ಕೆಲವರು ಜೀನ್ಸ್, ಶರ್ಟ್, ಕುರ್ತಾ, ಸ್ಯಾರಿ, ಬ್ಲೌಸ್ ಹಾಗೂ ಚೂಡಿದಾರ್‍ಗಳನ್ನು ಆಲ್ಟ್ರೇಶನ್ ಮಾಡಿಸಿಕೊಂಡ್ರು.

image


ಹೀಗೆ ರಿಪೇರ್ ಕೆಫೆ ಗ್ರಾಹಕರು ಮತ್ತು ಸೇವಾದಾರರ ನಡುವೆ ಒಂದೊಳ್ಳೆ ವೇದಿಕೆ ಕಲ್ಪಿಸುವಲ್ಲಿ ಯಶಸ್ವಿಯಾಗಿದೆ. ಯಾವುದೋ ಮೂಲೆಯಲ್ಲಿರುವ ಗ್ರಾಹಕರು ಇಲ್ಲಿ ಬಂದು ತಮ್ಮ ವಸ್ತುಗಳನ್ನು ರಿಪೇರಿ ಮಾಡಿಸಿಕೊಳ್ಳಬಹುದು. ಹಾಗೇ ಇನ್ಯಾವುದೋ ಮೂಲೆಯಲ್ಲಿರುವ ಸೇವಾದಾರರು ಇಲ್ಲಿ ಬಂದು ಒಂದು ದಿನದ ಮಟ್ಟಿಗೆ ಕೆಲಸ ಮಾಡಿ ಒಳ್ಳೆ ಗಳಿಕೆ ಮಾಡಬಹುದು.

Add to
Shares
1
Comments
Share This
Add to
Shares
1
Comments
Share
Report an issue
Authors

Related Tags