ಆವೃತ್ತಿಗಳು
Kannada

ಶಿಕ್ಷಣದ ಮೂಲಕ ಅನಾಥ ಮಕ್ಕಳ ಬದುಕು ಬದಲಾಯಿಸಿದ ಕುಮಾರಿ ಶಿಬುಲಾಲ್..

ಟೀಮ್​ ವೈ.ಎಸ್​. ಕನ್ನಡ

YourStory Kannada
18th Apr 2016
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on

ತಮ್ಮ ಬದುಕಿನ ಆರಂಭದಲ್ಲೇ ಶಿಕ್ಷಣದ ಮಹತ್ವವನ್ನು ಅರಿತವರು ಕುಮಾರಿ ಶಿಬುಲಾಲ್. ಸಣ್ಣ ಹಳ್ಳಿಯ ಕೃಷಿಕನ ಮನೆಯಲ್ಲಿ ಜನಿಸಿದ್ದರಿಂದ ಅವರ ಸಹೋದರ ಹಾಗೂ ಸಹೋದರಿ ಸ್ಥಳೀಯ ಶಾಲೆಯಲ್ಲೇ ಓದಬೇಕಾಯ್ತು. ಬಾಲ್ಯದಲ್ಲಿ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿದ್ದರಿಂದ್ಲೇ ಕುಮಾರಿ 1999ರಲ್ಲಿ `ಸರೋಜಿನಿ ದಾಮೋದರನ್ ಫೌಂಡೇಶನ್' ಹಾಗೂ 2004ರಲ್ಲಿ `ಅದ್ವೈತ್ ಫೌಂಡೇಶನ್' ಅನ್ನು ಆರಂಭಿಸಿದ್ರು. ಅಷ್ಟೇ ಅಲ್ಲ ಅವರು 2007ರಲ್ಲಿ ಪ್ರಾರಂಭವಾದ ಸಂಹಿತ ಅಕಾಡೆಮಿಯ ಟ್ರಸ್ಟಿ ಕೂಡ. ತಮ್ಮ ಬದುಕು ಹಾಗೂ ಶಿಕ್ಷಣದ ಬಗ್ಗೆ ಸಾಕಷ್ಟು ವಿಚಾರಗಳನ್ನು ಅವರು ಯುವರ್ ಸ್ಟೋರಿ ಜೊತೆ ಹಂಚಿಕೊಂಡಿದ್ದಾರೆ.

image


ರಾಮಮಂಗಲಂನಿಂದ ಕೊಚ್ಚಿನ್‍ವರೆಗೆ

ಕೇರಳದ ಪುಟ್ಟ ಗ್ರಾಮ ರಾಮಮಂಗಲಂನ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದವರು ಕುಮಾರಿ ಶಿಬುಲಾಲ್. ಮನೆಯಿಂದ ಕಿಲೋಮೀಟರ್‍ಗಟ್ಟಲೆ ದೂರವಿದ್ದ ಶಾಲೆಯಲ್ಲಿ ಅವರು ಪ್ರಾಥಮಿಕ ಶಿಕ್ಷಣ ಪಡೆದ್ರು. ಬಳಿಕ ಕೊಚ್ಚಿನ್‍ನಲ್ಲಿ ಪಿಯುಸಿ ಮುಗಿಸಿ, ಕೇರಳ ವಿಶ್ವವಿದ್ಯಾನಿಲಯದಲ್ಲಿ ಭೌತಶಾಸ್ತ್ರ ವಿಷಯದಲ್ಲಿ ಬಿಎಸ್‍ಸಿ ಪದವಿ ಕೂಡ ಪಡೆದ್ರು. 24ರ ಹರೆಯದಲ್ಲೇ ಇನ್ಫೋಸಿಸ್‍ನ ಮಾಜಿ ಸಿಇಓ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದ ಎಸ್.ಡಿ.ಶಿಬುಲಾಲ್ ಅವರೊಂದಿಗೆ ಕುಮಾರಿ ಅವರ ವಿವಾಹ ನೆರವೇರಿತು. ಕುಮಾರಿ ಅವರ ಪತಿ ಇನ್ಫೋಸಿಸ್‍ನ 7 ಮಂದಿ ಸಂಸ್ಥಾಪಕರಲ್ಲೊಬ್ಬರು.

ಇನ್ಫೋಸಿಸ್‍ನ ಆರಂಭಿಕ ದಿನಗಳು

ಮದುವೆ ಬಳಿಕ ಕುಮಾರಿ ಹಾಗೂ ಶಿಬುಲಾಲ್ ದಂಪತಿ ಮುಂಬೈಗೆ ಶಿಫ್ಟ್ ಆದ್ರು. ನಂತರ ಹಲವು ವರ್ಷಗಳ ವರೆಗೆ ಭಾರತ-ಅಮೆರಿಕ ಹೀಗೆ ಓಡಾಡಿಕೊಂಡಿದ್ರು. ಆ ಸಮಯದಲ್ಲಿ ಇನ್ಫೋಸಿಸ್ ಇನ್ನೂ ಅಂಬೆಗಾಲಿಡುತ್ತಿತ್ತಷ್ಟೆ. ಸಂಸ್ಥಾಪಕರಲ್ಲೊಬ್ಬರಾದ ಶಿಬುಲಾಲ್ ಅವರ ಪತ್ನಿಯಾಗಿರೋದ್ರಿಂದ ಇನ್ಫೋಸಿಸ್ ಸಂಸ್ಥೆಯನ್ನು ಕಟ್ಟಿ ಬೆಳೆಸುವ ಸಂದರ್ಭದಲ್ಲಿ ಎದುರಾದ ಕಷ್ಟಗಳೆಲ್ಲವೂ ಕುಮಾರಿ ಅವರಿಗೆ ಗೊತ್ತು. ``ನಾವು ಕಂಪನಿಗಾಗಿ ಇದ್ದ ಹಣವನ್ನೆಲ್ಲ ವೆಚ್ಚ ಮಾಡಿದ್ದೆವು, ನನ್ನ ಮಂಗಲಸೂತ್ರವನ್ನು ಕೂಡ ಅಡವಿಟ್ಟಿದ್ದೆ. ಇದ್ದ ಹಣವನ್ನೆಲ್ಲ ಕಂಪನಿಗೆ ಹಾಕಿದ ಸಂಸ್ಥಾಪಕರು ಅತ್ಯಂತ ಕಡಿಮೆ ವೇತನ ಪಡೆಯುತ್ತಿದ್ದರು. ಆರಂಭದಲ್ಲಿ ಹಣದ ಬಿಕ್ಕಟ್ಟು ಇದ್ದಿದ್ದು ನಿಜ. ಆದ್ರೆ ಪಟ್ಟ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ'' ಎನ್ನುತ್ತಾರೆ ಕುಮಾರಿ. ಈ ದಂಪತಿಗೆ ಒಬ್ಬ ಪುತ್ರ ಹಾಗೂ ಪುತ್ರಿ ಇದ್ದಾರೆ.

ಶಿಕ್ಷಣಕ್ಕೆ ಪ್ರಾಧಾನ್ಯತೆ

ಬಡ ಮಕ್ಕಳಿಗೆ ಶಿಕ್ಷಣ ನೀಡಬೇಕೆಂಬ ಕನಸು ದಂಪತಿಗಳಲ್ಲಿತ್ತು. ಹಣಕಾಸಿನ ವಿಚಾರದಲ್ಲಿ ಕೊಂಚ ಸುಸ್ಥಿತಿಗೆ ಬರುತ್ತಿದ್ದಂತೆ ಶಿಕ್ಷಣ ಕ್ಷೇತ್ರದತ್ತ ಗಮನಹರಿಸಲು ಅವರು ನಿರ್ಧರಿಸಿದ್ರು. ಶಿಕ್ಷಣದ ಮೂಲಕ ಬದುಕನ್ನೇ ಬದಲಾಯಿಸಲು ಆರಂಭವಾದ ಸಂಸ್ಥೆ ಸರೋಜಿಸಿ ದಾಮೋದರನ್ ಫೌಂಡೇಶನ್. ಕೇರಳ ಹಾಗೂ ಕರ್ನಾಟಕದಲ್ಲಿ ಮೆಟ್ರಿಕ್ಸ್ ಓದುತ್ತಿರುವ ಮಕ್ಕಳಿಗೆ ಅವರ ಮುಂದಿನ ಶಿಕ್ಷಣಕ್ಕಾಗಿ ಈ ಸಂಸ್ಥೆ ವಿದ್ಯಾರ್ಥಿವೇತನವನ್ನು ನೀಡುತ್ತಿದೆ. ವಿದ್ಯಾಧಾನ್ ಹೆಸರಿನ ಈ ಯೋಜನೆಯಡಿ ಇದುವರೆಗೆ 5,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸ್ಕಾಲರ್‍ಶಿಪ್ ನೀಡಲಾಗಿದೆ. ಪ್ರತಿ ವರ್ಷ ಖುದ್ದು ಕುಮಾರಿ ಅವರೇ ತೆರಳಿ ವಿದ್ಯಾರ್ಥಿಗಳ ಸಂದರ್ಶನ ಮಾಡ್ತಾರೆ. ಆರಂಭದಲ್ಲಿ ಕೇವಲ 2 ವಿದ್ಯಾರ್ಥಿಗಳಿಂದ ಆರಂಭವಾದ ಈ ಯೋಜನೆ ಈಗ ಎರಡೂ ರಾಜ್ಯಗಳಲ್ಲಿ ವಿಸ್ತರಿಸಿದೆ.

image


ಬಡತನದಿಂದಾಗಿ ಶಿಕ್ಷಣದಿಂದ ವಂಚಿತರಾಗುತ್ತಿರುವ ಮಕ್ಕಳನ್ನು ಸ್ವಾವಲಂಬಿಗಳನ್ನಾಗಿ ಮಾಡುವುದೇ ಈ ಸಂಸ್ಥೆಯ ಉದ್ದೇಶ. ಅಷ್ಟೇ ಅಲ್ಲ ಅವರಿಗೆ ಬದುಕು ಕಟ್ಟಿಕೊಡುವ ಕಾರ್ಯವನ್ನೂ ಅದು ಮಾಡುತ್ತಿದೆ. ಪ್ರಾಯೋಜಕರು ದೊರೆಯದಂತಹ ವಿದ್ಯಾರ್ಥಿಗಳಿಗೆ ಹಣ ಸಹಾಯ ಮಾಡುತ್ತಿದೆ. ಎಸ್‍ಡಿ ಫೌಂಡೇಶನ್ ಅಡಿಯಲ್ಲಿ ಕೇರಳದಲ್ಲಿ 2062 ವಿದ್ಯಾರ್ಥಿಗಳಿಗೆ ಸ್ಕಾಲರ್‍ಶಿಪ್ ನೀಡಲಾಗಿದೆ. ಕರ್ನಾಟಕದಲ್ಲಿ 172 ವಿದ್ಯಾರ್ಥಿಗಳು ವಿದ್ಯಾಧಾನ್ ಯೋಜನೆಯ ಸದುಪಯೋಗಪಡೆದುಕೊಂಡಿದ್ದಾರೆ. ಈ ಪೈಕಿ ಬಹುತೇಕ ಎಲ್ಲರೂ ವೈದ್ಯರು ಹಾಗೂ ಎಂಜಿನಿಯರ್‍ಗಳು. ಕೇರಳದಲ್ಲಿ ಸಂಸ್ಥೆಯ ನೆರವಿನಿಂದ 17 ಮಂದಿ ವೈದ್ಯರು, 153 ಮಂದಿ ಎಂಜಿನಿಯರ್‍ಗಳು, 117 ಮಂದಿ ಪದವೀಧರರಾಗಿದ್ದಾರೆ. ಈ ವರ್ಷ 52 ವೈದ್ಯರು, 191 ಎಂಜಿನಿಯರ್‍ಗಳು, 113 ಪದವೀಧರರು ಸೇರಿ ಒಟ್ಟು 907 ವಿದ್ಯಾರ್ಥಿಗಳು ವಿದ್ಯಾಧಾನ್ ಯೋಜನೆ ನೆರವು ಪಡೆದಿದ್ದಾರೆ.

ಸಮಾನ ವಿಶ್ವ ನಿರ್ಮಾಣಕ್ಕೆ ಪಣ

ಅದ್ವೈತ್ ಫೌಂಡೇಶನ್ ಕೂಡ ಸಾಹಿತ್ಯ ಅಕಾಡೆಮಿಯಲ್ಲಿ ಅಂಕುರ್ ಯೋಜನೆಯ ಮೂಲಕ 123 ವಿದ್ಯಾರ್ಥಿಗಳಿಗೆ ರೆಸಿಡೆನ್ಷಿಯಲ್ ಶಿಕ್ಷಣ ನೀಡುತ್ತಿದೆ. ಕುಮಾರಿ ಅವರಿಗೆ ಶಾಲೆ ಆರಂಭಿಸುವ ಉದ್ದೇಶವಿರಲಿಲ್ಲ. ಆದ್ರೆ ಎಲ್ಲಾ ಶಾಲೆಗಳಲ್ಲಿ ಎಲ್ಲ ಮಕ್ಕಳಿಗೆ ಸಮನಾದ ಅವಕಾಶ ಸಿಗುತ್ತಿಲ್ಲ ಅನ್ನೋ ವಿಚಾರ ಅವರಿಗೆ ಬೇಸರ ತಂದಿತ್ತು. ``ಅವರನ್ನೆಲ್ಲ ನನ್ನ ಮಕ್ಕಳಂತೆ ನೋಡಿಕೊಳ್ಳಬೇಕೆಂಬುದೇ ನನ್ನಾಸೆ. ಅದು ಸಾಧ್ಯವಾಗುತ್ತಿಲ್ಲ ಎಂಬುದು ಗೊತ್ತಾದಾಗ ನಾವು ನಮ್ಮದೇ ಶಾಲೆಯೊಂದನ್ನು ಆರಂಭಿಸಲು ತೀರ್ಮಾನಿಸಿದೆವು. ನಮ್ಮ ಶಾಲೆಯಲ್ಲಿ ಯಾವುದೇ ರೀತಿಯ ಭೇದಭಾವವನ್ನು ಮಕ್ಕಳು ಎದುರಿಸುವಂತಾಗಬಾರದು'' ಎನ್ನುತ್ತಾರೆ ಕುಮಾರಿ.

ಬಹುತೇಕ ಕಡೆಗಳಲ್ಲಿ ಮಕ್ಕಳು 14-15 ವರ್ಷದವರಾಗುತ್ತಿದ್ದಂತೆ ಶಾಲೆ ಬಿಡಿಸಿ ಅವರನ್ನು ಕೆಲಸಕ್ಕೆ ಕಳುಹಿಸುವುದೇ ಹೆಚ್ಚು. ಇನ್ನು ಕೇರಳದಲ್ಲಿ ಶೇ.40ರಷ್ಟು ಹೆಣ್ಣುಮಕ್ಕಳು ಮಾತ್ರ ಶಾಲೆ ಮೆಟ್ಟಿಲು ಹತ್ತುತ್ತಿದ್ದಾರೆ. ಹೆಣ್ಣುಮಕ್ಕಳ ಶಿಕ್ಷಣವನ್ನು ಪ್ರೋತ್ಸಾಹಿಸಲು, ಮಕ್ಕಳು ಶಾಲೆ ತೊರೆಯದಂತೆ ನೋಡಿಕೊಳ್ಳಲು ಸಂಹಿತ ಅಕಾಡೆಮಿಯನ್ನು ಸ್ಥಾಪಿಸಲಾಗಿದೆ. 5 ಶಾಲೆಗಳ ಮೂಲಕ ಪ್ರತಿವರ್ಷ 1000 ಮಕ್ಕಳಿಗೆ ಶಿಕ್ಷಣ ನೀಡಲು ಉದ್ದೇಶಿಸಲಾಗಿದೆ. ಕಳೆದ ವರ್ಷ ಕೊಮಮತ್ತೂರ್‍ನಲ್ಲಿ ಶಾಲೆಯೊಂದನ್ನು ತೆರೆಯಲಾಗಿದೆ.

ಪ್ರತಿ ಮಕ್ಕಳಲ್ಲೂ ಇದೆ ಪ್ರತಿಭೆ, ಪ್ರತಿಯೊಂದು ಕಥೆಯೂ ಲೆಕ್ಕಕ್ಕಿದೆ

ಪ್ರತಿಯೊಂದು ಮಕ್ಕಳಲ್ಲೂ ಪ್ರತಿಭೆಯಿದೆ ಎನ್ನುತ್ತಾರೆ ಕುಮಾರಿ. ಅವರ ಬದುಕು ಹಾಗೂ ಬೆಳವಣಿಗೆಯನ್ನು ಕುಮಾರಿ ಹತ್ತಿರದಿಂದ ಗಮನಿಸುತ್ತಾರೆ. ಅವರ ಸಂಸ್ಥೆಯ ನೆರವಿನಿಂದ ಶಿಕ್ಷಣ ಪಡೆದು ಉನ್ನತ ಹುದ್ದೆಯಲ್ಲಿರುವ ಹಲವರು ಈಗ ಮಕ್ಕಳ ಶಿಕ್ಷಣಕ್ಕಾಗಿ ತಮ್ಮ ಕೈಲಾದ ನೆರವು ನೀಡುತ್ತಿದ್ದಾರೆ. ``ವೀಕೆಂಡ್‍ನಲ್ಲಿ ಮಕ್ಕಳಿಗೆ ಮನರಂಜನೆ ಸಿಗಬೇಕು, ಇದಕ್ಕಾಗಿ ಅವರನ್ನು ಸಿನಿಮಾಕ್ಕೆ, ಪಿಕ್‍ನಿಕ್‍ಗೆ ಕರೆದುಕೊಂಡು ಹೋಗುತ್ತೇವೆ. ಯಾವುದರಿಂದ್ಲೂ ಅವರು ವಂಚಿತರಾಗಬಾರದು. ಉತ್ತಮ ವೃತ್ತಿ ಆಯ್ಕೆಗೆ ವಿದ್ಯಾರ್ಥಿಗಳಿಗೆ ತಜ್ಞರು ಸಲಹೆ ನೀಡುತ್ತಾರೆ. ಈ ವಿಚಾರದಲ್ಲಿ ಖುದ್ದು ನಾನೇ ಆಸಕ್ತಿ ವಹಿಸಿ ಕೆಲಸ ಮಾಡುತ್ತೇನೆ'' ಎಂದು ಕುಮಾರಿ ವಿವರಿಸಿದ್ದಾರೆ.

ಹೃದಯದಲ್ಲಿ ಸಾವಯವ

ಕೃಷಿ ಹಿನ್ನೆಲೆಯಲ್ಲಿ ಬೆಳೆದವರಾಗಿದ್ದರಿಂದ ಸಾವಯವ ಕೃಷಿ ಬಗ್ಗೆ ಕುಮಾರಿ ಅವರಿಗೆ ಆಸ್ಥೆಯಿದೆ. ಅವರ ಪೋಷಕರು ಕೂಡ ಕೃಷಿಕರು. ಬಿಡುವಿನ ವೇಳೆಯಲ್ಲಿ ಕುಮಾರಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ. ಬೆಂಗಳೂರಿನಲ್ಲಿರುವ ತಮ್ಮ ಕಚೇರಿಯ ಕೆಳಗೆ ಸಾವಯವ ಉತ್ಪನ್ನಗಳ ಮಳಿಗೆಯೊಂದನ್ನು ಕೂಡ ತೆರೆದಿದ್ದಾರೆ. ಕೇರಳದಲ್ಲಿ ಅವರು ಸಾವಯವ ಕೃಷಿಕರಿಗೆ ಅಕ್ಷಯ ಶ್ರೀ ಪ್ರಶಸ್ತಿಯನ್ನು ಕೂಡ ನೀಡುತ್ತಿದ್ದಾರೆ. 61ರ ಹರೆಯದ ಕುಮಾರಿ ಪರೋಪಕಾರಿ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಶಿಕ್ಷಣ, ಆರೋಗ್ಯ, ಗರ್ಭಿಣಿಯರ ಪೋಷಣೆ, ಪಿಂಚಣಿ ಯೋಜನೆಗಳು, ಸಾವಯವ ಕೃಷಿ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಸೇವೆ ಸಲ್ಲಿಸುತ್ತಿದ್ದಾರೆ.

image


ಮುಂಬರುವ ವರ್ಷಗಳಲ್ಲಿ ವಿದ್ಯಾಧಾನ್ ಯೋಜನೆಯನ್ನು ಇನ್ನಷ್ಟು ರಾಜ್ಯಗಳಲ್ಲಿ ವಿಸ್ತರಿಸಲಾಗುತ್ತದೆ. ಮತ್ತಷ್ಟು ಶಾಲೆಗಳನ್ನು ಕೂಡ ಆರಂಭಿಸುವ ಉದ್ದೇಶ ಕುಮಾರಿ ಅವರಿಗಿದೆ. ಶಿಕ್ಷಣ ಕ್ಷೇತ್ರದ ಅಭ್ಯುದಯಕ್ಕಾಗಿ ಸೇವೆ ಸಲ್ಲಿಸುತ್ತಿರುವ ಕುಮಾರಿ ಅವರ ಸಾಮಾಜಿಕ ಕಳಕಳಿ ನಿಜಕ್ಕೂ ಮೆಚ್ಚುವಂಥದ್ದು.

ಲೇಖಕರು: ತನ್ವಿ ದುಬೆ

ಅನುವಾದಕರು: ಭಾರತಿ ಭಟ್ 

 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
Report an issue
Authors

Related Tags

Latest Stories