ಪರ್ವತಗಳಲ್ಲೂ ಬೈಕ್ ಓಡಿಸೋ ಚತುರ – ಲಂಕಾ ರೇಸ್​ನಲ್ಲಿ ಪಾಲ್ಗೊಳ್ತಿದ್ದಾನೆ ಭಾರತದ ಕಿರಿಯ ಕುವರ

ಟೀಮ್ ವೈ.ಎಸ್.ಕನ್ನಡ 
0 CLAPS
0

ಅಕ್ಷಿತ್ ಗೌರ್​ಗೆ ಈಗ ವಯಸ್ಸು ಕೇವಲ 17, ಆದ್ರೆ ಶಿಮ್ಲಾದ ಈ ಹುಡುಗ ಸಾಹಸಿ ಬೈಕರ್. ಅಂತರಾಷ್ಟ್ರೀಯ ಸ್ಪರ್ಧೆಯೊಂದರಲ್ಲಿ ಪಾಲ್ಗೊಂಡ ಅತ್ಯಂತ ಕಿರಿಯ ಬೈಕರ್ ಅನ್ನೋ ಹೆಗ್ಗಳಿಕೆ ಅಕ್ಷಿತ್ ಪಾಲಾಗ್ತಿದೆ. ಶ್ರೀಲಂಕಾದಲ್ಲಿ ನಡೆಯಲಿರುವ ''ರುಂಬ್ಲೆ ಇನ್ ದಿ ಜಂಗಲ್ ಎಂಟಿಬಿ'' ಎಂಬ ಅಂತರಾಷ್ಟ್ರೀಯ ಮೌಂಟೇನ್ ಬೈಕಿಂಗ್ ಈವೆಂಟ್ ನಲ್ಲಿ ಅಕ್ಷಿತ್ ಸ್ಪರ್ಧಿಸಲಿದ್ದಾನೆ.

''ರುಂಬ್ಲೆ ಇನ್ ದಿ ಜಂಗಲ್'' ಅನ್ನೋದು, ಕ್ರಾಸ್ ಕಂಟ್ರಿ ಶೈಲಿಯ ಮ್ಯಾರಥಾನ್​ನ ನಾಲ್ಕು ಹಂತದ ರೇಸ್. 4 ದಿನಗಳಲ್ಲಿ ಸ್ಪರ್ಧಿಗಳು 300 ಕಿಮೀ ಕ್ರಮಿಸಬೇಕು. ಇದರಲ್ಲಿರೋ ಬಹುದೊಡ್ಡ ಸವಾಲು ಅಂದ್ರೆ ಪರ್ವತಗಳನ್ನು ಏರೋದು. 8000 ಮೀಟರ್ ಎತ್ತರದಲ್ಲಿ ರಸ್ತೆಯೇ ಇಲ್ಲದ ಉಬ್ಬು ತಗ್ಗಿನ ಹಾದಿಯಲ್ಲಿ ಸ್ಪರ್ಧಿಗಳು ಸಾಗಬೇಕು. ಲಂಕಾದ ಪವರ್ತಗಳು ಹಾಗೂ ಚಹಾ ತೋಟಗಳಲ್ಲಿ ಬೈಕ್ ಓಡಿಸೋದೇ ಪ್ರಯಾಸದ ಕೆಲಸ.


ಅಕ್ಷಿತ್ ಇತ್ತೀಚೆಗಷ್ಟೆ ದ್ವಿತೀಯ ಪಿಯುಸಿ ಮುಗಿಸಿದ್ದಾನೆ. ಬೈಕ್ ಸವಾರಿಯಲ್ಲೂ ಇನ್ನೊಂದಷ್ಟು ಸಾಹಸ ಮಾಡಬೇಕು ಅನ್ನೋದು ಅಕ್ಷಿತ್ ಆಸೆ. ವರ್ಲ್ಡ್ ಚಾಂಪಿಯನ್ ಶಿಪ್ ಗಳಲ್ಲಿ 18ನೇ ಸ್ಥಾನ ಪಡೆದಿದ್ದ, ಮೂರು ಬಾರಿ ಚಾಂಪಿಯನ್ ಆಗಿರೋ ಕೆನಡಾದ ಕೊರಿ ವಲ್ಲೇಸ್, ಜಪಾನ್ ನ ಯುಕಿ ಇಕೆಡಾ, ನೇಪಾಳದ ಅಜಯ್ ಪಂಡಿತ್ ಚೆಟ್ರಿ ಅವರಂಥಹ ಘಟಾನುಘಟಿ ರೈಡರ್ ಗಳು ಕೂಡ ಸ್ಪರ್ಧೆಯಲ್ಲಿದ್ದಾರೆ.

ಶಿಮ್ಲಾದ ಸೇಂಟ್ ಎಡ್ವರ್ಡ್ಸ್ ಸ್ಕೂಲ್ ನಲ್ಲಿ ಅಕ್ಷಿತ್ ಓದ್ತಿದ್ದಾನೆ. UT ETX ಬೈಕನ್ನು ಅಕ್ಷಿತ್ ಓಡಿಸಲಿದ್ದಾನೆ. ಇದು ಫುಲ್ ಕಾರ್ಬನ್ ಬೈಕ್, ಕೇವಲ 10 ಕೆಜಿ ಭಾರವಿದೆ. ಈ ಬೈಕ್ ನ ಬೆಲೆ 2.99 ಲಕ್ಷ ರೂಪಾಯಿ. ''ಕೊರಿ ವಲೇಸ್ ಅವರಂಥಹ ದಿಗ್ಗಜ ಬೈಕರ್ ಗಳ ಜೊತೆ ಸ್ಪರ್ಧಿಸಲು ಅವಕಾಶ ಸಿಕ್ಕಿರೋದು ನಿಜಕ್ಕೂ ಅದೃಷ್ಟವೇ ಸರಿ. ಇದು ಮೊದಲ ಅಂತರಾಷ್ಟ್ರೀಯ ರೇಸ್ ಆಗಿರೋದ್ರಿಂದ ಕೊಂಚ ನರ್ವಸ್ ಆಗಿದ್ದೇನೆ. ಆದ್ರೆ ಆತ್ಮವಿಶ್ವಾಸದ ಕೊರತೆಯಿಲ್ಲ. ಈ ರೇಸ್ ಗಾಗಿಯೇ ಕಠಿಣ ತರಬೇತಿ ನಡೆಸಿದ್ದೇನೆ. ನನ್ನ ಬಳಿ ಇರೋ ಬೈಕ್ ಕೂಡ ಅತ್ಯುತ್ತಮವಾಗಿದೆ. HASTPA ಹಾಗೂ ಹೀರೋ ಸೈಕಲ್ಸ್ ಯುವ ಬೈಕರ್ ಗಳಿಗೆ ಸಾಕಷ್ಟು ಪ್ರೋತ್ಸಾಹ ನೀಡುತ್ತಿವೆ. ನನ್ನಲ್ಲಿ ನಂಬಿಕೆ ಇಟ್ಟಿರುವ ಟೀಮ್ ಮ್ಯಾನೇಜರ್ ಗಳಾದ ಆಶಿಶ್ ಸೂದ್, ಮೋಹಿತ್ ಸರ್, ಮನೀಶ್ ರೊಹ್ಟಗಿ, ರಮಣ್ ಅವಸ್ಥಿ ಅವರಿಗೆ ಧನ್ಯವಾದ ಹೇಳಲೇಬೇಕು'' ಅನ್ನೋದು ಅಕ್ಷಿತ್ ಮನದ ಮಾತು.

ಇನ್ನು ಹೀರೋ ಸೈಕಲ್ಸ್​​ನ ಸಹ ಅಧ್ಯಕ್ಷರಾಗಿರೋ ಪಂಕಜ್ ಮುಂಜಲ್ ಅವರು ಕೂಡ ಅಕ್ಷಿತ್ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ, ಶುಭ ಕೋರಿದ್ದಾರೆ. ''ಭಾರತದಲ್ಲೂ ಮೌಂಟೇನ್ ಬೈಕಿಂಗ್ ಅನ್ನು ಬೆಳೆಸಬೇಕು, ಪ್ರೋತ್ಸಾಹಿಸಬೇಕು ಎಂಬ ನಮ್ಮ ಬಯಕೆ ಕೊನೆಗೂ ಈಡೇರುತ್ತಿದೆ. ವಿಶ್ವದ ಬೆಸ್ಟ್ ಬೈಕರ್ ಗಳ ಜೊತೆ ಸ್ಪರ್ಧಿಸಿ ನಮ್ಮ ಯುವಕರು ಕೂಡ ಪ್ರೋತ್ಸಾಹ ಮತ್ತು ಪ್ರಚಾರ ಪಡೆಯಲಿದ್ದಾರೆ. ಹೀರೋ ಆ್ಯಕ್ಷನ್ ಟೀಮ್ ಹಾಗೂ ಹೀರೋ HASTPA ಸ್ಕೂಲ್ ಕಾರ್ಯಕ್ರಮಗಳ ಮೂಲಕ ನಾವು ಭಾರತದ ಪ್ರತಿಭಾವಂತ ರೈಡರ್ ಗಳನ್ನು ಪ್ರೋತ್ಸಾಹಿಸುತ್ತಿದ್ದೇವೆ'' ಅಂತಾ ಹೇಳಿದ್ದಾರೆ.

ವಯಸ್ಸು ಮತ್ತು ಅನುಭವದಲ್ಲಿ ತನಗಿಂತ ಹಿರಿಯರನ್ನೇ ರೇಸ್ನಲ್ಲಿ ಅಕ್ಷಿತ್ ಈ ಹಿಂದೆ ಸೋಲಿಸಿದ್ದಾರೆ. ಪ್ರತಿನಿತ್ಯ ಹಿಮಾಲಯದ ತಪ್ಪಲಲ್ಲಿ 2-4 ಗಂಟೆಗಳ ಕಾಲ ಕಠಿಣ ಅಭ್ಯಾಸ ಮಾಡ್ತಿದ್ದಾರೆ. ವಾರಕ್ಕೆ ಕನಿಷ್ಠ 25 ಗಂಟೆ ತರಬೇತಿ ಪಡೆಯುತ್ತಾರೆ. ಇಷ್ಟೆಲ್ಲಾ ಶ್ರಮವಹಿಸಿ ತಯಾರಿ ಮಾಡಿಕೊಂಡಿರೋ ಅಕ್ಷಿತ್, ರೇಸ್ ನಲ್ಲಿ ಗೆದ್ದು ಬರಲಿ ಅನ್ನೋದೇ ಎಲ್ಲರ ಆಶಯ.

ಇದನ್ನೂ ಓದಿ...

ಭಾರತೀಯ ಮಹಿಳಾ ಉದ್ಯಮಿಗಳಿಗೆ ಇಸ್ರೇಲ್ ನೀಡುತ್ತೆ ಸುವರ್ಣಾವಕಾಶ- ಗಮನ ಸೆಳೆಯುತ್ತಿದೆ ಸ್ಟಾರ್ಟ್ ಟಿಎಲ್​​ವಿ ಬೂಸ್ಟ್ ಕ್ಯಾಂಪ್

ಅಭಿವೃದ್ಧಿಯ ಕನಸಿಗೆ ಅಡ್ಡಿಯಾಗುತ್ತಿದೆ ಬಡತನ

Latest

Updates from around the world