ಆವೃತ್ತಿಗಳು
Kannada

ಬಿಎಂಟಿಸಿಯಲ್ಲಿ ಮಹಿಳೆಯರ ಸುರಕ್ಷತೆಗೆ ಹೊಸ ಸಹಾಯವಾಣಿ..

ವಿಶ್ವಾಸ್​​ ಭಾರಾಧ್ವಾಜ್​

YourStory Kannada
28th Feb 2016
Add to
Shares
3
Comments
Share This
Add to
Shares
3
Comments
Share

ಒಂದೆಡೆ ಸಾಧ್ಯವಾದಷ್ಟು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಹೆಚ್ಚು ಬಳಸಿ ಎಂದು ಬಿಎಂಟಿಸಿ ಬೆಂಗಳೂರಿನ ನಿವಾಸಿಗಳಲ್ಲಿ ಜಾಗೃತಿ ಮೂಡಿಸುತ್ತಿದೆ. ಆದರೆ ಇನ್ನೊಂದೆಡೆ ಬಿಎಂಟಿಸಿ ಬಸ್​​ಗಳಲ್ಲಿ ಸಂಜೆ ಹಾಗೂ ರಾತ್ರಿ ವೇಳೆ ಸಂಚರಿಸಲು ಮಹಿಳಾ ಪ್ರಯಾಣಿಕರು ಭಯಪಡುವ ಸ್ಥಿತಿಯಿದೆ. ಹೀನ ಮನಸ್ಥಿತಿಯ ಕೆಲವು ಪುರುಷ ಪ್ರಯಾಣಿಕರ ಲೈಂಗಿಕ ಕಿರುಕುಳ ಹಾಗೂ ವಿಕೃತಿಗಳಿಂದ ಮಹಿಳಾ ಪ್ರಯಾಣಿಕರು ಹಿಂಸೆ ಅನುಭವಿಸುವ ಸಾಕಷ್ಟು ಉದಾಹರಣೆ ದಿನನಿತ್ಯವೂ ಕಂಡುಬರುತ್ತಲೇ ಇರುತ್ತದೆ. ಜೊತೆಗೆ ಬಿಎಂಟಿಸಿಯ ಬಸ್​ನಿಲ್ದಾಣಗಳಲ್ಲಿ ಒಂಟಿ ಮಹಿಳೆಯರು ಬಸ್​ಗಾಗಿ ಕಾಯೋದು ಸಹ ದುಸ್ತರವಾಗಿ ಪರಿಣಮಿಸಿದೆ. ಈ ಎಲ್ಲಾ ಭೀತ ಸ್ಥಿತಿಯ ಬಗ್ಗೆ ಮಾಹಿತಿ ಇದ್ದರೂ ಇಷ್ಟು ವರ್ಷ ಸುಮ್ಮನಿದ್ದ ಬಿಎಂಟಿಸಿ ಕೊನೆಗೂ ಅತ್ಯುತ್ತಮ ನಿರ್ಧಾರವೊಂದನ್ನು ಕೈಗೊಂಡಿದೆ. ಬೆಂಗಳೂರಿನ ಮಹಿಳೆಯರ ರಕ್ಷಣೆಗಾಗಿ ಬಿಎಂಟಿಸಿ ಪ್ರತ್ಯೇಕ ಹೆಲ್ಪ್ ಲೈನ್ ಸೇವೆ ಆರಂಭಿಸಲಿದೆ.

image


ಮಹಾನಗರಿ ಬೆಂಗಳೂರಿನಲ್ಲಿ ಪ್ರತಿನಿತ್ಯ ಲಕ್ಷಾಂತರ ಮಹಿಳೆಯರು ತಮ್ಮ ವೈಯಕ್ತಿಕ ಹಾಗೂ ಕಚೇರಿಯ ಕೆಲಸದ ನಿಮಿತ್ತ ಬಿಎಂಟಿಸಿ ಬಸ್​ಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ತುಂಬಿ ತುಳುಕುವ ಬಸ್​ಗಳಲ್ಲಿ ಮಹಿಳೆಯರಿಗೆ ಯಾವುದೇ ಬಗೆಯ ಸುರಕ್ಷತೆ ಇಲ್ಲ ಅನ್ನುವ ಆರೋಪಗಳು ಸರ್ವೇ ಸಾಧಾರಣವಾಗಿತ್ತು. ಈ ಬಗ್ಗೆ ದಿವ್ಯ ನಿರ್ಲಕ್ಷ್ಯ ವಹಿಸಿದ್ದ ಬೆಂಗಳೂರು ಮೆಟ್ರೋ ಪಾಲಿಟನ್ ಟ್ರಾವಲ್ ಕಾರ್ಪೋರೇಷನ್ ಕೊನೆಗೂ ನಿದ್ದೆಯಿಂದೆಚ್ಚಂತಿದೆ. ಮಹಿಳೆಯರು ಯಾವುದೇ ಕಾರಣಕ್ಕೂ ಭಯಪಟ್ಟುಕೊಳ್ಳದೇ ನೆಮ್ಮದಿಯಾಗಿ ಸಂಚರಿಸಲು ಅನುವಾಗುವಂತೆ ದಿಟ್ಟ ಹೆಜ್ಜೆ ಮುಂದಿಟ್ಟಿದೆ. ಮಾರ್ಚ್ 8ರಿಂದ ಬಸ್ ಹಾಗೂ ಬಸ್ ನಿಲ್ದಾಣ ಅಥವಾ ಇನ್ನಿತರೆ ಸಾರ್ವಜನಿಕ ಸ್ಥಳಗಳಲ್ಲಿ ತೊಂದರೆಗೊಳಗಾಗುವ ಮಹಿಳೆಯರ ಸಂರಕ್ಷಣೆಗಾಗಿ ‘ಮಹಿಳಾ ಸುರಕ್ಷತಾ ಹೆಲ್ಪ್ ಲೈನ್ ಸೇವೆ’ ಶುರು ಮಾಡಲಿದೆ.

2012ರಲ್ಲಿ ದೇಶಾದ್ಯಂತ ತಲ್ಲಣ ಮೂಡಿಸಿದ್ದ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಳಿಕ ಉಳಿದ ರಾಜ್ಯಗಳ ಸಾರ್ವಜನಿಕ ಸಾರಿಗೆ ಸಂಸ್ಥೆಗಳಂತೆ ಬಿಎಂಟಿಸಿ ಸಹ, ಮಹಿಳೆಯರ ಸುರಕ್ಷತೆಗಾಗಿ ಮಹಿಳಾ ಪ್ರಯಾಣಿಕರ ಸುರಕ್ಷತಾ ಸಮಿತಿ ಪ್ರಾರಂಭಿಸಿತ್ತು. ಈ ಸಮಿತಿ ಬೆಂಗಳೂರಿನ ಮಹಿಳೆಯರು ಪ್ರಯಾಣದ ವೇಳೆ ಅನುಭವಿಸುವ ಕಿರುಕುಳಗಳನ್ನು ತಪ್ಪಿಸಲು ಅನೇಕ ಪರಿಣಾಮಕಾರಿ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಲೇ ಬಂದಿದೆ. ಆದರೆ ಸಾಕಷ್ಟು ವರ್ಷಗಳಿಂದ ಚರ್ಚೆಯಲ್ಲಿದ್ದ ಸಹಾಯವಾಣಿ ಸೇವೆಯ ಪ್ರಸ್ತಾಪ ಮಾತ್ರ ನೆನಗುದಿಗೆ ಬಿದ್ದಿತ್ತು. ಬಿಎಂಟಿಸಿ ಆರಂಭಿಸುತ್ತಿರುವ ಹೆಲ್ಪ್ ಲೈನ್ ಸೇವೆ ಯನ್ನು ಸಮರ್ಪಕವಾಗಿ ನಿರ್ವಹಿಸಲು ಈಗಾಗಲೆ ಬಿಎಂಟಿಸಿ ಸಿಬ್ಬಂದಿಗಳಿಗೆ ಸೂಕ್ತ ತರಬೇತಿ ನೀಡಲಾಗಿದೆ. ಮಹಿಳೆಯರಿಗೆ ಪ್ರಯಾಣದ ವೇಳೆ ಯಾವುದೇ ತರಹದ ತೊಂದರೆಗಳು ಎದುರಾದರೂ ಬಿಎಂಟಿಸಿಯ ಕಾಲ್ ಸೆಂಟರ್ ನಂಬರ್ 1800-425-1663 ಕ್ಕೆ ಕರೆ ಮಾಡಿ ನೆರವು ಪಡೆದುಕೊಳ್ಳಬಹುದು. ಈ ನಂಬರ್ ಡಯಲ್ ಮಾಡಿದ ನಂತರ 2 ಅಂಕಿ ಪ್ರೆಸ್ ಮಾಡಿದರೆ ನೇರವಾಗಿ ಕಾಲ್ ಸೆಂಟರ್​ಗೆ ಪ್ರಯಾಣಿಕರ ಮಾಹಿತಿ ತಲುಪುತ್ತದೆ. ಈಗಾಗಲೇ ಬಿಎಂಟಿಸಿ ಹೆಲ್ಪ್ ಲೈನ್ ಸೇವೆ ಚಾಲ್ತಿಯಲ್ಲಿದೆ. ಇದರ ಜೊತೆ ಮಹಿಳೆಯರ ಸುರಕ್ಷತೆಗಾಗಿ ಹೊಸ ಹೆಲ್ಪ್ ಲೈನ್ ಸೇವೆ ಆರಂಭಿಸಲಾಗುತ್ತಿದೆ. ಈಗಾಗಲೇ ಇದಕ್ಕಾಗಿ ತಯಾರಿ ಮಾಡಿಕೊಂಡಿದ್ದೇವೆ; ನಿಸ್ಸಂಶಯವಾಗಿ ಈ ಸೇವೆಯಿಂದಾಗಿ ಸಿಲಿಕಾನ್ ನಗರಿಯ ಮಹಿಳಾ ಪ್ರಯಾಣಿಕರಿಗೆ ಸಹಾಯಕವಾಗುತ್ತದೆ ಅನ್ನುವುದು ಬಿಎಂಟಿಸಿಯ ಸಾರ್ವಜನಿಕ ಸಂಪರ್ಕಾಧಿಕಾರಿ ರವಿಯವರ ಅಭಿಪ್ರಾಯ.

image


ಕಾಲ್ ಸೆಂಟರ್​ಗೆ ಮಾಹಿತಿ ತಲುಪುತ್ತಿದ್ದಂತೆ ಕೂಡಲೇ ತೊಂದರೆಗೊಳಗಾಗಿರುವ ಮಹಿಳೆಯರು ಯಾವ ಸ್ಥಳದಲ್ಲಿದ್ದಾರೋ ಅಲ್ಲಿರುವ ಪೊಲೀಸ್ ಹೊಯ್ಸಳ ವಾಹನಕ್ಕೆ ಸಂದೇಶ ರವಾನೆಯಾಗುತ್ತದೆ. ಇದರಿಂದ ಅಪಾಯದಲ್ಲಿರುವ ಮಹಿಳೆಯರಿರುವ ನಿರ್ದಿಷ್ಟ ಸ್ಥಳಕ್ಕೆ ಹೊಯ್ಸಳ ವಾಹನ ಧಾವಿಸಿ ರಕ್ಷಣೆ ನೀಡಲು ಸಾಧ್ಯವಾಗುತ್ತದೆ. ಹೊಯ್ಸಳ ಅಲಭ್ಯವಿರುವ ಕಡೆ ಸಾರಥಿ ಪಡೆ ಕಾರ್ಯಾಚರಣೆಗೆ ಮುಂದಾಗುತ್ತದೆ. ಬಿಎಂಟಿಸಿ ಆರಂಭಿಸಲು ಹೊರಟಿರುವ ಮಹಿಳಾ ಹೆಲ್ಪ್ ಲೈನ್ ಸೇವೆಗೆ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಕೆಲವು ಸ್ವತಂತ್ರ್ಯ ಎನ್.ಜಿ.ಒಗಳು ಕೂಡಾ ಬೆಂಬಲ ನೀಡಿವೆ. ಕೇವಲ ಪ್ರಯಾಣಿಕರಷ್ಟೇ ಅಲ್ಲದೇ ಬಿಎಂಟಿಸಿ ನಿರ್ವಾಹಕರು, ಚಾಲಕರಿಂದಲೂ ತೊಂದರೆಯಾದಾಗಲೂ ಮಹಿಳಾ ಪ್ರಯಾಣಿಕರು ಹೆಲ್ಪ್ ಲೈನ್ ಮೂಲಕ ದೂರು ಸಲ್ಲಿಸಬಹುದು. ಹೆಲ್ಪ್ ಲೈನ್ ಮೂಲಕ ದೂರು ದಾಖಲಾಗಿ ಯಾವ ಕ್ರಮಗಳೂ ಕೈಗೊಳ್ಳದೇ ಇದ್ದರೇ ನೇರವಾಗಿಯೂ ಬಿಎಂಟಿಸಿ ಕೇಂದ್ರಕ್ಕೆ ದೂರು ಸಲ್ಲಿಸಬಹುದು. ಒಟ್ಟಿನಲ್ಲಿ ಈಗಲಾದರೂ ಬಿಎಂಟಿಸಿ ಬೆಂಗಳೂರಿನ ಮಹಿಳೆಯರ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸುತ್ತಿರುವುದು ಸ್ವಾಗತಾರ್ಹ.

Add to
Shares
3
Comments
Share This
Add to
Shares
3
Comments
Share
Report an issue
Authors

Related Tags