ಆವೃತ್ತಿಗಳು
Kannada

ಅಮಿತ ಜೀವನೋತ್ಸಾಹದ ಚಟುವಟಿಕೆಯ ನಿರೂಪಕಿ ರೂಪಾ ಗುರುರಾಜ್

ಟೀಮ್​​ ವೈ.ಎಸ್​​.

3rd Nov 2015
Add to
Shares
8
Comments
Share This
Add to
Shares
8
Comments
Share

ಅಪಾರ ಜೀವನಪ್ರೀತಿ, ಅಮಿತ ಉತ್ಸಾಹ ಹೊಂದಿರುವ, ಸುಂದರವದನ ಹಾಗೂ ಸೃಜನಶೀಲ ವ್ಯಕ್ತಿತ್ವದ ಮಹಿಳೆ ರೂಪಾ ಗುರುರಾಜ್. ಕಳೆದ ಹಲವು ವರ್ಷಗಳಿಂದ ರೂಪಾ ಮುಖ್ಯವಾಹಿನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಟಿವಿ ಮಾಧ್ಯಮದ ನಿರೂಪಕಿಯಾಗಿ, ವಿಭಿನ್ನ ಕಾರ್ಯಕ್ರಮಗಳ ಸಂಯೋಜಕಿಯಾಗಿ, ರೇಡಿಯೋ ಜಾಕಿಯಾಗಿ, ಕ್ರಿಯಾತ್ಮಕ ರೇಡಿಯೋ ಕಾರ್ಯಕ್ರಮಗಳ ನಿರ್ಮಾಪಕಿಯಾಗಿ, ವೇದಿಕೆ ಕಾರ್ಯಕ್ರಮಗಳ ನಿರೂಪಕಿಯಾಗಿ, ಕೆನರಾ ಬ್ಯಾಂಕ್​ನ ಜನಧನ ಯೋಜನೆಯ ಸಹ ನಿರ್ವಾಹಕಿಯಾಗಿ ರೂಪಾ ತಮ್ಮ ವೃತ್ತಿ ಬದುಕಿನಲ್ಲಿ ಹಲವು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಾಹಿತ್ಯಪ್ರೇಮಿಯೂ ಆಗಿರುವ ಅವರು ತಪ್ಪದೇ ಪ್ರತೀ ಶನಿವಾರ ಸಾಮಾಜಿಕ ಜಾಲತಾಣ ಫೇಸ್​​ಬುಕ್​​ನಲ್ಲಿ ತಮ್ಮದೊಂದು ಚೆಂದದ ಫೋಟೋದ ಜೊತೆಗೆ ಪದ್ಯಗಳನ್ನು ಪೋಸ್ಟ್ ಮಾಡುವ ಹವ್ಯಾಸ ಹೊಂದಿದ್ದಾರೆ. ಈ ಅಭ್ಯಾಸವೇ ಅವರಿಗೆ ಸಾಕಷ್ಟು ಅಭಿಮಾನಿಗಳನ್ನು ದೊರಕಿಸಿಕೊಟ್ಟಿದೆ.

image


1998-99ರಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದ ವಾಣಿಜ್ಯ ಶಾಸ್ತ್ರ ಪದವಿದರೆ ರೂಪಾ ಬಹುಮುಖ ಪ್ರತಿಭೆ. ಸಧ್ಯ ಜಯನಗರ ಟಿ ಬ್ಲಾಕ್​​ನಲ್ಲಿ ವಾಸಿಸುತ್ತಿರುವ ರೂಪಾ ಪತಿ ನಾಗರಾಜ್ ಖಾಸಗಿ ಸಂಸ್ಥೆಯೊಂದರಲ್ಲಿ ಸೀನಿಯರ್ ಮ್ಯಾನೇಜರ್ ಹಾಗೂ ಮಾನವ ಸಂಪನ್ಮೂಲ ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದಾರೆ. 8ನೇ ತರಗತಿ ಓದುತ್ತಿರುವ ಮಗ ಅಶ್ವಿನ್ ಹಾಗೂ ಮುದ್ದು ಮಗಳು ಅದಿತಿಯೊಂದಿಗೆ ನೆಮ್ಮದಿಯಾಗಿ ಬದುಕುತ್ತಿರುವ ಅವರು ಫ್ರೀಲ್ಯಾನ್ಸರ್ ಆಗಿ ಮನೆಯಲ್ಲಿ ಕುಳಿತೇ ಪ್ರಾಜೆಕ್ಟ್​​ಗಳನ್ನು ನಿರ್ವಹಿಸುತ್ತಿದ್ದಾರೆ. ಕನ್ನಡ, ಇಂಗ್ಲೀಷ್ ಹಾಗೂ ಹಿಂದಿ ಭಾಷೆಗಳನ್ನು ಸರಾಗವಾಗಿ ಮಾತಾಡಬಲ್ಲ ರೂಪಾ, ಯಾವುದೇ ಕ್ಷೇತ್ರದಲ್ಲಾದರೂ ಕಾಲಿಟ್ಟು ಯಶ ಕಾಣಬಲ್ಲ ಗಟ್ಟಿಗಿತ್ತಿ.

ದೂರದರ್ಶನ ಚಂದನವಾಹಿನಿಯಲ್ಲಿ ವಾರ್ತಾ ನಿರೂಪಕಿಯಾಗಿದ್ದ ರೂಪಾ

ಸದಾ ನಸುನಗುವ ಸ್ನಿಗ್ದ ಸುಂದರಿ ರೂಪಾರಿಗೆ ಬಹಳ ಹಿಂದೆಯೇ ದೂರದರ್ಶನದಲ್ಲಿ ಉತ್ತಮ ಅವಕಾಶ ಒಲಿದಿತ್ತು. ಚಂದನವಾಹಿನಿಯಲ್ಲಿ ರೂಪಾ ಗುರುರಾಜ್ 2005ರಿಂದ 2009ರವರೆಗೆ ಪೂರ್ಣಕಾಲಿಕ ವಾರ್ತಾ ನಿರೂಪಕಿಯಾಗಿ ಕಾರ್ಯನಿರ್ವಹಿಸಿದ್ದರು. ಡಿಡಿ ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಡಾಕ್ಟರ್ ಹೆಚ್.ಎಸ್ ಪ್ರೇಮಾರೊಂದಿಗೆ ನೇರ ಸಂವಾದದಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳ ಪರಿಹಾರದ ಕಾರ್ಯಕ್ರಮವನ್ನು ಅವರು ನಡೆಸಿಕೊಡುತ್ತಿದ್ದರು. ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅನೇಕ ಡಾಕ್ಯುಮೆಂಟರಿಗಳಿಗೆ ರೂಪಾ ವಾಯ್ಸ್ ಓವರ್ ನೀಡಿದ್ದಾರೆ.

ಶ್ರೀಶಂಕರ ವಾಹಿನಿಯಲ್ಲೂ ರೂಪಾ ಹೆಜ್ಜೆ ಗುರುತು

ಭಕ್ತಿಪ್ರಧಾನ ವಾಹಿನಿ ಶ್ರೀ ಶಂಕರದಲ್ಲಿ 2010ರಿಂದ 2012ರವರೆಗೆ ರೂಪಾ ಅರೆಕಾಲಿಕ ನಿರೂಪಕಿಯಾಗಿ ಹಲವು ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಕರ್ನಾಟಕದ ಬಹಳಷ್ಟು ದೇವಾಲಯಗಳನ್ನು ಪರಿಚಯಿಸುವ ಪ್ರಾರ್ಥನಾ ಅನ್ನುವ ಕಾರ್ಯಕ್ರಮದಲ್ಲಿ ರೂಪಾ ನಿರೂಪಕಿಯಾಗಿದ್ದರು. ಕರ್ನಾಟಕದ ಹತ್ತು ಹಲವು ಚಾರಿತ್ರಿಕ ಹಾಗೂ ಧಾರ್ಮಿಕ ಸ್ಥಳಗಳ ಪರಿಚಯ ಮಾಡಿಸುವ ಕಾರ್ಯಕ್ರಮಕ್ಕೆ ನಿರೂಪಣೆಯನ್ನು ಇವರು ಬರೆದಿದ್ದರು. ಜೊತೆಗೆ ಆರೋಗ್ಯ ಸಂಬಂಧಿ ಕಾರ್ಯಕ್ರಮಗಳಿಗೆ ರೂಪಾ ಆ್ಯಂಕರ್ ಆಗಿ ಕಾರ್ಯನಿರ್ವಹಿಸಿದ ಅನುಭವ ಗಳಿಸಿದ್ದಾರೆ. ಮೇಲುಕೋಟೆಯ ಪ್ರಸಿದ್ಧ ವೈರಮುಡಿ ಉತ್ಸವದಲ್ಲಿ ಹಲವು ವರ್ಷಗಳ ಕಾಲ ಕಾರ್ಯಕ್ರಮಗಳನ್ನು ರೂಪಿಸಿ ವಾಯ್ಸ್ ಓವರ್ ನೀಡಿದ್ದಾರೆ.

image


ಚಟಪಟ ಮಾತಿನ ಮಲ್ಲಿಯ ರೇಡಿಯೋ ಯಾನ

ರೂಪಾ 2009ರಿಂದ 2014ರವರೆಗೆ ಎಫ್.ಎಂ ರೈನ್​ಬೋದಲ್ಲಿ ರೇಡಿಯೋ ಜಾಕಿಯಾಗಿ ಅನೇಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಕಮರ್ಷಿಯಲ್ ಕಾರ್ಯಕ್ರಮಗಳು, ಜಾಹಿರಾತುಗಳು ಹಾಗೂ ಸಾಮಾಜಿಕ ಜಾಗೃತಿಗೆ ಸಂಬಂಧಿಸಿದ ಹತ್ತು ಹಲವು ಕಾರ್ಯಕ್ರಮಗಳನ್ನು ಆಲೋಚಿಸಿ, ತರ್ಕಬದ್ಧವಾಗಿ ಹಾಗೂ ಪರಿಪೂರ್ಣ ಯೋಜನೆಗಳೊಂದಿಗೆ ಏರ್​​ಗೆ ತಂದ ಕೀರ್ತಿ ರೂಪಾರಿಗೆ ಸಲ್ಲಬೇಕು. ಅನೇಕ ರಾಜಕೀಯ ನೇತಾರರು, ಸಾಹಿತ್ಯಕ ಹಾಗೂ ಸಾಂಸ್ಕ್ರತಿಕ ರೂವಾರಿಗಳು ಹಾಗೂ ಸಿನಿಮಾ ಕ್ಷೇತ್ರಗಳ ಸೆಲೆಬ್ರಿಟಿಗಳ ತ್ವರಿತಗತಿಯ ಸಂದರ್ಶನ ಮಾಡುವುದರಲ್ಲೂ ರೂಪ ಸಿದ್ಧಹಸ್ತರು. ರೇಡಿಯೋದಲ್ಲಿ ಕಾರ್ಯನಿರ್ವಹಿಸುತ್ತಿದ್ದ ದಿನಗಳಲ್ಲಿ ಇಂತಹ ಅನೇಕ ಗಣ್ಯಾತಿಗಣ್ಯರ ಸಂದರ್ಶನ ನಡೆಸಿದ ಅನುಭವ ಅವರಿಗಿದೆ.

image


ಕೆಎಸ್ಐಸಿಯ ಪ್ರಚಾರ ಚಟುವಟಿಕೆಗಳಿಗೆ ಆ್ಯಂಕರ್ ಆಗಿ, ಸ್ಯಾಂಡಲ್​ವುಡ್ ಹಾಗೂ ಬಾಲಿವುಡ್ ನಟ-ನಟಿಯರಿಗೆ ಸಂಬಂಧಪಟ್ಟ ಕಾರ್ಯಕ್ರಮಗಳ ಕಾರ್ಯಕ್ರಮ ನಿರ್ಮಾಪಕಿಯಾಗಿ, ಬಿಡುಗಡೆಗೊಳ್ಳುವ ಕನ್ನಡ ಚಿತ್ರಗಳ ಪ್ರಮೋಷನ್​​ಗೆ ಸಂಬಂಧಿಸಿದ ಹಲವು ಸೃಜನಾತ್ಮಕ ಕಾರ್ಯಕ್ರಮಗಳ ರೂವಾರಿಯಾಗಿ ರೂಪಾ ರೇಡಿಯೋದಲ್ಲಿ ಹತ್ತು ಹಲವು ವಿಭಿನ್ನ ಕೆಲಸಗಳನ್ನು ಕೊಂಚವೂ ಲೋಪದೋಷಗಳಿಲ್ಲದೇ ನಿರ್ವಹಿಸಿದ್ದಾರೆ.

ಧ್ವನಿ ಪ್ರಸರಣ ಅಥವಾ ವಾಯ್ಸ್ ಓವರ್ ರೂಪಾರವರ ಇನ್ನೊಂದು ಸಹಪ್ರವೃತ್ತಿ. ಅವರು ಅನೇಕ ಸರ್ಕಾರಿ ಹಾಗೂ ಖಾಸಗಿ ಕಾರ್ಯಕ್ರಮಗಳ ಯೋಜನೆ, ದಾಖಲಾತಿ ಹಾಗೂ ಡಾಕ್ಯುಮೆಂಟರಿಗಳಿಗೆ ವಾಯ್ಸ್ ಓವರ್ ನೀಡಿದ್ದಾರೆ. ಬರವಣಿಗೆ ಹಾಗೂ ಜ್ಞಾಪಕಶಕ್ತಿಗೆ ಸಂಬಂಧಿಸಿದಂತೆ ರಫಿ ಉಲ್ಲಾ ಬೇಗ್ ನಡೆಸಿಕೊಡುವ ಕಾರ್ಯಕ್ರಮದ ನಿರೂಪಕಿಯೂ ರೂಪರವರೇ.

ರೂಪಾ, ರೇಡಿಯೋಗಳ ಧ್ವನಿ ಪ್ರಸರಣಕ್ಕೆ ಸಂಬಂಧಿಸಿದಂತೆ ನವದೆಹಲಿಯ ಪ್ರಸಾರ ಭಾರತಿ (ಆಲ್ ಇಂಡಿಯಾ ರೇಡಿಯೋ) ನೀಡುವ ವಾಣಿ ಸರ್ಟಿಫಿಕೇಟ್ ಗಳಿಸಿಕೊಂಡಿದ್ದಾರೆ. ಆಲ್ ಇಂಡಿಯಾ ರೇಡಿಯೋದ ಮಹಿಳಾ ಸಾಧಕಿಯರ ಸಂದರ್ಶನ ವನಿತಾ ವಿಹಾರ ಕಾರ್ಯಕ್ರಮವನ್ನು ರೂಪಾ ಈಗಲೂ ನಡೆಸಿಕೊಡುತ್ತಿದ್ದರೆ. ಈ ಮೂಲಕ ತಾವಿನ್ನೂ ಆರ್​​ಜೆಯಾಗಿ ಪ್ರಸ್ತುತತೆ ಉಳಿಸಿಕೊಂಡಿದ್ದನ್ನು ನೆನಪಿಸುತ್ತಾರೆ.

ವೃತ್ತಿಪರ ನಿರೂಪಕಿಯಾಗಿ ಹೊಸ ಹೆಜ್ಜೆ

ಕಳೆದೊಂದು ವರ್ಷದ ಈಚೆಗೆ ವೃತ್ತಿಪರ ನಿರೂಪಕಿಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ ರೂಪಾ ಗುರುರಾಜ್. ಈ ಕ್ಷೇತ್ರದಲ್ಲಿ ಸಮರ್ಪಕವಾಗಿ ಹಾಗೂ ಬದ್ಧತೆಯಿಂದ ಕೆಲಸ ಮಾಡುವವರ ಕೊರತೆ ಇದೆ ಅನ್ನುವ ರೂಪಾಗೆ ವೇದಿಕೆ ಕಾರ್ಯಕ್ರಮಗಳನ್ನು ನಡೆಸಿಕೊಡುವುದರಲ್ಲಿ ಅಪಾರ ಆಸಕ್ತಿಯೂ ಇದೆ. ಅವರ ಆಸಕ್ತಿಗೆ ತಕ್ಕಂತೆ ಅವರಿಗೆ ಪೂರಕವಾದ ಅವಕಾಶಗಳೂ ಲಭಿಸತೊಡಗಿವೆ. ಈವರೆಗೆ ರೂಪಾ ಸುಮಾರು 30ಕ್ಕೂ ಹೆಚ್ಚು ದೊಡ್ಡ ಸಮಾರಂಭಗಳ ವೇದಿಕೆ ಕಾರ್ಯಕ್ರಮ ನಿರ್ವಹಿಸಿದ್ದಾರೆ.

image


ಕುಮಾರಸ್ವಾಮಿ ಲೇಔಟ್​​ನಲ್ಲಿರುವ ದಯಾನಂದ ಸಾಗರ್ ಕಾಲೇಜಿನ ಆಡಿಟೋರಿಯಂನಲ್ಲಿ ನಡೆದ ಮೆಘಾ ಆಗ್ರೋಟೆಕ್ ಸಂಸ್ಥೆಯ ಬೆಳ್ಳಿ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನಿರೂಪಕಿಯಾಗಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದ್ದರು. ಈ ಮೂಲಕ ಮೊದಲ ಬಾರಿಗೆ ಸಮರ್ಥವಾಗಿ ಸ್ಟೇಜ್ ಶೋ ನಡೆಸಿಕೊಟ್ಟಿದ್ದರು.

ಬಳಿಕ ರಾಜರಾಜೇಶ್ವರಿ ಬಿಲ್ಡರ್ಸ್ ಸಂಸ್ಥೆಯ ಟೆಂಪಲ್ ಬೆಲ್ಸ್ ಪ್ರಾಪರ್ಟಿ ಲಾಂಚಿಂಗ್ ಕಾರ್ಯಕ್ರಮ, ಈಶಾನ್ಯ ಸಂಸ್ಥೆಯ ಐಜಿಎನ್ಸಿಎ ಎಸ್ಆರ್ಸಿ ಫೆಸ್ಟ್, ಜಕ್ಕೂರಿನ ಕೆಂಪೇಗೌಡ ಜಯಂತ್ಯೋತ್ಸವ, ಸಪ್ತಸ್ವರ ಆರ್ಟ್ಸ್ ಹಾಗೂ ಕ್ರಿಯೇಷನ್ಸ್​​ನವರ 17ನೇ ವರ್ಷದ ಸಂಕ್ರಮಣ-2015ರ ಕಾರ್ಯಕ್ರಮ ಮುಂತಾದ ಹಲವು ಕಾರ್ಯಕ್ರಮಗಳಿಗೆ ಜೀವಂತಿಕೆ ಒದಗಿಸಿದ್ದರು.

ಖ್ಯಾತ ಗಾಯಕಿ ಇಂದು ವಿಶ್ವನಾಥ್ ಹಾಗೂ ತಂಡದವರು ಆಯೋಜಿಸಿದ್ದ ಆಶಾ ಬೋಸ್ಲೇ, ಗೀತಾ ದತ್​ರ ಸುಮುಧುರ ಗೀತೆಗಳ ಗಾಯನ ಕಾರ್ಯಕ್ರಮ ಕಳೆಕಟ್ಟಿದ್ದರ ಹಿಂದೆ ರೂಪಾರವರ ನಿರೂಪಣಾ ಕೌಶಲ್ಯವೂ ಇತ್ತು. ಲೋಕೋಪಯೋಗಿ ಇಲಾಖೆಯ ಮನೋರಂಜನೆಯ ಸಂಘದವರು ಆಯೋಜಿಸಿದ್ದ, ಕಳೆದ ವರ್ಷದ ಕನ್ನಡ ರಾಜ್ಯೂತ್ಸವ ಕಾರ್ಯಕ್ರಮ, ಚೌಡಯ್ಯ ಮೆಮೋರಿಯಲ್ ಹಾಲ್​​ನಲ್ಲಿ ಜರುಗಿದ 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕೊಳಲಗಾನ ಚಿತ್ರಯಾನ ಕಾರ್ಯಕ್ರಮದಲ್ಲಿ ರೂಪಾ ನಿರೂಪಣೆ ಮಾಡಿ ಗಮನ ಸೆಳೆದಿದ್ದರು.

ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ವತಿಯಿಂದ ನಯನ ಸಂಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕನಕ ಕಾವ್ಯ ಸಭಾದಲ್ಲಿ ಅವರು ವೇದಿಕೆಯ ಕಾರ್ಯಕ್ರಮ ನಿರ್ವಹಿಸಿದ್ದರು. ಏಟ್ರಿಯಾ ಹೋಟೆಲ್​​ನಲ್ಲಿ ನಡೆದಿದ್ದ ಪ್ರಾಕ್ಟೀಸಿಂಗ್ ಆರ್ಕಿಟೆಕ್ಟ್ ಅಸೋಸಿಯೇಷನ್ (ಪಿಎಎ)ರವರ ವಾರ್ಷಿಕೋತ್ಸವ ಹಾಗೂ ಜಯನಗರದ ಕಾಸ್ಮೋಪಾಲಿಟನ್ ಕ್ಲಬ್​ನ ಚಾಲನಾ ಕಾರ್ಯಕ್ರಮಗಳಲ್ಲಿ ರೂಪಾ ವೇದಿಕೆಯಲ್ಲಿ ನಿರೂಪಕಿಯಾಗಿ ಮಿಂಚಿದ್ದರು.

image


ರೂಪಾರಿಗೆ ನಿರೂಪಕಿಯಾಗಿ ಅತ್ಯುತ್ತಮ ಅವಕಾಶ ಲಭ್ಯವಾದ ಕಾರ್ಯಕ್ರಮ ಜಯನಗರದ ಶಾಲಿನಿ ಗ್ರೌಂಡ್​​ನಲ್ಲಿ ನಡೆದಿದ್ದ ಪುರಂದರೋತ್ಸವ ಕಾರ್ಯಕ್ರಮ. ಪುರಂದರದಾಸರ ಜಯಂತಿ ಪ್ರಯುಕ್ತ, ಒಂದೇ ವೇದಿಕೆಯಲ್ಲಿ 2 ಸಾವಿರ ಗಾಯಕಿಯರ ಸತತ ಗಾಯನ ಕಾರ್ಯಕ್ರಮ ಪುರಂದರೋತ್ಸವದಲ್ಲಿ ನಿರೂಪಣೆ ಮಾಡಿದ್ದು ತಮ್ಮ ಜೀವನದ ಮರೆಯಲಾರದ ಕ್ಷಣ ಅಂತಾರೆ ರೂಪಾ ಗುರುರಾಜ್.

ಇದಲ್ಲದೇ ಇತ್ತೀಚೆಗಷ್ಟೇ ಬೆಲ್ ಹೋಟೆಲ್​​ನ ಕನ್ವೆನ್ಷನ್ ಹಾಲ್​​ನಲ್ಲಿ ನಡೆದ ಅಖಿಲ ಭಾರತೀಯ ಸಣ್ಣ ಹಾಗೂ ಮಧ್ಯಮ ಪತ್ರಿಕೆಗಳ ಒಕ್ಕೂಟದ ಮಾಧ್ಯಮ ಕಾರ್ಯಾಗಾರದಲ್ಲಿ ರೂಪಾ ಸಮರ್ಪಕ ನಿರೂಪಣೆಯೊಂದಿಗೆ ಕಾರ್ಯಕ್ರಮವನ್ನು ಚೆಂದಗಾಣಿಸಿಕೊಟ್ಟಿದ್ದರು. ಜೊತೆಗೆ ಐಟಿಸಿ ಗಾರ್ಡೇನಿಯಾ ಹೋಟೆಲ್​​ನಲ್ಲಿ ದೆಹಲಿ ಆರ್ಕಿಟೆಕ್ಟ್ಸ್​​ ಅಸೋಸಿಯೇಷನ್ ವತಿಯಿಂದ ಹಮ್ಮಿಕೊಂಡಿದ್ದ ಇನ್ಸ್​​ಫೈರಿಂಗ್ ಗ್ರೇಟ್ ಸ್ಪೇಸ್ ಕಾರ್ಯಾಗಾರವೂ ಅವರ ಅತ್ಯಂತ ಸಮರ್ಥ ನಿರ್ವಹಣೆಯೊಂದಿಗೆ ಯಶಸ್ವಿಯಾಗಿತ್ತು.

ಕಾರ್ಪೋರೇಟ್ ಕ್ಷೇತ್ರದಲ್ಲೂ ಸಮರ್ಪಕ ಕಾರ್ಯನಿರ್ವಹಣೆ

ಸೆಕೆಂಡ್ ಗೇರ್ ಅನ್ನುವ ಸಂಸ್ಥೆಯಲ್ಲಿ ವಾರದ ಕಥೆಗಳನ್ನು ಬರೆಯುವ ಯೋಜನೆಯನ್ನು ಅವರು ನಿರ್ವಹಿಸಿದ್ದಾರೆ. ಪ್ರಧಾನ ಮಂತ್ರಿ ಜನಧನ ಯೋಜನೆಗೆ ಸಂಬಂಧಿಸಿದ ಕೆನರಾ ಬ್ಯಾಂಕ್ ಪ್ರಾಯೋಜಿತ ಖಾಲಿ ಪರ್ಸ್ ಕೈ ತುಂಬಾ ಹಣ ಅವರಿನ್ನೊಂದು ಫ್ರೀಲ್ಯಾನ್ ಪ್ರಾಜೆಕ್ಟ್. ಈ ಯೋಜನೆಯ ಜಾಹಿರಾತಿಗಾಗಿ ಅನೇಕ ಬರಹಗಳನ್ನು, ರೇಡಿಯೋ ಸ್ಕ್ರಿಪ್ಟ್​​​ಗಳನ್ನು ಅವರು ಬರೆದಿದ್ದಾರೆ. ಈ ಯೋಜನೆಯ 36 ಅಧ್ಯಾಯಗಳನ್ನು ತಮ್ಮ ತಂಡದೊಂದಿಗೆ ರೂಪಾ ನಿರೂಪಿಸಿದ್ದಾರೆ.

ತಮ್ಮ ನಿತ್ಯದ ಚಟುವಟಿಕೆಗಳೊಂದಿಗೆ ಈ ಎಲ್ಲಾ ಕಾರ್ಯಗಳಿಗೂ ಮಹತ್ವ ನೀಡುವ ರೂಪಾ ನಿಜಕ್ಕೂ ವಿಶೇಷ ವ್ಯಕ್ತಿತ್ವದ ಮಹಿಳೆ. ಗೃಹಿಣಿಯಾಗಿ ಮನೆಯಲ್ಲಿನ ಕೆಲಸಗಳು ಹಾಗೂ ಹೊರಗಿನ ತಮ್ಮ ಕೆಲಸಗಳ ಮಧ್ಯೆ ಹೊಂದಾಣಿಕೆ ಮಾಡಿಕೊಂಡು ಅಂಕೆ ತಪ್ಪದಂತೆ ನಿರ್ವಹಿಸುವ ಅವರ ಬದ್ಧತೆ ಹಾಗೂ ಜಾಣ್ಮೆ ನಮ್ಮ ಬಹಳಷ್ಟು ಮಹಿಳೆಯರಿಗೆ ಮಾದರಿ. ಭವಿಷ್ಯದಲ್ಲಿ ನಿರೂಪಕಿಯಾಗಿಯೇ ಮುಂದುವರಿಯುವ ಜೊತೆಗೆ ಇವೆಂಟ್ ಮ್ಯಾನೇಜ್​​ಮೆಂಟ್ ನಿರ್ವಹಿಸಬೇಕು ಅನ್ನುವ ಕನಸು ರೂಪಾ ಗುರುರಾಜ್​​ರದ್ದು. ರೂಪಾ ಕನಸುಗಳೆಲ್ಲಾ ಈಡೇರಲಿ ಅಂತ ಯುವರ್​ಸ್ಟೋರಿ ಹಾರೈಸುತ್ತದೆ.

Add to
Shares
8
Comments
Share This
Add to
Shares
8
Comments
Share
Report an issue
Authors

Related Tags