ಆರು ಮಕ್ಕಳ ಬಡ ತಾಯಿಯ ದುಃಸ್ಥಿತಿಯನ್ನು ಕಂಡು ಮರುಗಿದ ಕೇರಳ

ತನ್ನ ಮಕ್ಕಳ ಸಣ್ಣ ಹೊಟ್ಟೆಯನ್ನು ತುಂಬಿಸಲೂ ಸಹ ಈ ನತದೃಷ್ಟ ತಾಯಿಗೆ ಆಹಾರವೇ ಸಿಗಲಿಲ್ಲ. ಆದರೆ, ಹಸಿವನ್ನು ನೀಗಿಸಿಕೊಳ್ಳಲು ಮಣ್ಣನ್ನೇ ತಿನ್ನುತ್ತಿದ್ದ ಮಕ್ಕಳನ್ನು ನೋಡಲಾಗದೆ ಆ ತಾಯಿ ತನ್ನ ಮಕ್ಕಳನ್ನು ಅಧಿಕಾರಿಗಳಿಗೆ ತಮ್ಮ ವಶಕ್ಕೆ ತೆಗೆದುಕೊಳ್ಳುವಂತೆ ಪತ್ರ ಬರೆದರು.

ಆರು ಮಕ್ಕಳ ಬಡ ತಾಯಿಯ ದುಃಸ್ಥಿತಿಯನ್ನು ಕಂಡು ಮರುಗಿದ ಕೇರಳ

Tuesday December 03, 2019,

2 min Read

ಹೆಚ್ಚೆಂದರೆ ಅಲ್ಲಿನ ಆಡಳಿತ ಮಂಡಳಿಯಿಂದ ಕೇವಲ ಒಂದು ಕಿಮೀ ದೂರದಲ್ಲಿರುವ ಉಪ್ಲಮೂಡು ಬ್ರಿಡ್ಜ್‌‌ನ ಬಳಿ ತಾತ್ಕಾಲಿಕ ಟೆಂಟೊಂದರಲ್ಲಿ ತನ್ನ ಆರು ಜನ ಮಕ್ಕಳೊಂದಿಗೆ ಜೀವಿಸುತ್ತಿರುವ ಶ್ರೀದೇವಿಯವರ ವ್ಯಥೆ ಕೇರಳದ ಜನತೆಯನ್ನು ಬೆಚ್ಚಿಬೀಳಿಸಿದೆ.


ಸಾಂಕೇತಿಕ ಚಿತ್ರ


ಅವರ ಈ ದಾರುಣ ಸ್ಥಿತಿ ಬೆಳಕಿಗೆ ಬಂದಿದ್ದು ಮಕ್ಕಳ ಕಲ್ಯಾಣ ಸಮಿತಿಯು ಶ್ರೀದೇವಿಯವರ ನಾಲ್ವರು- ಏಳು ಮತ್ತು ಐದು ವರ್ಷ ವಯಸ್ಸಿನ ಇಬ್ಬರು ಹುಡುಗರು ಹಾಗೂ ನಾಲ್ಕು ಮತ್ತು ಎರಡು ವರ್ಷದ ಇಬ್ಬರು ಹೆಣ್ಣುಮಕ್ಕಳನ್ನು ತಮ್ಮ ಆಶ್ರಯಕ್ಕೆ ತೆಗೆದುಕೊಂಡ ನಂತರವೇ.


ತಾಯಿ ಹಾಗೂ ತಿಂಗಳ ಹರೆಯದ ಎರಡು ಹಸುಗೂಸುಗಳನ್ನು ರಾಜ್ಯ ಸರ್ಕಾರದ ಆಶ್ರಯಕ್ಕೆ ಸ್ಥಳಾಂತರಗೊಳಿಸಲಾಗಿದೆ. ಈಗ, ಈ ಇಡೀ ಬಡ ಕುಟುಂಬಕ್ಕೆ ಮೂಲೆ ಮೂಲೆಗಳಿಂದ ಸಹಾಯದ ಮಹಾಪೂರವೇ ಹರಿದುಬರುತ್ತಿದೆ.


ತಿರುವನಂತಪುರದ ಮೇಯರ್ ಕೆ ಶ್ರೀ ಕುಮಾರ್ ಮಂಗಳವಾರದಂದು ಶ್ರೀದೇವಿಯವರಿಗೆ ಸ್ಥಳೀಯ ಪೌರನಿಗಮದಲ್ಲಿ ಕೆಲಸ ಮಾಡಲು ನೌಕರಿ ಪತ್ರವನ್ನು ನೀಡಿದ್ದಾರೆ. ಅವರ ಮಕ್ಕಳಿಗೆ ಶಿಕ್ಷಣದ ಕೊರತೆ ಉಂಟಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಆಡಳಿತ ವ್ಯವಸ್ಥೆ ವಹಿಸಿಕೊಂಡಿದೆ. ಅಷ್ಟೇ ಅಲ್ಲದೆ ಆ ಕುಟುಂಬಕ್ಕೆ ಒಂದು ಪ್ಲಾಟ್‌ ಸಹ ನೀಡಲಾಗುತ್ತದೆ.


ಸೋಮವಾರ ಅವರ ಮನೆಗೆ ಬೇಟಿ ನೀಡಿ ಶ್ರೀ ಕುಮಾರ್ ಆ ತಾಯಿಗೆ ಒಂದು ತಾತ್ಕಾಲಿಕ ಉದ್ಯೋಗವನ್ನು ಕಲ್ಪಿಸುವುದಾಗಿ ಭರವಸೆ ನೀಡಿದ್ದಾರೆ.


"ಲೈಫ್ ಮಿಷನ್ ಅಡಿಯಲ್ಲಿ ವಸತಿವಂಚಿತರಿಗಾಗಿ ನಿರ್ಮಿಸಲಾಗಿರುವ ಒಂದು ಅಪಾರ್ಟ್ಮೆಂಟ್ ಅನ್ನು ಕುಟುಂಬಕ್ಕೆ ನೀಡಲಾಗುವುದು" ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.


ಕುಟುಂಬವು ಸದ್ಯಕ್ಕೆ ಇಲ್ಲಿ ರೈಲ್ವೆ ಹಳಿಯ ಪಕ್ಕದ ತಾತ್ಕಾಲಿಕ ಮನೆಯಲ್ಲಿ ವಾಸಿಸುತ್ತಿದೆ.


ಅಧಿಕಾರಿಗಳ ಪ್ರಕಾರ, ಮಹಿಳೆ ಸಿಡಬ್ಲ್ಯುಸಿಗೆ ಪತ್ರ ಬರೆದಿದ್ದು, ಪತಿ ಕುಡಿತದ ದಾಸನಾಗಿದ್ದ ಮತ್ತು ಆ ಕಾರಣದಿಂದಾಗಿ ಅವರು ತಮ್ಮ ಮಕ್ಕಳಿಗೆ ಆಹಾರವನ್ನು ನೀಡಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.


ಆರು ಜನ ಮಕ್ಕಳಲ್ಲಿ ಒಂದು ಮಗು ಒಮ್ಮೆ ಹಸಿವಿನಿಂದ ಮಣ್ಣನ್ನು ತಿನ್ನುತ್ತಿತ್ತು ಎಂದು ಮಹಿಳೆ ಹೇಳಿದ್ದಾರೆ.


ಪತ್ರವನ್ನು ಸ್ವೀಕರಿಸಿದ ನಂತರ, ಸಿಡಬ್ಲ್ಯೂಸಿ ಸದಸ್ಯರು ಸೋಮವಾರ ಕುಟುಂಬದ ತಾತ್ಕಾಲಿಕ ಮನೆಗೆ ಭೇಟಿ ನೀಡಿದರು ಮತ್ತು ಅವರ ಆರು ಮಕ್ಕಳಲ್ಲಿ ನಾಲ್ವರನ್ನು ವಶಕ್ಕೆ ಪಡೆದರು.


ಆದರೆ, ಮಹಿಳೆಯ ಪತಿ ಮಾಧ್ಯಮಗಳಿಗೆ, "ಮಕ್ಕಳನ್ನು ಸಿಡಬ್ಲ್ಯೂಸಿಗೆ ಹಸ್ತಾಂತರಮಾಡುವ ಬಗ್ಗೆ ತಿಳಿಸಿಲ್ಲ ಮತ್ತು ಇದು ಅವರ ಕೆಲವು ಸಂಬಂಧಿಕರ ಒತ್ತಡದಲ್ಲಿ ಮಾಡಿಸಿದ್ದಾರೆ" ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.


"ನಾನು ದೈನಂದಿನ ಕೂಲಿ ಕಾರ್ಮಿಕ. ನಾನು ಅವರನ್ನು ಸಾಧ್ಯವಾದ ಎಲ್ಲ ರೀತಿಯಿಂದಲೂ ನೋಡಿಕೊಳ್ಳುತ್ತಿದ್ದೆ" ಎಂದು ಅವರು ಹೇಳಿದರು.


ದೇವಸ್ವಂ ಸಚಿವ ಕಡಕಂಪಲ್ಲಿ ಸುರೇಂದ್ರನ್ ಮತ್ತು ವಿಧಾನಸಭೆ ಸ್ಪೀಕರ್ ಪಿ. ಶ್ರೀರಾಮಕೃಷ್ಣನ್ ಮಾತನಾಡಿ, ಕುಟುಂಬದ ಅವಸ್ಥೆ ರಾಜ್ಯಕ್ಕೆ "ನೋವಿನ" ಮತ್ತು "ನಾಚಿಕೆಗೇಡು" ಸಂಗತಿಯಾಗಿದೆ ಎಂದರು.


ವಿಧಾನಸಭೆಯ ಪ್ರತಿಪಕ್ಷದ ನಾಯಕ ರಮೇಶ್ ಚೆನ್ನಿಥಾಲಾ ಕೂಡ ಮನೆಗೆ ಭೇಟಿ ನೀಡಿದ್ದರು.


"ಬಡತನದಿಂದಾಗಿ ಮಗು ಮಣ್ಣನ್ನು ತಿನ್ನಬೇಕಾಗಿರುವುದು ರಾಜ್ಯಕ್ಕೆ ನಾಚಿಕೆಗೇಡಿನ ಸಂಗತಿ. ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು" ಎಂದು ಅವರು ಹೇಳಿದರು.


ಮಕ್ಕಳ ಶಿಕ್ಷಣದ ಬಗ್ಗೆ ರಾಜ್ಯವು ಕಾಳಜಿ ವಹಿಸುತ್ತದೆ ಎಂದು ಆರೋಗ್ಯ ಸಚಿವ ಕೆ ಕೆ ಶೈಲಾಜಾ ದೆಹಲಿಯಲ್ಲಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.


"ಎಲ್ಲಾ ನಾಲ್ಕು ಮಕ್ಕಳು ಈಗ ಸರ್ಕಾರದ ರಕ್ಷಣೆಯಲ್ಲಿರುತ್ತಾರೆ. ಅವರ ಶಿಕ್ಷಣ ಮತ್ತು ಆರೋಗ್ಯವನ್ನು ನಾವು ನೋಡಿಕೊಳ್ಳುತ್ತೇವೆ" ಎಂದು ಅವರು ಹೇಳಿದರು.