ಸಿಗರೇಟ್‌ ತುಂಡುಗಳಿಂದ ಉಪಯುಕ್ತ ವಸ್ತುಗಳನ್ನು ತಯಾರಿಸುತ್ತಿರುವ ಸ್ಟಾರ್ಟಪ್

ನೋಯ್ಡಾ ಮೂಲದ ಕೋಡ್ ಎಂಟರ್‌ಪ್ರೈಸಸ್ ಎಲ್‌ಎಲ್‌ಪಿ ಭಾರತದ ಮೊದಲ ಸಿಗರೇಟ್ ತ್ಯಾಜ್ಯ ನಿರ್ವಹಣೆ ಮತ್ತು ಮರುಬಳಕೆ ಮಾಡುವ ಸಂಸ್ಥೆಯಾಗಿದೆ.

ಸಿಗರೇಟ್‌ ತುಂಡುಗಳಿಂದ ಉಪಯುಕ್ತ ವಸ್ತುಗಳನ್ನು ತಯಾರಿಸುತ್ತಿರುವ ಸ್ಟಾರ್ಟಪ್

Thursday January 09, 2020,

4 min Read

ನೋಯ್ಡಾ ಮೂಲದ ಕೋಡ್ ಎಂಟರ್‌ಪ್ರೈಸಸ್ ಎಲ್‌ಎಲ್‌ಪಿ ಭಾರತದ ಮೊದಲ ಸಿಗರೇಟ್ ತ್ಯಾಜ್ಯ ನಿರ್ವಹಣೆ ಮತ್ತು ಮರುಬಳಕೆ ಮಾಡುವ ಸಂಸ್ಥೆಯಾಗಿದೆ. ಇಬ್ಬರು ಯುವ ಸ್ನೇಹಿತರಿಂದ 2016 ರಲ್ಲಿ ಪ್ರಾರಂಭವಾದ ಸಾಮಾಜಿಕ ಉದ್ಯಮವು ತನ್ನ ಕಾರ್ಯಾಚರಣೆಯನ್ನು ಭಾರತದಾದ್ಯಂತ 20 ರಾಜ್ಯಗಳಿಗೆ ತ್ವರಿತವಾಗಿ ಹೆಚ್ಚಿಸಿದೆ. ಇದು ಸಿಗರೇ‌ಟ್ ತ್ಯಾಜ್ಯವನ್ನು ಮರುಬಳಕೆ ಮಾಡುವುದು ಮತ್ತು ಅದರಿಂದ ಆಕರ್ಷಕ ಉಪ ಉತ್ಪನ್ನಗಳನ್ನು ರಚಿಸುವುದನ್ನು ಒಳಗೊಂಡಿದ.


ಸಿಗರೇ‌ಟ್ ತುಂಡುಗಳು ವಿಶ್ವದ ಅತ್ಯಂತ ಅಪಾಯಕಾರಿ ತ್ಯಾಜ್ಯವಾಗಿವೆ. ಪ್ರತಿ ವರ್ಷ ಒಂದು ಅಂದಾಜಿನ ಪ್ರಕಾರ 0.85 ಶತಕೋಟಿ ಕೆಜಿ ವಿಷಕಾರಿ ಸಿಗರೇಟ್ ತ್ಯಾಜ್ಯ ಉತ್ಪತ್ತಿಯಾಗುತ್ತದೆ; ಇದು ಪರಿಸರ ಮಾಲಿನ್ಯವನ್ನು ಉಂಟುಮಾಡುವುದಲ್ಲದೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.


ವಿಶಾಲ್ ಹಾಗೂ ನಮನ್


ದೀರ್ಘಕಾಲದವರೆಗೆ ಸ್ನೇಹಿತರಾಗಿದ್ದ ನಮನ್(23) ಮತ್ತು ವಿಶಾಲ್(26) ಅವರು ಒಂದು ದಿನ ಸಂಜೆ ಸ್ನೇಹಿತರ ಗುಂಪಿನಿಂದ ಉತ್ಪತ್ತಿಯಾಗುವ ಸಿಗರೇ‌ಟ್ ತ್ಯಾಜ್ಯದ ಪ್ರಮಾಣವನ್ನು ಕಂಡು ಆಘಾತಕ್ಕೊಳಗಾದರು. "ಪಿಜಿಯಲ್ಲಿನ ಒಂದು ಕೋಣೆಯು ಅಷ್ಟು ಕಸವನ್ನು ಉತ್ಪಾದಿಸಬಹುದಾದರೆ, ವಿಶ್ವಾದ್ಯಂತ ಧೂಮಪಾನಿಗಳಿಂದ ಉತ್ಪತ್ತಿಯಾಗುವ ಅಪಾಯಕಾರಿ ತ್ಯಾಜ್ಯದ ಬಗ್ಗೆ ನಾವು ಆಶ್ಚರ್ಯಪಟ್ಟಿದ್ದೇವೆ," ಎಂದು ನಮನ್ ನೆನಪಿಸಿಕೊಳ್ಳುತ್ತಾರೆ.


ಸಿಗರೇಟ್ ತ್ಯಾಜ್ಯ ಸಂಗ್ರಹಿಸುವ ವಿಬಿನ್ಸ್ ಬುಟ್ಟಿ


ನೋಯ್ಡಾ ನಿವಾಸಿಯಾದ ನಮನ್ ದೆಹಲಿ ವಿಶ್ವವಿದ್ಯಾಲದಲ್ಲಿ ಬಿ.ಕಾಂ ಓದುತ್ತಿದ್ದರು, ಮತ್ತು ವಿಶಾಲ್ ಯುಎಸ್ಎಯ ಕಾರ್ನಿವಲ್ ಕ್ರೂಸ್ ಲೈನ್ಸ್ ನಲ್ಲಿ ವೃತ್ತಿಪರ ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿದ್ದರು. ತಮ್ಮ ವೃತ್ತಿ ಜೀವನದ ಗುರಿಯೆಡೆಗೆ ದುಡಿಯುತ್ತಲೆ ಇಬ್ಬರು ಸಿಗರೇಟ್‌ ತ್ಯಾಜ್ಯ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಸಿದ್ಧರಾದರು. ಮುಂದಿನ ಕೆಲವು ತಿಂಗಳುಗಳಲ್ಲಿ ಕೆಲವು ಸಂಶೋಧನೆ ಮತ್ತು ಪ್ರಯೋಗಗಳೊಂದಿಗೆ, ಸಿಗರೇ‌ಟ್ ತುಂಡುಗಳಲ್ಲಿ ಬಳಸುವ ಪಾಲಿಮರ್ ಸೆಲ್ಯುಲೋಸ್ ಅಸಿಟೇಟ್ ಅನ್ನು ಸ್ವಚ್ಛಗೊಳಿಸಲು ಮತ್ತು ಮರುಬಳಕೆ ಮಾಡಲು ಅವರು ಅತ್ಯಂತ ಕಾರ್ಯಸಾಧ್ಯವಾದ ರಾಸಾಯನಿಕ ಪ್ರಕ್ರಿಯೆಯನ್ನು ಕಂಡುಹಿಡಿದರು.


ಅದು ಸೆಪ್ಟೆಂಬರ್, 2015. ಅದರ ಮುಂದಿನ ವರ್ಷದ ಜುಲೈನಲ್ಲಿ ನಾವು ಭಾರತದ ಮೊದಲ ಸಿಗರೇಟ್ ತ್ಯಾಜ್ಯ ನಿರ್ವಹಣಾ ಸಂಸ್ಥೆಯಾದ ಕೋಡ್ ಎಂಟರ್‌ಪ್ರೈಸ್ ಎಲ್‌ಎಲ್‌ಪಿ ಅನ್ನು ಪ್ರಾರಂಭಿಸಿದ್ದೇವು. ಈ ಸಮಯದಲ್ಲಿ, ಸಂಸ್ಥೆಯ ಕಾನೂನು ಚೌಕಟ್ಟನ್ನು ನಿರ್ವಹಿಸುವಾಗ ಮತ್ತು ಕಾರ್ಯಾಚರಣೆಗಳನ್ನು ಕಂಡುಹಿಡಿಯುವಾಗ ನಾನು ಇನ್ನು ಅಧ್ಯಯನ ಮಾಡುತ್ತಿದ್ದೆ,” ಎಂದು ಅದೇ ವರ್ಷ ಪದವಿ ಮುಗಿಸಿದ ನಮನ್ ಹೇಳುತ್ತಾರೆ.


ಮುಂದುವರೆದು, "ನಾವು ಭಾರತೀಯ ಮರುಬಳಕೆ ಕ್ಷೇತ್ರದಲ್ಲಿ ಬದಲಾವಣೆ ತರಲು ಮತ್ತು ಸಿಗರೇ‌ಟ್ ತ್ಯಾಜ್ಯದ ಅನಿಯಮಿತ ನಿರ್ವಹಣೆಯನ್ನು ಪರಿಹರಿಸಲು ಬಯಸಿದ್ದೇವೆ," ಎಂದು ಅವರು ಹೇಳುತ್ತಾರೆ.


ಸಿಗರೇ‌ಟ್ ತ್ಯಾಜ್ಯ ಸಂಗ್ರಹಣೆ

"ನಮಗೆ ದೆಹಲಿ-ಎನ್‌ಸಿಆರ್ ಪ್ರದೇಶ ಚಿರಪರಿಚಿತ, ಅದಕ್ಕೆ ದೆಹಲಿ, ನೋಯ್ಡಾದಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿ, ಗುರುಗ್ರಾಮ್ವನ್ನೆ ಮೊದಲು ಆಯ್ಕೆ ಮಾಡಿಕೊಂಡೆವು. ನಾವು ಜನರಲ್ಲಿ ಕರಪತ್ರಗಳನ್ನು ವಿತರಿಸಿದ್ದೇವೆ ಮತ್ತು ನಾವು ಏನು ಮಾಡಲು ಪ್ರಯತ್ನಿಸುತ್ತಿದ್ದೇವೆಂದು ವಿವರಿಸುತ್ತಾ ಸಿಗರೇಟ್ ಮಾರಾಟಗಾರರನ್ನು ಭೇಟಿ ಮಾಡಿದ್ದೇವೆ. ನಾವು ಅವರಿಗೆ ವಿಬಿನ್ಸ್ ಎಂಬ ಸಿಗರೇ‌ಟ್ ತ್ಯಾಜ್ಯ ಸಂಗ್ರಹ ಬಿನ್ ಅನ್ನು ಒದಗಿಸಿದ್ದೇವೆ, ಅದರ ಮೂರು ತಿಂಗಳ ಬಳಕೆಗೆ ನಮಗೆ 99 ರೂಗಳನ್ನು ಪಾವತಿಸಬೇಕಾಗಿತ್ತು. ಮತ್ತು ನಾವು ಸಿಗರೇಟ್ ತ್ಯಾಜ್ಯಕ್ಕೆ ಪ್ರತಿ ಕಿಲೋಗೆ 250 ರೂ. ನೀಡುತ್ತೇವೆ ಎಂದು ಭರವಸೆ ನೀಡಿದ್ದೆವು,” ಎಂದರು.


ಈ ಜೋಡಿ ಶೀಘ್ರದಲ್ಲೇ ಅನಿರೀಕ್ಷಿತ ಸವಾಲುಗಳನ್ನು ಎದುರಿಸಿತು.


“ನಮ್ಮ ಅನೇಕ ವಿಬಿನ್ಸ್ ಬುಟ್ಟಿಯನ್ನು ಕಳವು ಮಾಡಲಾಗಿತ್ತು, ಮತ್ತು ಒಂದಷ್ಟನ್ನು ಬಳಸಿರಲೆ ಇಲ್ಲ. ಆದಾಗ್ಯೂ, ನಾವು ನಂಬಿದ ಸಿಗರೇಟ್ ಮಾರಾಟಗಾರರೊಂದಿಗೆ ಕೆಲಸ ಮಾಡುವುದನ್ನು ಮುಂದುವರೆಸಿದ್ದೇವೆ. ನಾವು ಪ್ರತಿ ಹದಿನೈದು ದಿನ ಈ ಮಾರಾಟಗಾರರನ್ನು ಭೇಟಿ ಮಾಡಿ, ಅವರ ಸಿಗರೇಟ್ ತ್ಯಾಜ್ಯದ ಬುಟ್ಟಿಯನ್ನು ತೂಗುತ್ತೇವೆ ಮತ್ತು ಅದಕ್ಕೆ ತಕ್ಕಂತೆ ಪಾವತಿಸುತ್ತೇವೆ. ಅವರು ತ್ಯಾಜ್ಯಕ್ಕೆ ಹಣ ಪಡೆಯುವುದಲ್ಲದೆ, ನಮ್ಮಿಂದ ಉಚಿತವಾಗಿ ಸ್ವಚ್ಛಗೊಳಿಸುವ ಸೇವೆಗಳನ್ನು ಸಹ ಪಡೆದುಕೊಂಡರು,” ಎಂದು ನಮನ್ ನಗುವಿನೊಂದಿಗೆ ಹೇಳುತ್ತಾರೆ.


ನಮನ್ ಮತ್ತು ವಿಶಾಲ್ ಈ ತಿರಸ್ಕರಿಸಿದ ಸಿಗರೇ‌ಟ್ ತುಂಡುಗಳನ್ನು ಮರುಬಳಕೆಗೆ ಅವರು ರೂಪಿಸಿದ ರಾಸಾಯನಿಕ ಪ್ರಕ್ರಿಯೆಯನ್ನು ಬಳಸಿದರು. ಸಂಸ್ಥೆಯ ಯುಎಸ್ಪಿಯ ದೃಷ್ಠಿಯಿಂದ ಈ ರಾಸಾಯನಿಕ ಸಂಯೋಜನೆಯು ವಿಧಾನವನ್ನು ಗೌಪ್ಯವಾಗಿಡಲಾಗಿದೆ.


ಉಪ-ಉತ್ಪನ್ನಗಳಲ್ಲಿ ಉಳಿದಿರುವ ತಂಬಾಕಿನಿಂದ ತಯಾರಿಸಿದ ಸಾವಯವ ಮಿಶ್ರಗೊಬ್ಬರ ಪುಡಿ ಮತ್ತು ತೋಟಗಳು ಮತ್ತು ನರ್ಸರಿಗಳಿಗೆ ಬಳಸಬಹುದಾದ ಕಾಗದದ ಹೊದಿಕೆಗಳು ಸೇರಿವೆ. ಮರುಬಳಕೆ ಮಾಡಿದ ಪಾಲಿಮರ್ ವಸ್ತುವನ್ನು, ಹೂಮಾಲೆಗಳು, ಆಟಿಕೆಗಳು, ಪರಿಕರಗಳು, ಕೀ ಚೈನ್‌ಗಳನ್ನು ತಯಾರಿಸಲು ಬಳಸಲಾಗುತ್ತದೆ.


ತಮ್ಮ ಆರಂಭಿಕ ಪ್ರಚಾರಕ್ಕಾಗಿ ಇವರಿಬ್ಬರು ಸಾಮಾಜಿಕ ಮಾಧ್ಯಮವನ್ನು ವ್ಯಾಪಕವಾಗಿ ಬಳಸಿದರು. ಕಾಲಾನಂತರದಲ್ಲಿ, ಅವರ ವಿಶ್ವಾಸಾರ್ಹತೆ ಹೆಚ್ಚಾದಂತೆ, ಸ್ಥಳೀಯ ಮತ್ತು ರಾಷ್ಟ್ರೀಯ ಮಾಧ್ಯಮಗಳು ಈ ಉಪಕ್ರಮದ ಬಗ್ಗೆ ಮಾತನಾಡಲು ಪ್ರಾರಂಭಿಸಿದವು.


"20 ಕ್ಕೂ ಹೆಚ್ಚು ಪತ್ರಿಕೆಗಳು ಮತ್ತು ಮಾಧ್ಯಮ ಸಂಸ್ಥೆಗಳು ನಮ್ಮನ್ನು ಸಂದರ್ಶಿಸಿವೆ, ಈ ಕಾರಣದಿಂದಾಗಿ ನಮ್ಮೊಂದಿಗೆ ಪಾಲುದಾರರಾಗಲು ಬಯಸುವ ದೆಹಲಿಯ ಹೊರಗಿನ ಜನರಿಂದ ನಾವು ಕೊಡುಗೆಗಳನ್ನು ಪಡೆಯಲು ಪ್ರಾರಂಭಿಸಿದೆವು," ಎಂದು ನಮನ್ ಹೇಳುತ್ತಾರೆ.


“ನಮ್ಮೊಂದಿಗೆ ಪಾಲುದಾರರಾಗಲು ಬಯಸುವ ಎಲ್ಲರನ್ನು ನಾವು ಸ್ವಾಗತಿಸಿದ್ದೇವೆ. ನಾವು ತಯಾರಿಸಲು ಮತ್ತು ಮಾರಾಟ ಮಾಡಲು ಬಯಸಿದ ಉತ್ಪನ್ನಗಳಿಗೆ, ತಿರಸ್ಕರಿಸಿದ ಸಿಗರೇ‌ಟ್ ತುಂಡುಗಳು ಕಚ್ಚಾ ವಸ್ತುವಾಗಿದೆ.”


ಪಾನ್ ಇಂಡಿಯಾ ಕಾರ್ಯಾಚರಣೆ ಯೊಂದಿಗೆ ಕೈಜೋಡಿಸಿದ ದೇಶದ ವಿವಿಧ ಭಾಗದ ಸಹವರ್ತಿಗಳು.




ಪಾನ್ ಇಂಡಿಯಾ ಕಾರ್ಯಾಚರಣೆ

ದೇಶಾದ್ಯಂತದ ಕೋಡ್ ಎಂಟರ್‌ಪ್ರೈಸ್‌ನ ವಿವಿಧ ಸಹವರ್ತಿಗಳ ಸಹಾಯದಿಂದ ಮಾರಾಟ ಮಾಡುತ್ತೇವೆ. ಇದು ನಮ್ಮ ಪಾನ್ ಇಂಡಿಯಾ ಕಾರ್ಯಾಚರಣೆಯ ಭಾಗವಾಗಿದೆ. ಕೋಡ್ ಎಂಟರ್ಪ್ರೈಸ್ 20 ರಾಜ್ಯಗಳಲ್ಲಿ 100 ಜಿಲ್ಲೆಗಳನ್ನು ಒಳಗೊಂಡಿದ್ದು, 60 ಸಹವರ್ತಿಗಳನ್ನು ಹೊಂದಿದೆ. ಒಪ್ಪಂದದ ಆಧಾರದ ಮೇಲೆ ಕೆಲಸ ಮಾಡುವ ಈ ಸಹವರ್ತಿಗಳು ತಮ್ಮ ನಿಯೋಜಿತ ಜಿಲ್ಲೆಗಳಿಂದ ಸಿಗರೇಟ್ ತ್ಯಾಜ್ಯವನ್ನು ಪೂರೈಸುತ್ತಾರೆ.


"ನಾವು ಪ್ರತಿ ತಿಂಗಳು ಸುಮಾರು 300 ರಿಂದ 400 ಕೆಜಿ ಸಿಗರೇಟ್ ತುಂಡುಗಳನ್ನು ಸ್ವೀಕರಿಸುತ್ತೇವೆ, ಅವುಗಳಲ್ಲಿ ಹೆಚ್ಚಿನವು ಭಾರತದ ದೂರದ ಮೂಲೆಗಳಿಂದ ಭಾರತೀಯ ರೈಲ್ವೆಯ ಪಾರ್ಸೆಲ್ ಸೇವೆಯ ಮೂಲಕ ಕಳುಹಿಸಲ್ಪಡುತ್ತವೆ," ಎಂದು ನಮನ್ ಹೇಳುತ್ತಾರೆ.


ಕಳೆದ ಒಂದುವರೆ ವರ್ಷಗಳ ಕಾರ್ಯಾಚರಣೆಯಲ್ಲಿ, ಕೋಡ್ ಎಂಟರ್ಪ್ರೈಸ್ ನಾಲ್ಕು ಟನ್‌ಗಳಷ್ಟು ಸಿಗರೇಟ್ ತ್ಯಾಜ್ಯವನ್ನು ಮರುಬಳಕೆ ಮಾಡಿದೆ. ತಳಮಟ್ಟದಲ್ಲಿ, ಸಿಗರೇ‌ಟ್ ತ್ಯಾಜ್ಯವನ್ನು ಸಂಗ್ರಹಿಸಲು 10,000 ಕ್ಕೂ ಹೆಚ್ಚು ವಿಬಿನ್‌ಗಳನ್ನು ಸ್ಥಾಪಿಸಲಾಗಿದೆ. ಸಿಗರೇ‌ಟ್ ಮಾರಾಟಗಾರರು, ವೈಯಕ್ತಿಕ ಧೂಮಪಾನಿಗಳು, ಕಚೇರಿ ಸಂಸ್ಥೆಗಳು ಮತ್ತು ಚಿಂದಿ ಆಯ್ದುಕೊಳ್ಳುವವರು ಸೇರಿದಂತೆ ಇದು 5,000 ಕ್ಕೂ ಹೆಚ್ಚು ವ್ಯಕ್ತಿಗಳಿಗೆ ಆದಾಯವನ್ನು ನೀಡುತ್ತಿದೆ.


ನಮನ್ ಮತ್ತು ವಿಶಾಲ್ ವ್ಯವಹಾರದ ಕಾರ್ಯಾಚರಣೆಯನ್ನು ನೋಡಿಕೊಂಡರೆ, ನೋಯ್ಡಾದಲ್ಲಿರುವ ಮರುಬಳಕೆ ಘಟಕವನ್ನು ಇಬ್ಬರು ಉದ್ಯೋಗಿಗಳ ತಂಡ ನಡೆಸುತ್ತಿದೆ. ಇದು 15-20 ಕೆಜಿ ಸಾವಯವ ಕಾಂಪೋಸ್ಟ್ ಪುಡಿ ಮತ್ತು ಉಪಯುಕ್ತ ಪ್ರಮಾಣದ ಕಲಾಕೃತಿಗಳನ್ನು ತಯಾರಿಸಲು ಬಳಸುವ ಮರುಬಳಕೆಯ ಪಾಲಿಮರ್ ವಸ್ತುಗಳನ್ನು ಉತ್ಪಾದಿಸುತ್ತದೆ.


"ನಮ್ಮ ಉಪ-ಉತ್ಪನ್ನಗಳು ಸಾಮಾನ್ಯ ಉತ್ಪನ್ನ ವರ್ಗಕ್ಕೆ ಬರುತ್ತವೆ ಆದರೆ ಕಡಿಮೆ ಉತ್ಪಾದನಾ ವೆಚ್ಚವನ್ನು ಹೊಂದಿರುವುದರಿಂದ, ಅಸ್ತಿತ್ವದಲ್ಲಿರುವ ವ್ಯವಹಾರಗಳ ಮೇಲೆ ನಮಗೆ ಸ್ಪಷ್ಟವಾದ ಸ್ಪರ್ಧೆಯಿದೆ," ಎಂದು ನಮನ್ ತಿಳಿಸುತ್ತಾರೆ.


ಸಿಗರೇಟ್ ತ್ಯಾಜ್ಯದಿಂದ ತಯಾರಾದ ಉತ್ಪನ್ನಗಳು.


ಭವಿಷ್ಯದ ಯೋಜನೆಗಳು

2020 ರ ವೇಳೆಗೆ ಲಾಭದಾಯಕತೆಯನ್ನು ಪಡೆಯಲು ಉಪ-ಉತ್ಪನ್ನಗಳ ಉತ್ಪಾದನೆ ಮತ್ತು ಮಾರಾಟವನ್ನು ಹೆಚ್ಚಿಸಲು ಇವರಿಬ್ಬರು ಯೋಜಿಸಿದ್ದಾರೆ.

“ಸಿಗರೇಟ್ ತುಂಡುಗಳಿಂದ ತೆಗೆದ ಸೆಲ್ಯುಲೋಸ್ ಅಸಿಟೇಟ್‌ನ ಶಾಖ ಪ್ರತಿರೋಧಕತೆ ಮತ್ತು ಉನ್ನತ ಸೂಸುವಿಕೆಯ ಗುಣಗಳಿಂದ ಅದು ಬರೀ ಹತ್ತಿಯಂತೆ ಕಾರ್ಯ ನಿರ್ವಹಿಸದೆ, ಅನೇಕ ಸಂಭಾವ್ಯ ಅನ್ವಯಿಕೆಗಳನ್ನು ಹೊಂದಿದೆ. ಅಡಿಗೆ ಚಿಮಣಿಗಳಿಗೆ ಅನ್ವಯವಾಗುವ ಗಾಳಿ-ಶುದ್ಧೀಕರಣ ವ್ಯವಸ್ಥೆಗಳ ತಯಾರಿಕೆಯಲ್ಲಿ ಅದರ ಸಂಭಾವ್ಯ ಬಳಕೆಯ ಕುರಿತು ನಾವು ಸಂಶೋಧನೆ ನಡೆಸುತ್ತಿದ್ದೇವೆ ಮತ್ತು ಮುಂದಿನ ವರ್ಷಗಳಲ್ಲಿ ಹೊಸ ಮತ್ತು ಹೆಚ್ಚು ಉಪಯುಕ್ತ ಉಪ-ಉತ್ಪನ್ನಗಳೊಂದಿಗೆ ನಾವು ಬರಲು ಸಾಧ್ಯವಾಗುತ್ತದೆ,” ಎನ್ನುತ್ತಾರೆ ನಮನ್.