ಆವೃತ್ತಿಗಳು
Kannada

ಜನಸೇವಕ, ಗಾಂಧಿವಾದಿ ಅಣ್ಣಾ ಹಜಾರೆ ಅವರ ಜೀವನಗಾಥೆ..

ಟೀಮ್ ವೈ.ಎಸ್.ಕನ್ನಡ 

21st Aug 2016
Add to
Shares
1
Comments
Share This
Add to
Shares
1
Comments
Share

ಅಣ್ಣಾ ಹಜಾರೆ ಆಧುನಿಕ ಭಾರತದ ಅತ್ಯಂತ ಜನಪ್ರಿಯ ಹಾಗೂ ಪ್ರಭಾವಶಾಲಿ ಸಾಮಾಜಿಕ ಕಾರ್ಯಕರ್ತರು. ದೇಶದ ಸರ್ವತೋಮುಖ ಅಭಿವೃದ್ಧಿ, ಜನಹಿತ ಹಾಗೂ ಪ್ರಜಾಪ್ರಭುತ್ವ ಬಲಪಡಿಸಲು ಅವರು ಜನಪ್ರಿಯ ಆಂದೋಲನ ನಡೆಸಿದ್ದಾರೆ. ಭ್ರಷ್ಟಾಚಾರ, ಬಡತನ ಮತ್ತು ನಿರುದ್ಯೋಗ ಸಮಸ್ಯೆ ವಿರುದ್ಧ ಅವರ ಹೋರಾಟ ಮುಂದುವರಿದಿದೆ. ರಾಲೇಗಣ ಸಿದ್ಧಿಯನ್ನು ಆದರ್ಶ ಗ್ರಾಮವನ್ನಾಗಿ ಮಾಡುವ ಮೂಲಕ ಅವರು ದೇಶದ ಇತರ ಹಳ್ಳಿ ಹಳ್ಳಿಗಳಿಗೂ ಪ್ರೇರಣೆಯಾಗಬಲ್ಲ ಕಥೆಯನ್ನು ಕಟ್ಟಿಕೊಟ್ಟಿದ್ದಾರೆ. ಹಳ್ಳಿಗಳನ್ನು ಶ್ರೀಮಂತ ಮತ್ತು ಸಮೃದ್ಧಗೊಳಿಸಲು ಅಣ್ಣಾ ಹಜಾರೆ ದಾರಿ ತೋರಿಸಿಕೊಟ್ಟಿದ್ದಾರೆ.

ಆರ್​ಟಿಐ ಮತ್ತು ಲೋಕಪಾಲ ಕಾಯ್ದೆಗಾಗಿ ಅಣ್ಣಾ ನಡೆಸಿದ ಆಂದೋಲನ ಇಡೀ ದೇಶವನ್ನು ಒಗ್ಗೂಡಿಸಿದೆ. ಮಕ್ಕಳು, ಯುವಕರು, ವೃದ್ಧರಿಂದ ಹಿಡಿದು ಎಲ್ಲರೂ ಹೋರಾಟಕ್ಕೆ ಸಾಥ್ ಕೊಟ್ಟಿದ್ದಾರೆ. ಇಡೀ ದೇಶವೇ ಅಣ್ಣಾ ಅಣ್ಣಾ ಎನ್ನತೊಡಗಿದೆ. ಮಹಾನ್ ವ್ಯಕ್ತಿತ್ವದ ಕ್ರಾಂತಿಕಾರಿ ನಾಯಕನ ಬದುಕಿನಲ್ಲಾದ ಮಹತ್ವಪೂರ್ಣ ಘಟನೆಗಳು ಹೋರಾಟದ ಬಗ್ಗೆ ಅವರಿಂದಲೇ ತಿಳಿಯಲು ನಾವು ಸಮಯ ಕೇಳಿದ್ದೆವು. ಕಿಶನ್​ನಿಂದ ಅಣ್ಣಾ ಆಗಿ ಬದಲಾದ ಕಥೆಯನ್ನು ಅವರು ಯುವರ್ ಸ್ಟೋರಿ ಜೊತೆ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ ತಮ್ಮ ಬಾಲ್ಯದ ಸಿಹಿ ಕಹಿ ನೆನಪುಗಳನ್ನು ಕೂಡ ಹೇಳಿಕೊಂಡಿದ್ದಾರೆ. ಭಾರತೀಯ ಸೇನೆಯಲ್ಲಿ ಕೆಲಸ ಮಾಡುವ ಸಂದರ್ಭದ ರೋಮಾಂಚಕಾರಿ ಹಾಗೂ ಐತಿಹಾಸಿಕ ಅನುಭವಗಳನ್ನೂ ಅವರು ಬಿಚ್ಚಿಟ್ಟರು. ಜನರಿಗೆ ಇದುವರೆಗೂ ಗೊತ್ತಿಲ್ಲದ ವಿಚಾರಗಳನ್ನು ಹೇಳಿದ್ರು. ಅಣ್ಣಾ ಸಂದರ್ಶನದ ಮೊದಲ ಭಾಗ ಇಲ್ಲಿದೆ.

ಅಣ್ಣಾ ಹುಟ್ಟಿದ್ದು ಮಹಾರಾಷ್ಟ್ರದ ಅಹಮದ್​ನಗರ ಬಳಿಯಿರುವ ಭಿಂಗಾರದಲ್ಲಿ. ಕೆಲಸ ಅರಸಿಕೊಂಡು ಅಣ್ಣಾ ಅವರ ಅಜ್ಜ ಭಿಂಗಾರಕ್ಕೆ ಬಂದಿದ್ರು. ರಾಲೇಗಣ ಸಿದ್ಧಿಯಲ್ಲಿ ಹೊಲವೇನೋ ಇತ್ತು. ಆದ್ರೆ ವರುಣನ ಕಣ್ಣಾಮುಚ್ಚಾಲೆಯಿಂದ ಫಸಲು ಕೈಸೇರುತ್ತಿರಲಿಲ್ಲ. ಹಾಗಾಗಿ ಅಣ್ಣಾ ಅವರ ಕುಟುಂಬ ಭಿಂಗಾರ್ಗೆ ಬಂದು ನೆಲೆಸಿತ್ತು. ಅಣ್ಣಾ ಅವರ ಅಜ್ಜ ಬ್ರಿಟಿಷ್ ಸೇನೆಯಲ್ಲಿ ಜಮಾದಾರರಾಗಿದ್ರು. ತಂದೆ, ಚಿಕ್ಕಪ್ಪ, ಅತ್ತೆ ಹೀಗೆ ಎಲ್ಲ ನೆಂಟರಿಷ್ಟರು ಭಿಂಗಾರ್ನಲ್ಲೇ ನೆಲೆಸಿದ್ರು. ಅಣ್ಣಾ ಹಜಾರೆ ಹುಟ್ಟಿದ್ದು ಕೂಡ ಇಲ್ಲೇ. ಬಾಬುರಾವ್ ಹಜಾರೆ ಹಾಗೂ ಲಕ್ಷ್ಮಿ ಹಜಾರೆ ಅವರ ಮೊದಲ ಪುತ್ರ ಅಣ್ಣಾ ಹಜಾರೆ. ಅವರಿಗೆ ಹೆತ್ತವರು ಕಿಷನ್ ಅಂತಾ ಹೆಸರಿಟ್ಟಿದ್ರು. ಕಿಷನ್ ಎಲ್ಲರ ಪ್ರೀತಿಪಾತ್ರ ಮಗುವಾಗಿದ್ದ. ತಮ್ಮನ್ನ ಖುಷಿಯಾಗಿಡಲು ಮನೆಯವರು ಏನೆಲ್ಲಾ ಮಾಡ್ತಿದ್ರು ಅನ್ನೋದು ಅಣ್ಣಾಗೆ ಈಗಲೂ ನೆನಪಿದೆ. ಇಷ್ಟೆಲ್ಲ ಪ್ರೀತಿ ವಿಶ್ವಾಸವಿದ್ರೂ ಆರ್ಥಿಕ ದುಸ್ಥಿತಿಯಿಂದಾಗಿ ಎಲ್ಲವನ್ನೂ ಕೊಡಲು ಅವರಿಂದ ಸಾಧ್ಯವಾಗಲಿಲ್ಲ ಎನ್ನುತ್ತಾರೆ ಅಣ್ಣಾ.

4ನೇ ತರಗತಿವರೆಗೆ ಅಣ್ಣಾ ಭಿಂಗಾರ್​ನ ಸರ್ಕಾರಿ ಶಾಲೆಯಲ್ಲೇ ಓದಿದ್ದಾರೆ. ಬಳಿಕ ಅವರ ಮಾವ ತಮ್ಮೊಂದಿಗೆ ಮುಂಬೈಗೆ ಕರೆದೊಯ್ದರು. ಅವರಿಗೆ ಒಬ್ಬ ಮಗಳು ಮಾತ್ರವಿದ್ದಳು, ಕಿಷನ್ನನ್ನು ಮಗನಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿ ಮಾವ ಮುಂಬೈಗೆ ಕರೆತಂದ್ರು. ಮಗಳ ಮದುವೆ ಆದ್ಮೇಲೆ ತಾನು ಒಂಟಿಯಾಗ್ತೇನೆ ಅನ್ನೋದು ಮಾವನ ಅಳಲಾಗಿತ್ತು. ಉಳಿದ ಮಕ್ಕಳ ಜವಾಬ್ಧಾರಿ ಇದ್ದಿದ್ರಿಂದ ಪೋಷಕರು ಕಿಷನ್​ನನ್ನು ಕರೆದೊಯ್ಯುವಂತೆ ಮಾವನ ಬಳಿ ಕೇಳಿದ್ದರು. ಅವರ ಒತ್ತಡದ ಮುಂದೆ ಅಣ್ಣಾ ತಲೆಬಾಗಲೇಬೇಕಾಯ್ತು. ಭಿಂಗಾರ್​ನಲ್ಲಿದ್ದಷ್ಟು ದಿನ ಅಣ್ಣಾ ಆಟ-ಪಾಠ ಅಂತಾ ಉಳಿದ ಮಕ್ಕಳಂತೆಯೇ ಬೆಳೆದಿದ್ದರು. ಅಣ್ಣಾಗೆ ಚಿಕ್ಕಂದಿನಲ್ಲಿ ಆಟವಾಡುವ ಆಸಕ್ತಿ ತುಂಬಾನೇ ಇತ್ತು. ಅವಕಾಶ ಸಿಕ್ಕಾಗಲೆಲ್ಲ ಸ್ನೇಹಿತರ ಜೊತೆ ಆಡುತ್ತಿದ್ರು. ಗಾಳಿಪಟ ಹಾರಿಸುವುದು ಅಂದ್ರೆ ಎಲ್ಲಿಲ್ಲದ ಪ್ರೀತಿ, ಅವರ ಮನಸ್ಸು ಕೂಡ ಗಾಳಿಪಟದಂತೆ ಎತ್ತರಕ್ಕೆ ಹಾರುತ್ತಿತ್ತು. ಗಾಳಿಪಟ ಮೇಲೇರಿದಂತೆ ಅವರ ಸಂತೋಷ ಕೂಡ ಹೆಚ್ಚುತ್ತಿತ್ತು. ಆಗಸದಲ್ಲಿ ಪಾರಿವಾಳದಂತೆ ಹಾರಬೇಕೆಂದು ಅವರಿಗಾಸೆ. ಅವರು ಬಾಲ್ಯದಲ್ಲಿ ಪಾರಿವಾಳವನ್ನು ಕೂಡ ಸಾಕಿದ್ದರು. ಅಷ್ಟೇ ಅಲ್ಲ ಗೋಲಿ ಆಡುವುದರಲ್ಲಿ ಕೂಡ ಅಣ್ಣಾ ನಿಸ್ಸೀಮರಾಗಿದ್ದರು. ``ಆಕಾಶದಲ್ಲಿ ಪಾರಿವಾಳಗಳ ಹಾರಾಟ ನೋಡೋದಂದ್ರೆ ನನಗೆ ಅತ್ಯಾನಂದ. ನಾನು ಎಷ್ಟು ದೂರಕ್ಕೆ ಕೊಂಡೊಯ್ದು ಬಿಟ್ಟು ಬಂದ್ರೂ ಅದು ಮತ್ತೆ ನನ್ನ ಮನೆಗೆ ಮರಳಿ ಬರುತ್ತಿತ್ತು. ಅಷ್ಟು ಬುದ್ಧಿವಂತ ಪಕ್ಷಿ ಅದು'' ಎನ್ನುತ್ತಾರೆ ಅಣ್ಣಾ.

ಆಟೋಟಗಳಲ್ಲಿ ಹೆಚ್ಚಿನ ಆಸಕ್ತಿ ಇದ್ದಿದ್ರಿಂದ ಅಣ್ಣಾ ಓದಿನ ಕಡೆಗೆ ಹೆಚ್ಚು ಗಮನಹರಿಸಲೇ ಇಲ್ಲ. ``ಆದ್ರೆ ನನ್ನ ಮೈಂಡ್ ಚೆನ್ನಾಗಿತ್ತು. ಮನೆಯಲ್ಲಿ ಓದದೇ ಇದ್ರೂ ನಾನು ಮೊದಲ ರ್ಯಾಂಕ್​ ಬರುತ್ತಿದ್ದೆ. ಟೀಚರ್ ಹೇಳಿದ್ದನ್ನು ಚೆನ್ನಾಗಿ ಕೇಳಿಸಿಕೊಳ್ತಿದ್ದ ನಾನು, ಅದನ್ನು ಮರೆಯುತ್ತಿರಲಿಲ್ಲ'' ಎನ್ನುತ್ತಾರೆ ಅವರು. ಶಾಲೆಯಿಂದ ಬರ್ತಿದ್ದಂತೆ ಅಣ್ಣಾ ಗೆಳೆಯರೊಂದಿಗೆ ಆಡಲು ಹೊರಡುತ್ತಿದ್ರು. ಆಟದಲ್ಲಿ ಮಗ್ನರಾದ್ರೆ ಸಮಯದ ಪರಿವೆಯೇ ಇರುತ್ತಿರಲಿಲ್ಲ. ಹಸಿವು ಕಾಡಲು ಶುರು ಮಾಡಿದ್ಮೇಲೆ ಮನೆಗೆ ಬರ್ತಾ ಇದ್ರು. ಸಂಜೆ 7.30ರವರೆಗೂ ಸ್ನೇಹಿತರೊಂದಿಗೆ ಆಡುತ್ತಲೇ ಇರುತ್ತಿದ್ರು. ರಾಲೇಗಣ ಸಿದ್ಧಿಯ ಯಾದವ ಬಾಬಾ ಮಂದಿರದಲ್ಲಿ ನಡೆದ ಈ ಭೇಟಿಯಲ್ಲಿ ಅಣ್ಣಾ ತಾವು ಮೊದಲ ಬಾರಿ ಸುಳ್ಳು ಹೇಳಿದ್ದನ್ನು ಕೂಡ ನೆನಪಿಸಿಕೊಂಡ್ರು. ಅದೇ ಅವರ ಜೀವನದ ಮೊದಲ ಹಾಗೂ ಕೊನೆಯ ಸುಳ್ಳಾಗಿತ್ತು. ಮೊದಲ ಮತ್ತು ಕೊನೆಯ ಸುಳ್ಳು ಹೇಳಿದ ಆ ಸಮಯದಲ್ಲಿ ಅಣ್ಣಾ 4ನೇ ತರಗತಿಯಲ್ಲಿ ಓದುತ್ತಿದ್ರು.

ರಜಾದಿನಗಳಲ್ಲಿ ಅಣ್ಣಾ ತವರೂರಿಗೆ ಬಂದ್ರು, ಅಭ್ಯಾಸದಂತೆ ಪುಸ್ತಕಗಳನ್ನು ಬದಿಗಿಟ್ಟು ಆಟೋಟಗಳಲ್ಲಿ ತೊಡಗಿಕೊಂಡ್ರು. ಒಂದು ದಿನ ಬಹಳ ಸಮಯ ಸ್ನೇಹಿತರೊಂದಿಗೆ ಅಣ್ಣಾ ಆಟವಾಡುತ್ತಿದ್ರು. ಮನೆಗೆ ಬರ್ತಿದ್ದಂತೆ ಆಯಾಸದಿಂದ ನಿದ್ದೆಬಂದುಬಿಟ್ಟಿತ್ತು. ಮರುದಿನ ಹೋಮ್ ವರ್ಕ್ ಮಾಡದೇ ಶಾಲೆಗೆ ಹೋದರು. ತರಗತಿಯಲ್ಲಿ ಶಿಕ್ಷಕರು ಎಲ್ಲಾ ವಿದ್ಯಾರ್ಥಿಗಳ ಹೋಮ್ ವರ್ಕ್ ಚೆಕ್ ಮಾಡಲಾರಂಭಿಸ್ತಿದ್ದಂತೆ ಅಣ್ಣಾಗೆ ಭಯ ಶುರುವಾಯ್ತು. ಏನು ಮಾಡಬೇಕೆಂದು ತೋಚಲಿಲ್ಲ. ಹೋಮ್ ತೋರಿಸುವಂತೆ ಶಿಕ್ಷಕರು ಕೇಳಿದಾಗ ಹೊಡೆತ ತಿನ್ನುವ ಭಯದಲ್ಲಿ ಅಣ್ಣಾ ಸುಳ್ಳು ಹೇಳಿದ್ರು. ಹೋಮ್ ವರ್ಕ್ ಮಾಡಿದ್ದೇನೆ ಆದ್ರೆ ನೋಟ್ ಬುಕ್ ಮನೆಯಲ್ಲೇ ಬಿಟ್ಟು ಬಂದಿದ್ದೇನೆಂದು ಸುಳ್ಳು ಹೇಳಿಬಿಟ್ರು. ಕೂಡಲೇ ಶಿಕ್ಷಕರು ಮನೆಗೆ ಹೋಗಿ ನೋಟ್ ಬುಕ್ ತರುವಂತೆ ಸೂಚಿಸಿದ್ರು.

ಅಣ್ಣಾ ತಮ್ಮ ತಾಯಿಯನ್ನು ತುಂಬಾ ಪ್ರೀತಿಸುತ್ತಿದ್ರು. ಅಮ್ಮನಿಂದ ಯಾವ ವಿಷಯವನ್ನೂ ಮುಚ್ಚಿಡುತ್ತಿರಲಿಲ್ಲ. ಮನೆಗೆ ಬರ್ತಿದ್ದಂತೆ ಅಣ್ಣಾ ಮುಂದಿಟ್ಟ ಬೇಡಿಕೆ ಕೇಳಿ ಅವರ ಅಮ್ಮ ಕೋಪಗೊಂಡ್ರು. ಹೋಮ್ ವರ್ಕ್ ಪೂರ್ತಿ ಮಾಡುತ್ತೇನೆ ಆದ್ರೆ ಇವತ್ತು ಶಾಲೆಗೆ ಹೋಗುವುದಿಲ್ಲ ಅಂತಾ ಅಣ್ಣಾ ಹಠ ಹಿಡಿದ್ರು. ಆದ್ರೆ ಮರುದಿನ ಅಣ್ಣಾ ಜೊತೆಗೆ ಅವರ ತಾಯಿ ಕೂಡ ಶಾಲೆಗೆ ಹೋಗಿ, ನಿನ್ನೆ ಮನೆಗೆ ಬಂದಿದ್ದ ಮಗನನ್ನು ತಾನೇ ಬೇರೆ ಕೆಲಸಕ್ಕೆ ಕಳುಹಿಸಿದ್ದೆ, ಹಾಗಾಗಿ ಆತ ಮರಳಿ ಶಾಲೆಗೆ ಬರಲು ಸಾಧ್ಯವಿಲ್ಲ ಎಂದು ಹೇಳಬೇಕೆಂದು ತಾಯಿಗೆ ಅಣ್ಣಾ ಒತ್ತಾಯಿಸಿದ್ರು. ಇದನ್ನು ಕೇಳಿ ಕೋಪಗೊಂಡ ಅವರ ತಾಯಿ, ``ನೀನು ಸುಳ್ಳು ಹೇಳುವುದಲ್ಲದೆ ನನಗೂ ಸುಳ್ಳು ಹೇಳುವಂತೆ ಒತ್ತಾಯಿಸುತ್ತಿದ್ದೀಯಾ, ನಾನು ಬಿಲ್ ಕುಲ್ ಸುಳ್ಳು ಹೇಳಲಾರೆ'' ಎಂದ್ರು. ತಾಯಿಯ ಕೋಪ ನೋಡಿ ಅಣ್ಣಾ ಹೆದರಿದ್ರು. ಸುಳ್ಳು ಹೇಳಿರುವುದು ಗೊತ್ತಾದರೆ ಶಾಲೆಯಲ್ಲಿ ಅವಮಾನವಾಗುತ್ತದೆ, ಶಿಕ್ಷಕರಿಂದ ಹೊಡೆತ ತಿನ್ನಬೇಕಾಗಬಹುದು ಎಂಬ ಹೆದರಿಕೆ ಹೆಚ್ಚಾಗಿತ್ತು. ಶಾಲೆಗೆ ಬಂದು ಸುಳ್ಳು ಹೇಳದೇ ಇದ್ರೆ ತಾವು ಶಾಲೆಗೆ ಹೋಗುವುದನ್ನೇ ನಿಲ್ಲಿಸಿಬಿಡುವುದಾಗಿ ಅಣ್ಣಾ ಅಮ್ಮನ ಬಳಿ ಹೇಳಿದ್ರು.

ಎಲ್ಲ ತಾಯಂದಿರ ಹೃದಯವೂ ಒಂದೇ ತೆರನಾಗಿರುತ್ತದೆ ಎನ್ನುತ್ತಾರೆ ಅಣ್ಣಾ. ತಮ್ಮ ಮಕ್ಕಳ ಬಗ್ಗೆ ಎಲ್ಲ ತಾಯಂದಿರಿಗೂ ಒಂದೇ ರೀತಿಯ ಪ್ರೀತಿಯಿರುತ್ತದೆ. ಆ ದಿನ ಅಣ್ಣಾ ಹಜಾರೆ ಅವರ ಮಾತಿನಿಂದ ತಾಯಿಯ ಹೃದಯ ಕರಗಿತ್ತು. ಶಾಲೆಗೆ ಬಂದು ಶಿಕ್ಷಕರ ಬಳಿ ಸುಳ್ಳು ಹೇಳಲು ಅವರು ಒಪ್ಪಿಕೊಂಡ್ರು. ಈ ಘಟನೆಯನ್ನು ನೆನಪಿಸಿಕೊಂಡ ಅಣ್ಣಾ, ಭಗವಾನ್ ಶ್ರೀಕೃಷ್ಣ ಹಾಗೂ ಯಶೋಧೆ ನಡುವಿನ ಬೆಣ್ಣೆ ಕಳವಿನ ಪ್ರಸಂಗವನ್ನು ವಿವರಿಸಿದ್ರು. ಸೂರ್​ದಾಸರ ರಚನೆಯನ್ನು ಹೇಳಿದ ಅಣ್ಣಾ, ಕೃಷ್ಣ ತನ್ನ ಬಾಯಿಗೆ ಬೆಣ್ಣೆ ಮೆತ್ತಿಕೊಂಡಿದ್ರೂ ಅಮ್ಮ ಯಶೋಧೆಯ ಬಳ್ಳಿ ಸುಳ್ಳು ಹೇಳುತ್ತಾನೆ. ಆಕೆ ಅವನ ಬಾಯಿಯನ್ನು ಪರೀಕ್ಷಿಸಿದಾಗ ಕೃಷ್ಣ ತಾಯಿ ಮೇಲೆ ಆರೋಪ ಮಾಡ್ತಾನೆ. ಆಗ ಯಶೋಧೆಯ ಹೃದಯ ಕರಗುತ್ತೆ, ನೀನು ಬೆಣ್ಣೆ ತಿಂದಿಲ್ಲ ಎಂದು ಸಮಾಧಾನಿಸುತ್ತಾಳೆ ಅಂತಾ ವಿವರಿಸಿದ್ರು.

ವಿಶೇಷ ಅಂದ್ರೆ ಅಣ್ಣಾರ ಬಾಲ್ಯದ ಹೆಸರು ಕಿಷನ್. ಯಾವಾಗ ಅವರು ಅನ್ಯಾಯ, ಅತ್ಯಾಚಾರ ಮತ್ತು ಹಿಂಸೆಯ ವಿರುದ್ಧ ಧ್ವನಿಯೆತ್ತಿದ್ರೋ ಆಗ ಎಲ್ಲರ ಪಾಲಿಗೆ ಅಣ್ಣ ಎನಿಸಿಕೊಂಡ್ರು. ಮನೆಯಲ್ಲಿ ಅವರೇ ಹಿರಿಯ ಮಗ, ಜೊತೆಗೆ ನಿಸ್ಸಹಾಯಕರು, ಬಡವರ ಪಾಲಿಗೂ ಅಣ್ಣ ಎನಿಸಿಕೊಂಡ್ರು. ``ನಾನು ಆಗ ಮೊದಲ ಬಾರಿ ಸುಳ್ಳು ಹೇಳಿದ್ದೆ. ಈಗ ನನಗೆ 79 ವರ್ಷ. ಅಂದಿನಿಂದ ಇಂದಿನವರೆಗೂ ನಾನು ಸುಳ್ಳು ಹೇಳಿಲ್ಲ. ನಾನು ಹೇಳಿದ ಒಂದೇ ಒಂದು ಸುಳ್ಳನ್ನು ಮರೆಯಲು ಸಾಧ್ಯವಿಲ್ಲ'' ಎನ್ನುತ್ತಾರೆ ಅಣ್ಣಾ ಹಜಾರೆ. ಅಣ್ಣಾ ಅವರ ಬದುಕಿನ ಮೇಲೆ ತಾಯಿ ಲಕ್ಷ್ಮಿಬಾಯಿ ಹಾಗೂ ತಂದೆ ಬಾಬು ರಾವ್ ಅವರ ಪ್ರಭಾವವಿದೆ. ಇಂದು ಅಣ್ಣಾ ಇಷ್ಟು ದೃಢಚಿತ್ತ ಹೊಂದಿರುವುದಕ್ಕೆ ಕಾರಣ ತಂದೆ ತಾಯಿ ಕಲಿಸಿದ ಸಂಸ್ಕಾರ ಮತ್ತು ಒಳ್ಳೆಯ ಗುಣಗಳು.

ಮುಂದಿನ ಭಾಗದಲ್ಲಿ ಅಣ್ಣಾ ಅವರ ಮೇಲೆ ತಂದೆ ತಾಯಿಯ ಪ್ರಭಾವ ಯಾವ ರೀತಿ ಇತ್ತು, ಅಣ್ಣಾ ಈಗ ಯಾವ ರೀತಿ ಮತ್ತು ಯಾವ ಕಾರಣಕ್ಕಾಗಿ ಪೋಷಕರನ್ನು ನೆನಪಿಸಿಕೊಳ್ತಾರೆ ಅನ್ನೋದನ್ನು ಅವರಿಂದ್ಲೇ ಕೇಳೋಣ. 

ಇದನ್ನೂ ಓದಿ..

‘ಬಿ-ಸೇಫ್’ ಆ್ಯಪ್​ ಬಳಸಿ, ಸುಗಮವಾಗಿ ಆಟೋದಲ್ಲಿ ಪ್ರಯಾಣಿಸಿ

ಮಾರುಕಟ್ಟೆಯಲ್ಲಿ ನಿಮ್ಮ ಚಿತ್ರಣ ಸೃಷ್ಟಿಸಿ ಉದ್ಯಮದ ಕಹಳೆ ಮೊಳಗಿಸಿ

Add to
Shares
1
Comments
Share This
Add to
Shares
1
Comments
Share
Report an issue
Authors

Related Tags