ಆವೃತ್ತಿಗಳು
Kannada

ಎಲ್‌ಜಿಬಿಟಿ ಸಮುದಾಯದ ಹಕ್ಕುಗಳಿಗಾಗಿ ಹೋರಾಡುತ್ತಿರುವ ಶ್ರಮಜೀವಿಗಳು

ಟೀಮ್​ ವೈ.ಎಸ್​​.

YourStory Kannada
13th Oct 2015
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on

ಗೇ ಅನ್ನುವ ಪದಕ್ಕೆ ಆ್ಯಕ್ಸ್ಫರ್ಡ್ ಡಿಕ್ಷನರಿಯಲ್ಲಿ ನಿರಾತಂಕದಿಂದ ಬದುಕುವವರು ಹಾಗೂ ಕಾಳಜಿ ಇಲ್ಲದೇ ಬೆಳೆದವರು ಅನ್ನುವ ಅರ್ಥವಿದೆ. ಆದರೆ ದುರದೃಷ್ಟವಶಾತ್ 2009ರಲ್ಲಿ ದೆಹಲಿ ಹೈ ಕೋರ್ಟ್ ಆದೇಶವನ್ನು ತಳ್ಳಿ ಹಾಕಿದ ಸರ್ವೋಚ್ಛ ನ್ಯಾಯಾಲಯ ಸಲಿಂಗ ಕಾಮವನ್ನು ಅಪರಾಧ ಎಂದು ತೀರ್ಪು ನೀಡಿತು. ಬಳಿಕ ಭಾರತದಲ್ಲಿನ ಗೇ ಸಮುದಾಯದವರು ನಿರ್ಲಕ್ಷ್ಯಕ್ಕೊಳಗಾದರು.

ಆದರೆ ಸಕಾರಾತ್ಮಕ ಯೋಚನೆಯಿಂದ ಮಾತ್ರ ಧನಾತ್ಮಕ ದೃಷ್ಟಿಕೋನ ಹೊಂದಲು ಸಾಧ್ಯ ಅನ್ನುವಂತೆ ಯುವರ್​​ಸ್ಟೋರಿ ಇತ್ತೀಚೆಗಷ್ಟೆ ನಾಲ್ವರು ಸಾಧಕರ ಸಂದರ್ಶನ ನಡೆಸಿತು. ಎಲ್ಜಿಬಿಟಿ ಸಮುದಾಯದ ಹಕ್ಕುಗಳ ಕುರಿತಾಗಿ ಆಂದೋಲನಗಳ ಮೂಲಕ ಹೋರಾಟ ನಡೆಸುತ್ತಿರುವ ಈ ಯುವಕರು ಉಳಿದ ಬೇರೆ ಸಮುದಾಯಗಳಿಗೆ ಮಾದರಿಯಾಗಿದ್ದಾರೆ.

ಹೋರಾಟದ ಮನೋಭಾವ ಹೊಂದಿರುವ ನಿತಿನ್ ರಾವ್​ಗೊಂದು ಸಲಾಂ:

ನಿತಿನ್ ಬಂಟ್ವಾಲ ರಾವ್: ನಿತಿನ್ ರಾವ್ ಬೆಂಗಳೂರು ಹಾಗೂ ಪೂನಾದಲ್ಲಿ ಬೆಳೆದ ಹುಡುಗ. ಗಣಿತ ವಿಷಯ ಹಾಗೂ ಹೊಸ ವಿಚಾರಗಳನ್ನು ಕಲಿಯುವಲ್ಲಿ ಅದಮ್ಯ ಆಸಕ್ತಿ ಹೊಂದಿದ್ದ ನಿತಿನ್ ಸುರತ್ಕಲ್​​ನಲ್ಲಿ ತಮ್ಮ ಐಟಿ ಪದವಿ ಮುಗಿಸಿದರು. ಬಳಿಕ ಅವರ ಆಸಕ್ತಿಯ ಕೇಂದ್ರವಾಗಿದ್ದ ಮಾನವ ಹಕ್ಕುಗಳ ವಿಷಯದ ಕಲಿಕೆಗೆ ಮುಂದಾದರು. ಎಂಐಟಿಯಲ್ಲಿ ಎಂಬಿಎ ಪದವಿ ಪಡೆದ ನಂತರ ತಾಂತ್ರಿಕ ಪರಿಣಿತಿ ಸಾಧಿಸಿ ಈಗ ಸಿಲಿಕಾನ್ ವ್ಯಾಲಿಯಲ್ಲಿ ತಮ್ಮದೊಂದು ಸಂಸ್ಥೆ ಆರಂಭಿಸಿದ್ದಾರೆ.

ತಮ್ಮ ಇಷ್ಟೆಲ್ಲಾ ಸಾಧನೆಗಳ ಮಧ್ಯೆಯೂ ನಿತಿನ್ ತಾವೊಬ್ಬರು ಗೇ ಆಗಿದ್ದ ಸಂಗತಿಯನ್ನು ಬಹಿರಂಗಪಡಿಸುತ್ತಾರೆ. ಮುಖ್ಯವಾಗಿ ಕಾಲೇಜು ದಿನಗಳಲ್ಲಿ ತಮಗೆ ಮಹಿಳೆಯರಿಗಿಂತ ಪುರುಷರ ಬಗ್ಗೆಯೇ ಆಕರ್ಷಣೆ ಇದ್ದ ಸಂಗತಿಯನ್ನು ಪ್ರಸ್ತಾಪಿಸುವ ಅವರು ಈ ಬಗ್ಗೆ ತಮ್ಮ ಪೋಷಕರಲ್ಲಿ ತಿಳಿಸಿದ್ದಾಗಿಯೂ ಹೇಳಿದ್ದಾರೆ. ಆದರೆ ಮಗನ ಈ ಬದಲಾವಣೆಯನ್ನು ಲಘುವಾಗಿ ಪರಿಗಣಿಸಿದ್ದ ಪೋಷಕರು ಇದೊಂದು ವ್ಯಾಧಿಯಷ್ಟೆ ಎಂದು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಕಾಲೇಜಿನಲ್ಲಿ ಹೋಮೋ ಸೆಕ್ಸ್​​ನಲ್ಲಿ ಆಸಕ್ತಿ ಇದ್ದ ಕೆಲವು ವಿದ್ಯಾರ್ಥಿಗಳು ಎಲ್ಜಿಬಿಟಿ ಸಮುದಾಯದವರನ್ನು ಕೀಳಾಗಿ ನೋಡುವ ಹಾಗೂ ಅಶ್ಲೀಲವಾಗಿ ಮಾತನಾಡಿಸುವ ವರ್ತನೆ ಎಲ್ಲದಕ್ಕಿಂತ ಮುಖ್ಯವಾಗಿ ನಿತಿನ್​ಗೆ ಅಶ್ಚರ್ಯ ತರಿಸಿತ್ತು. ನಿತಿನ್​​ ಪ್ರಕಾರ ಎಲ್ಜಿಬಿಟಿ ಸಮುದಾಯದ ಜನರಿಗೆ ತಮ್ಮ ಪ್ರತ್ಯೇಕ ಗುರುತು ಸಾಧಿಸಲು ಮಾರ್ಗದರ್ಶನ ಹಾಗೂ ಸಂಘಟನೆಯ ಕೊರತೆಯಿದೆ.

ನಿತಿನ್​ ರಾವ್​​​

ನಿತಿನ್​ ರಾವ್​​​


ನಿತಿನ್, ಈ ಸಮುದಾಯದವರು ಸಾರ್ವಜನಿಕವಾಗಿ ಮುಖ್ಯ ವಾಹಿನಿಗೆ ತರುವಲ್ಲಿ ಹೆಚ್ಚಿನ ಧೈರ್ಯ ಹಾಗೂ ವಿಶ್ವಾಸ ತೋರಬೇಕಿದೆ ಎಂದು ಅಭಿಪ್ರಾಯಪಡುತ್ತಾರೆ. ಹಿಂದಿನ ಕಾಲದವರಿಗೆ ಹೋಲಿಸಿದರೆ ಇಂದಿನ ಯುವ ಸಮುದಾಯ ಈ ವಿಚಾರದಲ್ಲಿ ಕ್ರಾಂತಿಕಾರಿ ಹೆಜ್ಜೆ ಇಡುತ್ತಿದ್ದಾರೆ ಅನ್ನುವುದು ನಿತಿನ್ ಗುರುತಿಸಿರುವ ವಿದ್ಯಮಾನ. ಸಾಮಾಜಿಕವಾಗಿಯೂ ಹಾಗೆ ಮುಖ್ಯವಾಹಿನಿಗೆ ಬರುವ ಎಲ್ಜಿಬಿಟಿ ಸಮುದಾಯದ ಯುವಕರಿಗೆ ಉತ್ತೇಜನ ಸಿಗಬೇಕು. ಮುಂದಿನ ಬಾರಿ ಸಾರ್ವಜನಿಕ ಸ್ಥಳಗಳಲ್ಲಿ ಗೇ ಅಥವಾ ಲೆಸ್ಬಿಯನ್​​ಗಳನ್ನು ಕೀಳಾಗಿ ನೋಡುವುದೋ ಅಥವಾ ಅಶ್ಲೀಲವಾಗಿ ಮಾತನಾಡಿಸುವುದೋ ಮಾಡಿದರೆ, ಅಂತಹವರನ್ನು ಕರೆದು ಬುದ್ಧಿ ಹೇಳುವ ಪ್ರಯತ್ನ ಆಗಬೇಕು ಅನ್ನುವುದು ನಿತಿನ್​​​ ವಾದ.

2010ರಲ್ಲಿ ನಿತಿನ್, ತುಷಾರ್ ಮಲಿಕ್ ಸ್ಥಾಪಿಸಿದ ಎನ್​​ಜಿಓ ಈಕ್ವಲ್ ಇಂಡಿಯಾ ಅಲಾಯನ್ಸ್ ಪತ್ತೆ ಮಾಡಿ ಅದರ ಐ ಅಲೈ ಅಭಿಯಾನದಲ್ಲಿ ಎಲ್ಜಿಬಿಟಿ ಸಮುದಾಯಕ್ಕೆ ಬೆಂಬಲ ನೀಡಿದ ಸುಮಾರು 300 ವೀಡಿಯೋಗಳನ್ನು ವೀಕ್ಷಿಸಿ ಪ್ರೇರಿತರಾದರು.

ಉದ್ಯಮಿ, ಹೂಡಿಕೆ ಬ್ಯಾಂಕರ್ ಹಾಗೂ ಎಲ್ಜಿಬಿಟಿ ಹೋರಾಟಗಾರ್ತಿ ವಿದ್ಯಾಪೈ:

ವಿದ್ಯಾ ಪೈ: ಉಳಿದ ಎಲ್ಲರಂತೆ ವಿದ್ಯಾಗೆ ಮೊದಲು ತಮ್ಮ ದೇಹದ ಪರಿವರ್ತನೆ ಹಾಗೂ ಆಂತರಿಕ ತುಮುಲಗಳ ಅರಿವಾಗಲಿಲ್ಲ. ಈ ನ್ಯೂನ್ಯತೆ ಅರಿವಾಗಿದ್ದು ಅವರಿಗೆ 20ರ ಸುಮಾರಿನ ವಯೋಮಾನದಲ್ಲಿ. ಆದರೆ ವಿದ್ಯಾ ಹೇಳುವಂತೆ ಈ ಲಿಂಗ ತಾರತಮ್ಯ ಹಾಗೂ ಲೈಂಗಿಕ ಅಸಮತೋಲನ ಹೊಂದಿರುವವರನ್ನು ಸಮಾಜ ಬೇರೆಯ ದೃಷ್ಟಿಯಲ್ಲಿ ನೋಡುವುದು ಹಾಗೂ ಕೀಳಾಗಿ ವರ್ತಿಸುವುದು ನಿಜಕ್ಕೂ ದುರದೃಷ್ಟಕರ. ಅವರ ಬೇರೆ ಎಲ್ಲಾ ಸಾಧನೆ ಹಾಗೂ ಸಾಮರ್ಥ್ಯಗಳನ್ನು ಗೌಣವಾಗಿಸಿ ಕೇವಲ ಇದೊಂದೆ ಅಂಶದಿಂದ ಗುರುತು ಹಿಡಿಯುವುದು ವಿಪರ್ಯಾಸ.

ವಿದ್ಯಾ ತಮ್ಮ ಇಲ್ಲಿಯವರೆಗಿನ ಬದುಕಿನಲ್ಲಿ ಸಾಕಷ್ಟು ಹೋರಾಟಗಳನ್ನು ನಡೆಸಿದ್ದಾರೆ. ಎಲ್ಜಿಬಿಟಿ ಸಮುದಾಯದ ಹಕ್ಕುಗಳ ರಕ್ಷಣೆ, ಮಹಿಳೆಯರ ಹಕ್ಕುಗಳಿಗಾಗಿ ಹೋರಾಟ, ಪ್ರಾಣಿ ದಯಾ ಸಂಘದ ಅಭಿಯಾನ ಮುಂತಾದ ಸಾಮಾಜಿಕ ಹೋರಾಟಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಒಂದು ಸಲ ಅತಿ ಹೆಚ್ಚು ಪ್ರಸರಣ ಹೊಂದಿದ್ದ ಪ್ರಸಿದ್ಧ ವೃತ್ತಪತ್ರಿಕೆಯಲ್ಲಿ ವಿದ್ಯಾರ ಚಿತ್ರ ಪ್ರಕಟವಾಗಿತ್ತು. ಎಲ್ಜಿಬಿಟಿ ಸಮುದಾಯದ ಹಕ್ಕುಗಳ ಕುರಿತಾಗಿ ಅವರು ನಡೆಸುತ್ತಿದ್ದ ಹೋರಾಟದ ಸಂಗತಿ ವರದಿಯಾಗಿತ್ತು. ಆಗ ಅವರ ಮನೆಯವರಿಗೆ ಹಾಗೂ ಸ್ನೇಹಿತರಿಗೆ ವಿದ್ಯಾ ಸಹ ಎಲ್ಜಿಬಿಟಿ ಸಮುದಾಯಕ್ಕೆ ಸೇರಿದ್ದಾರೇನೋ ಅನ್ನುವ ಅನುಮಾನ ಮೊದಲ ಬಾರಿಗೆ ಬಂದಿತ್ತು. ಏಕೆಂದರೆ ಅಲ್ಲಿಯವರೆಗೆ ತಮ್ಮ ಈ ಬದಲಾವಣೆ ಹಾಗೂ ಲೈಂಗಿಕ ನ್ಯೂನ್ಯತೆಯನ್ನು ವಿದ್ಯಾ ಬಹಿರಂಗಪಡಿಸಿರಲಿಲ್ಲ. ಆದರೆ ಬಳಿಕ ಅವರು ಬೈ ಸೆಕ್ಷ್ಯೂಯಲ್ ಎನ್ನುವ ಸಂಗತಿ ಗೊತ್ತಾದ ಬಳಿಕವೂ ಸ್ನೇಹಿತರು, ಪೋಷಕರು ಹಾಗೂ ಸಂಬಂಧಿಗಳು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ವಿದ್ಯಾ ಪೈ

ವಿದ್ಯಾ ಪೈ


ವಿದ್ಯಾ ಸಿಟಿಬ್ಯಾಂಕ್​​ನಲ್ಲಿ ಇನ್ವೆಸ್ಟ್​​ಮೆಂಟ್ ಬ್ಯಾಂಕರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ವಿದ್ಯಾ ಹೇಳುವಂತೆ ಈ ಎಲ್ಜಿಬಿಟಿ ಸಮುದಾಯದವರು ಸಾರ್ವಜನಿಕವಾಗಿ ಗುರುತಿಸಿಕೊಳ್ಳದೇ ಇರಲು ಮುಖ್ಯವಾಗಿ ಎರಡು ಕಾರಣಗಳಿವೆ. ಮೊದಲನೆಯದು ಸಾಮಾಜಿಕ ಬಾಧ್ಯತೆ. ಈ ಸಮುದಾಯವನ್ನು ಕೀಳಾಗಿ ನೋಡುವ ಸಮಾಜ, ಅವರ ವೃತ್ತಿ ಹಾಗೂ ಸಾಧನೆಯನ್ನು ಗುರುತಿಸದೇ ಕೇವಲ ಈ ದೈಹಿಕ ವೈಫಲ್ಯವನ್ನು ಮಾತ್ರ ಗುರುತಿಸುತ್ತದೆ ಅನ್ನುವುದು. ಇನ್ನೊಂದು ಕಾನೂನಾತ್ಮಕ ತೊಡಕು. ಇತ್ತೀಚೆಗಷ್ಟೆ ದೆಹಲಿ ಹೈ ಕೋರ್ಟ್ ತೀರ್ಪನ್ನು ತಳ್ಳಿ ಹಾಕಿ ಸುಪ್ರೀಂ ಕೋರ್ಟ್ ಎಲ್ಜಿಬಿಟಿ ಸಮುದಾಯದ ವಿರುದ್ಧ ವ್ಯತಿರಿಕ್ತ ತೀರ್ಪು ಕೊಟ್ಟಿದ್ದು, ಅವರ ಅಭದ್ರತೆಗೆ ಕಾರಣ ಅನ್ನುವುದು ವಿದ್ಯಾರ ಅಭಿಪ್ರಾಯ.

ಧಾರ್ಮಿಕ ನಂಬಿಕೆಗಳನ್ನು ಇಲ್ಲಿ ಹೇರುವುದು ಮತ್ತಷ್ಟು ಅಪಾಯಕಾರಿ ಹಾಗೂ ಇದರಿಂದ ಈ ಸಮುದಾಯ ಹತಾಶೆಗೆ ತಳ್ಳಲ್ಪಡುತ್ತದೆ. ಅದರ ಬದಲಿಗೆ ಮೌಢ್ಯಗಳನ್ನು ತೊಡೆದು ಹಾಕಿ ಸಾಮಾಜಿಕ ಪರಿವರ್ತನೆಗೆ ಮುಂದಾಗಬೇಕು ಅನ್ನುವುದು ವಿದ್ಯಾರ ಒತ್ತಾಯ.

ಈ ಸಮುದಾಯದ ಜನರಿಗೆ ತಮ್ಮ ನ್ಯೂನ್ಯತೆಗಳನ್ನು ಒಪ್ಪಿಕೊಂಡು ಸಾರ್ವಜನಿಕವಾಗಿ ಗುರುತಿಸಿಕೊಳ್ಳಲು ಪ್ರೋತ್ಸಾಹ ನೀಡಬೇಕು. ಯಾವುದೇ ಹಿಂಜರಿಕೆಗಳಿಲ್ಲದೆ, ಕೀಳರಿಮೆ ತೊರೆದು ಧೈರ್ಯವಾಗಿ ಸಮಾಜದ ಮುಖ್ಯವಾಹಿನಿಗೆ ಈ ಸಮುದಾಯ ಬರಬೇಕು. ತಾವೊಬ್ಬರು ಕಂಪ್ಯೂಟರ್ ಎಂಜಿನಿಯರ್ ಆಗಿದ್ದೂ, ಇನ್ವೆಸ್ಟ್​​ಮೆಂಟ್​​ ಬ್ಯಾಂಕರ್ ಆಗಲು ಕಾರಣ ಅದೊಂದು ವೈಯಕ್ತಿಕ ಆಯ್ಕೆ. ಈಗ ತಾವು ಸೇವಾ ಕ್ಷೇತ್ರದಲ್ಲಿ ಗುರುತಿಸಿಕೊಂಡು ಸ್ವಂತ ಉದ್ಯೋಗ ಸೃಷ್ಟಿಸುತ್ತಿದ್ದು, ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯ ಹಾಗೂ ಆತ್ಮವಿಶ್ವಾಸ ಹೊಂದಿರುವುದಾಗಿ ವಿದ್ಯಾ ಹೇಳಿಕೊಳ್ಳುತ್ತಾರೆ. ತಮ್ಮ ವಾದವನ್ನು ಸಮರ್ಥಿಸುವ ಅವರು ನಾವು ಏನನ್ನು ಮಾಡುತ್ತೇವೋ ಅದನ್ನು ಮುಕ್ತವಾಗಿ ನಿರ್ಭಿಡೆಯಿಂದ ಹೇಳಿಕೊಳ್ಳಬೇಕು ಅನ್ನುತ್ತಾರೆ.

ಮಾನವ ಸಂಪನ್ಮೂಲ ವಿಭಾಗದಿಂದ ಮಾನವ ಹಕ್ಕುಗಳ ಹೋರಾಟದ ಕಡೆಗೆ ಸರಿದ ಭರತ್ ಜಯರಾಮನ್:

ಭರತ್ ಜಯರಾಮನ್: ಭರತ್ ಜಯರಾಮನ್ ಅಭಿವೃದ್ಧಿ ಹಾಗೂ ಕಲಿಕೆಯ ವಿಭಾಗದಲ್ಲಿ ಪ್ರಾವಿಣ್ಯ ಹೊಂದಿದವರು ಹಾಗೂ ಅಮೇಜಾನ್ ಸಂಸ್ಥೆಯಲ್ಲಿ ಈ ವಿಭಾಗದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಕಾರ್ನೆಲ್ ವಿಶ್ವವಿದ್ಯಾನಿಲಯದಲ್ಲಿ ತಮ್ಮ ಉನ್ನತ ವಿದ್ಯಾಭ್ಯಾಸ ಮುಗಿಸಿದ ಭರತ್ ಗೂಗಲ್ ಹಾಗೂ ವಿಪ್ರೋನಂತಹ ಜಾಗತಿಕ ದಿಗ್ಗಜ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ.

ತಾವೊಬ್ಬರು ಗೇ ಆದ ಬಗ್ಗೆ ಪ್ರತಿಕ್ರಿಯಿಸುತ್ತಾ ಭರತ್, ಉಳಿದ ಹೋಮೋ ಸೆಕ್ಷ್ಯೂಯಲ್ ಗಳಿಗಿಂತ ನಾನು ಅದೃಷ್ಟವಂತ ಯಾಕಂದರೆ, ಮನೆಯಲ್ಲಾಗಲಿ, ಅಥವಾ ಕೆಲಸದ ಕ್ಷೇತ್ರದಲ್ಲಾಗಲಿ ತಮ್ಮ ಈ ದೈಹಿಕ ಪರಿವರ್ತನೆ ನನಗೆ ಮುಜುಗರ ಉಂಟುಮಾಡಲಿಲ್ಲ. ಹಾಗಾಗಿ ನನಗೆ ಬೇರೆ ಎಲ್ಜಿಬಿಟಿ ಸಮುದಾಯದವರಂತೆ ಇದರ ಸಾಮಾನ್ಯ ಸಮಸ್ಯೆಗಳ ಅಂದಾಜಿಲ್ಲ. ಯಾರೂ ನನ್ನನ್ನು ಕೀಳಾಗಿ ನೋಡಲಿಲ್ಲ ಅಂದಿದ್ದಾರೆ.

ಭರತ್​​ ಜಯರಾಮನ್​​​

ಭರತ್​​ ಜಯರಾಮನ್​​​


ಆದರೆ, ಎಲ್‌ಜಿಬಿಟಿ ಸಮುದಾಯದ ಎಲ್ಲರಿಗೂ ತಾವೊಬ್ಬ ಎಲ್‌ಜಿಬಿಟಿ ಸಮುದಾಯಕ್ಕೆ ಸೇರಿದವನು ಎಂದು ಹೇಳಿಕೊಳ್ಳುವುದು ಅಷ್ಟೇನೂ ಸುಲಭವಲ್ಲ ಎಂಬುದನ್ನು ಭರತ್ ಮನಗಂಡಿದ್ದಾರೆ. ಸಮಾಜದಿಂದ ತಿರಸ್ಕೃತರಾಗುವ ಭಯ ಬಹಳಷ್ಟು ಮಂದಿಗೆ ಕಾಡುತ್ತದೆ. ತಾವು ಎಲ್‌ಜಿಬಿಟಿ ಸಮುದಾಯಕ್ಕೆ ಸೇರಿದವರು ಎಂದು ತಿಳಿದರೇ ಸಮಾಜದ ಕೆಲ ಶಕ್ತಿಗಳಿಂದ ದೈಹಿಕ ಹಲ್ಲೆಗೊಳಗಾಗಬಹುದಾದ ಸಾಧ್ಯತೆಯೂ ಇದೆ. ಸಮಾಜದಲ್ಲಿ ಕಚ್ಚುವವರಿಗಿಂತ ಬೊಗಳುವವರೇ ಜಾಸ್ತಿ. ಆದರೆ ಇಂತಹ ಭಯಗಳನ್ನು ಮೆಟ್ಟಿ ನಿಲ್ಲಬೇಕು ಎನ್ನುತ್ತಾರೆ ಭರತ್.

ರಾಜಕೀಯದಲ್ಲಾಗಲಿ, ಕಾರ್ಪೋರೇಟ್ ವಲಯದಲ್ಲಾಗಲಿ ಎಲ್‌ಜಿಬಿಟಿ ಸಮುದಾಯಕ್ಕೆ ಸೇರಿದ್ದಾರೆಂದು ತಿಳಿದರೆ ಅಂಥವರು ಉನ್ನತ ಹುದ್ದೆಯನ್ನು ಅಲಂಕರಿಸಿದ ಉದಾಹರಣೆ ಇಲ್ಲ. ಇದು ಸರಿಯಲ್ಲ. ತಮ್ಮ ಸೆಕ್ಷುವಲ್ ಐಡೆಂಟಿಟಿಯನ್ನು ಬಹಿರಂಗಪಡಿಸಿ ತಮ್ಮಿಷ್ಟದ ವಲಯದಲ್ಲಿ ಮುಂದುವರೆಯುವ ಅವಕಾಶ ಎಲ್ಲರಿಗೂ ದಕ್ಕಬೇಕು ಎಂಬುದು ಭರತ್ ನಿಲುವು. ಫ್ಯಾಷನ್ ಉದ್ಯಮವನ್ನೇ ಗಮನಿಸಿಕೊಂಡರೆ ಅಲ್ಲಿ ಎಲ್ಲರೂ ಈ ವಿಚಾರದಲ್ಲಿ ನಿರ್ಭಯವಾಗಿರುತ್ತಾರೆ. ಏಕೆಂದರೆ ಅಲ್ಲಿ ವ್ಯಕ್ತಿಗಳನ್ನಲ್ಲ, ವ್ಯಕ್ತಿಗಳ ಕೆಲಸವನ್ನು ಗುರುತಿಸಲಾಗುತ್ತದೆ. ಎಲ್ಲಾ ಕ್ಷೇತ್ರಗಳಲ್ಲೂ ಇಂಥದ್ದೊಂದು ನಿರ್ಭಯ ವಾತಾವರಣೆ ನಿರ್ಮಾಣವಾಗಬೇಕು ಎನ್ನುತ್ತಾರೆ ಭರತ್.

ಅಂತರ್ಜಾಲದ ಮೂಲಕ ಎಲ್‌ಜಿಬಿಟಿ ಸಮುದಾಯದವರ ಸಹಾಯಕ್ಕೆ ನಿಂತ ಶಂಕರ್ ಗಣೇಶ್

ಶಂಕರ್ ಗಣೇಶ್

ಶಂಕರ್ ಮೂಲತಃ ತಮಿಳುನಾಡಿನ ಟ್ಯುಟಿಕಾರಿನ್‌ ಎಂಬ ಸಣ್ಣ ಊರಿನವರು. ಶಾಲಾದಿನಗಳಲ್ಲಿ ಒಬ್ಬ ಮಾಮೂಲಿ ವಿದ್ಯಾರ್ಥಿಯಾಗಿದ್ದ ಶಂಕರ್‌ಗೆ ಹೃದಯಾಂತರಾಳದಲ್ಲಿ ಟೆಕಿಯಾಗುವ ಬಯಕೆ. ಶಂಕರ್‌ಗೆ ತಾವು ಗೇ ಎಂದು ತಿಳಿದಾಗ ಈ ವಿಚಾರದಲ್ಲಿ ಹೆಚ್ಚಿನ ಮಾಹಿತಿ ಕಲೆ ಹಾಕತೊಡಗಿದರು. ಆ ದಿನಗಳಲ್ಲಿ ಸಮಾನಲಿಂಗಿಗಳು ಸಾರ್ವಜನಿಕವಾಗಿ ಮುತ್ತು ಕೊಟ್ಟುಕೊಳ್ಳುತ್ತಿದ್ದುದೇ ಅಂತರ್ಜಾಲದಲ್ಲಿ ಚರ್ಚೆಯ ದೊಡ್ಡ ವಿಚಾರವಾಗಿತ್ತು ಎಂದು ನೆನಪಿಸಿಕೊಳ್ಳುತ್ತಾರೆ ಶಂಕರ್. ಇತಾರ ಸಮಾನಲಿಂಗಿಗಳೊಡನೆ ಶಂಕರ್‌ ಸಂಪರ್ಕ ಸಾಧಿಸಿದ್ದು ಆರ್ಕುಟ್ ಎಂಬ ಸಾಮಾಜಿಕ ಜಾಲತಾಣದಿಂದ. ಅವರಲ್ಲಿ ಕೆಲವರನ್ನು ಭೇಟಿಯಾಗಲು ಶಂಕರ್ ನಿರ್ಧರಿಸಿದರು. ಕೊನೆಗೆ ಚೆನ್ನೈ ಮೂಲದ ದ್ವಿಲಿಂಗಿಯೊಬ್ಬರನ್ನು ಶಂಕರ್ ಭೇಟಿಯಾದರು. ಆದರೆ ಈ ಭೇಟಿ ಶಂಕರ್‌ರನ್ನು ಹತಾಶರನ್ನಾಗಿಸಿತು. ಅಲ್ಲದೇ ತಮ್ಮ ಗೇ ಸಂಗಾತಿಯನ್ನು ಹುಡುಕುವ ಎಲ್ಲಾ ಆಸೆಗಳನ್ನು ಅವರು ಕಳೆದುಕೊಂಡರು.

ತಾವು ಗೇ ಎಂಬ ವಿಚಾರ ತಮ್ಮ ಮನೆಯವರಿಗೆ ತಿಳಿದರೆ ಅವರು ಹೇಗೆ ಪ್ರತಿಕ್ರಿಯಿಸುತ್ತಾರೆ?, ಸಮಾಜ ತಮ್ಮನ್ನು ಒಪ್ಪಿಕೊಳ್ಳುತ್ತದೆಯೇ? ಎಂಬ ಪ್ರಶ್ನೆಗಳು ಶಂಕರ್‌ರನ್ನು ನಿರಂತರವಾಗಿ ಕಾಡತೊಡಗಿದ್ದವು.

ಶಂಕರ್​​ ಗಣೇಶನ್​​​

ಶಂಕರ್​​ ಗಣೇಶನ್​​​


ಒಮ್ಮೆ ತಂದೆಯೊಂದಿಗೆ ಮಾತನಾಡುತ್ತಾ ಈ ವಿಚಾರ ತಿಳಿಸಿದಾಗ ತಂದೆ ವೈದ್ಯಕೀಯ ಚಿಕಿತ್ಸೆಯಿಂದ ಈ ಸಮಸ್ಯೆಯಿಂದ ಪಾರಾಗಬಹುದೆಂದು ತಿಳಿಸಿದರು. ಆದರೆ ಇದನ್ನು ನಿರಾಕರಿಸಿದ ಶಂಕರ್ ವೈದ್ಯಕೀಯ ಚಿಕಿತ್ಸೆ ಪಡೆದರೆ ನೀವೂ ಸಹ ಸಲಿಂಗಿಗಳಾಗಬಹುದು ಎಂದು ಹೇಳಿ ತಂದೆಯ ಆಸೆಗೆ ತಣ್ಣೀರೆರಚಿದರು. ಇದೊಂದು ವೈದ್ಯಕೀಯ ಸಮಸ್ಯೆ ಅಲ್ಲ ಎಂದು ತಂದೆಗೆ ತಿಳಿಸುವ ಮೂಲಕ ತಂದೆಯ ವಿರೋಧಿಸುವ ಶಕ್ತಿ ಇತ್ತು ಶಂಕರ್‌ಗೆ. ಆದರೆ ಗ್ರಾಮೀಣ ಪ್ರದೇಶಗಳ ಎಲ್‌ಜಿಬಿಟಿ ಸಮುದಾಯಸ್ಥರು ಈ ವಿಚಾರದಲ್ಲಿ ನಿಸ್ಸಹಾಯಕರಾಗಿರುತ್ತಾರೆ. ದುರಂತವೆಂದರೆ ಯಾವುದೇ ತಮಿಳು ಪತ್ರಿಕೆ ಸೆಕ್ಷನ್ 377 ಬಗ್ಗೆ ಎಲ್ಲಿಯೂ ಚರ್ಚಿಸಿಲ್ಲ. ಆ ಬಗ್ಗೆ ಯಾವುದೇ ಸುದ್ದಿಯನ್ನೂ ಪ್ರಕಟಿಸಿಲ್ಲ ಎನ್ನುತ್ತಾರೆ ಶಂಕರ್.

ಗೇಗಳ ಭಾವನಾತ್ಮಕ ದೃಷ್ಟಿಕೋನವನ್ನು ಅರಿತುಕೊಳ್ಳುವಲ್ಲಿ ಸಮಾಜ ವಿಫಲವಾಗುತ್ತಿದೆ ಎನ್ನುತ್ತಾರೆ ಶಂಕರ್. ಗೇ ಎಂಬುದು ಕೇವಲ ಸೆಕ್ಸ್ ಅಥವಾ ದೈಹಿಕ ಆಕರ್ಷಣೆ ಅಲ್ಲ ಎನ್ನುವ ಅವರು ಸಮಾಜ ಮತ್ತು ವೈದ್ಯಕೀಯ ಜಗತ್ತು ಎಲ್‌ಜಿಬಿಟಿ ಸಮುದಾಯದವರ ನೆರವಿಗೆ, ಬೆಂಬಲಕ್ಕೆ ನಿಲ್ಲಬೇಕೆಂದು ಆಶಿಸುತ್ತಾರೆ.

ಶಂಕರ್‌ರ ಪರಿಸ್ಥಿತಿ ಹಾಗೂ ಖಿನ್ನತೆಯ ಪರಿಣಾಮ ಅವರ ಕೆಲಸದ ಮೇಲಾಯಿತು. ಕಾರ್ಯಕ್ಷಮತೆ ಕ್ಷೀಣವಾಯಿತು. ಪ್ರಸ್ತುತ ಫ್ರೆಶ್ ಡೆಸ್ಕ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಂಕರ್‌ ಅಲ್ಲಿನ ಅನುಭವದ ಬಗ್ಗೆ ಸಂತೃಪ್ತರಾಗಿದ್ದು, ಸಹೋದ್ಯೋಗಿಗಳ ಬೆಂಬಲಕ್ಕೆ ಸಂತೋಷಗೊಂಡಿದ್ದಾರೆ.

ನಾವು ಎಲ್ಲದರಲ್ಲೂ ಸೇರಿಕೊಂಡು, ಎಲ್ಲರೊಂದಿಗೆ ಬೆರೆತರೆ ನಾವು ಎಲ್ಲಾ ಲಿಂಗಿಗಳನ್ನು ಸಮಾನವಾಗಿ ಕಾಣಲು ಸಾಧ್ಯ ಎಂಬುದು ಶಂಕರ್‌ರ ಅಭಿಮತ. ಪ್ರತಿಭಾವಂತರನ್ನು ಗುರುತಿಸಿ ಅವರಿಗೆ ಬೆಲೆ ಕೊಡುವುದನ್ನು ನಾವು ಅಭ್ಯಾಸ ಮಾಡಿಕೊಳ್ಳಬೇಕು. ಎಲ್‌ಜಿಬಿಟಿ ಸಮುದಾಯದ ಪ್ರತಿಭಾವಂತರಿಗೆ ನಾವು ಗೌರವ ನೀಡದಿದ್ದರೆ ಅವರು ಈ ದೇಶವನ್ನು ಬಿಟ್ಟು ತಮ್ಮ ಪ್ರತಿಭೆಗೆ ಬೆಲೆಕೊಡುವ ದೇಶಕ್ಕೆ ಹೋಗಿಬಿಡುತ್ತಾರೆ. ಆಗ ನಷ್ಟ ದೇಶಕ್ಕೆ ಆಗುತ್ತದೆ. ಅಂತರ್ಜಾಲದ ಬಗ್ಗೆ ಎಲ್‌ಜಿಬಿಟಿ ಸಮುದಾಯದ ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕು. ಸಾಧ್ಯವಾದರೆ ವೃತ್ತಿಪರ ಸಮಾಲೋಚಕರನ್ನು ಸಂಪರ್ಕಿಸಬೇಕು. ಇದರಿಂದ ಪರಿಸ್ಥಿತಿಯೇನೂ ಉತ್ತಮವಾಗುವುದಿಲ್ಲ ಆದರೆ ಇದರಿಂದ ತಮ್ಮಲ್ಲಿ ತಾವೇ ಗಟ್ಟಿಯಾಗಲು ಸಾಧ್ಯ ಎನ್ನುತ್ತಾರೆ ಶಂಕರ್.

ಇಟ್ಸ್ ಗೆಟ್ಸ್ ಬೆಟರ್.ಒಆರ್‌ಜಿ ಮೂಲಕ ಎಲ್‌ಜಿಬಿಟಿ ಸಮುದಾಯವರಿಗೆ ಬೆಂಬಲ ವ್ಯಕ್ತಪಡಿಸಬಹುದು.

ಈ ನಾಲ್ಕೂ ಮಂದಿಯನ್ನು ಸಂದರ್ಶಿಸಿದಾಗ ವೃತ್ತಿಜೀವನದಲ್ಲಿ ತಮ್ಮ ಗುರುತನ್ನು ಹೇಳಿಕೊಳ್ಳಲು ನಿರ್ಭಯವಾಗಿರುವ ಅವರ ಸಕಾರಾತ್ಮಕ ವ್ಯಕ್ತಿತ್ವದ ಬಗ್ಗೆ ತಿಳಿಯುತ್ತದೆ.

ಅರ್ಧನಾರೀಶ್ವರ ವ್ಯಕ್ತಿತ್ವವನ್ನು ಗೌರವಿಸುವ, ಪೂಜಿಸುವ ನಾವು ಅಂತಹುದೇ ಲಿಂಗಿಗಳನ್ನೂ ಸಹ ಒಪ್ಪಿಕೊಳ್ಳಬೇಕು. ಇದೇ ವೇಳೆ ತೃತೀಯ ಲಿಂಗಿಗಳ ಇರುವಿಕೆಯನ್ನು ಗೌರವಿಸಬೇಕು. ಈ ಲೇಖನದಲ್ಲಿ ಬರುವ ಮಾದರಿ ವ್ಯಕ್ತಿಗಳಂತೆ ಗೇ ಅಥವಾ ಲೆಸ್ಬಿಯನ್ ಅಥವಾ ದ್ವಿಲಿಂಗಿಗಳು ಅಥವಾ ಪರಿವರ್ತಿತ ಲಿಂಗಿಗಳನ್ನು ಲಿಂಗಗಳ ಆಧಾರದಿಂದಲ್ಲದೇ, ಅವರನ್ನು ತುಳಿಯದೇ ಅವರ ಪ್ರತಿಭೆಯನ್ನು ಗುರುತಿಸುವಂತಾದಾಗ ಸಮಾಜ ಮುಂದುವರೆಯಲು ಸಾಧ್ಯ.

 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
Report an issue
Authors

Related Tags