ಆವೃತ್ತಿಗಳು
Kannada

ಇದು 60ರ ಅರಳುಮರಳಲ್ಲ- ಯುವಕರಿಗೆ ಮಾದರಿ ಆಗುವ ಸುಂದರ ಕಾರ್ಯ

ಟೀಮ್​ ವೈ.ಎಸ್​. ಕನ್ನಡ

7th Mar 2017
Add to
Shares
19
Comments
Share This
Add to
Shares
19
Comments
Share

ವಯಸ್ಸಾದ ಮೇಲೆ ಏನು ಮಾಡಬಹುದು..? ಸುಮ್ಮನೆ ಕಾಲ ಕಳೆಯೋದಿಕ್ಕಾಗಿ ಹವ್ಯಾಸಗಳ ಬೆನ್ನುಹತ್ತಬಹುದು. ಆರೋಗ್ಯಕ್ಕಾಗಿ ಬೆಳಗ್ಗೊಂದು ವಾಕಿಂಗ್, ಹಳೆಯ ಸ್ನೇಹಿತರ ಜೊತೆ ಟೈಮ್‍ಪಾಸ್‍ಗಾಗಿ ಟೀ ಅಂಗಡಿಯ ಕಟ್ಟೆ ಮುಂದೆ ಒಂದು ಸಿಟ್ಟಿಂಗ್ ಹಾಕಬಹುದು. ಮಧ್ಯಾಹ್ನ ಕೊಂಚ ಹೊತ್ತು ಪುಸ್ತಕಗಳನ್ನು ಓದಿ ಹೊತ್ತು ಕಳೆಯಬಹುದು. ಸಂಜೆ ಮೇಲೆ ಮೊಮ್ಮಕ್ಕಳ ಜೊತೆ ಸುತ್ತಾಡಿಕೊಂಡು ಬರಬಹುದು. ವಯಸ್ಸಾದವರು ಇನ್ನೇನು ಮಾಡ್ತಾರೆ ಅಂತ ಪ್ರಶ್ನೆ ಕೇಳುವವರಿಗೆ ಇಲ್ಲೊಂದು ಅದ್ಭುತ ಉತ್ತರವಿದೆ. ವಯಸ್ಸಾದ ಮೇಲೂ ಮಾಡುವುದಿಕ್ಕೆ ಬೇಕಾದಷ್ಟು ಕೆಲಸಗಳಿವೆ ಅನ್ನೋದನ್ನ "ಜ್ಞಾನಜ್ಯೋತಿ" ತೋರಿಸಿಕೊಟ್ಟಿದೆ. ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡು ಮಾದರಿ ಸಂಸ್ಥೆಯಾಗಿ ಬೆಳೆಯುತ್ತಿದೆ.

image


ಏನಿದು "ಜ್ಞಾನಜ್ಯೋತಿ"..?

"ಜ್ಞಾನಜ್ಯೋತಿ" 60 ವರ್ಷದ ಮೇಲ್ಪಟ್ಟವರು ನಡೆಸಿಕೊಂಡು ಹೋಗುತ್ತಿರುವ ನಾನ್ ಫ್ರಾಫಿಟೇಬಲ್ ಆರ್ಗನೈಸೇಷನ್. ಇದರ ಸದಸ್ಯರು ಎಲ್ಲರೂ 60 ವರ್ಷಕ್ಕೆ ಮೇಲ್ಪಟ್ಟವರೇ. ಬೆಂಗಳೂರಿನ ಬನಶಂಕರಿಯ ಸೀನಿಯರ್ ಸಿಟಿಜನ್‍ಗಳೆಲ್ಲಾ ಸೇರಿಕೊಂಡು ಹುಟ್ಟುಹಾಕಿದ ಸಂಸ್ಥೆ. "ಜ್ಞಾನಜ್ಯೋತಿ"ಯ ಸದಸ್ಯರೆಲ್ಲರೂ 60 ವರ್ಷ ವಯಸ್ಸಿನ ಗಡಿ ದಾಟಿದ್ದರೂ, ಇವರು ಮಾಡುತ್ತಿರುವ ಕೆಲಸ ಎಲ್ಲರಿಗೂ ಮಾದರಿ. ಸಮಾಜಕ್ಕೆ ಏನೇನು ಅವಶ್ಯಕತೆ ಇದೆಯೋ ಅದನ್ನು ಮಾಡುತ್ತಿದ್ದಾರೆ. ದೇಹಕ್ಕೆ ಮಾತ್ರ ವಯಸ್ಸಾಗುವುದು ಮನಸ್ಸಿಗೆ ಯಾವತ್ತೂ ವಯಸ್ಸಿನ ಹಂಗು ಇರುವುದಿಲ್ಲ ಅನ್ನುವುದನ್ನು "ಜ್ಞಾನಜ್ಯೋತಿ"ಯ ಸದಸ್ಯರು ಎಲ್ಲರಿಗೂ ತೋರಿಸಿಕೊಡುತಿದ್ದಾರೆ.

image


ಹುಟ್ಟಿದ್ದು ಹೇಗೆ..?

ದಕ್ಷಿಣ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ " ಜ್ಞಾನಜ್ಯೋತಿ" ಹುಟ್ಟಿಕೊಂಡಿದ್ದೇ ರೋಚಕ ಕಥೆ. " ಜ್ಞಾನಜ್ಯೋತಿ"ಯ ಹುಟ್ಟಿಗೆ ಕಾರಣರಾದವರು ಉಷಾ ಮಧುರನಾಥನ್ ಅನ್ನುವ ಮಹಿಳೆ. 1999ರಲ್ಲಿ ಉಷಾ ಈ ಸಂಸ್ಥೆಯನ್ನು ಹುಟ್ಟುಹಾಕಿದ್ದರು. ಸುಮಾರು 18 ವರ್ಷಗಳಿಂದ 60ಕ್ಕಿಂತ ಮೇಲ್ಪಟ್ಟವರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಬನಶಂಕರಿಯ ಸುತ್ತಮುತ್ತಲು ಇರುವ 60ವರ್ಷಕ್ಕೂ ಮೇಲ್ಪಟ್ಟವರು ಇದರ ಸದಸ್ಯರಾಗಿದ್ದಾರೆ.

"ಬೆಂಗಳೂರಿಗೆ ಬರುವ ಸ್ಟೀಲ್ ಟೌನ್‍ಶಿಪ್‍ಗಳಾದ ವಿಶಾಖಪಟ್ಟಣ ಮತ್ತು ಬಿಲಾಯಿಯಲ್ಲಿ ನಾವು ಕೆಲಸ ಮಾಡುತ್ತಿದ್ದೆವು. ಅಲ್ಲಿ ಖುಷಿ ಆಗಿರಲಿ ಅಥವಾ ದುಃಖವೇ ಎದುರಾಗಲಿ ಹಂಚಿಕೊಳ್ಳಲು ನೆರೆಹೊರೆಯವರು ಬರುತ್ತಿದ್ದರು. ಆದ್ರೆ ಬೆಂಗಳೂರಿನ ಬ್ಯೂಸಿ ಲೈಫ್‍ನಲ್ಲಿ ಅದಕ್ಕೆ ಅವಕಾಶವೇ ಇರಲಿಲ್ಲ. ಅಲ್ಲಿಂದ ಇಲ್ಲಿಗೆ ಬಂದಮೇಲೆ ನಮಗೆ ಎಲ್ಲರೂ ಅಪರಿಚಿತರಂತೆ ಕಾಣುತ್ತಿದ್ದರು. ನನ್ನ ಗಂಡ ತೀರಿಕೊಂಡಾಗಲೂ ಅಷ್ಟೇ ಸಂಬಂಧಿಕರನ್ನು ಹೊರತು ಪಡಿಸಿ ಯಾರೂ ಬರಲಿಲ್ಲ. ಆಗ ನನಗೆ ಅರಿವಾಯಿತು. ನಮಗೆ ಎಲ್ಲರೂ ಪರಿಚಿತರಾಗಿದ್ದರೇ ಮಾತ್ರ ಅವರು ನಮ್ಮ ನೆರವಿಗೆ ಬರುತ್ತಾರೆ ಅಂತ. ಒಂದು ಟ್ರೈನಿಂಗ್ ಸೆಷನ್‍ಗೆ ಹೋಗಿ ಜನರನ್ನು ಒಟ್ಟುಗೂಡಿಸುವ ಕಲೆಯನ್ನು ಕಲಿತುಕೊಂಡೆ. ಜ್ಞಾನಜ್ಯೋತಿ ಪ್ರಾಜೆಕ್ಟ್ ಅನ್ನು ಕೈಗೆತ್ತಿಕೊಂಡೆ "
- ಉಷಾ ಮಧುರನಾಥನ್, ಜ್ಞಾನಜ್ಯೋತಿ ಸಂಸ್ಥಾಪಕಿ

ಉಷಾ ಟ್ರೈನಿಂಗ್ ಮುಗಿಸಿಕೊಂಡು ಬಂದತಕ್ಷಣ 60 ವರ್ಷಕ್ಕಿಂತಲೂ ಮೇಲ್ಪಟ್ಟವರನ್ನು ಸಂಪರ್ಕಿಸಿದ್ರು. ಈ ಹೊತ್ತಿನಲ್ಲಿ ಲೋಕಲ್ ನ್ಯೂಸ್ ಲೆಟರ್ ನಡೆಸುತ್ತಿದ್ದ ರಂಗಸ್ವಾಮಿ ಅನ್ನುವವರನ್ನು ಬೇಟಿಯಾಗಿ ತನ್ನ ಪ್ರಾಜೆಕ್ಟ್ ಬಗ್ಗೆ ವಿವರಿಸಿದ್ರು. ರಂಗಸ್ವಾಮಿ ಕೂಡ ಉಷಾ ಜೊತೆ ಕೈ ಜೋಡಿಸಿದರು. ಮೊದಲ ಮೀಟಿಂಗ್‍ನಲ್ಲಿ ಸುಮಾರು 60 ಜನ ಭಾಗವಹಿಸಿದ್ದರು. ಉಷಾ ಅವತ್ತೇ ಸಂಸ್ಥೆಯನ್ನು ಕಟ್ಟುವ ಮತ್ತು ಅದು ಮಾಡಬಹುದಾದ ಕೆಲಸದ ಬಗ್ಗೆ ಕನಸುಗಳನ್ನು ಕಟ್ಟಿಕೊಂಡಿದ್ದರು. 18 ವರ್ಷಗಳ ನಂತರ ಈ ಸಂಸ್ಥೆಯಲ್ಲಿ ಸುಮಾರು 500ಕ್ಕೂ ಅಧಿಕ ಸದಸ್ಯರಿದ್ದಾರೆ. ಅಂದಹಾಗೇ "ಜ್ಞಾನಜ್ಯೋತಿ" ಸಂಸ್ಥೆಯ ಸದಸ್ಯರಾಗಬೇಕಾದರೆ 550 ರೂಪಾಯಿಗಳ ಫೀಸ್ ಅನ್ನು ನಿಗದಿ ಮಾಡಲಾಗಿದೆ. 550 ರೂಪಾಯಿಗೆ ದಂಪತಿಗಳು ಮೆಂಬರ್‍ಶಿಪ್ ಪಡೆದುಕೊಳ್ಳುವುದು ಈ ಸಂಸ್ಥೆಯ ಮತ್ತೊಂದು ವಿಶೇಷತೆ.

ಇದನ್ನು ಓದಿ: ಉದ್ಯಮ ಯಾವುದು ಅನ್ನುವುದು ಮುಖ್ಯವಲ್ಲ- ಇಂಟರ್​ನೆಟ್​​ಗೆ ಮೊದಲ ಸ್ಥಾನ..!

ಸದಸ್ಯರಿಗೆ ಏನು ಲಾಭ..?

" ಜ್ಞಾನಜ್ಯೋತಿ"ಯ ಸದಸ್ಯರಾದವರಿಗೆ ಐಡಿ ಕಾರ್ಡ್ ಮತ್ತು ಸೌಲಭ್ಯ ಕಾರ್ಡ್‍ಗಳನ್ನು ನೀಡಲಾಗುತ್ತದೆ. ಇಲ್ಲಿನ ಸದಸ್ಯರಿಗೆ ನಿಗದಿ ಮಾಡಿದ ಆಸ್ಪತ್ರೆಗಳಲ್ಲಿ ರಿಯಾತಿ ಮತ್ತು ಉಚಿತ ಮೆಡಿಕಲ್ ಚೆಕಪ್‍ಗಳ ಸೌಲಭ್ಯ ಸಿಗುತ್ತಿದೆ. ಇದರ ಜೊತೆಗೆ ಬ್ಲಡ್ ಗ್ರೂಪ್‍ಗಳನ್ನು ಒಳಗೊಂಡ ಟೆಲಿಫೋನ್ ಡೈರೆಕ್ಟರಿಗಳನ್ನು ಕೂಡ ನೀಡಲಾಗುತ್ತದೆ. "ವಿಷನ್ ಸೀನಿಯರ್ ಸಿಟಿಜನ್" ಅನ್ನುವ ನ್ಯೂಸ್ ಲೆಟರ್ ಕೂಡ ಈ ಸಂಸ್ಥೆಯಿಂದ ಹೊರಬರುತ್ತಿದ್ದು, ಅಲ್ಲಿ ಇಲ್ಲಿನ ಸದಸ್ಯರುಗಳಿಗೆ ಬರೆಯಲು ಅವಕಾಶ ನೀಡಲಾಗುತ್ತದೆ. ಸ್ಥಳೀಯ ಶಾಲೆಯೊಂದರಲ್ಲಿ ಮಾಸಿಕ ಸಭೆ ನಡೆಯುತ್ತದೆ. ಶಾಲೆಯಲ್ಲಿ ಸ್ಥಳಾವಕಾಶ ಒದಗಿಸಿಕೊಟ್ಟಿರುವುದಕ್ಕೆ ಸಂಸ್ಥೆಯ ವತಿಯಿಂದ ಪ್ರತೀವರ್ಷ ಶಾಲೆಯಲ್ಲಿ ಉತ್ತಮ ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗೆ ವಿದ್ಯಾರ್ಥಿ ವೇತನವನ್ನು ಈ ಸಂಸ್ಥೆಯಿಂದಲೇ ನೀಡಲಾಗುತ್ತದೆ.

image


"ಜ್ಞಾನಜ್ಯೋತಿ"ಯ ಸಾಮಾಜಿಕ ಕಾರ್ಯ

ವಯಸ್ಸಾದವರು ಒಂದು ಕಡೆ ಸೇರಿದರೆ, ಅನಾವಶ್ಯಕ ಮಾತುಗಳು, ಗಾಸಿಪ್‍ಗಳಿಗೇನು ಕಡಿಮೆ ಇಲ್ಲ. ಆದರೆ "ಜ್ಞಾನಜ್ಯೋತಿ"ಯ ಸದಸ್ಯರು ತಿಂಗಳ ಮೀಟಿಂಗ್‍ನಲ್ಲಿ ಇಂತಹ ಮಾತುಗಳಿಗೆ ಅವಕಾಶ ಕೊಡುವುದಿಲ್ಲ. ಮಾತಿನಿಂದ ವ್ಯರ್ಥವಾಗುವ ಸಮಯವನ್ನು ಸಾಮಾಜಿಕ ಕಾರ್ಯಗಳಿಗೆ ಬಳಸಿಕೊಂಡು ಮಾದರಿ ಆಗಿದ್ದಾರೆ. ನೇತ್ರದಾನದ ಮಹತ್ವದ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ "ಜ್ಞಾನಜ್ಯೋತಿ"ಯ ಸದಸ್ಯರೆಲ್ಲರೂ ನೇತ್ರದಾನ ಮಾಡಿದ್ದು, ಅವರವರ ಮನೆಯ ಮುಂದೆ ನೇತ್ರದಾನದ ಡಿಟೇಲ್​ಗಳನ್ನು ಹಾಕಲಾಗಿದೆ. ಈ ಮೂಲಕ "ಜ್ಞಾನಜ್ಯೋತಿ"ಯ ಸದಸ್ಯತ್ವ ಪಡೆದವರು ಮರಣ ಹೊಂದಿದಾಗ ಅಗತ್ಯವಿರುವವರಿಗೆ ನೇತ್ರದಾನ ಮಾಡಲು ಸುಲಭವಾಗುತ್ತದೆ.

" ಜ್ಞಾನಜ್ಯೋತಿ" ಸಂಸ್ಥೆ "ಜ್ಯೋತಿ ವಿದ್ಯಾಕಿರಣ" ಅನ್ನುವ ಪ್ರಾಜೆಕ್ಟ್ ಅನ್ನು ಕೂಡ ಹೊಂದಿದೆ. " ಜ್ಯೋತಿ ವಿದ್ಯಾಕಿರಣ"ದ ಮೂಲಕ ಬಡಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ಕಾರ್ಯ ನಡೆಯುತ್ತಿದೆ. ಅಷ್ಟೇ ಅಲ್ಲ ಭೂಮಿ ಹಂಚಿಕೆಯ ವಿಲ್, ಹಣದ ವಹಿವಾಟಿನ ವಿಲ್‍ಗಳನ್ನು ಕೂಡ ಸದಸ್ಯರು ಈ ಸಂಸ್ಥೆ ಮೂಲಕ ಮಾಡಬಹುದಾಗಿದೆ. ಸಂಸ್ಥೆ ವಿಲ್ ಬರೆಯುವ ವಿಧಾನದಲ್ಲಿ ಸದಸ್ಯರಿಗೆ ಸಾಕಷ್ಟು ಸಹಕಾರ ನೀಡುತ್ತದೆ.

ಅಂತ್ಯಕಾಲದ ಆಪತ್ಭಾಂಧವ

ಜ್ಞಾನಜ್ಯೋತಿ "ಅಂತ್ಯೇಷ್ಠಿ" ಅನ್ನುವ ಕಾರ್ಯವನ್ನು ಕೂಡ ಮಾಡುತ್ತಿದೆ. "ಅಂತ್ಯೇಷ್ಠಿ" ಮೂಲಕ ವ್ಯಕ್ತಿಯ ಸಂಬಂಧಿಗಳು ಸಂಸ್ಥೆಯ ಜೊತೆಗೂಡಿ ಸುಲಭವಾಗಿ ಅಂತಿಮ ಕ್ರೀಯಾವಿಧಾನಗಳನ್ನು ಮಾಡಿಮುಗಿಸಬಹುದು. 2006ರಲ್ಲಿ ಈ ಯೋಜನೆ ಆರಂಭವಾಗಿದ್ದು, ಸದಸ್ಯರು ಕೂಡ ಈ ಕಾರ್ಯದಲ್ಲಿ ಭಾಗವಹಿಸುತ್ತಿದ್ದಾರೆ. ಇತ್ತೀಚೆಗೆ ವೃದ್ಧಾಶ್ರಮದಲ್ಲಿ ಇರುವ ಹಿರಿಯ ನಾಗರೀಕರಿಗೆ ಸರಕಾರದ ಅನುದಾನ ಸಿಗದೇ ಇರುವಾಗ ಅವರ ನೆರವಿಗಾಗಿ " ಸ್ಮರಣ ಜ್ಯೋತಿ" ಅನ್ನುವ ಪ್ರಾಜೆಕ್ಟ್ ಅನ್ನು ಕೂಡ ಆರಂಭಿಸಲಾಗಿದೆ.

ಖುಷಿಗಾಗಿ..

ಅಂದಹಾಗೇ " ಜ್ಞಾನಜ್ಯೋತಿ"ಯ ಸದಸ್ಯರುಗಳಿಗೆ ಸಂತೋಷವೂ ಸಿಗುತ್ತಿದೆ. ಮ್ಯೂಸಿಕ್, ನಗೆಚಟಾಕಿಯಂತಹ ಕಾರ್ಯಕ್ರಮಗಳು ಕೂಡ ನಡೆಯುತ್ತಿವೆ. ವಾರ್ಷಿಕೋತ್ಸವ ಕೂಡ ನಡೆಯುತ್ತದೆ. ಪ್ರತೀವರ್ಷ ಮಹಿಳಾ ದಿನಾಚರಣೆಯ ದಿನ ಶ್ರೇಷ್ಟ ಸಾಧನೆ ಮಾಡಿದ ಮಹಿಳೆಯರನ್ನು ಗೌರವಿಸಲಾಗುತ್ತದೆ. ಅಕ್ಟೋಬರ್ ತಿಂಗಳಿನಲ್ಲಿ ಶ್ರೇಷ್ಟ ಸಾಧನೆ ಮಾಡಿದ ಪುರುಷರನ್ನು ಸನ್ಮಾನಿಸಲಾಗುತ್ತದೆ. ಮೇ ತಿಂಗಳಲ್ಲಿ ಯಾರ ಕಣ್ಣಿಗೂ ಬೀಳದೆ ಸಾಧನೆ ಮಾಡುವ ಸರ್ಕಾರಿ ನೌಕರರನ್ನು ಗೌರವಿಸಲಾಗುತ್ತದೆ. ವಾರ್ಷಿಕೋತ್ಸವದ ದಿನದಂದು ಸದಸ್ಯರ ಮೊಮ್ಮಕ್ಕಳಿಗೆ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.

ಒಟ್ಟಿನಲ್ಲಿ "ಜ್ಞಾನಜ್ಯೋತಿ"ಯ ಸದಸ್ಯರು ಎಲ್ಲಿಂದಲೋ ಬಂದವರಾಗಿದ್ದರೂ ಎಲ್ಲರೂ ಒಂದಾಗಿ ಸೇರಿ ಕೆಲಸಮಾಡುತ್ತಿದ್ದಾರೆ. ಇವತ್ತಿನ ಫಾಸ್ಟ್ ದುನಿಯಾದಲ್ಲಿ ಟೈಮ್ ಇಲ್ಲ ಟೈಮ್ ಇಲ್ಲ ಅಂತ ಗೊಣಗಾಡುವ ಯುವಕರಿಗೆ ಈ ಹಿರಿಯರು ಸ್ಫೂರ್ತಿ ಅನ್ನುವುದರಲ್ಲಿ ಎರಡು ಮಾತಿಲ್ಲ.

ಇದನ್ನು ಓದಿ:

1. ನಿಮ್ಮ ಮನೆಗೆ ಮರಳು, ಇಟ್ಟಿಗೆ ಬೇಕಿಲ್ಲ ಇದೊಂದಿದ್ರೆ ಸಾಕು!

2. ಸೀರೆಯ ಮೇಲೆ "ಮಾನಸ" ಚಿತ್ತಾರ!

3. 31 ವರ್ಷಗಳ ಬಳಿಕ ತಂದೆ ಸಾವಿಗೆ ಸಿಕ್ತು ನ್ಯಾಯ – ಎಲ್ಲರಿಗೂ ಮಾದರಿ ಐಎಎಸ್ ಅಧಿಕಾರಿಯ ಈ ಹೋರಾಟ 

Add to
Shares
19
Comments
Share This
Add to
Shares
19
Comments
Share
Report an issue
Authors

Related Tags