ಆವೃತ್ತಿಗಳು
Kannada

`ಕಪ್‍ಶುಪ್' ಚಾಯ್ ಪೇ ಚರ್ಚಾ..ಚಹಾ ಜೊತೆಗೆ ಸರಳ ಪ್ರಚಾರ

ಟೀಮ್​ ವೈ.ಎಸ್​​. ಕನ್ನಡ

YourStory Kannada
18th Nov 2015
2+ Shares
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on

ಝಗಮಗಿಸೋ ಬೆಳಕು, ಚಿತ್ತಾಕರ್ಷಕ ಲೈಟಿಂಗ್ಸ್...ಎಲ್‍ಇಡಿ ಡಿಸ್‍ಪ್ಲೇ, 3ಡಿ ವಾಟರ್ ಸ್ಲೈಡ್ ಹೀಗೆ ಅಬ್ಬರದ ಜಾಹೀರಾತುಗಳ ಮೂಲಕ ಜನರನ್ನು ಸೆಳೆಯುವ ಪ್ರಯತ್ನ ಸಫಲವಾಗುವುದು ಅಪರೂಪ. ಅದನ್ನು ಅತ್ಯುತ್ತಮ ಜಾಹೀರಾತು ಅಂತ ಕೂಡ ಪರಿಗಣಿಸಲು ಸಾಧ್ಯವಿಲ್ಲ. ಸಾಮಾನ್ಯವಾಗಿ ಸೂಕ್ಷ್ಮ ಮತ್ತು ನವಿರಾದ ಜಾಹೀರಾತುಗಳಿಗೆ ಗ್ರಾಹಕರು ಮಾರು ಹೋಗ್ತಾರೆ. ಅವರು ನಿರೀಕ್ಷೆಯೇ ಮಾಡಿರದಂತಹ ಸ್ಥಳದಲ್ಲಿ ಕಂಡಂತಹ ಜಾಹೀರಾತುಗಳನ್ನು ಇಷ್ಟಪಡ್ತಾರೆ. ಅಂತಹ ಅಸಾಂಪ್ರದಾಯಿಕ ಕಚ್ಚಾ ಪರಿಸರದಲ್ಲಿ, ಮಾರುಕಟ್ಟೆ ಗದ್ದಲದಿಂದ ಹೊರಗಿರುವ ಕಡೆಗಳಲ್ಲಿ ನಿರೀಕ್ಷಿಸದ ಬ್ರಾಂಡಿಂಗ್ ಸಂದೇಶಗಳು ಗ್ರಾಹಕರ ಮೇಲೆ ಪರಿಣಾಮ ಬೀರುತ್ತವೆ.

image


ಚಹಾ ಸಮಯದಲ್ಲಿ ಛೇದನ...

ಚಹಾ ಅನ್ನೋದು ಭಾರತೀಯರ ಪಾಲಿಗೆ ವಿಶಿಷ್ಟ ಪೇಯ. ಚಹಾ ಜೊತೆಗಿನ ಚರ್ಚೆಯಲ್ಲಿ ಅದ್ಭುತಗಳೇ ನಡೆದು ಹೋದ ಉದಾಹರಣೆಗಳೂ ಇವೆ. ಮುಜಫರ್‍ಪುರದ ಸಿದ್ದಾರ್ಥ್ ಸಿಂಗ್ ಹಾಗೂ ಭೋಪಾಲದ ಸನಿಲ್ ಜೈನ್ ಅವರು ಚೆನ್ನೈನಲ್ಲಿ ಎಂಬಿಎ ಪ್ರವೇಶ ಗಿಟ್ಟಿಸಿಕೊಂಡ ಸಂದರ್ಭದಲ್ಲಿ ಚಹಾ ಜೊತೆ ಚಮತ್ಕಾರವೊಂದು ನಡೆದಿತ್ತು. ಹೀಗೇ ಒಂದು ದಿನ ಸಿದ್ದಾರ್ಥ್ ಹಾಗೂ ಸನಿಲ್ ರಸ್ತೆ ಬದಿಯ ಅಂಗಡಿಯಲ್ಲಿ ಚಹಾ ಕುಡಿಯುತ್ತಿದ್ರು. ಸಿನಿಮಾ ಹಾಗೂ ರಾಜಕೀಯದ ಬಗ್ಗೆ ಸ್ನೇಹಿತರ ಮಧ್ಯೆ ಬಿರುಸಿನ ಚರ್ಚೆ ನಡೆದಿತ್ತು. ನಾವು 15 ನಿಮಿಷ ಅತ್ಯಮೂಲ್ಯ ಸಮಯವನ್ನು ಕಳೆದಿದ್ದೇವೆ ಅನ್ನೋದು ಆಗ ನನಗೆ ಅರಿವಾಗಿತ್ತು ಎನ್ನುತ್ತಾರೆ ಸಿದ್ದಾರ್ಥ್. ಇಂತಹ ಆದರ್ಶಮಯ ಸನ್ನಿವೇಶಗಳಲ್ಲಿ ಬ್ರ್ಯಾಂಡ್‍ಗಳು ತಂತಾನೇ ಪ್ರಚಾರ ಪಡೆಯುತ್ತವೆ. ಹಾಗಾಗಿ ಚಹಾ ಅಂಗಡಿಗಳನ್ನೇ ಚರ್ಚೆಯ ತಾಣವನ್ನಾಗಿ ಮಾಡಬಹುದು ಅನ್ನೋ ಉಪಾಯ ಸಿದ್ದಾರ್ಥ್‍ಗೆ ಹೊಳೆದಿತ್ತು.

ಎಂಬಿಎ ಕೊನೆ ಸೆಮಿಸ್ಟರ್‍ನಲ್ಲಿದ್ದಾಗ ಉದ್ಯಮದ ಬಗ್ಗೆ ಕೂಡ ಸಿದ್ದಾರ್ಥ್ ತರಬೇತಿ ಪಡೆದ್ರು. `ಕಪ್‍ಶುಪ್' ಐಡಿಯಾವನ್ನು ಕಾರ್ಯರೂಪಕ್ಕೆ ತರಲು ಸಿದ್ಧತೆ ಮಾಡಿಕೊಳ್ತಾ ಇದ್ರು. ಅದರ ಜೊತೆ ಜೊತೆಗೆ ಮಾರುಕಟ್ಟೆಯ ಪ್ರಸಕ್ತ ಸ್ಥಿತಿಗತಿಗಳ ಬಗ್ಗೆಯೂ ಸಮೀಕ್ಷೆ ನಡೆಸಿದ್ರು. ಆದ್ರೆ ಕಸ್ಟಮ್ ಮುದ್ರಿತ ಕಪ್‍ಗಳು ಕಡಿಮೆ ಪ್ರಮಾಣದಲ್ಲಿ ಸಿಗುತ್ತಿರ್ಲಿಲ್ಲ. ನೂರು ಕಪ್‍ಗಳನ್ನು ಖರೀದಿಸಿದ ಸಿದ್ದಾರ್ಥ್ ಅದರ ಮೇಲೆ ಕಾಲ್ಪನಿಕ ಬ್ರಾಂಡ್ ಮತ್ತು ಆಫರ್‍ಗಳ ಸ್ಟಿಕ್ಕರ್‍ಗಳನ್ನು ಅಂಟಿಸಿದ್ರು. ಆ ಕಪ್‍ಗಳನ್ನು ಸುತ್ತಮುತ್ತಲಿನವರಿಗೆಲ್ಲ ಹಂಚಿದ್ರು. ಚಾಯ್ ಜೊತೆಗೆ ಜನರನ್ನು ಸಂದರ್ಶಿಸಿದ ಸಿದ್ದಾರ್ಥ್ `ಕಪ್‍ಶುಪ್' ಬಗ್ಗೆ ಅಭಿಪ್ರಾಯಗಳನ್ನು ಸಂಗ್ರಹಿಸಿದ್ರು, ಕೆಲ ಪ್ರಶ್ನೆಗಳನ್ನು ಅವರ ಮುಂದಿಟ್ರು. ಉತ್ಪನ್ನವನ್ನು ಊರ್ಜಿತಗೊಳಿಸುವ ಆ ಸಮೀಕ್ಷೆಯ ಫಲಿತಾಂಶ ಅದ್ಭುತವಾಗಿತ್ತು. ಪ್ರತಿಯೊಬ್ಬ ಗ್ರಾಹಕರು ಕೂಡ ಚಹಾ ಕಪ್ ಮೇಲಿದ್ದ ಆಫರ್‍ಗಳನ್ನು ಇಷ್ಟಪಟ್ಟಿದ್ರು. `ಕಪ್‍ಶುಪ್' ಐಡಿಯಾದಲ್ಲಿ ಪ್ರಚಾರ ಸಾಮರ್ಥ್ಯವಿದೆ, ಇದೊಂದು ಅದ್ವಿತೀಯ ವಿಧಾನ ಅನ್ನೋದು ಸಿದ್ದಾರ್ಥ್‍ಗೆ ಅರ್ಥವಾಗಿತ್ತು.

ಒಂದು ಕಪ್ ಚಹಾ ಅನ್ನೋದು ನಾಗರೀಕ ಸಮಸ್ಯೆಗಳು ಮತ್ತು ಭವಿಷ್ಯದ ದರ್ಶನ ಮಾಡಿಸುತ್ತೆ. ತಮ್ಮ ಸುತ್ತ ಮುತ್ತ ಏನಾಗ್ತಿದೆ ಅನ್ನೋದ್ರಿಂದ ಆರಂಭವಾಗುವ ಮಾತುಕತೆ ಮಹತ್ವದ ವಿಷಯಗಳತ್ತ ತಿರುಗುತ್ತೆ, ಒಮ್ಮೊಮ್ಮೆ ನಿರ್ಣಾಯಕ ನಿರ್ಧಾರಗಳು ಹೊರಬೀಳುವ ಸಂದರ್ಭಗಳೂ ಇರುತ್ತವೆ. ಈ ಎಲ್ಲ ವಿಚಾರಗಳನ್ನೂ ಸಿದ್ದಾರ್ಥ್ ತಮ್ಮ ಸ್ನೇಹಿತ ಅನಿಲ್ ಜೈನ್ ಜೊತೆ ಹಂಚಿಕೊಂಡಿದ್ರು. ಪರಿಣಾಮ ಅಮೇಝಾನ್ ಉದ್ಯೋಗಿಯಾಗಿದ್ದ ಸನಿಲ್, ಆ ಕೆಲಸಕ್ಕೆ ಗುಡ್ ಬೈ ಹೇಳಿ `ಕಪ್‍ಶುಪ್' ಜೊತೆ ಕೈಜೋಡಿಸಿದ್ದಾರೆ.

image


ಗೆಲುವಿನ ಪರಿಸ್ಥಿತಿ...

`ಕಪ್‍ಶುಪ್' ಐಡಿಯಾದಿಂದ ಮೂವರಿಗೆ ಪ್ರಯೋಜನವಾಗಲಿದೆ. ಕಪ್‍ಗಳನ್ನು ಬ್ರ್ಯಾಂಡ್ ಮಾಡುವ ಮೂಲಕ ಸಿದ್ದಾರ್ಥ್, ಚಹಾ ಅಂಗಡಿಗಳನ್ನು ಚರ್ಚಾ ವೇದಿಕೆಯಾಗಿ ಮಾರ್ಪಡಿಸುತ್ತಿದ್ದಾರೆ. ಅದರಿಂದ ನಮ್ಮ ಗ್ರಾಹಕರಿಗೆ ಪ್ರಚಾರ ಸಿಗುತ್ತಿದೆ, ಗ್ರಾಹಕರು ಕಂಪನಿಗಳ ಬಗ್ಗೆ ಮತ್ತು ಆಫರ್‍ಗಳ ಬಗ್ಗೆ ತಿಳಿದುಕೊಳ್ತಾರೆ. ಅಂತಿಮವಾಗಿ ಚಹಾ ಅಂಗಡಿಯ ಮಾಲೀಕನಿಗೂ ಲಾಭವಾಗುತ್ತೆ. ಯಾಕಂದ್ರೆ ಚಹಾ ಕಪ್‍ಗಳ ವೆಚ್ಚವನ್ನು ಜಾಹೀರಾತುದಾರರೇ ಭರಿಸ್ತಾರೆ.

ಚಹಾ ವ್ಯಾಪಾರಿಗಳ ಖರ್ಚನ್ನು ಕಡಿಮೆ ಮಾಡುವುದು ಮಾತ್ರ ಇವರ ಉದ್ದೇಶವಲ್ಲ. ಅಗ್ಗದ ಹಾಗೂ ಅನಾರೋಗ್ಯಕರ ಪ್ಲಾಸ್ಟಿಕ್ ಕಪ್‍ಗಳ ಬದಲು, ಆರಾಮದಾಯಕವಾಗಿ ಕೈಯ್ಯಲ್ಲಿ ಹಿಡಿದುಕೊಳ್ಳಬಲ್ಲ, ಮರುಬಳಕೆಗೆ ಯೋಗ್ಯವಾದ, ಸುಂದರ ವಿನ್ಯಾಸದ ಕಪ್‍ಗಳನ್ನು ಗ್ರಾಹಕರಿಗೆ `ಕಪ್‍ಶುಪ್' ಒದಗಿಸುತ್ತಿದೆ. ಜೈವಿಕ ವಿಘಟನೆಗೆ ಯೋಗ್ಯವಾದ ಪೇಪರ್‍ಗಳನ್ನು ಕಪ್ ತಯಾರಿಕೆಗೆ ಬಳಸಿರುವುದರಿಂದ ಇವು ಪರಿಸರಕ್ಕೂ ಮಾರಕವಾಗುತ್ತಿಲ್ಲ.

ಟಿವಿ ಹಾಗೂ ರೇಡಿಯೋ ಜಾಹೀರಾತಿನಿಂದ ಈಗಾಗ್ಲೇ ಜನರು ಬೇಸತ್ತಿದ್ದಾರೆ. ಹಾಗಾಗಿ ಗ್ರಾಹಕರನ್ನು ಸೆಳೆಯಲು ಪತ್ರಿಕೆಗಳ ಮೂಲಕ ಜಾಹೀರಾತು ನೀಡುವುದೇ ಸೂಕ್ತ ಅನ್ನೋದು ಸಿದ್ದಾರ್ಥ್ ಅವರ ಅಭಿಪ್ರಾಯ. ಚಹಾ ಜೊತೆಗೆ 5 - 10 ನಿಮಿಷ ಚರ್ಚೆ ನಡೆಸಿದ್ರೂ ಅದು ಗ್ರಾಹಕರ ಮೇಲೆ ಗಾಢ ಪರಿಣಾಮ ಬೀರುತ್ತೆ. ಸದ್ಯ `ಕಪ್‍ಶುಪ್' 1000 ವಿಭಾಗಾ ಕಚೇರಿಗಳನ್ನು ಹೊಂದಿದೆ. ಮುಂಬೈ, ಪುಣೆ, ಬೆಂಗಳೂರು, ಹೈದ್ರಾಬಾದ್, ದೆಹಲಿ, ನೊಯ್ಡಾ ಹಾಗೂ ಗುರ್‍ಗಾಂವ್‍ನ 400 ಕಾಲೇಜುಗಳು ಹಾಗೂ 2000 ಚಹಾ ವ್ಯಾಪಾರಿಗಳು `ಕಪ್‍ಶುಪ್' ಕಪ್‍ಗಳನ್ನು ಬಳಸ್ತಿದ್ದಾರೆ. ಇದಲ್ಲದೆ ಐಟಿ ಪಾರ್ಕ್‍ಗಳು, ಉತ್ಪಾದನಾ ಕೇಂದ್ರಗಳು, ಕಾಲೇಜುಗಳನ್ನು ಕೂಡ ಸಂಸ್ಥೆ ಟಾರ್ಗೆಟ್ ಮಾಡಿದೆ.

image


ಆರಂಭಿಕ ಹಂತದಲ್ಲಿಯೇ ಇಬ್ಬರು ಕಪ್‍ಶುಪ್ ಗೂಡನ್ನು ತೊರೆದಿದ್ರು. ಆದ್ರೂ ಧೈರ್ಯಗೆಡದೇ ಸಿದ್ದಾರ್ಥ್ ಗ್ರಾಹಕರ ಶೋಧಕ್ಕೆ ಕಸರತ್ತು ಮಾಡಿದ್ರು. ಟೀ ಅಂಗಡಿಗಳಲ್ಲಿ ಬೇರೆ ಬೇರೆ ಮನಸ್ಥಿತಿಯ ಗ್ರಾಹಕರು, ಐಟಿ ಪಾರ್ಕ್‍ಗಳ ಬಳಿ ಕಾರ್ಪೊರೇಟ್ ಮಂದಿ, ಕಾಲೇಜುಗಳ ಸಮೀಪ ಚಹಾ ಕಪ್‍ಗಳಿಂದ್ಲೇ ವಿದ್ಯಾರ್ಥಿಗಳನ್ನು ಸೆಳೆದವರು ಸಿದ್ದಾರ್ಥ್ ಸಿಂಗ್. ಎಲ್ಲೆಲ್ಲಿ ಇಂತಹ ಚಹಾ ಅಂಗಡಿಗಳಿವೆ ಅನ್ನೋದನ್ನು ತಿಳಿದುಕೊಳ್ಳಲು ಕಪ್‍ಶುಪ್ ಆ್ಯಪ್ ಒಂದನ್ನು ಕೂಡ ಅಭಿವೃದ್ಧಿಪಡಿಸಲಾಗಿದೆ. ಇನ್ನು ಚಹಾ ಅಂಗಡಿಗಳಿಗೆ `ಕಪ್‍ಶುಪ್' ಬ್ರ್ಯಾಂಡ್‍ಬ ಡಸ್ಟ್‍ಬಿನ್‍ಗಳನ್ನು ಕೂಡ ಪೂರೈಸುತ್ತಿರುವುದು ವಿಶೇಷ. ಈ ಮೂಲಕ `ಕಪ್‍ಶುಪ್'ಗೆ ಪ್ರಚಾರವೂ ಸಿಗುತ್ತೆ, ಚಹಾ ಅಂಗಡಿಗಳನ್ನು ಕೂಡ ಸ್ಚಚ್ಛವಾಗಿರಿಸಿಕೊಳ್ಳಲು ಸಾಧ್ಯವಾಗುತ್ತೆ.

ಯಾವುದೇ ಕಾರಣಕ್ಕೂ ಚಹಾ ಕಪ್‍ಗಳು ದುರ್ಬಳಕೆಯಾಗಬಾರದು, ವೇಸ್ಟ್ ಕೂಡ ಮಾಡಬಾರದು ಅನ್ನೋದು ಸಿದ್ದಾರ್ಥ್ ಅವರ ತತ್ವ. ಪ್ರಮುಖ ನಗರಗಳಲ್ಲಿ ಗೋಡೌನ್‍ಗಳಿದ್ದು ಅಲ್ಲಿಂದಲೇ, ಅಂಗಡಿಗಳಿಗೆ ಕಪ್‍ಗಳನ್ನು ಪೂರೈಸಲಾಗುತ್ತೆ. ಇತ್ತೀಚೆಗಷ್ಟೇ 2 ಪ್ರಮುಖ ವಿಮಾನಯಾನ ಕಂಪನಿಗಳ ಜೊತೆಗೂ `ಕಪ್‍ಶುಪ್' ಒಪ್ಪಂದ ಮಾಡಿಕೊಂಡಿದೆ. `ಕೋಕಾ-ಕೋಲಾ', `ಸ್ನ್ಯಾಪ್‍ಡೀಲ್', `ಫಿನೋಲ್ಯಾಕ್ಸ್', `ಕೋಟ್ಯಾಕ್ ಸೆಕ್ಯೂರಿಟಿಸ್', `ಐಸಿಐಸಿಐ ಪ್ರುಡೆನ್ಷಿಯಲ್', `ವಯೋಕಾಮ್ - 18', `ಓಲಾ ಕ್ಯಾಬ್ಸ್', `ಓಯೋ ರೂಮ್ಸ್' ಹೀಗೆ ವಿವಿಧ ಕಂಪನಿಗಳ ಜೊತೆಗೂ ಕೈಜೋಡಿಸಿರುವ ಕಪ್‍ಶುಪ್ 70 ಲಕ್ಷ ರೂಪಾಯಿ ಆದಾಯ ಸಂಗ್ರಹಿಸುತ್ತಿದೆ. ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ವಹಿವಾಟು ನಡೆಸ್ತಾ ಇರೋ ಸಂಸ್ಥೆ ಲಾಭದ ಹಾದಿಯಲ್ಲಿದೆ.

ಲೇಖಕರು: ಬಿಂಜಾಲ್​ ಷಾ

ಅನುವಾದಕರು: ಭಾರತಿ ಭಟ್​​

2+ Shares
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
Report an issue
Authors

Related Tags