"ಪೂನಂ ಫ್ಲೂಟ್ಸ್" - ಅದ್ಭುತ ಕಲಾವಿದ ಕುಶಲಕರ್ಮಿಯಾದ ಕಥೆ...

ಟೀಮ್​ ವೈ.ಎಸ್​. ಕನ್ನಡ

"ಪೂನಂ ಫ್ಲೂಟ್ಸ್" - ಅದ್ಭುತ ಕಲಾವಿದ ಕುಶಲಕರ್ಮಿಯಾದ ಕಥೆ...

Monday March 14, 2016,

3 min Read

ಹವ್ಯಾಸವೇ ವೃತ್ತಿಯಾಗಿ ಬದಲಾದಾಗ, ವೃತ್ತಿಪರರು ವ್ಯಾಪಾರದಲ್ಲಿ ಬಲಾಢ್ಯ ಅಸ್ತ್ರಗಳನ್ನು ನಿರೀಕ್ಷಿಸುತ್ತಾರೆ. ಅವರು ನಿರೀಕ್ಷಿತ ಮಟ್ಟ ತಲುಪದೇ ಇದ್ದಲ್ಲಿ ದೂರು, ಹತಾಷೆ ಸರ್ವೇ ಸಾಮಾನ್ಯ, ಜೊತೆಗೆ ಅವರಿಗೆ ಪರ್ಯಾಯವಾಗಿ ಹುಡುಕಾಟ ನಡೆಸುವುದು ಇನ್ನೂ ಕಷ್ಟಕರ. ಆದ್ರೆ ವೃತ್ತಿಯಲ್ಲಿ ಕೊಳಲು ವಾದಕರಾದ ಸುಭಾಷ್ ಠಾಕೂರ್ ಅವರಿಗೆ ಇಂತಹ ತಲೆನೋವು ಬರಲೇ ಇಲ್ಲ. ತಮಗೆ ಬೇಕಾದ ಉತ್ತಮ ಗುಣಮಟ್ಟದ ಕೊಳಲು ಸಿಗದೇ ಇದ್ದಾಗ ಸುಭಾಷ್ ಠಾಕೂರ್, ತಾವೇ ಖುದ್ದಾಗಿ ಕೊಳಲು ತಯಾರಿಕೆಯನ್ನು ಆರಂಭಿಸಿದ್ದು ವಿಶೇಷ. ವೈಯಕ್ತಿಕ ಅಗತ್ಯಗಳ ಪರಿಹಾರಕ್ಕಾಗಿ ಆರಂಭಿಸಿದ ಈ ಕೆಲಸ ಅದ್ಭುತ ಸಾಹಸಗಾಥೆ ಎನಿಸಿಕೊಂಡಿದೆ. ಈ ರೂಪಾಂತರದ ಹೆಸರೇ `ಪೂನಂ ಫ್ಲೂಟ್ಸ್'. ಸುಭಾಷ್ ಠಾಕೂರ್ ಅವರು ತಯಾರಿಸುತ್ತಿರುವ ಕೊಳಲುಗಳು ಅದೆಷ್ಟು ಪ್ರಸಿದ್ಧಿ ಪಡೆದಿವೆ ಅಂದ್ರೆ, ಪಂಡಿತ್ ಹರಿಪ್ರಸಾದ್ ಚೌರಾಸಿಯಾ ಲೇರಿದಂತೆ ಹಲವು ಖ್ಯಾತ ಕಲಾವಿದರು ಇದೇ ಕೊಳಲುಗಳನ್ನು ಬಳಸುತ್ತಿದ್ದಾರೆ. ಕೇವಲ ಭಾರತ ಮಾತ್ರವಲ್ಲ, ವಿದೇಶಗಳಲ್ಲೂ ಪೂನಂ ಫ್ಲೂಟ್ಸ್ ಜನಪ್ರಿಯವಾಗಿವೆ.

ಇದನ್ನು ಓದಿ: ಬೇಟಿ-ಬಚಾವೊ-ಬೇಟಿ ಪಡಾವೋ: ಪ್ರಧಾನಿ ಮೋದಿ ಕನಸಿಗೆ ಬಣ್ಣ ತುಂಬುತ್ತಿರುವ ಬನಾರಸ್ ವೈದ್ಯೆ

ಸುಭಾಷ್ ಠಾಕೂರ್ ಹಿಂದೂಸ್ತಾನಿ ಕೊಳಲು ವಾದನದಲ್ಲಿ ಪ್ರವೀಣರು. 1988ರಲ್ಲಿ ಠಾಕೂರ್, ಉಸ್ತಾದ್ ಫಹಿಮುಲ್ಲಾ ಖಾನ್ ಅವರ ಮಾರ್ಗದರ್ಶನಲ್ಲಿ ಕೊಳಲು ವಾದನ ಕಲಿಯಲು ಆರಂಭಿಸಿದರು. ಸಂಗೀತದಲ್ಲೇ ಮಾಸ್ಟರ್ ಡಿಗ್ರಿ ಪಡೆದ್ರು. ಬಳಿಕ ಅದನ್ನೇ ವೃತ್ತಿಯನ್ನಾಗಿ ಆಯ್ದುಕೊಂಡ್ರು. ಪಾಟ್ನಾ ಆಕಾಶವಾಣಿಯಲ್ಲಿ ಸುಭಾಷ್ ಠಾಕೂರ್ ಅವರ ಕೊಳಲು ವಾದನ ಪ್ರಸಾರವಾಗ್ತಾ ಇತ್ತು. ಬಳಿಕ ದೆಹಲಿ ಬಂದ ಠಾಕೂರ್ ಕೊಳಲು ಊದುವ ಸರ್ಕಾರಿ ನೌಕರಿ ಆರಂಭಿಸಿದ್ರು. ಆಗ ಅವರಿಗೆ ಬರ್ತಾ ಇದ್ದ ವೇತನ 7000 ರೂಪಾಯಿ. ``ಆಗ್ಲೇ ಒಳ್ಳೆಯ ಗುಣಮಟ್ಟದ ಕೊಳಲುಗಳ ಮಹತ್ವ ನನಗೆ ಅರಿವಾಯ್ತು. ಉತ್ತಮ ಕೊಳಲುಗಳು ದೊರೆಯುವುದೇ ಪ್ರಯಾಸಕರವಾಗಿತ್ತು. ಯಾಕಂದ್ರೆ ಅವು ಬಲು ದುಬಾರಿ, ಇಲ್ಲವಾದಲ್ಲಿ ವಿದೇಶಗಳಿಂದ ಆಮದು ಮಾಡಿಕೊಳ್ಳಬೇಕಾಗಿತ್ತು. ಹಾಗಾಗಿ ನಾನೇ ಕೊಳಲು ತಯಾರಿಸಲು ಪಣ ತೊಟ್ಟೆ'' ಎನ್ನುತ್ತಾರೆ ಠಾಕೂರ್. ಈ ಪ್ರಯತ್ನವೇ `ಪೂನಂ ಫ್ಲೂಟ್ಸ್'ನ ಆರಂಭ. ಗುರು ಪಂಡಿತ್ ಅಮರ್‍ನಾಥ್‍ಜಿ ಕೂಡ ತಮಗೂ ಕೊಳಲು ತಯಾರಿಸಿಕೊಡುವಂತೆ ಸುಭಾಷ್ ಅವರ ಬಳಿ ಕೇಳಿದ್ರು. ಒಬ್ಬ ಕಲಾವಿದರಾಗಿ ಮಾಡಿದ ಸಂಪಾದನೆಗಿಂತ್ಲೂ, ಕೊಳಲು ತಯಾರಕರಾಗಿ ತಾವು ಹೆಚ್ಚು ಆದಾಯ ಗಳಿಸುತ್ತಿದ್ದೇನೆಂಬುದು ಕೆಲವೇ ತಿಂಗಳುಗಳಲ್ಲಿ ಅವರಿಗೆ ಅರ್ಥವಾಗಿತ್ತು. ಠಾಕೂರ್ ಅವರ ಪ್ರತಿ ಸೃಷ್ಟಿಯಲ್ಲೂ ವಿಭಿನ್ನತೆಯಿದೆ. ಹಾಗಾಗಿ ಪೂನಂ ಫ್ಲೂಟ್ಸ್‍ಗೆ ವಿಶಿಷ್ಟ ಸ್ಥಾನವಿದೆ. ``ಒಂದು ಕೊಳಲನ್ನು ತಯಾರಿಸಿ ಅದನ್ನು ಖರೀದಿಸುವಂತೆ ನಾನು ಜನರನ್ನು ಕೇಳುವುದಿಲ್ಲ. ವೃತ್ತಿಪರರು ಹಾಗೂ ಸೂಕ್ಷ್ಮದರ್ಶಿ ಕಲಾವಿದರಿಗಾಗಿ, ಅವರ ಶೈಲಿಯನ್ನು ತಿಳಿದುಕೊಂಡು ಅದಕ್ಕೆ ತಕ್ಕಂತೆ ಕೊಳಲು ತಯಾರಿಸುತ್ತೇನೆ'' ಅನ್ನೋದು ಠಾಕೂರ್ ಅವರ ಹೆಮ್ಮೆಯ ನುಡಿ.

image


ಆರಂಭಿಕ ದಿನಗಳ ಹೋರಾಟ...

``ಕೊಳಲು ತಯಾರಿಕೆ ಉಳಿದ ಸಂಗೀತ ಸಾಧನಗಳ ನಿರ್ಮಾಣಕ್ಕಿಂತ ಅತ್ಯಂತ ಗಂಭೀರ ಮತ್ತು ಆಳವಾದ ಪ್ರಕ್ರಿಯೆ. ಅದಕ್ಕಾಗಿ ಉತ್ತಮ ಗುಣಮಟ್ಟದ ಬಿದಿರನ್ನು ಸಂಗ್ರಹಿಸಬೇಕು, ಈಶಾನ್ಯ ಭಾರತದಲ್ಲಿ ಮಾತ್ರ ದೊರೆಯುತ್ತದೆ. ಮೂರು ತಿಂಗಳುಗಳ ಕಾಲ ಅದನ್ನು ಪರಿಪಕ್ವಗೊಳಿಸಿ ಬಳಿಕ ಸೂಕ್ಷ್ಮ ಕೆತ್ತನೆ ಮಾಡಬೇಕು. ಯಾಕಂದ್ರೆ ಸರಿಯಾದ ಶ್ರುತಿ ಹೊರಹೊಮ್ಮಲು ಸ್ಥಾನ ಮತ್ತು ರಂಧ್ರಗಳ ವ್ಯಾಸ ಸರಿಯಾಗಿರಬೇಕು'' ಅಂತಾ ಸುಭಾಷ್ ಠಾಕೂರ್ ವಿವರಿಸ್ತಾರೆ.

ಆರಂಭದ ದಿನಗಳಲ್ಲಿ ಉತ್ಪಾದನಾ ಪ್ರಕ್ರಿಯೆಯ ಪ್ರತಿ ಹಂತದಲ್ಲೂ ಸಾಕಷ್ಟು ಸಮಸ್ಯೆಗಳು ಎದುರಾಗಿತ್ತು. ಕೊಳಲಿಗೆ ರಂಧ್ರ ಮಾಡುವ ಸಲಕರಣೆ ಸುಲಭವಾಗಿ ಸಿಗುತ್ತಿರಲಿಲ್ಲ. ಆ ಸಮಯದಲ್ಲಿ ಇಂಟರ್ನೆಟ್ ಸೌಲಭ್ಯವೂ ಇಲ್ಲದೇ ಇದ್ದಿದ್ರಿಂದ ಅವುಗಳನ್ನು ಹುಡುಕುವುದು ಕಷ್ಟವಾಗ್ತಾ ಇತ್ತು. ಭಾರಿ ಹಣ ಕೊಟ್ಟು ಅವರು ಅದನ್ನೆಲ್ಲ ಅಮೆರಿಕದಿಂದ ಆಮದು ಮಾಡಿಕೊಳ್ಳುತ್ತಿದ್ರು. ಕೊಳಲನ್ನು ಸರಿಯಾಗಿ ವಿನ್ಯಾಸಗೊಳಿಸುವ ಟ್ಯೂನರ್‍ಗಾಗಿಗೂ ಸಾಕಷ್ಟು ಹುಡುಕಾಟ ನಡೆಸಬೇಕಾಯ್ತು. ಆದ್ರೆ ಕಳೆದ ಕೆಲ ವರ್ಷಗಳಿಂದ ತಂತ್ರಜ್ಞಾನದಲ್ಲಿ ಭಾರಿ ಬದಲಾವಣೆಗಳಾಗಿದ್ದು ಕೊಳಲು ತಯಾರಿಕೆಗೆ ಬೇಕಾದ ಸಲಕರಣೆಗಳು ಸುಲಭವಾಗಿ ದೊರೆಯುತ್ತಿವೆ.

ಆನ್‍ಲೈನ್‍ನಲ್ಲೂ ಕೊಳಲಿನ ಕಮಾಲ್...

ನಿಮ್ಮ ಬಳಿ ಅದ್ಭುತ ಉತ್ಪನ್ನ ಇದೆ ಅಂತಾದ್ರೆ ಅದರ ಬಗ್ಗೆ ಪ್ರಚಾರ ಮಾಡಿ ಮಾರಾಟ ಮಾಡುವುದು ಮುಂದಿನ ಹಂತ. ಈಗ ಎಲ್ಲಾ ಕಡೆ ಆನ್‍ಲೈನ್ ವೆಬ್‍ಸೈಟ್‍ಗಳ ಹವಾ ಜೋರಾಗಿದೆ. ಠಾಕೂರ್ ಅವರ ಉದ್ಯಮವನ್ನು ಆನ್‍ಲೈನ್‍ಗೂ ವಿಸ್ತರಿಸುವಂತೆ ಪಂಡಿತ್ ಅಮರ್‍ನಾಥ್‍ಜಿ ಅವರ ಪುತ್ರ ಸಲಹೆ ನೀಡಿದ್ರು. 2004ರಲ್ಲಿ ಹೊಮೈನ್ ಹೆಸರನ್ನು ನೋಂದಣಿ ಮಾಡಿಸಿ, ವೆಬ್‍ಸೈಟ್ ಆರಂಭಿಸಲು ಅವರು ನೆರವಾಗಿದ್ದರು. ಠಾಕೂರ್ ಅವರ ಸ್ನೇಹಿತರೊಬ್ಬರು ವೆಬ್‍ಸೈಟ್ ಅನ್ನು ವಿನ್ಯಾಸಗೊಳಿಸಿದ್ದು, ಅದರ ನಿರ್ವಹಣೆ ನೋಡಿಕೊಳ್ತಿದ್ದಾರೆ. ಉತ್ಪಾದನಾ ಕಂಪನಿ ಹೊಂದಿದ್ರೆ ಅದರ ಯಶಸ್ಸಿಗೆ ಆನ್‍ಲೈನ್ ವಹಿವಾಟು ಬೇಕೇಬೇಕು ಅನ್ನೋದು ಠಾಕೂರ್ ಅವರ ಅಭಿಪ್ರಾಯ.

ಸಾಮಾಜಿಕ ಜಾಲತಾಣಗಳಲ್ಲೂ ಪೂನಂ ಫ್ಲೂಟ್ಸ್ ಸದ್ದು ಮಾಡಿದೆ. ತಮ್ಮ ಪತ್ನಿ ಪೂನಂ ಅವರ ಹೆಸರನ್ನೇ ಸುಭಾಷ್ ಠಾಕೂರ್ ಕಂಪನಿ ಆರಂಭಿಸಿದ್ದಾರೆ. ಪೂನಂ ಫ್ಲೂಟ್ಸ್ ಬಳಸುತ್ತಿರುವ ಖ್ಯಾತ ಕಲಾವಿದರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಮೆಚ್ಚುಗೆಯನ್ನು ಕೂಡ ವ್ಯಕ್ತಪಡಿಸಿದ್ದಾರೆ. ಠಾಕೂರ್ ಅವರ ಬಗ್ಗೆ ತಿಳಿದಿರುವ ಕಲಾವಿದರು, ವಿದ್ಯಾರ್ಥಿಗಳು ಹೆಚ್ಚಾಗಿ ಕೊಳಲುಗಳನ್ನು ಕೊಂಡುಕೊಳ್ತಿದ್ದಾರೆ. ಶೇ.50ರಷ್ಟು ವಹಿವಾಟು ಅವರಿಂದಲೇ ನಡೆಯುತ್ತಿದೆ. ಉಳಿದದ್ದೆಲ್ಲ ಆನ್‍ಲೈನ್ ಮಾರಾಟ, ಅದರಲ್ಲಿ ಶೇ.25ರಷ್ಟು ವಿದೇಶಗಳಿಗೆ ಮಾರಾಟವಾಗ್ತಿದೆ.

ಖ್ಯಾತ ಕಲಾವಿದರಿಗಾಗಿ ಉತ್ತಮ ಕೊಳಲುಗಳನ್ನು ತಯಾರಿಸುವ ಸಂದರ್ಭದಲ್ಲಿ ಠಾಕೂರ್, ಆನ್‍ಲೈನ್ ಮಾರಾಟದ ಬಗ್ಗೆ ಯೋಚಿಸಿಯೇ ಇರಲಿಲ್ಲ. ಅದು ತಮಗೆ ಇಷ್ಟರಮಟ್ಟಿಗೆ ನೆರವಾಗಬಹುದೆಂಬ ಕಲ್ಪನೆಯೂ ಅವರಿಗಿರಲಿಲ್ಲ. ಭಾರತೀಯರ ಮನಸ್ಥಿತಿಯಲ್ಲಾಗಿರುವ ಬದಲಾವಣೆ ಅದ್ಭುತ ಎನ್ನುತ್ತಾರೆ ಅವರು. ಅಮೇಝಾನ್ ಮತ್ತು ಫ್ಲಿಪ್‍ಕಾರ್ಟ್ ವೆಬ್‍ಸೈಟ್‍ಗಳಲ್ಲೂ ಪೂನಂ ಫ್ಲೂಟ್ಸ್ ಲಭ್ಯವಿದೆ. ಹೊಸ ಉದ್ಯಮ ಆರಂಭಿಸಿ, ಆನ್‍ಲೈನ್ ಮಾರಾಟಕ್ಕೆ ಎಂಟ್ರಿ ಕೊಡಲು ಬಯಸುವ ಉತ್ಸಾಹಿಗಳಿಗೆ ಸುಭಾಷ್ ಠಾಕೂರ್ ಕೆಲ ಸಲಹೆಗಳನ್ನು ನೀಡಿದ್ದಾರೆ. ``ನೀವು ಮಾಡಬಯಸುವ ಉದ್ಯಮದ ಬಗ್ಗೆ, ಉತ್ಪನ್ನದ ಬಗ್ಗೆ ಆಳವಾಗಿ ತಿಳಿದುಕೊಳ್ಳಿ. ಉತ್ಪಾದನೆ ಹಾಗೂ ಮಾರಾಟದ ಪ್ರತಿ ಆಯಾಮವೂ ನಿಮಗೆ ಗೊತ್ತಿರಬೇಕು, ಆಗ ಮಾತ್ರ ನಿಮ್ಮ ಕಂಪನಿ ಯಶಸ್ವಿಯಾಗಲಿದೆ'' ಅನ್ನೋದು ಅವರ ಅನುಭವದ ಮಾತು.

ಸದ್ಯ ಪೂನಂ ಫ್ಲೂಟ್ಸ್ ಜಗತ್ತಿನಾದ್ಯಂತ ಮಧುರ ನಿನಾದವನ್ನು ಉಂಟುಮಾಡ್ತಾ ಇದೆ. ಈ ಕೀರ್ತಿ ಸುಭಾಷ್ ಠಾಕೂರ್ ಅವರಿಗೆ ಸಲ್ಲುತ್ತೆ.

ಲೇಖಕರು: ಪೂರ್ಣಿಮ ಮಕರಂ

ಅನುವಾದಕರು: ಭಾರತಿ ಭಟ್

ಇದನ್ನು ಓದಿ

1. ನ್ಯೂ ಲುಕ್‍ನಲ್ಲಿ, ನ್ಯೂ ಆರ್ಯ ಭವನ್ ಸ್ವೀಟ್ಸ್ 

2. ಜನರನ್ನು ಆಕರ್ಷಿಸುತ್ತಿರುವ ಬಾರ್ಬೆಕ್ಯು ರೆಸ್ಟೋರೆಂಟ್...

3. ಸೆಲೆಬ್ರೆಟಿಗಳ ನೆಚ್ಚಿನ ತಾಣ ಶಿವಣ್ಣ ಗುಲ್ಕನ್ ಸೆಂಟರ್