ಆವೃತ್ತಿಗಳು
Kannada

300 ಪಟ್ಟು ಹೆಚ್ಚು ಯಶಸ್ಸು ಪಡೆದ ಬೇರ್‍ಫುಟ್

ಟೀಮ್​ ವೈ.ಎಸ್​​.ಕನ್ನಡ

YourStory Kannada
25th Nov 2015
16+ Shares
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on

ಆರ್ಥಿಕ ಪಿರಮಿಡ್‍ನ ಕೊನೆಯ ಅಥವಾ ಕೆಳ ಹಂತದ ಬಗ್ಗೆ ಯಾವ ಕಂಪನಿಗಳೂ ತಲೆ ಕೆಡಿಸಿಕೊಳ್ಳುವುದಿಲ್ಲ. ರೋಡ್ನಿ ಕ್ರೋವೆಲ್ ಮತ್ತು ಮಿಲಾನ್‍ನಲ್ಲಿ ಹಾಟ್ ಡಾಗ್ಸ್ ಮಾರುವ ನನ್ನ ಗೆಳೆಯನೊಬ್ಬ ಹೇಳುವ ಪ್ರಕಾರ, ’ಅಲ್ಲಿ ಹಣವಿಲ್ಲ. ಬದಲಿಗೆ ಅಲ್ಲಿರೋದು ಕೇವಲ ಅಪಾಯಗಳ ಸಿಡಿಗುಂಡು ಮಾತ್ರ’...

image


ಹೆಚ್ಚಿನ ವ್ಯಾಪಾರ ವಲಯದಲ್ಲಿ ಅದೇ ರೀತಿಯ ಗ್ರಹಿಕೆಯಿದೆ. ಈ ಕಾರಣದಿಂದಾಗಿಯೇ ಅವರು ಬಡವರ ಅಥವಾ ಆರ್ಥಿಕ ಪಿರಮಿಡ್‍ನ ಕೊನೆಯ ಹಂತದಲ್ಲಿರುವ ಗ್ರಾಹಕರಿಗೆ ಖರೀದಿಸುವ ಶಕ್ತಿ ಇಲ್ಲ, ಅವರಿಗೆ ಉತ್ಪನ್ನಗಳ ಗುಣಮಟ್ಟದ ಕುರಿತು ಮಾಹಿತಿಯೂ ಇರುವುದಿಲ್ಲ ಅಂದುಕೊಂಡಿರ್ತಾರೆ. ಆದ್ರೆ ಕೆಲವರು ಇದನ್ನೇ ಸುವರ್ಣಾವಕಾಶದಂತೆ ನೋಡ್ತಾರೆ. ಹೊಸ ತತ್ವಗಳ ಮೂಲಕ ಕಂಪನಿಗಳ ಹಳೆಯ ಗ್ರಹಿಕೆಗಳನ್ನು ಪ್ರಶ್ನಿಸಲು ಪ್ರಾರಂಭಿಸ್ತಾರೆ. ಈ ಮೂಲಕ ಕೊರತೆಯೇ ಅನೇಕ ಮೌಲ್ಯ ಮತ್ತು ಉದ್ಯೋಗ ಸೃಷ್ಟಿಸಲು ಅವಕಾಶ ಸೃಷ್ಟಿಸುವಂತೆ ಮಾಡ್ತಾರೆ.

image


2005ರಲ್ಲಿ ಸೌರಶಕ್ತಿ ಸಾಮಗ್ರಿಗಳನ್ನು ಉತ್ಪಾದಿಸುವ ಆಸ್ಟ್ರೇಲಿಯಾ ಮೂಲದ ಬೇರ್‍ಫುಟ್ ಪವರ್, ಆಫ್ರಿಕಾದ ಕೆಲ ಪ್ರದೇಶಗಳಲ್ಲಿ ಆರ್ಥಿಕ ಪಿರಮಿಡ್‍ನ ಕೆಳ ಹಂತದ ಮಾರುಕಟ್ಟೆಯನ್ನೇ ಗುರಿ ಮಾಡಿಕೊಂಡು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಿತ್ತು. ಈಗ ಬೇರ್‍ಫುಟ್ ಪವರ್ ಸುಮಾರು 33 ದೇಶಗಳಲ್ಲಿ ಮಾರುಕಟ್ಟೆ ಹೊಂದಿದ್ದು, ಇನ್ನೂ ಬೇರೆ ಬೇರೆ ದೇಶಗಳಿಗೆ ವಿಸ್ತರಿಸುತ್ತಿದೆ.

2012ರಲ್ಲಿ ಭಾರತದಲ್ಲೂ ಬೇರ್‍ಫುಟ್ ಶಾಖೆ ಪ್ರಾರಂಭವಾಗಿದ್ದು, ಇದುವರೆಗಿನ ಕಂಪನಿಯ ಯಶಸ್ಸು ಗಮನಾರ್ಹವಾಗಿದೆ.

ಜಾಗತಿಕ ಆರ್ಥಿಕ ಪಿರಮಿಡ್‍ನ ಕೊನೆಯ ಹಂತವನ್ನು ನೋಡಿದ್ರೆ 3.7 ಬಿಲಿಯನ್‍ನಷ್ಟು ಜನ ಬಡತನ ರೇಖೆಯ ಕೆಳಗಿದ್ದಾರೆ. ಅವರಲ್ಲಿ ಶೇಕಡಾ 60ರಷ್ಟು ಭಾರತ ಮತ್ತು ಚೀನಾದಲ್ಲಿದ್ದಾರೆ. ಇದೂ ಕೂಡ ಬೇರ್‍ಫುಟ್ ಇಂಡಿಯಾ ಕೇವಲ ಎರಡು ವರ್ಷಗಳಲ್ಲಿ ಅದ್ಭುತ ಯಶಸ್ಸು ಗಳಿಸುವಲ್ಲಿ ಅತ್ಯಂತ ನಿರ್ಣಾಯಕ ಅಂಶ ಎನ್ನಬಹುದು.

image


ಬೇರ್‍ಫುಟ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ವರ್ನೀ ಸನ್ನೂ ಪ್ರಕಾರ, ‘ಆಸ್ಟ್ರೇಲಿಯಾದಲ್ಲಿ ವಿನ್ಯಾಸಗೊಂಡು, ಚೀನಾದಲ್ಲಿ ಉತ್ಪಾದನೆಯಾಗುವ ಬೇರ್‍ಫುಟ್ ಪವರ್ ಉತ್ಪನ್ನಗಳು, ಭಾರತದ ಮಹಾರಾಷ್ಟ್ರ, ತಮಿಳುನಾಡು, ಛತ್ತೀಸ್‍ಗಢ, ಮಧ್ಯ ಪ್ರದೇಶ, ಉತ್ತರ ಪ್ರದೇಶ, ಒಡಿಶಾ, ಕರ್ನಾಟಕ ಹಾಗೂ ಝಾರ್ಖಂಡ್ ಸೇರಿದಂತೆ ಒಟ್ಟು 15 ರಾಜ್ಯಗಳಲ್ಲಿ ಮಾರಾಟವಾಗುತ್ತಿವೆ’ ಅಂತಾರೆ.

ಬೇರ್‍ಫುಟ್ ಪವರ್‍ನ ವ್ಯವಸ್ಥೆ 5 ಸರಳ ತತ್ವಗಳನ್ನು ಅವಲಂಭಿಸಿದೆ

• ಗ್ರಾಹಕರ ಅಗತ್ಯಗಳನ್ನು ಅರ್ಥ ಮಾಡಿಕೊಳ್ಳುವುದು - ಬೆಳಕಿಗಾಗಿ ಸೀಮೆಎಣ್ಣೆ ಬುಡ್ಡಿಗಳನ್ನು ಅವಲಂಬಿಸಿರುವ ಕುಟುಂಬಗಳೇ ಬೇರ್‍ಫುಟ್ ಪವರ್‍ನ ಟಾರ್ಗೆಟ್. ಅವರಿಗೆ ಸಮರ್ಥ ಸೌರಶಕ್ತಿ ಚಾಲಿತ ದೀಪಗಳನ್ನು ನೀಡಲಾಗುತ್ತದೆ.

• ಗ್ರಾಹಕರ ಖರೀದಿಸುವ ಶಕ್ತಿಗೆ ಅನುಗುಣವಾಗಿ ಉತ್ಪನ್ನಗಳ ಪೂರೈಕೆ – ‘ನಾವು ಹಣಕಾಸಿನ ವಿಷಯಕ್ಕೆ ಸಂಬಂಧಿಸಿದ ಏಳು ವಿವಿಧ ಮೂಲಗಳನ್ನು ಬಳಸುತ್ತಿದ್ದೇವೆ (ಬೇರೆ ಕಂಪನಿಗಳು ಒಂದು ಅಥವಾ ಎರಡು ಮೂಲಗಳಿಗಷ್ಟೇ ಸೀಮಿತವಾಗಿರ್ತವೆ). ಮೈಕ್ರೋಫೈನಾನ್ಸ್, ಬ್ಯಾಂಕಿಂಗ್ ರಹಿತ ಹಣದ ವ್ಯವಸ್ಥೆ, ಬ್ಯಾಂಕಿಂಗ್, ನಮ್ಮ ಸ್ವಂತದ ಚಿಲ್ಲರೆ ವ್ಯಾಪಾರಿಗಳ ಮೂಲಕ, ಸಿಎಸ್‍ಆರ್ ಚಟುವಟಿಕೆಗಳು, ಸ್ಥಳೀಯ ಸರ್ಕಾರದೊಂದಿಗೆ ಕೈ ಜೋಡಿಸುವ ಮೂಲಕ ಹಾಗೂ ಕೊನೆಗೆ ಎನ್‍ಜಿಒಗಳಿಗೆ ತರಬೇತಿ ಕೊಟ್ಟು, ಹಣಕಾಸು ಒದಗಿಸುವ ಮೂಲಕ ನಮ್ಮ ಉತ್ಪನ್ನಗಳನ್ನು ಪ್ರಸಾರ ಮಾಡುತ್ತೇವೆ’ ಅಂತಾರೆ ವರ್ನೀ.

• ಸಣ್ಣ / ಸೂಕ್ಷ್ಮ ಉದ್ಯಮಿಗಳಿಗೆ ಬೆಂಬಲ ನೀಡುವುದು - ಬೇರ್‍ಫುಟ್ ಪವರ್, ಕಡಿಮೆ ಆದಾಯ ಗಳಿಸುವ ಉದ್ಯಮಿಗಳು ಹಾಗೂ ವಿದ್ಯಾರ್ಥಿಗಳಿಗೆ ಧನ ಸಹಾಯ ಮಾಡುವ ಲಾಭರಹಿತ ಸಂಸ್ಥೆಯಾದ ಕಿವಾ (KIVA) ಸಹಭಾಗಿತ್ವದಲ್ಲಿ ಸಣ್ಣ ಅಥವಾ ಸೂಕ್ಷ್ಮ ಉದ್ಯಮಿಗಳಿಗೆ ಸಾಲ ಸೌಲಭ್ಯ ಒದಗಿಸಲಾಗುತ್ತಿದೆ. ಆ ಹಣವನ್ನು ಬೇರೆ ಕಾರಣಗಳಿಗೆ ವಿನಿಯೋಗಿಸದೇ ಕೇವಲ ಬೇಡಿಕೆಗಳಿಗೆ ತಕ್ಕಂತೆ ಉತ್ಪನ್ನಗಳನ್ನು ಪೂರೈಸಲು ಬಳಸಲಾಗುತ್ತದೆ. ವರ್ನೀ ಹೇಳೋ ಪ್ರಕಾರ ಈ ರೀತಿ ಮಾಡಿದ್ರೆ ನಾನಾ ರೀತಿಯ ಅನಾನುಕೂಲತೆಗಳನ್ನು ತಪ್ಪಿಸಬಹುದಂತೆ. ‘ನಾವು ವಿತರಕರ ಬಳಿ ನಮ್ಮ ಉತ್ಪನ್ನಗಳನ್ನು ಸಂಗ್ರಹಿಸಿ ಇಡುವುದಿಲ್ಲ. ಹಾಗೇ ಆ ಸಾಮಗ್ರಿಗಳನ್ನು ವಾಪಸ್ ಪಡೆಯುವ ಹೊಣೆಯನ್ನೂ ನಾವು ಹೊರುವುದಿಲ್ಲ. ಬೇರೆ ಕಂಪನಿಗಳಂತೆ ನಾವು ನಮ್ಮ ಉತ್ಪನ್ನಗಳನ್ನು ವಿತರಕರ ಕೈಗೆ ಕೊಟ್ಟು ಸುಮ್ಮನಾಗುವುದಿಲ್ಲ. ಬದಲಿಗೆ ಗ್ರಾಹಕರಿಗೆ ತಲುಪಿಸಲು ಯತ್ನಿಸುತ್ತೇವೆ’ ಅಂತಾರೆ ವರ್ನೀ.

image


• ದಕ್ಷ ಹಾಗೂ ವೈವಿಧ್ಯಮಯ ವಿತರಣಾ ವ್ಯವಸ್ಥೆಯ ರಚನೆ - ಬೇರ್‍ಫುಟ್ ಕಂಪನಿಯಲ್ಲೇ ಒಂದು ಲಾಜಿಸ್ಟಿಕ್ಸ್ ತಂಡವಿದೆ. ಆ ತಂಡದವರು ಬ್ಲೂ ಡಾರ್ಟ್‍ನಂತಹ ಬೇರೆ ಲಾಜಿಸ್ಟಿಕ್ಸ್ ಜೊತೆ ಸಂಪರ್ಕ ಹೊಂದಿರುತ್ತಾರೆ. ‘ಶೇಕಡಾ 90ರಷ್ಟು ಉತ್ಪನ್ನಗಳು ಗ್ರಾಮೀಣ ಪ್ರದೇಶಗಳಿಗೆ ಹೋಗುತ್ತವೆ. ದೊಡ್ಡ ದೊಡ್ಡ ಬಟವಾಡೆ ಸೇವಾದಾರರು ಆ ಸೇವೆ ನೀಡುವುದಿಲ್ಲ. ಹೀಗಾಗಿಯೇ ನಾವು ಸ್ಥಳೀಯ ಸಾರಿಗೆ ವ್ಯವಸ್ಥೆಗಳನ್ನು ಉಪಯೋಗಿಸುತ್ತೇವೆ’ ಅಂತ ವಿತರಣೆ ಕುರಿತು ಹೇಳುತ್ತಾರೆ ವರ್ನೀ.

• ಗ್ರಾಹಕರ ಆಕಾಂಕ್ಷೆಗಳನ್ನು ವೈವಿಧ್ಯಮಯಗೊಳಿಸುವುದು – ಅತ್ಯುತ್ತಮ ಉತ್ಪನ್ನಗಳ ಗುಣಮಟ್ಟ ಹಾಗೂ ದಕ್ಷತೆಯನ್ನು ನೋಡಿ ಬೇರ್‍ಫುಟ್ ಕಂಪನಿಯ ಗ್ರಾಹಕರಿಗೆ ಅದರ ಮೇಲೆ ನಿಷ್ಠೆಯೂ ಹೆಚ್ಚಾಗಿದೆ. ಹಾಗೂ ಹೊಸ ಉತ್ಪನ್ನಗಳನ್ನು ಅನ್ವೇಷಿಸಲು ಅವರನ್ನು ಪ್ರೇರೇಪಿಸಿದೆ. ‘ಕಾಲ ಕಳೆದಂತೆ ನಮ್ಮ ಗ್ರಾಹಕರ ಬೇಡಿಕೆ ಹಾಗೂ ಆಕಾಂಕ್ಷೆಗಳಲ್ಲಿ ನಾವು ಬದಲಾವಣೆಗಳನ್ನು ಕಂಡೆವು. ಮೊದಲು ಸೌರದೀಪವನ್ನು ಕೇಳುತ್ತಿದ್ದವರು ಈಗ ಮೊಬೈಲ್ ಚಾರ್ಜರ್, ಫ್ಯಾನ್ ಮತ್ತು ಟಿವಿಗಳನ್ನು ಕೇಳುತ್ತಿದ್ದಾರೆ’ ಅಂತ ಬದಲಾದ ಗ್ರಾಹಕರ ಬಯಕೆಗಳ ಕುರಿತು ಮಾಹಿತಿ ನೀಡ್ತಾರೆ ವರ್ನೀ.

image


ಈ ವ್ಯವಸ್ಥೆ ಕಂಪನಿಯ ಖರ್ಚು ವೆಚ್ಚಗಳನ್ನು ಕಡಿತಗೊಳಿಸುವಲ್ಲಿ ಸಹಾಯ ಮಾಡಿದೆ. ‘ಕಾರ್ಯಾಚರಣೆಗಾಗಿ ನಮ್ಮ ಬಳಿ 8 – 10 ಜನರ ಚಿಕ್ಕ ತಂಡವಿದೆ. ಹೀಗಾಗಿಯೇ ಉದ್ಯೋಗಿಗಳಿಗಾಗಿ ಅಷ್ಟಾಗಿ ಖರ್ಚಿಲ್ಲ. ನಾವು ಗ್ರಾಮೀಣ ಜನರಿಗೆ ತರಬೇತಿ ನೀಡಲು ಹಣವನ್ನು ಹೆಚ್ಚಾಗಿ ವಿನಿಯೋಗಿಸುತ್ತೇವೆ’ ಅಂತ ಬೆರಳು ಮಾಡಿ ತೋರಿಸ್ತಾರೆ ವರ್ನೀ.

ಸಹಭಾಗಿತ್ವಕ್ಕೆ ಹೆಚ್ಚು ಒತ್ತು ನೀಡಿರುವುದೇ ಬೇರ್‍ಫುಟ್ ಪವರ್‍ನ ಯಶಸ್ಸಿಗೆ ಪ್ರಮುಖ ಕಾರಣ. ‘ಪ್ರಚಾರ ಹಾಗೂ ಮಾರ್ಕೆಟಿಂಗ್‍ಗಾಗಿ ಹೆಚ್ಚು ಹಣ ಖರ್ಚು ಮಾಡದೇ, ಗ್ರಾಹಕರ ನಿಷ್ಠೆ ಗಳಿಸಲು ನಾವು ಪ್ರಯತ್ನಿಸುತ್ತೇವೆ. ಹೀಗಾಗಿಯೇ ಗ್ರಾಮೀಣ ಗ್ರಾಹಕರ ವಿಶ್ವಾಸ ಗಳಿಸಿರುವ ಪಾಲುದಾರರನ್ನೇ ನಾವು ಆಯ್ಕೆ ಮಾಡಿಕೊಳ್ಳುತ್ತೇವೆ. ಇದೇ ಕಾರಣದಿಂದಾಗಿ ನಾವು ನಮ್ಮ ಉತ್ಪಾದನೆಯನ್ನು ಗ್ರಾಹಕರಿಗೆ ತೋರಿಸಿ, ಅವರು ಅದನ್ನು ಖರೀದಿಸುವಂತೆ ಹೆಚ್ಚು ಮನವರಿಕೆ ಮಾಡಿಕೊಡುವ ಅವಶ್ಯಕತೆಯಿಲ್ಲ’ ಅಂತ ವಿವರಣೆ ನೀಡ್ತಾರೆ ವರ್ನೀ.

image


ಬೇರ್‍ಫುಟ್ ಪವರ್‍ನ ಒಟ್ಟಾರೆ ಜಾಗತಿಕ ಆದಾಯದ ಶೇಕಡಾ 15%ರಷ್ಟು ಆದಾಯ ಬೇರ್‍ಫುಟ್ ಪವರ್ ಇಂಡಿಯಾದಿಂದ ಬರುತ್ತಿದೆ. ವರ್ನೀ ಪ್ರಕಾರ ಇದಿನ್ನೂ ಕೇವಲ ಪ್ರಾರಂಭವಷ್ಟೇ. ಬಾಂಗ್ಲಾದೇಶ ಮತ್ತು ನೇಪಾಳಗಳಿಗೆ ಮಾರುಕಟ್ಟೆಯನ್ನು ವಿಸ್ತರಿಸಲು ಹಾಗೂ ಭಾರತದ ಮಾರುಕಟ್ಟೆಯನ್ನು ಇನ್ನೂ ಆಳವಾಗಿ ಭೇದಿಸಲು ವರ್ನೀ ಮತ್ತು ತಂಡ ಹೂಡಿಕೆದಾರರಿಗೆ ಗಾಳ ಹಾಕಿ, ಹಣಕಾಸಿನ ಸೌಲಭ್ಯವನ್ನು ಪಡೆಯಲು ಸಿದ್ಧತೆ ನಡೆಸಿದ್ದಾರೆ. ಮೊದಲು ನಾವು ಕೇವಲ ಕೆಳ ಹಂತದ ಜನರಿಗಾಗಿ ಉತ್ಪನ್ನಗಳನ್ನು ಒದಗಿಸುತ್ತಿದ್ದೆವು. ಆದ್ರೆ ಈಗ ಹೆಚ್ಚು ಮಹತ್ವಾಕಾಂಕ್ಷೆಯ ಗ್ರಾಹಕರಿಗೆ ನಮ್ಮ ಉತ್ಪನ್ನಗಳನ್ನು ವಿಸ್ತರಿಸಲು ಯೋಜನೆ ಸಿದ್ಧಪಡಿಸಿದ್ದೇವೆ’ ಅಂತಾರೆ ವರ್ನೀ.

ಬೇರ್‍ಫುಟ್ ಪ್ರಾರಂಭವಾದಾಗ ಏನಂದುಕೊಂಡಿತ್ತೋ, ಅದ್ದಕ್ಕಿಂತ ಮುನ್ನೂರು ಪಟ್ಟು ವೇಗವಾಗಿ ಹಾಗೂ ಎತ್ತರಕ್ಕೆ ಬೆಳೆದಿದೆ. ಇದು ಕೇವಲ ಬೇರ್‍ಫುಟ್‍ನ ಅಭೂತಪೂರ್ವ ಯಶಸ್ಸನ್ನು ಮಾತ್ರವಲ್ಲ, ಅದರ ಹಿಂದಿರುವವರ ಜವಾಬ್ದಾರಿ ಹಾಗೂ ಕಂಪನಿಯ ವ್ಯಾಪಾರದಲ್ಲಿ ಹೆಚ್ಚುವರಿ ಮೌಲ್ಯವನ್ನು ರಚನೆಯನ್ನೂ ತೋರಿಸುತ್ತದೆ. ಮೂಲಭೂತ ಮಾನವ ತಿಳುವಳಿಕೆ ಮತ್ತು ಸೃಜನಶೀಲತೆಗಳು ಖಂಡಿತವಾಗಿಯೂ ಸಹಾಯ ಮಾಡುತ್ತವೆ.

ಲೇಖಕರು: ಫ್ರಾನ್ಸೆಸ್ಕೊ ಫೆರಾರೊ

ಅನುವಾದಕರು: ವಿಶಾಂತ್​​​​​​​​

16+ Shares
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
Report an issue
Authors

Related Tags